ಚೆನ್ನೈ: ಮೀನು ತಿನ್ನುವ ಗ್ರಾಹಕರಿಗೆ ಜಾಗೃತಿ ಮೂಡಿಸಲು ತಮಿಳುನಾಡಿನ ಮಧುರೈ ಮೀನು ವ್ಯಾಪಾರಿಯೊಬ್ಬರು ಒಂದು ರೂಪಾಯಿಗೆ ಒಂದು ಕೆ.ಜಿ ಮೀನು ಮಾರಾಟ ಮಾಡಿದ್ದಾರೆ.
ಮಧುರೈನ ಕಾರೈಕುಡಿಯ ಮೀನಿನ ವ್ಯಾಪಾರಿ ಪಿ ಮನೋಹರನ್ ಅವರು, ಸುಮಾರು 520 ಕೆ.ಜಿ ಫ್ರೆಶ್ ಮೀನುಗಳನ್ನು ಒಂದು ರೂಪಾಯಿಗೆ ಒಂದು ಕೆ.ಜಿಯಂತೆ ಮಾರಾಟ ಮಾಡಿ ತಾಜಾ ಮೀನುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ಜನ ಜಾಗೃತಿಯನ್ನು ಮೂಡಿಸಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಮನೋಹರನ್ ಅವರು, ನಾನು ಮೀನುಗಳನ್ನು ಹಿಡಿದು ಸಂಗ್ರಹದಲ್ಲಿ ಇಟ್ಟು ಮಾರಾಟ ಮಾಡುವುದಿಲ್ಲ. ನಾನು ಯಾವಗಲೂ ತಾಜಾ ಮೀನುಗಳನ್ನು ಗ್ರಾಹಕರಿಗೆ ಕೊಡಲು ಬಯಸುತ್ತೇನೆ. ಗ್ರಾಹಕರು ಅಂಗಡಿಗೆ ಬರುವಾಗ ಒಳ್ಳೆಯ ಮೀನುಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ಭಾವನೆಯಲ್ಲಿ ಬರುತ್ತಾರೆ. ಅದಕ್ಕೆ ನಾವು ಮೋಸ ಮಾಡಬಾರದು. ಇದನ್ನು ಪ್ರಮುಖವಾಗಿ ಇಟ್ಟುಕೊಂಡು ಎರಡು ವರ್ಷದ ಹಿಂದೆ ಮೀನಿನ ವ್ಯಾಪಾರ ಶುರು ಮಾಡಿ ಇಂದು ಎರಡು ಅಂಗಡಿಗೆ ಮಾಲೀಕನಾಗಿದ್ದೇನೆ ಎಂದು ಹೇಳಿದ್ದಾರೆ.
ಮೊದಲು ನಾನು 100 ಜನರಿಗೆ ಮಾತ್ರ ಒಂದು ರೂಪಾಯಿಗೆ ಒಂದು ಕೆ.ಜಿ ಕೊಡುವುದಾಗಿ ಹೇಳಿದ್ದೆ. ಆದರೆ 500 ಕ್ಕೂ ಹೆಚ್ಚು ಜನ ಅಂಗಡಿ ಮುಂದೆ ಬಂದಿದ್ದು ನೋಡಿ ನನಗೆ ಆಶ್ಚರ್ಯವಾಯಿತು. ಆದ್ದರಿಂದ ಬಂದಿದ್ದ ಅಷ್ಟು ಜನರಿಗೆ ಒಂದು ರೂ ನಂತೆ ಒಂದು ಕೆ.ಜಿ ಮೀನನ್ನು ಕೊಟ್ಟು ಕಳುಹಿಸಿದೆ ಎಂದು ಮನೋಹರನ್ ಹೇಳಿದ್ದಾರೆ. ಇದರ ಜೊತೆಗೆ ಮುಂದಿನ ವಾರವೂ ಇದೇ ರೀತಿ ಮೀನು ನೀಡುವುದಾಗಿ ಹೇಳಿದ್ದಾರೆ.




