Tag: one nation one election

  • ‘ಒಂದು ರಾಷ್ಟ್ರ, ಒಂದು ಚುನಾವಣೆ’: ರಾಷ್ಟ್ರಪತಿಗೆ 18,000 ಪುಟಗಳ ವರದಿ ಸಲ್ಲಿಕೆ

    ‘ಒಂದು ರಾಷ್ಟ್ರ, ಒಂದು ಚುನಾವಣೆ’: ರಾಷ್ಟ್ರಪತಿಗೆ 18,000 ಪುಟಗಳ ವರದಿ ಸಲ್ಲಿಕೆ

    – ಇಂದು ವರದಿ ಸಲ್ಲಿಸಿದ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ

    ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ನೇತೃತ್ವದ ಉನ್ನತ ಮಟ್ಟದ ಸಮಿತಿ ಇಂದು (ಗುರುವಾರ) ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಸಲ್ಲಿಸಿದೆ.

    18,000 ಕ್ಕೂ ಅಧಿಕ ಪುಟಗಳ ಸುದೀರ್ಘ ವರದಿಯನ್ನು ಸಮಿತಿಯು ರಾಷ್ಟ್ರಪತಿಗಳಿಗೆ ಇಂದು ಬೆಳಗ್ಗೆ ಸಲ್ಲಿಸಿದೆ. ವರದಿ ಸಲ್ಲಿಕೆಗೆ 191 ದಿನಗಳ ಸಮಯವನ್ನು ಸಮಿತಿ ತೆಗೆದುಕೊಂಡಿತ್ತು. ವಿವಿಧ ರಾಜಕೀಯ ಪಕ್ಷಗಳು ಮತ್ತು ಪ್ರಮುಖ ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ ಸಂಗ್ರಹ ಸಂಗ್ರಹಿಸಲಾಗಿದೆ. ಇದನ್ನೂ ಓದಿ: ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲು ಸಿಎಎಯಲ್ಲಿ ಅವಕಾಶವಿಲ್ಲ: ಅಮಿತ್ ಶಾ ಸ್ಪಷ್ಟನೆ

    ಒಂದು ರಾಷ್ಟ್ರ, ಒಂದು ಚುನಾವಣೆ (One Nation One Election) ಪರಿಕಲ್ಪನೆಯು ದೇಶಾದ್ಯಂತ ಏಕಕಾಲದಲ್ಲಿ ಚುನಾವಣಾ ಮತದಾನ ನಡೆಸುವುದಾಗಿದೆ. ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಿಗೂ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆ ಇದೆ.

    ಭಾರತದಲ್ಲಿ ಸಂಸತ್ತಿನ ಸದಸ್ಯರನ್ನು ಆಯ್ಕೆ ಮಾಡಲು ಸಾರ್ವತ್ರಿಕ ಚುನಾವಣೆಗಳು ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳು ಹಾಲಿ ಸರ್ಕಾರದ ಅವಧಿಯು ಅಂತ್ಯಗೊಂಡಾಗ ಅಥವಾ ಕೆಲವು ಕಾರಣಗಳಿಂದ ವಿಸರ್ಜನೆಯಾದಾಗ ಪ್ರತ್ಯೇಕವಾಗಿ ನಡೆಯುತ್ತಿದೆ. ಇದನ್ನೂ ಓದಿ: ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅನುಮೋದನೆ

    ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಹಿಂದಿನಿಂದಲೂ ಒಂದು ರಾಷ್ಟ್ರ, ಒಂದು ಚುನಾವಣೆಯ ಕಲ್ಪನೆಯನ್ನು ಪ್ರತಿಪಾದಿಸುತ್ತಿದ್ದಾರೆ. ಕೋವಿಂದ್ ನೇತೃತ್ವದ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಮಾಜಿ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಇದ್ದರು.

  • ಒಂದು ರಾಷ್ಟ್ರ, ಒಂದು ಚುನಾವಣೆ – ಉದ್ದೇಶ ಒಳ್ಳೆಯದಿದ್ದರೆ ಬೆಂಬಲ ಎಂದ ಪ್ರಶಾಂತ್ ಕಿಶೋರ್

    ಒಂದು ರಾಷ್ಟ್ರ, ಒಂದು ಚುನಾವಣೆ – ಉದ್ದೇಶ ಒಳ್ಳೆಯದಿದ್ದರೆ ಬೆಂಬಲ ಎಂದ ಪ್ರಶಾಂತ್ ಕಿಶೋರ್

    ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿರುವ `ಒಂದು ರಾಷ್ಟ್ರ, ಒಂದು ಚುನಾವಣೆ’ (One Nation One Election) ಪರಿಕಲ್ಪನೆಗೆ ಐಎನ್‌ಡಿಐಎ (INDIA) ಮೈತ್ರಿಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ನಡುವೆ ಚುನಾವಣಾ ಚಾಣಕ್ಯ, ರಾಜಕೀಯ ತಂತ್ರಗಾರ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್ (Prashant Kishor) ಈ ಪರಿಕಲ್ಪನೆಯ ಉದ್ದೇಶ ಒಳ್ಳೆಯದಾಗಿದ್ದರೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಶಾಂತ್ ಕಿಶೋರ್, ಈ ಹಿಂದೆಯೂ ಇಂತಹ ಚುನಾವಣಾ ಪದ್ಧತಿ ದೇಶದಲ್ಲಿ ಜಾರಿಯಲ್ಲಿತ್ತು. ಏಕಕಾಲದಲ್ಲಿ ಚುನಾವಣೆ ನಡೆದರೆ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಜೊತೆಗೆ 5 ವರ್ಷದ ಅಧಿಕಾರವಧಿಯಲ್ಲಿ ಸರ್ಕಾರ ಪದೇ-ಪದೇ ಚುನಾವಣೆಗಳನ್ನ (Elections) ಎದುರಿಸುವ ಗೋಜಲು ತಪ್ಪಿಸಬಹುದು ಎಂದು ಸಲಹೆ ಕೊಟ್ಟಿದ್ದಾರೆ.

    ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆ ಭಾರತದಂತಹ ದೊಡ್ಡ ದೇಶದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವೇ ಎಂಬುದನ್ನ ಗಮನಿಸಬೇಕು. ಏಕೆಂದರೆ ದೇಶದಲ್ಲಿ ಪ್ರತಿ ವರ್ಷ 25% ಜನರು ಚುನಾವಣೆಯಲ್ಲಿ ಮತದಾನ ಮಾಡುತ್ತಲೇ ಇರುತ್ತಾರೆ. ಸರ್ಕಾರಗಳು ಕೂಡ 5 ವರ್ಷದಲ್ಲಿ ಹಲವು ಬಾರಿ ಚುನಾವಣೆಗಳನ್ನ ಎದುರಿಸುತ್ತವೆ. ಇದರ ಬದಲಿಗೆ 1 ಅಥವಾ 2 ಬಾರಿ ಚುನಾವಣೆ ನಡೆಸಿದರೆ ಉತ್ತಮ. ಇದು ವೆಚ್ಚ ತಗ್ಗಿಸುವುದರ ಜೊತೆಗೆ ಜನರು ಒಂದೇ ಬಾರಿಗೆ ಯಾವ ಸರ್ಕಾರ ಬೇಕೆಂಬುದನ್ನು ನಿರ್ಧರಿಸಲು ಅವಕಾಶ ಸಿಗಲಿದೆ. ಈ ಪರಿಕಲ್ಪನೆ ಒಳ್ಳೆಯ ಉದ್ದೇಶ ಹೊಂದಿದ್ದರೆ ಅಥವಾ 4-5 ವರ್ಷಗಳ ಪರಿವರ್ತನೆಯ ಹಂತವಿದ್ದರೆ ಅದು ದೇಶಕ್ಕೆ ಹಿತಾಸಕ್ತಿಯಾಗುತ್ತದೆ. ಈ ಬಗ್ಗೆ ಜನರೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ರಾತ್ರೋ ರಾತ್ರಿ ಬದಲಾವಣೆ ತರಲು ಪ್ರಯತ್ನಿಸಿದರೆ ಸಮಸ್ಯೆಗಳೂ ಉಂಟಾಗುತ್ತವೆ ಎಂದು ಎಚ್ಚರಿಸಿದ್ದಾರೆ.

    ಏಕಾಏಕಿ ಪರಿವರ್ತನೆ ತರಲು ಸಾಧ್ಯವಿಲ್ಲ. ಇದರಿಂದ ಸಮಸ್ಯೆಗಳೇ ಹೆಚ್ಚಾಗುತ್ತವೆ. ಸರ್ಕಾರ ಒಂದೇ ಬಾರಿಗೆ ಚುನಾವಣೆ ನಡೆಸುವ ಮಸೂದೆ ತರುತ್ತಿದೆ. ಅದು ಮೊದಲು ಜಾರಿಗೆ ಬರಲಿ. ಇದನ್ನು ಸರ್ಕಾರ ಒಳ್ಳೆಯ ಉದ್ದೇಶದಿಂದ ತಂದಿದ್ದೇ ಆದಲ್ಲಿ, ದೇಶಕ್ಕೆ ಒಳಿತಾಗುತ್ತದೆ ಎಂದರೆ ಬೆಂಬಲ ನೀಡೋಣ. ಆದರೆ ಸರ್ಕಾರವು ಯಾವ ಉದ್ದೇಶದಿಂದ ಅದನ್ನ ತರುತ್ತಿದೆ ಎಂಬುದರ ಮೇಲೆ ಪ್ರತಿಕ್ರಿಯೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

    ಒಂದು ರಾಷ್ಟ್ರ-ಒಂದು ಚುನಾವಣೆ ಪರಿಕಲ್ಪನೆಗೆ ಐಎನ್‌ಡಿಐಎ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಹಲವು ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ನಡುವೆ ಪ್ರಶಾಂತ್ ಕಿಶೋರ್ ಅವರ ಹೇಳಿಕೆಯು ಅಚ್ಚರಿ ಉಂಟುಮಾಡಿದೆ.

    ಏನಿದು ಒನ್ ನೇಷನ್, ಒನ್ ಎಲೆಕ್ಷನ್?
    ಹಲವಾರು ಅಚ್ಚರಿ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಈಗ ‘ಒಂದು ದೇಶ, ಒಂದು ಚುನಾವಣೆ’ ನಡೆಸಲು ಮುಂದಾಗಿದೆ ಎಂಬ ಪ್ರಶ್ನೆ ಎದ್ದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ದೇಶಾದ್ಯಂತ ಏಕಕಾಲದಲ್ಲಿ ನಡೆಸುವುದಕ್ಕೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂದು ಕರೆಯಲಾಗುತ್ತದೆ. ಇದು 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯ ಭಾಗವಾಗಿರುವ ಹಿನ್ನೆಲೆಯಲ್ಲಿ ಈ ವಿಶೇಷ ಅಧಿವೇಶನದ ಬಗ್ಗೆ ನಿರೀಕ್ಷೆ ಈಗ ಹೆಚ್ಚಾಗಿದೆ.

    1967 ರವರೆಗೆ ಭಾರತದಲ್ಲಿ ಏಕಕಾಲದಲ್ಲಿ ಮತದಾನ ನಡೆಯುತ್ತಿತ್ತು. ನಾಲ್ಕು ಚುನಾವಣೆಗಳು ಈ ರೀತಿ ನಡೆದಿದ್ದವು. 1968-69ರಲ್ಲಿ ಕೆಲವು ರಾಜ್ಯಗಳ ವಿಧಾನಸಭೆ ಅಕಾಲಿಕವಾಗಿ ವಿಸರ್ಜಿಸಲ್ಪಟ್ಟ ನಂತರ ಈ ಪದ್ಧತಿ ಸ್ಥಗಿತವಾಗಿದೆ. ಲೋಕಸಭೆಯು ಮೊದಲ ಬಾರಿಗೆ 1970 ರಲ್ಲಿ ನಿಗದಿತ ಅವಧಿಗಿಂತ ಒಂದು ವರ್ಷ ಮುಂಚಿತವಾಗಿ ವಿಸರ್ಜನೆಯಾಗಿತ್ತು ಮತ್ತು 1971 ರಲ್ಲಿ ಮಧ್ಯಂತರ ಚುನಾವಣೆಗಳು ನಡೆದಿತ್ತು. ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಯನ್ನು ಸಾಕಾರಗೊಳಿಸಲು ಸಾಂವಿಧಾನಿಕ ತಿದ್ದುಪಡಿ ಮತ್ತು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮೂರನೇ ಎರಡರಷ್ಟು ಸದಸ್ಯರ ಬೆಂಬಲದ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಧಾನಸಭೆಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಪ್ರಸ್ತಾಪಿಸಿದ ಸ್ಪೀಕರ್ ಕಾಗೇರಿ

    ವಿಧಾನಸಭೆಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಪ್ರಸ್ತಾಪಿಸಿದ ಸ್ಪೀಕರ್ ಕಾಗೇರಿ

    ಬೆಂಗಳೂರು: ಒಂದು ರಾಷ್ಟ್ರ, ಒಂದು ಚುನಾವಣೆ ಕೂಗು ಮತ್ತೆ ಎದ್ದಿದೆ. ವಿಧಾನಸಭೆಯಲ್ಲಿ ಇವತ್ತು ಚುನಾವಣೆ ವ್ಯವಸ್ಥೆಯ ಸುಧಾರಣೆಯ ಅಗತ್ಯತೆ ಕುರಿತಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾಸ್ತಾವಿಕ ಭಾಷಣದಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಜಪ ಮಾಡಿದ್ದಾರೆ.

    ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದ ವಿಚಾರ ಪ್ರಸ್ತಾಪ ಮಾಡಿರುವ ಸ್ಪೀಕರ್, ಒಂದು ರಾಷ್ಟ್ರ ಒಂದು ಚುನಾವಣೆ ಮೂಲಕ ಚುನಾವಣಾ ಖರ್ಚು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ನಾಳೆಯಿಂದ ಎರಡು ದಿನಗಳ ಕಾಲ ಚುನಾವಣೆ ವ್ಯವಸ್ಥೆಯ ಸುಧಾರಣೆ ಅಗತ್ಯತೆ ಕುರಿತು ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್ ನಡೆ ಬಗ್ಗೆ ಕುತೂಹಲ ಹೆಚ್ಚಿದೆ. ಇದನ್ನೂ ಓದಿ: ರೂಪಾಯಿ ನೀಡಿ ರಷ್ಯಾದಿಂದ ತೈಲ ಖರೀದಿ ಮಾಡಲ್ಲ: ಕೇಂದ್ರ ಸರ್ಕಾರ

    ವಿಧಾನಸಭೆಯಲ್ಲಿ ಚುನಾವಣೆ ವ್ಯವಸ್ಥೆಯ ಸುಧಾರಣೆಯ ಅಗತ್ಯತೆ ಕುರಿತಂತೆ 24 ಪುಟಗಳ ಪ್ರಾಸ್ತಾವಿಕ ಭಾಷಣ ಮಾಡಿದ್ರು. ಚುನಾವಣೆಗಳು ಜನಾದೇಶವಾಗುವ ಬದಲು ಧನಾದೇಶ ವಾಗುತ್ತಿವೆ. ಚುನಾವಣೆಗಳಲ್ಲಿ ಅಸಹ್ಯ ಪಡುವಷ್ಟು ಹಣ ಶಕ್ತಿಯ ಪಾತ್ರ ಇಡೀ ವ್ಯವಸ್ಥೆಗೆ ರೋಗ ತರುವಷ್ಟು ಇದೆ. ಅಪರಾಧಿಗಳ ಪಾತ್ರ, ಜಾತಿ-ಧರ್ಮ-ಅಂಗ ಮತ್ತೆಲ್ಲ ತರಹದ ಪ್ರಭಾವಗಳು ಚುನಾವಣೆಗಳನ್ನು ರೋಗಗ್ರಸ್ತವಾಗಿಸಿವೆ. ಚುನಾವಣೆಯ ಸಂದರ್ಭದಲ್ಲಿ ಮತ ಗಿಟ್ಟಿಸಲು ಕೊಂಡೊಯ್ಯುತ್ತಿದ್ದ ನೂರಾರು ಕೋಟಿ ನಗದು ಹಣ, ಮದ್ಯ, ಆಹಾರ ಪದಾರ್ಥಗಳು, ಮಾದಕ ದ್ರವ್ಯಗಳು, ಮತದಾರರನ್ನು ಆಕರ್ಷಿಸಲು ನೀಡಲಾಗುತ್ತಿರುವ ಉಡುಗೊರೆ ಇತ್ಯಾದಿಗಳನ್ನು ಆಯೋಗದ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿರುವುದನ್ನು ಕಾಣುತ್ತೇವೆ. ಘಟನೆಗಳು ಹೊಸದಲ್ಲದಿದ್ದರೂ ನ್ಯಾಯಯುಕ್ತತೆಯ ಬಗ್ಗೆ ಆತಂಕವನ್ನು ಹೆಚ್ಚಿಸುತ್ತದೆ. ರಾಜಕೀಯದ ಅಧೋಗತಿಯೋ ಭಾರತದ ಚುನಾವಣಾ ವ್ಯವಸ್ಥೆಯ ರೋಗಗ್ರಸ್ಥ ಸ್ಥಿತಿಯೋ ತಿಳಿಯದು. ಅಥವಾ ಇವೆರಡೂ ಆಗಿದ್ದರೆ ರೋಗ ಉಲ್ಬಣಿಸುವ ಮೊದಲೇ ಚಿಕಿತ್ಸೆಯನ್ನು ಮಾಡಬೇಕಾದವರು ಶಾಸನ ಸಭೆಯ ಸದಸ್ಯರುಗಳಲ್ಲದೆ ಮತ್ತಾರು ಎಂದು ಪ್ರಶ್ನಿಸಿದ್ದಾರೆ.

    ನಮ್ಮ ಚುನಾವಣಾ ಪ್ರಕ್ರಿಯೆಯು ನ್ಯಾಯಯುತ ಮತ್ತು ನಿರ್ಭೀತವಾಗಿರುವ ರಾಷ್ಟ್ರವನ್ನು ನಿರ್ಮಿಸುವುದು ನಮ್ಮ ಸದುದ್ದೇಶವಾಗಿದೆ. ಚುನಾವಣಾ ಅಕ್ರಮಗಳು ಪ್ರಜಾಪ್ರಭುತ್ವಕ್ಕೆ ನಿಧಾನಗತಿಯ ಪಾಶ್ರ್ವವಾಯು ಎಂದು ಕರೆಯಬಯಸುತ್ತೇನೆ. ಚುನಾವಣೆಗಳು ಕಲುಷಿತವಾದರೆ ಪ್ರಜಾಪ್ರಭುತ್ವವೆಂಬ ವೃಕ್ಷ ಉಳಿಯಲಾರದು. ಆದುದರಿಂದ ಬೆಳೆಯಲಾರದು ಮತ್ತು ಈ ವೃಕ್ಷ ಇನ್ನೂ ಹೆಮ್ಮರವಾಗಿ ಬೆಳೆಯಬೇಕಾದರೆ ಒಳ್ಳೆಯ ನೀರನ್ನು ಉಣಿಸಬೇಕಾದುದು ನಮ್ಮ ಜವಾಬ್ದಾರಿ. ಪ್ರಜಾಪ್ರಭುತ್ವದ ಚುನಾವಣೆಗಳೆಂಬ ಐಕ್ಯಮತದ ಹಬ್ಬಗಳು ಸಂಭ್ರಮ, ಶ್ರದ್ಧೆ ಮತ್ತು ಪರಿಶುದ್ಧವಾಗಿ ನಡೆಯಬೇಕು ಎನ್ನುವುದು ನಮ್ಮೆಲ್ಲರ ಕಳಕಳಿ. ಈ ನಿಟ್ಟಿನಲ್ಲಿ ಕರ್ನಾಟಕವು ಚುನಾವಣಾ ಸುಧಾರಣೆಗೆ ದೇಶದಲ್ಲಿ ಮೊಟ್ಟ ಮೊದಲ ಹೆಜ್ಜೆ ಇಡಲು ಮತ್ತು ಅದಕ್ಕೆ ತಾವುಗಳೆಲ್ಲರೂ ಚರ್ಚೆಯಲ್ಲಿ ಭಾಗಿಯಾಗಿ ಅಂತಾ ಮನವಿ ಮಾಡಿದ್ರು. ಇದೇ ವೇಳೆ ಚುನಾವಣೆ ಸುಧಾರಣೆಗೆ ಸಲಹೆ ರೂಪದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರು ಪರ್ಸಂಟೇಜ್ ಕೊಡುವುದು ನಿಲ್ಲಿಸಿ ಎಲ್ಲವೂ ಸರಿ ಹೋಗುತ್ತದೆ: ಎಚ್‍ಡಿಕೆ

    ಸುಧಾರಣೆ ಸಲಹೆಗಳು:
    ಚುನಾವಣೆಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ: ಚುನಾವಣಾ ಪ್ರಚಾರ ಪ್ರಕ್ರಿಯೆಯನ್ನು ರಾಷ್ಟ್ರೀಕರಣ ಮಾಡಿ, ಅದರ ವೆಚ್ಚವನ್ನು ಇಳಿಸಿ, ವೆಚ್ಚವನ್ನು ಸರ್ಕಾರವೇ/ ಚುನಾವಣಾ ಆಯೋಗವೇ ಭರಿಸುವಂತೆ ಮಾಡುವುದು. ಚುನಾವಣಾ ಪ್ರಚಾರ ಪುಸ್ತಿಕೆ: ಒಂದು ಮನೆಗೆ ಒಂದರಂತೆ, ಪ್ರತಿಕ್ಷೇತ್ರದಲ್ಲೂ ಕಣದಲ್ಲಿರುವ ಎಲ್ಲಾ ಪಕ್ಷಗಳ, ಅಭ್ಯರ್ಥಿಗಳ ಬಗ್ಗೆ ಅಧಿಕೃತವಾಗಿ ಸಮಾನ ಪಟಗಳ ಮಿತಿಯಲ್ಲಿ ಅವರೇ ಒದಗಿಸಿದ ಬರಹಗಳನ್ನು ಒಂದು ಸಮಗ್ರ ಪುಸ್ತಿಕೆಯ ರೂಪದಲ್ಲಿ ಪ್ರಕಟಿಸಿ ವಿತರಿಸುವುದು. ಸರ್ವ ಪಕ್ಷಗಳಿಗೂ ಪ್ರಚಾರ ಸಭೆಗಳು: ಸ್ಪರ್ಧಿಸಿರುವ ಅಭ್ಯರ್ಥಿಗಳಿಗಾಗಿ ಪ್ರಚಾರ ಮಾಡಲು ಅವಕಾಶವಿರುವ ಸಾಮಾನ್ಯ ಸಾರ್ವಜನಿಕ ಸಭೆಗಳನ್ನು ಒದಗಿಸುವುದು. ವಿವಿಧ ಸ್ಥಳಗಳಲ್ಲಿ ಏರ್ಪಡಿಸುವುದು.

    ಮಾಧ್ಯಮಗಳಲ್ಲಿ ಸಮಾನ ಅವಕಾಶ: ಶ್ರವ್ಯ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರತೀ ಅಭ್ಯರ್ಥಿಗೂ ಪ್ರಚಾರಕ್ಕಾಗಿ ಸಮಾನ ಸ್ಥಳ ಮತ್ತು ಕಾಲಾವಕಾಶಗಳನ್ನು ಮಾಡಿಕೊಡುವುದು. ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲೂ ಸೆನ್ಸಾರ್ ಮಾಡಿದ ಸಾಮಗ್ರಿಗಳನ್ನು ಪ್ರಚಾರಕ್ಕೆ ವ್ಯವಸ್ಥೆ ಮಾಡುವುದು. ಚುನಾವಣಾ ಕ್ಷೇತ್ರ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಕೃತ ಚುನಾವಣಾ ಪ್ರಚಾರವನ್ನು ಚುನಾವಣಾ ಆಯೋಗ ನೇಮಿಸುವುದು ಹಾಗೂ ಉಸ್ತುವಾರಿ ಮಾಡುವುದು. ವಿಶೇಷ ಚುನಾವಣಾ ಕೋರ್ಟ್‍ಗಳ ರಚನೆ: ಚುನಾವಣೆಗಳಲ್ಲಿ ಕ್ರಿಮಿನಲ್ ಆಪಾದನೆ ಹೊತ್ತ ಶಾಸಕರ ಪ್ರಕರಣಗಳನ್ನು ಆರು ತಿಂಗಳೊಳಗೆ ಆರೋಪಗಳು ರುಜುವಾತಾಗಿ ಶಿಕ್ಷೆಗೊಳಗಾದವರನ್ನು ಅನರ್ಹಗೊಳಿಸಿ ಚುನಾವಣೆಯಲ್ಲಿ ಸ್ಥಾನದಲ್ಲಿದ್ದ ಅಭ್ಯರ್ಥಿಯನ್ನು ಅರ್ಹನೆಂದು ಘೋಷಿಸುವುದು. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ರದ್ದು – ಸರ್ಕಾರಕ್ಕೆ ಮಾಹಿತಿ ರವಾನೆ

    ಒಂದು ಮತಕ್ಷೇತ್ರದಲ್ಲಿ ಕನಿಷ್ಠ ಮಿತಿಯಲ್ಲಿ ಚುನಾವಣಾ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಲು ಶಾಸನ ರೂಪಿಸುವುದು. ರಾಜಕೀಯ ಪಕ್ಷಗಳು, ದೇಶದಾದ್ಯಂತ ಒಟ್ಟು ಮತ ಹೆಚ್ಚಾಗಿ ಪಡೆದೂ ಕಡಿಮೆ ಸ್ಥಾನಗಳನ್ನು ಗಳಿಸುತ್ತಿರುವ ಕಾರಣದಿಂದ ರಾಜಕೀಯ ಪಕ್ಷಗಳಿಗೆ ಮಿತಿಗೊಳಿಸುವುದು. ಕಡ್ಡಾಯ ಮತದಾನ ವ್ಯವಸ್ಥೆ: ಪ್ರತಿ ಮತದಾರನೂ ಚುನಾವಣೆಯ ದಿನದಂದು ಮತ ಚಲಾಯಿಸಲೇಬೇಕು. ಭಾಗಿಯಾಗದ ಮತದಾರನಿಗೆ ಸೌಲಭ್ಯಗಳ ಕಡಿತ ಮಾಡುವುದು. ಒಂದು ರಾಷ್ಟ್ರ ಒಂದು ಚುನಾವಣೆಯ ಮೂಲಕ ಚುನಾವಣಾ ವೆಚ್ಚವನ್ನು ಕಡಿತಗೊಳಿಸುವುದು. ರಾಜಕೀಯ ಪಕ್ಷಗಳೊಳಗಿನ ಆಂತರಿಕ ಚುನಾವಣೆಗಳಲ್ಲ ಪಾರದರ್ಶಕತೆ ಮತ್ತು ಸ್ವಯಂ ಶಿಸ್ತು. ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಅನುಷ್ಠಾನದಲ್ಲಿ ಮತದಾರರು ಭಾಗಿಯಾಗಿ ಸಾಮಾಜಿಕ ಪರಿಶೋಧನೆಗೊಳಪಡಿಸುವುದು. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಸಾಮಾಜಿಕ ಮತ್ತು ರಾಜಕೀಯ ನಿರ್ಬಂಧನೆಗಳನ್ನು ವಿಧಿಸುವುದು. ಶುದ್ಧ ಚಾರಿತ್ರ್ಯ ಇರುವ ಮತ್ತು ಕ್ರಿಮಿನಲ್ ಹಿನ್ನೆಲೆ ಇಲ್ಲದ ಸಾಮಾಜಿಕ ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ರಾಜಕೀಯ ಪಕ್ಷಗಳು ಕಟ್ಟುನಿಟ್ಟಾದ ಸ್ವಯಂ-ಶಿಸ್ತಿನ ಮಾನದಂಡಗಳನ್ನು ಅಳವಡಿಸಿಕೊಳ್ಳುವುದು. ರಾಜಕೀಯ ಪಕ್ಷಗಳು ಚುನಾವಣಾ ದಿನಾಂಕಗಳ ಅಧಿಸೂಚನೆಯ ಮೊದಲು ಹಾಗೂ ಅಧಿಸೂಚನೆಯ ನಂತರ ಬೇರೆ ರಾಜಕೀಯ ಪಕ್ಷದಿಂದ ಬದಲಾದ ಅಭ್ಯರ್ಥಿಗಳನ್ನು ಕಣಕ್ಕಿಳಸದಂತೆ ನಿರ್ಧರಿಸುವುದು.

  • ಮತ್ತೆ ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಪ್ರಧಾನಿ ಮೋದಿ ಮಾತು

    ಮತ್ತೆ ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಪ್ರಧಾನಿ ಮೋದಿ ಮಾತು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಒನ್ ನೇಷನ್, ಒನ್ ಎಲೆಕ್ಷನ್ ಬಗ್ಗೆ ಮಾತನಾಡಿದ್ದು, ಎಲ್ಲ ಚುನಾವಣೆಗಳಿಗೂ ಒಂದೇ ಮತದಾರರ ಪಟ್ಟಿ ಇರಬೇಕು. ಇದರಿಂದ ಆಗಾಗ್ಗೆ ನಡೆಯುವ ಮತದಾನದಿಂದಾಗಿ ಪ್ರತಿ ಕೆಲ ತಿಂಗಳಿಗೊಮ್ಮೆ ಅಭಿವೃದ್ಧಿ ಕಾರ್ಯಗಳ ಮೇಲೆ ಚುನಾವಣಾ ನೀತಿ ಸಂಹಿತೆಯ ಅಡ್ಡಿಯನ್ನು ತಡೆಯಬೇಕು ಎಂದು ಹೇಳಿದ್ದಾರೆ.

    ಅಖಿಲ ಭಾರತ ಅಧಿಕಾರಿಗಳ 80ನೇ ಸಮಾವೇಶದ ಅಂತಿಮ ದಿನವಾದ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಒಂದು ರಾಷ್ಟ್ರ, ಒಂದು ಚುನಾವಣೆ ಮಾತ್ರವಲ್ಲದೆ ಶಾಸನ ಪುಸ್ತಕಗಳ ಭಾಷೆಯನ್ನು ಸರಳೀಕರಿಸಿ ಸಾಮಾನ್ಯರಿಗೆ ಮನದಟ್ಟಾಗುವಂತೆ ಹಾಗೂ ಅನಗತ್ಯ ಕಾನೂನುಗಳನ್ನು ತೆಗೆದು ಸುಲಭ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆ ಕೇವಲ ಚರ್ಚೆಯ ವಿಷಯವಲ್ಲ. ಅದು ದೇಶದ ಪರಿಕಲ್ಪನೆಯಾಗಿದೆ. ಪ್ರತಿ ಕೆಲ ತಿಂಗಳುಗಳಿಗೊಮ್ಮೆ ವಿವಿಧ ಸ್ಥಳಗಳಲ್ಲಿ ಚುನಾವಣೆಗಳು ನಡೆಯುತ್ತವೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ. ಇದು ನಿಮಗೆ ತಿಳಿದಿರುವ ವಿಚಾರವೇ ಆಗಿದೆ. ಆದ್ದರಿಂದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಆಳವಾದ ಅಧ್ಯಯನ ಹಾಗೂ ಚರ್ಚೆ ನಡೆಸುವ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ.

    ಒಂದೇ ಮತದಾರರ ಪಟ್ಟಿಯನ್ನು ಲೋಕಸಭಾ, ವಿಧಾನಸಭಾ ಹಾಗೂ ಇತರ ಚುನಾವಣೆ ಬಳಸಿಕೊಳ್ಳಬೇಕು. ಇದಕ್ಕಾಗಿ ಸಮಯ ಹಾಗೂ ಹಣವನ್ನು ಯಾಕೆ ವ್ಯರ್ಥ ಮಾಡುತ್ತಿದ್ದೇವೆ ಎಂದು ಪ್ರಶ್ನಿಸಿದರು.

    ಇದೇ ವೇಳೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಮೂರೂ ವಿಭಾಗಗಳ ನಡುವೆ ಸಮನ್ವಯದ ಅಗತ್ಯವಿದೆ. ಅವರ ಪಾತ್ರ ಹಾಗೂ ಕೆಲಸದ ಬಗ್ಗೆ ಸಂವಿಧಾನದಲ್ಲಿ ವಿವರಿಸಲಾಗಿದೆ ಎಂದು ಒತ್ತಿ ಹೇಳಿದರು.

  • ಮೋದಿ ನೇತೃತ್ವದ ‘ಒಂದೇ ದೇಶ, ಒಂದೇ ಚುನಾವಣೆ’ ಸಭೆಗೆ 5 ಪಕ್ಷಗಳ ನಾಯಕರು ಗೈರು

    ಮೋದಿ ನೇತೃತ್ವದ ‘ಒಂದೇ ದೇಶ, ಒಂದೇ ಚುನಾವಣೆ’ ಸಭೆಗೆ 5 ಪಕ್ಷಗಳ ನಾಯಕರು ಗೈರು

    – ಭಾಗಿಯಾಗದ ಮೂರು ಪಕ್ಷಗಳ ಪ್ರಮುಖ ನಾಯಕರು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ‘ಒಂದೇ ದೇಶ, ಒಂದೇ ಚುನಾವಣೆ’ ಹಾಗೂ ‘ನೀತಿ ಆಯೋಗದ’ ಕುರಿತ ಸರ್ವ ಪಕ್ಷಗಳ ಸಭೆಗೆ ಕಾಂಗ್ರೆಸ್, ಮಮತಾ ಬ್ಯಾನರ್ಜಿ, ಮಾಯಾವತಿ ಹಾಗೂ ಇತರ 5 ಪಕ್ಷಗಳ ನಾಯಕರು ಗೈರಾಗಿದ್ದಾರೆ.

    ‘ಒಂದೇ ದೇಶ, ಒಂದೇ ಚುನಾವಣೆ’ ಹಾಗೂ ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ಕುರಿತು ನಡೆಯುತ್ತಿರುವ ‘ನೀತಿ ಆಯೋಗ’ದ ಸಭೆಗಳಿಗೆ ವಿರೋಧ ಪಕ್ಷದ ನಾಯಕರು ಸೇರಿದಂತೆ ವಿವಿಧ ಐದು ಪಕ್ಷಗಳ ನಾಯಕರು ಗೈರಾಗುವ ಮೂಲಕ ನಿರ್ಲಕ್ಷ್ಯ ವಹಿಸಿದ್ದಾರೆ.

    ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, ಮಮತಾ ಬ್ಯಾನರ್ಜಿ ಚಲನಶೀಲತೆ ಇಲ್ಲದ ಪಕ್ಷ ಎಂದು ಟೀಕಿಸಿದ್ದಾರೆ. ಮಾಯಾವತಿ ಅವರು ಸರ್ಕಾರದ ಕುರಿತು ಅಪಹಾಸ್ಯ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಅವರೂ ಸಹ ಸಭೆಗೆ ಹಾಜರಾಗಿಲ್ಲ. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷದ ಮುಖಂಡರನ್ನು ಕಳುಹಿಸಿದ್ದಾರೆ.

    ಇಂದು ಸಭೆಯ ಕುರಿತಾಗಿ ನಡೆದ 10 ಪ್ರಮುಖ ಬೆಳವಣಿಗೆಗಳು

    1. ಹಣ ಹಾಗೂ ಸಮಯವನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ‘ಒಂದೇ ದೇಶ ಒಂದೇ ಚುನಾವಣೆ’ ಕುರಿತು ಸರ್ವ ಪಕ್ಷಗಳ ಅಭಿಪ್ರಾಯಗಳನ್ನು ತಿಳಿಸಲು ಸಭೆ ಕರೆಯಲಾಗಿತ್ತು. ಆದರೆ, ವಿರೋಧ ಪಕ್ಷಗಳು ಗೈರಾಗುವ ಮೂಲಕ ನಿರಾಸಕ್ತಿ ವಹಿಸಿದ್ದು, ಈ ನಿರ್ಧಾರ ಫೆಡರಲ್ ತತ್ವಗಳಿಗೆ ವಿರುದ್ಧವಾಗಿವೆ ಎಂದು ತಿಳಿಸಿವೆ.

    2. ‘ಒಂದೇ ದೇಶ ಒಂದೇ ಚುನಾವಣೆ’ ಚಿಂತನೆ ಕುರಿತು ಸಂವಿಧಾನ ತಿದ್ದುಪಡಿಗೆ ರಾಜ್ಯಸಭೆ ಹಾಗೂ ಲೋಕಸಭೆ ಎರಡರಲ್ಲೂ ಸಹ ಮೂರನೇ ಎರಡಷ್ಟು ಬಹುಮತ ಸಾಬೀತು ಪಡಿಸಬೇಕು. ಹೀಗಾಗಿ ಸರ್ವ ಪಕ್ಷಗಳ ಮನವೊಲಿಸಲು ಬಿಜೆಪಿ ಈ ಸಭೆ ಕರೆದಿದೆ.

    3. ಈ ಕುರಿತು ಬಿಎಸ್‍ಪಿಯ ಮಾಯಾವತಿ ಅವರು ಪ್ರತಿಕ್ರಿಯಿಸಿ, ಬ್ಯಾಲೆಟ್ ಪೇಪರ್ ಬಳಕೆಯನ್ನು ಬಿಟ್ಟು ವಿದ್ಯುನ್ಮಾನ ಮತ ಯಂತ್ರಗಳನ್ನೇ ಬಳಸುತ್ತಿರುವುದು ಮೊಂಡುತನವಾಗಿದ್ದು, ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಹಾಕುವ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.

    4. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಂಗಳವಾರ ಪತ್ರ ಬರೆದು, ‘ಒಂದೇ ದೇಶ ಒಂದೇ ಚುನಾವಣೆ’ ಕುರಿತು ಪ್ರತಿಕ್ರಿಯಿಸಲು ಒಂದೇ ಸಭೆ ಸಾಕಾಗುವುದಿಲ್ಲ ಎಂದು ವಾದಿಸಿ, ಈ ಕುರಿತು ಸರ್ಕಾರ ಶ್ವೇತಪತ್ರ ಪತ್ರ ಹೊರಡಿಸಿ, ತಜ್ಞರನ್ನು ಸಂಪರ್ಕಿಸಿ, ಪ್ರತಿಕ್ರಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

    5. ಮಮತಾ ಬ್ಯಾನರ್ಜಿ ನೀತಿ ಆಯೋಗದ ಸಭೆಗೂ ತಗಾದೆ ಎತ್ತಿದ್ದು, ನೀತಿ ಆಯೋಗದ ಪ್ರಸ್ತಾವನೆ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಯಂತಹ ಯೋಜನೆಗಳನ್ನು ತೃಣಮೂಲ ಕಾಂಗ್ರೆಸ್ ವಿರೋಧಿಸುತ್ತದೆ. ಇದು ರಾಜ್ಯದ ಎಲ್ಲ ಜಿಲ್ಲೆಗಳ ಸಮತೋಲನ ಹಾಗೂ ಏಕರೂಪತೆಯ ಅಭಿವೃದ್ಧಿ ಸಾಧಿಸುವ ಉದ್ದೇಶಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

    6. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನಿಯೋಜಿತ ಪ್ರತಿನಿಧಿಗಳನ್ನಾಗಿ ಎಎಪಿಯಿಂದ ರಾಘವ್ ಚಂಧ, ಟಿಡಿಪಿಯಿಂದ ಜಯದೇವ್ ಗಲ್ಲ ಅವರನ್ನು ಕಳುಹಿಸಿದ್ದಾರೆ.

    7. ಸಭೆಯಿಂದ ರಾಜ್ಯಕ್ಕೆ ಏನೂ ಸಹಾಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ತಮ್ಮ ಮಗ ಹಾಗೂ ಪಕ್ಷದ ಮುಖ್ಯಸ್ಥ ಕೆ.ಟಿ.ರಾಮ ರಾವ್ ಅವರನ್ನು ಕಳುಹಿಸಿದ್ದಾರೆ.

    8. ಚರ್ಚೆ ಮಾಡಲು ಏನಿದೆ? ನಾವು ಕೇಂದ್ರ ಸರ್ಕಾರದೊಂದಿಗೆ ಸಾಂವಿಧಾನಿಕ ಸಂಪರ್ಕವನ್ನು ಮಾತ್ರ ಹೊಂದಿದ್ದೇವೆ. ಈಗಲೂ ನಾನು ಫೆಡರಲ್ ಫ್ರಂಟ್‍ನ್ನು ಬೆಂಬಲಿಸುತ್ತೇನೆ. ಕೇಂದ್ರದೊಂದಿಗೆ ಮಾತನಾಡಿ ಏನೂ ಪ್ರಯೋಜನವಿಲ್ಲ. ಈವರೆಗೆ ಕೇಂದ್ರದಿಂದ ಒಂದು ರೂಪಾಯಿನೂ ಪಡೆದಿಲ್ಲ. ಮೋದಿ ಅವರು ಫ್ಯಾಸಿಸ್ಟ್ ಸರ್ಕಾರ ನಡೆಸುತ್ತಿದ್ದಾರೆ ಎಂದು ಈಗಾಗಲೇ ಹೇಳಿದ್ದೇನೆ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.

    9. ಏಕಕಾಲಿಕ ಚುನಾವಣೆ ಮಾತ್ರವಲ್ಲದೆ, ಸಭೆಯಲ್ಲಿ ನೀತಿ ಆಯೋಗದ ಪ್ರಸ್ತಾವನೆ ಕುರಿತೂ ಸಹ ಚರ್ಚಿಸಿಲಾಗುತ್ತಿದೆ. ಮಹತ್ವಾಕಾಂಕ್ಷಿಯ ಜಿಲ್ಲೆಗಳು ಎಂಬ ಯೋಜನೆ ಕುರಿತು ಚರ್ಚೆ ನಡೆಯಲಿದ್ದು, 28 ರಾಜ್ಯಗಳ 117 ಜಿಲ್ಲೆಗಳ ಸಾಮಾಜಿಕ-ಆರ್ಥಿಕ ಚಟುವಟಿಕೆಗಳು ಚುರುಕು ಪಡೆಯಲಿವೆ.

    10. ಸಭೆಯಲ್ಲಿ ಈ ವರ್ಷ ಆಚರಿಸಲಾಗುವ ಮಹತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಹಾಗೂ 2022ಕ್ಕೆ ಆಚರಿಸಲಾಗುತ್ತಿರುವ ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆಯ ಕುರಿತು ಚರ್ಚಿಸಲಾಗುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]