Tag: omicron dakshina kannada

  • ದಕ್ಷಿಣ ಕನ್ನಡದ ಐವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌

    ದಕ್ಷಿಣ ಕನ್ನಡದ ಐವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರ ಹೊಸ ತಳಿ ಓಮಿಕ್ರಾನ್‌ ಅಟ್ಟಹಾಸ ಮುಂದುವರಿದಿದ್ದು, ಇಂದು ಮತ್ತೆ 6 ಓಮಿಕ್ರಾನ್‌ ಸೋಂಕು ಪ್ರಕರಣಗಳು ದೃಢಪಟ್ಟಿವೆ.

    ದಕ್ಷಿಣ ಕನ್ನಡ ಜಿಲ್ಲೆಯ 2 ಕಾಲೇಜುಗಳಲ್ಲಿ ಇಂದು ಐವರು ವಿದ್ಯಾರ್ಥಿಗಳು ಹಾಗೂ ಬೆಂಗಳೂರಿಗೆ ಬಂದಿದ್ದ ಒಬ್ಬರಲ್ಲಿ ಓಮಿಕ್ರಾನ್‌ ಸೋಂಕು ಪತ್ತೆಯಾಗಿದೆ. ಒಂದು ಕಾಲೇಜಿನ 4 ವಿದ್ಯಾರ್ಥಿಗಳು ಹಾಗೂ ಮತ್ತೊಂದು ಕಾಲೇಜಿನ ಒಬ್ಬ ವಿದ್ಯಾರ್ಥಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. ಆ ಮೂಲಕ ಶಿಕ್ಷಣ ಸಂಸ್ಥೆಗಳಿಗೂ ಸೋಂಕಿನ ಭೀತಿ ಆವರಿಸಿದೆ. ಈ ಕುರಿತು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಹೆಸರಿನಲ್ಲಿ ನಕಲಿ ಲಸಿಕಾ ಪ್ರಮಾಣಪತ್ರ

    ಈವರೆಗೆ ರಾಜ್ಯದಲ್ಲಿ ಒಟ್ಟು ಓಮಿಕ್ರಾನ್‌ ಸೋಂಕು ಪ್ರಕರಣಗಳ ಸಂಖ್ಯೆ 14ಕ್ಕೆ ಏರಿದೆ. ದೇಶದಲ್ಲಿ ಈ ಸಂಖ್ಯೆ 100ರ ಗಡಿ ದಾಟಿದೆ. ದೇಶದಲ್ಲೇ ಅತಿ ಹೆಚ್ಚು ಓಮಿಕ್ರಾನ್‌ ಪ್ರಕರಣಗಳು ಮಹಾರಾಷ್ಟ್ರ ರಾಜ್ಯದಲ್ಲಿ ದೃಢಪಟ್ಟಿವೆ. ಇದನ್ನೂ ಓದಿ: ಹಳ್ಳಿಗೆ 300 ಕೋವಿಡ್ ಲಸಿಕೆಗಳನ್ನು ಸಾಗಿಸಿದ ಡ್ರೋನ್

    ರಾಜ್ಯದಲ್ಲಿ ಇಂದು ಆರು ಮಂದಿಯಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಇದರಲ್ಲಿ ಬೆಂಗಳೂರಿನಲ್ಲಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡರೆ, ದಕ್ಷಿಣ ಕನ್ನಡ ಜಿಲ್ಲೆಯ ಐವರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಯು‌ಕೆಯಿಂದ ಬೆಂಗಳೂರಿಗೆ ಬಂದಿದ್ದ ಯುವತಿಗೆ ಒಮಿಕ್ರಾನ್ ಕಾಣಿಸಿಕೊಂಡಿದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಐದು ಸೋಂಕಿತರಿಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೆ ಒಮಿಕ್ರಾನ್ ಬಂದಿದೆ. ಹೀಗಾಗಿ ಸಮುದಾಯದಲ್ಲಿ ಈ ರೂಪಾಂತರಿ ವೈರಸ್ ಹರಡಿದೆಯೇ ಎಂಬ ಪ್ರಶ್ನೆ ಮೂಡಿದ್ದು, ಆತಂಕಕ್ಕೀಡು ಮಾಡಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ‌ ವಸತಿ ಶಾಲೆಯೊಂದರ 14 ವರ್ಷದ 3 ವಿದ್ಯಾರ್ಥಿನಿಯರು, 13 ವರ್ಷದ ಒಬ್ಬ ವಿದ್ಯಾರ್ಥಿನಿ ಹಾಗೂ ಮಂಗಳೂರಿನ ನರ್ಸಿಂಗ್ ಕಾಲೇಜಿನ 19 ವರ್ಷದ ಒಬ್ಬ ವಿದ್ಯಾರ್ಥಿನಿಯಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ. ನವೆಂಬರ್ ತಿಂಗಳಿನಲ್ಲಿ ಈ ಒಂದೇ ವಿದ್ಯಾಸಂಸ್ಥೆಯ 16 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಸರ್ಕಾರದ ಸೂಚನೆಯಂತೆ ಡಿ.10 ರಂದು ಜಿಲ್ಲಾಡಳಿತ ಇವರೆಲ್ಲರ ಸ್ವ್ಯಾಬ್ ಅನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಿತ್ತು. ಈ ಪರೀಕ್ಷೆಯ ವರದಿ ಇಂದು ಬಂದಿದ್ದು, ಒಟ್ಟು 16 ಮಂದಿಯ ಪೈಕಿ ನಾಲ್ವರಲ್ಲಿ ಒಮಿಕ್ರಾನ್ ಇರುವುದು ಕಂಡು ಬಂದಿದೆ. ಇನ್ನೊಬ್ಬಾಕೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಡಿ.9ರಂದು ಆ ಕಾಲೇಜಿನಲ್ಲಿ 19 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ದಾಖಲಾಗಿತ್ತು. ಈ 19 ಮಂದಿಯಲ್ಲಿ ಒಬ್ಬಾಕೆಯಲ್ಲಿ ಮಾತ್ರ ಒಮಿಕ್ರಾನ್ ಪತ್ತೆಯಾಗಿದೆ.

    ಸದ್ಯ ಇವರಿಂದ ಪ್ರಾಥಮಿಕ ಸಂಪರ್ಕಿತರಾದ 79 ಮಂದಿ, ದ್ವಿತೀಯ ಸಂಪರ್ಕಿತರಾದ 203 ಮಂದಿಗೆ ಟೆಸ್ಟ್ ಮಾಡಲಾಗಿದೆ‌. ಇದರಲ್ಲಿ 67 ಸ್ಯಾಂಪಲ್‌ಗಳನ್ನು ಜಿನೋಮಿಕ್ ಸೀಕ್ವೆನ್ಸ್‌ಗೆ ರವಾನೆ ಮಾಡಲಾಗಿದೆ. ಸೋಂಕಿತರಾಗಿರುವ ಐದು ಮಂದಿಯೂ ಆರೋಗ್ಯವಾಗಿದ್ದು, ನಾಲ್ವರಿಗೆ ಈಗಾಗಲೇ ನೆಗೆಟಿವ್ ಬಂದಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಒಟ್ಟಿನಲ್ಲಿ ಒಮಿಕ್ರಾನ್ ಆತಂಕ ಕಡಲನಗರಿ ಮಂಗಳೂರಿನಲ್ಲಿಯೂ ಕಂಡು ಬಂದಿದ್ದು ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ.