Tag: OLX

  • ಒಎಲ್‌ಎಕ್ಸ್‌ನಲ್ಲಿ ಕಾರು ಖರೀದಿ ದೋಖಾ – ಅತ್ತ ಕಾರು ಇಲ್ಲ, ಹಣವೂ ಇಲ್ಲ

    ಒಎಲ್‌ಎಕ್ಸ್‌ನಲ್ಲಿ ಕಾರು ಖರೀದಿ ದೋಖಾ – ಅತ್ತ ಕಾರು ಇಲ್ಲ, ಹಣವೂ ಇಲ್ಲ

    ಹಾವೇರಿ: ಪ್ರತಿಯೊಬ್ಬರಿಗೂ ಕಾರು ಖರೀದಿಸಬೇಕು ಎನ್ನುವ ಆಸೆ ಇರುತ್ತದೆ. ಇದೀಗ ಅದಕ್ಕೆ ಪೂರಕ ಎಂಬಂತೆ ಆನ್‍ಲೈನ್ ಮಾರಾಟವು ತೆರೆದುಕೊಂಡಿದೆ. ಇದನ್ನೆ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟಕ್ಕಿದೆ ಎಂದು ಹಾಕಿಕೊಂಡಿದ್ದಾನೆ. ಇದನ್ನು ನೋಡಿದ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿವಪುರ ಗ್ರಾಮದ ಯುವಕನೊಬ್ಬ ಖರೀದಿಗೆ ಮುಂದಾಗಿದ್ದಾನೆ. ಆರ್ಮಿ ಡಾಕ್ಟರ್ ಎಂದು ಹೇಳಿಕೊಂಡ ಆಸಾಮಿ ಯುವಕನಿಂದ ಹಣ ಹಾಕಿಸಿಕೊಂಡು ಹಣವೂ ಇಲ್ಲದೆ, ಕಾರು ಕೊಡದೇ ಮೋಸ ಮಾಡಿದ್ದಾನೆ.

    ಕಳೆದ ಕೆಲವು ದಿನಗಳ ಹಿಂದೆ ಒಎಲ್‍ಎಕ್ಸ್ ಆ್ಯಪ್‍ನ ಜಾಹೀರಾತಿನಲ್ಲಿ ಸ್ವಿಫ್ಟ್ ಡಿಸೈರ್ ಕಾರು ಮಾರಾಟಕ್ಕೆ ಇದೆ ಎಂಬ ಜಾಹೀರಾತನ್ನು ಶಿವಪುರ ಗ್ರಾಮದ ಯುವಕ ಚೇತನ್ ಎಂಬಾತ ಗಮನಿಸಿದ್ದಾನೆ. ಜಾಹೀರಾತಿನಲ್ಲಿದ್ದ ನಂಬರ್ ಪಡೆದುಕೊಂಡು ಕರೆ ಮಾಡಿದ್ದಾನೆ. ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಪುಸ್ತಕ ನೀಡಿ ಆತ್ಮಸ್ಥೈರ್ಯ ತುಂಬಿದ ಲ್ಯಾಬ್ ಟೆಕ್ನಿಷಿಯನ್

    ಆಗ ತಿಮ್ಮನಗೌಡ ಎಂಬ ಹೆಸರಿನವನು ತಾನು ಆರ್ಮಿಯಲ್ಲಿ ಡಾಕ್ಟರ್ ಆಗಿದ್ದು, ಜಮ್ಮುಕಾಶ್ಮೀರ ಆರ್ಮಿ ಕ್ಯಾಂಪ್ ಗೆ ವರ್ಗಾವಣೆ ಆಗಿದೆ. ಹೀಗಾಗಿ ಕಾರು ಮಾರಾಟ ಮಾಡುತ್ತಿದ್ದೇನೆ ಎಂದು ಬಣ್ಣಬಣ್ಣದ ಮಾತುಗಳನ್ನು ಆಡಿದ್ದಾನೆ. ಆರ್ಮಿ ಡಾಕ್ಟರ್ ಎಂದು ಪರಿಚಯಿಸಿಕೊಂಡ ಮೇಲೆ ಯುವಕ ಚೇತನ್‍ಗೆ ಅವನ ಮೇಲೆ ಎಲ್ಲಿಲ್ಲದ ಭರವಸೆ ಮೂಡಿದೆ. ಕೊನೆಗೆ ಫೋನ್ ನಲ್ಲಿಯೇ ಒಂದು ಲಕ್ಷ ಹತ್ತು ಸಾವಿರ ರೂಪಾಯಿಗೆ ಕಾರಿನ ವ್ಯವಹಾರ ಮುಗಿಸಿಕೊಂಡು ಚೇತನ್ ಬಳಿಕ ಹಣ ವರ್ಗಾವಣೆಗೆ ಮುಂದಾಗಿದ್ದಾನೆ. ಇದನ್ನೂ ಓದಿ:ಲಾಕ್‍ಡೌನ್ ವೇಳೆ ಹಾವೇರಿಯಲ್ಲಿ ಮಹಿಳೆಯರು, ಯುವತಿಯರು ಸೇರಿ 40 ಜನ ನಾಪತ್ತೆ

    ಸ್ವಿಫ್ಟ್ ಡಿಸೈರ್ ಕಾರಿನ ವ್ಯವಹಾರ ಒಂದು ಲಕ್ಷ ಹತ್ತು ಸಾವಿರ ರೂಪಾಯಿಗೆ ಮುಗಿದಿದೆ. ಕಡಿಮೆ ಬೆಲೆಗೆ ಕಾರು ಸಿಕ್ಕಿತು ಎಂಬ ಖುಷಿಯಲ್ಲಿದ್ದ ಚೇತನ್‍ಗೆ, ಆರ್ಮಿ ಡಾಕ್ಟರ್ ಎಂದು ಪರಿಚಯಿಸಿಕೊಂಡ ತಿಮ್ಮನಗೌಡ ಕಾರನ್ನು ಡೆಲಿವರಿ ಮಾಡಲು ಸೆಕ್ಯೂರಿಟಿ ಚಾರ್ಜ್, ಜಿಪಿಎಸ್ ಚಾರ್ಜ್, ಡಾಕ್ಯುಮೆಂಟ್ ಚಾರ್ಜ್, ಎನ್‍ಓಸಿ ಚಾರ್ಜ್ ಎಂದು ಬರೋಬ್ಬರಿ 71,798 ರೂಪಾಯಿಗಳನ್ನು ಫೋನ್ ಪೇ ನಂಬರ್ ಮೂಲಕ ಚೇತನ್ ಕಡೆಯಿಂದ ಹಣ ಹಾಕಿಸಿಕೊಂಡಿದ್ದಾನೆ. ನಂತರ ಕಾರು ಕೊಡದೆ, ಹಣವನ್ನೂ ಮರುಕಳಿಸದೆ ಯಾಮಾರಿಸಿದ್ದಾನೆ. ಕಾರಿಗಾಗಿ ಹಣ ಹಾಕಿ ಕಂಗಾಲಾದ ಚೇತನ್ ತಾನು ಮೋಸ ಹೋಗಿದ್ದೇನೆ ಎಂಬುದನ್ನು ಅರಿತುಕೊಂಡು ಹಾವೇರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ತಿಮ್ಮನಗೌಡ ಎಂಬ ಹೆಸರಿನವನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾನೆ.

  • ಒಎಲ್‌ಎಕ್ಸ್‌ನಲ್ಲಿ 30 ಸಾವಿರ ಕೋಟಿಗೆ ಏಕತಾ ಪ್ರತಿಮೆ ಮಾರಾಟಕ್ಕೆ

    ಒಎಲ್‌ಎಕ್ಸ್‌ನಲ್ಲಿ 30 ಸಾವಿರ ಕೋಟಿಗೆ ಏಕತಾ ಪ್ರತಿಮೆ ಮಾರಾಟಕ್ಕೆ

    ಅಹಮದಾಬಾದ್: ವಿಶ್ವದ ಅತೀ ದೊಡ್ಡ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿರುವ ಏಕತಾ ಪ್ರತಿಮೆಯನ್ನು ಕಿಡಿಗೇಡಿಗಳು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.

    ಅನಾಮಧೇಯ ವ್ಯಕ್ತಿಯೊಬ್ಬ ಏಕತಾ ಪ್ರತಿಮೆಯ ಫೋಟೋವನ್ನು ಒಎಲ್‌ಎಕ್ಸ್‌ನಲ್ಲಿ ಅಪ್ಲೋಡ್ ಮಾಡಿ ಪ್ರತಿಮೆ 30 ಸಾವಿರ ಕೋಟಿ ರೂಪಾಯಿಗೆ ಮಾರಾಟಕ್ಕಿದೆ ಎಂದು ಹಾಕಿದ್ದನು. ಈ ಜಾಹಿರಾತನ್ನು ಯಾವುದೇ ರೀತಿಯ ಪೂರ್ವಾಪರ ವಿಚಾರಸಿದೆ ಸಾರ್ವಜನಿಕವಾಗಿ ಜಾಹಿರಾತು ಪ್ರಸಾರ ಮಾಡಿದ್ದಾಕ್ಕಾಗಿ ಕೆವಾಡಿಯಾ ಸ್ಥಳೀಯ ಆಡಳಿತ ಒಎಲ್‍ಎಕ್ಸ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಕೆವಾಡಿಯಾದ ಉಪ ಆಯುಕ್ತ ನಿಲೇಶ್ ದುಬೆ ಅವರು, ಏಕತಾ ಪ್ರತಿಮೆ ದೇಶದ ಆಸ್ತಿ. ಇದನ್ನು ಯಾರೋ ಒಬ್ಬ ಕಿಡಿಗೇಡಿ ಮಾರಾಟಕ್ಕಿದೆ ಎಂದು ಒಎಲ್‌ಎಕ್ಸ್‌ನಲ್ಲಿ ಜಾಹಿರಾತು ನೀಡಿದ್ದಾನೆ. ಈ ಬಗ್ಗೆ ಪೂರ್ವಾಪರ ವಿಚಾರಿಸದೇ ಒಎಲ್‍ಎಕ್ಸ್ ಕೂಡ ಜಾಹಿರಾತು ಪ್ರಸಾರ ಮಾಡಿದೆ. ಆದ್ದರಿಂದ ಸಂಸ್ಥೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಕಿಡಿಕಾರಿದ್ದಾರೆ.

    ಏಕತಾ ಪ್ರತಿಮೆಯು ಭಾರತದ ಮೊದಲ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. 2018ರ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆ ಅನಾವರಣ ಮಾಡಿದಾಗಿನಿಂದಲೂ ಲಕ್ಷಾಂತರ ಮಂದಿ ಪ್ರವಾಸಿಗರು ಪ್ರತಿಮೆ ಇರುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಇದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಕೂಡ ಪಡೆದಿದೆ.

  • ನಿಮಗೂ ಈ ರೀತಿ ಆಗಬಹುದು ಎಚ್ಚರ – ಗೂಗಲ್ ಪೇ ಮೂಲಕ 1 ರೂಪಾಯಿ ಹಾಕಿ 97 ಸಾವಿರ ಎಗರಿಸಿದ

    ನಿಮಗೂ ಈ ರೀತಿ ಆಗಬಹುದು ಎಚ್ಚರ – ಗೂಗಲ್ ಪೇ ಮೂಲಕ 1 ರೂಪಾಯಿ ಹಾಕಿ 97 ಸಾವಿರ ಎಗರಿಸಿದ

    ಬೆಂಗಳೂರು: ಆನ್‍ಲೈನ್ ವ್ಯವಹಾರವನ್ನು ಖದೀಮರು ಹೇಗೆ ಬಂಡವಾಳ ಮಾಡಿಕೊಂಡು ಅಮಾಯಕರ ಹಣವನ್ನ ದೋಚುತ್ತಿದ್ದಾರೆ ಅನ್ನೋದಕ್ಕೆ ಈ ಘಟನೆ ನೈಜ ಉದಾರಣೆಯಾಗಿದೆ.

    ಮಹಿಳೆಯ ಗೂಗಲ್ ಪೇ ಖಾತೆಗೆ ಒಂದು ರೂಪಾಯಿ ಹಾಕಿ ಒರೋಬ್ಬರಿ 97 ಸಾವಿರ ಹಣವನ್ನ ದೋಚಿರುವ ಘಟನೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ನಡೆದಿದೆ. ಬ್ರಿಂದಾ ದೇಸಾಯಿ ಎಂಬವರು ಪೀಠೋಪಕರಣಗಳನ್ನು ಮಾರಾಟ ಮಾಡಲೆಂದು ಒಎಲ್‍ಎಕ್ಸ್ ನಲ್ಲಿ ಹಾಕಿದ್ದಾರೆ. ಬೆಳಗ್ಗೆ ಹಾಕಿ ಸಂಜೆಗೆ ವ್ಯಕ್ತಿಯೊಬ್ಬ ಕರೆ ಮಾಡಿ ನೀವು ಒಎಲ್‍ಎಕ್ಸ್ ನಲ್ಲಿ ಹಾಕಿರುವ ಪೀಠೋಪಕರಣವನ್ನು ಖರಿದೀಸುವುದಾಗಿ ಹೇಳಿದ್ದಾನೆ.

    ನನ್ನ ಹೆಸರು ದೀಪಕ್ ಕಪೂರ್, ನಾನು ಮಿಲಿಟರಿ ಕ್ಯಾಂಟಿನ್‍ನಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಾನೆ. ನಂತರ ಮಹಿಳೆ ಹಣ ಹೇಗೆ ಕೊಡುತ್ತೀರಾ ಎಂದು ದೀಪಕ್ ಕಪೂರ್ ಗೆ ಕೇಳಿದ್ದಾರೆ. ಗೂಗಲ್ ಪೇ ಮೂಲಕ ಕಳಿಸಿಕೊಡುವುದಾಗಿ ಹೇಳಿ ಮಹಿಳೆಯ ಗೂಗಲ್ ಪೇ ಗೆ ಒಂದು ರೂಪಾಯಿ ಕಳಿಸಿಕೊಟ್ಟಿದ್ದಾನೆ. ನಂತರ ಮತ್ತೊಂದು ಕ್ಯೂಆರ್ ಕೋಡ್ ಕಳಿಸಿದ್ದಾನೆ. ಮಹಿಳೆಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಮತ್ತೊಂದು ರೂಪಾಯಿ ಮಹಿಳೆಯ ಗೂಗಲ್ ಪೇಗೆ ಬಂದಿದೆ.

    ನಂತರ 10 ಸಾವಿರದ ಕ್ಯೂಆರ್ ಕೋಡ್ ಕಳಿಸಿ ಇದನ್ನು ಸ್ಕ್ಯಾನ್ ಮಾಡಿ ಪಿನ್ ನಂಬರ್ ಕಳಿಸಲು ಮಹಿಳೆಗೆ ಹೇಳಿದ್ದಾನೆ. ಮಹಿಳೆ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಮಹಿಳೆಯ ಅಕೌಂಟ್‍ನಿಂದ ಹತ್ತು ಸಾವಿರ ಹಣ ಆತನ ಖಾತೆಗೆ ವರ್ಗಾವಣೆ ಆಗಿದೆ. ಮಹಿಳೆ ಕಟ್ಟಾದ ಹಣದ ಬಗ್ಗೆ ಕರೆಮಾಡಿ ಕೇಳಿದಾಗ ಮರಳಿ ನಿಮ್ಮ ಅಕೌಂಟಿಗೆ ಕಳುಹಿಸುವುದಾಗಿ ಹೇಳಿ ಎಂಟು ಬಾರಿ ಕ್ಯೂಆರ್ ಕೋಡ್ ಕಳಿಸಿ ಬರೋಬ್ಬರಿ 97 ಸಾವಿರ ಹಣ ಎಗರಿಸಿಕೊಂಡು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

    ಸದ್ಯ ಈ ಸಂಬಂಧ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಒಎಲ್‍ಎಕ್ಸ್ ದೋಖಾ – ಓಮ್ನಿ ಆಸೆಗೆ ಬಿದ್ದ ಕಾರ್ಮಿಕರಿಗೆ ಪಂಗನಾಮ

    ಒಎಲ್‍ಎಕ್ಸ್ ದೋಖಾ – ಓಮ್ನಿ ಆಸೆಗೆ ಬಿದ್ದ ಕಾರ್ಮಿಕರಿಗೆ ಪಂಗನಾಮ

    ಚಿಕ್ಕಬಳ್ಳಾಪುರ: ಒಎಲ್‍ಎಕ್ಸ್ ಹಳೆಯ ಹಾಗೂ ಬೇಡವಾದ ಗೃಹಬಳಕೆ ವಸ್ತುಗಳನ್ನ ಮಾರಾಟ ಮಾಡುವುದಕ್ಕೆ ಇರುವ ಆನ್‍ಲೈನ್ ತಾಣವಾಗಿದೆ. ಆದರೆ ಅದೇ ಆನ್‍ಲೈನ್ ತಾಣವನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲ ಸೈಬರ್ ಕಳ್ಳರು, ಸುಲಭವಾಗಿ ಅಮಾಯಕ ಗ್ರಾಹಕರ ಬಳಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿ ವಂಚನೆ ಮಾಡುತ್ತಿದ್ದಾರೆ.

    ಒಎಲ್‌ಎಕ್ಸ್‌ನಲ್ಲಿ ಓಮ್ನಿ ಕಾರು ನೋಡಿದ ಬಳ್ಳಾರಿ ಮೂಲದ ದೊಡ್ಡನಾಯಕ್ ಹಾಗೂ ಕೃಷ್ಣನಾಯಕ್ ಅವರು ಖದೀಮರ ಕೃತ್ಯಕ್ಕೆ ಈಗ ಕಣ್ಣೀರು ಹಾಕುವಂತಾಗಿದೆ. ಹೌದು. ಒಎಲ್‌ಎಕ್ಸ್‌ನಲ್ಲಿ ಕೆಎ 17 ಬಿ 5946 ನಂಬರಿನ ಒಮ್ನಿ ಕಾರು ಕಂಡಿದ್ದೇ ತಡ ಕಾರು ಚೆನ್ನಾಗಿದೆ ಅಂತ ರೇಟ್ ನೋಡಿದ್ದಾರೆ. ಅಲ್ಲಿ ಓಮ್ನಿ ಕಾರಿಗೆ ಕೇವಲ 60 ಸಾವಿರ ರೂಪಾಯಿ ಅಂತ ಹಾಕಲಾಗಿತ್ತು. ಓಮ್ನಿ ಕಾರು ನೋಡೋಕೆ ಚೆನ್ನಾಗಿದೆ ಅಂತ ಅದರಲ್ಲಿದ್ದ ಕಾಂಟಾಕ್ಟ್ ನಂಬರಿಗೆ ದೊಡ್ಡನಾಯಕ್, ಕೃಷ್ಣನಾಯಕ್ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದವನು ನಾನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‍ಎಫ್ ಆಫೀಸರ್ ವಿಜಯ್ ಕುಮಾರ್, ಕಾರಿನ ರೇಟ್ 60 ಸಾವಿರ ಅಂದಿದ್ದಾನೆ. ಈ ಕಡೆಯಿಂದ ಚರ್ಚೆಗಿಳಿದ ದೊಡ್ಡನಾಯಕ್ ಅಷ್ಟೊಂದು ಜಾಸ್ತಿ ಸರ್.. 35 ಸಾವಿರ ಕೊಡ್ತೀನಿ ಅಂದಿದ್ದಾರೆ. ಅಷ್ಟೇ ಮರುಮಾತನಾಡದೆ ವಿಜಯ್ ಕುಮಾರ್ ಒಪ್ಪಿಕೊಂಡಿದ್ದನು.

    ಹಣ ಗೂಗಲ್ ಪೇ ಮಾಡಿ, ಗಾಡಿ ನಿಮ್ಮ ಜಾಗಕ್ಕೆ ನಾನೇ ಕಳಿಸಿಕೊಡ್ತೀನಿ ಸುಮ್ನೆ ಯಾಕ್ ನೀವು ಇಲ್ಲಿಗೆ ಬರೋದು ಅಂತ ಹೇಳಿದ್ದಾನೆ. ಅಲ್ಲದೆ ಮೊದಲು 5,100 ರೂ. ಹಾಕಿ ಸಾಕು ಅಮೇಲೆ ಉಳಿದ ಹಣ ಗಾಡಿ ಬಂದ ಮೇಲೆ ಹಾಕಿ ಎಂದು ವಿಜಯ್ ಕುಮಾರ್, ದೊಡ್ಡನಾಯಕ್ ಮತ್ತು ಕೃಷ್ಣನಾಯಕ್ ಬಳಿ ಹೇಳಿದ್ದಾನೆ. ಹೀಗೆ ಮೊದಲು 5,100 ರೂಪಾಯಿ ಆನ್‍ಲೈನ್ ಟ್ರಾನ್ಸ್‌ಫರ್ ಮಾಡಿಸಿಕೊಂಡ ಖದೀಮ, ಇನ್ನೇನು ಕಾರು ನಿಮ್ಮ ಊರು ಕಡೆ ಬರ್ತಿದೆ ಅಂತ ಒಂದು ಕೊರಿಯರ್‍ನಲ್ಲಿ ವಾಹನದ ದಾಖಲೆ ಪತ್ರ ಜೊತೆಗೆ ಬರೆದು ಅದನ್ನ ವಾಟ್ಸಾಪ್ ಮಾಡಿದ್ದಾನೆ. ಉಳಿದ ಹಣವನ್ನ ನಮ್ಮ ಸೀನಿಯರ್ ಆಫೀಸರ್ ನವೀನ್ ಸಿಂಗ್ ಅಕೌಂಟ್‍ಗೆ ಹಾಕಿ ಅಂದಿದ್ದಾನೆ.

    ಆದರೆ ಆ ಕಡೆಯಿಂದ ದೊಡ್ಡನಾಯಕ್ ಗಾಡಿ ಬಂದ ಮೇಲೆ ಹಣ ಕಳಿಸ್ತೀವಿ ಅಂದಾಗ, ಇಲ್ಲ..ಇಲ್ಲ.. ಈಗಲೇ ಹಾಕಿ ಇಲ್ಲ ಅಂದರೆ ಗಾಡಿ ವಾಪಾಸ್ ಕರೆಸಿಕೋತೀವಿ ಅಂತ ಹೆದರಿಸಿದ್ದಾರು. ಹೀಗಾಗಿ ದೊಡ್ಡನಾಯಕ್, ಕೃಷ್ಣನಾಯಕ್ ಒಮ್ಮೆ 15 ಸಾವಿರ, ಬಳಿಕ ಐದೈದು ಸಾವಿರ ಎರಡು ಮೂರು ಸಲ ಕಳುಹಿಸಿದ್ದಾರೆ. ಹೀಗೆ ಒಟ್ಟು 35 ಸಾವಿರ ಹಣವನ್ನ ಆನ್‍ಲೈನ್ ಮೂಲಕ ಟ್ರಾನ್ಸ್‌ಫರ್ ಮಾಡಿದ್ದಾರೆ. ಆದರೆ ಕೊನೆಗೆ ಗಾಡಿ ಬರಲಿಲ್ಲ ಯಾಕೆ ಎಂದು ಫೋನ್ ಮಾಡಿದರೆ ಇನ್ನೂ ದುಡ್ಡು ಹಾಕಿ ಅಂತ ಖದೀಮರು ಕೇಳುತ್ತಿದ್ದಾರೆ. ಹೀಗಾಗಿ ತಾವು ವಂಚನೆಗೆ ಒಳಗಾಗಿರೋದು ಗೊತ್ತಾಗಿ ಹಣ ಕಳೆದುಕೊಂಡ ದೊಡ್ಡನಾಯಕ್, ಕೃಷ್ಣನಾಯಕ್ ಸದ್ಯ ಕಣ್ಣೀರು ಸುರಿಸುವಂತಾಗಿದೆ.

    ಈ ಇಬ್ಬರು ಬಳ್ಳಾರಿಯಿಂದ ಬಂದು ಮಂಡ್ಯದ ಬಳಿ ಕಬ್ಬು ಕಟಾವು ಕೆಲಸ ಮಾಡುತ್ತಾ ಒಂದಷ್ಟು ಹಣ ಕೂಡಿಟ್ಟುಕೊಂಡಿದ್ದರು. ಉಳಿದ ಹಣವನ್ನ 10 ರೂಪಾಯಿ ಬಡ್ಡಿಯಂತೆ ಸಾಲ ಪಡೆದು ಈ ಆನ್‍ಲೈನ್ ವಂಚಕರಿಗೆ ಹಾಕಿದ್ದರು. ಹೀಗಾಗಿ ಹಣ ಕಳೆದುಕೊಂಡು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಬಳಿ ಹೋದರೆ ಏನೂ ಉಪಯೋಗವಾಗಲಿಲ್ಲ. ಅಯ್ಯೋ ಹೋಗಿ ದಿನ ಈ ಥರ ಹತ್ತಾರು ಕೇಸು ಬರುತ್ತೆ. ನೀವು ಮೋಸ ಹೋಗಿದ್ದೀರಾ ಆ ಥರ ಸಿಐಎಸ್‍ಎಫ್‍ನವರು ಯಾರೂ ಇಲ್ಲಿಲ್ಲ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಹೇಳಿ ಕಳುಹಿಸಿದ್ದಾರೆ. ಆದರೆ ಪೊಲೀಸರ ನೆರವು ಸಿಗುತ್ತೇನೋ ಅಂತ ಆಸೆಗಣ್ಣಿನಿಂದ ಬಂದಿದ್ದ ಯುವಕರು ಕೊನೆಗೆ ಅಳುತ್ತಲೇ ವಾಪಾಸ್ ಹೋಗಿದ್ದಾರೆ.

    ಕಳೆದ 3 ತಿಂಗಳಲ್ಲಿ ಇದೇ ತರ ಒಂದಲ್ಲ ಎರಡಲ್ಲ ನೂರಾರು ಕೇಸ್‍ಗಳು ನಡೆದಿದ್ದು, ಹಣ ಕಳೆದುಕೊಳ್ಳುತ್ತಿರುವವರು ಕೆಐಎಎಲ್ ಪೊಲೀಸ್ ಠಾಣೆ ಬಳಿ ಬರುತ್ತಿದ್ದಾರೆ. ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಒಎಲ್‍ಎಕ್ಸ್ ವಂಚನೆ ಪ್ರಕರಣಗಳಿಗಂತಲೇ ದೊಡ್ಡದಾದ ಹೊಸ ಫೈಲ್ ಇಡಲಾಗಿದೆ. ಅದೆಲ್ಲೋ ಕೂತು ಆನ್‍ಲೈನ್ ಮೂಲಕ ನಯವಂಚಕ ಮಾತುಗಳಿಂದ ವಂಚನೆ ಮಾಡೋ ಈ ಖದೀಮರ ಕೃತ್ಯಕ್ಕೆ ಬ್ರೇಕ್ ಹಾಕಬೇಕಾದ ಪೊಲೀಸರು ಮಾತ್ರ ತಮ್ಮ ಕೈಲಾಗಲ್ಲ ಅಂತ ಕೈ ಕಟ್ಟಿ ಕುಳಿತಿದ್ದು, ಖದೀಮರ ಆಟ ಮುಂದುವರಿಯುತ್ತಲೇ ಇದೆ. ಹೀಗಾಗಿ ಆನ್‍ಲೈನ್‍ನಲ್ಲಿ ವ್ಯವಹರಿಸೋ ಮುನ್ನ ಹತ್ತು ಬಾರಿ ಯೋಚಿಸಿಬೇಕಿದೆ.

  • ಆನ್‍ಲೈನ್‍ನಲ್ಲಿ ರಾಯಲ್ ಎನ್‍ಫೀಲ್ಡ್ ಖರೀದಿಸಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ಟೆಕ್ಕಿ

    ಆನ್‍ಲೈನ್‍ನಲ್ಲಿ ರಾಯಲ್ ಎನ್‍ಫೀಲ್ಡ್ ಖರೀದಿಸಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ಟೆಕ್ಕಿ

    ಬೆಂಗಳೂರು: ಓಎಲ್‍ಎಕ್ಸ್ ನಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್ ಖರೀದಿಸಲು ಹೋಗಿ 26 ವರ್ಷದ ಟೆಕ್ಕಿಯೊಬ್ಬರು 1 ಲಕ್ಷ ರೂ. ಕಳೆದುಕೊಂಡಿದ್ದಾರೆ.

    ಓಡಿಶಾ ಮೂಲದ ಟೆಕ್ಕಿ ದಿನೇಶ್ ನಯ್ಯರ್ ಮೋಸ ಹೋಗಿದ್ದು, ಆರೋಪಿಯು ತಾನು ಭಾರತೀಯ ಸೇನೆಯವನು ಎಂದು ನಂಬಿಸಿದ್ದರಿಂದ ಸಂತ್ರಸ್ತ ವಾಹನ ಖರೀದಿಸಲು ಆಸಕ್ತಿ ತೋರಿದ್ದಾರೆ. ದಿನೇಶ್ ಅವರು ಓಎಲ್‍ಎಕ್ಸ್ ನಿಂದ ಆರೋಪಿಯ ಸಂಪರ್ಕ ಸಂಖ್ಯೆಯನ್ನು ಪಡೆಯುತ್ತಿದ್ದಂತೆ ಓಎಲ್‍ಎಕ್ಸ್ ಆತನ ಖಾತೆಯನ್ನು ಡಿಲೀಟ್ ಮಾಡಿದೆ. ಡಿಲೀಟ್ ಮಾಡಿರುವ ಕುರಿತು ಓಎಲ್‍ಎಕ್ಸ್ ಹಲವು ಬಾರಿ ಎಚ್ಚರಿಸಿದ್ದು, ಬೈಕ್ ಮಾರಾಟ ಮಾಡುವವನಿಗೆ ಮುಂಗಡ ಹಣ ಪಾವತಿಸದಂತೆ ತಿಳಿಸಿದೆ. ಆದರೂ ಲೆಕ್ಕಿಸದೆ ಟೆಕ್ಕಿ ವಾಹನ ಮಾಲೀಕನಿಗೆ ಹಣ ವರ್ಗಾಯಿಸಿದ್ದಾರೆ.

    ನಾನು ಓಎಲ್‍ಎಕ್ಸ್ ಕಳುಹಿಸಿದ ಎಚ್ಚರಿಕೆ ಸಂದೇಶಗಳನ್ನು ನೋಡಲಿಲ್ಲ. ಹೀಗಾಗಿ ಆರೋಪಿಗೆ ಹಣ ವರ್ಗಾಯಿಸಿದೆ. ನಂತರ ರಾಯಲ್ ಎನ್‍ಫೀಲ್ಡ್ ಯಾವಾಗ ಸಿಗುತ್ತದೆ ಎಂದು ಸಂದೇಶ ಕಳುಹಿಸಿದೆ. ಆದರೆ ಆರೋಪಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದೀಗ ಓಎಲ್‍ಎಕ್ಸ್ ನಿಂದ ಅವನ ಖಾತೆಯನ್ನು ಡಿಲೀಟ್ ಮಾಡಲಾಗಿದೆ ಎಂದು ದಿನೇಶ್ ದೂರಿದ್ದಾರೆ.

    ಆರೋಪಿಯು ಮರುದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ನನಗೆ ಕರೆ ಮಾಡಿ, ನಾನು ಭಾರತೀಯ ಸೇನೆಯವನು, ದೊಮ್ಮಲೂರಿನಲ್ಲಿ ವಾಸವಿದ್ದೇನೆ ಎಂದು ಎಂದು ಪರಿಚಯ ಮಾಡಿಕೊಂಡಿದ್ದ. ಬಳಿಕ ನಾನು ವಾಹನ ಮಾರಾಟ ಮಾಡುವ ಕುರಿತ ಜಾಹೀರಾತನ್ನು ಏಕೆ ಡಿಲೀಟ್ ಮಾಡಿದಿರಿ ಎಂದು ಪ್ರಶ್ನಿಸಿದೆ. ಆಗ ಯಾರೋ ವಾಹನವನ್ನು ಕೊಳ್ಳಲು ಮುಂದಾಗಿದ್ದಾರೆ, ವ್ಯವಹಾರ ಮುಗಿದಿದೆ ಹೀಗಾಗಿ ತೆಗೆದಿದ್ದೇನೆ. ಆದರೆ ನಾನು ಅವರಿಗೆ ವಾಹನ ಮಾರುವುದಿಲ್ಲ. 65 ಸಾವಿರ ರೂ.ಗೆ ನಿಮಗೇ ಕೊಡುತ್ತೇನೆ ನನಗೆ ಮುಂಗಡ ಹಣ ಕೊಡುವಂತೆ ಕೇಳಿದ ಎಂದು ದಿನೇಶ್ ಮಾಹಿತಿ ನೀಡಿದ್ದಾರೆ.

    ನಾನು 37 ಸಾವಿರ ರೂ. ಮುಂಗಡ ಹಣವನ್ನು ನೀಡಿದೆ. ಆರೋಪಿ ಒತ್ತಾಯಿಸಿದ್ದರಿಂದ ಎರಡನೇ ಬಾರಿ ಪೂರ್ತಿ ಹಣವನ್ನು ಆನ್‍ಲೈನ್ ಮೂಲಕ ಪಾವತಿಸಿದೆ. ಆದರೆ ಸೇನೆಯಿಂದ ನೋ ಅಬ್ಜಕ್ಷನ್ ಸರ್ಟಿಫಿಕೇಟ್ ಪಡೆಯಬೇಕು ಇನ್ನೂ ಹೆಚ್ಚು ಹಣ ಕಳುಹಿಸುವಂತೆ ಆರೋಪಿ ಒತ್ತಾಯಿಸಿದ. ಹೆಚ್ಚುವರಿ ಹಣವನ್ನು ಮರಳಿ ನೀಡುತ್ತೇನೆ ಎಂದು ಹೇಳಿದ. ಹೀಗಾಗಿ ನಾನು ಒಟ್ಟು 1 ಲಕ್ಷ ರೂ. ಪಾವತಿಸಿ, ನಂತರ ವಾಹನವನ್ನು ಕೇಳಲು ಕರೆ ಮಾಡಿದೆ. ಆಗ ಆರೋಪಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ವಿವರಿಸಿದ್ದಾರೆ.

  • ಆನ್‍ಲೈನ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್!

    ಆನ್‍ಲೈನ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್!

    ಬೆಳಗಾವಿ: ಆನ್‌ಲೈನ್‌ ನಲ್ಲಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗನ್ನು ಬೆಳಗಾವಿಯ ಉದ್ಯಮಬಾಗ ಠಾಣೆ ಇನ್ಸ್‌ಪೆಕ್ಟರ್‌  ಎಸ್.ಸಿ ಪಾಟೀಲ್ ನೇತೃತ್ವದ ತಂಡ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧತರನ್ನು ಧಾರವಾಡ ತಾಲೂಕಿನ ಹೊಸ ತೇಗೂರು ಗ್ರಾಮದ ಬಸವರಾಜ ಗೋಕಾವಿ, ಮಂಜುನಾಥ ದೊಡ್ಡಮನಿ, ಬಸವರಾಜ ಬೆಳವಡಿ, ಮಡಿವಾಳಪ್ಪ ಗರಗದ ಎಂದು ಗುರುತಿಸಲಾಗಿದೆ.

    ಆರೋಪಿಗಳು ಓಎಲ್‌ಎಕ್ಸ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಅಮಾಯಕರಿಗೆ ವಂಚಿಸುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಒಂದು ತಿಂಗಳ ಬಳಿಕ ವಂಚಕರ ತಂಡವನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ವಂಚನೆಗೆ ಬಳಸಿದ್ದ ಇಂಡಿಕಾ ಕಾರು 1ಲಕ್ಷ 80 ಸಾವಿರ ನಗದು ಮೊಬೈಲ್‍ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಓಎಲ್‌ಎಕ್ಸ್‌ನಲ್ಲಿ ಸ್ವಿಪ್ಟ್ ಕಾರ್ ಮಾರಾಟ ಮಾಡುವುದಾಗಿ ಹೇಳಿ ಬೆಂಗಳೂರಿನ ಹೆಬ್ಬಾಳ ಮೂಲದ ಮೊಹಮ್ಮದ್ ಶಹಬಾಜ್ ಬ್ರದರ್ಸ್‍ಗೆ ವಂಚಕರು ಮೋಸ ಮಾಡಿದ್ದರು. ಬೆಳಗಾವಿ ಮೂಲದ ಫೈಜುಲ್ಲಾ ತನ್ನ ಸ್ವಿಪ್ಟ್ ಕಾರಿನ ಫೋಟೋವನ್ನು ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಾಗಿ ಹಾಕಿದ್ದರು. ಓಎಲ್‌ಎಕ್ಸ್‌ನಲ್ಲಿ ಹಾಕಿದ್ದ ಫೈಜುಲ್ಲಾ ಅವರ ಕಾರಿನ ಫೋಟೋ ಸ್ಕ್ರೀನ್ ಶಾಟ್ ತೆಗೆದು, ಆರೋಪಿಗಳು ಬೇರೆ ಖಾತೆ ಸೃಷ್ಟಿಸಿದ್ದಾರೆ. ಬಳಿಕ ಇದನ್ನು ನೋಡಿ ಕಾರು ಖರೀದಿಸಲು ಬಂದಿದ್ದ ಮೊಹಮ್ಮದ್ ಶಹಬಾಜ್ ಬ್ರದರ್ಸ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಚೂರಿ ತೋರಿಸಿ, ಅವರ ಬಳಿಯಿದ್ದ 2 ಲಕ್ಷ 80 ಸಾವಿರ ಹಣ, ಮೊಬೈಲ್ ದೋಚಿ ಖದೀಮರ ಗ್ಯಾಂಗ್ ಪರಾರಿಯಾಗಿತ್ತು.

    ಸದ್ಯ ಆರೋಪಿಗಳನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • OLX ನಲ್ಲಿ ವಾಹನ ಖರೀದಿಸುವಾಗ ಎಚ್ಚರ..!

    OLX ನಲ್ಲಿ ವಾಹನ ಖರೀದಿಸುವಾಗ ಎಚ್ಚರ..!

    ಬೆಂಗಳೂರು: OLXನಲ್ಲಿ ವಾಹನ ಖರೀದಿಸುವಾಗ ಎಚ್ಚರವಾಗಿರಿ. ಯಾಕೆಂದರೆ ಇಲ್ಲೊಬ್ಬ ಭೂಪ ಸೈನಿಕನಂತೆ ವೇಷ ಹಾಕಿ ಜನರನ್ನು ಮೋಸ ಮಾಡುತ್ತಿದ್ದಾನೆ.

    ಸೈನಿಕ ಅಂತ ಹೇಳಿಕೊಂಡಿರುವ ವಿಕಾಸ್ ಪಟೇಲ್ ಎಂಬಾತ OLXನಲ್ಲಿ ಜನರಿಗೆ ಮೋಸ ಮಾಡಿದ್ದಾನೆ. ಬೆಂಗಳೂರಿನ ಆರ್ ಟಿಓ ಕಚೇರಿಯಲ್ಲಿ ರಿಜಿಸ್ಟರ್ ಆಗಿರುವ ಗಾಡಿಯನ್ನು OLXನಲ್ಲಿ ಸೇಲ್ ಮಾಡಿದ್ದು, ಈಗಾಗಲೇ ಸಾಕಷ್ಟು ವಾಹನಗಳನ್ನು OLXನಲ್ಲಿ ಸೇಲ್‍ಗಿಟ್ಟು ಜನರಿಗೆ ಟೋಪಿ ಹಾಕಿದ್ದಾನೆ.

    ಮೋಸ ಹೇಗೆ ಮಾಡುತ್ತಿದ್ದ;
    ಮೊದಲಿಗೆ ವಾಹನವನ್ನು OLX ನಲ್ಲಿ ಸೇಲ್‍ಗಿಡುತ್ತಾನೆ. ಇದನ್ನು ನೋಡಿದ ಗ್ರಾಹಕರು ಖರೀದಿ ಮಾಡಲು ಮುಂದಾಗುತ್ತಾರೆ. ಬಳಿಕ ನೀವು ಪೇಟಿಯಂ ಮೂಲಕ ಹಣ ಕಳುಹಿಸಿ, ನಾನು ಸೈನಿಕನಾಗಿರುವುದರಿಂದ ತುರ್ತು ಕೆಲಸದಲ್ಲಿದ್ದೇನೆ. ಟ್ರಾನ್ಸ್ ಪೋರ್ಟ್ ಮೂಲಕ ನಿಮಗೆ ವಾಹನ ಕಳಿಸುವೆ ಅಂತ ಹೇಳುತ್ತಾನೆ. ಅಷ್ಟೇ ಅಲ್ಲದೇ ಜನರನ್ನು ನಂಬಿಸಲು ತನ್ನ ನಕಲಿ ಆರ್ಮಿಕಾರ್ಡ್, ಫೋಟೋ, ಪಾನ್ ಕಾರ್ಡ್ ಜೊತೆಗೆ ಸೇನೆಯಲ್ಲಿರುವ ಫೋಟೋವನ್ನು ಕಳಿಸುತ್ತಾನೆ. ಯೋಧ ಯಾವತ್ತು ಮೋಸ ಮಾಡಲಾರ ಅಂತ ಅಂದುಕೊಂಡ ಜನ ಈತನಿಗೆ ಪೇಟಿಯಂ ಮೂಲಕ ಹಣ ಕಳಿಸುತ್ತಾರೆ. ಆದರೆ ಇತ್ತ ತನ್ನ ಖಾತೆಗೆ ಹಣ ಬರುತ್ತಿದ್ದಂತೆ ತನ್ನ ನಂಬರನ್ನು ಬದಲಾಯಿಸುತ್ತಿದ್ದನು.

    ಬೆಂಗಳೂರು ಮೂಲದವ ಅಂತ ಹೇಳಿಕೊಂಡಿರುವ ವಿಕಾಸ್, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಕೆಲಸ ಮಾಡೋದಾಗಿ ಹೇಳಿ ಜನರಿಗೆ ಮೋಸ ಮಾಡಿದ್ದಾನೆ. ಈತ ಸೇಲ್‍ಗಿಟ್ಟಿರುವ ವಾಹನ ಬೆಂಗಳೂರು ಆರ್ ಟಿಓದಲ್ಲಿ ನೋಂದಾಣಿಯಾಗಿರುವಂತದ್ದು. ಈಗಾಗಲೇ ಗುರುಮೂರ್ತಿ ಹಾಗೂ ಫೈಜಲ್ ಸೇರಿದಂತೆ ಅನೇಕರು ಈತನನ್ನು ನಂಬಿ ಲಕ್ಷಾಂತರ ದುಡ್ಡು ಕಳೆದುಕೊಂಡಿದ್ದಾರೆ. ಸದ್ಯ ನಕಲಿ ಸೈನಿಕನ ವಿರುದ್ಧ ಸಾರಿಗೆ ಇಲಾಖೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಓಎಲ್‍ಎಕ್ಸ್ ನಲ್ಲಿ ಕಾರು ಖರೀದಿಸೋ ಮುನ್ನ ಎಚ್ಚರ!

    ಓಎಲ್‍ಎಕ್ಸ್ ನಲ್ಲಿ ಕಾರು ಖರೀದಿಸೋ ಮುನ್ನ ಎಚ್ಚರ!

    ಬೆಂಗಳೂರು: ಆನ್‍ಲೈನ್ ನಲ್ಲಿ ಕಡಿಮೆ ಬೆಲೆಗೆ ಕಾರು ಸಿಗುತ್ತದೆ ಎಂದು ಬುಕ್ ಮಾಡುವ ಮೊದಲು ಎಚ್ಚರವಾಗಿರಿ. ಯಾಕಂದ್ರೆ ಕಡಿಮೆ ಬೆಲೆಗೆ ಕಾರು ಸಿಗುತ್ತದೆ ಅಂತ ಬುಕ್ ಮಾಡಿದ್ದ ವ್ಯಕ್ತಿಯೊಬ್ಬರು ಮೋಸಹೋಗಿದ್ದಾರೆ.

    ಬೆಂಗಳೂರು ನಿವಾಸಿ ನವೀನ್ ವಂಚನೆಗೆ ಒಳಗಾದ ವ್ಯಕ್ತಿ. ಇವರು ಕಳೆದ ತಿಂಗಳ 17 ರಂದು ಓಎಲ್ ಎಕ್ಸ್ ನಲ್ಲಿ ಶಾಪಿಂಗ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕಡಿಮೆ ಬೆಲೆಗೆ ಇನ್ನೋವಾ ಕಾರು ಸಿಕ್ಕಿದೆ. ಓಎಲ್ ಎಕ್ಸ್ ನಲ್ಲಿದ್ದ ನಂಬರಿಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ 2.70 ಲಕ್ಷ ರೂಪಾಯಿಗೆ ಕಾರು ನೀಡುವುದಾಗಿ ತಿಳಿಸಿದ್ದಾನೆ. ನಂತರ ಕಾರ್ ಫೋಟೋ ಕಳುಹಿಸಿ ಬ್ಯಾಂಕ್ ಅಕೌಂಟ್ ನಂಬರ್ ಕಳುಹಿಸಿ ಹಣ ಹಾಕುವಂತೆ ತಿಳಿಸಿದ್ದಾನೆ.

    ನಾನು ಆತ ಕಳುಹಿಸಿದ್ದ ಅಕೌಂಟ್ ನಂಬರಿಗೆ ಹಣ ಹಾಕಿದೆ. ಬಳಿಕ ಆತನಿಗೆ ಫೋನ್ ಮಾಡಿದೆ. ಆದರೆ ಆತನ ನಂಬರ್ ಸ್ವಿಚ್ ಆಫ್ ಬರುತ್ತಿತ್ತು. ಅಕೌಂಟ್ ನಂಬರ್ ಚೆಕ್ ಮಾಡಿದರೆ ಅಸ್ಸಾಂ ರಾಜ್ಯದ ಬ್ಯಾಂಕ್ ಖಾತೆಯೊಂದನ್ನು ತೋರಿಸುತ್ತಿದೆ ಎಂದು ನವೀನ್ ಹೇಳಿದ್ದಾರೆ.

    ಈಗ ಮೋಸ ಹೋಗಿರುವ ನವೀನ್, ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಯಾರು ಈ ರೀತಿ ಮೋಸ ಹೋಗಬೇಡಿ. ಎಷ್ಟೇ ಜಾಗೃತಿ ಮೂಡಿಸಿದರು ಆನ್ ಲೈನ್ ದೋಖಾ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನ ಪತ್ತೆಹಚ್ಚಿ ಸರಿಯಾದ ಕ್ರಮ ಜರುಗಿಸಿ ಅಂತ ನವೀನ್ ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಓಎಲ್‍ಎಕ್ಸ್ ನಲ್ಲಿ ಮೊಬೈಲ್ ಖರೀದಿ ಮಾಡುವ ಮೊದಲು ಈ ಸ್ಟೋರಿ ಓದಿ

    ಓಎಲ್‍ಎಕ್ಸ್ ನಲ್ಲಿ ಮೊಬೈಲ್ ಖರೀದಿ ಮಾಡುವ ಮೊದಲು ಈ ಸ್ಟೋರಿ ಓದಿ

    ಬೆಂಗಳೂರು: ಓಎಲ್‍ಎಕ್ಸ್ ನಲ್ಲಿ ಮೊಬೈಲ್ ಖರೀದಿ ಮಾಡುವ ಗ್ರಾಹಕರೇ ಎಚ್ಚರವಾಗಿರಿ. ಯಾಕಂದ್ರೆ ಮೊಬೈಲ್ ಕೊಡಿಸುವ ನೆಪದಲ್ಲಿ ಹಣ ಪಡೆದುಕೊಂಡು ವಂಚನೆ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಬನಶಂಕರಿ ನಿವಾಸಿ ಸತೀಶ್ ಅವರು ವಂಚನೆಗೊಳಗಾದ ಗ್ರಾಹಕ. ಆರೋಪಿ ಭಾಸ್ಕರ್ ವಂಚನೆ ಮಾಡಿ ಪರಾರಿಯಾಗಿದ್ದು, ಈ ಸಂಬಂಧ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ವಂಚಿಸಿದ್ದು ಹೇಗೆ?
    ಸತೀಶ್ ಮಗ ಐಫೋನ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದನು. ಐಫೋನ್ ಖರೀದಿ ಸಂಬಂಧ ಸತೀಶ್ ಅವರು ಓಎಲ್‍ಎಕ್ಸ್ ನಲ್ಲಿ ಹುಡುಕಾಡಿದಾಗ ಭಾಸ್ಕರ್ ಎಂಬಾತನ ಪರಿಚಯವಾಗಿದೆ. ಭಾಸ್ಕರ್ ಐಫೋನ್ ಎಕ್ಸ್ ಸ್ಕ್ರೀನ್ ಗಾತ್ರವನ್ನು ಹೊಂದಿರುವ ವಿವೋ ಫೋನ್ ಮಾರಾಟದ ಆ್ಯಡ್ ಹಾಕಿದ್ದ. ಈ ವೇಳೆ ಇಬ್ಬರಿಗೂ ಪರಿಚಯವಾಗಿದ್ದು ಸತೀಶ್ ಫೋನ್ ಖರೀದಿಸುವುದಾಗಿ ಹೇಳಿದ್ದಾರೆ.

    ಇಬ್ಬರು ಮಾತುಕತೆ ನಡೆಸಿ ಜುಲೈ 22 ರಂದು ಕತ್ರಿಗುಪ್ಪೆಯ ಯೂನಿವರ್ಸಲ್ ಶೂ ರೂಂ ಹತ್ತಿರ ಬರಲು ಸತೀಶ್ ಹೇಳಿದ್ದಾರೆ. ಮಧ್ಯಾಹ್ನ ತಾನು ಸಾಫ್ಟ್ ವೇರ್ ಎಂಜಿನಿಯರ್ ಎಂದು ಹೇಳಿ ಭಾಸ್ಕರ್ ಪರಿಚಯಿಸಿದ್ದಾನೆ. ಬಳಿಕ ವಿವೋ ಫೋನ್ ನೀಡಿದ್ದು, 15,500 ರೂ. ನೀಡಿ ಖರೀದಿಸಿದ್ದಾರೆ. ಈ ವೇಳೆ ಸತೀಶ್ ಐಫೋನ್ ಎಕ್ಸ್ ಹುಡುಕುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ಸತೀಶ್ ಮಾತನ್ನು ಕೇಳಿದ ಭಾಸ್ಕರ್ ನನ್ನ ಜೊತೆ ಐಫೋನ್ ಎಕ್ಸ್ ಇದೆ. ಇದನ್ನು ನಾನು ಮಾರಾಟ ಮಾಡುತ್ತೇನೆ ಎಂದು ತಿಳಿಸಿದ್ದಾನೆ. ಇಬ್ಬರ ನಡುವೆ ಮಾತುಕತೆ ನಡೆದು 50 ಸಾವಿರ ರೂ.ಗೆ ಇಬ್ಬರು ಒಪ್ಪಿದ್ದಾರೆ. ಚೆನ್ನಾಗಿ ಮಾತನಾಡುತ್ತಿದ್ದ ಭಾಸ್ಕರ್, ನೀವು ಈಗಲೇ ಹಣ ಕೊಟ್ಟರೆ ಒಳ್ಳೆಯದು ನನ್ನ ಮನೆ ಇಲ್ಲೇ ಹತ್ತಿರದಲ್ಲಿದೆ. 5-10 ನಿಮಿಷದಲ್ಲಿ ಮೊಬೈಲ್ ನಲ್ಲಿರುವ ಡೇಟಾವನ್ನು ಟ್ರಾನ್ಸ್ ಫರ್ ಮಾಡಿ ಬರುತ್ತೇನೆ ಎಂದಿದ್ದಾನೆ.

    ಉತ್ತಮ ವ್ಯಕ್ತಿಯಾಗಿ ಮಾತನಾಡುತ್ತಿದ್ದ ಭಾಸ್ಕರ್ ಮಾತನ್ನು ನಂಬಿದ್ದ ಸತೀಶ್ 50 ಸಾವಿರ ರೂ. ಹಣವನ್ನು ಕೊಟ್ಟಿದ್ದಾರೆ. ಈ ಹಣವನ್ನು ತೆಗೆದುಕೊಂಡು ಹೋದ ಬಳಿಕ ಸತೀಶ್ ಅಲ್ಲೇ ಕಾದಿದ್ದಾರೆ. ಆದರೆ ಸ್ಕೂಟರ್ ನಲ್ಲಿ ಬಂದಿದ್ದ ಭಾಸ್ಕರ್ ಮತ್ತೆ ಬರಲೇ ಇಲ್ಲ. ಎಷ್ಟು ಹೊತ್ತಾದರೂ ಬಾರದ ಕಾರಣ ಸತೀಶ್ ಅವರಿಗೆ ನಾನು ಮೋಸ ಹೋಗಿರುವ ವಿಚಾರ ಗೊತ್ತಾಗಿದೆ. 45 ನಿಮಿಷ ಕಾದು ಕಾದು ಕೊನೆಗೆ ಸತೀಶ್ ಪೊಲೀಸರಿಗೆ ದೂರು ನೀಡಿದ್ದಾರೆ.

    ಸತೀಶ್ ಭಾಸ್ಕರ್ ಜೊತೆ ಮಾತನಾಡುತ್ತಿರುವ ದೃಶ್ಯ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ನಿಗೂಢವಾಗಿ ಕಣ್ಮರೆಯಾದ ಟೆಕ್ಕಿಗಾಗಿ ಡ್ರೋಣ್ ಕ್ಯಾಮೆರಾ ಬಳಸಿ ಪೊಲೀಸರ ಹುಡುಕಾಟ

    ನಿಗೂಢವಾಗಿ ಕಣ್ಮರೆಯಾದ ಟೆಕ್ಕಿಗಾಗಿ ಡ್ರೋಣ್ ಕ್ಯಾಮೆರಾ ಬಳಸಿ ಪೊಲೀಸರ ಹುಡುಕಾಟ

    ಬೆಂಗಳೂರು: ಓಎಲ್‍ಎಕ್ಸ್ ಆ್ಯಪ್ ಮುಖಾಂತರ ಕಾರು ಮಾರಾಟಕ್ಕಿಟ್ಟು ಗ್ರಾಹಕರನ್ನು ಭೇಟಿಯಾಗಲು ಹೊರಟ ಟೆಕ್ಕಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ 23 ದಿನಗಳ ಕಳೆದಿದ್ದು, ಪೊಲೀಸರು ಟೆಕ್ಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಕಳೆದ ಡಿಸೆಂಬರ್ 18 ರಂದು ಕುಮಾರ್ ಅಜಿತಾಬ್(30) ಎಂಬ ಟೆಕ್ಕಿ ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿದ್ದರು. ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡಿರುವ ಪೊಲೀಸರು ಡ್ರೋಣ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಅಜಿತಾಬ್ ಮೂಲತಃ ಬಿಹಾರದವರಾಗಿದ್ದು, ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಬ್ರಿಟೀಷ್ ಟೆಲಿಕಾಂ ಕಂಪನಿಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡಿಕೊಂಡು ವೈಟ್ ಫೀಲ್ಡ್ ನ ಅಪಾರ್ಟ್ ಮೆಂಟ್‍ವೊಂದರಲ್ಲಿ ಸ್ನೇಹಿತರ ಜೊತೆ ನೆಲೆಸಿದ್ದರು. ತನ್ನ ಬಳಿಯಿದ್ದ ಸಿಯಾಜ್ ಕಾರನ್ನು ಮಾರಲು ಒಎಲ್‍ಎಕ್ಸ್ ನಲ್ಲಿ ಪ್ರಕಟಿಸಿದ್ದರು. ಕಾರನ್ನು ಬೇರೆಯವರಿಗೆ ತೋರಿಸಲೆಂದು ಡಿಸೆಂಬರ್ 18ರಂದು ತನ್ನ ಫ್ಲಾಟ್ ನಿಂದ ಹೊರಟವರು ಮತ್ತೆ ವಾಪಸ್ಸಾಗದೆ ಕಣ್ಮರೆಯಾಗಿದ್ದಾರೆ.

    ಅಜಿತಾಬ್ ಕಾರನ್ನು ಕೊಳ್ಳುವವರು ಆತನಿಗೆ ಕರೆ ಮಾಡಿದ್ದರಿಂದ ಅಂದು ತನ್ನ ಕೆಎ03 ಓಚಿ1751 ಕಾರಿನಲ್ಲಿ ಮನೆಯಿಂದ ಹೊರಹೋಗಿದ್ದರು. ಆದ್ರೆ ಅಜಿತಾಬ್ ಮನೆಗೆ ವಾಪಸ್ಸಾಗದ ಕಾರಣ ಎಲ್ಲೆಡೆ ಹುಡುಕಾಟ ನಡೆಸಿದ ಕುಟುಂಬದವರು ಈ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಜಿತಾಬ್ ಗಾಗಿ ಕರ್ನಾಟಕ ಸೇರಿದಂತೆ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದು ಯಾವುದೇ ಪ್ರಯೋಜನವಾಗಿಲ್ಲ.

    ಕೊನೆಯ ಬಾರಿ ಅಜಿತಾಬ್ ಮೊಬೈಲ್ ಸಿಗ್ನಲ್ ಆಫ್ ಆದ ಸ್ಥಳವಾದ ವರ್ತೂರು ಸಮೀಪದ ಗುಂಜೂರು ಸಮೀಪ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ. 8 ತಂಡಗಳನ್ನು ರಚಿಸಿಕೊಂಡಿದ್ದು ಒಂದು ತಂಡ ಗುಂಜೂರು ಸುತ್ತಮುತ್ತಲಿನ ಪ್ರದೇಶಗಳು, ವರ್ತೂರು ಕೆರೆ, ಕೈಕೊಂಡ್ರಹಳ್ಳಿ ಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು 7 ತಂಡಗಳು ಬೇರೆ ರೀತಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಡಿಸಿಪಿ ಅಬ್ದುಲ್ ಅಹದ್ ದೂರವಾಣಿ ಮೂಲಕ ತಿಳಿಸಿದ್ದಾರೆ.

    ಒಟ್ಟಾರೆ ಅಜಿತಾಬ್ ರನ್ನು ಕಾರು ಕೊಳ್ಳುವ ನೆಪದಲ್ಲಿ ಯಾರಾದರು ಕರೆಸಿಕೊಂಡು ಕಿಡ್ನಾಪ್ ಮಾಡಿದ್ದಾರೋ? ಇಲ್ಲವೇ ಬೇರೆ ಯಾವುದೇ ಕಾರಣದಿಂದ ಕಣ್ಮರೆಯಾಗಿದ್ದಾರೋ ಎಂಬ ಅನುಮಾನಗಳು ಕಾಡತೊಡಗಿದೆ. ತಮ್ಮ ಮಗ ಮನೆಗೆ ವಾಪಸ್ಸಾಗುವ ನಿರೀಕ್ಷೆಯಲ್ಲಿ ಅಜಿತಾಬ್ ತಂದೆ ಜೀವಿಸುತ್ತಿದ್ದು, ಪೊಲೀಸರ ಕಾರ್ಯಾಚರಣೆ ಯಾವ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.