Tag: Oldage women

  • ಚಿಕಿತ್ಸೆಗಾಗಿ ನಡುಗಡ್ಡೆಯಲ್ಲಿ ಸಿಲುಕಿರುವ ವೃದ್ಧೆ, ಗರ್ಭಿಣಿ ನರಳಾಟ

    ಚಿಕಿತ್ಸೆಗಾಗಿ ನಡುಗಡ್ಡೆಯಲ್ಲಿ ಸಿಲುಕಿರುವ ವೃದ್ಧೆ, ಗರ್ಭಿಣಿ ನರಳಾಟ

    ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಜಿಲ್ಲೆಯ ಹುಣಸಗಿ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗಿದೆ. ಈ ಗ್ರಾಮದಲ್ಲಿ ವೃದ್ಧೆ ಹಾಗೂ ಗರ್ಭಿಣಿ ಚಿಕಿತ್ಸೆಗಾಗಿ ಹೊರ ಬರಲಾಗದೆ ನರಳಾಡುತ್ತಿದ್ದಾರೆ.

    ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗಿದ್ದು, ಕೃಷ್ಣಾ ನದಿ ಪ್ರವಾಹಕ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಈ ಹಿನ್ನೆಲೆ ಗ್ರಾಮದಿಂದ ಹೊರಬಾರದ ಸ್ಥಿತಿಯಲ್ಲಿ ಅಲ್ಲಿನ ಜನರಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರೆಳಲು ಮಾರ್ಗವಿಲ್ಲದೆ ವೃದ್ಧರು ಹಾಗೂ ಗರ್ಭಿಣಿ ನರಳಾಡುತ್ತಿದ್ದಾರೆ. ನೀಲಕಂಠರಾಯನ ಗಡ್ಡಿಯ ನಿವಾಸಿ ಬಸಮ್ಮ(80) ಮತ್ತು ಗರ್ಭಿಣಿ ಹನುಮಂತಮ್ಮ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ನಮ್ಮ ಸಹಾಯಕ್ಕೆ ಯಾರೂ ಕೂಡ ಬರುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಇತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳು ಜಲಾವೃತಗೊಂಡು ಜನರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಪ್ರವಾಹ, ಇನ್ನೊಂದೆಡೆ ತಿನ್ನಲು ಸರಿಯಾಗಿ ಆಹಾರ ಸಿಗದೆ ಕಂಗಾಲಾಗಿದ್ದಾರೆ. ಹಾಗೆಯೇ ರೈತರು ತಮ್ಮ ಜಮೀನು, ಬೆಳೆಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಜನರ ಸಂಕಷ್ಟಕ್ಕೆ ನೆರವಾಗಬೇಕಿದೆ.

  • ಹುಚ್ಚುನಾಯಿ ಕಡಿತಕ್ಕೆ ವೃದ್ಧೆ ಬಲಿ,  ಇಬ್ಬರ ಸ್ಥಿತಿ ಗಂಭೀರ- ಆಸ್ಪತ್ರೆಯಲ್ಲಿ ಔಷಧಿ ಸಿಗದೇ ಜನರ ಪರದಾಟ

    ಹುಚ್ಚುನಾಯಿ ಕಡಿತಕ್ಕೆ ವೃದ್ಧೆ ಬಲಿ, ಇಬ್ಬರ ಸ್ಥಿತಿ ಗಂಭೀರ- ಆಸ್ಪತ್ರೆಯಲ್ಲಿ ಔಷಧಿ ಸಿಗದೇ ಜನರ ಪರದಾಟ

    ಕಾರವಾರ: ಅತ್ತ ಹುಚ್ಚನಾಯಿಗಳ ಕಾಟ ಇತ್ತ ನಾಯಿ ಕಚ್ಚಿದರೆ ಚಿಕಿತ್ಸೆ ಪಡೆಯಲು ಆಸ್ಪತ್ರಗೆ ಹೋದರೆ ಔಷಧಿ ಸಿಗದೆ ಪರದಾಟ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಹುಚ್ಚು ನಾಯಿ ಕಾಟ ಜಾಸ್ತಿಯಾಗಿದ್ದು ಓರ್ವ ವೃದ್ಧೆ ಇಂದು ಮೃತಪಟ್ಟರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ.

    ಮುಂಡಳ್ಳಿ ಗ್ರಾಮದ ನಿವಾಸಿ ವೃದ್ಧೆ ಜಟ್ಟಮ್ಮ ಹುಚ್ಚುನಾಯಿ ಕಡಿತದಿಂದ ಸಾವನ್ನಪ್ಪಿದ್ದಾರೆ. ವೃದ್ಧೆಯ ಮಗ ಶ್ರೀನಿವಾಸ್ ಕುಪ್ಪಯ್ಯ(60), ಪಕ್ಕದ ಮನೆಯ ರಿತೀಶ್(18) ಹಾಗೂ ಜ್ಯೋತಿ ಅವರಿಗೂ ಕೂಡ ಈ ಹುಚ್ಚುನಾಯಿ ಕಚ್ಚಿದೆ.

    ಹುಚ್ಚುನಾಯಿ ಕಡಿತಕ್ಕೆ ಒಳಗಾದ ಮೂವರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಾಗೆಯೇ ಯುವತಿಗೆ ಚಿಕ್ಕಪುಟ್ಟ ಗಾಯವಾಗಿದ್ದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

    ಭಟ್ಕಳದ ಮುಂಡಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಾಯಿಗಳ ಕಾಟ ಮಿತಿಮೀರಿದೆ. ಈ ಹಿಂದೆ ನಾಯಿಗಳ ಹಿಂಡು ಮಕ್ಕಳ ಹಾಗೂ ಮಹಿಳೆಯರ ಮೇಲೆ ದಾಳಿ ಮಾಡಿತ್ತು. ಹೀಗಾಗಿ ಸ್ಥಳೀಯರು ನಾಯಿಯನ್ನು ಹಿಡಿಯುವಂತೆ ಗ್ರಾಮಪಂಚಾಯ್ತಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಮನವಿ ಸಹ ಮಾಡಿದ್ದರು. ಆದರೆ ಈ ಬಗ್ಗೆ ಯಾವ ಅಧಿಕಾರಿಯೂ ಈವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಾಯಿಗಳನ್ನು ಸ್ಥಳಾಂತರಿಸುವ ಅಥವಾ ಸಂತಾನ ಹರಣ ಚಿಕಿತ್ಸೆ ಮಾಡಿಸುವ ಪ್ರಯತ್ನ ಸಹ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಷ್ಟೇ ಅಲ್ಲದೆ ನಾಯಿ ಕಚ್ಚಿದರೆ ಚಿಕಿತ್ಸೆ ನೀಡುವುದಿರಲಿ ಇದಕ್ಕೆ ಸೂಕ್ತ ಚುಚ್ಚುಮದ್ದು ಸಹ ತಾಲೂಕು ಆಸ್ಪತ್ರೆಯಲ್ಲಿ ಸಂಗ್ರಹವಿಲ್ಲ. ಕೇವಲ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಅಥವಾ ಉಡುಪಿಗೆ ಕೊಂಡೊಯ್ಯುವಂತೆ ಸಲಹೆ ಮಾಡುತ್ತಾರೆ ಇಲ್ಲಿನ ವೈದ್ಯರು. ಇಂದು ನಾಯಿ ಕಚ್ಚಿದ್ದರಿಂದ ವೃದ್ಧೆ ಜೊತೆ ಮಗ ಹಾಗೂ ಮತ್ತೊಬ್ಬ ಯುವಕ ಸಹ ಗಂಭೀರ ಗಾಯಗೊಂಡಿದ್ದು, ಚುಚ್ಚುಮದ್ದು ಹಾಗೂ ಚಿಕಿತ್ಸೆ ನೀಡದೇ ತಾಲೂಕು ಆಸ್ಪತ್ರೆಯ ವೈದ್ಯರು ಮಂಗಳೂರಿಗೆ ಹೋಗುವಂತೆ ಸಲಹೆ ನೀಡುವ ಮೂಲಕ ಒಂದು ಜೀವ ಬಲಿಯಾಗಲು ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಬಿರುಗಾಳಿ ಸಹಿತ ಭಾರೀ ಮಳೆ- ಮೇಲ್ಛಾವಣಿ ಕುಸಿದು ವೃದ್ಧೆ ಸಾವು!

    ಬಿರುಗಾಳಿ ಸಹಿತ ಭಾರೀ ಮಳೆ- ಮೇಲ್ಛಾವಣಿ ಕುಸಿದು ವೃದ್ಧೆ ಸಾವು!

    ಮೈಸೂರು: ಮಂಗಳವಾರ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಹನಗೂಡು ಹೋಬಳಿಯಲ್ಲಿ ನಡೆದಿದೆ.

    ಹನಗೂಡಿನಲ್ಲಿ ಭಾರೀ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಈ ವೇಳೆ ಭಾರೀ ಮಳೆಗೆ ವೃದ್ಧೆ ದೊಡ್ಡತಾಯಮ್ಮ(70) ಸಾವನ್ನಪ್ಪಿದ್ದಾರೆ. ಹನಗೂಡು ಹೋಬಳಿಯಾದ್ಯಂತ ಮಳೆರಾಯನ ಆರ್ಭಟಕ್ಕೆ ಮನೆಯ ಮೇಲ್ಛಾವಣಿ ಕುಸಿದು ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಭಾರೀ ಬಿರುಗಾಳಿಗೆ 50ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿದೆ. ಮಳೆಗೆ ತಟ್ಟೆಕೆರೆ, ಅರಸು ಕಲ್ಲಹಳ್ಳಿ, ಹುಣಸೆಗಾಲದಲ್ಲಿ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಅಲ್ಲದೆ ರಾತ್ರಿ ಸುರಿದ ಮಳೆಗೆ ಕೆಲವು ಗಂಟೆಗಳ ಕಾಲ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

  • ಕಡೇ ಕ್ಷಣದಲ್ಲಿ ಮತ ಚಲಾಯಿಸಿದ 103 ವರ್ಷದ ವೃದ್ಧೆ!

    ಕಡೇ ಕ್ಷಣದಲ್ಲಿ ಮತ ಚಲಾಯಿಸಿದ 103 ವರ್ಷದ ವೃದ್ಧೆ!

    ಹಾಸನ: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲನೇ ಹಂತದ ಮತ ಚಲಾವಣೆ ಮುಕ್ತಾಯವಾಗಿದ್ದು, ಕಡೇ ಕ್ಷಣದಲ್ಲಿ 103 ವರ್ಷದ ವಯೋವೃದ್ಧೆಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

    ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ 155, ಮಾರೇನಹಳ್ಳಿಯಲ್ಲಿ ಕಾಳಮ್ಮ(103) ವ್ಹೀಲ್ ಚೇರ್ ನಲ್ಲಿ ಬಂದು ಹಕ್ಕು ಚಲಾಯಿಸಿದ್ದಾರೆ. 103 ವರ್ಷವಾಗಿದ್ದರೂ ಖುಷಿಯಿಂದ ಬಂದು ವೃದ್ಧೆ ಮತ ಹಾಕಿದ್ದಾರೆ. ಇನ್ನೇನು ಮತಗಟ್ಟೆ ಮುಚ್ಚುವ ಸಮಯಕ್ಕೆ ಅಂದರೆ ಸಂಜೆ 6 ಗಂಟೆ ಸುಮಾರಿಗೆ ಬಂದ ವೃದ್ಧೆ ತಮ್ಮ ಮತ ಚಲಾವಣೆ ಮಾಡಿದ್ದಾರೆ.

    ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯಿಂದಲೂ ಬಿರುಸಿನ ಮತದಾನ ನಡೆದಿದೆ. ಸಂಜೆ 5 ಗಂಟೆವರೆಗೆ ಶೇ 71.14ರಷ್ಟು ಮತದಾನವಾಗಿದೆ.