Tag: old women

  • ನೆರೆಗೆ ಧರೆಗುರುಳಿದ ಮನೆಯ ಸ್ಥಿತಿ ನೋಡಿ ಹೃದಯಾಘಾತ, ವೃದ್ಧೆ ಸಾವು

    ನೆರೆಗೆ ಧರೆಗುರುಳಿದ ಮನೆಯ ಸ್ಥಿತಿ ನೋಡಿ ಹೃದಯಾಘಾತ, ವೃದ್ಧೆ ಸಾವು

    ಗದಗ: ನೆರೆಗೆ ಧರೆಗುರುಳಿದ ಮನೆಯ ಸ್ಥಿತಿ ನೋಡಿ ವೃದ್ಧೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.

    ಹಣಮವ್ವ ಲಿಂಗದಾಳ (62) ಮೃತಪಟ್ಟ ವೃದ್ಧೆ. ಮಲಪ್ರಭಾ ನದಿ ಪ್ರವಾಹ ಹಿನ್ನೆಲೆ ಬೂದಿಹಾಳ ಗ್ರಾಮ ಸಂಪೂರ್ಣ ಜಲಾವೃತವಾಗಿತ್ತು. ಈ ಕಾರಣ ವೃದ್ಧೆಯನ್ನು ಗಂಜಿ ಕೇಂದ್ರ ಶಿಫ್ಟ್ ಮಾಡಲಾಗಿತ್ತು.

    ಮಳೆ ನಿಂತು ಪ್ರವಾಹ ಕಡಿಮೆಯಾದ ಬಳಿಕ ಶನಿವಾರ ಸಂಜೆ ವೇಳೆ ವೃದ್ಧೆ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ಪ್ರವಾಹದ ಹಿನ್ನೆಲೆ ಧರೆಗುರುಳಿದ ಮನೆಯ ಸ್ಥಿತಿ ನೋಡಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ನರಗುಂದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

  • ಗಂಡನ ಫೋಟೋ ತಂದು ಕೊಡಿ: ವೃದ್ಧೆಯ ಮನವಿ

    ಗಂಡನ ಫೋಟೋ ತಂದು ಕೊಡಿ: ವೃದ್ಧೆಯ ಮನವಿ

    ಬಾಗಲಕೋಟೆ: ಮನೆಯಲ್ಲಿ ಬಿಟ್ಟು ಬಂದಿರುವ ನನ್ನ ಪತಿಯ ಫೋಟೋ ತಂದುಕೊಡಿ ಎಂದು ನಿರಾಶ್ರಿತರ ಶಿಬಿರದಲ್ಲಿರುವ ವೃದ್ಧೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಕೃಷ್ಣಾ ನದಿಯ ಪ್ರವಾಹದ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಸಂಪೂರ್ಣ ಜಲಾವೃತವಾಗಿದೆ. ಹಿರೇಪಡಸಲಗಿ ಜನರನ್ನು ಅಧಿಕಾರಗಳು ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ. ಆದರೆ ಪ್ರವಾಹದಿಂದ ಪಾರಾಗಿ ಬಂದ ವೃದ್ಧೆಯೊಬ್ಬರು ತನ್ನ ಮನೆಯಲ್ಲಿ ತೀರಿಕೊಂಡ ಪತಿಯ ಫೋಟೋವನ್ನು ಬಿಟ್ಟು ಬಂದಿದ್ದು, ಅದನ್ನು ತಂದುಕೊಡುವಂತೆ ಅಧಿಕಾರಿಗಳಲ್ಲಿ ಕೇಳಿದ್ದಾರೆ.

    ಹಿರೇಪಡಸಲಗಿ ಸಂಪೂರ್ಣ ನಡುಗದ್ದೆಯಾದ ಪರಿಣಾಮ ವೃದ್ಧೆ ಶಾಂತಾಬಾಯಿ ಗೌಡಗಾವಿಯ ಮನೆ ಜಲಾವೃತವಾಗಿದೆ. ಅದ್ದರಿಂದ ಅಧಿಕಾರಿಗಳು ವೃದ್ಧೆಯನ್ನು ಗಂಜಿ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ ಬರುವಾಗ ಮನೆಯಲ್ಲಿದ್ದ ತನ್ನ ಗಂಡ ದಿವಂಗತ ಧರ್ಮಣ್ಣ ಗೌಡಗಾವಿ ಅವರ ಫೋಟೋ ಬಿಟ್ಟು ಬಂದಿದ್ದಾರೆ. ಅದ್ದದಿಂದ ಈಗ ಕಣ್ಣೀರು ಹಾಕುತ್ತಿರುವ ವೃದ್ಧೆ ನೀವು ತಂದು ಕೊಡಿ, ಇಲ್ಲವೇ ನಾನೇ ವಾಪಸ್ ಹೋಗಿ ತರುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.

    ಈಗ ಸದ್ಯ ಹಿರೇಪಡಸಲಗಿ ಗಂಜಿ ಕೇಂದ್ರದಲ್ಲಿರುವ ಶಾಂತಾಬಾಯಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಅಧಿಕಾರಿಗಳು ವೃದ್ಧೆಯ ಗಂಡನ ಭಾವಚಿತ್ರ ತಂದುಕೊಡುವುದಾಗಿ ಹೇಳಿ ಸಂತೈಸಿದ್ದಾರೆ.

  • ಸಿಎಂ ಬರೋವರೆಗೂ ಕಚೇರಿಯಿಂದ ಹೋಗಲ್ಲ ಎಂದು ಪಟ್ಟು ಹಿಡಿದ ವೃದ್ಧೆ

    ಸಿಎಂ ಬರೋವರೆಗೂ ಕಚೇರಿಯಿಂದ ಹೋಗಲ್ಲ ಎಂದು ಪಟ್ಟು ಹಿಡಿದ ವೃದ್ಧೆ

    ದಾವಣಗೆರೆ: ಸಿಎಂ ಕುಮಾರಸ್ವಾಮಿ ಅವರು ಸ್ಥಳಕ್ಕೆ ಬಂದು ಪರಿಹಾರ ನೀಡುವವರೆಗೂ ಜಿಲ್ಲಾಧಿಕಾರಿ ಕಚೇರಿ ಬಿಟ್ಟು ಹೋಗಲ್ಲ ಎಂದು ವೃದ್ಧೆ ಪಟ್ಟು ಹಿಡಿದು ಕುಳಿತ ಘಟನೆ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

    ಹರಿಹರ ತಾಲೂಕಿನ ಬುಳ್ಳಾಪುರ ಗ್ರಾಮದ ರತ್ನಮ್ಮ ಎಂಬ ವೃದ್ಧೆ ಸಿಎಂ ಅವರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಕುಳಿತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಗೋಮಾಳ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ವೃದ್ದೆಯ ಮನೆಯನ್ನು ತೆರವು ಮಾಡಲಾಗಿತ್ತು. ದಾವಣಗೆರೆ ಜಿಲ್ಲಾಧಿಕಾರಿಗಳ ಆದೇಶದಂತೆ ಗೋಮಾಳ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಅಧಿಕಾರಿಗಳು ತೆರವು ಮಾಡಿದ್ದರು.

    ಇದರಿಂದ ಮನೆ ಕಳೆದುಕೊಂಡ ವೃದ್ಧೆ, ಹಲವು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಪರಿಹಾರಕ್ಕಾಗಿ ಅಲೆದಾಡಿದ್ದಾರೆ. ತನಗೆ ಮನೆ ಬೇಕು ಎಂದು ಕಚೇರಿಗೆ ಅಲೆದಾಡಿ ವೃದ್ಧೆ ಬೇಸತ್ತಿದ್ದರು. ಆದ್ದರಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕುಳಿತು ಸಿಎಂ ಕುಮಾರಸ್ವಾಮಿಯವರು ಬರಲಿ, ನನ್ನ ಸಮಸ್ಯೆಗೆ ಪರಿಹಾರ ನೀಡಲಿ. ಸಿಎಂ ಬರುವವರೆಗೂ ನಾನು ಹೋಗಲ್ಲ ಅಂತ ಗೋಳಾಡಿದ್ದಾರೆ. ಕೊನೆಗೆ ಕಚೇರಿಯಲ್ಲಿದ್ದ ಅಧಿಕಾರಿಗಳು ವೃದ್ಧೆಯ ಮನ ಓಲೈಸಿ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಡಾನೆ ಕಾಲ್ತುಳಿತಕ್ಕೆ ವೃದ್ಧೆ ಸಾವು..!- ಹೆದ್ದಾರಿ ತಡೆದು ಗ್ರಾಮಸ್ಥರ ಆಕ್ರೋಶ

    ಕಾಡಾನೆ ಕಾಲ್ತುಳಿತಕ್ಕೆ ವೃದ್ಧೆ ಸಾವು..!- ಹೆದ್ದಾರಿ ತಡೆದು ಗ್ರಾಮಸ್ಥರ ಆಕ್ರೋಶ

    ಚಾಮರಾಜನಗರ: ಬಹಿರ್ದೆಸೆಗೆಂದು ತೆರೆಳಿದ್ದ ವೃದ್ಧೆ ಮನೆಗೆ ಮರಳುವಾಗ ದಾರಿ ಮಧ್ಯೆ ಆನೆ ತುಳಿದು ಆಕೆ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಮಹಂತಾಳಪುರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಮಹಂತಾಳಪುರ ಗ್ರಾಮದ ನಿವಾಸಿ ಶಿವಮ್ಮ(65) ಆನೆ ದಾಳಿಗೆ ಬಲಿಯಾದ ವೃದ್ಧೆ. ಮಹಾಂತಾಳಪುರದ ಸುತ್ತಮುತ್ತ ಕಾಣಿಸಿಕೊಂಡಿದ್ದ ಕಾಡಾನೆಗಳನ್ನು ಓಡಿಸುವ ವೇಳೆ ಬಹಿರ್ದೆಸೆಗೆಂದು ತೆರೆಳಿದ್ದ ಗ್ರಾಮದ ಶಿವಮ್ಮ ಎಂಬ ವೃದ್ಧೆಯನ್ನು ಕಾಡಾನೆಗಳು ತುಳಿದು ಸಾಯಿಸಿವೆ. ಮೂರು ಕಾಡಾನೆಗಳು ಮೂರು ದಿನಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿವೆ. ಆದರೆ ಅವುಗಳನ್ನು ಸಮರ್ಪಕ ರೀತಿಯಲ್ಲಿ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದೆ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಅಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಸ್ತೆ ತಡೆ ನಡೆಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಹಿಂದೆ ಯಳಂದೂರು ಸುತ್ತಮುತ್ತ ಕಾಣಿಸಿಕೊಂಡಿದ್ದ ಈ ಕಾಡಾನೆಗಳು ನಿನ್ನೆ ಮಹಾಂತಾಳಪುರದ ಕಡೆಗೆ ಬಂದು ಇಲ್ಲಿನ ಜಾಲಿಮುಳ್ಳಿನ ಪೊದೆಯಲ್ಲಿ ಬೀಡು ಬಿಟ್ಟಿದ್ದವು. ಗ್ರಾಮಸ್ಥರ ಕೂಗಾಟ ಅರಚಾಟದಿಂದ ಗಾಬರಿಯಾಗಿದ್ದ ಈ ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ನಿನ್ನೆ ಸಂಜೆ ಓಡಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಈ ಸಂದರ್ಭದಲ್ಲಿ ಗ್ರಾಮದ ಕೆರೆಯ ಬಳಿ ವೃದ್ಧೆ ಶಿವಮ್ಮ ಮೇಲೆ ಕಾಡಾನೆಗಳು ದಾಳಿ ನಡೆಸಿ ಹೋಗಿವೆ.

    ಇಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮದ ಕೆರೆಯ ಬಳಿ ಶಿವಮ್ಮ ಅವರ ಶವ ಪತ್ತೆಯಾಗಿದೆ. ಘಟನೆ ನಡೆದು ಸಾಕಷ್ಟು ಸಮಯವಾದರೂ ಅರಣ್ಯಾಧಿಕಾರಿಗಳು ಇತ್ತ ತಲೆ ಹಾಕದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಎಚ್ಚೆತ್ತ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ವೃದ್ಧೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv