Tag: Old Students

  • ಬಣ್ಣ ಕಾಣದ ಸರ್ಕಾರಿ ಶಾಲೆಗೆ ಹೋಳಿ ಹಬ್ಬದ ರಂಗು ಹಚ್ಚಿದ ಹಳೆಯ ವಿದ್ಯಾರ್ಥಿಗಳು

    ಬಣ್ಣ ಕಾಣದ ಸರ್ಕಾರಿ ಶಾಲೆಗೆ ಹೋಳಿ ಹಬ್ಬದ ರಂಗು ಹಚ್ಚಿದ ಹಳೆಯ ವಿದ್ಯಾರ್ಥಿಗಳು

    – ವಿಭಿನ್ನ ರೀತಿಯಲ್ಲಿ ಹೋಳಿ ಆಚರಿಸಿದ ರಾಯಚೂರಿನ ಯುವಕರು
    – ಶ್ರಮದಾನ ಮೂಲಕ ಶಾಲೆಗೆ ಹೊಸ ರೂಪ, ಸಸಿ ನೆಟ್ಟು ಸಂಭ್ರಮ
    – 10 ಬ್ಯಾಚ್ ವಿದ್ಯಾರ್ಥಿಗಳಿಂದ ಶಾಲೆಯ ಅಭಿವೃದ್ಧಿಗೆ ಪಣ

    ರಾಯಚೂರು: ರಂಗಿನ ಹಬ್ಬ ಹೋಳಿ ಆಚರಿಸಲು ಈ ಬಾರಿ ಕೊರೊನಾ ತಡೆಯಾಗಿದೆ. ಕೊರೊನಾ ಎರಡನೇ ಅಲೆ ಬೀಸುತ್ತಿರುವುದರಿಂದಾಗಿ ಈ ಬಾರಿ ಸಾರ್ವಜನಿಕವಾಗಿ ಯಾರೂ ಹೋಳಿ ಆಡದಂತೆ ಮಾಡಿದೆ. ಆದರೆ ರಾಯಚೂರಿನ ಯುವಕರ ಗುಂಪೊಂದು ಸರ್ಕಾರಿ ಶಾಲೆಗೆ ಬಣ್ಣ ಹಚ್ಚುವ ಮೂಲಕ ಎಲ್ಲರಿಗೂ ಮಾದರಿಯಾಗುವಂತೆ ಹೋಳಿ ಹಬ್ಬವನ್ನು ಆಚರಿಸಿದೆ.

    ನಗರದ ಜವಾಹನಗರದ ಕಲ್ಲೂರು ಸರಾಫ್ ಶೀನಯ್ಯ ಬಾಲರಾಜ್ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಸರ್ಕಾರಿ ಅನುದಾನಿತ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಕಟ್ಟಡ ಬಣ್ಣವನ್ನು ಕಂಡು 15 ರಿಂದ 20 ವರ್ಷವೇ ಕಳೆದಿತ್ತು. ಶಾಲೆಯ ಕಟ್ಟಡ ಸಹ ಅಲ್ಲಲ್ಲಿ ಶಿಥಿಲಗೊಂಡಿತ್ತು. ಇದನ್ನು ಕಂಡ ಈ ಶಾಲೆಯ 1998ರ ಬ್ಯಾಚ್‍ನ ಹಳೆಯ ವಿದ್ಯಾರ್ಥಿ ರಂಗಾರಾವ್ ದೇಸಾಯಿ ತನ್ನ ಸಹಪಾಠಿಗಳ ಸಹಾಯದಿಂದ ಶಾಲೆಗೆ ಹೊಸ ರೂಪವನ್ನೇ ಕೊಟ್ಟಿದ್ದಾರೆ. ಹೋಳಿ ಹಬ್ಬವನ್ನು ಒಬ್ಬರಿಗೊಬ್ಬರು ಬಣ್ಣ ಎರಚಿ ಆಡುವುದಕ್ಕಿಂತ, ತಾವು ಓದಿದ ಶಾಲೆಗೆ ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ. ಈ ಮೂಲಕ ತಮ್ಮ ಬಾಲ್ಯದ ಹಳೆಯ ನೆನಪುಗಳಿಗೆ ರಂಗಿನ ಮೂಲಕ ಹೊಸ ಜೀವ ತುಂಬಿದ್ದಾರೆ.

    ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲೂ ಕಾಳಜಿ ಕಡಿಮೆಯಾಗುತ್ತಿರುವ ಹೊತ್ತಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಜೀವ ಕಳೆ ತುಂಬಿದ್ದಾರೆ. 1969 ರಲ್ಲಿ ಆರಂಭವಾದ ಈ ಶಾಲೆ 51 ವರ್ಷಗಳನ್ನ ಪೂರೈಸಿದೆ. ಇಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಉದ್ಯೋಗದಲ್ಲಿದ್ದಾರೆ. ಅಮೆರಿಕ, ಕೆನಡಾ, ಬ್ರೆಜಿಲ್, ಮಲೇಷ್ಯಾ, ಸೇರಿ ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಶಾಲೆ ಮಾತ್ರ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತ ಬಂದಿತ್ತು. ಇದನ್ನು ಗಮನಿಸಿದ ಹಳೆಯ ವಿದ್ಯಾರ್ಥಿಗಳು ಎಲ್ಲರೂ ಒಟ್ಟಾಗಿ ಸೇರಿ ಹೋಳಿ ಹಬ್ಬ ನಿಮಿತ್ತ ಶಾಲೆಗೆ ಹೊಸ ರೂಪ ನೀಡಿದ್ದಾರೆ.

    ಸಾಧ್ಯವಾಗಿದ್ದು ಹೇಗೆ?
    ಬ್ರೆಜಿಲ್‍ನಲ್ಲಿ ಕೆಲಸ ಮಾಡುತ್ತಿರುವ ಹಳೆಯ ವಿದ್ಯಾರ್ಥಿ ರಂಗಾರಾವ್ ವರ್ಕ್ ಫ್ರಂ ಹೋಂ ಹಿನ್ನೆಲೆ ರಾಯಚೂರಿನಲ್ಲೆ ಇದ್ದು ಶಾಲೆಯ ಫೋಟೋ ತೆಗೆದು ಸ್ನೇಹಿತರಿಗೆ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾಲೆಯ ಫೋಟೋವನ್ನು ಶೇರ್ ಮಾಡಿದ ಕೂಡಲೇ ಸುಮಾರು 10 ಬ್ಯಾಚ್‍ನ ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ. ಒಂದೆಡೆ ಶಾಲೆಯನ್ನು ತುಂಬಾ ವರ್ಷಗಳ ನಂತರ ನೋಡಿದ ಖುಷಿಯಿದ್ದರೆ, ಇನ್ನೊಂಡೆ ಶಾಲೆ ಕಳೆ ಹೀನವಾಗಿದ್ದಕ್ಕೆ ಬೇಸರಗೊಂಡಿದ್ದಾರೆ. ಸದ್ಯ ಶಾಲೆಗೆ ಬಣ್ಣಗಳಿಂದ ಅಲಂಕಾರ ಮಾಡಿ, ಶ್ರಮದಾನ ಮೂಲಕ ಸ್ವಚ್ಛಗೊಳಿಸಿ ಸಸಿಗಳನ್ನು ನೆಟ್ಟಿದ್ದಾರೆ. ಮುಂದೆ ಸಹ ಶಾಲೆಯ ಕುಂದುಕೊರತೆಗಳನ್ನು ಅರಿತು ಶಾಲಾ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಹಳೆಯ ವಿದ್ಯಾರ್ಥಿಗಳು ಹೇಳಿದ್ದಾರೆ. ಇದರಿಂದ ಶಾಲೆಯ ಶಿಕ್ಷಕರು ಸಹ ಸಂತೋಷ ವ್ಯಕ್ತಪಡಿಸಿದ್ದಾರೆ.

  • ಹಳೆ ವಿದ್ಯಾರ್ಥಿಗಳಿಂದ 1 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಹಳೆ ವಿದ್ಯಾರ್ಥಿಗಳಿಂದ 1 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    – ವಿದ್ಯಾರ್ಥಿಗಳ ಕಾರ್ಯಕ್ಕೆ ಗ್ರಾಮಸ್ಥರಿಂದ ಶ್ಲಾಘನೆ

    ನೆಲಮಂಗಲ: ಮಹಾಮಾರಿ ಕೊರೊನಾ ರೋಗದ ಹಿನ್ನೆಲೆ, ಹಲವೆಡೆ ಹಲವಾರು ರೀತಿ ಸಂಘ ಸಂಸ್ಥೆಗಳು ನೆರವನ್ನು ನೀಡುತ್ತಿದೆ. ಇದೇ ಹಾದಿಯಲ್ಲಿ ಗ್ರಾಮದ ಶಾಲೆಯ ಹಳೆ ವಿದ್ಯಾರ್ಥಿಗಳು ಆಹಾರ ಕಿಟ್ ವಿತರಣೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ವಿಶೇಷ ಪ್ರಯತ್ನ ಮಾಡಿ ಯಶಸ್ವಿಯಾಗಿ ಒಂದು ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

    ಹಳೆ ವಿದ್ಯಾರ್ಥಿಗಳ ಜೊತೆ ಕೈಜೋಡಿಸಿದ ಎಸ್.ಎಮ್ ಟ್ರೇಡರ್ಸ್ ಹಾಗೂ ಕುಮುದ್ವತಿ ವಿಷನ್ ಪ್ರೈ.ಲಿ ಸಹಕಾರ ಹೆಚ್ಚಿನದಾಗಿ ನೀಡಿದೆ. ಸಕ್ಕರೆ, ಸಾಂಬರ್ ಪದಾರ್ಥ, ದಿನಬಳಕೆ ವಸ್ತುಗಳ ವಿತರಣೆ ಮಾಡಿದ್ದು, ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ, ಭಟ್ಟರಹಳ್ಳಿ, ವನ್ನಸಂದ್ರ, ಗಾಂಧಿ ಗ್ರಾಮ, ದೊಡ್ಡಕರೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ವಿತರಣೆ ಮಾಡಿದ ಹಳೆ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಮಾತನಾಡಿದ ಹಳೆಯ ವಿಧ್ಯಾರ್ಥಿ ಮುನಿರಾಜು, ನಾವು ನಮ್ಮ ಗ್ರಾಮ ನಮ್ಮ ಜನರ ಕ್ಷೇಮ ಎಂಬ ನಿಟ್ಟಿನಲ್ಲಿ ಪ್ರತಿ ಮನೆ ಮನೆ ಬಾಗಿಲಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಹಾಗೂ ಹಳ್ಳಿಯ ಜನರಲ್ಲಿ ಅರಿವು ಮೂಡಿಸುವ ಹೊಸ ಪ್ರಯತ್ನ ಯಶಸ್ವಿಯಾಗಿದೆ. ಜೀವನದಲ್ಲಿ ಮನುಷ್ಯ-ಮನುಷ್ಯನ ಸ್ನೇಹ ಮುಖ್ಯವಾದ ಜೀವನ ಅವಶ್ಯಕತೆ ಎಂದು ಈ ಕಾರ್ಯಕ್ಕೆ ನಮ್ಮ ತಂಡ ಸಿದ್ಧವಾಗಿದೆ ಎಂದರು. ಈ ವೇಳೆ ಚಿಕ್ಕಹನುಮೇಗೌಡ, ಹನುಮಂತರಾಜು, ಮಹೇಶ್, ಹನುಮಯ್ಯ, ನಾಗರಾಜು, ರುದ್ರೇಶ್, ಮತ್ತಿತರ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.

  • ವಿದ್ಯೆ ಕಲಿಸಿದ ಗುರುವಿಗೆ ಕಾರ್ ಗಿಫ್ಟ್ ನೀಡಿದ ಹಳೆ ವಿದ್ಯಾರ್ಥಿಗಳು

    ವಿದ್ಯೆ ಕಲಿಸಿದ ಗುರುವಿಗೆ ಕಾರ್ ಗಿಫ್ಟ್ ನೀಡಿದ ಹಳೆ ವಿದ್ಯಾರ್ಥಿಗಳು

    ಮಂಗಳೂರು: ಶಾಲೆಯ ಹಳೆ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳಿಗೆ ಕಾರ್ ಗಿಫ್ಟ್ ನೀಡುವ ಮೂಲಕ ಗುರುಗಳೂ ಶಿಷ್ಯರನ್ನು ಮರೆಯಲಾಗದಂತೆ ಮಾಡಿದ್ದಾರೆ.

    ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರಿನ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳನ್ನು ಮರೆಯದೆ ಕಾರ್ ಗಿಫ್ಟ್ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ತಮಗೆ ಅಕ್ಷರಾಭ್ಯಾಸ ನೀಡಿದ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಬಿ.ಕೆ.ಫಕ್ರುದ್ದೀನ್ ಅವರು ನಿವೃತ್ತಗೊಂಡ ಸಂದರ್ಭದಲ್ಲಿ ಕಾರನ್ನು ಉಡುಗೊರೆ ನೀಡಿ ಬೀಳ್ಕೊಟ್ಟಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರಿಗೆ ನಿವೃತ್ತಿಯಾಗುತ್ತಿದೆ ಎಂದು ತಿಳಿದ ಹಳೆ ವಿದ್ಯಾರ್ಥಿಗಳು ಏನಾದರೂ ವಿಭಿನ್ನ ಉಡುಗೊರೆ ಕೊಡಬೇಕೆಂದು ನಿರ್ಧರಿಸಿದರು. ಅದರಂತೆ ನಿವೃತ್ತ ಶಿಕ್ಷಕರಿಗೆ ಶಾಲಾ ಮಂಡಳಿ, ಹಳೆ ವಿದ್ಯಾರ್ಥಿಗಳು, ಊರ ನಾಗರಿಕರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದರು.

    ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಫಕ್ರುದ್ದೀನ್ ಅವರಿಗೆ ಹಳೆ ವಿದ್ಯಾರ್ಥಿಗಳು ಸೇರಿ ಖರೀದಿಸಿದ ಹೊಸ ಆಲ್ಟೋ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಸನ್ಮಾನ ಹಾಗೂ ಕಾರನ್ನು ಉಡುಗೊರೆಯಾಗಿ ಸ್ವೀಕರಿಸಿದ ಫಕ್ರುದ್ದೀನ್ ಅವರು ಮಾತನಾಡಿ, ಹಳೆ ವಿದ್ಯಾರ್ಥಿಗಳು ಇನ್ನೂ ನನ್ನನ್ನು ನೆನಪು ಇಟ್ಟುಕೊಂಡಿರೋದೇ ನನಗೆ ದೊಡ್ಡ ಉಡುಗೊರೆ. ಅಲ್ಲದೆ ಈ ಶಾಲೆಯಲ್ಲಿ ಕಲಿತ ಹಾಗೂ ತನ್ನಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ದೊಡ್ಡ ಹುದ್ದೆಗಳಲ್ಲಿರುವುದು ನನಗೆ ದೊಡ್ಡ ಉಡುಗೊರೆ. ಇಂತಹ ಅಪರೂಪದ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

  • 33 ವರ್ಷದ ನಂತರ ಶಾಲೆಗೆ ಬಂದು ಭಾವುಕರಾದ ಹಳೆ ವಿದ್ಯಾರ್ಥಿಗಳು

    33 ವರ್ಷದ ನಂತರ ಶಾಲೆಗೆ ಬಂದು ಭಾವುಕರಾದ ಹಳೆ ವಿದ್ಯಾರ್ಥಿಗಳು

    ಬೆಂಗಳೂರು: ಮೂವತ್ತುಮೂರು ವರ್ಷಗಳ ನಂತರ ಶಾಲೆಯ ವಾತಾವರಣಕ್ಕೆ ಆಗಮಿಸಿದ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ನೋಡಿ ಭಾವುಕರಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರೈಲ್ವೆಗೊಲ್ಲಹಳ್ಳಿ ಬಳಿಯ ಶ್ರೀ ಬೈಲಾಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳು ಒಂದಾಗಿದ್ದಾರೆ. 1986 ಮತ್ತು 87ನೇ ಸಾಲಿನಲ್ಲಿ ಎಸ್‍ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು, ಗುರುವಂದನಾ ಎಂಬ ವೇದಿಕೆಯಿಂದ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕಿದರು.

    ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮಿಜೀಗಳು, ರಸ ಪ್ರಶ್ನೆ ಮಾಡುವ ಮೂಲಕ 33 ವರ್ಷದ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದರು. ಎಲ್ಲಾ ಹಳೆಯ ವಿದ್ಯಾರ್ಥಿಗಳು ತಮ್ಮ ಹಿಂದಿನ ಶಾಲೆಯನ್ನು ನೆನಪಿಸಿಕೊಳ್ಳುವಂತೆ, ವಿದ್ಯಾರ್ಥಿಗಳ ಜಾಗದಲ್ಲಿ ಕುಳಿತು ತಮ್ಮ ಹಳೆಯ ಶಿಕ್ಷಕರ ನೀತಿ ಮಾತುಗಳನ್ನು ಕೇಳಿದರು.

    ತಮ್ಮ ಶಾಲೆಯನ್ನು ಮದುಮಗಳಂತೆ ತಳಿರು ತೋರಣಗಳಿಂದ ಹಳೆಯ ವಿದ್ಯಾರ್ಥಿಗಳು ಸಿಂಗರಿಸಿದರು. ಇನ್ನೂ ಹಳೆಯ 55 ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ತಮ್ಮ ನೆನಪನ್ನು ಹಂಚಿಕೊಂಡರು.