Tag: old mysore region

  • ಡಿಕೆಶಿ ಬ್ಲಡ್ ಡೇಂಜರ್, ಗಂಡಸ್ತನ ಭಾಷೆ ಬಳಸುವುದು ಹಳೆ ಮೈಸೂರು ಭಾಗದಲ್ಲಿ ಸಹಜ- ಸಿ.ಟಿ ರವಿ

    ಡಿಕೆಶಿ ಬ್ಲಡ್ ಡೇಂಜರ್, ಗಂಡಸ್ತನ ಭಾಷೆ ಬಳಸುವುದು ಹಳೆ ಮೈಸೂರು ಭಾಗದಲ್ಲಿ ಸಹಜ- ಸಿ.ಟಿ ರವಿ

    ನವದೆಹಲಿ: ಗಂಡಸ್ತನ ಭಾಷೆ ಬಳಸುವುದು ಹಳೆ ಮೈಸೂರು ಭಾಗದಲ್ಲಿ ಸಹಜ, ಅದಕ್ಕೆ ತೋಳು ಏರಿಸಿಕೊಂಡು ಜಗಳಕ್ಕೆ ಹೋಗುವುದು ತಪ್ಪು, ಮಾತಿಗೆ ಮಾತಿನಲ್ಲೇ ಉತ್ತರ ಕೊಡುವುದು ಪ್ರಜಾಪ್ರಭುತ್ವದ ಸೊಗಸು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

    ನಿನ್ನೆ ರಾಮನಗರದಲ್ಲಿ ನಡೆದ ಸಚಿವ ಅಶ್ವಥ್ ನಾರಾಯಣ ಮತ್ತು ಸಂಸದ ಡಿ.ಕೆ ಸುರೇಶ್ ಜಗಳಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಅಶ್ವಥ್ ನಾರಾಯಣ ಅವರ ಗಂಡಸ್ಥನ ಪದ ಬಳಕೆಯನ್ನು ಸಮರ್ಥಿಸಿಕೊಂಡರು.

    ಸಂಸದ ಡಿ.ಕೆ ಸುರೇಶ್, ಸಚಿವರ ಮೇಲೆ ಹಲ್ಲೆಗೆ ಮುಂದಾಗಿರುವುದು ಖಂಡನೀಯ, ಗೂಂಡಾಗಿರಿ ಮೂಲಕ ಅಭಿಪ್ರಾಯ ಭೇದ ಹತ್ತಿಕ್ಕಲು ಸಾಧ್ಯವಿಲ್ಲ, ಸಂಸದರಿಗೆ ಅಭಿವೃದ್ಧಿ ಬಗ್ಗೆ ಹೇಳುವುದಕ್ಕೆ ಅವಕಾಶ ಇತ್ತು ಅದನ್ನು ಬಿಟ್ಟು ಗೂಂಡಾಗಿರಿ, ದೌರ್ಜನ್ಯ ಮೂಲಕ ಹೇಳುವುದಕ್ಕೆ ಹೊಗಿದ್ದಾರೆ ಇದು ಸರಿಯಾದ ನಡೆಯಲ್ಲ ಎಂದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ನಡುವೆ ಜಟಾಪಟಿ

    ಡಿ.ಕೆ ಸುರೇಶ್ ನಡೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸುತ್ತಾರೆ ಎಂದುಕೊಂಡಿದ್ದೆ ಆದರೆ ಸಿದ್ದರಾಮಯ್ಯ ಸುರೇಶ್ ನಡೆಯನ್ನು ಖಂಡಿಸಿಲ್ಲ. ತಮ್ಮನ ನಡೆ ಸಮರ್ಥಿಸುವ ಭರದಲ್ಲಿ ನಮ್ಮ ರಕ್ತವೇ ಬೇರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಈ ಮೂಲಕ ಡಿ.ಕೆ ಶಿವಕುಮಾರ್ ತಮ್ಮ ರಕ್ತ ಅಪಾಯಕಾರಿ ರಕ್ತ ಎಂದು ತೋರಿಸಿದ್ದಾರೆ. ಕನಕಪುರದ ರಾಜಕೀಯ ರಾಜ್ಯಕ್ಕೆ ವಿಸ್ತರಿಸಿದರೆ ಪ್ರಜಾಪ್ರಭುತ್ವ ಅಂತ್ಯವಾಗುತ್ತೆ ಎಂದು ಟೀಕಿಸಿದರು. ಇದನ್ನೂ ಓದಿ:  ಮೇಕೆದಾಟು ಪಾದಯಾತ್ರೆಗೆ ಟಫ್‍ರೂಲ್ಸ್ ಅನ್ವಯ – ಬಿಜೆಪಿಯಿಂದ ಷಡ್ಯಂತ್ರ ಎಂದ ಕಾಂಗ್ರೆಸ್‌

    ಅಶ್ವಥ್ ನಾರಾಯಣ ಡಿ.ಕೆ ಸುರೇಶ್ ಅವರನ್ನು ಪ್ರೇರೆಪಿಸಿಲ್ಲ, ಅವರನ್ನೇನು ನಿರ್ವೀರ್ಯರು ಅಂತಾ ಹೇಳಿಲ್ಲ, ಗಂಡಸ್ತನ ಎನ್ನುವುದು ಅಸಂಸದೀಯ ಪದ ಅಲ್ಲ ಅದು ಮೈಸೂರು ಭಾಗದಲ್ಲಿ ಸಹಜ ಎಂದು ಹೇಳಿದರು.ಇದನ್ನೂ ಓದಿ:  ರಾಮನಗರ ಶಾಂತಿಯ ಜಿಲ್ಲೆ, ಗೂಂಡಾ ರೀತಿಯ ವರ್ತನೆ ಮಾಡಿದ್ದು ತಪ್ಪು: ಎಚ್‍ಡಿಕೆ ಕಿಡಿ

  • ಲೋಕಸಭಾ ಚುನಾವಣೆ-ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಡಲು ಒಪ್ಪದ ಕಾಂಗ್ರೆಸ್ ಸಂಸದರು

    ಲೋಕಸಭಾ ಚುನಾವಣೆ-ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಡಲು ಒಪ್ಪದ ಕಾಂಗ್ರೆಸ್ ಸಂಸದರು

    ಬೆಂಗಳೂರು: ಹಳೇ ಮೈಸೂರು ಪ್ರಾಂತ್ಯದ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಡಲು ಕಾಂಗ್ರೆಸ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

    ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಇಂದು ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮುಖಂಡರ ಸಭೆ ನಡೆಸಲಾಯಿತು. ಈ ವೇಳೆ ಜೆಡಿಎಸ್‍ಗೆ ನಮ್ಮ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಬೇಡ ಎಂದು ಐದೂ ಜಿಲ್ಲೆಗಳ ಮುಖಂಡರು ಒತ್ತಾಯಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಈ ವಿಚಾರವನ್ನು ಹೈಕಮಾಂಡ್‍ಗೆ ತಿಳಿಸುವಂತೆ ಐದು ಕ್ಷೇತ್ರಗಳ ಸಂಸದರು ಕೆ.ಸಿ.ವೇಣುಗೋಪಾಲ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಐದೂ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ನಿಯೋಗವೊಂದನ್ನು ರಚಿಸಿ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆಗಳಿವೆ.

    ಈ ನಿಟ್ಟಿನಲ್ಲಿ ಸ್ಥಳೀಯ ಮುಖಂಡರ ಜೊತೆ ಕೆ.ಸಿ.ವೇಣುಗೋಪಾಲ್ ಅವರು ಪ್ರತ್ಯೇಕ ಕೊಠಡಿಯಲ್ಲಿ ವಿಧಾನಸಭೆ ಕ್ಷೇತ್ರಗಳ ಮುಖಂಡರನ್ನು ಕರೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಈ ಸಭೆಯಲ್ಲಿ ಖುದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರಿಗೂ ಪ್ರವೇಶ ಇರಲಿಲ್ಲದಿದ್ದುದ್ದು ಅಚ್ಚರಿಗೆ ಕಾರಣವಾಗಿತ್ತು. ಮುಖಂಡರು ಮುಕ್ತವಾಗಿ ತಮ್ಮ ಕ್ಷೇತ್ರಗಳ ಸ್ಥಿತಿ ಗತಿ, ಹಾಲಿ ಮತ್ತು ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಹೇಳಿಕೊಳ್ಳಲೆಂದು ಈ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.

    ಕೆ.ಸಿ.ವೇಣುಗೋಪಾಲ್ ಅವರು ನಾಳೆಯೂ ಸಭೆ ನಡೆಸಲಿದ್ದು ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಮತ್ತು ಗ್ರಾಮಾಂತರ ಲೋಕಸಭೆ ಕ್ಷೇತ್ರಗಳ ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಕ್ಷೇತ್ರದ ಮುಖಂಡರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಮುಕ್ತ ಚರ್ಚೆಯಾಗಲಿ ಎನ್ನುವ ಉದ್ದೇಶದಿಂದ ಸಭೆಯಿಂದ ಹೊರ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv