Tag: old man

  • ತಾನು ಹೋಗುವಾಗ ಎದ್ದು ನಿಂತು ನಮಸ್ಕಾರ ಮಾಡದ ವೃದ್ಧನಿಗೆ `ಕೈ’ ಮುಖಂಡನಿಂದ ಹಲ್ಲೆ

    ತಾನು ಹೋಗುವಾಗ ಎದ್ದು ನಿಂತು ನಮಸ್ಕಾರ ಮಾಡದ ವೃದ್ಧನಿಗೆ `ಕೈ’ ಮುಖಂಡನಿಂದ ಹಲ್ಲೆ

    ಕಲಬುರಗಿ: ತನ್ನ ಕಾರು ಬಂದಾಗ ಎದ್ದು ನಿಂತು ಮರ್ಯಾದೆ ಕೊಡದಿರುವುಕ್ಕೆ, ವೃದ್ಧನ ಮೇಲೆ ಕಾಂಗ್ರೆಸ್ ಮುಖಂಡನೋರ್ವ ಹಲ್ಲೆ ಮಾಡಿರುವ ಘಟನೆ ಕಲಬುರಗಿಯ ಹಸನಾಪುರ ಗ್ರಾಮದಲ್ಲಿ ನಡೆದಿದೆ.

    ಅದೇ ಗ್ರಾಮದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಸೀತಾರಾಂ ಸುಬೇದಾರ್ ಗ್ರಾಮದಲ್ಲಿ ಹೋಗುವಾಗ ಲಕ್ಕಪ್ಪ ಎಂಬ ವೃದ್ಧ ಎದ್ದು ನಿಂತು ನಮಸ್ಕಾರ ಮಾಡಿಲ್ಲ. ಈ ಹಿಂದೆ ನೀನು ನನ್ನಿಂದ ಹಣ ಪಡೆದಿದ್ಯಾ ಅಂತ ಕುಟುಂಬ ನೆಪ ಹೇಳಿ ಸೀತಾರಂ ಹಾಗು ಆತನ ಅಳಿಯ ಇಂದ್ರಜೀತ್ ವೃದ್ಧನ ಮೇಲೆ ದರ್ಪ ತೋರಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ತನ್ನ ಮೇಲೆ ದರ್ಪ ತೋರಿದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ದೂರು ಕೊಡುತ್ತೇನೆ ಅಂತ ಹೇಳಿದೆ. ಈ ವೇಳೆ ಅವರು ನಿನಗೆ ಯಾವ ಪಿಎಸ್‍ಐ ಪರಿಚಯ ಇದ್ರೂ ಅವನೇನೂ ಕಿತ್ಗೋಳ್ಳಕ್ಕಾಗಲ್ಲ, ನಾನು ಯಾರೂಂತ ನಿನಗೆ ಗೊತ್ತಿಲ್ಲ ಮಗನೇ ಅಂತ ಅವಾಜ್ ಹಾಕಿ ಮೂವರು ನನಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಅವರನ್ನು ತನ್ನ ಕಾರೊಳಗೆ ಹಾಕಿ ಕರೆದುಕೊಂಡು ಹೋದ್ರು ಅಂತ ಹಲ್ಲೆಗೊಳಗಾದ ವೃದ್ಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ದರ್ಪ ಮೆರೆದ ಕಾಂಗ್ರೆಸ್ ಮುಖಂಡ ಜೇವರ್ಗಿ ಶಾಸಕ ಅಜಯ್ ಸಿಂಗ್ ಮತ್ತು ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಬೆಂಬಲಿಗನಾಗಿದ್ದಾನೆ ಎನ್ನಲಾಗಿದೆ. ಸದ್ಯ ಹಲ್ಲೆಗೆ ಒಳಗಾದ ವೃದ್ಧ ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    https://www.youtube.com/watch?v=MUcR_NmTNDM

  • ಗುಡ್ಡದಿಂದ ಬಿದ್ದು ವೃದ್ಧ ಸಾವು- ಸಂಜೆಯಾದ್ರೂ ಶವ ಮುಟ್ಟದ ಗ್ರಾಮಸ್ಥರು!

    ಗುಡ್ಡದಿಂದ ಬಿದ್ದು ವೃದ್ಧ ಸಾವು- ಸಂಜೆಯಾದ್ರೂ ಶವ ಮುಟ್ಟದ ಗ್ರಾಮಸ್ಥರು!

    ಮಂಗಳೂರು: ಗುಡ್ಡದಿಂದ ಬಿದ್ದು ಸಾವನ್ನಪ್ಪಿದ ವೃದ್ಧನ ಶವವನ್ನು ಯಾರೊಬ್ಬರೂ ಮುಟ್ಟದೇ ಸಂಜೆಯಾದ್ರೂ ಅನಾಥವಾಗೇ ಬಿದ್ದಿದ್ದ ಅಮಾನವೀಯ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಜಿಲ್ಲೆಯ ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಗುಲ್ಗೋಡಿಯಲ್ಲಿ ನಡೆದಿದೆ. 80 ವರ್ಷದ ತರೀಕೆರೆ ನಿವಾಸಿ ಅಸಲಪ್ಪ ಮೃತ ವೃದ್ಧ.

    ಗ್ರಾಮದಲ್ಲಿ ದೈವದ ನರ್ತನ ಸೇವೆಯಿದ್ದು ಸೂತಕ ಆವರಿಸುವುದು ಅಂತ ಮನೆಯಲ್ಲಿಯೇ ಗ್ರಾಮಸ್ಥರು ಉಳಿದ್ರು. ಬಳಿಕ ಘಟನೆಯ ಮಾಹಿತಿ ತಿಳಿದ ಕಡಬ ಠಾಣಾ ಪೊಲೀಸರು ಶವವನ್ನು ಹೆಗಲ ಮೇಲೆ ಹೊತ್ತೊಯ್ದು ಅಂತ್ಯ ಸಂಸ್ಕಾರ ಮಾಡಿ ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.

    ಪಿಎಸ್‍ಐ ಪ್ರಕಾಶ್, ಎಎಸ್‍ಐ ರವಿ, ಹೋಮ್ ಗಾರ್ಡ್ ಸಂದೇಶ್ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದರು.

  • 2ನೇ ಮಹಡಿಯಿಂದ ಆಯತಪ್ಪಿ ಬಿದ್ದ 84ರ ವೃದ್ಧ-ಜೀವ ಉಳಿಸಿತು ಜಾಹಿರಾತು ಫಲಕ

    2ನೇ ಮಹಡಿಯಿಂದ ಆಯತಪ್ಪಿ ಬಿದ್ದ 84ರ ವೃದ್ಧ-ಜೀವ ಉಳಿಸಿತು ಜಾಹಿರಾತು ಫಲಕ

    ಬೀಜಿಂಗ್: 86 ವರ್ಷದ ವೃದ್ಧರೊಬ್ರು ಆಯತಪ್ಪಿ ಎರಡನೇ ಮಹಡಿಯಿಂದ ಬಿದ್ದು, ಕಟ್ಟಡದ ಮುಂಭಾಗಕ್ಕೆ ಹಾಕಿದ್ದ ಜಾಹಿರಾತು ಫಲಕದಿಂದಾಗಿ ಬದುಕುಳಿದಿರುವ ಘಟನೆ ಚೀನಾದ ತೈಹುವಿನ ಆ್ಯಂಕಿಂಗ್ ಸಿಟಿಯಲ್ಲಿ ನಡೆದಿದೆ.

    ವೃದ್ಧ 2ನೇ ಮಹಡಿಯಿಂದ ಬಿದ್ದ ತಕ್ಷಣ ಮುಂಭಾಗದಲ್ಲಿ ಜಾಹಿರಾತು ಫಲಕ ಮತ್ತು ಕಟ್ಟಡದ ನಡುವೆ ಸಿಲುಕಿಕೊಂಡಿದ್ದಾರೆ. ವೃದ್ಧ ವ್ಯಕ್ತಿ ಸಿಲುಕಿಕೊಂಡಿದ್ದನ್ನು ನೋಡಿದ ಸ್ಥಳೀಯರು ಮೇಲಕ್ಕೆ ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕಟ್ಟಡ ಮತ್ತು ಜಾಹಿರಾತಿನ ಬೋರ್ಡ್ ನ ಇಕ್ಕಾಟದ ಸ್ಥಳದಲ್ಲಿ ಸಿಲುಕಿದ್ದರಿಂದ ಮೇಲೆತ್ತಲು ಸಾಧ್ಯವಾಗಿಲ್ಲ.

    ವೃದ್ಧರನ್ನು ಮೇಲೆತ್ತಲು ಸಾಧ್ಯವಾಗದೇ ಇದ್ದಾಗ ಸ್ಥಳೀಯರು ಅಗ್ನಿ ಶಾಮಕದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಎತ್ತರವಾದ ಏಣಿಯ ಸಹಾಯದಿಂದ ವೃದ್ಧರನ್ನು ರಕ್ಷಿಸಿದ್ದಾರೆ. ವೃದ್ಧ ಜಾಹಿರಾರು ಬೋರ್ಡ್ ನ ಅಲ್ಯೂಮಿನಿಯಂ ನ ಸರಳುಗಳ ಮಧ್ಯೆ ಸಿಕ್ಕಿದ್ರಿಂದ ರಕ್ಷಣಾ ಕಾರ್ಯ ವಿಳಂಬವಾಯಿತು.

    ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇತ್ತೀಚೆಗೆ ಮೂರನೇ ಮಹಡಿಯಿಂದ ಮಗು ಆಯತಪ್ಪಿ ಬಿದ್ದಿತ್ತು. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ರಕ್ಷಣೆ ಮಾಡಿದ್ದರು.

  • ಹೆಣ್ಮಕ್ಕಳನ್ನು ಚುಡಾಯಿಸಿದ ವೃದ್ಧನನ್ನು ಲೈಟ್ ಕಂಬಕ್ಕೆ ಕಟ್ಟಿ ಸಾರ್ವಜನಿಕರಿಂದ ಥಳಿತ

    ಹೆಣ್ಮಕ್ಕಳನ್ನು ಚುಡಾಯಿಸಿದ ವೃದ್ಧನನ್ನು ಲೈಟ್ ಕಂಬಕ್ಕೆ ಕಟ್ಟಿ ಸಾರ್ವಜನಿಕರಿಂದ ಥಳಿತ

    ಮಂಗಳೂರು: ಹೆಣ್ಣುಮಕ್ಕಳನ್ನು ಚುಡಾಯಿಸಿದ ವೃದ್ಧನೊಬ್ಬನನ್ನು ಹಿಡಿದು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕರು ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳೂರಿನ ಬೆಂಗ್ರೇಯಲ್ಲಿ ಈ ಘಟನೆ ನಡೆದಿದ್ದು, 55 ವರ್ಷದ ವೃದ್ಧನೊಬ್ಬ ಸ್ಥಳೀಯ ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಿದ್ದನು. ವೃದ್ಧನ ಈ ಅನಾಚಾರವನ್ನು ಸಹಿಸದ ಸ್ಥಳೀಯರು ಆತನನ್ನು ಹಿಡಿದು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಬಳಿಕ ಚೆನ್ನಾಗಿ ಥಳಿಸಿದ್ದಾರೆ.

    ಹೆಣ್ಣು ಮಕ್ಕಳ ಹೆತ್ತವರು ವೃದ್ಧನಿಗೆ ಯದ್ವಾತದ್ವ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೃದ್ಧನಿಗೆ ಧರ್ಮದೇಟು ಬೀಳುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಸಖತ್ ವೈರಲ್ ಆಗಿದ್ದು, ಚಪಲ ತೀರದ ವೃದ್ಧನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ದಿನಕ್ಕೆ 1 ಕೇಜಿ ಮಣ್ಣು ತಿನ್ನೋ 99ರ ಅಜ್ಜ!

    ದಿನಕ್ಕೆ 1 ಕೇಜಿ ಮಣ್ಣು ತಿನ್ನೋ 99ರ ಅಜ್ಜ!

    ರಾಂಚಿ: ದೀರ್ಘಾಯುಷ್ಯ ಪಡೆಯಲು ಜನ ಹೆಚ್ಚಾಗಿ ನೈಸರ್ಗಿಕವಾದ ಆಹಾರವನ್ನು ಸೇವಿಸುತ್ತಾರೆ. ಆದರೆ ಜಾರ್ಖಂಡ್ ವ್ಯಕ್ತಿಯೊಬ್ಬರು ನೈಸರ್ಗಿಕ ವಸ್ತುವಾದ ಮಣ್ಣನ್ನೇ ಪ್ರತಿದಿನ ಸೇವಿಸಿ ಸುದ್ದಿಯಾಗಿದ್ದಾರೆ.

    ಕಾರು ಪಾಸ್ವಾನ್ ಅವರಿಗೆ ಈಗ 99 ವರ್ಷ. ಪಾಸ್ವಾನ್ ಪ್ರತಿದಿನ ಮಣ್ಣು ತಿನ್ನುವ ಹಿಂದೆ ನೋವಿನ ಕಥೆಯಿದೆ. ಬಾಲ್ಯದಲ್ಲಿ ಇವರಿಗೆ ಬಡತನವಿತ್ತು. ಎಷ್ಟು ಬಡತನ ಅಂದ್ರೆ ಒಂದು ಹೊತ್ತಿನ ಆಹಾರಕ್ಕೂ ಪರದಾಡಬೇಕಾದ ಪರಿಸ್ಥಿತಿ ಇತ್ತು.

    11ನೇ ವಯಸ್ಸಿನಲ್ಲಿ ಯಾವುದೇ ಆಹಾರ ಸಿಗದೇ ಇದ್ದಾಗ ಮೊದಲ ಬಾರಿ ಮಣ್ಣನ್ನು ತಿಂದಿದ್ದಾರೆ. ಮಣ್ಣಿನಲ್ಲಿ ಏನೋ ರುಚಿ ಇದೆ ಎಂದು ತಿಳಿದು ಪ್ರತಿ ದಿನ ಸ್ವಲ್ಪ ಸ್ವಲ್ಪವೇ ತಿನ್ನಲು ಆರಂಭಿಸಿದರು. ಪ್ರತಿದಿನ ತಿನ್ನುವ ಅಭ್ಯಾಸ ಆರಂಭಿಸಿದ ಪರಿಣಾಮ ಅದು ಚಟವಾಗಿ ಪರಿಣಮಿಸಿತು. ವಿಶೇಷ ಏನೆಂದರೆ ಈಗಲೂ ಇವರು ಪ್ರತಿದಿನ 1 ಕೇಜಿ ಮಣ್ಣು ತಿನ್ನುತ್ತಿದ್ದಾರೆ.

    ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಪ್ರತಿದಿನ ಮಣ್ಣು ತಿನ್ನದೇ ಇರಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ. ಮಣ್ಣು ತಿಂದರೆ ಆರೋಗ್ಯ ಹಾಳಾಗಬಹುದಲ್ಲವೇ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಆದರೆ ಅವರಿಗೆ ಆರೋಗ್ಯ ಕೈ ಕೊಟ್ಟಿಲ್ಲ. 1919ರಲ್ಲಿ ಜನಿಸಿರುವ ಇವರು ಈಗಲೂ ಗಟ್ಟಿಮುಟ್ಟಾಗಿರುವುದು ವಿಶೇಷ.

    ಮಣ್ಣು ತಿನ್ನುವ ಚಟವನ್ನು ಬಿಡುವಂತೆ ನಾವು ಸಾಕಷ್ಟು ಬಾರಿ ಹೇಳಿದರೂ ತಂದೆ ನಮ್ಮ ಮಾತನ್ನು ಕೇಳಲೇ ಇಲ್ಲ. ಕೊನೆಗೆ ಈ ಬುದ್ಧಿವಾದ ಹೇಳುವ ಪ್ರಯತ್ನವನ್ನು ನಿಲ್ಲಿಸಿದೆವು ಎಂದು ರಾಮ್ ಪಾಸ್ವಾನ್ ಅವರ ಹಿರಿಯ ಮಗ ತಿಳಿಸಿದ್ದಾರೆ.

  • ಪ್ರಾಣಿಯಂತೆ ವೃದ್ಧನನ್ನು ದರ ದರನೆ ಎಳೆದು ಬಿಸಾಡಿದ ಪೇದೆ! ವಿಡಿಯೋ ನೋಡಿ

    ಪ್ರಾಣಿಯಂತೆ ವೃದ್ಧನನ್ನು ದರ ದರನೆ ಎಳೆದು ಬಿಸಾಡಿದ ಪೇದೆ! ವಿಡಿಯೋ ನೋಡಿ

    ಚಿಕ್ಕಮಗಳೂರು: ಪೊಲೀಸ್ ಪೇದೆ ವೃದ್ಧರೊಬ್ಬರನ್ನು ದರದರನೆ ಎಳೆದು ದೇಗುಲದ ಬಳಿ ಬಿಸಾಡಿ ಖಾಕಿ ದರ್ಪ ತೋರಿರುವ ಅಮಾನವೀಯ ಘಟನೆ ಶೃಂಗೇರಿಯಲ್ಲಿ ನಡೆದಿದೆ.

    ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್. ಡಿ ದೇವೇಗೌಡ ಅವರ ಕುಟುಂಬ ಪೂರ್ಣಯಾಗ ಕಾರ್ಯಕ್ರಮ ಹಾಗೂ ಸಂಕ್ರಾಂತಿ ಹಿನ್ನಲೆ ಭಾನುವಾರ ಶಾರದಾ ಪೀಠ ಜನರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆ ವೃದ್ಧರೊಬ್ಬರು ದೇವಾಲಯಕ್ಕೆ ಆಗಮಿಸಿದ್ದಾರೆ. ಆದರೆ ಜನರು ಹೆಚ್ಚಾಗಿದ್ದ ಹಿನ್ನೆಲೆ ಮಹಾದ್ವಾರದ ಬಳಿ ಕುಳಿತು ಕೊಂಡಿದ್ದಾರೆ. ಆದರೆ ಅಲ್ಲಿಗೆ ಬಂದ ಪೊಲೀಸ್ ಪೇದೆ ವೃದ್ಧರನ್ನು ಎಳೆದು ಮಹಾದ್ವಾರದಿಂದ ಹೊರಗೆ ಬೀಸಾಡಿದ್ದಾರೆ.

    ವೃದ್ಧರನ್ನು ಎಳೆದು ಕೊಂಡು ಹೋಗುತ್ತಿರುವ ಪೊಲೀಸ್ ಪೇದೆಯ ದರ್ಪ ಕೃತ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.

    ಈ ವೇಳೆ ಪೊಲೀಸ್ ಪೇದೆ ವರ್ತನೆ ಕಂಡು ವೃದ್ಧರು ಕಂಗಾಲಾಗಿದ್ದಾರೆ. ನೂರಾರು ಜನರು ಸ್ಥಳದಲ್ಲೇ ಇದ್ದರು ಯಾರು ಪೇದೆಯ ವರ್ತನೆಯನ್ನು ತಡೆಯಲು ಯತ್ನಿಸಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸ್ ಪೇದೆಯ ವರ್ತನೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=rbzFV1X9PZQ

  • ಹರಕು ಮುರುಕು ಗುಡಿಸಲಿನಲ್ಲೇ ವಾಸ- ಕೇಳೋರಿಲ್ಲ ಅಜ್ಜನ ಗೋಳು

    ಹರಕು ಮುರುಕು ಗುಡಿಸಲಿನಲ್ಲೇ ವಾಸ- ಕೇಳೋರಿಲ್ಲ ಅಜ್ಜನ ಗೋಳು

    ಗದಗ: ಜಿಲ್ಲೆಯ ರೋಣ ಪಟ್ಟಣದಲ್ಲಿ 80ರ ಆಸುಪಾಸಿನ ವೃದ್ಧರೊಬ್ಬರು ವಾಸಿಸಲು ನೆಲೆಯಿಲ್ಲದೇ ಹರಕು ಮುರುಕು ಗುಡಿಸಲಿನಲ್ಲಿ ನಾಯಿ-ಹಂದಿಗಳ ನಡುವೆ ವಾಸವಾಗಿದ್ದಾರೆ.

    ಸೋಮಪ್ಪ ಟಪಾಲಿ ಎಂಬವರೇ ಸೂರಿಲ್ಲದೇ ಬೀದಿಗೆ ಬಂದಿರೋ ವೃದ್ಧ. ಸೋಮಪ್ಪರಿಗೆ ಬಂಧು-ಬಳಗ ಎಂದು ಯಾರೂ ಇಲ್ಲ. ಸ್ಥಳೀಯರು ಯಾರಾದ್ರೂ ಊಟ ಕೊಟ್ಟರೆ ಮಾಡುತ್ತಾರೆ. ಒಂದು ವೇಳೆ ಯಾರೂ ಊಟ ಕೊಡದೇ ಇದ್ದಲ್ಲಿ ಅಲ್ಲೇ ಒದ್ದಾಡುತ್ತಾರೆ. ಸೋಮಪ್ಪ 15 ವರ್ಷಗಳಿಂದ ಸಣ್ಣದೊಂದು ಸೂರಿಗಾಗಿ ಪುರಸಭೆ ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳ ಮನಸ್ಸು ಮಾತ್ರ ಕರಗಿಲ್ಲ.

    ಸೋಮಪ್ಪ ಅವರ ಪತ್ನಿ ಸುಮಾರು 20 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ಇರುವ ಮೂವರು ಮಕ್ಕಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದಾನೆ. ಚಳಿ, ಮಳೆ, ಬಿಸಿಲು ಎನ್ನದೇ ಸೋಮಪ್ಪ ಅಲ್ಲಿಯೇ ವಾಸವಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸೋಮಪ್ಪರಿಗೆ ಮನೆ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

  • ಬೆಂಗ್ಳೂರಲ್ಲಿ 8ರ ಬಾಲಕಿ ಮೇಲೆ 70ರ ಮುದುಕನಿಂದ ಲೈಂಗಿಕ ದೌರ್ಜನ್ಯ!

    ಬೆಂಗ್ಳೂರಲ್ಲಿ 8ರ ಬಾಲಕಿ ಮೇಲೆ 70ರ ಮುದುಕನಿಂದ ಲೈಂಗಿಕ ದೌರ್ಜನ್ಯ!

    ಬೆಂಗಳೂರು: ಎಂಟು ವರ್ಷದ ಬಾಲಕಿ ಮೇಲೆ 70 ವರ್ಷದ ಕಾಮುಕ ಮುದುಕ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆಯೊಂದು ನಗರದಲ್ಲಿ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.

    ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿದ ಕಾಮುಕ ಆಕೆಯ ಮೇಲೆ ಈ ಕೃತ್ಯ ಎಸಗಿದ್ದಾನೆ.

    ಬಾಲಕಿಯ ಪೋಷಕರು ಕೂಲಿ ಕೆಲಸಕ್ಕೆ ತೆರಳಿದ್ದರು. ಮಂಗಳವಾರ ಶಾಲೆಗೆ ಕೂಡ ರಜೆ ಇದ್ದುದರಿಂದ ಬಾಲಕಿಯೊಬ್ಬಳೆ ಮನೆಯಲ್ಲಿರುವುದನ್ನು ಗಮನಿಸಿದ್ದ ಆರೋಪಿ ಮಧ್ಯಾಹ್ನ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

    ಸಂಜೆ ಬಾಲಕಿ ಪೋಷಕರು ಮನೆಗೆ ಬಂದಾಗ ಈ ವಿಷಯ ತಿಳಿದಿದೆ. ಕೂಡಲೇ ವಿಜಯನಗರ ಪೊಲೀಸ್ ಠಾಣೆಗೆ ತೆರಳಿ ಪೋಷಕರು ದೂರು ನೀಡಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.