Tag: Old lady

  • ರಾತ್ರೋರಾತ್ರಿ ಶ್ರೀಮಂತಳಾದ ಅಜ್ಜಿ – ಅದೃಷ್ಟ ಬದಲಿಸಿದ ಸತ್ತ ಮೀನು

    ರಾತ್ರೋರಾತ್ರಿ ಶ್ರೀಮಂತಳಾದ ಅಜ್ಜಿ – ಅದೃಷ್ಟ ಬದಲಿಸಿದ ಸತ್ತ ಮೀನು

    – ಒಂದೇ ಮೀನು 3 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ

    ಕೋಲ್ಕತ್ತಾ: ನದಿಯಲ್ಲಿ ಬರೋಬ್ಬರಿ 52 ಕೆಜಿ ತೂಕದ ಸತ್ತ ಮೀನು ಹಿಡಿದ ನಂತರ ಅಜ್ಜಿಯೊಬ್ಬರು ರಾತ್ರೋರಾತ್ರಿ ಶ್ರೀಮಂತರಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ದಕ್ಷಿಣ 24 ಪರಗಣ ಜಿಲ್ಲೆಯ ಸುಂದರ್‌ಬನ್ಸ್ ಪ್ರದೇಶದ ಸಾಗರ್ ದ್ವೀಪದ ಗ್ರಾಮದ ನಿವಾಸಿ ಪುಷ್ಪಾ ಕಾರ್ ಗೆ ಭಾರೀ ತೂಕದ ಸತ್ತ ಮೀನೊಂದು ಸಿಕ್ಕಿದೆ. ಆ ಮೀನನ್ನು 3 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ಮೀನನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂಪಾಯಿಯಂತೆ ಮಾರಾಟ ಮಾಡಲಾಯಿತು. ಒಂದೇ ಮೀನನ್ನು 3 ಲಕ್ಷಕ್ಕೂ ಅಧಿಕ ಹಣಕ್ಕೆ ಮಾರಾಟ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಪುಷ್ಪಾ ಕಾರ್ ಮೀನುಗಾರಿಕೆಗೆ ಹೋಗುವಾಗ ಆಕಸ್ಮಿಕವಾಗಿ ನದಿಯಿಂದ ದೊಡ್ಡ ಮೀನು ತೇಲಿ ಬರುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಪುಷ್ಪಾ ಕಾರ್ ನದಿಗೆ ಹಾರಿದ್ದು, ಮೀನನ್ನು ನದಿಯ ತೀರಕ್ಕೆ ಎಳೆದುಕೊಂಡು ಬಂದಿದ್ದಾರೆ. ಅಜ್ಜಿಗೆ ಮೀನನ್ನು ತೀರಕ್ಕೆ ತರಲು ಸ್ವಲ್ಪ ಸಮಯ ಮತ್ತು ಶ್ರಮ ಬೇಕಾಯಿತು. ನಂತರ ಆ ಮೀನನ್ನು ಭೋಲಾ ಮೀನು ಎಂದು ಗುರುತಿಸಲಾಗಿದೆ. ಬಳಿಕ ಅದನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಸ್ಥಳೀಯರು ಸಹಾಯ ಮಾಡಿದ್ದರು.

    ಅಂದಹಾಗೆ ಆ ದೈತ್ಯ ಮೀನು ಬಹುಶಃ ಹಾದುಹೋಗುವ ಹಡಗಿಗೆ ಡಿಕ್ಕಿ ಹೊಡೆದು ಸತ್ತು ಹೋಗಿರಬಹುದು. ಒಂದು ವೇಳೆ ಮೀನು ಕೊಳೆಯಲು ಪ್ರಾರಂಭಿಸದಿದ್ದರೆ ಇನ್ನೂ ಹೆಚ್ಚಿನ ಹಣ ಪಡೆಯಬಹುದಿತ್ತು ಎಂದು ಸ್ಥಳೀಯ ಮೀನು ವ್ಯಾಪಾರಿಗಳು ಹೇಳಿದ್ದಾರೆ.

    “ಮೀನು ನನಗೆ ಜಾಕ್‍ಪಾಟ್ ಆಗಿ ಪರಿಣಮಿಸಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂ.ಗೆ ಮಾರಾಟ ಮಾಡುವ ಮೂಲಕ ನಾನು 3 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಇಂತಹ ದೈತ್ಯ ಮೀನನ್ನು ನಾನು ನೋಡಿಲ್ಲ. ಇದನ್ನು ಬಂಗಾಳಿ ಭಾಷೆಯಲ್ಲಿ ‘ಭೋಲಾ’ ಮೀನು ಎಂದು ಕರೆಯಲಾಗುತ್ತದೆ” ಎಂದು ಅಜ್ಜಿ ಹೇಳಿದ್ದಾರೆ.

    ಮೀನು ಕೊಳೆಯಲು ಪ್ರಾರಂಭಿಸಿದ್ದರಿಂದ ತಿನ್ನಲೂ ಸಾಧ್ಯವಿಲ್ಲ. ಜೊತೆಗೆ ಈ ಗಾತ್ರದ ಮೀನುಗಳ ಮಾಂಸವು ರಬ್ಬರ್ ಆಗಿರುವುದರಿಂದ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಬ್ಲಬ್ಬರ್ ಎಂದು ಕರೆಯಲ್ಪಡುವ ಮೀನಿನ ಕೊಬ್ಬನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆಗ್ನೇಯ ಏಷ್ಯಾದ ದೇಶಗಳಿಗೆ ಬ್ಲಬ್ಬರ್ ನಂತಹ ಮೀನಿನ ಅಂಗಗಳನ್ನು ರಫ್ತು ಮಾಡಲಾಗುತ್ತದೆ. ಅಲ್ಲದೇ ಈ ಮೀನುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಸಹ ಬಳಸಿಕೊಳ್ಳಲಾಗುತ್ತದೆ.

  • ಜಿಲ್ಲಾಡಳಿತದಿಂದ ಕೊರೊನಾ ಸೋಂಕಿತ ವೃದ್ಧೆಯ ಅಂತ್ಯಕ್ರಿಯೆ

    ಜಿಲ್ಲಾಡಳಿತದಿಂದ ಕೊರೊನಾ ಸೋಂಕಿತ ವೃದ್ಧೆಯ ಅಂತ್ಯಕ್ರಿಯೆ

    ಗದಗ: ಕೊರೊನಾ ವೈರಸ್‍ನಿಂದ ನಗರದಲ್ಲಿ 80 ವರ್ಷದ ವೃದ್ಧೆ ಸಾವನ್ನಪ್ಪಿದ ಹಿನ್ನೆಲೆ ಮೃತದೇಹವನ್ನ ಜಿಲ್ಲಾಡಳಿತ ನೇತೃತ್ವದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

    ಸರ್ಕಾರದ ಪ್ರೊಟೊಕಾಲ್ ಪ್ರಕಾರ ವೈರಸ್ ಸೋಂಕಿತ ವೃದ್ದೆಯನ್ನ ನಗರದ ಬೆಟಗೇರಿ ಮುಕ್ತಿಧಾಮದಲ್ಲಿ ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ವೈದ್ಯರು ಹಾಗೂ ಸಿಬ್ಬಂದಿಗಳು ಪಿ.ಪಿ.ಇ ಕಿಟ್ ಧರಿಸಿಕೊಂಡು ಗದಗ ಜಿಮ್ಸ್ ಆಸ್ಪತ್ರೆಯ ಶ್ರದ್ಧಾಂಜಲಿ ವಾಹನದ ಮೂಲಕ ಮುಕ್ತಿಧಾಮಕ್ಕೆ ಮೃತ ದೇಹದ ರವಾನೆ ಮಾಡಿ ಅಂತ್ಯಕ್ರಿಯೆ ಮಾಡಿ ಮುಗಿಸಿದರು.

    ಸೋಂಕಿತ ವ್ಯಕ್ತಿ ಮೃತಪಟ್ಟ ವೇಳೆ ಸರ್ಕಾರದ ನಿಯಮಗಳು:
    * ಸರ್ಕಾರ ವಿಪತ್ತು ನಿರ್ವಹಣಾ ನಿಯಮಗಳ ಪ್ರಕಾರ ಕುಟುಂಬಸ್ತರಿಗೆ ಮಾಹಿತಿ ನೀಡಲಾಗುತ್ತೆ.
    * ಸಂಬಂಧಿಕರು ಮೃತದೇಹದ ಬಳಿ ಬರುವುದು ಅಥವಾ ಮುಟ್ಟುವುದು ಮಾಡುವಂತಿಲ್ಲ.
    * ಪಿಪಿಇ ಕಿಟ್ ಧರಿಸಿದವರಿಂದ ಮಾತ್ರ ಮೃತದೇಹ ರವಾನೆ ಮಾಡಬೇಕು.
    * ಸಂಬಂಧಿಕರಾಗಲಿ, ಇತರೆ ಅಧಿಕಾರಿ, ಸಿಬ್ಬಂದಿಗಳಾಗಲಿ ಮೃತ ದೇಹದ ಬಳಿಗೆ ಬರಲು ಬಿಡುವುದಿಲ್ಲ.

    * ಸರ್ಕಾರದ ಪ್ರೊಟೊಕಾಲ್ ಪ್ರಕಾರ ಶವವನ್ನು ದಹನ(ಸುಡುವ) ಅಥವಾ ಹೂಳುವ ಮೂಲಕ ಅಂತ್ಯಕ್ರಿಯೆ ಮಾಡಬೇಕು.
    * ಮೃತ ವ್ಯಕ್ತಿಗೆ ಬಳಸಿದ ವಸ್ತು ಅಥವಾ ಪರಿಕರಗಳನ್ನು ಜೈವಿಕ ತ್ಯಾಜ್ಯ ನಿರ್ವಹಣಾ ಪ್ರಕಾರ ಸಂಸ್ಕರಿಸಬೇಕು.
    * ವೈರಸ್ ಸೋಂಕಿತ ಮೃತ ವ್ಯಕ್ತಿಗೆ ಬಳಸಿದ ಪರಿಕರಗಳನ್ನ ಬಯೋಮೆಡಿಕಲ್ ವೆಸ್ಟ್ ಮ್ಯಾನೆಜ್‍ಮೆಂಟ್ ನಿಯಮ ಪ್ರಕಾರ ಸಂಸ್ಕರಿಸಿ ವಿಲೆವಾರಿ ಮಾಡಬೇಕು. ಹೀಗೆ ಸರ್ಕಾರದ ಈ ಎಲ್ಲಾ ನಿಯಮಗಳ ಪ್ರಕಾರ ವೃದ್ಧೆಯ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲಾಯಿತು.

  • ರೌಡಿ ಬೇಬಿ ಹಾಡಿಗೆ ಸೊಂಟ ಬಳುಕಿಸಿದ ಅಜ್ಜಿ – ವಿಡಿಯೋ ವೈರಲ್

    ರೌಡಿ ಬೇಬಿ ಹಾಡಿಗೆ ಸೊಂಟ ಬಳುಕಿಸಿದ ಅಜ್ಜಿ – ವಿಡಿಯೋ ವೈರಲ್

    – ಅಜ್ಜಿ ಹೆಜ್ಜೆಗೆ ಕಿರಣ್ ಬೇಡಿ ಫಿದಾ

    ಪಾಂಡಿಚೇರಿ: ನಗರದಲ್ಲಿ ಪೊಂಗಲ್ ಸಂಭ್ರಮಾಚರಣೆ ವೇಳೆ ಅಜ್ಜಿಯೊಬ್ಬರು ರೌಡಿ ಬೇಬಿ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿದ್ದು, ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ವಿಡಿಯೋವನ್ನು ಪಾಂಡಿಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದವರು ಅಜ್ಜಿ ಡ್ಯಾನ್ಸ್ ಗೆ ಫಿದಾ ಆಗಿದ್ದು, ಇಳಿ ವಯಸ್ಸಿನಲ್ಲೂ ಖುಷಿಯಿಂದ ಡ್ಯಾನ್ಸ್ ಮಾಡಿದ ಅಜ್ಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

    ಪಾಂಡಿಚೇರಿಯಲ್ಲಿ ಕಿರಣ್ ಬೇಡಿ ಅವರು ನಗರದ ಪೌರ ಕಾರ್ಮಿಕರು ಹಾಗೂ ಸಚ್ಛತಾ ಕಾರ್ಪೊರೇಷನ್‍ನ ಮಹಿಳೆಯರೊಂದಿಗೆ ಪೊಂಗಲ್ ಆಚರಣೆ ಮಾಡಿದ್ದಾರೆ. ಈ ಸಂಭ್ರಮಾಚರಣೆ ವೇಳೆ ಕೆಲವು ಮಹಿಳೆಯರು ಖುಷಿಯಾಗಿ ಕುಣಿದಿದ್ದಾರೆ. ಅದರಲ್ಲೂ ವೃದ್ಧೆಯೊಬ್ಬರು ತಮಿಳಿನ ‘ಮಾರಿ-2’ ಚಿತ್ರದ ‘ರೌಡಿ ಬೇಬಿ’ ಹಾಡಿಗೆ ಸಖತ್ ಹೆಜ್ಜೆ ಹಾಕಿ ಎಲ್ಲರ ಮನಗೆದ್ದಿದ್ದಾರೆ. ವೃದ್ಧೆಯ ಡ್ಯಾನ್ಸ್ ಗೆ ಸ್ವತಃ ಕಿರಣ್ ಬೇಡಿ ಅವರೇ ಫಿದಾ ಆಗಿದ್ದಾರೆ.

    ಈ ವಿಡಿಯೋ ಸುಮಾರು 28 ಸಾವಿರಕ್ಕೂ ಅಧಿಕ ಬಾರಿ ವಿಕ್ಷಣೆಯಾಗಿದ್ದು, 3 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಶೇರ್ ಕೂಡ ಮಾಡಿಕೊಂಡಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ ಪೊಂಗಲ್ ಸಂಭ್ರಮಾಚರಣೆಯ ಬಳಿಕ ಕಿರಣ್ ಬೇಡಿಯವರು ದಾನಿಗಳ ಜೊತೆ ಸೇರಿ ಪುರುಷ ಕಾರ್ಮಿಕರಿಗೆ ಟವಲ್ ಹಾಗೂ ಮಹಿಳೆಯರಿಗೆ ಸೀರೆ ಉಡುಗೊರೆಯಾಗಿ ನೀಡಿರುವ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.

  • 67ರ ವೃದ್ಧೆಯ ಮೇಲೆ ರೇಪ್ – ಗುಪ್ತಾಂಗಕ್ಕೆ ಕಟ್ಟಿಗೆ ಹಾಕ್ದ

    67ರ ವೃದ್ಧೆಯ ಮೇಲೆ ರೇಪ್ – ಗುಪ್ತಾಂಗಕ್ಕೆ ಕಟ್ಟಿಗೆ ಹಾಕ್ದ

    ಭುವನೇಶ್ವರ: ಮನೆಗೆ ನುಗ್ಗಿ ಸಂಬಂಧಿಕನೇ 67 ವರ್ಷದ ವೃದ್ಧೆಯ ಗುಪ್ತಾಂಗಕ್ಕೆ ಕಟ್ಟಿಗೆ ಹಾಕಿ, ಅತ್ಯಾಚಾರಗೈದ ಅಮಾನುಷ ಘಟನೆ ಒಡಿಶಾದಲ್ಲಿ ನಡೆದಿದೆ.

    ಸಾಂಬಲ್‍ಪುರ ಜಿಲ್ಲೆಯ ಮಹುಲಪಾಲಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಈ ಘಟನೆ ನಡೆದಿದೆ. ವೃದ್ಧೆಯ ಸಂಬಂಧಿಕ 42 ವರ್ಷದ ವ್ಯಕ್ತಿ ಅತ್ಯಾಚಾರ ಎಸೆಗಿರುವ ಆರೋಪಿಯಾಗಿದ್ದಾನೆ. ವೃದ್ಧೆಯ ಮನೆಯ ಬಳಿಯೇ ಆರೋಪಿ ಕೂಡ ವಾಸಿಸುತ್ತಿದ್ದನು. ಗುರುವಾರದಂದು ಆರೋಪಿ ವೃದ್ಧೆಯ ಮನೆಗೆ ನುಗ್ಗಿ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಅಷೇ ಅಲ್ಲದೆ ದುಷ್ಕೃತ್ಯವೆಸೆಗಿ ವೃದ್ಧೆಯ ಗುಪ್ತಾಂಗಕ್ಕೆ ಕಟ್ಟಿಗೆ ಹಾಕಿ ವಿಕೃತಿ ಮೆರೆದಿದ್ದಾನೆ.

    ಈ ಘಟನೆ ನಡೆದ ಕೆಲ ಸಮಯದ ಬಳಿಕ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ನೋಡಿ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಸದ್ಯ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ನಾವು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತೀಚಿಗೆ ಒಡಿಶಾದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಪ್ರತಿದಿನವು ಈ ಸಂಬಂಧ ಪ್ರಕರಣ ದಾಖಲಾಗುತ್ತಿದೆ. ಸಾಂಬಲ್‍ಪುರ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ 2 ಅತ್ಯಾಚಾರ ಪ್ರಕರಣ ದಾಖಲಾಗಿದೆ. ಜುಲೈ 11 ರಂದು ಕಾಲೇಜು ವಿದ್ಯಾರ್ಥಿನಿಯನ್ನು ಶಿಕ್ಷಕನೊಬ್ಬ ಅತ್ಯಾಚಾರ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.

  • ಯಾವುದೇ ತಪ್ಪು ಮಾಡದೇ ಇದ್ದರೂ 93ರ ವೃದ್ಧೆಯನ್ನ ಬಂಧಿಸಿದ ಪೊಲೀಸರು

    ಯಾವುದೇ ತಪ್ಪು ಮಾಡದೇ ಇದ್ದರೂ 93ರ ವೃದ್ಧೆಯನ್ನ ಬಂಧಿಸಿದ ಪೊಲೀಸರು

    ಲಂಡನ್: ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಗೊತ್ತಾದರೆ ನಿಜಕ್ಕೂ ವಿಚಿತ್ರ ಎನ್ನಿಸುತ್ತೆ.

    ಹೌದು. ಯುಕೆ ನಿವಾಸಿ ಜೋಸಿ ಬಡ್ರ್ಸ್(93) ಯಾವುದೇ ಅಪರಾಧ ಮಾಡದೇ ಇದ್ದರೂ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ ಕೇಳಿ ಸ್ವತಃ ಅಲ್ಲಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಈ ವೃದ್ಧೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವಂತೆ. ಹೀಗಾಗಿ ಆಕೆಯ ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದುವ ಆಸೆ ವೃದ್ಧೆಗೆ ಇತ್ತು. ಈ ಹಿನ್ನೆಲೆಯಲ್ಲಿ ಈಗ ಮೊಮ್ಮಗಳು ಅಜ್ಜಿಯ ಕೋರಿಕೆಯನ್ನು ಇಡೇರಿಸಲು ಯುಕೆ ನ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರಿಗೆ ಮನವಿ ಮಾಡಿದ್ದು, ಪೊಲೀಸರು ವೃದ್ಧೆಯನ್ನು ಬಂಧಿಸಿದ್ದಾರೆ.

    ಅಜ್ಜಿಯನ್ನು ಪೋಲೀಸರು ಬಂಧಿಸಿ ಅವರ ಆಸೆ ತೀರಿಸಿದ್ದಕ್ಕೆ ಮೊಮ್ಮಗಳು ಪಾಮ್ ಸ್ಮಿತ್ ಟ್ವಿಟ್ಟರ್ ನಲ್ಲಿ ಖಾಕಿ ಪಡೆಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

    ಅಜ್ಜಿ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ತನ್ನ ಈ ಆಸೆ ಬಗ್ಗೆ ಸ್ಮಿತ್ ಬಳಿ ಹೇಳಿದ್ದರು. ತನ್ನ ಅಜ್ಜಿಯ ಆರೋಗ್ಯವು ಏರುಪೇರು ಆಗುತಿತ್ತು. ತನ್ನ ಜೀವನದ ಉದ್ದಕ್ಕೂ ಚೆನ್ನಾಗಿದ್ದರಿಂದ ಯಾವುದಾದರು ಕಹಿ ಅನುಭವವನ್ನು ಹೊಂದಬೇಕೆಂದು ಎಂದು ಬಯಸಿದ್ದರು. ಈ ಹಿನ್ನಲೆಯಲ್ಲಿ ವಯಸ್ಸಾದರೂ ತನ್ನನ್ನು ಬಂಧಿಸಬೇಕೆಂದು ಮನವಿ ಮಾಡಿದ್ದರು.

    ಈ ಹಿನ್ನೆಲೆಯಲ್ಲಿ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಈಗ ಆ ಅಜ್ಜಿ ಪೋಲೀಸರ ಬಂಧನದಿಂದ ಖುಷಿಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿ ಮಾತನಾಡಿ, ವೃದ್ಧೆಯ ಆಸೆಯನ್ನು ನಾವು ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅವರ ಜೀವನದಲ್ಲಿ ನೆನಪಿಟ್ಟುಕೊಳ್ಳುವ ಒಂದು ದಿನವನ್ನು ನಾವು ನೀಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

  • ನಿಖಿಲ್‍ಗೆ ಮುತ್ತು ನೀಡಿ ಶುಭ ಹಾರೈಸಿದ ವೃದ್ಧೆ

    ನಿಖಿಲ್‍ಗೆ ಮುತ್ತು ನೀಡಿ ಶುಭ ಹಾರೈಸಿದ ವೃದ್ಧೆ

    ಮಂಡ್ಯ: ಮಂಡ್ಯ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮದ್ದೂರಿನ ಕೆಸ್ತೂರು ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ನಿಖಿಲ್ ಅವರಿಗೆ ವೃದ್ಧೆಯೊಬ್ಬರು ಮುತ್ತು ನೀಡಿ ಶುಭ ಹಾರೈಸಿದ್ದಾರೆ.

    ಮದ್ದೂರಿನ ಹೆಮ್ಮನಹಳ್ಳಿ, ಕದಲೂರು, ಆತಗೂರು ಸೇರಿದಂತೆ ಹಲವು ಗ್ರಾಮದಲ್ಲಿ ಇಂದು ನಿಖಿಲ್ ಹಾಗೂ ಅವರ ಬೆಂಬಲಿಗರು ಜೊತೆಗೂಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗೆ ಕೆಸ್ತೂರು ಗ್ರಾಮದಲ್ಲಿ ಜನರೊಂದಿಗೆ ನಿಖಿಲ್ ಅವರು ಮಾತನಾಡುತ್ತಿದ್ದ ವೇಳೆ ಅವರ ಬಳಿ ಬಂದ ವೃದ್ಧೆಯೊಬ್ಬರು ಅವರ ಕಿವಿಯಲ್ಲಿ ಶುಭ ಹಾರೈಸಿ ಮುತ್ತು ಕೊಟ್ಟಿದ್ದಾರೆ.

    ಇದಕ್ಕೂ ಮೊದಲು ಹೆಮ್ಮನಹಳ್ಳಿ ಗ್ರಾಮದಿಂದ ನಿಖಿಲ್ ಪ್ರಚಾರ ಆರಂಭಿಸಿದಾಗ ಆತಗೂರು ಗ್ರಾಮದಲ್ಲಿ ಪದ್ಮಮ್ಮ, ತಮ್ಮ ಮಕ್ಕಳಿಗೆ ಕೆಲಸವಿಲ್ಲ ಎಂದು ಕಣ್ಣೀರು ಹಾಕಿದ್ದರು. ಆಗ ನಿಖಿಲ್, ಪದ್ಮಮ್ಮ ಅವರ ಕಣ್ಣೀರು ಒರೆಸಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ನಾನು ನಿಮ್ಮ ಮಗನಿದ್ದಂತೆ, ನಿಮ್ಮ ಮಕ್ಕಳಿಗೂ ಅಣ್ಣ-ತಮ್ಮನಂತೆ ನಾನಿದ್ದೇನೆ. ಉದ್ಯೋಗ ಸೃಷ್ಟಿ ಮಾಡುವ ವಿಷಯದ ಬಗ್ಗೆ ಬಹಳ ಸೂಕ್ಷ್ಮವಾಗಿ ಗಮನಿಸಿ ಮಾಡುತ್ತೇನೆ ಎಂದು ಮಹಿಳೆಯನ್ನು ಸಮಾಧಾನಪಡಿಸಿದ್ದರು. ಅಲ್ಲದೆ ಕೆಸ್ತೂರು ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ನಾನೇನಾದರೂ ಕೆಲಸ ಮಾಡಲಿಲ್ಲ ಅಂದರೆ ಕುತ್ತಿಗೆ ಪಟ್ಟಿ ಹಿಡಿದು ಕೇಳಿ ಎಂದು ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡ ಸಂದರ್ಭದಲ್ಲಿ ಹೇಳಿದ್ದಾರೆ.

  • ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನೂರಾರು ಜನರ ಜೀವ ಉಳಿಸುತ್ತಿರುವ 68ರ ವೃದ್ಧೆ!

    ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನೂರಾರು ಜನರ ಜೀವ ಉಳಿಸುತ್ತಿರುವ 68ರ ವೃದ್ಧೆ!

    ಕಾರವಾರ: ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ತೋರಿಸಲು ಬಹಳಷ್ಟು ಸಾಧಕಿಯರು ನಮ್ಮ ಮುಂದಿದ್ದಾರೆ. ಆದರೆ ಯಾವ ಪ್ರತಿಫಲಾಪೇಕ್ಷೆ ನಿರೀಕ್ಷಿಸದೇ ಜನರ ಸೇವೆ ಮಾಡುತ್ತಾ ತೆರೆಮರೆಯಲ್ಲಿರುವವರು ಕೂಡ ಅನೇಕರಿದ್ದಾರೆ. ಎಲೆಮರೆಯ ಕಾಯಿಯಾಗಿ ಸಂಪ್ರದಾಯಿಕ ನಾಟಿ ಔಷಧಿ ನೀಡುವ ಮೂಲಕ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನೂರಾರು ಜನರ ಪ್ರಾಣ ರಕ್ಷಿಸಿದ ವೃದ್ಧೆಯೊಬ್ಬರ ಯಶೋಗಾಥೆ ಇದು.

    ದೇವಿ ಗೌಡ(68) ವಿಷ ಜಂತುಗಳು ಕಚ್ಚಿದ ವ್ಯಕ್ತಿಗಳ ಗಾಯದ ಮೇಲೆ ಕೊಳವೆ ಇಟ್ಟಕೊಂಡು ತನ್ನ ಬಾಯಿಯಿಂದ ಉಸಿರನ್ನ ತೆಗೆದುಕೊಂಡು ಅವರ ದೇಹದೊಳಗೆ ಸೇರಿರುವ ವಿಷವನ್ನು ತೆಗೆದು ಇನ್ನೊಬ್ಬರ ಉಸಿರು ಉಳಿಸುತ್ತಾರೆ.

    ಇವರು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೆಟಗೇರಿ ಗ್ರಾಮದ ಹಡವು ಎಂಬ ಪುಟ್ಟಹಳ್ಳಿ ಬುಡಕಟ್ಟು ಜನಾಂಗದ ಮಹಿಳೆಯಾಗಿದ್ದು, ಯಾವುದೇ ವೈದ್ಯಕೀಯ ತರಬೇತಿ ಪಡೆದುಕೊಂಡವರಲ್ಲ. ತಲೆತಲಾಂತರದಿಂದ ಹಿರಿಯರು ಕಲಿಸಿಕೊಟ್ಟ ನಾಟಿವೈದ್ಯ ವಿದ್ಯೆಯಿಂದ ಹಲವರ ಬದುಕನ್ನು ಬೆಳಗಿಸುತ್ತಿದ್ದಾರೆ.

    ಕಾಡಿನಲ್ಲಿ ಸಿಗುವ ವಿವಿಧ ಜಾತಿಯ ಬೇರುಗಳನ್ನು ತೆಗೆದುಕೊಂಡು ಬಂದು ಅದರಿಂದ ಔಷಧಿ ತಯಾರಿಸಿ ಹಾವು, ನಾಯಿ ಕಡಿದವರಿಗೆ ಹಚ್ಚಿ ಗುಣಮುಖರನ್ನಾಗಿಸುತ್ತಿದ್ದಾರೆ. ನರ ವ್ಯಾಧಿ ಇರುವ ಮಕ್ಕಳಿಗೆ, ಸಂತಾನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಗಿಡಮೂಲಿಕೆ ಔಷಧಿಯನ್ನ ನೀಡೋ ಮೂಲಕ ಅವರ ಕೊರಗನ್ನ ದೂರ ಮಾಡುತ್ತಾ ಬಂದಿದ್ದಾರೆ. ಈ ಕಾಯಕವನ್ನ ಯಾವುದೇ ಪ್ರತಿಫಲವಿಲ್ಲದೇ ಮಾಡುತಿದ್ದು ನೂರಾರು ಜನರ ಪ್ರಾಣ ಉಳಿಸಿದ್ದಾರೆ.

    ಇವರು ಚಿಕಿತ್ಸೆ ನೀಡುವ ಪದ್ಧತಿಯೂ ವಿಶಿಷ್ಟವಾಗಿದ್ದು ಕೊಳವೆ ಮೂಲಕ ವಿಷಜಂತುಗಳು ಕಚ್ಚಿದ ಜಾಗದಿಂದ ರಕ್ತ ಸಮೇತ ವಿಷವನ್ನು ತನ್ನ ಬಾಯಿ ಮೂಲಕ ಹೊರತೆಗೆಯುತ್ತಾರೆ. ಸ್ವಲ್ಪ ಯಾಮಾರಿದರೂ ಇವರ ಜೀವಕ್ಕೆ ತೊಂದರೆ. ಆದರೆ ಕಳೆದ 35 ವರ್ಷಗಳಿಂದ ನೂರಾರು ಜನರಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ. ಇದಕ್ಕಾಗಿ ಹಣ ಪಡೆಯದಿದ್ದರೂ ಇವರ ಬಡತನ ನೋಡಿ ಜನ ಹಣ ನೀಡುತ್ತಾರೆ. ಆದರೆ ಇದೊಂದು ಸೇವೆ ಎಂದು ಮಾಡಿಕೊಂಡು ಬರುತ್ತಿರುವ ಇವರು ಯಾರ ಮುಂದೆಯೂ ಕೈಚಾಚದೇ, ಹೆಸರಿಗಾಗಿ ನೋಡದೇ ಸೇವೆ ನೀಡುತಿದ್ದು ಇಂತವರನ್ನು ಸರ್ಕಾರ ಗುರುತಿಸಬೇಕೆಂಬುದು ಸ್ಥಳೀಯ ಜನರ ಹಂಬಲ.

    ಅನಕ್ಷರಸ್ತೆಯಾದರೂ ಪಾರಂಪರಿಕ ಔಷಧಿ ನೀಡವ ಮೂಲಕ ಸಂಪ್ರದಾಯಿಕ ಪದ್ಧತಿಯನ್ನು ಉಳಿಸಿ ಬೆಳಸಿಕೊಂಡು ಬರುತ್ತಿದ್ದಾರೆ. ತಮ್ಮ ವಿದ್ಯೆಯನ್ನು ಧಾರೆ ಎರೆಯಲು ಸದಾ ಸಿದ್ಧರಿರುವ ಇವರ ಸೇವೆ ನಿಜವಾಗಿಯೂ ಸ್ಮರಿಸುವಂತದ್ದು. ಮಹಿಳೆಯರಿಗಾಗಿ ಮಹಿಳಾ ದಿನಾಚರಣೆ ಆಚರಿಸುವ ನಾವು ತೆರೆ ಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಂತವರನ್ನು ಸ್ಮರಿಸಬೇಕಿದೆ.