Tag: Old Age home

  • Bengaluru | ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆ

    Bengaluru | ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆ

    ಬೆಂಗಳೂರು: ವೃದ್ಧಾಶ್ರಮಕ್ಕೆ (Old Age Home) ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru) ಜೆಪಿ ನಗರದಲ್ಲಿ (JP Nagar) ನಡೆದಿದೆ.

    ನಗರದ ಎಂಟನೇ ಹಂತದ ವೃದ್ಧಾಶ್ರಮದಲ್ಲಿ ಘಟನೆ ನಡೆದಿದೆ. ಕೃಷ್ಣಮೂರ್ತಿ (81), ರಾಧ (74) ಆತ್ಮಹತ್ಯೆಗೆ ಶರಣಾದ ದಂಪತಿ. ಮನೆಯಲ್ಲಿ ಸೊಸೆ ಮಾಡಿದ ಅಡುಗೆ ಚೆನ್ನಾಗಿರಲ್ಲ ಎಂಬ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆ ವಯಸ್ಸಾದ ತಂದೆ ತಾಯಿಯನ್ನು ಮಗ ಕಳೆದ ತಿಂಗಳು ವೃದ್ಧಾಶ್ರಮಕ್ಕೆ ಸೇರಿಸಿದ್ದ. ಇದರಿಂದ ನೊಂದ ವೃದ್ಧ ದಂಪತಿ ಸೋಮವಾರ ರಾತ್ರಿ ವೃದ್ಧಾಶ್ರಮದಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಮಾವು ಬೆಳೆಗೆ ಬೆಂಬಲ ಬೆಲೆ ಕೊಡಿಸಿದ್ದು ಕುಮಾರಣ್ಣ, ಡಿಕೆ ಬ್ರದರ್ಸ್ ಏನ್ಮಾಡ್ತಿದ್ದಾರೆ: ನಿಖಿಲ್‌ ಕಿಡಿ

    ಮಂಗಳವಾರ ಬೆಳಗಿನ ಜಾವ ದಂಪತಿ ಬಾಗಿಲು ತೆಗೆದಿರಲಿಲ್ಲ. ಅನುಮಾನಗೊಂಡ ಆಶ್ರಮದವರು ಬಾಗಿಲು ತೆಗೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ | ಕುಲುವಿನಲ್ಲಿ ಮೇಘಸ್ಫೋಟದಿಂದ ಭಾರೀ ಪ್ರವಾಹ – ಉಕ್ಕಿ ಹರಿದ ಪಾರ್ವತಿ ನದಿ

  • ಸಿಮ್ ಕಾರ್ಡ್ ಇಲ್ಲದ ಮೊಬೈಲ್, ಖಾಲಿ ಹಾಳೆ ಕೈಗಿತ್ತು ಹೆತ್ತಮ್ಮನನ್ನೇ ಬಿಟ್ಟು ಹೋದ

    ಸಿಮ್ ಕಾರ್ಡ್ ಇಲ್ಲದ ಮೊಬೈಲ್, ಖಾಲಿ ಹಾಳೆ ಕೈಗಿತ್ತು ಹೆತ್ತಮ್ಮನನ್ನೇ ಬಿಟ್ಟು ಹೋದ

    ಕೊಪ್ಪಳ: ತಾಯಿಯೇ ದೇವರು ಎನ್ನುತ್ತಾರೆ. ಆದರೆ, ಇಲ್ಲೊಬ್ಬ ಪುತ್ರ ಎರಡು ದಿನದ ಹಿಂದೆ ತನ್ನ ಹೆತ್ತಮ್ಮನನ್ನೇ ಒಂಟಿಯಾಗಿ ಕೊಪ್ಪಳದಲ್ಲಿರುವ ದೇವಸ್ಥಾನದ ಬಳಿ ಬಿಟ್ಟ ತೆರಳಿದ್ದಾನೆ.

    ಅಜ್ಜಿಯನ್ನು ನೋಡಿದ ಸ್ಥಳೀಯರು ಹಿರಿಯ ನಾಗರಿಕರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಪ್ರಸ್ತುತ ಅವರು ಅಜ್ಜಿಯನ್ನು ರಕ್ಷಣೆ ಮಾಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ವೃದ್ಧೆ ತನ್ನ ಹೆಸರು ಖಾಸೀಂ ಬಿ, ತನ್ನದು ಉಜ್ಜಯಿನಿ ಗ್ರಾಮ ಎಂದು ಹೇಳಿಕೊಂಡಿದ್ದಾರೆ. ಇತರ ವಿವರಗಳನ್ನು ಸರಿಯಾಗಿ ನೀಡಿಲ್ಲ. ಅಜ್ಜಿಯಿಂದ ಹೆಚ್ಚಿನ ವಿವರಗಳಾಗಲಿ ಅಥವಾ ದಾಖಲೆಗಳಾಗಲಿ ದೊರಕಿಲ್ಲ. ಆದರೆ ವೃದ್ಧೆಗೆ ಸುಮಾರು 80 ವರ್ಷ ವಯಸ್ಸಾಗಿದೆ ಎಂದು ಅಧಕಾರಿಗಳು ಅಂದಾಜಿಸಿದ್ದಾರೆ. ಇದನ್ನೂ ಓದಿ: ಪಾಕ್‍ನಲ್ಲಿದ್ದ 1,200 ವರ್ಷಗಳಷ್ಟು ಹಳೆ ಹಿಂದೂ ದೇವಾಲಯ ಮರುಸ್ಥಾಪಿಸಲು ಅನುಮತಿ 

    ನಡೆದಿದ್ದೇನು?
    ಎರಡು ದಿನದ ಹಿಂದೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮಗನೊಡನೆ ಖಾಸೀಂ ಬಿ ಬಂದಿದ್ದಾರೆ. ನಂತರ ಆಕೆಯ ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ಕೈಗಿತ್ತು ತೆರಳಿದ್ದಾನೆ.

    ರಾತ್ರಿಯಾದರೂ ಅಜ್ಜಿ ಬಳಿ ಯಾರೂ ಬರದಿರುವುದನ್ನು ಗಮನಿಸಿದ ಸ್ಥಳೀಯರು ತಿನ್ನಲು ಆಹಾರ ನೀಡಿದ್ದಾರೆ. ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅಜ್ಜಿ ಯಾರು, ಯಾವ ಊರು ಎಂಬಿತ್ಯಾದಿ ವಿವರ ಸಿಕ್ಕಿಲ್ಲ. ಕೂಡಲೇ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ:  ಅನಿವಾಸಿ ಭಾರತೀಯರಿಗೆ ಪಂಜಾಬ್ ಸರ್ಕಾರ ಹೊಸ ನೀತಿಯನ್ನು ತರಲಿದೆ: ಕುಲದೀಪ್ ಸಿಂಗ್ 

    ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕ್ಷೇತ್ರದ ಪ್ರತಿಕ್ರಿಯೆ ಅಧಿಕಾರಿ ಮುತ್ತಣ್ಣ ಗುದ್ನೆಪ್ಪನವರ್ ಹಾಗೂ ಇತರ ಸಿಬ್ಬಂದಿ ತೆರಳಿ ಅಜ್ಜಿಯನ್ನು ರಕ್ಷಿಸಿದ್ದಾರೆ. ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ – ಕಂಟೈನ್ಮೆಂಟ್ ಝೋನ್ ಆಯ್ತು ವೃದ್ಧಾಶ್ರಮ

    62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ – ಕಂಟೈನ್ಮೆಂಟ್ ಝೋನ್ ಆಯ್ತು ವೃದ್ಧಾಶ್ರಮ

    ಮುಂಬೈ: 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಮಹಾರಾಷ್ಟ್ರದ ಥಾಣೆ ಜಿಲ್ಲಾಡಳಿತ ವೃದ್ಧಾಶ್ರಮವನ್ನು ಕಂಟೈನ್ಮೆಂಟ್ ಝೋನ್ ಮಾಡಿದೆ.

    ಮಹಾರಾಷ್ಟ್ರದ ಥಾಣೆ ಜಿಲ್ಲೆಯ ‘ಮಾತೋಶ್ರೀ ವೃದ್ಧಾಶ್ರಮ’ದ 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಈ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ಘೋಷಿಸಿದೆ. ಪ್ರಸ್ತುತ ಈ 62 ನಿವಾಸಿಗಳನ್ನು ಹತ್ತಿರದ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಆಸ್ಪತ್ರೆಗೆ ದಾಖಲಾದ 62 ರೋಗಿಗಳಲ್ಲಿ 37 ಪುರುಷರು ಮತ್ತು 25 ಮಹಿಳೆಯರು. ಇವರಲ್ಲಿ 41 ಜನರು ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ. ಎಲ್ಲ ರೋಗಿಗಳನ್ನು ನಾವು ಗಮನಿಸುತ್ತಿದ್ದು, ಆಸ್ಪತ್ರೆಯ ವೈದ್ಯಕೀಯ ತಂಡವು ಹಗಲು-ರಾತ್ರಿ ಅವರನ್ನು ನೋಡಿಕೊಳ್ಳುತ್ತಿದೆ. 10 ದಿನಗಳ ಕಾಲ ಇವರನ್ನು ಆಸ್ಪತ್ರೆಯಲ್ಲಿ ಇರಿಸಲಾಗುವುದು. ವೃದ್ಧಾಶ್ರಮದಿಂದ ಇತರ ಐದು ಶಂಕಿತ ಸೋಂಕಿತರನ್ನು ಆಸ್ಪತ್ರೆಯ ಸಾಮಾನ್ಯ ವಾರ್ಡ್‍ಗೆ ದಾಖಲಿಸಲಾಗಿದೆ. 15 ಜನರ ಪರೀಕ್ಷಾ ಮಾದರಿಗಳನ್ನು ಜಿನೋಮ್ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿ ತಿಳಿಸಿದರು. ಇದನ್ನೂ ಓದಿ: ಇಂದು ಕರ್ನಾಟಕದಲ್ಲಿ 257 ಪಾಸಿಟಿವ್, 5 ಸಾವು

    ಸಿವಿಲ್ ಸರ್ಜನ್ ಡಾ ಕೈಲಾಸ್ ಪವಾರ್ ಈ ಕುರಿತು ಮಾತನಾಡಿದ್ದು, ದಾಖಲಾದ ನಾಲ್ವರನ್ನು ಐಸಿಯುನಲ್ಲಿ ಇಡಲಾಗಿದ್ದು, ಆಮ್ಲಜನಕದ ಸಹಾಯದಿಂದ ಅವರು ಬದುಕಿದ್ದಾರೆ. ಈ ನಿವಾಸಿಗಳು ‘ಮಾತೋಶ್ರೀ ವೃದ್ಧಾಶ್ರಮ’ ದವರಾಗಿದ್ದು, 2 ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ವೃದ್ಧಾಶ್ರಮದಲ್ಲಿ 55 ಹಿರಿಯ ನಾಗರಿಕರು, 5 ಜನ ನೌಕರರು ಮತ್ತು ಒಂದೂವರೆ ವರ್ಷದ ಮಗು ಸೇರಿದಂತೆ ಸಿಬ್ಬಂದಿಯ ಎರಡು ಕುಟುಂಬದ ಸದಸ್ಯರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ವಾರಾಂತ್ಯದಲ್ಲಿ ಪಾಸಿಟಿವ್ ಬಂದ ಹಿನ್ನೆಲೆ ಅವರೆಲ್ಲರನ್ನು ಥಾಣೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದರು.

    ಜಿಲ್ಲಾಡಳಿತವು ಪ್ರಸ್ತುತ ಭಿವಂಡಿ ತಹಸಿಲ್‍ನ ಸೊರ್ಗಾಂವ್ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದೆ. ಹಿರಿಯ ನಾಗರಿಕರು ವೃದ್ಧಾಶ್ರಮದಲ್ಲಿ ಒಟ್ಟಿಗೆ ಓಡಾಡುವುದು, ತಿನ್ನುವುದು ಮತ್ತು ಹಲವು ಚಟುವಟಿಕೆಗಳನ್ನು ಒಟ್ಟಿಗೆ ನಡೆಸುವುದರಿಂದ ಸೋಂಕು ಇವರಿಗೆ ಬೇಗ ಹರಡಿಕೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: ಗುರುದ್ವಾರದಲ್ಲಿ ಫೋಟೋಶೂಟ್ – ಮಾಡೆಲ್ ವಿರುದ್ಧ ನೆಟ್ಟಿಗರು ಗರಂ 

  • ವೃದ್ಧಾಶ್ರಮಕ್ಕೆ 1 ಲಕ್ಷ ನೀಡಿ ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

    ವೃದ್ಧಾಶ್ರಮಕ್ಕೆ 1 ಲಕ್ಷ ನೀಡಿ ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

    ಮಂಗಳೂರು: ಹಲವರು ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಮಾಡಿಕೊಳ್ಳಬೇಕು ಎನ್ನುತ್ತಾರೆ. ಆದರೆ ಈ ದಂಪತಿ ವೃದ್ಧಾಶ್ರಮಕ್ಕೆ 1 ಲಕ್ಷ ರೂ. ದೇಣಿಗೆ ನೀಡುವ ಮೂಲಕ ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

    ನಗರದ ಶ್ರೀ ಸುಬ್ರಹ್ಮಣ್ಯ ಸಭಾದ ಮಹಿಳಾ ವೇದಿಕೆಯ ಕಾರ್ಯದರ್ಶಿಯಾಗಿರುವ ಪುಷ್ಪಾವತಿ ಮತ್ತು ಶ್ರೀನಿವಾಸ್ ಅವರು ವೃದ್ಧಾಶ್ರಮಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ 42ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ದಂಪತಿ ತಮ್ಮ ಮದುವೆಯ ದಿನದ ಸವಿನೆನಪಿಗಾಗಿ ತಮ್ಮ ವೈಯಕ್ತಿಕವಾಗಿ ಶ್ರೀ ಸಭಾದ ಪುತ್ತೂರಿನ ಶಿವಸದನ ವೃದ್ಧಾಶ್ರಮಕ್ಕೆ ಒಂದು ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ.

    ಇವರ ಕೊಡುಗೆಯನ್ನು ಸುಬ್ರಹ್ಮಣ್ಯ ಸಭಾದ ಕಾರ್ಯದರ್ಶಿ ಕರುಣಾಕರ ಬೆಳ್ಳೆ, ಸಂತೋಷ ಕುಮಾರ್ ಮತ್ತು ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ ಕುಮಾರ್, ಉಪಾಧ್ಯಕ್ಷೆ ಸ್ನೇಹ ಲತಾ ದಿವಾಕರ್ ಸ್ವೀಕರಿಸಿದರು.

    ಇದೇ ವೇಳೆ ದಂಪತಿ ವಿವಾಹ ವಾರ್ಷಿಕೋತ್ಸವ ದಿನವನ್ನು ಹಾರ ಬದಲಾಯಿಸಿ, ರಾಗಿ ಹಾಲುಬಾಯಿ ಕಟ್ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಮಾತ್ರವಲ್ಲದೆ ಈ ದಂಪತಿ ಮಹಿಳಾ ವೇದಿಕೆ ಸದನ, ಸುರತ್ಕಲ್ ಸ್ಥಾನಿಕ ಸಂಘ ಹಾಗೂ ಚಿತ್ರಾಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಹಲವಾರು ವರ್ಷಗಳಿಂದ ಉಚಿತ ನೋಟ್ ಬುಕ್, ಪುಸ್ತಕ ವಿತರಣೆ ಸೇರಿದಂತೆ ಶಾಲೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳಿಗೆ ಹತ್ತು ಹಲವು ರೀತಿಯಲ್ಲಿ ತನುಮನ, ಧನ ಸಹಾಯ ನೀಡಿದ್ದಾರೆ.

    ನಿಮ್ಮ ಸೇವಾ ಮನೋಭಾವಕ್ಕೆ ಶ್ರೀ ಸುಬ್ರಹ್ಮಣ್ಯ ಸಭಾ ಮತ್ತು ಮಹಿಳಾ ವೇದಿಕೆಯಿಂದ ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ್ ಕುಮಾರ್ ಅಭಿನಂದನೆ ತಿಳಿಸಿದರು. ಅಲ್ಲದೆ ದಾಂಪತ್ಯ ಜೀವನ ಸುವರ್ಣ ಮಹೋತ್ಸವದತ್ತ ಸಾಗಲಿ ಎಂದು ಹಾರೈಸಿದರು.

  • ಬೀದಿಯಲ್ಲಿದ್ದ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದ ಪಿಎಸ್‍ಐ

    ಬೀದಿಯಲ್ಲಿದ್ದ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದ ಪಿಎಸ್‍ಐ

    ಹಾವೇರಿ: ಕಳೆದ ಕೆಲವು ದಿನಗಳಿಂದ ಬೀದಿಯಲ್ಲಿ ವಾಸಮಾಡುತ್ತಿದ್ದ ವೃದ್ದೆಗೆ ಪಿಎಸ್‍ಐಯೊಬ್ಬರು ಚಿಕಿತ್ಸೆ ಕೊಡಿಸಿ ವೃದ್ದಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

    ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ 65 ವರ್ಷದ ವೃದ್ಧೆಯೊಬ್ಬಳು ಅನಾಥವಾಗಿ ಎಲ್ಲೆಂದರಲ್ಲಿ ವಾಸ ಮಾಡುತ್ತಿದ್ದಾಳೆ ಎಂದು ಪಿಎಸ್‍ಐ ಡಿ.ಕೆ.ಬಳಿಗಾರವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‍ಐ ವೃದ್ದೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

    ವಿಚಾರಣೆ ವೇಳೆ ವೃದ್ಧೆಯನ್ನು ಗೌರಮ್ಮ ಸಣ್ಮನಿ(65) ಎಂದು ಗುರುತಿಸಲಾಗಿದೆ. ಬಳಿಕ ಖಾಸಗಿ ವಾಹನದ ವ್ಯವಸ್ಥೆ ಮಾಡಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಶಿಗ್ಗಾಂವಿ ಪಟ್ಟಣದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಿದರು. ಗೌರಮ್ಮಳ ಪತಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿಯ ಮರಣದ ನಂತರ ಗೌರಮ್ಮ ಅಲ್ಲಿ ಇಲ್ಲಿ ವಾಸ ಮಾಡಿಕೊಂಡು ಅನಾಥೆಯಂತೆ ಜೀವನ ಸಾಗಿಸುತ್ತಿದ್ದಳು. ಮಾಹಿತಿದಾರರೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಿಎಸ್‍ಐ ಬಳಿಗಾರ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

    ಗೌರಮ್ಮಳಿಗೆ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಗಳು ಸೇರಿದಂತೆ ಒಟ್ಟು ಮೂವರು ಮಕ್ಕಳಿದ್ದಾರೆ. ಆದರೆ ಯಾವುದಾದರೂ ಕಾರಣಕ್ಕೆ ಗೌರಮ್ಮನೇ ಸ್ವತಃ ಮನೆಬಿಟ್ಟು ಬಂದು ಅಲ್ಲಿ ಇಲ್ಲಿ ವಾಸ ಮಾಡಿಕೊಂಡಿದ್ದಾಳೋ ಅಥವಾ ಮಕ್ಕಳೇ ವೃದ್ದೆಯನ್ನು ಆರೈಕೆ ಮಾಡಲಾಗದೆ ಮನೆಯಿಂದ ಹೊರಗೆ ಹಾಕಿದ್ದಾರೋ ಎಂದು ತಿಳಿದುಬಂದಿಲ್ಲ. ಗೌರಮ್ಮ ಮಾತ್ರ ಥೇಟ್ ಅನಾಥಳಂತೆ ಕಾಗಿನೆಲೆ ಗ್ರಾಮ ಸೇರಿದಂತೆ ಅಲ್ಲಲ್ಲಿ ವಾಸವಾಗಿದ್ದಳು. ಆದರೆ ಪಿಎಸ್‍ಐ ಡಿ.ಕೆ.ಬಳಿಗಾರ ವೃದ್ದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಪಿಎಸ್ ಐ ಬಳಿಗಾರ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ತನಲ್ ಸಂಸ್ಥೆಯ ಪರಿಶ್ರಮ – 3 ವರ್ಷದ ನಂತ್ರ ಮಗನಿಗೆ ಸಿಕ್ಕ ತಾಯಿ

    ತನಲ್ ಸಂಸ್ಥೆಯ ಪರಿಶ್ರಮ – 3 ವರ್ಷದ ನಂತ್ರ ಮಗನಿಗೆ ಸಿಕ್ಕ ತಾಯಿ

    ಮಡಿಕೇರಿ: ಮೂರು ವರ್ಷದ ಹಿಂದೆ ಕಳೆದು ಹೋಗಿದ್ದ ಮಾನಸಿಕ ಅಸ್ವಸ್ಥ ತಾಯಿ ಈಗ ಮತ್ತೆ ಮಗನಿಗೆ ಸಿಕ್ಕಿರುವ ಅಪರೂಪದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಹೆತ್ತವ್ವನ ಹುಡುಕಿಕೊಂಡು ಹಾತೊರೆದು ಬರುತ್ತಿರುವ ಎದೆಯುದ್ದದ ಮಗ. ಎಲ್ಲಿದ್ದಾಳೋ, ಹೇಗಿದ್ದಾಳೋ ಎಂದು ತನ್ನ ಹಡೆದವ್ವನಿಗಾಗಿ ಮಮ್ಮಲ ಮರುಗುತ್ತಿರುವ ದೃಶ್ಯ. ಹೌದು ಮೂರು ವರ್ಷಗಳಿಂದ ತಾಯಿಗಾಗಿ ಹಾತೊರೆಯುತ್ತಿದ್ದ ಮಗನ ಕರುಳ ಹಿಂಡುವ ಕರುಣಾಜನಕ ದೃಶ್ಯ ಕಂಡಿದ್ದು ಮಡಿಕೇರಿಯಲ್ಲಿ. ಹೀಗೆ ತಾಯಿಯ ಕೈ ಕೈ ಹಿಡಿದು ಈಗಲಾದರೂ ಸಿಕ್ಕಿದೆಯಲ್ಲಾ ಎಂದು ಪೇಚಾಡುತ್ತಿರುವ ಮಗ ಮಹೇಶ್ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮದವರು.

    ಮಾನಸಿಕ ಅಸ್ವಸ್ಥರಾಗಿ ಊರಿನಿಂದ ತಪ್ಪಿಸಿಕೊಂಡಿದ್ದ ತಾಯಿ ಪಾರ್ವತಿಗಾಗಿ ಹುಡುಕಾಡದ ಊರುಗಳಿಲ್ಲ. ತಾಯಿ ಸಿಕ್ಕರೆ ಸಾಕು ಎಂದು ಹರಕೆ ಕಟ್ಟದ ದೇವರುಗಳಿಲ್ಲ. ಆದರೆ ತಪ್ಪಿಸಿಕೊಂಡ ತಾಯಿ ಮಾತ್ರ ಸಿಕ್ಕಿರಲಿಲ್ಲ. ಅದ್ಹೇಗೋ ಮಡಿಕೇರಿಗೆ ಬಂದಿದ್ದ ಮಾನಸಿಕ ಅಸ್ವಸ್ಥರಾದ ಪಾರ್ವತಿ ಬೀದಿ ಬೀದಿಗಳಲ್ಲಿ ಓಡಾಡಿಕೊಂಡಿದ್ದರು. ಇದನ್ನು ಗಮನಿಸಿದ್ದ ಮಡಿಕೇರಿ ಪೊಲೀಸರು ತಲನ್ ಸಂಸ್ಥೆಯ ವೃದ್ಧಾಶ್ರಮಕ್ಕೆ ಸೇರಿಸಿದ್ದರು.

    ಅಂದಿನಿಂದ ಇವರನ್ನು ಶುಶ್ರೂಷೆ ಮಾಡುತ್ತಾ ಚಿಕಿತ್ಸೆ ನೀಡುತ್ತಿದ್ದ ತನಲ್ ಸಂಸ್ಥೆ, ಇವರ ಹೆಸರು ಗೊತ್ತಾಗದೆ ಜಲಜಾ ಎನ್ನೋ ಹೆಸರಿಟ್ಟು ಸಲಹುತಿದ್ದರು. ತಮ್ಮ ನಿಯಮದ ಪ್ರಕಾರ ತನಲ್ ಸಂಸ್ಥೆ ಮುಖಂಡರು ಕೊನೆಗೂ ಪಾರ್ವತಿ ಅವರ ವಿಳಾಸ ಹುಡುಕಿ ತಾಯಿ ಮಗನನ್ನು ಒಂದಾಗಿಸಿದ್ದಾರೆ.

    ಕಳೆದು ಹೋದ ತಾಯಿಗಾಗಿ ಮೂರು ವರ್ಷಗಳಿಂದ ಹುಡುಕಾಡಿ ಬೇಸತ್ತಿದ್ದ ಮಗ ಮಹೇಶ್, ನಮ್ಮ ಪಾಲಿಗೆ ನಮ್ಮ ತಾಯಿ ಇನ್ನಿಲ್ಲ ಎಂದುಕೊಂಡಿದ್ದರಂತೆ. ಆದರೆ ತನಲ್ ಸಂಸ್ಥೆಯು ಇವರಿಗೆ ಕರೆ ಮಾಡಿ ನಿಮ್ಮ ತಾಯಿ ಇದ್ದಾರೆ ಎಂದು ತಿಳಿಸಿದಾಗ ಹೆತ್ತವ್ವನಿಗಾಗಿ ಹಗಲುರಾತ್ರಿ ಹುಡುಕಾಡುತ್ತಿದ್ದ ಮಗನ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೊನೆಗೂ ತನ್ನ ತಾಯಿ ಸಿಕ್ಕಳಲ್ಲಾ ಎಂದು ಸಾಲಿಗ್ರಾಮದಿಂದ ಮಡಿಕೇರಿಗೆ ಬಂದು ಇಂದು ತನ್ನ ತಾಯಿಯನ್ನು ಪ್ರೀತಿಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.

    ನನ್ನ ತಾಯಿಯನ್ನು ಇನ್ನೆಂದು ಕಳೆದುಕೊಳ್ಳದಂತೆ ಕಣ್ಣಿಟ್ಟು ನೋಡಿಕೊಳ್ಳುತ್ತೇವೆ ಎನ್ನುವಾಗ ಮಹೇಶ್ ಗದ್ಗತಿರಾಗುತ್ತಿದ್ದರು. ಇವರಂತೆಯೇ ತನಲ್ ಸಂಸ್ಥೆಯಲ್ಲಿರುವ ಇನ್ನೂ ಹಲವರು, ಇಂದು ಪಾರ್ವತಿ ಸಂಸ್ಥೆ ಬಿಟ್ಟು ತಮ್ಮ ಮನೆಗೆ ಹೋಗುತ್ತಿದ್ದರೆ, ಹೊರಗೆ ನಿಂತು ಕೈಬೀಸಿ ಬೀಳ್ಕೊಡುತ್ತಿದ್ದರು. ಮತ್ತೊಂದೆಡೆ ನಮ್ಮವರೂ ಯಾರದರೂ ನಮ್ಮನ್ನು ಮನೆಗೆ ಕರೆದೊಯ್ಯಲು ಬರಬಹುದಾ ಎನ್ನೋ ಆಸೆಗಣ್ಣಿನಿಂದಲೇ ದಾರಿ ಎದುರು ನೋಡುತ್ತಾ ನಿಂತಿದ್ದರು.

  • ವೃದ್ಧ ಆಶ್ರಮಕ್ಕೂ ತಟ್ಟಿದ ಲಾಕ್‍ಡೌನ್ ಬಿಸಿ – ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ

    ವೃದ್ಧ ಆಶ್ರಮಕ್ಕೂ ತಟ್ಟಿದ ಲಾಕ್‍ಡೌನ್ ಬಿಸಿ – ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ

    ಮಡಿಕೇರಿ: ಲಾಕ್‍ಡೌನ್‍ನಿಂದ ಕೂಲಿ ಕಾರ್ಮಿಕರು, ನಿರ್ಗತಿಕರು, ಮಧ್ಯಮ ವರ್ಗಗಳ ಜನತೆ ತೀರಾ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದೀಗ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪವಿರುವ ವೃದ್ಧ ಆಶ್ರಮಕ್ಕೂ ಲಾಕ್‍ಡೌನ್ ಬಿಸಿ ತಟ್ಟಿದೆ.

    ಸುಂಟಿಕೊಪ್ಪ ಸಮೀಪ ಎನ್‍ಜಿಓ ಸಂಸ್ಥೆಯೊಂದು ನಡೆಸುತ್ತಿರುವ ವಿಕಾಸ್ ಜನಸೇವಾ ಟ್ರಸ್ಟ್‌ಗೂ ಕೊರೊನಾ ಪರಿಣಾಮ ಬೀರಿದೆ. ಕುಟುಂಬದವರಿಂದ ನಿರ್ಲಕ್ಷಿಸಲ್ಪಟ್ಟವರಿಗೆ ಆಶ್ರಯ ನೀಡಿದ್ದ ಸಂಸ್ಥೆ ಲಾಕ್‍ಡೌನ್ ಪರಿಣಾಮವನ್ನು ಎದುರಿಸುತ್ತಿದೆ. ಸಂಸ್ಥೆ ಪ್ರಾರಂಭವಾಗಿ 5 ವರ್ಷಗಳಾಗಿದೆ. ಅಂದಿನಿಂದ ದಾನಿಗಳು ಕೊಡುತ್ತಿದ್ದ ಆರ್ಥಿಕ ನೆರವಿನಿಂದ ನಡೆದುಕೊಂಡು ಹೋಗುತ್ತಿದ್ದ ಸಂಸ್ಥೆಗೆ ಸೂಕ್ತ ಪ್ರಮಾಣದ ಅಗತ್ಯ ವಸ್ತುಗಳಿಲ್ಲದೆ ತೀರ ಸಂಕಷ್ಟವನ್ನು ಎದುರಿಸುತ್ತಿದೆ.

    ಆಶ್ರಮದಲ್ಲಿ 22 ಮಂದಿ ವೃದ್ಧರಿದ್ದಾರೆ. ಲಾಕ್‍ಡೌನ್ ನಂತರದಿಂದ ದಿನಸಿ ಪದಾರ್ಥಗಳು, ಅಕ್ಕಿ, ತರಕಾರಿಗಳು, ಗ್ಯಾಸ್ ಸಮರ್ಪಕ ರೀತಿಯಲ್ಲಿ ಬರುತ್ತಿಲ್ಲ. ಇದರಿಂದ ಸರಿಯಾದ ಪ್ರಮಾಣದಲ್ಲಿ ಊಟ ಬಡಿಸಲೂ ಮೀನಾ-ಮೇಷ ಎಣಿಸುವ ಪರಿಸ್ಥಿತಿ ಬಂದಿದೆ. ಅಲ್ಲದೆ ಪ್ರಸ್ತುತ ಇರುವ ಕಟ್ಟಡಕ್ಕೂ ಪ್ರತಿ ತಿಂಗಳು 15 ಸಾವಿರ ಬಾಡಿಗೆ ಪಾವತಿಸಬೇಕಿದೆ. ಇವರೆಲ್ಲರೂ ವಯೋವೃದ್ಧರು ಆಗಿರುವುದರಿಂದ ಆಗಾಗ ವೈದ್ಯಕೀಯ ತಪಾಸಣೆಯನ್ನು ಮಾಡಿಸಬೇಕಾಗುತ್ತದೆ.

    ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಉಚಿತ ಇದೆ. ಆದರೂ ಹೋಗಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಿತರಾಗಿ ಇವರ ಸೇವೆಗೆ ಮುಂದಾಗಬೇಕು. ದಾನಿಗಳು ಹಾಗೂ ಜಿಲ್ಲಾಡಳಿತವೂ ಅಗತ್ಯ ವಸ್ತುಗಳನ್ನು ಪೂರೈಸಿದರೆ ಇವರ ಪೋಷಣೆಗೆ ನೆರವಾಗುತ್ತೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರದಿಂದ ಯಾವುದೇ ಅನುದಾನವೂ ಬರಲ್ಲ. ದಾನಿಗಳ ಸಹಾಯದಿಂದ ನಡೆಸುತ್ತಿದ್ದ ಸಂಸ್ಥೆಗೆ ಇದೀಗ ತಾತ್ಕಾಲಿಕವಾಗಿ ಸಂಕಷ್ಟ ಎದುರಾಗಿದೆ ಎಂದು ಆಶ್ರಮ ನಡೆಸುವ ರಮೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

  • ವೃದ್ಧಾಶ್ರಮದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ತೆಲುಗು ನಟಿ ಮೌರ್ಯಾನಿ

    ವೃದ್ಧಾಶ್ರಮದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ತೆಲುಗು ನಟಿ ಮೌರ್ಯಾನಿ

    ಚಿಕ್ಕಬಳ್ಳಾಪುರ: ಟಾಲಿವುಡ್‍ನ ಖ್ಯಾತ ನಟಿ ಮೌರ್ಯಾನಿ, ಇಂದು ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳದ ಬಳಿ ಇರುವ ಮಾನಸ ವೃದ್ಧಾಶ್ರಮದಲ್ಲಿ ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

    ಚಿಕ್ಕಬಳ್ಳಾಪುರ ತಾಲೂಕಿನ ಇಟಪನಹಳ್ಳಿ ಗ್ರಾಮದವರಾದ ಮೌರ್ಯಾನಿಯವರು, ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದಾಗ ತಮ್ಮ ಸಂಬಂದಿ ಜೊತೆ ವೃದ್ಧಾಶ್ರಮಕ್ಕೆ ಆಗಮಿಸಿ ವಿಶೇಷವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅನಾಥಾಶ್ರಮದಲ್ಲಿ ಕೇಕ್ ಕತ್ತರಿಸಿ ವೃದ್ಧರಿಗೆ ಕೇಕ್ ತಿನ್ನಿಸುವುದರ ಮೂಲಕ ಸರಳ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಮೌರ್ಯಾನಿಯವರು ಇದೊಂದು ವಿಶೇಷ ಹುಟ್ಟು ಹಬ್ಬ ಅಂತ ಮನದಾಳದ ಇಂಗಿತ ವ್ಯಕ್ತಪಡಿಸಿದರು.

    ಅಂದಹಾಗೆ ಪ್ರತಿ ಬಾರಿ ಹೋಟೆಲ್‍ಗಳಲ್ಲಿ ಮನೆಯವರ ಜೊತೆ ಹುಟ್ಟು ಹಬ್ಬ ಆಚರಿಸುತ್ತಿದ್ದೆ. ಆದರೆ ಈ ಬಾರಿ ವೃದ್ಧಾಶ್ರಮದಲ್ಲಿ ಆಚರಣೆ ಮಾಡಿದ್ದು ತುಂಬಾ ಖುಷಿ ತಂದಿದೆ. ಆದರೆ ಈ ರೀತಿ ಮಕ್ಕಳು ಯಾಕೆ ತಮ್ಮ ಹೆತ್ತ ತಂದೆ ತಾಯಿಯನ್ನ ವೃದ್ಧಾಶ್ರಮಕ್ಕೆ ಬಿಡುತ್ತಾರೆ ಎಂದು ನೋವು ತೋಡಿಕೊಂಡರು. ವೃದ್ಧಾಶ್ರಮದಲ್ಲಿದ್ದ ವೃದ್ಧರ ಜೊತೆ ಕೆಲ ಕಾಲ ಕಳೆದ ನಟಿ ಮೌರ್ಯಾನಿ ಈ ಹುಟ್ಟು ಹಬ್ಬ ತಮ್ಮ ಜೀವನದ ಅತ್ಯಂತ ಮರೆಯಲಾಗದ ದಿನ. ಮುಂದಿನ ವರ್ಷವೂ ಸಹ ಇದೇ ರೀತಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವುದಾಗಿ ತಿಳಿಸಿದರು.

    ಚಿತ್ರರಂಗದ ಬಗ್ಗೆ ಪ್ರತಿಕ್ರಿಯಿಸಿದ ಮೌರ್ಯಾನಿ, ತಮ್ಮ ಸಂಬಂಧಿಕರೊಬ್ಬರು ಟಾಲಿವುಡ್‍ನಲ್ಲಿ ಸಿನಿಮಾ ನಿರ್ಮಾಣ ಮಾಡಿದಾಗ ನನಗೆ ನಟನೆಗೆ ಅವಕಾಶ ಸಿಕ್ಕಿತ್ತು. ತದನಂತರ ತೆಲುಗು ಭಾಷೆಯಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕ ಕಾರಣ ಅಲ್ಲೇ ನಟಿಸಬೇಕಾಯಿತು. ಸದ್ಯ ಸ್ಯಾಂಡಲ್‍ವುಡ್‍ನಿಂದಲೂ ಅವಕಾಶಗಳು ಬರುತ್ತಿದ್ದು, ಸದ್ಯದಲ್ಲೇ ಸ್ಯಾಂಡಲ್‍ವುಡ್‍ನ ಚಲನಚಿತ್ರವೊಂದರಲ್ಲಿ ನಟಿಸುವುದಾಗಿ ಹೇಳಿದರು.

  • ವೃದ್ಧಾಶ್ರಮದಲ್ಲಿ 60ರ ಹರೆಯದ ಜೋಡಿಯ ವಿವಾಹ

    ವೃದ್ಧಾಶ್ರಮದಲ್ಲಿ 60ರ ಹರೆಯದ ಜೋಡಿಯ ವಿವಾಹ

    ತಿರುವಂತನಪುರಂ: ಕೇರಳದ ಕೃಷಿ ಮಂತ್ರಿ ವಿ.ಎಸ್ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ತ್ರಿಶೂರ್ ನ ವೃದ್ಧಾಶ್ರಮವೊಂದರಲ್ಲಿ 60 ವರ್ಷದ ವೃದ್ಧ ಜೋಡಿಗಳು ಶನಿವಾರ ಮದುವೆಯಾಗಿದ್ದಾರೆ.

    ಥೈಕ್ಕಟ್ಟುಸೇರಿಯದ ಲಕ್ಷ್ಮಿ ಅಮ್ಮಲ್ (65) ಮತ್ತು ಕೊಚಾನಿಯನ್ ಮೆನನ್ (67) ಮದುವೆ ಮಾಡಿಕೊಂಡ ದಂಪತಿ. ಮೆನನ್ ಲಕ್ಷ್ಮಿ ಅಮ್ಮಲ್ ಅವರ ಮಾಜಿ ಪತಿಯ ಜೊತೆ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಇಬ್ಬರು ಕಳೆದ 20 ವರ್ಷದಿಂದ ಸ್ನೇಹಿತರಾಗಿದ್ದರು.

    ಲಕ್ಷ್ಮಿ ಅಮ್ಮಲ್ ಅವರ ಪತಿ ಸಾವನ್ನಪ್ಪಿದ ನಂತರ ಅವರು ತ್ರಿಶೂರ್ ನಲ್ಲಿರುವ ಸರ್ಕಾರಿ ವೃದ್ಧಾಶ್ರಮ ಸೇರಿದ್ದರು. ಇತ್ತ ಮಕ್ಕಳಿಂದ ಮನೆಯಿಂದ ಹೊರಹಾಕಲ್ಪಟ್ಟು ಬೀದಿ ಬೀದಿ ಸುತ್ತುತ್ತಿದ್ದ ಮೆನನ್ ಅವರನ್ನು ಸರ್ಕಾರೇತರ ಸಂಸ್ಥೆಯೊಂದು ಅದೇ ವೃದ್ಧಾಶ್ರಮಕ್ಕೆ ಸೇರಿಸಿತ್ತು. ಇದಕ್ಕೂ ಮುಂಚೆಯೇ ಪರಿಚಯವಿದ್ದ ಕಾರಣ ಲಕ್ಷ್ಮಿ ಅಮ್ಮಲ್ ಮತ್ತು ಮೆನನ್ ವೃದ್ಧಾಶ್ರಮದಲ್ಲಿ ಸ್ನೇಹಿತರಾಗಿದ್ದಾರೆ.

    ಹೀಗೆ ದಿನ ಪೂರ್ತಿ ಜೊತೆಗೆ ಇರುತ್ತಿದ್ದ ಇವರು, ತಮ್ಮ ಜೀವನದ ದು:ಖವನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಹೀಗೆ ಕಾಲ ಕಳೆಯುತ್ತಿದ್ದ ಹಾಗೇ ಅವರ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಆಗ ಇಬ್ಬರು ಸೇರಿ ನಾವು ಮದುವೆಯಾಗಬೇಕು ಎಂದುಕೊಂಡಿದ್ದನ್ನು ವೃದ್ಧಾಶ್ರಮದವರಿಗೆ ಹೇಳಿದ್ದಾರೆ. ಆಗ ವೃದ್ಧಾಶ್ರಮದವರು ಈ ಇಬ್ಬರು ವೃದ್ಧ ಜೋಡಿಗೆ ವೃದ್ಧಾಶ್ರಮದಲ್ಲೇ ಮದುವೆ ಮಾಡಿಸಿದ್ದಾರೆ.

    ಈ ಮದುವೆಗೆ ಕೇರಳದ ಕೃಷಿ ಸಚಿವ ವಿ.ಎಸ್ ಸುನೀಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಎಸ್. ಶಾನವಾಸ್ ಕೂಡ ಆಗಮಿಸಿ ಶುಭ ಹಾರೈಸಿದರು. ವೃದ್ಧಾಶ್ರಮದ ಎಲ್ಲರೂ ಸೇರಿ ಹಾಡಿ ಕುಣಿದು ಈ ವೃದ್ಧಜೋಡಿಯ ಮದುವೆ ಮಾಡಿದ್ದಾರೆ. ಹಾಗೂ ಕೊಚಾನಿಯನ್ ಮೆನನ್ ಅವರು ಲಕ್ಷ್ಮಿ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

  • ಸೋನಿಯಾ ಹುಟ್ಟುಹಬ್ಬವನ್ನು ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಆಚರಿಸಿದ ಜನಾರ್ದನ ಪೂಜಾರಿ

    ಸೋನಿಯಾ ಹುಟ್ಟುಹಬ್ಬವನ್ನು ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಆಚರಿಸಿದ ಜನಾರ್ದನ ಪೂಜಾರಿ

    ಮಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಹುಟ್ಟುಹಬ್ಬಕ್ಕೆ ಕರ್ನಾಟಕ ಕಾಂಗ್ರೆಸ್ ಹೀನಾಯ ಸೋಲಿನ ಉಡುಗೊರೆ ಕೊಟ್ಟರೆ ಕಾಂಗ್ರೆಸ್‍ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅನಾಥಾಶ್ರಮಗಳಿಗೆ ಫಲವಸ್ತು, ಊಟ ಕೊಡುವುದರ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.

    ಈ ಬಾರಿ ದೇಶದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯದಿಂದ ನೊಂದು ತನ್ನ ಜನ್ಮ ದಿನಾಚರಣೆ ಮಾಡುವುದಿಲ್ಲ ಎಂದು ಸೋನಿಯಾ ಗಾಂಧಿ ಘೋಷಿಸಿದ್ದರು. ಈ ರೀತಿ ಹೆಣ್ಣು ಮಕ್ಕಳ ದೌರ್ಜನ್ಯದಿಂದ ನೊಂದು ಹುಟ್ಟುಹಬ್ಬ ಆಚರಿಸದಿರುವ ಉದಾತ್ತ ಮಹಿಳೆ ಜಗತ್ತಿನಲ್ಲಿಯೇ ಬೇರೆ ಯಾರು ಇರುವುದಿಲ್ಲ ಎಂದು ಕೇಂದ್ರ ಸರ್ಕಾರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

    ಹೀಗಾಗಿ ಪ್ರತಿ ವರ್ಷ ಸೋನಿಯಾ ಗಾಂಧಿಯ ಹುಟ್ಟುಹಬ್ಬವನ್ನು ವಿವಿಧ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಜನಾರ್ದನ ಪೂಜಾರಿ ಆಚರಿಸುತ್ತಿದ್ದರು. ಅದೇ ರೀತಿ ಈ ವರ್ಷವೂ ನಗರದ ಸಂತ ಅಂತೋನಿಯವರ ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸದ ವೃದ್ಧಾಶ್ರಮ, ಕೋಣಾಜೆಯ ಅಭಯಾಶ್ರಮಗಳಿಗೆ ಹಣ್ಣು-ಹಂಪಲು ನೀಡಿದ್ದಾರೆ. ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಊಟ ಹಾಗೂ ಹಣ್ಣುಹಂಪಲು ನೀಡಿ ಹುಟ್ಟುಹಬ್ಬ ಆಚರಿಸಿದರು.

    ಬಳಿಕ ಮಾತನಾಡಿದ ಅವರು, ಬಡವರ ಆಶಯದಂತೆ ಸೋನಿಯಾ ಗಾಂಧಿ ಜನ್ಮ ದಿನವನ್ನು ಈ ಬಾರಿಯೂ ಸರಳವಾಗಿ ಆಚರಿಸುವುದಾಗಿ ತಿಳಿಸಿದ್ದಾರೆ. ಪ್ರತಿ ವರ್ಷ ಆಶ್ರಮದಲ್ಲಿರುವ ಬಡವರ ಸಂತೋಷಕ್ಕಾಗಿ ಸೋನಿಯಾ ಗಾಂಧಿಯವರ ಜನ್ಮ ದಿನವನ್ನು ಅವರೊಂದಿಗೆ ಆಚರಿಸುತ್ತೇನೆ. ಅದಕ್ಕಾಗಿ ಬಡವರು ಸದಾ ಅದರ ನಿರೀಕ್ಷೆಯಲ್ಲಿರುತ್ತಾರೆ. ಆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ಹುಟ್ಟು ಹಬ್ಬದ ಆಚರಣೆ ಬೇಡ ಎಂದರು, ಹಾಗಾಗಿ ಈ ರೀತಿಯಲ್ಲಿ ಆಚರಿಸಲಾಯಿತು ಎಂದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಅಬ್ದುಲ್ ಸಲೀಂ, ಮನಪಾ ಸದಸ್ಯೆ ಜೆಸಿಂತಾ, ಮಾಜಿ ಮನಪಾ ಸದಸ್ಯೆ ಸಬಿತಾ ಮಿಸ್ಕಿತ್, ದೀಪಕ್ ಪೂಜಾರಿ ಮತ್ತು ಟಿ.ಕೆ ಸುಧೀರ್, ಲಕ್ಷ್ಮೀ ನಾರಾಯಣ, ರಮಾನಂದ ಪೂಜಾರಿ, ನೀರಜ್ ಪಾಲ್, ಮೋಹನ್ ಶೆಟ್ಟಿ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.