Tag: Okkaliga Community

  • ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ

    ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ

    ಮೈಸೂರು: ನಗರದಲ್ಲಿ ಶುಕ್ರವಾರ (ಅ.13) ನಡೆದ ಮಹಿಷ ಉತ್ಸವದ ವೇಳೆ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ (KS Bhagawan) ಒಕ್ಕಲಿಗ ಸಮುದಾಯದ (Okkaliga Community) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿಂದು ಪ್ರೊ.ಭಗವಾನ್ ನಿವಾಸಕ್ಕೆ ಮೈಸೂರು ಚಾಮರಾಜ ಕ್ಷೇತ್ರದ ಒಕ್ಕಲಿಗರ ಸಂಘದಿಂದ ಮುತ್ತಿಗೆಗೆ ಯತ್ನಿಸಲಾಯಿತು.

    ಅವಹೇಳನಕಾರಿ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಮನೆಗೆ ಮುತ್ತಿಗೆಹಾಕಲು ಯತ್ನಿಸಿದರು. ಬ್ಯಾರಿಕೇಡ್ ಕಿತ್ತು ಭಗವಾನ್ ಮನೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು (Mysuru City Police) ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಹಾಗೂ ತಳ್ಳಾಟ ನೂಕಾಟವೂ ನಡೆದಿದ್ದು, ಕೆಲವರು ಕೈ ಮತ್ತು ಹಣೆಯ ಭಾಗಕ್ಕೆ ಗಾಯವನ್ನೂ ಮಾಡಿಕೊಂಡರು. ಇದನ್ನೂ ಓದಿ: World Cup 2023: ಇಂಡೋ-ಪಾಕ್‌ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?

    ಶುಕ್ರವಾರ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಒಕ್ಕಲಿಗರು ಸಂಸ್ಕೃತಿ ಹೀನರೆಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಒಕ್ಕಲಿಗ ಸಮುದಾಯದ ಮುಖಂಡರು ಭಗವಾನ್ ಮನೆಗೆ ಮುತ್ತಿಗೆಹಾಕಲು ಯತ್ನಿಸಿದರು.

    ಒಕ್ಕಲಿಗ ಜನಾಂಗಕ್ಕೆ ಸಂಸ್ಕೃತಿ ಕಲಿಸಿ, ಭಗವಾನ್ ತಾವೂ ಒಕ್ಕಲಿಗ ಸಮುದಾಯದವರು ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದುಕಡೆ ಸಮುದಾಯವನ್ನೇ ನಿಂದಿಸುತ್ತಾರೆ. ಅವರು ಒಕ್ಕಲಿಗ ಸಮುದಾಯದವರು ಎಂಬುದೇ ಅನುಮಾನವಿದೆ. ಅವರನ್ನು ಈಗಲೆ ಕರೆಸಿ, ಇಲ್ಲವೇ ದೂರು ನೀಡುತ್ತೇವೆ. ಕೂಡಲೇ ಎಫ್‌ಐಆರ್ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಂದ ವಂಚನೆ, ಕೊಲೆ ಬೆದರಿಕೆ ಆರೋಪ- ವಿಷ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ಸದ್ಯ ಭಗವಾನ್ ಮನೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸ್ಥಳದಲ್ಲಿ ರಾಜ್ಯ ಮೀಸಲು ಪಡೆ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಹಲವೆಡೆ ವಿದ್ಯುತ್ ವ್ಯತ್ಯಯ; Ind Vs Pak ಮ್ಯಾಚ್ ನೋಡುವ ಫ್ಯಾನ್ಸ್‌ಗೆ ನಿರಾಸೆ ಸಾಧ್ಯತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿಟಿಡಿ ಬಿಜೆಪಿಗೆ ಬಂದ್ರೆ ಒಳ್ಳೆಯದು: ಸಚಿವ ಮಾಧುಸ್ವಾಮಿ

    ಜಿಟಿಡಿ ಬಿಜೆಪಿಗೆ ಬಂದ್ರೆ ಒಳ್ಳೆಯದು: ಸಚಿವ ಮಾಧುಸ್ವಾಮಿ

    – ಎಲ್ಲಾ ಒಕ್ಕಲಿಗರು ಡಿಕೆಶಿ ಪರವಾಗಿಲ್ಲ

    ಹಾಸನ: ಮಾಜಿ ಸಚಿವ ಜಿ.ಟಿ.ದೇವೇಗೌಡರು ಬಿಜೆಪಿಗೆ ಬಂದರೆ ಒಳ್ಳೆಯದು. ಜಿಟಿಡಿ ಬಿಜೆಪಿಗೆ ಅಸ್ಪೃಶ್ಯರಲ್ಲ, ಅವರನ್ನು ಗೃಹಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದು ಎಂದು ಬಹಿರಂಗವಾಗಿಯೇ ಜಿ.ಟಿ.ದೇವೇಗೌಡರನ್ನು ಸಚಿವ ಮಾಧುಸ್ವಾಮಿ ಪಕ್ಷಕ್ಕೆ ಆಹ್ವಾನಿಸಿದರು.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಟಿಡಿ ಸೇರಿದಂತೆ ಜೆಡಿಎಸ್‍ನ ಕೆಲ ಶಾಸಕರು ಬಿಜೆಪಿಗೆ ಬಾಹ್ಯ ಬೆಂಬಲ ಕೊಡೋಣ ಎಂದಿದ್ದರು. ಅವರವರ ಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಯಿಂದ ಅದು ಒಳ್ಳೆದು. ಜಿಟಿಡಿ ಬಿಜೆಪಿಗೆ ಅಸ್ಪೃಶ್ಯರಲ್ಲ, ಅವರನ್ನು ಗೃಹಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದು ನಾವು. ಅವರು ಬಿಜೆಪಿಗೆ ಬಂದರೆ ಒಳ್ಳೆಯದು ಎಂದು ಹೇಳಿದರು.

    ಒಕ್ಕಲಿಗರ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಇಡಿ ಕಸ್ಟಡಿ ವಿರೋಧಿಸಿ ಈ ದೊಡ್ಡ ಪ್ರತಿಭಟನೆ ಒಳ್ಳೆಯದಲ್ಲ. ನಾವು ಡಿಕೆಶಿ ಬಂಧಿಸಿ ಎಂದು ಹೇಳಿಲ್ಲ. ಅಷ್ಟಕ್ಕೇ ಒಂದು ಸಮುದಾಯ ಹೋರಾಟಕ್ಕೆ ಇಳಿಯುವುದು ಒಳ್ಳೆಯ ಬೆಳವಣಿಗೆ ಅಲ್ಲ. ಬಿಜೆಪಿ ಒಕ್ಕಲಿಗ ಸಮುದಾಯದ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

    ಬಿಜೆಪಿ ಒಕ್ಕಲಿಗ ಸಮಾಜದ ವಿರೋಧಿಯಾಗಿದ್ದರೆ ಸದಾನಂದಗೌಡರನ್ನು ಕೇಂದ್ರದಲ್ಲಿ ಮಂತ್ರಿ ಮಾಡುತ್ತಿರಲಿಲ್ಲ. ನಮ್ಮ ಸರ್ಕಾರದಲ್ಲಿ ಕಂದಾಯ ಸಚಿವರು ಯಾರು? ಅಶ್ವಥ್ ನಾರಾಯಣ ಡಿಸಿಎಂ ಆಗಿಲ್ಲವೇ. ಜಾತಿ ಜಾತಿಯವರು ಹೋರಾಟಕ್ಕಿಳಿದರೆ ಕಾನೂನು ಏನು ಮಾಡಬೇಕು. ಡಿಕೆಶಿ ತನಿಖೆಗೆ ಸಹಕಾರ ನೀಡಬೇಕು ಅಲ್ಲವೇ? ಅದಕ್ಕಾಗಿ ಇಡಿ ವಶಕ್ಕೆ ಪಡೆದಿದೆ. ಎಲ್ಲ ಒಕ್ಕಲಿಗರು ಡಿಕೆಶಿ ಪರವಾಗಿಲ್ಲ. ಅವರ ಬೆಂಬಲಿಗರು ಮಾತ್ರ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದರು.

    ಅತಿವೃಷ್ಟಿ ಅಂತಿಮ ವರದಿ ಸಿದ್ಧವಾಗಿಲ್ಲ, ಆದ ನಂತರ ಕೇಂದ್ರದ ಬಳಿಗೆ ಹೋಗುತ್ತೇವೆ. ಉ.ಕ.ಭಾಗದಲ್ಲಿ ಹೊಸದಾಗಿ ಮನೆ ಕಟ್ಟಲು ಆಗಲ್ಲ. ಮುಂದಿನ ಸೆಪ್ಟಂಬರ್‍ವರೆಗೆ ಶಾಶ್ವತ ಪರಿಹಾರ ಸದ್ಯಕ್ಕೆ ಮಾಡಲು ಆಗಲ್ಲ. ಕೇಂದ್ರ ನೆರವು ಕೊಟ್ಟಿಲ್ಲ ಎಂದು ನಾವು ಸುಮ್ಮನೆ ಕುಳಿತಿಲ್ಲ. ಕೇಂದ್ರ ಪರಿಹಾರ ಕೊಡೋ ವಿಶ್ವಾಸ ಇದೆ, ಸ್ವಲ್ಪ ವಿಳಂಬವಾಗಬಹುದು ಎಂದರು.

    ಇದೇ ವೇಳೆ ಅಕ್ಬೋಬರ್‍ನಲ್ಲಿ ಅಧಿವೇಶನ ಕರೆಯುತ್ತೇವೆ. ಅದಕ್ಕೂ ಮುನ್ನಾ ರೈತರ ಎಲ್ಲಾ ಸಾಲದ ಬಗ್ಗೆ ಮಾಹಿತಿ ಪಡೆಯುತ್ತೇವೆ. ಎಲ್ಲವನ್ನೂ ಲೆಕ್ಕಾಚಾರ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ. ರೈತರಿಗೆ ಏನಾದರು ಮಾಡಬೇಕು ಎಂಬುದು ಯಡಿಯೂರಪ್ಪ ಕನಸು ಎಂದು ತಿಳಿಸಿದರು.

  • ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ: ಬೊಮ್ಮಾಯಿ

    ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ: ಬೊಮ್ಮಾಯಿ

    ಬೆಂಗಳೂರು: ಇಂದು ಒಕ್ಕಲಿಗ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

    ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ. ಪ್ರತಿಭಟನೆಗೆ ಕರೆ ಕೊಟ್ಟವರು ಸಹ ಶಾಂತಿ ಕಾಪಾಡಿದ್ದಾರೆ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

    ನಮ್ಮ ನಗರದ ಪೊಲೀಸ್ ಇಲಾಖೆ ಪ್ರತಿಭಟನೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡಿದೆ. ಇದು ನಮ್ಮ ಪೊಲೀಸ್ ಇಲಾಖೆಯ ದಕ್ಷತೆಯನ್ನು ತೋರಿಸುತ್ತದೆ. ಅಶೋಕ ಪಿಲ್ಲರ್ ಬಳಿ ಕಲ್ಲೆಸೆತ ಆಗಿದೆ ಎನ್ನುತ್ತಾರೆ. ಆದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಒಟ್ಟಿನಲ್ಲಿ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಇದೇ ವೇಳೆ ಬಿಜೆಪಿಯಿಂದ ಒಕ್ಕಲಿಗ ನಾಯಕರ ಟಾರ್ಗೆಟ್ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಸಮುದಾಯದವರೂ ಈಗ ಮೆಚ್ಯೂರ್ ಆಗಿದ್ದಾರೆ. ಯಾವ ಸಮುದಾಯವನ್ನೂ ತಪ್ಪು ದಾರಿಗೆ ಎಳೆಯಕ್ಕಾಗಲ್ಲ. ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳು ಆಗುತ್ತಿರುತ್ತವೆ. ಆದರೆ ಸಮಾಜ ಜಾಗೃತವಾಗಿದೆ. ಈ ರೀತಿಯ ಪ್ರಯತ್ನಗಳಿಗೆ ಸಮಾಜ ಬಲಿಯಾಗಲ್ಲ. ಸಮಾಜ ಎಲ್ಲವನ್ನೂ ಎದುರಿಸುವ ಶಕ್ತಿ ಹೊಂದಿದೆ. ಯಾರೂ ಯಾರನ್ನೂ ಯಾರ ಮೇಲೂ ಎತ್ತಿ ಕಟ್ಟೋಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಗುಜರಾತ್‍ನಲ್ಲಿ ಸಂಚಾರಿ ನಿಯಮಗಳಿಗೆ ದಂಡದ ಪ್ರಮಾಣ ಇಳಿಕೆ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಚಾರ ಸಿಎಂ ಗಮನದಲ್ಲಿದೆ. ಆ ಎಲ್ಲದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಾರೆ. ದುಬಾರಿ ದಂಡ ಕಡಿತದ ಬಗ್ಗೆ ಸಿಎಂ ಚಿಂತನೆ ಮಾಡುತ್ತಿದ್ದಾರೆ. ಅದರ ಬಗ್ಗೆ ಅವರೇ ಸ್ಪಷ್ಟನೆ ಕೊಡಲಿದ್ದಾರೆ ಎಂದು ತಿಳಿಸಿದರು.

  • ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶವಾಗಬೇಕು ತೀರ್ಮಾನ ಮಾಡಲಿ: ಸಿ.ಟಿ ರವಿ

    ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶವಾಗಬೇಕು ತೀರ್ಮಾನ ಮಾಡಲಿ: ಸಿ.ಟಿ ರವಿ

    ಮೈಸೂರು: ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದವರಿಗೆ ಶಾಂತವೇರಿ ಗೋಪಾಲಗೌಡರು, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂಥ ಮಹನೀಯರು ಆದರ್ಶರಾಗಬೇಕೋ ಅಥವಾ ಇನ್ಯಾರು ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ ಎಂದು ಹೇಳುವ ಮೂಲಕ ಪ್ರತಿಭಟನಾಕಾರರಿಗೆ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.

    ಸತ್ಯವಂತರಿಗೆ ಇದು ಕಾಲವಲ್ಲ. ನಾನು ಸತ್ಯ ಹೇಳಿದರೆ ಕೆಲವರಿಗೆ ಅಪಥ್ಯವಾಗುತ್ತದೆ. ಇ.ಡಿ.ಗೆ ಯಾವ ಜಾತಿ ಇದೆ, ಯಾವ ಪಕ್ಷ ಇದೆ. ಇಡಿ ಹುಟ್ಟಿಹಾಕಿದವರು ಯಾರು? ಇಡಿ ಹುಟ್ಟುಹಾಕಿದ್ದು ಭಾರತೀಯ ಜನತಾ ಪಾರ್ಟಿ ಅಲ್ಲ. ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಬಂಧ ಇಡಿ ತನಿಖೆ ಮಾಡುತ್ತಿದೆ. ತನಿಖೆ ಮಾಡೋದೇ ತಪ್ಪು ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

    ಇದೇ ವೇಳೆ ಟ್ರಾಫಿಕ್ ರೂಲ್ಸ್ ಬಗ್ಗೆ ಮಾತನಾಡಿ, ತಪ್ಪು ಮಾಡದೇ ಇರುವವರಿಗೆ ದಂಡದ ಪ್ರಶ್ನೆ ಬರೋದಿಲ್ಲ. ತಪ್ಪು ಮಾಡುವವರಿಗೆ ಟ್ರಾಫಿಕ್ ದಂಡ ಬೀಳುತ್ತೆ. ನಾನೂ ಮೊದಲು ಸೀಟ್ ಬೆಲ್ಟ್ ಹಾಕುತ್ತಿರಲಿಲ್ಲ. ಟ್ರಾಫಿಕ್ ಫೈನ್ ಜಾಸ್ತಿಯಾದ ಮೇಲೆ ಕಡ್ಡಾಯವಾಗಿ ಹಾಕುತ್ತಿದ್ದೇನೆ. ನಾನು ತಪ್ಪು ಮಾಡಿದರೆ ಮೊದಲು ನನ್ನಂಥವರಿಗೆ ದಂಡ ಹಾಕಬೇಕು. ಮಿನಿಸ್ಟರ್ ಇರಲಿ, ಸಿಎಂ ಇರಲಿ ಎಲ್ಲರಿಗೂ ದಂಡ ಹಾಕಬೇಕು ಎಂದು ತಿಳಿಸಿದರು.

    ದಂಡದ ಹಣದಲ್ಲಿ ರಸ್ತೆ ರಿಪೇರಿ ಮಾಡಬೇಕೆಂಬ ಕೂಗು ಎದ್ದಿದೆ. ಈಗ ಕೂಗು ಎತ್ತಿರುವವರು ಮೊದಲು ದೇಶದಲ್ಲಿ ಎಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ ಎಂದು ನೋಡಿಕೊಳ್ಳಲಿ. ಅಮೆರಿಕಾದಲ್ಲಿ ಶೇ. 97ರಷ್ಟು ಜನ ತೆರಿಗೆ ಕಟ್ಟುತ್ತಾರೆ. ನಮ್ಮಲ್ಲಿ ತೆರಿಗೆ ಕದಿಯುವುದು ಹೇಗೆ ಎಂದು ನೂರು ಮಾರ್ಗ ಹುಡುಕುತ್ತಾರೆ. ಆದರೂ ಅಮೆರಿಕಾದಂತಹ ರಸ್ತೆಗಳನ್ನು ಬಯಸುತ್ತಾರೆ. ಮನಸ್ಥಿತಿ ಬದಲಾಗದ ಹೊರತು ಪರಿಸ್ಥಿತಿ ಬದಲಾಗಲ್ಲ ಎಂದು ಕೇಂದ್ರ ಸರ್ಕಾರದ ದಂಡ ಪರಿಷ್ಕರಣೆಯನ್ನು ಸಿಟಿ ರವಿ ಸಮರ್ಥಿಸಿಕೊಂಡರು.