Tag: Ojikuppam Gang

  • ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನಿಗೆ ಗೂಸ

    ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನಿಗೆ ಗೂಸ

    ಬೆಂಗಳೂರು: ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನೊಬ್ಬನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಗೂಸ ಕೊಟ್ಟಿದ್ದಲ್ಲದೆ, ಕೆಳಗೆ ಹಾಕ್ಕೊಂಡು ತುಳಿದು ಧರ್ಮದೇಟು ಕೊಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬ್ಯಾಂಕ್ ನಿಂದ ಹಣ ತೆಗೆದುಕೊಂಡು ಬರುವ ಜನರ ಗಮನ ಬೇರೆಡೆಗೆ ಹೋಗುವಂತೆ ಮಾಡಿ, ಹಣ ಲಪಟಾಯಿಸೋದರಲ್ಲಿ ಓಜಿಕುಪ್ಪಂ ಗ್ಯಾಂಗ್ ಸದಸ್ಯರು ನಿಸ್ಸೀಮರು. ಗುರುವಾರ ಹಣ ಲಪಟಾಯಿಸಲು ಹೋಗಿ ಸಿಕ್ಕಿಬಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನಿಗೆ ಸ್ಥಳೀಯರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಆತನನ್ನು ಕೆಳಗೆ ಬೀಳಿಸಿ ಒದೆ ಕೊಟ್ಟಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ಅಲ್ಲದೆ ಖತರ್ನಾಕ್ ಖದೀಮ ಹೇಗೆ ಹಣ ದೋಚಲು ಹೊಂಚು ಹಾಕಿದ್ದ, ಸ್ಥಳೀಯರ ಕೈಗೆ ಸಿಕ್ಕಿಬಿದ್ದ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೃದ್ದರೊಬ್ಬರು ಬ್ಯಾಂಕ್‍ನಿಂದ ಹಣ ತೆಗೆದುಕೊಂಡು ಚೀಲವನ್ನು ಹಿಡಿದುಕೊಂಡು ಬರುತ್ತಿರುತ್ತಾರೆ. ಇವರ ಹಿಂದೆಯೇ ನಡೆದುಕೊಂಡು ಬಂದು ಫಾಲೊ ಮಾಡೊ ಓಜಿಕುಪ್ಪಂ ಗ್ಯಾಂಗ್ ಸದಸ್ಯ, ಬ್ಯಾಂಕ್‍ನಿಂದ ಸ್ವಲ್ಪ ದೂರ ವೃದ್ಧ ಬರುತ್ತಿದ್ದ ಹಾಗೆ ನಿಮ್ಮ ಶರ್ಟ್ ಮೇಲೆ ಗಲೀಜು ಬಿದ್ದಿದೆ ನೋಡಿ ಎಂದು ವೃದ್ಧನಿಗೆ ಹೇಳಿದ್ದಾನೆ.

    ಕ್ಷಣಾರ್ಧದಲ್ಲಿ ಅವರ ಗಮನ ಬೇರೆಡೆಗೆ ಹೋಗುವಂತೆ ಮಾಡಿ, ವೃದ್ಧರ ಹಣದ ಬ್ಯಾಗ್ ಕಸಿದು ಓಜಿಕುಪ್ಪಂ ಗ್ಯಾಂಗ್‍ನ ಮತ್ತೊಬ್ಬ ಕಳ್ಳ ಓಡಿಹೋಗಲು ಯತ್ನಿಸಿದ್ದಾನೆ. ಈ ವೇಳೆ ಮತ್ತೊಬ್ಬ ಕಳ್ಳ ಬೈಕಿನಲ್ಲಿ ಆತನನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ. ಆದರೆ ಆಗ ಬೈಕ್ ಸ್ವಲ್ಪ ಮುಂದೆ ಹೋಗಿದ್ದರಿಂದ ಹಣ ಕಸಿದ ಕಳ್ಳ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆಗ ಅಲ್ಲಿಂದ ಎಸ್ಕೇಪ್ ಆಗಲು ಹಣದ ಚೀಲ ಎಸೆದು ಕಳ್ಳ ಓಡಿದ್ದಾನೆ. ಈ ವೇಳೆ ಆತನನ್ನು ಬೆನ್ನಟ್ಟಿದ ಸ್ಥಳೀಯರು ಆತನನ್ನು ಹಿಡಿದು, ಕಂಬಕ್ಕೆ ಕಟ್ಟಿ ಥಳಿಸಿ, ಚಳಿ ಬಿಡಿಸಿದ್ದಾರೆ.

    ಹಲವು ಕಳ್ಳತನ ಪ್ರಕರಣದಲ್ಲಿ ಓಜಿಕುಪ್ಪಂ ಗ್ಯಾಂಗ್ ಭಾಗಿಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಈ ಗ್ಯಾಂಗ್‍ನ ಸದಸ್ಯನನ್ನು ರೆಡ್ ಹ್ಯಾಂಡಾಗಿ ಹಿಡಿದ ಸ್ಥಳೀಯರು ಸರಿಯಾಗೇ ಥಳಿಸಿ ಪಾಠ ಕಲಿಸಿದ್ದಾರೆ.

  • ಉದ್ಯಾನ ನಗರಿ ಜನರೇ ಎಚ್ಚರ ಎಚ್ಚರ.. – ಮತ್ತೆ ಸಿಟಿಗೆ ಓಜಿಕುಪ್ಪಂ ಗ್ಯಾಂಗ್ ಎಂಟ್ರಿ

    ಉದ್ಯಾನ ನಗರಿ ಜನರೇ ಎಚ್ಚರ ಎಚ್ಚರ.. – ಮತ್ತೆ ಸಿಟಿಗೆ ಓಜಿಕುಪ್ಪಂ ಗ್ಯಾಂಗ್ ಎಂಟ್ರಿ

    ಬೆಂಗಳೂರು: ಸಿಲಿಕಾನ್ ಜನರೇ ಹುಷಾರಾಗಿರಿ. ಹಣ ಕ್ಯಾರಿ ಮಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಹಣ ಮಾಯವಾಗುತ್ತದೆ. ಯಾಕೆಂದರೆ ಸಿಟಿಗೆ ಸೈಲೆಂಟ್ ಆಗಿ 30 ಜನರ ಓಜಿಕುಪ್ಪಂ ಗ್ಯಾಂಗ್ ಎಂಟ್ರಿ ಕೊಟ್ಟಿದ್ದಾರೆ.

    ಹೌದು… ಕೆಲ ವರ್ಷಗಳ ಹಿಂದೆ ಬೆಂಗಳೂರು ಜನತೆಯ ನಿದ್ದೆಗೆಡಿಸಿದ್ದ ಗ್ಯಾಂಗ್ ನಲ್ಲಿ ಪ್ರಮುಖವಾದದ್ದು ಓಜಿಕುಪ್ಪಂ ಗ್ಯಾಂಗ್ ಒಂದಾಗಿದೆ. ಈ ಗ್ಯಾಂಗ್ ಆಂಧ್ರದಿಂದ ರೈಲುಗಳ ಮೂಲಕ ನಗರಕ್ಕೆ ಎಂಟ್ರಿಯಾಗುತ್ತವೆ. ಎಂಟ್ರಿಯಾದ ತಕ್ಷಣ ಹೊಸ ಸಿಮ್ ಖರೀದಿ ಮಾಡಿ ಕೆಲಸ ಮುಗಿದ ತಕ್ಷಣ ಅಲ್ಲೇ ಎಸೆದು ಪರಾರಿಯಾಗುತ್ತಾರೆ.

    ಇವರು ರೈಲ್ವೆ ನಿಲ್ದಾಣದ ಆಸುಪಾಸುಗಳಲ್ಲೇ ವಾಸ ಮಾಡುತ್ತಾರೆ. ಈ ಗ್ಯಾಂಗ್ ಜನರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಎತ್ತಿದ ಕೈ. ಅದರಲ್ಲೂ ಪ್ರಮುಖವಾಗಿ ಬ್ಯಾಂಕ್ ಗಳಿಂದ ಹಣ ತೆಗೆದುಕೊಂಡು ಹೊರಬರುವವರನ್ನೇ ಟಾರ್ಗೆಟ್ ಮಾಡುತ್ತಾರೆ. ಬಳಿಕ ನಿಮ್ಮ ಕಾರು ಪಂಚರ್ ಆಗಿದೆ, ನಿಮ್ಮ ದುಡ್ಡು ಕೆಳಗೆ ಬಿದ್ದಿದೆ ಮತ್ತು ಬಟ್ಟೆ ಮೇಲೆ ಗಲೀಜು ಆಗಿದೆ ಅಂತ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಹಣ ಕದ್ದು ಪರಾರಿಯಾಗುತ್ತಾರೆ. ಎಸ್ಕೇಪ್ ಆಗ್ತಾರೆ.

    ಒಂದು ಬಾರಿ ಇವರು ಹಣ ಕದ್ದು ಹೋದರೆ ವರ್ಷಗಳೆ ಕಳೆದು ಹೋದ ಮೇಲೆ ವಾಪಸ್ ಬರುತ್ತಾರೆ. ಈಗಾಗಲೇ ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸುವುದಕ್ಕೆ ಹೋಗಿ ನಾಲ್ವರು ಸಿಕ್ಕಿಬಿದ್ದಿದ್ದಾರೆ.

    ವಿಚಾರಣೆ ವೇಳೆ ಒಟ್ಟು ಮೂವತ್ತು ಜನರ ತಂಡ ಸಿಟಿ ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಐದಾರು ಟೀಂ ಗಳಾಗಿ ಡಿವೈಡ್ ಆಗಿ ಗಮನ ಬೇರೆಡೆ ಸೆಳೆದು ಕೈಚಳಕ ಶುರುಮಾಡಿದ್ದಾರೆ. ಮತ್ತೆ ಓಜಿಕುಪ್ಪಂ ಗ್ಯಾಂಗ್ ಸಿಟಿಗೆ ಎಂಟ್ರಿಯಾಗಿರುವ ವಿಚಾರ ತಿಳಿದ ಸಿಟಿ ಪೊಲೀಸರು, ನಗರದ ಎಲ್ಲಾ ವಿಭಾಗಗಳಲ್ಲೂ ವಿಶೇಷ ತಂಡ ರಚಿಸಿ ಆರೋಪಿಗಳ ಬೆನ್ನುಬಿದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv