Tag: oil

  • ತೈಲ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಅಲ್ಲ- ಬಿಜೆಪಿ ನಾಯಕರು ಮೋದಿಗೆ ಸಲಹೆ ನೀಡಲಿ

    ತೈಲ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಅಲ್ಲ- ಬಿಜೆಪಿ ನಾಯಕರು ಮೋದಿಗೆ ಸಲಹೆ ನೀಡಲಿ

    ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಅಲ್ಲ ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

    ಕೃಷ್ಣದಲ್ಲಿ ಮಾತನಾಡಿದ ಅವರು, ಸಿಎಂ ರಾಜ್ಯದ ಸೆಸ್ ಇಳಿಸಲಿ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಅಲ್ಲ. ಕೇಂದ್ರ ಸರ್ಕಾರದ ಕೆಲ ಆರ್ಥಿಕ ನೀತಿಗಳೇ ಬೆಲೆ ಏರಿಕೆಗೆ ಕಾರಣ ಅಂತ ಕಿಡಿಕಾರಿದರು.

    ಪೆಟ್ರೋಲ್ ದರ ಕಡಿಮೆ ಮಾಡುವ ಬಗ್ಗೆ ಬಿಜೆಪಿ ನಾಯಕರು ನಮಗೆ ಸಲಹೆ ನೀಡುವುದು ನಿಲ್ಲಿಸಲಿ. ಪ್ರಧಾನಿ ಮೋದಿಗೆ ಸಲಹೆ ನೀಡಿದರೆ ಒಳ್ಳೆಯದು ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು. ಇದನ್ನು ಓದಿ: ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

    ಹುಬ್ಬಳ್ಳಿ ಮನೆಯನ್ನು ಖಾಲಿ ಮಾಡಿದ ವಿಚಾರಕ್ಕೆ ಸ್ಪಷ್ಟನೆ ಕೊಟ್ಟ ಸಿಎಂ, ಮನೆ ಮಾಲೀಕರಿಗೆ ಆರ್ಥಿಕ ಸಮಸ್ಯೆ ಇದೆಯಂತೆ. ಹೀಗಾಗಿ ನಾನು ಆ ಮನೆಯನ್ನು ಖಾಲಿ ಮಾಡಿದ್ದೇನೆ. ಮುಂದೆ ಹುಬ್ಬಳ್ಳಿಯಲ್ಲಿ ಮನೆ ಮಾಡುವ ಕುರಿತು ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಎಲೆಕ್ಷನ್ ವೇಳೆ ಹುಬ್ಬಳ್ಳಿಯಲ್ಲಿ ಮನೆ- ಇದೀಗ ಇದ್ದಕ್ಕಿದ್ದಂತೆ ಖಾಲಿ ಮಾಡಿದ ಸಿಎಂ

    ಮಾಜಿ ಸಿಎಂ ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕ ದೇವಸ್ಥಾನಗಳಿಗೆ ಭೇಟಿ ನೀಡಲಿ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಶೆಟ್ಟರ್ ಆಸೆಯನ್ನು ಈಡೇರಿಸುತ್ತೇನೆ. ಆದಷ್ಟು ಬೇಗ ಅ ಭಾಗದ ದೇವಸ್ಥಾನಕ್ಕೂ ಭೇಟಿ ನೀಡುತ್ತೇನೆ ಎಂದು ಟಾಂಗ್ ನೀಡಿದರು.

    ಪರಿಹಾರ ಬಂದಿಲ್ಲ: ಕೊಡಗು ನೆರೆ ಪರಿಹಾರ ಕುರಿತು ಕೇಂದ್ರ ಸರ್ಕಾರ ಯಾವುದೇ ಪರಿಹಾರ ಇನ್ನು ನೀಡಿಲ್ಲ. ನಾನು ಮತ್ತು ಸಚಿವ ದೇಶಪಾಂಡೆ ಅವರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪರಿಹಾರದ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೂ ಕೇಂದ್ರ ಸರ್ಕಾರದಿಂದ ಲಿಖಿತ ಉತ್ತರ ಬಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್ ದರ 82 ರೂ. – ಪಾಕಿಸ್ತಾನ, ಅಮೆರಿಕ, ಶ್ರೀಲಂಕಾದಲ್ಲಿ ಎಷ್ಟು?

  • ಸದ್ಯದಲ್ಲೇ ತೈಲ ದರ ಮತ್ತಷ್ಟು ಏರಿಕೆ: ಬೆಲೆ ಏರುತ್ತಿರುವುದು ಯಾಕೆ? ರಾಜ್ಯ, ಕೇಂದ್ರದ ಪಾಲು ಎಷ್ಟು? ದರ ಇಳಿಕೆಯಾಗುತ್ತಾ?

    ಸದ್ಯದಲ್ಲೇ ತೈಲ ದರ ಮತ್ತಷ್ಟು ಏರಿಕೆ: ಬೆಲೆ ಏರುತ್ತಿರುವುದು ಯಾಕೆ? ರಾಜ್ಯ, ಕೇಂದ್ರದ ಪಾಲು ಎಷ್ಟು? ದರ ಇಳಿಕೆಯಾಗುತ್ತಾ?

    ನವದೆಹಲಿ: ಈಗಾಗಲೇ ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿ ಆಗಿದೆ. ಈ ಮಧ್ಯೆ ಮತ್ತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚುತ್ತಲೇ ಇದ್ದು, ಕೆಲದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಗೆ 3ರಿಂದ 4 ರೂಪಾಯಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರಿಂದ ಮೇ 14ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಆಗಿರಲಿಲ್ಲ. ಈಗ ಪ್ರತಿ ದಿನ ಹೆಚ್ಚಾಗುತ್ತಿದ್ದು, ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 78.12 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 69.25 ರೂ. ಇದೆ.

    2 ವರ್ಷದ ಹಿಂದೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 40 ಡಾಲರ್(ಅಂದಾಜು 2,700 ರೂ.) ಇತ್ತು. ಆದರೆ ಈಗ ದುಪ್ಪಟ್ಟು ಆಗಿದ್ದು 79 ಡಾಲರ್(ಅಂದಾಜು 5,300 ರೂ.) ಆಗಿದೆ.

    ಬೆಲೆ ಏರಿಕೆ ಆಗುತ್ತಿರೋದು ಯಾಕೆ?
    ಈ ಹಿಂದೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ(ಒಪೆಕ್) ನಡುವೆ ಶೀತಲ ಸಮರವಿತ್ತು. ಹೀಗಾಗಿ ಈ ರಾಷ್ಟ್ರಗಳು ತೈಲ ಉತ್ಪಾದನೆಗೆ ಯಾವುದೇ ಮಿತಿ ಹಾಕಿರಲಿಲ್ಲ. ಆದರೆ 2017ರಲ್ಲಿ ಈ ರಾಷ್ಟ್ರಗಳು ಉತ್ಪಾದನೆಗೆ ಮಿತಿ ಹಾಕಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿನವೂ ಏರಿಕೆಯಾಗುತ್ತಿದೆ. ಎಸ್‍ಆಂಡ್‍ಪಿ ಗ್ಲೋಬಲ್ ಪ್ಯಾಂಟ್ ಅಧ್ಯಯನದ ಪ್ರಕಾರ ತೈಲ ಉತ್ಪಾದಿಸುವ 14 ದೇಶಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಈ ಹಿಂದೆ ಪ್ರತಿದಿನ 32 ದಶಲಕ್ಷ ಬ್ಯಾರೆಲ್ ಉತ್ಪಾದಿಸುತ್ತಿದ್ದರೆ ಏಪ್ರಿಲ್ ನಲ್ಲಿ 1.40 ದಶಲಕ್ಷ ಕಡಿಮೆಯಾಗಿದೆ. ವಿಶ್ವದೆಲ್ಲೆಡೆ ಭಾರೀ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಪೆಕ್ ರಾಷ್ಟ್ರಗಳು ಜೂನ್ 22 ರಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ವೇಳೆ ತೈಲ ಉತ್ಪಾನೆಯ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ಕರ್ನಾಟಕದಲ್ಲಿ ಯಾರ ಪಾಲು ಎಷ್ಟು?
    ದಿನಕ್ಕೆ 30 ಲಕ್ಷ ಲೀಟರ್ ಪೆಟ್ರೋಲ್ ಬಳಕೆಯಾಗುತ್ತಿದ್ದು, ಪೆಟ್ರೋಲ್‍ನಲ್ಲಿ 50% ಮತ್ತು ಡೀಸೆಲ್‍ನಲ್ಲಿ 40% ಹಣವನ್ನು ತೆರಿಗೆ, ಡೀಲರ್ ಕಮಿಷನ್ ರೂಪದಲ್ಲಿ ಗ್ರಾಹಕರು ಪಾವತಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮೇ 21 ರಂದು ಲೀಟರ್‍ಗೆ ಪೆಟ್ರೋಲ್ ದರ 77.70 ರೂ. ಇದ್ದರೆ ಇದರಲ್ಲಿ ಕೇಂದ್ರ ಸರ್ಕಾರದ ಅಬಕಾರಿ ತೆರಿಗೆ 19.48 ರೂ., ರಾಜ್ಯ ತೆರಿಗೆ 23.31 ರೂ. ಇದೆ. ಡೀಸೆಲ್ ದರ ಪ್ರತಿ ಲೀಟರ್ ಗೆ 68.99 ರೂ. ಇದ್ದರೆ, ಕೇಂದ್ರ ಸರ್ಕಾರದ ಅಬಕಾರಿ ತೆರಿಗೆ 15.33 ರೂ., ರಾಜ್ಯ ತೆರಿಗೆ 13.10 ರೂ. ಇದೆ.

    ಪೆಟ್ರೋಲ್ ಜಿಎಸ್‍ಟಿಯಲ್ಲಿ ಬರಲ್ಲ:
    ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

    ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್ ಬರುತ್ತಾ?
    ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಇರುವ ಜಿಎಸ್‍ಟಿ ಮಂಡಳಿಯಲ್ಲಿ ಒಪ್ಪಿಗೆ ಸಿಕ್ಕಿದರೆ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು. ಈಗಾಗಲೇ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಏಕರೂಪದ ದರ ವಿಧಿಸಬಹುದು ಎಂದು ಹೇಳಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿದರೆ ಬೆಲೆ ಕಡಿಮೆಯಾಗಬಹುದು.  ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!

    ಈ ಹಿಂದೆ ರಾಜ್ಯಸಭೆಯಲ್ಲಿ ಮಾಜಿ ಹಣಕಾಸು ಸಚಿವ ಪಿಚಿದಂಬರಂ ಮಾತನಾಡಿ, ಪ್ರಸ್ತುತ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿ ಅಡಿಯಲ್ಲಿ ತರಲು ಅಡ್ಡಿಯಾಗಿರುವುದು ಏನು? ಯಾವಾಗ ಜಿಎಸ್‍ಟಿ ಕೌನ್ಸಿಲ್ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಜಿಎಸ್‍ಟಿ ಕರಡು ನಿಯಮಗಳನ್ನು ರಚಿಸುವ ವೇಳೆ ಯುಪಿಎ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‍ಟಿ ವ್ಯಾಪ್ತಿಯ ಒಳಗಡೆ ಸೇರಿಸಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹಾಳಾಗಬಹುದು ಎನ್ನುವ ಕಾರಣಕ್ಕೆ ಯುಪಿಎ ಸೇರಿಸಿರಲಿಲ್ಲ. ಆದರೆ ಈಗ ರಾಜ್ಯಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗುವ ಬಗ್ಗೆ ರಾಜ್ಯಗಳು ಶೀಘ್ರ ಅಥವಾ ನಂತರವಾದರೂ ಒಪ್ಪಿಗೆ ನೀಡಬಹುದು ಎನ್ನುವ ಆಶಾವಾದವನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸಲ್ಲ: ಸಿಎಂ ಸಿದ್ದರಾಮಯ್ಯ. ಯಾವ ರಾಜ್ಯದಲ್ಲಿ ಎಷ್ಟು ತೆರಿಗೆಯಿದೆ?

    ಬೆಲೆ ಯಾಕೆ ಜಾಸ್ತಿ? ಕಡಿಮೆಯಾಗುತ್ತಾ?
    ಪ್ರವೇಶ ತೆರಿಗೆ, ವ್ಯಾಟ್, ಅಬಕಾರಿ ಸುಂಕ, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮಿಷನ್ ಸೇರಿ ಪೆಟ್ರೋಲ್, ಡೀಸೆಲ್ ದರ ನಿಗದಿಯಾಗುತ್ತದೆ. ನಿರಂತರ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ತೈಲ ದರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಶೀಘ್ರವೇ ಪರಿಹಾರವನ್ನು ಕಂಡುಕೊಳ್ಳಲಿದೆ ಎಂದು ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೆ ರಾಜ್ಯದಲ್ಲಿ ಬರಲಿರುವ ಹೊಸ ಸರ್ಕಾರವೂ ವ್ಯಾಟ್ ತೆರಿಗೆಯನ್ನು ಇಳಿಸಿದರೆ ತೈಲ ಬೆಲೆ ಸ್ವಲ್ಪ ಇಳಿಕೆಯಾಗಬಹುದು. ಇದನ್ನೂ ಓದಿ: ಭಾರತಕ್ಕೆ ಅಮೆರಿಕದಿಂದ ಇದೇ ಮೊದಲ ಬಾರಿಗೆ ಕಚ್ಚಾತೈಲ ಬರುತ್ತಿರೋದು ಯಾಕೆ?

     

     

  • ಪಕೋಡಾ ವ್ಯಾಪಾರಿಯ ನಿರ್ಲಕ್ಷ್ಯಕ್ಕೆ ಬಾಲಕಿಯ ಕಾಲು ಸುಟ್ಟೇ ಹೋಯ್ತು!

    ಪಕೋಡಾ ವ್ಯಾಪಾರಿಯ ನಿರ್ಲಕ್ಷ್ಯಕ್ಕೆ ಬಾಲಕಿಯ ಕಾಲು ಸುಟ್ಟೇ ಹೋಯ್ತು!

    ಮಂಗಳೂರು: ರಸ್ತೆ ಬದಿ ಪಕೋಡಾ ವ್ಯಾಪಾರಿಯೊಬ್ಬಳು ಕಾದ ಎಣ್ಣೆಯನ್ನು ಸುರಿದ ಪರಿಣಾಮ ಬಾಲಕಿಯ ಬಲಗಾಲು ಸುಟ್ಟು ಹೋಗಿರುವ ಅಮಾನವೀಯ ಘಟನೆ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ನಡೆದಿದೆ.

    14 ವರ್ಷದ ಅಮಂಡಾ ಗಾಯಗೊಳಗಾದ ಬಾಲಕಿ. ಭಾನುವಾರ ಮಧ್ಯಾಹ್ನ ಅಮಂಡಾ ತನ್ನ ತಂದೆ ವಿಕ್ಟರ್ ಜೊತೆ ಮಾರ್ಕೆಟ್ ನಲ್ಲಿ ಹಣ್ಣು ಹಂಪಲು ತೆಗೆದುಕೊಂಡು ಹಿಂದಿರುಗುತ್ತಿದ್ದಳು. ಈ ವೇಳೆ ರಸ್ತೆ ಬದಿ ಪಕೋಡಾ ಮಾಡುತ್ತಿದ್ದ ಮಹಿಳೆ ಏಕಾಏಕಿ ಕಾದ ಬಿಸಿ ಎಣ್ಣೆಯನ್ನು ನಿರ್ಲಕ್ಷ್ಯ ದಿಂದ ಸುರಿದಿದ್ದಾಳೆ.

    ಅಮಂಡಾ ಬಲಗಾಲಿಗೆ ಕಾದ ಎಣ್ಣೆ ಬಿದ್ದ ಪರಿಣಾಮ ಕಾಲು ಸಂಪೂರ್ಣ ಸುಟ್ಟು ಹೋಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಪಕೋಡಾ ವ್ಯಾಪಾರಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದರಿಂದ ಆಕೆಯ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ತಂದೆ ವಿಕ್ಟರ್ ದೂರು ನೀಡಿದ್ದಾರೆ. ಬಾಲಕಿ ಅಮಂಡಾ ಮಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು ಫೆ. 19ರಿಂದ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ.

    ಈ ಬಗ್ಗೆ ಬಾಲಕಿ ತಂದೆ ವಿಕ್ಟರ್ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಗೆ ದೂರು ನೀಡಿದ್ದು, ಮಾರ್ಕೆಟ್ ನಲ್ಲಿ ರಸ್ತೆ ಬದಿ ಪಕೋಡಾ ಕಾಯಿಸುವವರನ್ನು ನಿಯಂತ್ರಿಸಿ ಮಗಳಿಗಾದ ಅನಾಹುತ ಬೇರೆಯವರಿಗೆ ಆಗದಂತೆ ನೋಡಿಕೊಳ್ಳಲು ಮನವಿ ಮಾಡಿದ್ದಾರೆ.

     

  • ಕುದಿಯುತ್ತಿರುವ ಎಣ್ಣೆಯಿಂದ ಕಜ್ಜಾಯವನ್ನ ಬರಿಗೈಯಲ್ಲಿ ತೆಗೆದ ಅರ್ಚಕ!

    ಕುದಿಯುತ್ತಿರುವ ಎಣ್ಣೆಯಿಂದ ಕಜ್ಜಾಯವನ್ನ ಬರಿಗೈಯಲ್ಲಿ ತೆಗೆದ ಅರ್ಚಕ!

    ಚಾಮರಾಜನಗರ: ಅರ್ಚಕರೊಬ್ಬರು ಕುದಿಯುತ್ತಿರುವ ಎಣ್ಣೆಯಲ್ಲಿ ಬೇಯುತ್ತಿರುವ ಕಜ್ಜಾಯವನ್ನು ಬರಿಗೈಯಲ್ಲಿ ತೆಗೆದಿದ್ದಾರೆ.

    ಈ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅರ್ಚಕ ಕುದಿಯುತ್ತಿರುವ ಎಣ್ಣೆಯಲ್ಲಿ ಬೇಯುತ್ತಿರುವ ಕಜ್ಜಾಯವನ್ನು ಬರಿಗೈಯಲ್ಲಿ ತೆಗೆದು ಪ್ರಸಾದ ಎಂದು ಹೇಳಿ ಭಕ್ತರಿಗೆ ನೀಡುತ್ತಾರೆ.

    ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಈ ಆಚರಣೆ ನಡೆಯುತ್ತಿದ್ದು, ಇಂದು ಮುಂಜಾನೆ ಕೂಡ ನಡೆದಿದೆ.

    ಸಿದ್ದಪ್ಪಾಜಿಯ ಈ ಆಚರಣೆಯನ್ನು ಎಲ್ಲಾ ಧರ್ಮದವರು ಸೇರಿ ಆಚರಿಸುತ್ತಾರೆ. ಕಂಡಾಯ ಹೊತ್ತ ಅರ್ಚಕನಿಂದ ನಡೆದಿದ್ದು, ಇದನ್ನು ವೀಕ್ಷಿಸಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಸಿದ್ದಪ್ಪಾಜಿ ಮೆರವಣಿಗೆ ರಾತ್ರಿ ಇಡೀ ಗ್ರಾಮದಲ್ಲಿ ನಡೆಯಲಿದೆ.

  • ಗುಡ್ ನ್ಯೂಸ್, 2 ರೂ. ಇಳಿಕೆಯಾಗುತ್ತೆ ಪೆಟ್ರೋಲ್, ಡೀಸೆಲ್ ದರ

    ಗುಡ್ ನ್ಯೂಸ್, 2 ರೂ. ಇಳಿಕೆಯಾಗುತ್ತೆ ಪೆಟ್ರೋಲ್, ಡೀಸೆಲ್ ದರ

    ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತ ಗೊಳಿಸಿದೆ. ಹೀಗಾಗಿ ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ 2 ರೂ. ಇಳಿಕೆಯಾಗಲಿದೆ.

    ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಇಸಿ)ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

    ಅಬಕಾರಿ ಸುಂಕ ಕಡಿತಗೊಳಿಸಿದ್ದರಿಂದ ಈ ವರ್ಷ 26 ಸಾವಿರ ಕೋಟಿ ರೂ. ಹೊರೆ ಸರ್ಕಾರಕ್ಕೆ ಬೀಳಲಿದೆ. ಈ ಹಣಕಾಸು ವರ್ಷದಲ್ಲಿ 13 ಸಾವಿರ ಕೋಟಿ ರೂ. ಹೊರೆ ಬೀಳಲಿದೆ ಎಂದು ಹೇಳಿದೆ.

    ಪೆಟ್ರೋಲ್ ಬೆಲೆಯಲ್ಲಿ ಯಾರಿಗೆ ಎಷ್ಟು ಪಾಲು?
    ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ಸೆಪ್ಟೆಂಬರ್ 13 ರಂದು 70.38 ರೂ. ಇತ್ತು. ಇದರಲ್ಲಿ 30.70 ರೂ. ಡೀಲರ್ ಶುಲ್ಕ, 21.48 ರೂ. ಅಬಕಾರಿ ಸುಂಕ 3.24 ರೂ. ಡೀಲರ್ ಕಮಿಷನ್, 14.96 ರೂ. ವ್ಯಾಟ್ ತೆರಿಗೆ ಇದೆ.

    ಡೀಸೆಲ್ ಬೆಲೆಯಲ್ಲಿ ಯಾರಿಗೆ ಎಷ್ಟು ಪಾಲು?
    ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಗೆ ಸೆಪ್ಟೆಂಬರ್ 13 ರಂದು 58.72 ರೂ.ಇತ್ತು. ಇದರಲ್ಲಿ 30.54 ರೂ. ಡೀಲರ್ ಶುಲ್ಕ, 17.33 ರೂ. ಅಬಕಾರಿ ಸುಂಕ 2.18 ರೂ. ಡೀಲರ್ ಕಮಿಷನ್, 8.67 ರೂ. ವ್ಯಾಟ್ ತೆರಿಗೆ ಇದೆ.

    ಬೇರೆ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರ ಎಷ್ಟಿದೆ?
    ಪೆಟ್ರೋಲ್: ಭಾರತ(ದೆಹಲಿ) 70.38 ರೂ., ಪಾಕಿಸ್ತಾನ 40.82 ರೂ., ಬಾಂಗ್ಲಾದೇಶ 69.16 ರೂ., ಶ್ರೀಲಂಕಾ 49.80 ರೂ., ನೇಪಾಳ 61.88 ರೂ. ಇದೆ.

    ಡೀಸೆಲ್: ಭಾರತ(ದೆಹಲಿ)58.72 ರೂ., ಪಾಕಿಸ್ತಾನ 47.15 ರೂ., ಬಾಂಗ್ಲಾದೇಶ 52.27 ರೂ., ಶ್ರೀಲಂಕಾ 40.43 ರೂ., ನೇಪಾಳ 46.72 ರೂ. ಇದೆ.

    14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್: ಭಾರತ 487 ರೂ., ಪಾಕಿಸ್ತಾನ 1081.32 ರೂ., ಬಾಂಗ್ಲಾದೇಶ 639.50 ರೂ., ಶ್ರೀಲಂಕಾ 638.68 ರೂ., ನೇಪಾಳ 836.62 ರೂ. ಇದೆ.

    ಪೆಟ್ರೋಲ್ ಜಿಎಸ್‍ಟಿ ಅಡಿ ಬರುತ್ತಾ?
    ಅಡುಗೆ ಅನಿಲ (ಎಲ್‍ಪಿಜಿ), ಸೀಮೆಎಣ್ಣೆ, ನಾಫ್ತಾ ಗಳಿಗೆ ಜಿಎಸ್‍ಟಿ ಅನ್ವಯವಾಗುತ್ತಿದೆ. ಆದರೆ ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

    ಒಂದು ವೇಳೆ ಪೆಟ್ರೋಲ್ ಜಿಎಸ್‍ಟಿ ಅಡಿ ಬಂದರೆ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆಯಾಗುತ್ತದೆ. ಆದರೆ ಆದಾಯಕ್ಕೆ ಭಾರೀ ಹೊಡೆತ ಬೀಳುವ ಕಾರಣ ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಲು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿಲ್ಲ.

    ಬೆಲೆ ಕಡಿಮೆಯಾಗಬಾರದು:
    ಪೆಟ್ರೋಲ್ ಬೆಲೆ ಕಡಿಮೆಯಾಗಬಾರದು ಎನ್ನುವ ವಾದವನ್ನು ಕೆಲವರು ಮಂಡಿಸುತ್ತಿದ್ದಾರೆ. ಒಂದು ವೇಳೆ ಭಾರೀ ಇಳಿಕೆಯಾದರೆ ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿಯಬಹುದು. ಇದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುವುದಲ್ಲದೇ ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಹೀಗಾಗಿ ಬೆಲೆ ಇಳಿಕೆಯಾಗಬಾರದು ಎನ್ನುವ ವಾದವನ್ನು ಕೆಲ ಆರ್ಥಿಕ ತಜ್ಞರು ಮಂಡಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವ ಬದಲು ಸಾರ್ವಜನಿಕ ಸಾರಿಗೆಯ ಟಿಕೆಟ್ ಬೆಲೆಯನ್ನು ಇಳಿಸುವುದು ಉತ್ತಮ. ಇದರಿಂದಾಗಿ ಜನರು ಹೆಚ್ಚು ಸಾರ್ವಜನಿಕ ಸಾರಿಗೆ ಬಳಸುವಂತಾಗುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

    ತೈಲ ಬೆಲೆ ಏರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ಈಗ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದರೆ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜಿಎಸ್‍ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

  • ಮುಂದೆ ಇಳಿಕೆಯಾಗುತ್ತೆ, ದೇಶದೆಲ್ಲೆಡೆ ಏಕರೂಪದ ತೈಲ ದರ ನಿಗದಿಯಾಗಬೇಕಾದ್ರೆ ಜಿಎಸ್‍ಟಿ ವ್ಯಾಪ್ತಿಗೆ ತರಬೇಕು: ಪ್ರಧಾನ್

    ಮುಂದೆ ಇಳಿಕೆಯಾಗುತ್ತೆ, ದೇಶದೆಲ್ಲೆಡೆ ಏಕರೂಪದ ತೈಲ ದರ ನಿಗದಿಯಾಗಬೇಕಾದ್ರೆ ಜಿಎಸ್‍ಟಿ ವ್ಯಾಪ್ತಿಗೆ ತರಬೇಕು: ಪ್ರಧಾನ್

    ನವದೆಹಲಿ: ಅಮೆರಿಕವನ್ನು ಅಪ್ಪಳಿಸಿದ ಇರ್ಮಾ ಮತ್ತು ಹಾರ್ವೆ ಚಂಡಮಾರುತಗಳಿಂದ ತೈಲ ಬೆಲೆ ಏರಿಕೆಯಾಗಿದೆ ಎಂದು ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

    ಚಂಡಮಾರತುಗಳಿಂದಾಗಿ ತೈಲ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದ್ದು ಇದು ತಾತ್ಕಾಲಿಕ. ಆದರೆ ಜನರು ಭರಿಸಲಾಗದ ಮಟ್ಟಕ್ಕೆ ಏರಿಕೆ ಆಗಿಲ್ಲ. ಅಷ್ಟೇ ಅಲ್ಲದೇ ತೈಲ ಬೆಲೆಗಳ ನಿತ್ಯದ ಪರಿಷ್ಕರಣೆ ವಿಚಾರದಲ್ಲೂ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

    ಮುಂದಿನ ದಿನಗಳಲ್ಲಿ ತೈಲ ಬೆಲೆ ಕಡಿಮೆಯಾಗಲಿದೆ. ದೇಶದ ಎಲ್ಲ ನಗರಗಳಲ್ಲಿ ತೈಲ ಬೆಲೆ ಏಕರೂಪದಲ್ಲಿ ಇರಬೇಕಿದ್ದರೆ ಅದನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವುದೇ ಏಕೈಕ ಮಾರ್ಗ ಎಂದು ಅವರು ಹೇಳಿದರು.

    ತೈಲ ಬೆಲೆಯನ್ನು ಇಳಿಸಲು ಅಬಕಾರಿ ಸುಂಕವನ್ನು ಸರ್ಕಾರ ಕಡಿಮೆ ಮಾಡುತ್ತಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಬಕಾರಿ ಸುಂಕವನ್ನು ಕಡಿಮೆಗೊಳಿಸುವುದು ಹಣಕಾಸು ಸಚಿವಾಲಯಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದರು.

    ಪೆಟ್ರೋಲ್ ಬೆಲೆ ಮಂಗಳವಾರ 2014ರ ನಂತರದ ಗರಿಷ್ಠ ಮಟ್ಟಕ್ಕೇರಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ 71.50 ರೂ., ಮುಂಬೈಯಲ್ಲಿ 80 ರೂ., ಚೆನ್ನೈ 73 ರೂ. ದೆಹಲಿಯಲ್ಲಿ 70 ರೂ.ಗೆ ಏರಿಕೆಯಾಗಿತ್ತು. ಜುಲೈ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 7 ರೂ. ಏರಿಕೆಯಾಗಿದೆ.

    2014ರಿಂದ ಈವರೆಗೆ ಲೀಟರ್ ಪೆಟ್ರೋಲ್ ಮೇಲೆ 11.77 ರೂ. ಮತ್ತು ಡೀಸೆಲ್ ಮೇಲೆ 13.47 ರೂ. ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೇರಿದೆ. ಇದರಿಂದ 99,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

  • ಇನ್ನು ಐದು ವರ್ಷದಲ್ಲಿ  ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ನವದೆಹಲಿ: ಈ ಸುದ್ದಿ ಓದಿದ್ರೆ ನಿಮಗೆ ಶಾಕ್ ಮತ್ತು ಸಂತೋಷ ಎರಡೂ ಆಗಬಹುದು. ಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ಬೆಲೆ ಭಾರೀ ಇಳಿಕೆಯಾಗಲಿದ್ದು, 2022ರ ವೇಳೆಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 30 ರೂಪಾಯಿಗಿಂತ ಕಡಿಮೆ ಆಗಲಿದೆ ಎಂದು ಅಮೆರಿಕದ ಖ್ಯಾತ ಉದ್ಯಮಿ ಟೋನಿ ಸೆಬಾ ಭವಿಷ್ಯ ನುಡಿದಿದ್ದಾರೆ.

    ಜಗತ್ತಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆಯಾಗಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಲಿದೆ ಎಂದು ಅವರು ಊಹಿಸಿದ್ದಾರೆ.

    ಕಡಿಮೆ ಹೇಗೆ ಆಗುತ್ತೆ?
    ಮುಂದಿನ ವರ್ಷ ಗಳಲ್ಲಿ ಸೆಲ್ಫ್ ಡ್ರೈವ್ ಕಾರುಗಳಿಂದಾಗಿ ತೈಲದ ಬಳಕೆ ಗಣನೀಯವಾಗಿ ಇಳಿಕೆಯಾಗಲಿದೆ. 10 ವರ್ಷದ ಒಳಗಡೆ ಒಂದು ಬ್ಯಾರೆಲ್ ತೈಲದ ಬೆಲೆ 25 ಡಾಲರ್ ತಲುಪಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಮುಂದೆ ಈಗ ಬಳಕೆಯಲ್ಲಿರುವ ಹಳೇ ಮಾದರಿಯ ಕಾರುಗಳನ್ನು ಬಳಸುವುದಿಲ್ಲ. ಸೆಲ್ಫ್ ಡ್ರೈವ್ ಎಲೆಕ್ಟ್ರಿಕ್ ಕಾರುಗಳು ಅತಿ ಹೆಚ್ಚು ಪ್ರಮಾಣದಲ್ಲಿ ರಸ್ತೆಗೆ ಇಳಿಯಲಿದೆ. ಈ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಕಡಿಮೆ ಇರಲಿದೆ ಎಂದು ಅವರು ಹೇಳಿದ್ದಾರೆ.

    2030ರ ವೇಳೆಗೆ ಶೇ.95ರಷ್ಟು ಜನ ಸ್ವಂತ ಬಳಕೆಗಾಗಿ ಕಾರನ್ನು ಇಟ್ಟುಕೊಳ್ಳುವುದಿಲ್ಲ. ಇದರಿಂದಾಗಿ ಆಟೋಮೊಬೈಲ್ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಎಲೆಕ್ಟ್ರಿಕ್ ಕಾರುಗಳು ರಸ್ತೆಗೆ ಇಳಿದ ಬಳಿಕ ಜಾಗತಿಕ ತೈಲ ಉದ್ಯಮ ಕುಸಿದು ಬೀಳಲಿದೆ ಎಂದು ಟೋನಿ ಸೆಬಾ ಭವಿಷ್ಯ ನುಡಿದಿದ್ದಾರೆ.

    ಯಾರು ಈ ಟೋನಿ ಸೆಬಾ?
    ಅಮೆರಿಕದ ಸಿಲಿಕಾನ್ ವ್ಯಾಲಿಯ ಉದ್ಯಮಿಯಾಗಿರುವ ಟೋನಿ ಸೆಬಾ ಸ್ಟಾಂಡ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಮಸಾಚುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಿವಿಯಿಂದ ಕಂಪ್ಯೂಟರ್ ಎಂಜಿನಿಯರಿಂಗ್ ನಲ್ಲಿ ಬಿಎಸ್ ಪದವಿಯನ್ನು ಪಡೆದಿರುವ ಇವರು ಹಲವು ಪುಸ್ತಕ ಬರೆದಿದ್ದಾರೆ. ನೂರಕ್ಕೂ ಅಧಿಕ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದಾರೆ.

    ಸೆಬಾ ಅವರ ಮಾತನ್ನು ನಂಬಬೇಕೇ?
    ಮುಂದೆ ಸೌರಶಕ್ತಿಯ ಬಳಕೆ ಹೆಚ್ಚಾಗಲಿದೆ. ಅಷ್ಟೇ ಅಲ್ಲದೇ ಕಡಿಮೆ ದರದಲ್ಲಿ ಸೋಲಾರ್‍ನಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಈ ಹಿಂದೆ ಟೋನಿ ಸೆಬಾ ಹೇಳಿದ್ದು ಈಗ ನಿಜವಾಗಿದೆ.

    ಭವಿಷ್ಯ ನಿಜವಾಗುತ್ತಾ?
    ಈಗಾಗಲೇ ಹಲವಾರು ಕಂಪೆನಿಗಳು ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿ ಪಡಿಸುತ್ತಿವೆ. ಇದರ ಜೊತೆಗೆ ಗೂಗಲ್, ಆಪಲ್ ನಂತಹ ಟೆಕ್ ದಿಗ್ಗಜ ಕಂಪೆನಿಗಳು ಸೆಲ್ಫ್ ಡ್ರೈವಿಂಗ್ ಕಾರು ತಯಾರಿಕೆಗೆ ಉತ್ತೇಜನ ನೀಡಲು ಕಾರು ತಯಾರಕಾ ಕಂಪೆನಿಗಳ ಜೊತೆ ಕೈ ಜೋಡಿಸಿವೆ. ಹೀಗಾಗಿ ಮುಂದಿನ ಕೆಲವೇ ವರ್ಷದಲ್ಲಿ ಎಲೆಕ್ಟ್ರಿಕ್ ಕಾರುಗಳು ರಸ್ತೆಯನ್ನು ಅಕ್ರಮಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ.

    ಭಾರತ ಸೇರಿದಂತೆ, ಯುರೋಪ್ ಖಂಡದ ಕೆಲ ದೇಶಗಳು 2030ರ ವೇಳೆಗೆ ಪೆಟ್ರೋಲ್ ಕಾರನ್ನು ನಿಷೇಧಿಸಲು ಮುಂದಾಗಿವೆ. ನಿಷೇಧದಿಂದಾಗಿ ಕಚ್ಚಾ ತೈಲದ ಆಮದು ಕಡಿಮೆಯಾಗಲಿದ್ದು, ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ. ಬೆಲೆ ಕಡಿಮೆಯಾದರೆ ಕಚ್ಚಾ ತೈಲದಿಂದಲೇ ಈಗ ದೇಶದ ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಅರಬ್ ದೇಶಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.

    ಮುಂದೆ ಶೇ.95ರಷ್ಟು ಜನ ಸ್ವಂತಕ್ಕಾಗಿ ಕಾರನ್ನು ಬಳಸುವುದಿಲ್ಲ ಎಂದು ಟೋನಿ ಸೆಬಾ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಈ ಮಾತು ನಿಜವಾಗಬಹುದು ಎನ್ನುತ್ತಾರೆ ಕೆಲ ಮಂದಿ. ಕ್ಯಾಬ್ ವ್ಯವಸ್ಥೆ ಆರಂಭಗೊಂಡ ಸಂದರ್ಭದಲ್ಲಿ ಸುರಕ್ಷತೆ, ಇಂಟರ್‍ನೆಟ್ ಇತ್ಯಾದಿ ವಿಚಾರಗಳನ್ನು ಹೇಳಿ ಈ ಉದ್ಯಮ ಬೇರೆ ಕಡೆ ಯಶಸ್ವಿಯಾದರೂ ಭಾರತದಲ್ಲಿ ಕಷ್ಟ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಮಹಾನಗರಗಳಲ್ಲಿ ಕ್ಯಾಬ್ ಗಳನ್ನೇ ಜನ ಹೆಚ್ಚು ಬಳಕೆ ಮಾಡುತ್ತಿದ್ದು, ಉದ್ಯಮ ಯಶಸ್ವಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನ ಕಾರು ಖರೀದಿಸದೇ ಪ್ರಯಾಣಕ್ಕಾಗಿ ಕ್ಯಾಬ್ ಕಾರುಗಳನ್ನೇ ಅವಲಂಬಿಸಿದರೆ ಆಶ್ಚರ್ಯ ಏನಿಲ್ಲ ಅಂತಾರೆ ಕೆಲವರು.

    ಭಾರತದಲ್ಲಿ ಪೆಟ್ರೋಲ್ ಬೆಲೆ ನಿಗದಿಯಾಗುವುದು ಹೇಗೆ?
    ಡಾಲರ್, ರೂಪಾಯಿ ವಿನಿಮಯ ಬೆಲೆ, ಅಬಕಾರಿ ಸುಂಕ, ವ್ಯಾಟ್, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮೀಷನ್ ಲೆಕ್ಕ ಹಾಕಿ ಪೆಟ್ರೋಲ್ ದರ ಈಗ ನಿಗದಿಯಾಗುತ್ತದೆ.

    ಇದನ್ನೂ ಓದಿ: ತನ್ನ ಈ ವಿಶಿಷ್ಟ ಸೇವೆಯಿಂದ ದೇಶದ ಗಮನ ಸೆಳೆದ ಮಂಗ್ಳೂರಿನ ಕ್ಯಾಬ್ ಡ್ರೈವರ್

    ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    [Elite_video_player id=”1″]

  • ಕುಡಿಯೋ ಹಾಲಿಗೆ ಬೆರೆಸ್ತಾರೆ ಎಣ್ಣೆ, ಯೂರಿಯಾ – ಅಥಣಿ, ರಾಯಬಾಗದಲ್ಲಿ ಭಾರೀ ದಂಧೆ

    ಬೆಳಗಾವಿ: ಹಾಲು ಕುಡಿದವರೇ ಬದಕಲ್ಲ, ಇನ್ನು ವಿಷ ಕುಡಿದವರು ಬದುಕ್ತಾರಾ? ಅನ್ನೋ ಗಾದೆ ಮಾತಿದೆ. ಬೆಳಗಾವಿ ಜಿಲ್ಲೆಯ ನಗರ ಪ್ರದೇಶದ ಜನ ಹಾಲಿನ ಹೆಸರಲ್ಲಿ ವಿಷವನ್ನೇ ಕುಡೀತಿದ್ದಾರೆ.

    ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರೋ ಹಾಲಿಗೆ ರಾಸಾಯನಿಕ ಬೆರೆಸುತ್ತಿದ್ದು, ಬೆಳಗಾವಿಯ ಅಥಣಿ ಮತ್ತು ರಾಯಬಾಗ ತಾಲೂಕಿನ ಹಾಲಿನ ದಂಧೆಯ ಬಗ್ಗೆ ಜನರಿಗೆ ಆತಂಕ ಶುರುವಾಗಿದೆ. ಇದ್ರಿಂದ ಭಯಾನಕ ರೋಗಗಳ ಭೀತಿನೂ ಎದುರಾಗಿದೆ.

    ರೈತರಿಂದ ಹಾಲು ಪಡೆಯೋ ಡೈರಿಯವರು, ಹಾಲಿನ ಫ್ಯಾಟ್ ಹಾಗೂ ಡಿಗ್ರಿ ಹೆಚ್ಚಳ ಮಾಡೋಕೆ ಇಂಥ ಅಕ್ರಮ ಹಾದಿ ಹಿಡಿದಿದ್ದಾರೆ. 50 ಲೀಟರ್ ಹಾಲಿಗೆ ಎಣ್ಣೆ, ಯೂರಿಯಾ ಸೇರಿದಂತೆ ವಿಷಪೂರಿತ ಕೆಮಿಕಲ್ ಮಿಕ್ಸ್ ಮಾಡಿ ಅದನ್ನ 100 ಲೀಟರ್‍ಗೆ ಹೆಚ್ಚಿಸ್ತಾರೆ. ಬಳಿಕ ಗ್ರಾಹಕರಿಗೆ ಹಾಲನ್ನ ಮಾರಾಟ ಮಾಡ್ತಿದ್ದಾರೆ. ಈ ಹಾಲಾಹಲದ ದಂಧೆ ಹಿಂದೆ ಭ್ರಷ್ಟ ಅಧಿಕಾರಿಗಳ ಕುಮ್ಮಕ್ಕೂ ಇದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

    ಶುಭ್ರ, ಶುದ್ಧ ಹಾಲಿನಲ್ಲಿ ಪಾತಕಿಗಳು ವಿಷ ತುಂಬಿ ಅಕ್ರಮವಾಗಿ ಲಾಭ ಪಡೀತಿದ್ದಾರೆ. ಈ ಮಿಲ್ಕ್ ಮಾಫಿಯಾ ಹೀಗೆ ಮುಂದುವರಿದ್ರೆ ನಗರದ ಜನ ಆಸ್ಪತ್ರೆಗಳಲ್ಲಿ ಸಾಲು ನಿಲ್ಲೋದು ತಪ್ಪಲ್ಲ.

  • ತೈಲ ಸೋರಿಕೆಯಿಂದ ತತ್ತರಿಸಿದ ಚೆನ್ನೈ ಬೀಚ್ – ಜಲಚರಗಳ ಸಾವು, ಸಾವಿರಾರು ಜನರಿಂದ ಶುದ್ಧೀಕರಣ

    ಚೆನ್ನೈ: ಶನಿವಾರದಂದು ಚೆನ್ನೈನ ಕಾಮರಾಜರ್ ಬಂದರಿನಲ್ಲಿ ಎರಡು ಹಡಗುಗಳ ಮಧ್ಯೆ ಸಂಭವಿಸಿದ ಅಪಘಾತದಿಂದ ಸುಮಾರು 15-20 ಟನ್‍ನಷ್ಟು ತೈಲ ಸಮುದ್ರ ಸೇರಿದ್ದು, ಕಡಲತೀರದ ಸುಮಾರು 30 ಕಿಮೀ ಪ್ರದೇಶ ಹಾನಿಗೊಳಗಾಗಿದೆ.

    ಈ ಎರಡು ಹಡಗುಗಳು ಪೆಟ್ರೋಲಿಯಂ ಆಯಿಲ್ ಲೂಬ್ರಿಕೆಂಟ್ ಮತ್ತು ಎಲ್‍ಪಿಜಿಯನ್ನು ಹೊತ್ತು ಸಾಗುತ್ತಿದ್ದವು ಎಂದು ವರದಿಯಾಗಿದೆ. ಸಮುದ್ರದ ಸರಿಸುಮಾರು 30 ಕಿಲೋಮೀಟರ್ ಉದ್ದ ನೀರಿನಲ್ಲಿ ತೈಲ ತೇಲುತ್ತಿದ್ದು ಆಮೆ, ಮೀನುಗಳು ಸಾವನ್ನಪ್ಪಿವೆ. ಪರಿಸ್ಥಿತಿ ಗಂಭೀರವಾಗಿದ್ದು ಸಮುದ್ರದಲ್ಲಿರುವ ತೈಲ ಹೊರ ತೆಗೆಯಲು ಸಾವಿರಾರು ಜನ ಸಮುದ್ರಕ್ಕೆ ಇಳಿದಿದ್ದಾರೆ. ಸಮುದ್ರದ ನೀರಿನ ಮೇಲೆ ತೈಲ ತೇಲುತ್ತಿರೋದ್ರಿಂದ ನೂರಾರು ಹಡುಗುಗಳು ಕಾರ್ಯಸ್ಥಗಿತಗೊಳಿಸಿವೆ.ಯಂತ್ರಗಳಿಂದ ತೈಲವನ್ನು ಹೊರತೆಗೆಯುವುದು ವಿಫಲವಾದ ಹಿನ್ನೆಲೆಯಲ್ಲಿ ಸ್ವಯಂಸೇವಕರು ಕೈಯ್ಯಿಂದಲೇ ಕೆಸರನ್ನು ಹೊರತೆಗೆಯುತ್ತಿದ್ದಾರೆ.

    ಈ ಅವಘಡದ ಬಗ್ಗೆ ಮಾತನಾಡಿರೋ ತಮಿಳುನಾಡು ಮೀನುಗಾರಿಕಾ ಇಲಾಖೆಯ ಸಚಿವ ಜಯಕುಮಾರ್, 60 ಟನ್‍ನಷ್ಟು ಕೆಸರು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಮೀನುಗಾರರು, ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1500 ಮಂದಿ ಸ್ವಯಂಸೇವಕರು ಸಮುದ್ರದಿಂದ ತೈಲವನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದು, ಶೇ. 85ರಷ್ಟು ಕೆಲಸ ಮುಗಿಗಿದೆ. ಇನ್ನುಳಿದ 20 ಟನ್ ಕೆಸರನ್ನು ಮುಂದಿನ ಎರಡು ದಿನಗಳಲ್ಲಿ ಹೊರತೆಗೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

    ತೈಲ ಸೋರಿಕೆಯ ವಿಷಯ ತಿಳಿದು ಜನರು ಮಾರುಕಟ್ಟೆಯಲ್ಲಿ ಮೀನು ಕೊಳ್ಳಲು ಹಿಂಜರಿಯುತ್ತಿದ್ದು, ವ್ಯಾಪಾರಕ್ಕೂ ದೊಡ್ಡ ಹೊಡೆತ ಬಿದ್ದಿದೆ.