Tag: oil

  • ಜನ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ತಿಳಿದುಕೊಳ್ಳಬೇಕು: ಡಿವಿಎಸ್

    ಜನ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ತಿಳಿದುಕೊಳ್ಳಬೇಕು: ಡಿವಿಎಸ್

    ಮಡಿಕೇರಿ: ಜನ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ.

    ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿವಿ, ತೆರಿಗೆ ಮತ್ತು ಸೆಸ್ ಮಧ್ಯೆ ಇರುವ ವ್ಯತ್ಯಾಸಗಳನ್ನು ಜನರು ಮೊದಲು ತಿಳಿದುಕೊಳ್ಳಬೇಕು. ತೆರಿಗೆ ಹಣವನ್ನು ಯಾವುದಕ್ಕೆ ಬೇಕಾದರೂ ಬಳಕೆ ಮಾಡಬಹುದು. ಅದರೆ ಸೆಸ್ ಹಣವನ್ನು ಯಾವುದಕ್ಕೆ ಸಂಗ್ರಹ ಮಾಡುತ್ತಿರೋ ಅದಕ್ಕೆ ಮಾತ್ರ ಅ ಹಣವನ್ನು ಬಳಕೆಮಾಡಲಾಗುತ್ತದೆ. 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಕೊಡುತ್ತಿರುವುದು ಈ ಸೆಸ್ ಹಣ ಸಂಗ್ರಹದಿಂದಲೇ. ಕೃಷಿ ಸೆಸ್ ಅನ್ನು ಕೃಷಿ ಕಾರ್ಯಗಳಿಗೆ ಮಾತ್ರ ಬಳಸಲಾಗುತ್ತಿದೆ. ಇದನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

    ಇನ್ನೂ ರಾಜ್ಯ ಸರ್ಕಾರ ಡಕೋಟ ಎಕ್ಸ್‍ಪ್ರೆಸ್ ಎಂದಿದ್ದ ಸಿದ್ದರಾಮಯ್ಯ ಕುರಿತು ಮಾತಾನಾಡಿದ ಡಿವಿ ಸಿದ್ದರಾಮಯ್ಯ ಅವರಿಗೆ ಶಬ್ಧ ಪ್ರಯೋಗ ಗೊತ್ತಿಲ್ಲ ಅವರು ಹತ್ತು ಬಜೆಟ್ ಗಳನ್ನು ಮಂಡನೆ ಮಾಡಿದವರು ಆದರೂ ಅವರಿಗೆ ಪದ ಪ್ರಯೋಗ ಗೊತ್ತಿಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

    ತೆರಿಗೆ ವಸ್ತುವಿನ ಮೇಲೆ ತೆರಿಗೆ ಹಾಕಿದರೆ ಆ ವಸ್ತುವಿನಿಂದ ಬಂದ ತೆರಿಗೆಯನ್ನು ಯಾವುದೇ ಯೋಜನೆಗಳಿಗೆ ಬಳಸಬಹುದು. ಆದರೆ ಸೆಸ್ ಹಾಕಿದರೆ ಯಾವ ಉದ್ದೇಶವನ್ನು ಇಟ್ಟುಕೊಂಡು ಸೆಸ್ ಜಾರಿ ಆಗಿದೆಯೋ ಆ ಉದ್ದೇಶಕ್ಕೆ ಮಾತ್ರ ಬಳಕೆಯಾಗುತ್ತದೆ.

  • ಮತ್ತೆ ತೈಲ ಬೆಲೆ ಏರಿಕೆ ವಾಹನ ಸವಾರರ ಜೇಬಿಗೆ ಕತ್ತರಿ

    ಮತ್ತೆ ತೈಲ ಬೆಲೆ ಏರಿಕೆ ವಾಹನ ಸವಾರರ ಜೇಬಿಗೆ ಕತ್ತರಿ

    ಬೆಂಗಳೂರು: ಪ್ರತಿದಿನ ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರಿಗೆ ಇಂದು ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕಾಣುವುದರ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗಿದೆ.

    ಇಂದು ಪೆಟ್ರೋಲ್ ದರ ಲೀಟರ್ ಗೆ 89.53 ರೂಪಾಯಿ ಆಗಿದೆ. ಬುಧವಾರ ಲೀಟರ್‍ ಗೆ 89.21 ರೂಪಾಯಿ ಇತ್ತು. ಈ ಮೂಲಕ ಬರೋಬ್ಬರಿ 23 ಪೈಸೆ ಹೆಚ್ಚಳ ಕಂಡಿದೆ. ಹಾಗೆ ಡೀಸೆಲ್ ದರವೂ ಮತ್ತೆ ಹೆಚ್ಚಳ ಕಂಡು ಬಂದಿದ್ದು ಡೀಸೆಲ್ ಲೀಟರ್ ಗೆ ಇಂದು 81.44 ರೂಪಾಯಿ ಆಗಿದೆ. ನಿನ್ನೆ ಡೀಸೆಲ್ 81.10 ರೂಪಾಯಿ ಇತ್ತು. ಇದೀಗ 34 ಪೈಸೆ ಡೀಸೆಲ್ ದರ ಹೆಚ್ಚಳವಾಗುದರೊಂದಿಗೆ ಮತ್ತಷ್ಟೂ ದುಬಾರಿಯಾಗಿದೆ ನಿತ್ಯ ಹೀಗೆ ಬೆಲೆ ಏರಿಕೆ ಕಾಣುತ್ತಿದರೆ ಇತ್ತ ವಾಹನ ಸವಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಪೆಟ್ರೋಲ್ ಡೀಸೆಲ್‍ನೊಂದಿಗೆ ಅಡುಗೆ ಅನಿಲದ ಬೆಲೆಯಲ್ಲೂ ಏರಿಕೆ ಕಂಡಿದು ನಿನ್ನೆ 697 ರೂಪಾಯಿ ಇದ್ದ ಬೆಲೆ ಇಂದು 722 ರೂಪಾಯಿಯೊಂದಿಗೆ 25 ರೂಪಾಯಿ ಹೆಚ್ಚಳಗೊಂಡಿದೆ.

    ಇನ್ನೂ ಪ್ರತಿ ದಿನ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿ ಜತೆ ದರದ ಬಗ್ಗೆ ಗ್ರಾಹಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ನಾವು ವಾಹನ ಒಡಿಸುದಾದರೂ ಹೇಗೆ ಎಂಬ ಪ್ರಶ್ನೆ ಸವಾರರಲ್ಲಿ ಕಾಡ ತೊಡಗಿದೆ.

  • ಭಾರತದಲ್ಲಿ 93 ರೂ., ಶ್ರೀಲಂಕಾದಲ್ಲಿ 51 ರೂ. – ಪೆಟ್ರೋಲ್ ಬೆಲೆ ಏರಿಕೆಗೆ ಸ್ವಾಮಿ ಟೀಕೆ

    ಭಾರತದಲ್ಲಿ 93 ರೂ., ಶ್ರೀಲಂಕಾದಲ್ಲಿ 51 ರೂ. – ಪೆಟ್ರೋಲ್ ಬೆಲೆ ಏರಿಕೆಗೆ ಸ್ವಾಮಿ ಟೀಕೆ

    ನವದೆಹಲಿ: ಸ್ವಪಕ್ಷೀಯರು, ಎದುರಾಳಿಗಳು ಎನ್ನದೇ ತಮಗೆ ಸರಿ ಎನಿಸಿದ ವಿಷಯದ ಕುರಿತು ಧ್ವನಿ ಎತ್ತುವ ರಾಜ್ಯಸಭಾ ಸದಸ್ಯ ವಿ. ಸುಬ್ರಮಣಿಯನ್ ಸ್ವಾಮಿ, ಇದೀಗ ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ಕುರಿತು ತಮ್ಮದೇ ಶೈಲಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

     

    ಕೇಂದ್ರ ಸರ್ಕಾರ ಪ್ರತಿದಿನ ತೈಲ ಬೆಲೆ ಹೆಚ್ಚಳ ಮಾಡುತ್ತಿದ್ದರೆ. ಇತ್ತ ಸುಬ್ರಮಣಿಯನ್ ಸ್ವಾಮಿ ತೈಲ ಬೆಲೆ ಹೆಚ್ಚಳ ಕುರಿತು ತಮ್ಮದೇ ಶೈಲಿಯಲ್ಲಿ ಕೇಂದ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ. ಶ್ರೀರಾಮನ ತವರು ಭಾರತದಲ್ಲಿ ಲೀಟರ್ ಪೆಟ್ರೋಲ್ ದರ 93 ರೂಪಾಯಿ, ಸೀತೆಯ ತವರು ನೇಪಾಳದಲ್ಲಿ ಲೀಟರ್ ಪೆಟ್ರೋಲ್ ಬೆಲೆ 53 ರೂಪಾಯಿ, ರಾವಣನ ಲಂಕೆಯಲ್ಲಿ 51 ರೂಪಾಯಿ ಎಂದು ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.

    ಸ್ವಾಮಿಯ ಈ ಟ್ವೀಟ್‍ನಿಂದ ಕೆರಳಿರುವ ನೆಟ್ಟಿಗರು ಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲಂಕಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 161 ರೂಪಾಯಿಯಿದೆ. ನೇಪಾಳದಲ್ಲಿ 110 ರೂಪಾಯಿ ಇದೆ. ವಾಸ್ತವಾಂಶ ನೋಡಿ ಟ್ವೀಟ್ ಮಾಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

  • ಕೃಷಿ ಸೆಸ್‌ನಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಇಲ್ಲ

    ಕೃಷಿ ಸೆಸ್‌ನಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಇಲ್ಲ

    ನವದೆಹಲಿ: ಬಜೆಟ್‌ನಲ್ಲಿ ಪ್ರಸ್ತಾಪಗೊಂಡಿರುವ ಸೆಸ್‌ನಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಆಗುವುದಿಲ್ಲ, ಗ್ರಾಹಕರಿಗೆ ಹೊರೆ ಆಗುವುದಿಲ್ಲ ಈಗ ಇರುವಂತೆ ದರಗಳು ಇರಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

    ಅಡಿಷನಲ್ ಕಸ್ಟಮ್ ಡ್ಯೂಟಿ ಮತ್ತು ಅಬಕಾರಿ ಸುಂಕವನ್ನು ಸಮ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಹೀಗಾಗಿ ತೈಲ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ ಹಾಕುವುದಾಗಿ ತಿಳಿಸಿದ್ದಾರೆ.

    ಒಂದು ಲೀಟರ್‌ ಪೆಟ್ರೋಲ್‌ ಮೇಲೆ 2.5 ರೂ., ಡೀಸೆಲ್‌ ಮೇಲೆ 4 ರೂ. ಸೆಸ್‌ ವಿಧಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.  ಇದನ್ನು ಓದಿ: ಪೆಟ್ರೋಲ್ ಮೇಲೆ 2.5 ರೂ, ಡೀಸೆಲ್ ಮೇಲೆ 4 ರೂ. ಸೆಸ್

    ಪೆಟ್ರೋಲ್‌ ಮತ್ತು ಡೀಸೆಲ್‌ಗಳು ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಹೆಚ್ಚು ಆದಾಯವನ್ನು ತರುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಸೆಸ್‌ ವಿಧಿಸುತ್ತದೆ.

  • ಕುಡಿದ ಮತ್ತಿನಲ್ಲಿ ವಿರೋಧಿಗಳ ಮನೆಗೆ ಹೋದ ವ್ಯಕ್ತಿಗೆ ಬಿಸಿಬಿಸಿ ಎಣ್ಣೆ ಎರಚಿದ್ರು!

    ಕುಡಿದ ಮತ್ತಿನಲ್ಲಿ ವಿರೋಧಿಗಳ ಮನೆಗೆ ಹೋದ ವ್ಯಕ್ತಿಗೆ ಬಿಸಿಬಿಸಿ ಎಣ್ಣೆ ಎರಚಿದ್ರು!

    ಯಾದಗಿರಿ: ಕುಡಿದ ಮುತ್ತಿನಲ್ಲಿ ತನ್ನ ವಿರೋಧಿ ಬಣದ ಮದುವೆ ಮನೆಗೆ ಹೋದ ವ್ಯಕ್ತಿಯ ಮೇಲೆ ಕಾದ ಎಣ್ಣೆಯನ್ನು ಎರಚಿದ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಬೇವಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದೇ ಗ್ರಾಮದ ವ್ಯಕ್ತಿ ಮರಿಯಪ್ಪ ಶೆಳ್ಳಿಗೆಪ್ಪ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಸುರಪುರ ಆಸ್ಪತ್ರೆ ಸೇರಿದ್ದಾರೆ. ಈ ಘಟನೆಗೆ ರಾಜಕೀಯ ವೈಷಮ್ಯ ಹಿನ್ನೆಲೆ ಎನ್ನಲಾಗುತ್ತಿದೆ.

    ಮರಿಯಪ್ಪ ತನ್ನ ವಿರೋಧ ಬಣದವರ ಮದುವೆ ಮನೆ ಕುಡಿದುಕೊಂಡು ಹೋಗಿದ್ದರು. ಮದುವೆ ಮನೆಯಲ್ಲಿ ಕೆಲ ಹೊತ್ತು ಗಲಾಟೆ ನಡೆದಿದ್ದು, ಈ ವೇಳೆ ಮದುವೆ ಅಡುಗೆಗಾಗಿ ಕಾಯಿಲು ಇಟ್ಟ ಎಣ್ಣೆಯನ್ನು ಮರಿಯಪ್ಪನ ಮೈ ಮೇಲೆ ಕೆಲ ದುಷ್ಕರ್ಮಿಗಳು ಎರಚಿ ಪರಾರಿಯಾಗಿದ್ದಾರೆ.

    ಸಾಂದರ್ಭಿಕ ಚಿತ್ರ

    ಇದರಿಂದ ತೀವ್ರವಾಗಿ ಗಾಯಗೊಂಡು ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದ ಮರಿಯಪ್ಪಯನ್ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿದ್ದಾರೆ. ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ನೇತೃತ್ವದಲ್ಲಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

  • ಮಲಗಿದ್ದ ಪತಿಯ ಮುಖದ ಮೇಲೆ ಮುಂಜಾನೆ ಕುದಿಯುತ್ತಿರೋ ಎಣ್ಣೆ ಸುರಿದ ಪತ್ನಿ..!

    ಮಲಗಿದ್ದ ಪತಿಯ ಮುಖದ ಮೇಲೆ ಮುಂಜಾನೆ ಕುದಿಯುತ್ತಿರೋ ಎಣ್ಣೆ ಸುರಿದ ಪತ್ನಿ..!

    ಭೋಪಾಲ್: ಮಲಗಿದ್ದ ಪತಿಯ ಮುಖದ ಮೇಲೆ ಪತ್ನಿ ಬಿಸಿ ಬಿಸಿ ಎಣ್ಣೆ ಸುರಿದ ಘಟನೆಯೊಂದು ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.

    ಪತ್ನಿ ಶಿವಕುಮಾರಿ ಅಹಿರ್ವಾರ್(35) ತನ್ನ ಪತಿ ಅರವಿಂದ್ ಅಹಿರ್ವಾರ್(38) ಮುಖದ ಮೇಲೆ ಬಿಸಿ ಎಣ್ಣೆ ಸುರಿದಿದ್ದಾಳೆ. ಬಿಸಿ ಎಣ್ಣೆ ಸುರಿದ ಪರಿಣಾಮ ಅರವಿಂದ್ ಅರೆಬೆಂದ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಶಿವಕುಮಾರಿ ಹಾಗೂ ಅರವಿಂದ್ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಆ ಬಳಿಕದಿಂದ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಆಗಾಗ್ಗೆ ಜಗಳವಾಗುತ್ತಿತ್ತು. ಆದರೆ ಇದೀಗ ಪತಿ ಮನೆಗೆ ತಡವಾಗಿ ಎಂಬ ಕಾರಣಕ್ಕೆ ಆರಂಭವಾದ ಜಗಳವು ತಾರಕಕ್ಕೇರಿ ಈ ಭಾರೀ ಅವಾಂತರಕ್ಕೆ ಕಾರಣವಾಗಿದೆ.

    ಪತಿ-ಪತ್ನಿ ನಡುವಿನ ಜಗಳವನ್ನು ಕುಟುಂಬಸ್ಥರು ರಾತ್ರಿ ಮಧ್ಯ ಪ್ರವೇಶಿಸಿ ನಿಲ್ಲಿಸಿದ್ದಾರೆ. ಆದರೆ ಇಷ್ಟಕ್ಕೆ ತಣ್ಣಗಾಗದ ಪತ್ನಿ ಶಿವಕುಮಾರಿ, ಬೆಳಗ್ಗೆ 5 ಗಂಟೆಯ ಸುಮಾರಿಗೆ ಎಣ್ಣೆಯನ್ನು ಕಾಯಿಸಿ ಮಲಗಿದ್ದ ಗಂಡನ ಮುಖದ ಮೇಲೆ ಸುರಿದಿದ್ದಾಳೆ. ಸುಡುತ್ತಿದ್ದ ಎಣ್ಣೆಯಿಂದಾಗಿ ಅರವಿಂದ್ ಮುಖ ಸುಟ್ಟಿದ್ದು, ಆತ ಕಿರುಚಾಡಿದ್ದಾನೆ.

    ಕೂಡಲೇ ಮನೆಯವರೆಲ್ಲರೂ ಸೇರಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅರವಿಂದ್ ಕುಟುಂಬಸ್ಥರು ಶಿವಕುಮಾರಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಸಿಟ್ಟಿನಿಂದಾಗಿ ನಾನು ತಪ್ಪು ಮಾಡಿದೆ ಎಂದು ಶಿವಕುಮಾರಿ ತಪ್ಪು ಒಪ್ಪಿಕೊಂಡಿರುವುದಾಗಿ ಆಕೆಯ ಸಹೋದರ ತಿಳಿಸಿದ್ದಾರೆ. ಮುಖಕ್ಕೆ ತೀವ್ರ ಗಾಯಗೊಂಡಿರುವ ಅರವಿಂದ್, ಈಗ ಸಾಗರ ಜಿಲ್ಲೆಯ ಬುಂದೇಲ್‍ಖಂಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಸಾಂದರ್ಭಿಕ ಚಿತ್ರ
  • ಮುಂದಿನ ವರ್ಷದಿಂದ ಪ್ರತಿ ವಾರ ಎಲ್‌ಪಿಜಿ ದರ ಪರಿಷ್ಕರಣೆ?

    ಮುಂದಿನ ವರ್ಷದಿಂದ ಪ್ರತಿ ವಾರ ಎಲ್‌ಪಿಜಿ ದರ ಪರಿಷ್ಕರಣೆ?

    ನವದೆಹಲಿ: ಮುಂದಿನ ವರ್ಷದಿಂದ ಪ್ರತಿ ವಾರ ಎಲ್‌ಪಿಜಿ ಸಿಲಿಂಡರ್‌ ದರ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

    ಹೌದು. ಸದ್ಯ ಈಗ ಪ್ರತಿ ತಿಂಗಳು ಎಲ್‌ಪಿಜಿ ದರ ಪರಿಷ್ಕರಣೆ ಆಗುತ್ತಿದೆ. ಪ್ರತಿ ತಿಂಗಳು ದರ ಪರಿಷ್ಕರಣೆ ಆಗುತ್ತಿರುವುದು ತೈಲ ಕಂಪನಿಗಳಿಗೆ ಸಮಸ್ಯೆ ಆಗುತ್ತಿರುವ ಕಾರಣ ಈಗ ವಾರಕ್ಕೊಮ್ಮೆ ದರ ಪರಿಷ್ಕರಣೆ ಬಯಸಿವೆ.

    ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇಲ್ಲಿಯವರೆಗೆ ಅಧಿಕೃತ ಹೇಳಿಕೆ ಪ್ರಕಟಿಸಿಲ್ಲ. ಮುಂದಿನ ದಿನಗಳಲ್ಲಿ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.

    ಈ ಹಿಂದೆ ಪೆಟ್ರೋಲ್,‌ ಡೀಸೆಲ್‌ ದರ ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿತ್ತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿದಿನ ಪರಿಷ್ಕರಣೆ ಆಗುತ್ತಿದ್ದ ಕಾರಣ ತೈಲ ಬೆಲೆ ಏರಿಕೆ/ ಇಳಿಕೆ ಆಗಿದ್ದರೂ ದರ ಪರಿಷ್ಕರಣೆ ಕೂಡಲೇ ಆಗುತ್ತಿರಲಿಲ್ಲ. ಆದರೆ 2017ರ ಜೂನ್‌ 16ರ ನಂತರ ದೇಶದಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಗೆ ಅನುಗುಣವಾಗಿ  ಪ್ರತಿನಿತ್ಯ ಪೆಟ್ರೋಲ್, ಡೀಸೆಲ್‌ ದರ ಬೆಳಗ್ಗೆ 6ಗಂಟೆಗೆ ಪರಿಷ್ಕರಣೆ ಆಗುತ್ತಿದೆ.

    ಕಳೆದ ನವೆಂಬರ್‌ನಲ್ಲಿ ಸಬ್ಸಿಡಿ ಸಹಿತ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 597 ರೂ. ಇತ್ತು. ಆದರೆ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗುತ್ತಿರುವ ಕಾರಣ ಈಗ 697 ರೂ.ಗೆ ಏರಿಕೆಯಾಗಿದೆ.

    ವಾರಕ್ಕೊಮ್ಮೆ ದರವನ್ನು ಪರಿಷ್ಕರಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾದರೂ ತೈಲ ಕಂಪನಿಗಳಿಗೆ ದೊಡ್ಡ ಸಮಸ್ಯೆ ಆಗುವುದಿಲ್ಲ. ಈಗ ತಿಂಗಳಿಗೊಮ್ಮೆ ದರ ಪರಿಷ್ಕರಣೆ ಇದ್ದಾಗ ದರ ಏರಿಕೆಯಾದರೆ ಅದರಿಂದಾಗುವ ನಷ್ಟವನ್ನು ತೈಲ ಕಂಪನಿಗಳೇ ಹೊರಬೇಕಾಗುತ್ತದೆ. ಈ ನಷ್ಟವನ್ನು ಸರಿದೂಗಿಸಲು ವಾರಕ್ಕೊಮ್ಮೆ ಎಲ್‌ಪಿಜಿ ದರ ಪರಿಷ್ಕರಣೆಯಾಗುವ ಪ್ರಸ್ತಾಪವನ್ನು ಮುಂದಿಟ್ಟಿದೆ.

  • ಕಚ್ಚಾ ತೈಲ ಬೆಲೆ ಭಾರೀ ಇಳಿಕೆ – ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿಲ್ಲ ಯಾಕೆ?

    ಕಚ್ಚಾ ತೈಲ ಬೆಲೆ ಭಾರೀ ಇಳಿಕೆ – ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿಲ್ಲ ಯಾಕೆ?

    – ಅಮೆರಿಕದಲ್ಲಿ ಶೂನ್ಯಕ್ಕಿಂತ ಕಡಿಮೆ ಬೆಲೆಗೆ ತೈಲ ಕುಸಿತ
    – ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆ

    ಕೊರೊನಾ ವೈರಸ್ ಹಾವಳಿಯಿಂದ ವಿಶ್ವದ ಹಲವೆಡೆ ಲಾಕ್‍ಡೌನ್ ಘೋಷಣೆಯಾಗಿದ್ದು, ಬೇಡಿಕೆ ಇಲ್ಲದೇ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ. ಅಮೆರಿಕದ ಇತಿಹಾಸ ಇದೇ ಮೊದಲ ಬಾರಿಗೆ ಶೂನ್ಯಕ್ಕಿಂತಲೂ ಕಡಿಮೆ ಬೆಲೆಗೆ ಕುಸಿದಿದೆ. ಕಚ್ಚಾ ತೈಲದ ಬೆಲೆ ಕುಸಿದ ಹಿನ್ನೆಲೆಯಲ್ಲಿ ಭಾರತದಲ್ಲೂ ದರ ಇಳಿಕೆಯಾಗಬೇಕಿತ್ತು. ಆದರೆ ದರ ಇಳಿಕೆ ಆಗುತ್ತಿಲ್ಲ. ಹೀಗಾಗಿ ಯಾಕೆ ದರ ಇಳಿಕೆ ಆಗುತ್ತಿಲ್ಲ? ಮುಂದೆ ಇಳಿಕೆ ಆಗುತ್ತಾ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಅಮೆರಿಕದಲ್ಲಿ ಎಷ್ಟು ಇಳಿಕೆಯಾಗಿದೆ?
    ಸೋಮವಾರ ಟೆಕ್ಸಾಸ್ ಫ್ಯೂಚರ್ ಮಾರುಕಟ್ಟೆಯಲ್ಲಿ 1 ಬ್ಯಾರಲ್ (158 ಲೀ) ಕಚ್ಚಾತೈಲದ ಬೆಲೆ 18 ಡಾಲರ್ ನಿಂದ ಆರಂಭಗೊಂಡು ಕೊನೆಗೆ -37.63 ಡಾಲರ್ ಗೆ ಕೊನೆಯಾಗಿದೆ. ಮೇ ತಿಂಗಳ ಪೂರೈಕೆಗಾಗಿ ಸೋಮವಾರ ನಡೆದ ಫ್ಯೂಚರ್ ಟ್ರೇಡಿಂಗ್‍ನಲ್ಲಿ ವೇಳೆ ಈ ಕುಸಿತ ಕಂಡು ಬಂದಿದೆ.

    ಇಳಿಕೆಗೆ ಕಾರಣ ಏನು?
    ಜೂನ್ ತಿಂಗಳವರೆಗೆ ಆರ್ಥಿಕತೆ ಚೇತರಿಕೆ ಕಾಣಲು ಸಾಧ್ಯವಿಲ್ಲ ಎಂಬ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮೇ ತಿಂಗಳ ಖರೀದಿಗೆ ಯಾರೂ ಮುಂದಾಗಲಿಲ್ಲ. ಇದರ ಜೊತೆ ಅಮೆರಿಕದಲ್ಲಿ ಬೇಡಿಕೆಗಿಂತ ತೈಲ ಉತ್ಪಾದನೆ ಜಾಸ್ತಿಯಾಗಿ ಸಂಗ್ರಹ ಮಾಡಲು ಜಾಗ ಇಲ್ಲದ ಕಾರಣ ಬೆಲೆ ಇಳಿಕೆಯಾಗಿದೆ ಎಂದು ವರದಿಯಾಗಿದೆ.  ಇದನ್ನೂ ಓದಿ: ಮತ್ತೆ ಮೋದಿ ಕೈ ಹಿಡಿದ ಕಚ್ಚಾ ತೈಲ – ಒಂದೇ ದಿನ ಭಾರೀ ಇಳಿಕೆ, ದರ ಸಮರ ಆರಂಭ

    ಭಾರತ ಯಾಕೆ ಖರೀದಿ ಮಾಡುತ್ತಿಲ್ಲ?
    ಕಡಿಮೆ ಬೆಲೆ ಇರುವ ಹಿನ್ನೆಲೆಯಲ್ಲಿ ಭಾರತ ಯಾಕೆ ಅಮೆರಿಕದಿಂದ ಕಚ್ಚಾ ತೈಲ ಖರೀದಿ ಮಾಡಬಾರದು ಎಂಬ ಪ್ರಶ್ನೆ ಏಳುವುದು ಸಹಜ. ಪ್ರಶ್ನೆ ಬಹಳ ಸುಲಭವಾಗಿ ಕೇಳಬಹುದಾದರೂ ಉತ್ತರ ಮಾತ್ರ ಅಷ್ಟು ಸುಲಭ ಇಲ್ಲ. ಅಮೆರಿಕದ ಜೊತೆ ವಿವಿಧ ವ್ಯವಹಾರ ಮಾಡುತ್ತಿರುವ ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿಲ್ಲ. ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಬೆಲೆ ನಿರ್ಧಾರ ಮಾಡುವ ಬ್ರೆಂಚ್ ಕಚ್ಚಾ ತೈಲವನ್ನು ಭಾರತ ಖರೀದಿಸುತ್ತದೆ. ವೆಸ್ಟ್ ಟೆಕ್ಸಾಸ್ ಇಂಟರ್‍ಮೀಡಿಯೆಟ್(ಡಬ್ಲ್ಯೂಟಿಐ) ಎನ್ನುವುದು ಅಮೆರಿಕದ ಬೆಂಚ್ ಮಾರ್ಕ್ ಆಗಿದೆ.

    ವಿಶ್ವದ ಮೂರನೇ ಎರಡರಷ್ಟು ರಾಷ್ಟ್ರಗಳಿಗೆ ಬ್ರೆಂಟ್ ಕಚ್ಚಾ ತೈಲ ಪೊರೈಕೆ ಆಗುತ್ತಿದೆ. ಯುರೋಪ್, ಏಷ್ಯಾ, ಆಫ್ರಿಕಾ ಸೇರಿದಂತೆ ಹಲವು ಮಧ್ಯ ಪ್ರಾಚ್ಯ ದೇಶಗಳಿಗೆ ಬ್ರೆಂಟ್ ಕಚ್ಚಾ ತೈಲ ಸರಬರಾಜು ಆಗುತ್ತದೆ. ಬ್ರೆಂಟ್ ಕಚ್ಚಾ ತೈಲ ಸಮುದ್ರದಲ್ಲೇ ಉತ್ಪಾದನೆಯಾಗಿ ಸುಲಭವಾಗಿ ಹಡಗುಗಳಿಗೆ ತುಂಬಿಸಿ ಸಾಗಾಟ ಮಾಡಬಹುದು. ಆದರೆ ಡಬ್ಲ್ಯೂಟಿಐ ಅಮೆರಿಕದ ಕುಶಿಂಗ್, ಒಕ್ಲಹೋಮದಲ್ಲಿ ಮಾತ್ರ ಸೀಮಿತವಾಗಿದ್ದು ಸಾಗಾಟ ಮತ್ತು ಸಂಗ್ರಹಣೆ ಕಷ್ಟ. ಅಮೆರಿಕದಿಂದ ಭಾರತಕ್ಕೆ ತೈಲ ಸಾಗಾಟ ಮಾಡುವುದು ಬಹಳ ತ್ರಾಸದಾಯಕ.

    ಖರೀದಿಸಿದ್ರೂ ಸಂಗ್ರಹಿಸಲು ಸಾಧ್ಯವಿಲ್ಲ:
    ಭಾರತ ಕಚ್ಚಾ ತೈಲವನ್ನು ಆಮದು ಮಾಡಿ ಇಲ್ಲಿ ಸಂಸ್ಕರಿಸುತ್ತದೆ. ಭಾರತ ಡಾಲರ್ ಮೂಲಕ ಕಚ್ಚಾ ತೈಲವನ್ನು ಖರೀದಿ ಮಾಡುತ್ತದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕಡಿಮೆಯಾದರೆ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ. ಇದರ ಜೊತೆ ತೈಲ ಖರೀದಿ, ಸಾಗಾಟ, ಸಂಸ್ಕರಣೆ, ಬಳಿಕ ಡೀಲರ್ ಗಳಿಗೆ ಮಾರಾಟ ಇವುಗಳನ್ನು ಗಮನಿಸಿಕೊಂಡು ದೇಶಿಯ ದರ ನಿಗದಿಯಾಗುತ್ತದೆ. ಇದನ್ನೂ ಓದಿ: ಸೌದಿ ಕಂಪನಿ ಜೊತೆ ಡೀಲ್ – ಭಾರತದ ಅತಿ ದೊಡ್ಡ ಎಫ್‍ಡಿಐ ಒಪ್ಪಂದಕ್ಕೆ ರಿಲಯನ್ಸ್ ಸಹಿ

    ಕಚ್ಚಾ ತೈಲ ದರ ಇಳಿಕೆ ಆಗುತ್ತಿದೆ ನಿಜ. ಆದರೆ ಅದನ್ನು ಖರೀದಿಸಿ ಸಂಗ್ರಹಿಸುವ ಸಾಮರ್ಥ್ಯ ಸಹ ದೇಶಕ್ಕೆ ಇರಬೇಕು. ಸದ್ಯ ಭಾರತ ಮೂರು ಭೂಗತ ತೈಲ ಸಂಗ್ರಹಾಗಾರಗಳನ್ನು ಹೊಂದಿದೆ. ಸದ್ಯ ಇಲ್ಲಿ 13 ದಿನಕ್ಕೆ ಆಗುವಷ್ಟು ತೈಲಗಳನ್ನು ಸಂಗ್ರಹ ಮಾಡಬಹುದಾಗಿದೆ. ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಒಟ್ಟು 36.87 ದಶಲಕ್ಷ ಬ್ಯಾರೆಲ್ ತೈಲವನ್ನು ಈ ಸಂಗ್ರಹಾಗಾರಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು.

    ಲಾಕ್‍ಡೌನ್ ಘೋಷಣೆಯಾಗಿರುವ ಕಾರಣ ವಾಹನಗಳ ಸಂಚಾರ ಕಡಿಮೆ ಆಗಿದ್ದರಿಂದ ಪೆಟ್ರೋಲ್, ಡೀಸೆಲ್ ಗಳಿಗೆ ಬೇಡಿಕೆ ಇಲ್ಲ. ಲಾಕ್‍ಡೌನ್ ಘೋಷಣೆಗೂ ಮುನ್ನ ತೈಲ ಬೇಗನೆ ಮಾರಾಟವಾಗುತ್ತಿತ್ತು. ಆದರೆ ಈಗ ಬಂಕ್ ಗಳಲ್ಲಿ ಸಂಗ್ರಹವಾದ ಪೆಟ್ರೋಲ್, ಡೀಸೆಲ್ ಹಲವು ದಿನಗಳವರೆಗೆ ಇರುತ್ತದೆ. ಬೇಡಿಕೆಯೇ ಇಲ್ಲದ ಮೇಲೆ ಸಂಸ್ಕರಿಸಿದ ತೈಲವನ್ನು ವಿತರಣೆ ಮಾಡಲು ಸಾಧ್ಯವಿಲ್ಲ.

    ಎಲ್ಲಿ ತೈಲ ಸಂಗ್ರಹಾಗಾರಗಳಿವೆ?
    ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‍ಪಿಆರ್‍ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ. ಮುಂದೆ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಉಡುಪಿಯಲ್ಲಿ ತೈಲ ಸಂಗ್ರಹಿಸಲಿದೆ ಸೌದಿ ಅರಾಮ್ಕೊ

    ದರ ಇಳಿಕೆಯಾಗುತ್ತಾ?
    ರಷ್ಯಾ ಒಪೆಕ್ ರಾಷ್ಟ್ರಗಳ ಜೊತೆಗಿತ ಒಪ್ಪಂದದಿಂದ ಹಿಂದೆ ಸರಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಸಮರ ಆರಂಭಗೊಂಡಿತ್ತು. ಸೌದಿ ಭಾರೀ ಪ್ರಮಾಣದಲ್ಲಿ ತೈಲ ಉತ್ಪಾದಿಸಲು ಮುಂದಾಗಿದ್ದರಿಂದ ಕಚ್ಚಾ ತೈಲದ ಬೆಲೆ ಭಾರೀ ಇಳಿಕೆ ಕಂಡಿತ್ತು. ಈ ಬೆನ್ನಲ್ಲೇ ಕೊರೊನಾ ಹಾವಳಿಯಿಂದ ರಷ್ಯಾ ಒಪೆಕ್ ರಾಷ್ಟ್ರಗಳ ಜೊತೆ ಒಪ್ಪಂದ ಮುಂದುವರಿಸಿ ತೈಲ ಉತ್ಪಾದನೆ ಕಡಿತಕ್ಕೆ ಒಪ್ಪಿಗೆ ಸೂಚಿಸಿತ್ತು. ಪರಿಣಾಮ ಬೆಲೆ ಸಮರ ಅಂತ್ಯಗೊಂಡಿತ್ತು. ಬೆಲೆ ಸಮರ ಅಂತ್ಯಗೊಂಡರೂ ಬೇಡಿಕೆ ಇಲ್ಲದ ಕಾರಣ ಬ್ರೆಂಟ್ ಕಚ್ಚಾ ತೈಲದ ಬೆಲೆ ಕಡಿಮೆ ಆಗುತ್ತಿದೆ.

    ಭಾರತದಲ್ಲಿ ದರ ಇಳಿಕೆಯಾಗುತ್ತಾ?
    ಸದ್ಯ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಪೆಟ್ರೋಲ್, ಡೀಸೆಲ್ ನಿಂದ ಬರುತ್ತಿದೆ. ಈ ಕಾರಣಕ್ಕೆ ತೈಲವನ್ನು ಜಿಎಸ್‍ಟಿಯಿಂದ ಹೊರಗಿಡಲಾಗಿದೆ. ಈಗಾಗಲೇ ಭಾರತದಲ್ಲಿ ಕಳೆದ ವರ್ಷ ಹತ್ತಿರ ಹತ್ತಿರ 80-90 ರೂ. ವರೆಗೆ ಪೆಟ್ರೋಲ್/ ಡೀಸೆಲ್ ದರ ತಲುಪಿದೆ. ಗ್ರಾಹಕ ಇಷ್ಟು ಬೆಲೆ ನೀಡಿ ಖರೀದಿಸಿದ ಮೇಲೆ ಬೆಲೆ ಕಡಿಮೆ ಆಗುವುದು ಅನುಮಾನ. ಬೆಲೆ ಕಡಿಮೆಯಾದರೂ ಅಬಕಾರಿ ಸುಂಕ ಏರಿಸಿ ಹಳೆಯ ಬೆಲೆಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಸೆಸ್ ಜಾರಿ ಮಾಡಿದರೆ ರಾಜ್ಯ ಸರ್ಕಾರಗಳು ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಿಸುತ್ತಿವೆ. ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಾಗಿ ಆರ್ಥಿಕತೆ ಸರಿಯಾದ ದಾರಿಯಲ್ಲಿ ಸಾಗುವ ಲಕ್ಷಣ ಕಂಡುಬಂದರೆ ಅಬಕಾರಿ ಸುಂಕವನ್ನು ಸರ್ಕಾರ ಇಳಿಸಿದರೆ ದರ ಇಳಿಯಬಹುದು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

  • ಏಪ್ರಿಲ್ 1 ರಿಂದ ಭಾರತದಲ್ಲಿ ಸಿಗಲಿದೆ ಶುದ್ಧ ಪೆಟ್ರೋಲ್ – ಏನಿದು ಬಿಎಸ್6? ಬೆಲೆ ಎಷ್ಟು ಇರಲಿದೆ? ಈಗಲೇ ಜಾರಿ ಯಾಕೆ?

    ಏಪ್ರಿಲ್ 1 ರಿಂದ ಭಾರತದಲ್ಲಿ ಸಿಗಲಿದೆ ಶುದ್ಧ ಪೆಟ್ರೋಲ್ – ಏನಿದು ಬಿಎಸ್6? ಬೆಲೆ ಎಷ್ಟು ಇರಲಿದೆ? ಈಗಲೇ ಜಾರಿ ಯಾಕೆ?

    ಪ್ರಿಲ್ 1 ರಿಂದ ಭಾರತದಲ್ಲಿ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಎಲ್ಲ ಬಂಕ್‍ಗಳಲ್ಲಿ ಲಭ್ಯವಾಗಲಿದೆ. ತೈಲ ಕಂಪನಿಗಳು ಬಿಎಸ್6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲನ್ನು ಪೂರೈಸಲಿವೆ. ಹೀಗಾಗಿ ಏನಿದು ಬಿಎಸ್6 ಇಂಧನ ? ಬಿಎಸ್5 ಅನುಷ್ಠಾನಕ್ಕೆ ತರದೇ ಬಿಎಸ್6 ಜಾರಿಗೆ ತಂದಿದ್ದು ಯಾಕೆ? ಇಂಧನದ ಬೆಲೆ ಎಷ್ಟು ಹೆಚ್ಚಾಗಲಿದೆ ಈ ಎಲ್ಲ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತದೆ?

    ಏನಿದು ಬಿಎಸ್?
    ಭಾರತ್ ಸ್ಟೇಜ್ (ಬಿಎಸ್) ಅಂದ್ರೆ ವಾಹನಗಳ ಅನಿಲ ಹೊರಸೂಸುವಿಕೆ/ ಮಾಲಿನ್ಯ ಪ್ರಮಾಣದ ನಿಯಂತ್ರಣಾ ಮಾನದಂಡ. ಪೆಟ್ರೋಲ್ ಮತ್ತು ಡೀಸೆಲ್‍ಗಳಲ್ಲಿ ಇರುವ ಗಂಧಕ(ಸಲ್ಫರ್) ಪ್ರಮಾಣವನ್ನು ಆಧರಿಸಿ ಅವುಗಳ `ಬಿಎಸ್’ ವರ್ಗೀಕರಣ ಮಾಡಲಾಗುತ್ತದೆ. ಇಂಧನವೊಂದರ 10 ಲಕ್ಷ ಕಣಗಳಲ್ಲಿ, ಗಂಧಕದ ಕಣಗಳು (ಪಾರ್ಟ್ಸ್ ಪರ್ ಮಿಲಿಯನ್ ಅಥವಾ ಪಿಪಿಎಂ) ಎಷ್ಟಿವೆ ಎಂಬುದರ ಆಧಾರದ ಮೇಲೆ ಇದನ್ನು ವರ್ಗೀಕರಿಸಲಾಗುತ್ತದೆ. ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಅಡಿಯಲ್ಲಿ ಬಿಎಸ್ ಮಾನದಂಡವನ್ನ ನಿಗದಿಪಡಿಸಲಾಗುತ್ತದೆ. ಕಾಲಕಾಲಕ್ಕೆ ಇದನ್ನು ಮಾರ್ಪಾಡು ಮಾಡಲಾಗುತ್ತದೆ. ಯುರೋಪಿಯನ್ ಒಕ್ಕೂಟಗಳ ದೇಶಗಳು ಈ ಮಾನದಂಡಕ್ಕೆ ‘ಯುರೋ’ ಎಂದು ಹೆಸರನ್ನಿಟ್ಟಿದ್ದಾರೆ.

    ಯಾವಾಗ ಜಾರಿಗೊಳಿಸಲಾಯ್ತು?
    ಯುರೋಪಿಯನ್ ಮಾನದಂಡಗಳಿಗೆ ಅನುಗುಣವಾಗಿ ಭಾರತದಲ್ಲಿ ಮೊದಲ ಬಾರಿಗೆ 2000 ಇಸವಿಯಲ್ಲಿ ಬಿಎಸ್ ಮಾನದಂಡ ಜಾರಿಗೊಳಿಸಲಾಯ್ತು. 2005ರಲ್ಲಿ ಬಿಎಸ್2 ಮಾನದಂಡ ಜಾರಿಗೆ ಬಂತು. 2010ರಲ್ಲಿ ಬಿಎಸ್3 ಮಾನದಂಡವನ್ನು ಜಾರಿಗೊಳಿಸಲಾಯ್ತು. 2016ರ ಏಪ್ರಿಲ್‍ನಲ್ಲಿ ಬಿಎಸ್4 ಮಾನದಂಡವನ್ನ ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳಲ್ಲಿ ಅಸ್ತಿತ್ವಕ್ಕೆ ತರಲಾಯ್ತು. 2017ರ ಏಪ್ರಿಲ್ 1 ರಿಂದ ದೇಶದಲ್ಲಿ ಎಲ್ಲಾ ವಾಹನಗಳು ಬಿಎಸ್4 ಮಾನದಂಡ ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

    ಬಿಎಸ್5 ಜಾರಿಗೆ ತರದೇ ಬಿಎಸ್6 ಯಾಕೆ?
    ಯಾವಾಗಲೂ ಹಂತ ಹಂತವಾಗಿ ಬದಲಾವಣೆ ಆಗುತ್ತಿರುತ್ತದೆ. ಆದರೆ ಭಾರತ ಬಿಎಸ್ ಮಾನದಂಡ ಅಳವಡಿಸುವುದರಲ್ಲಿ ಹಿಂದಿತ್ತು. ಯುರೋಪಿಯನ್ ದೇಶಗಳು 2006ರಲ್ಲಿ ಯುರೋ4 (ಬಿಎಸ್4) ಜಾರಿಗೆ ತಂದಿದ್ದರೆ ಯುರೋ 5ಎ ಮಾನದಂಡವನ್ನು 2011ರಲ್ಲಿ ಜಾರಿಗೆ ತಂದಿತ್ತು. ಆದರೆ ಭಾರತದಲ್ಲಿ ರಾಷ್ಟ್ರವ್ಯಾಪಿ ಬಿಎಸ್4 ಜಾರಿಗೆ ಬಂದಿದ್ದು 2017ರಲ್ಲಿ. ಆದರೆ ಈಗ ಕೇವಲ 3 ವರ್ಷದಲ್ಲಿ ಭಾರತ ಬಿಎಸ್5 ಅಳವಡಿಸಿಕೊಳ್ಳದೇ ಬಿಎಸ್6 ಅಳವಡಿಸಲು ಮುಂದಾಗುತ್ತಿದೆ.

    ಬಿಎಸ್5  ಜಾರಿಗೆ ತಂದರೆ ತೈಲ ಕಂಪನಿಗಳು ಮತ್ತು ವಾಹನ ಉತ್ಪಾದನಾ ಕಂಪನಿಗಳು ಬಿಎಸ್5 ಮಾನದಂಡಕ್ಕೆ ಅನುಗುಣವಾಗಿ ತೈಲ ಮತ್ತು ಎಂಜಿನ್ ಉತ್ಪಾದನೆ ಮಾಡಬೇಕಿತ್ತು. ಇದಕ್ಕೆ ಭಾರೀ ಹೂಡಿಕೆ ಬೇಕಿತ್ತು. ಹೂಡಿಕೆ ಮಾಡಿದ ನಂತರ ಮಾನದಂಡವನ್ನು ಬದಲಾಯಿಸಿದರೆ ಕಂಪನಿಗಳು ಭಾರೀ ನಷ್ಟಕ್ಕೆ ತುತ್ತಾಗುವ ಸಾಧ್ಯತೆಯಿತ್ತು. ಒಂದು ಮಾನದಂಡದಿಂದ ಇನ್ನೊಂದು ಮಾನದಂಡಕ್ಕೆ ಬದಲಾಗಲು ಕನಿಷ್ಠ 4, 5 ವರ್ಷ ತೆಗೆದುಕೊಳ್ಳುವ ಸಾಧ್ಯತೆಯಿತ್ತು. ಆದರೆ ಬಿಎಸ್5 ಬಂದ ನಂತರ ಬಿಎಸ್6 ಬರಲೇಬೇಕಿತ್ತು. ಹೀಗಾಗಿ ಭಾರತ ನೇರವಾಗಿ ಬಿಎಸ್6 ಮಾನದಂಡವನ್ನು ಜಾರಿಗೆ ತರಲು ಮುಂದಾಗುತ್ತಿದೆ. ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳು ಸಹ ಇಷ್ಟು ವೇಗದಲ್ಲಿ ಬದಲಾವಣೆ ಮಾಡಿಲ್ಲ. ಈ ಕಾರಣದ ಜೊತೆಗೆ 2017ರ ಪ್ಯಾರಿಸ್ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನ ನಿಯಂತ್ರಣ ಸಂಬಂಧದ ಘೋಷಣೆಗೆ ಭಾರತವು ಸಹಿ ಹಾಕಿದೆ. ಹೀಗಾಗಿ ವೇಗವಾಗಿ ಬಿಎಸ್6 ಅಳವಡಿಸಿಕೊಳ್ಳಲು ಸರ್ಕಾರವು ಆದೇಶ ಪ್ರಕಟಿಸಿತ್ತು.

    ಬಿಎಸ್6 ಇಂಧನದಿಂದ ಮಾಲಿನ್ಯ ಎಷ್ಟು ಕಡಿಮೆ ಆಗುತ್ತದೆ?
    ಬಿಎಸ್4 ಪೆಟ್ರೋಲ್ ಡೀಸೆಲ್ ನಲ್ಲಿ 50 ಪಿಎಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಸಲ್ಫರ್ ಇದ್ದರೆ ಬಿಎಸ್6 ನಲ್ಲಿ 10 ಪಿಪಿಎಂ ಗಂಧಕ ಇರಲಿದೆ. ಬಿಎಸ್4 ಪೆಟ್ರೋಲ್ ವಾಹನಕ್ಕೆ ಬಿಎಸ್6 ಪೆಟ್ರೋಲ್ ಹಾಕಿದ್ರೆ ನೈಟ್ರೋಜನ್ ಆಕ್ಸೈಡ್ ಉಗುಳುವಿಕೆಯ ಪ್ರಮಾಣ ಶೇ.25 ರಷ್ಟು ಕಡಿಮೆಯಾದರೆ ಬಿಎಸ್4 ಡೀಸೆಲ್ ವಾಹನಕ್ಕೆ ಬಿಎಸ್6 ಡೀಸೆಲ್ ಹಾಕಿದರೆ ನೈಟ್ರೋಜನ್ ಆಕ್ಸೈಡ್ ಉಗುಳುವಿಕೆಯ ಪ್ರಮಾಣ ಶೇ.70ರಷ್ಟು ಕಡಿಮೆಯಾಗಲಿದೆ.

    ಬೆಲೆ ಎಷ್ಟು ಏರಿಕೆ ಆಗಲಿದೆ?
    ಬಿಎಸ್ ಮಾನದಂಡ ಆರಂಭಗೊಂಡು ಬಿಎಸ್ 4 ವರೆಗೆ ತೈಲ ಸಂಸ್ಕರಣ ಘಟಕಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸುಮಾರು 60 ಸಾವಿರ ಕೋಟಿ ರೂ. ಹಣವನ್ನು ಖರ್ಚು ಮಾಡಿದೆ. ಈ ಸಂಸ್ಕರಣ ಘಟಕಗಳನ್ನು ಬಿಎಸ್4 ನಿಂದ ಬಿಎಸ್6 ಮೇಲ್ದರ್ಜೆಗೆ ಏರಿಸಲು ತೈಲ ಕಂಪನಿಗಳು ಅಂದಾಜು 35 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಈ ವೆಚ್ಚವನ್ನು ಸರಿದೂಗಿಸಲು ತೈಲ ಕಂಪನಿಗಳು ಬೆಲೆ ಏರಿಸಲಿವೆ. ಆದರೆ ಎಷ್ಟು ಏರಿಕೆ ಆಗಲಿದೆ ಎನ್ನುವುದು ತಿಳಿದು ಬಂದಿಲ್ಲ.

    ದೆಹಲಿಯಲ್ಲಿ ಬಿಎಸ್6 ಇಂಧನ ಲಭ್ಯವಿದೆ:
    ವಿಪರೀತ ವಾಯು ಮಾಲಿನ್ಯದಿಂದ ಸುದ್ದಿಯಾಗುತ್ತಿರುವ ದೆಹಲಿಯಲ್ಲಿ ಈಗಾಗಲೇ ಬಿಎಸ್6 ಮಾನಂದಂಡದ ಪೆಟ್ರೋಲ್, ಡೀಸೆಲ್ ಲಭ್ಯವಿದೆ. 2019ರ ಅಕ್ಟೋಬರ್ 1 ರಿಂದ ದೆಹಲಿಯ ಎಲ್ಲ ಜಿಲ್ಲೆಯಲ್ಲಿ ಬಿಎಸ್6 ಮಾನದಂಡದ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ.

    ಬಿಎಸ್4 ವಾಹನಗಳಿಗೆ ಬಿಎಸ್6 ಇಂಧನ ಹಾಕಿದ್ರೆ ಏನಾಗುತ್ತೆ?
    ಬಿಎಸ್4 ನಿಂದ ಬಿಎಸ್6ಗೆ ಏರುವ ಪೆಟ್ರೋಲ್‍ನ ರಾಸಾಯನಿಕ ಅಂಶಗಳಲ್ಲಿ ಅಷ್ಟೇನೂ ವ್ಯತ್ಯಾಸವಿರುವುದಿಲ್ಲ. ಆದ್ರೆ ಡೀಸೆಲ್‍ನಲ್ಲಿ ನಿಜವಾದ ವ್ಯತ್ಯಾಸವಿರುತ್ತದೆ. ಈಗಿರುವ ಡೀಸೆಲ್‍ಗೆ ಹೋಲಿಸಿದ್ರೆ ಹೊಸ ಡೀಸೆಲ್‍ನಲ್ಲಿ ಸಲ್ಫರ್ ಪ್ರಮಾಣ ಕಡಿಮೆ ಇರುತ್ತದೆ. ಈ ಹಿಂದೆ ಲಭ್ಯವಿದ್ದ ಡೀಸೆಲ್‍ನಲ್ಲಿ 500 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಸಲ್ಫರ್ ಇರುತ್ತಿತ್ತು. ಆದ್ರೆ ಈಗಿರುವ ಬಿಎಸ್ 4 ಡೀಸೆಲ್‍ನಲ್ಲಿ 50 ಪಿಪಿಎಂ ಸಲ್ಫರ್ ಇದ್ದು ಲೋ ಸಲ್ಫರ್ ಡೀಸೆಲ್ ಎಂದೇ ಕರೆಯಲಾಗುತ್ತದೆ. ಇನ್ನು ಬಿಎಸ್6 ಇಂಧನದಲ್ಲಿ ಕೇವಲ 10 ಪಿಪಿಎಂ ಸಲ್ಫರ್ ಮಾತ್ರ ಇರುತ್ತದೆ. ಇದು ಪರಿಸರಕ್ಕಾಗಿ ಮತ್ತಷ್ಟು ಸ್ವಚ್ಛ ಹಾಗೂ ಉತ್ತಮವಾಗಿರುತ್ತದೆ. ಎಂಜಿನ್ ಕೂಡ ಸ್ವಚ್ಛವಾಗಿ ಕಾರ್ಯ ನಿರ್ವಹಿಸುತ್ತದೆ.

    ಇಂಧನದಲ್ಲಿನ ಸಲ್ಫರ್ ಡೀಸೆಲ್ ಎಂಜಿನ್‍ಗಳಲ್ಲಿನ ಇಂಜೆಕ್ಟರ್ ಗಳ  ರಾಸಾಯನಿಕ ತೈಲಲೇಪನಕ್ಕೆ ಸಹಾಯ ಮಾಡುತ್ತದೆ. ಡೀಸೆಲ್ ಎಂಜಿನ್‍ಗಳು ದ್ರವವನ್ನು ತುಂತುರು ಹನಿಗಳಾಗಿ ಪರಿವರ್ತಿಸಲು ಇಂಜೆಕ್ಟರ್ ಗಳನ್ನು ಅವಲಂಬಿಸುತ್ತವೆ. ಒಂದು ವೇಳೆ ಡೀಸೆಲ್‍ನಲ್ಲಿ ಸಲ್ಫರ್ ಪ್ರಮಾಣ ಕಡಿಮೆಯಿದ್ದರೆ ಇಂಜೆಕ್ಟರ್ ನಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಹೊಗೆ ಹೊರಸೂಸುವಿಕೆಯೂ ಹೆಚ್ಚಾಗುತ್ತದೆ.

    ಬಿಎಸ್4 ಇಂಧನವನ್ನ ಬಿಎಸ್6 ವಾಹನಗಳಿಗೆ ಹಾಕಿದ್ರೆ ಏನಾಗುತ್ತದೆ?
    ಬಿಎಸ್6 ಕಾರುಗಳಲ್ಲಿ ಬಿಎಸ್6 ಇಂಧನದಿಂದ ಕಾರ್ಯನಿರ್ವಹಿಸಬಲ್ಲ ಅಪ್‍ಡೇಟೆಡ್ ಹಾರ್ಡ್‍ವೇರ್(ಇಂಜೆಕ್ಟರ್) ಹಾಗೂ ಎಕ್ಸ್ಹಾಸ್ಟ್ ಸ್ಟ್ರೀಮ್‍ನಲ್ಲಿ ಹೆಚ್ಚುವರಿ ಘಟಕಗಳು ಇರುತ್ತವೆ. ಉದಾಹರಣೆಗೆ ಎಕ್ಸಾಸ್ಟ್ ಸಿಸ್ಟಂ ನಲ್ಲಿ ಡೀಸಲ್ ಪಾರ್ಟಿಕುಲೇಟ್ ಫಿಲ್ಟರ್ ಹಾಗೂ ಕೆಲವದರಲ್ಲಿ ಯೂರಿಯಾ ಇಂಜೆಕ್ಷನ್ ಕೂಡ ಇರುತ್ತದೆ. ಹೆಚ್ಚಿನ ಪ್ರಮಾಣದ ಸಲ್ಫರ್ಯುಕ್ತ ಹಳೆಯ ಇಂಧನವನ್ನ ಹೊಸ ಎಂಜಿನ್‍ನಲ್ಲಿ ಬಳಸಿದ್ರೆ ಡೀಸೆಲ್ ಪಾರ್ಟಿಕುಲೇಟ್ ಫಿಲ್ಟರ್ಗಳು ಬ್ಲಾಕ್ ಆಗಿ ಬೇಗನೆ ಬದಲಾವಣೆ ಮಾಡಬೇಕಾಗುತ್ತದೆ. ಜೊತೆಗೆ ಎಂಜಿನ್ ತನ್ನ ಸಾಮರ್ಥ್ಯಕ್ಕಿಂತ  ಕಡಿಮೆ ಕಾರ್ಯ ನಿರ್ವಹಣೆ ಮಾಡುತ್ತದೆ. ವಾಹನದ ಮೈಲೇಜ್ ಮತ್ತು ಒಟ್ಟಾರೆ ಹೊಗೆ ಹೊರಸೂಸುವಿಕೆಯ ಮೇಲೂ ಪರಿಣಾಮ ಬೀರುತ್ತದೆ. ಬಿಎಸ್6 ಕಾರಿನಲ್ಲಿ ಬಿಎಸ್4 ಇಂಧನ ಬಳಸಿದಾಗ ಆಗುವ ತೊಂದರೆ ಬೇಗನೆ ಗೊತ್ತಾಗುತ್ತದೆ.

    ಬಿಎಸ್-2 ಗಿಂತಲೂ ಮೊದಲು ಯಾವ ನಿಯಮ ಇತ್ತು?
    ಭಾರತದಲ್ಲಿ ಮೊದಲ ಬಾರಿಗೆ 1991ರಲ್ಲಿ ಪೆಟ್ರೋಲ್ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಜಾರಿಗೊಳಿಸಲಾಯ್ತು. ನಂತರ 1992ರಲ್ಲಿ ಡೀಸೆಲ್ ವಾಹನಗಳಗೆ ಮಾನದಂಡ ಜಾರಿಗೆ ಬಂತು. ಇದರ ಬೆನ್ನಲ್ಲೇ ಪೆಟ್ರೋಲ್ ವಾಹನಗಳಲ್ಲಿ ಕ್ಯಾಟಲಿಸ್ಟಿಕ್ ಕನ್ವರ್ಟರ್ ಕಡ್ಡಾಯಗೊಳಿಲಾಯ್ತು ಹಾಗೂ ಲೆಡ್ ರಹಿತ ಪೆಟ್ರೋಲ್ ಮಾರುಕಟ್ಟೆಗೆ ಪರಿಚಯಿಸಲಾಯ್ತು. 1999ರ ಏಪ್ರಿಲ್‍ನಲ್ಲಿ ಭಾರತದಲ್ಲಿ ಎಲ್ಲಾ ವಾಹನಗಳು ಯುರೋ 1 ಅಥವಾ ಭಾರತ 2000 ಮಾನದಂಡವನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಆದ್ರೆ ಈ ಬದಲಾವಣೆ ಮಾಡಿಕೊಳ್ಳಲು ಕಾರು ತಯಾರಕರು ಸಿದ್ಧರಿರಲಿಲ್ಲ. ಹೀಗಾಗಿ ಮುಂದಿನ ತೀರ್ಪಿನಲ್ಲಿ ಯೂರೋ 2 ಅನುಷ್ಠಾನ ದಿನಾಂಕ ಜಾರಿಯಾಗಲಿಲ್ಲ.

    2002ರಲ್ಲಿ ಭಾರತ ಸರ್ಕಾರ ಮಾಶೆಲ್ಕರ್ ಸಮಿತಿಯ ವರದಿಯನ್ನು ಸ್ವೀಕರಿಸಿತು. ಈ ವರದಿಯಲ್ಲಿ ಯುರೋ ಆಧರಿತ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಭಾರತದಲ್ಲೂ ಜಾರಿಗೊಳಿಸುವಂತೆ ಶಿಫಾರಸು ಮಾಡಿತ್ತು. ಈ ಮಾನದಂಡವನ್ನು ಮೊದಲಿಗೆ ಪ್ರಮುಖ ನಗರಗಳಲ್ಲಿ ಜಾರಿಗೆ ತಂದು ನಂತರ ಕೆಲವು ವರ್ಷಗಳ ಬಳಿಕ ದೇಶದ ಇತರೆ ಭಾಗಗಳಿಗೆ ವಿಸ್ತರಿಸುವ ಮೂಲಕ ಹಂತಹಂತವಾಗಿ ಜಾರಿಗೊಳಿಸಬೇಕೆಂದು ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯ ಆಧಾರದ ಮೇಲೆ ರಾಷ್ಟ್ರೀಯ ವಾಹನ ಇಂಧನ ನೀತಿಯನ್ನು 2003ರಲ್ಲಿ ಅಧಿಕೃತವಾಗಿ ಘೋಷಿಸಲಾಯ್ತು. ನಂತರ 2010ರ ಅಕ್ಟೋಬರ್ ದೇಶದಾದ್ಯಂತ ಭಾರತ್ ಸ್ಟೇಜ್ -3 ಅನುಷ್ಠಾನಗೊಳಿಸಲಾಯ್ತು.

    ಯಾವುದೇ ಸಮಸ್ಯೆಯಾಗಲ್ಲ:
    ಮುಂದಿನ ಕೆಲ ವಾರಗಳಲ್ಲಿ ಇಂಧನ ಡಿಪೋಗಳಿಂದ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಆಗಲಿದೆ. ನಿರೀಕ್ಷೆಯಂತೆ ಏ.1ರಿಂದ ಯುರೋ-6 ದರ್ಜೆಯ ತೈಲ ದೇಶದೆಲ್ಲೆಡೆಯ ಪೆಟ್ರೋಲ್ ಪಂಪ್ ಗಳಿಗೆ ತಲುಪಲಿದೆ. ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರವಹಿಸಲಾಗಿದೆ. ತೈಲ ಸಂಸ್ಕರಣ ಘಟಕಗಳನ್ನು ಉನ್ನತೀಕರಿಸಲು ಸುಮಾರು 35 ಸಾವಿರ ಕೋಟಿ ರೂ. ಹಣವನ್ನು ವೆಚ್ಚ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

  • ಬ್ರಾಂಡೆಡ್ ಹೆಸರಿನ ಕೊಳಕು ಎಣ್ಣೆಯ ಪಾನಿಪೂರಿ – ಚಪ್ಪರಿಸಿ ತಿನ್ನೋರಿಗೆ ಕಾಯಿಲೆ ಗ್ಯಾರೆಂಟಿ

    ಬ್ರಾಂಡೆಡ್ ಹೆಸರಿನ ಕೊಳಕು ಎಣ್ಣೆಯ ಪಾನಿಪೂರಿ – ಚಪ್ಪರಿಸಿ ತಿನ್ನೋರಿಗೆ ಕಾಯಿಲೆ ಗ್ಯಾರೆಂಟಿ

    ಬೆಂಗಳೂರು: ಚಪ್ಪರಿಸಿ ತಿನ್ನುವ ಗೋಲ್ಗಪ್ಪ, ಕಲರ್‌ಫುಲ್ ಆಗಿ ಕಾಣುವ ಮಸಾಲೆ ಪಾನಿಪೂರಿ, ನೋಡಿದ ತಕ್ಷಣ ಬಾಯಲ್ಲಿ ನೀರು ತರಿಸೋ ಸಮೋಸ ತಿನ್ನೋಕು ಮುಂಚೆ ಹುಷಾರಾಗಿರಿ. ನೀವು ಚಪ್ಪರಿಸಿ ತಿನ್ನುವ ಪಾನಿಪೂರಿ ಅಸಲಿಯತ್ತನ್ನ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಬಟಾಬಯಲು ಮಾಡಿದೆ.

    ಬೇಸಿಗೆ ಶುರು ಆಯ್ತು ಬಾಯಿ ಸುಮ್ಮನಿರಲ್ಲ ಹಣ್ಣು, ಹಂಪಲು ತಿನ್ನಲು ಹೋದರೆ ಸ್ವಲ್ಪ ದುಬಾರಿ. ಅದಕ್ಕೆ ಸಂಜೆ ಆದ ಕೂಡಲೇ ಸ್ನಾಕ್ಸ್ ನೆನಪಿಗೆ ಬರತ್ತೆ. ಆಗ ತಿಂಡಿ ಪ್ರಿಯರು ಗೋಲ್ಗಪ್ಪ, ಪಾನಿಪುರಿ, ಸಮೋಸಾ ಅಂತ ಹುಡುಕಿಕೊಂಡು ಹೋಗುತ್ತಾರೆ. ಆದರೆ ಗೋಲ್ಗಪ್ಪ ಅದೇ ಮಡಿಕೆ ಪಾನಿ, ವಿಧವಿಧವಾಗಿ ಎಣ್ಣೆಯಲ್ಲಿ ಕರಿದ ಪೂರಿ ಜೊತೆಗೆ ನೋಡೋಕು ಸಖತ್ ಕಲರ್‌ಫುಲ್ ಆಗಿರುತ್ತೆ. ಆದರೆ ಅದೆಲ್ಲಿ ತಯಾರಾಗುತ್ತೆ? ಹೇಗೆ ತಯಾರಾಗುತ್ತೆ? ಯಾರು ತಯಾರು ಮಾಡ್ತಾರೆ? ಎನ್ನೋದನ್ನ ನೋಡಿದರೆ ಮತ್ತೆ ಬೇಡಪ್ಪ ಎನ್ನುತ್ತಿರ.

    ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಪಾನಿಪೂರಿಗೆ ಬಳಸುವ ಪೂರಿ ಎಲ್ಲಿ ತಯಾರು ಮಾಡುತ್ತಾರೆ? ಹೇಗೆ ಮಾಡುತ್ತಾರೆ ಅನ್ನೋದನ್ನ ಬಿಚ್ಚಿಟ್ಟಿದೆ. ಪಬ್ಲಿಕ್ ಟಿವಿ ತಂಡ ಪೂರಿ ತಯಾರು ಮಾಡುವ ವ್ಯಾಪಾರಿ ಬಳಿ ಹೋಗಿ ಇದನ್ನು ಎಲ್ಲಿ ತಯಾರಿಸುತ್ತೀರಾ? ಯಾವ ಎಣ್ಣೆ ಹಾಕುತ್ತೀರಾ? ಬಿಳಿ ಪೂರಿಗಳು ಬೇಕಿತ್ತು ಎಂದು ಗ್ರಾಹಕರ ಸೋಗಿನಲ್ಲಿ ಹೋಗಿ ವಿಚಾರಿಸಿದರು. ಈ ವೇಳೆ ವ್ಯಾಪಾರಿ ನಾವು ಇಲ್ಲಿಯೇ ಪೂರಿ ತಯಾರಿಸುತ್ತೇವೆ. ಒಳ್ಳೆ ಎಣ್ಣೆ ಹಾಕಿ ಪೂರಿ ತಯಾರಿಸಲಾಗುತ್ತೆ ಎಂದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಾವು ತಿನ್ನುವ ಪೂರಿಯನ್ನು ಕರಿಯುವ ಎಣ್ಣೆ ಮತ್ತು ಎಣ್ಣೆ ತುಂಬಿಸೋ ಡ್ರಮ್‍ಗಳು, ಆ ಪೂರಿ ತುಂಬಿರೊ ಬ್ಯಾಗ್‍ಗಳನ್ನು ನೋಡಿದರೆ ಇನ್ನೊಂದು ಸಲ ತಿನ್ನಬೇಕು ಅನಿಸಲ್ಲ. ಆದರೆ ವ್ಯಾಪಾರಿ ಮಾತ್ರ ಇದು ಬ್ರಾಂಡೆಡ್ ಎಣ್ಣೆ ಎಂದು ವಾದಿಸುತ್ತಾನೆ. ಆ ಪೂರಿಯನ್ನ ಲಟ್ಟಿಸಿ ರೋಲ್ ಮಾಡೋ ಮಷಿನ್‍ಗೆ ಎಣ್ಣೆ ಸುರಿಯೋದನ್ನ ನೋಡಿಬಿಟ್ಟರೆ ಅಯ್ಯೋ ಶಿವನೆ ಇದನ್ನ ಇಷ್ಟು ದಿನ ತಿನ್ನುತ್ತಿದ್ದಿದ್ದು ಅನ್ನಿಸಿಬಿಡುತ್ತೆ.

    ಅಯ್ಯೋ ಅದು ಬಿಡಿ ನಮಗೆ ಕೊಡ್ಬೇಕಾದ್ರೆ ಸ್ವಚ್ಛ ಜಾಗದಲ್ಲಿ, ಸ್ಚಚ್ಛ ಕೈ ಇದ್ದರೆ ಸಾಕು ಅನ್ನೋರು ಮಡಿಕೆ ಪಾನಿ ಮಾರಾಟ ಮಾಡೋ ಜಾಗ ನೋಡಿದರೆ ಸುಸ್ತಾಗುತ್ತೀರಿ.

    ಬೆಂಗಳೂರಿನ ಹೃದಯಭಾಗ ಅಂತ ಕರೆಸಿಕೊಳ್ಳೊ ಮೆಜೆಸ್ಟಿಕ್‍ನಲ್ಲಿ ಈ ತರದ ಸ್ನಾಕ್ಸ್ ಮಾರುವವರೂ ಕಡಿಮೆ ಇಲ್ಲ, ತಿನ್ನೋರಿಗೂ ಬರ ಇಲ್ಲ. ಏನ್ರೀ ಇಷ್ಟೊಂದು ಕೊಳಕು ಅಂತ ಪ್ರಶ್ನಿಸಿದರೆ ವ್ಯಾಪಾರಿ ಸುಳ್ಳಿನ ಕಂತೆಯನ್ನೆ ಕಟ್ಟುತ್ತಾರೆ. ತಿಂಡಿ ಪ್ಲೇಟ್‍ಗಳನ್ನು ತೊಳೆಯಲು ಬೇರೆ ಕಡೆ ವ್ಯವಸ್ಥೆ ಇದೆ. ನಾವು ಗ್ರಾಹಕರಿಗೆ ಕುಡಿಯಲು ಬಿಸ್ಲೆರಿ ನೀರು ಕೊಡ್ತೀವಿ. ಕುಡಿಯೋ ನೀರಲ್ಲಿ ಪ್ಲೇಟ್ ತೊಳೆಯೊಲ್ಲ. ಹಾಗೆ ಮಾಡಿದರೆ ಬರುವವರು ಬರಲ್ಲ. ನಮ್ಮ ಅಂಗಡಿ ಇದೆ ಅಲ್ಲೇ ನಾವು ಪ್ಲೇಟ್ ತೊಳೆಯುತ್ತೇವೆ, ಒಮ್ಮೊಮ್ಮೆ ಪ್ಲೇಟ್ ತೊಳಿಯೋಕೆ ಮಿನರಲ್‍ವಾಟರ್ ಬಳಸ್ತೀವಿ ಎಂದು ಕಥೆ ಬಿಡುತ್ತಾರೆ.

    ಇತ್ತ ಮಲ್ಲೇಶ್ವರಂ ಹೈಟೆಕ್ ಏರಿಯಾ, ಆದರೆ ಅಲ್ಲಿಯೂ ಅಷ್ಟೇ ಕೈಗೆ ಗ್ಲೌಸ್ ಹಾಕಲ್ಲ, ಅಂಗಡಿ ಹಾಕಿರುವ ಸ್ಥಳ ಸ್ವಚ್ಛ ಇರಲ್ಲ. ಪಾನಿಗೆ ಕೈ ಹಾಕಿ ಹಾಕಿ ಕೊಳೆಯಾಗಿಯೇ ಕಾಯಿಲೆ ತರೋ ಪೂರಿ ಕೊಡ್ತಾರೆ. ಕಸದ ರಾಶಿ ಪಕ್ಕನೇ ಪಾನಿಪೂರಿಯನ್ನ ಗ್ರಾಹಕರಿ ಸವಿಯಬೇಕಿದೆ.

    ಪಾನಿ ಮೊದಲೇ ಬಿಸಿ ಇರಲ್ಲ. ಹಾಗಾಗಿ ರೋಗಾಣುಗಳು ಬೇಗ ಸೇರಿಕೊಂಡು ಬಿಡುತ್ತವೆ. ಅಲ್ಲದೇ ಗೋಲ್ಗಪ್ಪ ತಿನ್ನುವಾಗ ಗಮನಿಸಿ, ಸರಿಯಾಗಿ ಪೂರಿಗಳನ್ನ ಮುಚ್ಚಿರಲ್ಲ, ಪಾನಿ ಡಬ್ಬ ಓಪನ್ ಆಗಿ ಧೂಳು ಬಂದು ಸೇರಿ ಬಿಟ್ಟಿರುತ್ತದೆ. ಸ್ವಚ್ಛತೆ ಇಲ್ಲದಿದ್ದರೂ ಇದನ್ನ ತಿನ್ನೊರ ಸಂಖ್ಯೆಯನ್ನು ಕಡಿಮೆ ಆಗಿಲ್ಲ. ಇನ್ನೂ ನಾವೇ ತಿಂದಿರೋ ಸ್ನಾಕ್ಸ್ ಪ್ಲೇಟನ್ನು ಎಲ್ಲಿ ತೊಳೆಯುತ್ತಾರೆ ಅನ್ನೋದನ್ನ ನೋಡಿದರೆ ಬೆಚ್ಚಿ ಬೀಳ್ತೀರಿ. ಒಂದು ಬಕೆಟ್‍ನಲ್ಲಿ ನೀರಿಟ್ಟು ಅದರಲ್ಲೇ ಮತ್ತೆ ಮತ್ತೆ ಪ್ಲೇಟ್‍ಗಳನ್ನು ತೊಳೆಯುತ್ತಾರೆ.

    ನೀರು, ಸ್ವಚ್ಛತೆ ಕೊರತೆಯೇ ಮನುಷ್ಯರ ಕಾಯಿಲೆಗಳಿಗೆ ಕಾರಣವಾಗಿದೆ. ಈ ರೀತಿ ಸ್ವಚ್ಛವಿಲ್ಲದ ಪೂರಿ ರುಚಿ ನಿಮಗೆ ಹಲವು ಕಾಯಿಲೆಗಳನ್ನ ತರುತ್ತೆ ಎಂದು ವೈದ್ಯರು ಹೇಳಿದ್ದಾರೆ. ಜಾಂಡೀಸ್, ಟೈಫಾಯ್ಡ್, ಕಾಲರಾ, ಹೊಟ್ಟೆ ನೋವು, ಗ್ಯಾಸ್‍ಸ್ಟ್ರಿಕ್ ಸಮಸ್ಯೆ, ಅಲರ್ಜಿ, ಸೋಂಕುಗಳು ಬೇಗ ಹರಡುತ್ತೆ. ವಾಂತಿ, ಬೇಧಿ, ದೊಡ್ಡ – ಸಣ್ಣ ಕರುಳು ತೊಂದರೆ ಉಂಟಾಗುತ್ತೆ.