Tag: Oil Refinery

  • ಹೊತ್ತಿ ಉರಿದ ತೈಲ ಸಂಸ್ಕರಣಾ ಘಟಕ – ಆಕಾಶದೆತ್ತರಕ್ಕೆ ಅಗ್ನಿಯ ಜ್ವಾಲೆ

    ಹೊತ್ತಿ ಉರಿದ ತೈಲ ಸಂಸ್ಕರಣಾ ಘಟಕ – ಆಕಾಶದೆತ್ತರಕ್ಕೆ ಅಗ್ನಿಯ ಜ್ವಾಲೆ

    ಜಕಾರ್ತಾ: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ದುರಂತ ಸಂಭವಿಸಿದ್ದು, ಕಚ್ಚಾ ತೈಲ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

    ಸೋಮವಾರ ಮಧ್ಯರಾತ್ರಿ ಪಶ್ಚಿಮ ಜಾವಾದ ಬಾಲಂಗನ್‌ನಲ್ಲಿರುವ ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಕಂಪನಿ ಪೆರ್ಟಾಮಿನಾದ ಘಟಕ ಸ್ಫೋಟಗೊಂಡು ಹೊತ್ತಿ ಉರಿದು ಹೋಗಿದ್ದು, 1 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.

    ರಾಜಧಾನಿ ಜಕಾರ್ತಾದಿಂದ 200 ಕಿ.ಮೀ ದೂರದಲ್ಲಿರುವ ಈ ಘಟಕ 90ರ ದಶಕದ ಮಧ್ಯಭಾಗದಲ್ಲಿ ಆರಂಭಗೊಂಡಿದ್ದು, ಪ್ರತಿ ನಿತ್ಯ 1.25 ಲಕ್ಷ ಬ್ಯಾರೆಲ್‌ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.

    ಆರಂಭದಲ್ಲಿ ತೈಲ ಸಂಗ್ರಹ ಮಾಡಿಟ್ಟ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅಕ್ಕ ಪಕ್ಕದಲ್ಲಿದ್ದ ಟ್ಯಾಂಕ್‌ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಓರ್ವ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಪ್ರಾಥಮಿಕ ಮಾಹಿತಿ ಪ್ರಕಾರ 10 ಮಂದಿ ನಾಪತ್ತೆಯಾಗಿದ್ದು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಕೆಟ್ಟ ವಾಸನೆಯಿಂದಾಗಿ ಜನರು ಉಸಿರಾಡಲು ಕಷ್ಟಪಟ್ಟಿದ್ದು, ಕೆಲವರ ಆರೋಗ್ಯ ಹದಗೆಟ್ಟಿದೆ. ಮುಂದಿನ ನಾಲ್ಕು, ಐದು ದಿನದಲ್ಲಿ ಘಟಕ ಮತ್ತೆ ಕಾರ್ಯಾರಂಭ ಮಾಡಲಿದೆ ಎಂದು ಕಂಪನಿ ತಿಳಿಸಿದೆ.

    ಘಟಕದಲ್ಲಿ ಸ್ಫೋಟ ಸಂಭವಿಸಿದ್ದು ಹೇಗೆ ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿಡಿಲಿನಿಂದ ತೈಲ ಘಟಕ ಸ್ಫೋಟಗೊಂಡಿರಬಹುದು ಎಂದು ವರದಿಯಾಗಿದೆ. ತೈಲ ಘಟಕ ಸ್ಫೋಟಗೊಂಡು ಹೊತ್ತಿ ಉರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.