Tag: officers

  • ನಿರ್ಮಾಪಕ ಆನಂದ್ ಅಪ್ಪುಗೋಳಗೆ ಇಡಿ ಶಾಕ್- 31.35 ಕೋಟಿ ಆಸ್ತಿ ವಶಕ್ಕೆ

    ನಿರ್ಮಾಪಕ ಆನಂದ್ ಅಪ್ಪುಗೋಳಗೆ ಇಡಿ ಶಾಕ್- 31.35 ಕೋಟಿ ಆಸ್ತಿ ವಶಕ್ಕೆ

    ನವದೆಹಲಿ: ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ನಿರ್ಮಾಪಕ ಆನಂದ್ ಅಪ್ಪುಗೋಳಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬ್ಯಾಂಕ್ ಖಾತೆಯಲ್ಲಿದ್ದ ಹಣ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 31.35 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬೆಳಗಾವಿಯಲ್ಲಿ ಆನಂದ್ ಅಪ್ಪುಗೋಳ ಒಡೆತನದಲ್ಲಿರುವ ಹನುಮಾನ್ ನಗರದ ಬಂಗಲೆ, ಬಾಕ್ಸೈಟ್ ರಸ್ತೆಯಲ್ಲಿರುವ ಖಾಲಿ ನಿವೇಶನ, ಬಿ.ಕೆ ಬಾಳೆಕುಂದ್ರಿಯಲ್ಲಿನ ಮನೆ ಹಾಗೂ ನೆಹರು ನಗರದಲ್ಲಿರುವ ಕಚೇರಿ, ಬ್ಯಾಂಕ್ ಖಾತೆಯಲ್ಲಿದ್ದ ಹಣ ಸೇರಿ ಒಟ್ಟು 31.35 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ವಶಕ್ಕೆ ಪಡೆಯಲಾಗಿದೆ.

    ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕೊ ಆಪರೇಟಿವ್ ಸೊಸೈಟಿಯಲ್ಲಿ ಠೇವಣಿಯಿಟ್ಟಿದ್ದ ಸಾವಿರಾರು ಜನರ 250 ಕೋಟಿ ರೂ.ಗೂ ಅಧಿಕ ಮೊತ್ತವನ್ನು ದುರ್ಬಳಕೆ ಮಾಡಿದ ಆರೋಪ ಆನಂದ್ ಅಪ್ಪುಗೋಳ ಮೇಲಿದೆ. ಈತನ ವಿರುದ್ಧ ಹಲವರು ದೂರು ದಾಖಲಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಇದೀಗ ಮತ್ತೆ ಇಡಿ ಅಧಿಕಾರಿಗಳು ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.

    ಠೇವಣಿದಾರರ ಹಣದಲ್ಲಿ ಹಲವು ಆಸ್ತಿ, ಐಷಾರಾಮಿ ಬಂಗಲೆಗಳನ್ನು ಆನಂದ್ ಅಪ್ಪುಗೋಳ ಖರೀದಿಸಿದ್ದಾನೆ. ಇವೆಲ್ಲವನ್ನೂ ಹರಾಜು ಮಾಡಲು ಈ ಹಿಂದೆ ಬೆಳಗಾವಿ ಜಿಲ್ಲಾಡಳಿತ ಮುಂದಾಗಿತ್ತು. ಇದೀಗ ಜಾರಿ ನಿರ್ದೇಶನಾಲಯ ಇವನ್ನು ವಶಕ್ಕೆ ಪಡೆದಿದೆ.

  • ಮಣ್ಣಲ್ಲಿ ಮುಚ್ಚಿ ಹೋಗ್ತಿದೆ 500 ವರ್ಷದ ದೇಗುಲ

    ಮಣ್ಣಲ್ಲಿ ಮುಚ್ಚಿ ಹೋಗ್ತಿದೆ 500 ವರ್ಷದ ದೇಗುಲ

    – ದೇವಸ್ಥಾನಕ್ಕೆ ಕಂಟಕವಾಯ್ತು ರಸ್ತೆ ಅಗಲೀಕರಣ

    ಮಂಡ್ಯ: ಹೆದ್ದಾರಿ ಕಾಮಗಾರಿಯಿಂದಾಗಿ ಜಿಲ್ಲೆಯಲ್ಲಿರುವ 500 ವರ್ಷಗಳ ಹಳೆಯದಾದ ಪ್ರಸಿದ್ಧ ದೇವಸ್ಥಾನಕ್ಕೆ ಕಂಟಕ ಎದುರಾಗಿದೆ. ಇದೀಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇಗುಲವೇ ಮುಚ್ಚಿಹೋಗುವ ಆತಂಕ ಎದುರಾಗಿದೆ.

    ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ರಂಗನಾಥ ಸ್ವಾಮಿ ದೇವಾಲಯ ಇದೆ. ಇದು 500 ವರ್ಷಗಳ ಹಿಂದಿನ ಪುರಾಣ ಪ್ರಸಿದ್ಧ ದೇವಾಲಯ. ರಂಗನಾಥ ಸ್ವಾಮಿ ಮಲಗಿರುವ ಭಂಗಿಯಲ್ಲಿ ವಿಗ್ರಹ ಕೆತ್ತಲಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇವಾಲಯ ಮಣ್ಣಲ್ಲಿ ಮಣ್ಣಾಗುವ ಆತಂಕ ಎದುರಾಗಿದೆ.

    ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇಗುಲಗಳು ಹತ್ತಾರಿವೆ. ಅದರಲ್ಲಿ ವಿಜಯನಗರ ಅರಸರ ಕಾಲದ ಈ ರಂಗನಾಥ ಸ್ವಾಮಿ ದೇಗುಲವೂ ಒಂದು. ಶ್ರೀರಂಗಪಟ್ಟಣದ ಗಂಜಾಂ ಸಮೀಪದ ಗದ್ದೆಯೊಂದರಲ್ಲಿ ದೇವಾಲಯ ನಿರ್ಮಿಸಿರುವುದರಿಂದ ಈ ದೇವಸ್ಥಾನವನ್ನು ಗದ್ದೆ ರಂಗನಾಥಸ್ವಾಮಿ ಎಂದು ಕರೆಯಲಾಗುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದಾಗಿ ಗದ್ದೆ ರಂಗನಾಥಸ್ವಾಮಿ ದೇವಾಲಯ ಮುಚ್ಚಿಹೋಗುವ ಭೀತಿ ಎದುರಾಗಿದೆ.

    ಈಗಾಗಲೇ ದೇವಾಲಯದ ಸುತ್ತಾ ಮಣ್ಣಿನ ರಾಶಿ ಹಾಕಲಾಗುತ್ತಿರುವುದರಿಂದ ಮುಚ್ಚಿಹೋಗುವ ಅಪಾಯ ಎದುರಾಗಿದೆ. ಹೀಗಿದ್ದರೂ ದೇವಾಲಯ ಸ್ಥಳಾಂತರ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ. ಹೆದ್ದಾರಿ ಕಾಮಗಾರಿಗೆ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲೇ ಸ್ಥಳೀಯರು ದೇವಾಲಯ ಸ್ಥಳಾಂತರ ಮಾಡುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಈವರೆಗೂ ಅಧಿಕಾರಿಗಳು ದೇವಸ್ಥಾನವನ್ನು ಸ್ಥಳಾಂತರಿಸದೇ ನಿರ್ಲಕ್ಷಿಸಿದ್ದಾರೆ.

  • ಯಾದಗಿರಿ ಪೊಲೀಸ್ ಇಲಾಖೆಯಲ್ಲಿ ಸೀನಿಯರ್, ಜೂನಿಯರ್ ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ

    ಯಾದಗಿರಿ ಪೊಲೀಸ್ ಇಲಾಖೆಯಲ್ಲಿ ಸೀನಿಯರ್, ಜೂನಿಯರ್ ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ

    – ಸಣ್ಣ ಪುಟ್ಟ ಕಾರಣ ಹೇಳಿ ಜೂನಿಯರ್ ಅಧಿಕಾರಿಗಳಿಗೆ ಶಿಕ್ಷೆ
    – ಮಾನಸಿಕವಾಗಿ ಕುಗ್ಗುತ್ತಿರುವ ಅಧಿಕಾರಿಗಳು

    ಯಾದಗಿರಿ: ಜಿಲ್ಲೆಯಲ್ಲಿ ಜನರ ನಿರ್ಲಕ್ಷ್ಯದಿಂದ ಕೊರೊನಾ ತಾಂಡವಾಡುತ್ತಿದೆ. ಈ ಮಧ್ಯೆ ಮರಳು ಮಾರಾಟ ದಂಧೆ, ಮದ್ಯ ಮಾರಾಟ, ಇಸ್ಪೀಟು, ಮಟ್ಕಾ ಮಾಫಿಯಾಗಳು ಯಾರ ಭಯವಿಲ್ಲದೆ ನಡೆಯುತ್ತಿದೆ. ಆದರೆ ಇವುಗಳನ್ನು ತಡೆಯಬೇಕಾದ ಪೊಲೀಸ್ ಇಲಾಖೆ ಜಾಣ ನಿದ್ದೆಗೆ ಜಾರಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.

    ಇನ್ನೊಂದೆಡೆ ಯಾದಗಿರಿ ಜಿಲ್ಲೆಯಲ್ಲಿ ಜೂನಿಯರ್ ಮತ್ತು ಸೀನಿಯರ್ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಹಿರಿಯ ಅಧಿಕಾರಿ ಮಾತಿಗೆ ಸೊಪ್ಪು ಹಾಕದ ಜೂನಿಯರ್ ಆಫೀಸರ್ ಗಳನ್ನು ಸಸ್ಪೆಂಡ್, ವರ್ಗಾವಣೆ, ಶಿಕ್ಷೆ ಕೊಡೆಸುವುದ್ರಲ್ಲಿ ಹಿರಿಯ ಅಧಿಕಾರಿಗಳು ಮಗ್ನರಾಗಿ ಬಿಟ್ಟಿದ್ದಾರೆ. ಇದು ಸಾರ್ವಜನಿಕರ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಎಷ್ಟೋ ಪ್ರಕರಣಗಳು ಇತ್ಯರ್ಥವಾಗದೇ ಉಳಿದು ಬಿಟ್ಟಿವೆ.

    ಸಣ್ಣಪುಟ್ಟ ಕಾರಣಗಳಿಗೆ ಮತ್ತು ಕಾರಣವನ್ನು ಸಹ ನೀಡದೆ ಕೊರೊನಾ ಸಮಯದಲ್ಲಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿದ ಪಿಎಸ್‍ಐ ಗಳನ್ನು ಅಮಾನತು ಮಾಡಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. ಕಾರಣವಿಲ್ಲದೆ ಗುರುಮಿಠಕಲ್ ಲೇಡಿ ಪಿಎಸ್‍ಐ ಶೀಲಾರನ್ನು ರಾತ್ರೋರಾತ್ರಿ ಮಹಿಳಾ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆಭರಣಗಳ ಪ್ರಕರಣ ಒಂದರಲ್ಲಿ ಕರ್ತವ್ಯಲೋಪ ಅಂತ ಸೈದಾಪುರ ಲೇಡಿ ಪಿಎಸ್‍ಐ ಸುವರ್ಣ ಅವರನ್ನು ಅಮಾನತು ಮಾಡಲಾಗಿದೆ. ಸುರಪುರ ಪಿಎಸ್‍ಐ ಚೇತನ ಲಾಕ್‍ಡೌನ್ ಸಮಯದಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡಿ, ಸುರಪುರ ಸಿಂಗಂ ಅಂತ ಹೆಸರು ಪಡೆದಿದ್ದರು. ಅವರನ್ನು ಸಹ ವಿಚಾರಣೆ ನಡೆಸದೆ ಏಕಾಏಕಿ ಅಮಾನತು ಮಾಡಲಾಗಿದೆ.

    ಠಾಣೆಯಲ್ಲಿ ಜನ್ಮದಿನ ಆಚರಿಸಿಕೊಂಡ್ರು ಅಂತ ನಗರ ಠಾಣೆಯ ಪಿಎಸ್ ಐ ಸೌಮ್ಯರನ್ನು ರಾತ್ರೋರಾತ್ರಿ ಬೇರೆ ಠಾಣೆಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಎಲ್ಲಾ ಪಿಎಸ್‍ಐಗಳನ್ನು ಯಾವುದೇ ವಿಚಾರಣೆ ಮಾಡದೆ ಕೇವಲ ಹಿರಿಯ ಅಧಿಕಾರಿಗಳು ನೀಡುವ ವರದಿ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗೆ ನೋಡುವುದಾದ್ರೆ ಶಿಕ್ಷೆ ಅನುಭವಿಸಿದವರೆಲ್ಲಾ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಹಗಲು ರಾತ್ರಿ ಕೆಲಸ ಮಾಡಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದವರಾಗಿದ್ದಾರೆ. ಜಿಲ್ಲೆಯ ಪ್ರಮುಖ ವಾಟ್ಸಾಪ್ ಗ್ರೂಪ್ ಗಳಲ್ಲಿ ಇವರ ಬಗ್ಗೆ ಒಳ್ಳೆಯ ಸಂದೇಶಗಳು ಹರಿದಾಡುತ್ತಿದ್ದವು.

    ಹಿರಿಯ ಅಧಿಕಾರಿಗಳು ಕೊರೊನಾ ನಿಯಮ ಪಾಲಿಸದೆ, ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾರೆ. ಆದರೆ ಅದೇ ಜೂನಿಯರ್ ಆಫೀಸರ್ ಜನ್ಮದಿನ ಆಚರಿಸಿಕೊಂಡ್ರೆ ಶಿಕ್ಷೆ ನೀಡುತ್ತಾರೆ. ಇದು ಯಾವ ನ್ಯಾಯ ಅಂತ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಸ್ಪೀಟು ದಂಧೆ ಜೋರಾಗಿದೆ. ಕಳೆದ ಎರಡು ದಿನಗಳ ಹಿಂದೆ ಯರಗೋಳದಲ್ಲಿ ಭಾರೀ ಮೊತ್ತದ ದಾಳಿ ನಡೆದಿದೆ. ಇದರಲ್ಲಿ ಸ್ಥಳೀಯ ಪಿಎಸ್ ಐ ಲೋಪ ಇರುವುದು ಸ್ಪಷ್ಟವಾಗಿದೆ. ಹೀಗಿದ್ದರೂ ಇವರ ಮೇಲೆ ಇನ್ನೂ ಕ್ರಮವಾಗಿಲ್ಲದಿರುವುದು ಹಲವಾರು ಅನುಮಾನಗಳನ್ನು ಮೂಡಿಸುತ್ತಿದೆ.

  • ರಾಯಚೂರಿನಲ್ಲಿ ಅಧಿಕಾರಿಗಳ ದಾಳಿ – 59 ಬಾಲಕಾರ್ಮಿಕರ ರಕ್ಷಣೆ

    ರಾಯಚೂರಿನಲ್ಲಿ ಅಧಿಕಾರಿಗಳ ದಾಳಿ – 59 ಬಾಲಕಾರ್ಮಿಕರ ರಕ್ಷಣೆ

    ರಾಯಚೂರು: ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಇಂದು 59 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.

    ದೇವದುರ್ಗ ತಾಲೂಕಿನಲ್ಲಿ ದಾಳಿ ನಡೆಸಿ ಕೃಷಿ ಕೆಲಸಕ್ಕೆ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ, 59 ಬಾಲ ಕಾರ್ಮಿಕರ ರಕ್ಷಣೆ ಮಾಡಲಾಗಿದೆ.

    ಬಾಲಕಾರ್ಮಿಕ ಘಟಕದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸೇರಿ ದಾಳಿ ಮಾಡಿದ್ದು, ದಾಳಿ ವೇಳೆ 10 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಿನ್ನೆ ಸಿರವಾರ ತಾಲೂಕಿನ ಕವಿತಾಳದಲ್ಲಿ ದಾಳಿ ನಡೆಸಿ 32 ಮಕ್ಕಳನ್ನು ರಕ್ಷಿಸಿದ್ದರು. ಇಂದು ಸಹ ಕಾರ್ಯಾಚರಣೆ ಮುಂದುವರಿಸಿದ ಅಧಿಕಾರಿಗಳ ತಂಡ, ಬಾಲಕ ಕಾರ್ಮಿಕರನ್ನು ರಕ್ಷಿಸಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

  • ಪ್ರವಾಹಕ್ಕೆ ಕೊಚ್ಚಿ ಹೋದ ರೈತರ ಬದುಕು- ನೆಲ ಕಚ್ಚಿದ ಬೆಳೆ ಕಣ್ಣಲ್ಲಿ ನೀರು ತರಿಸುತ್ತೆ

    ಪ್ರವಾಹಕ್ಕೆ ಕೊಚ್ಚಿ ಹೋದ ರೈತರ ಬದುಕು- ನೆಲ ಕಚ್ಚಿದ ಬೆಳೆ ಕಣ್ಣಲ್ಲಿ ನೀರು ತರಿಸುತ್ತೆ

    ಗದಗ: ಜಿಲ್ಲೆನಲ್ಲಿ ನರೆಹಾವಳಿಗೆ ಸಿಕ್ಕ ಅನ್ನದಾತರ ಬದುಕು ಹೇಳತೀರದಾಗಿದ್ದು, ಕಬ್ಬು, ಮೆಕ್ಕೆಜೋಳ, ಪೆರಲ ಹಣ್ಣು ಸೇರಿ ವಿವಿಧ ಬೆಳೆಗಳು ನೀರುಪಾಲಾಗಿವೆ. ಇದರಿಂದಾಗಿ ರೈತರು ಸಂಪೂರ್ಣ ನಷ್ಟು ಅನುಭವಿಸುವಂತಾಗಿದೆ.

    ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ 16 ಗ್ರಾಮಗಳು ಮಲಪ್ರಭಾ ಪ್ರವಾಹಕ್ಕೆ ಒಳಗಾಗಿವೆ. ಈ ಪ್ರವಾಹದಿಂದ ಸಾವಿರಾರು ಎಕರೆ ಬೆಳೆ ನೀರುಪಾಲಾಗಿದೆ. ಮೆಕ್ಕೆಜೋಳ, ಪೇರಲ, ಸೂರ್ಯಕಾಂತಿ, ಹೆಸರು, ಕಬ್ಬು, ಜೋಳ ಹೀಗೆ ಅನೇಕ ಬೆಳೆಗಳು ಜಲಾವೃತವಾಗಿವೆ. ಕೆಲ ಬೆಳೆಗಳು ಇನ್ನೇನು ಕಟಾವಿಗೆ ಬರಬೇಕು ಅನ್ನುವ ಸಂದರ್ಭದಲ್ಲೇ ರೌದ್ರ ಮಳೆ ಶುರುವಾಗಿ ಪ್ರವಾಹ ಉಂಟಾಗಿದೆ. ಈ ಮೂಲಕ ರೈತರ ಬೆಳೆಗಳನ್ನು ನುಂಗಿ ನೀರು ಕುಡಿದಿದೆ.

    ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆ ಹಾನಿಯಾಗಿ, ರೈತರು ತಲೆ ಮೇಲೆ ಕೈ ಹೊತ್ತು ಕುಳಿತರೂ ಯಾವೊಬ್ಬ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ರೈತ ಬಳಿ ಬಂದಿಲ್ಲ, ಕಷ್ಟ ಕೇಳಿಲ್ಲ. ನೊಂದ ರೈತರು ಅಧಿಕಾರಿಗಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಪ್ರವಾಹ ಸಂಭವಿಸಿ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು.

    ಪದೇ ಪದೇ ಪ್ರವಾಹಕ್ಕೊಳಗಾದ ನದಿ ಪಾತ್ರದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಸಾಲಸೂಲ ಮಾಡಿ ಹತ್ತಾರು ಸಾವಿರ ರೂಪಾಯಿ ಖರ್ಚುಮಾಡಿ ಬೆಳೆದ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿರುವುದನ್ನು ನೋಡಿ ಕಣ್ಣೀರಿಡುವಂತಾಗಿದೆ.

  • ಸ್ಥಳೀಯರಿಂದ ಶಾಸಕ, ಸಂಸದರಿಗೆ ರಸ್ತೆಯಲ್ಲೇ ತರಾಟೆ- ಹತ್ತೇ ದಿನದಲ್ಲಿ ಆರಂಭವಾಯ್ತು ಸೇತುವೆ ಕಾಮಗಾರಿ

    ಸ್ಥಳೀಯರಿಂದ ಶಾಸಕ, ಸಂಸದರಿಗೆ ರಸ್ತೆಯಲ್ಲೇ ತರಾಟೆ- ಹತ್ತೇ ದಿನದಲ್ಲಿ ಆರಂಭವಾಯ್ತು ಸೇತುವೆ ಕಾಮಗಾರಿ

    ಚಿಕ್ಕಮಗಳೂರು: ಹೇಮಾವತಿ ಅಬ್ಬರಕ್ಕೆ ಸೇತುವೆ ಕೊಚ್ಚಿ ಹೋಗಿ ವರ್ಷ ಕಳೆಯಿತು, ಇಲ್ಲಿಯವರೆಗೂ ಸೇತುವೆ ನಿರ್ಮಿಸಿ ಕೊಟ್ಟಿಲ್ಲ. ನಾವೇ ನಿರ್ಮಿಸಿಕೊಂಡಿದ್ದ ಸೇತುವೆ ಕೂಡ ಕೊಚ್ಚಿ ಹೋಗಿದೆ. ಈಗ ಮತ್ತೆ ಭೇಟಿ ಕೊಡ್ತಿದ್ದೀರಾ ಎಂದು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆಗೆ ಸ್ಥಳಿಯರು ಕ್ಲಾಸ್ ತೆಗೆದುಕೊಂಡಿದ್ದರು. ಇದರ ಫಲವಾಗಿ ಇದೀಗ ಕಾಮಗಾರಿ ಆರಂಭವಾಗಿದೆ.

    ಜನಪ್ರತಿನಿಧಿಗಳಿಗೆ ಸ್ಥಳಿಯರು ರಸ್ತೆ ಮಧ್ಯೆಯೇ ಪಾಠ ಮಾಡಿದ ಫಲವಾಗಿ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಕಳೆದ ವರ್ಷದ ಮಳೆ ಅಬ್ಬರಕ್ಕೆ ಬಂಕೇನಹಳ್ಳಿ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಇದರಿಂದ ನಾಲ್ಕೈದು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ನಂತರ ಸ್ಥಳೀಯರೇ ಹೇಮಾವತಿ ನದಿ ಒಡಲಿಗೆ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು. ಆದರೆ ಆಗಸ್ಟ್ ಮೊದಲ ವಾರದ ಮಳೆ-ಗಾಳಿಗೆ ಸ್ಥಳಿಯರೇ ನಿರ್ಮಿಸಿಕೊಂಡಿದ್ದ ಸೇತುವೆ ಕೂಡ ಕೊಚ್ಚಿ ಹೋಗಿತ್ತು.

    ಇದರಿಂದ ಸ್ಥಳಿಯರು ಮತ್ತಷ್ಟು ಆತಂಕಕ್ಕೀಡಾಗಿದ್ದರು. ಇದೇ ವೇಳೆ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಕುಮಾರಸ್ವಾಮಿ ಸ್ಥಳ ಪರಿಶೀಲನೆಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಪಾಠ ಮಾಡಿದ್ದರು. ಸ್ಥಳೀಯರು ಜನಪ್ರತಿನಧಿಗಳಿಗೆ ತರಾಟೆಗೆ ತೆಗೆದುಕೊಂಡ ಫಲವಾಗಿ ಇಂದು ಬಂಕೇನಹಳ್ಳಿ ಸೇತುವೆಗೆ ತಾತ್ಕಾಲಿಕ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಕಳೆದ ಬಾರಿ ಸೇತುವೆ ಕೊಚ್ಚಿ ಹೋದಾಗ ಸಚಿವರು, ಅಧಿಕಾರಿಗಳು ಮೇಲಿಂದ ಮೇಲೆ ಭೇಟಿ ಕೊಟ್ಟು ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಒಂದು ವರ್ಷವಾದರೂ ಸೇತುವೆ ನಿರ್ಮಾಣವಾಗಿಲ್ಲ ಎಂದು ಸ್ಥಳೀಯರು ಜನನಾಯಕರಿಗೆ ತರಾಟೆಗೆ ತೆಗೆದುಕೊಂಡಿದ್ದರು.

    ಇಂದು ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಇನ್ನೊಂದೆಡೆ ಸೇತುವೆ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಇದರಿಂದ ಬಂಕೇನಹಳ್ಳಿ ಹಾಗೂ ನಾಲ್ಕೈದು ಗ್ರಾಮದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಶಾಶ್ವತ ಸೇತುವೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

  • ಕೇರಳದ ವಿಮಾನ ಅಪಘಾತ – ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ

    ಕೇರಳದ ವಿಮಾನ ಅಪಘಾತ – ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ

    ತಿರುವನಂತಪುರಂ: ಕೇರಳ ವಿಮಾನ ದುರಂತದ ವೇಳೆ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ 22 ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಲಪ್ಪುರಂ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

    ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಕೊರೊನಾ ನಡುವೆಯೂ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ಕರೆತರುತ್ತಿತ್ತು. ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ 184 ಪ್ರಯಾಣಿಕರನ್ನು ಕೇರಳಗೆ ಬಂದಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯಿಂದ ವಿಮಾನ 35 ಅಡಿ ಕಂದಕಕ್ಕೆ ಜಾರಿ ಬಿದ್ದಿತ್ತು. ಪರಿಣಾಮ ಇಬ್ಬರು ಪೈಲಟ್‍ಗಳು ಸೇರಿ 18 ಜನರು ಸಾವನ್ನಪ್ಪಿದ್ದರು.

    ಕಂದಕಕ್ಕೆ ಬಿದ್ದಿದ್ದ ವಿಮಾನದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ಮತ್ತು ಸ್ಥಳದಲ್ಲಿದ್ದ ಹಲವು ಅಧಿಕಾರಿಗಳು ಬಂದು ರಕ್ಷಣೆ ಮಾಡಿದ್ದರು. ಇದಾದ ನಂತರ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದ ಎಲ್ಲ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಈಗ ಇವರ ಪೈಕಿ 22 ಮಂದಿ ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಎಲ್ಲ ಅಧಿಕಾರಿಗಳು 4 ಗಂಟೆಗಳ ಕಾಲ ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

    ಅಗಸ್ಟ್ 7ರಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್‍ನ ಕರಿಪುರದಲ್ಲಿ ಲ್ಯಾಂಡಿಗೆ ವೇಳೆ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿತ್ತು. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 184 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು.

    ದುಬೈಯಿಂದ 184 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಪೈಲಟ್ ದೀಪಕ್ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್ ಟಾಪ್ ರನ್‍ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸೇರಿ 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಜೊತೆಗೆ 150ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.

  • ಗಿಡ ಉಳಿಸಲು ಹೋಗಿ ಪ್ರಾಣಿಗಳ ಜೀವಕ್ಕೆ ಕುತ್ತು ತಂದ ಅರಣ್ಯ ಇಲಾಖೆ – ನಾಲ್ಕು ಹಸು ಸಾವು

    ಗಿಡ ಉಳಿಸಲು ಹೋಗಿ ಪ್ರಾಣಿಗಳ ಜೀವಕ್ಕೆ ಕುತ್ತು ತಂದ ಅರಣ್ಯ ಇಲಾಖೆ – ನಾಲ್ಕು ಹಸು ಸಾವು

    ಶಿವಮೊಗ್ಗ: ಅರಣ್ಯ ಇಲಾಖೆಯ ಎಡವಟ್ಟಿನಿಂದ ವನ್ಯ ಜೀವಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಆಗುಂಬೆ ಸಮೀಪದ ಕಾರೀ ಕುಂಬ್ರಿ ಅರಣ್ಯದಲ್ಲಿ ಅರಣ್ಯ ಇಲಾಖೆ ಹೊಸದಾಗಿ ನೆಡುತೋಪು ನಿರ್ಮಿಸಿದ್ದು, ಇಲ್ಲಿ ಹಲವು ಜಾತಿಯ ವಿವಿಧ ಗಿಡಗಳನ್ನು ನೆಡಲಾಗಿದೆ. ಈ ಗಿಡಗಳನ್ನು ವನ್ಯಜೀವಿಗಳು ತಿನ್ನುತ್ತವೆ. ಇದರಿಂದ ಗಿಡಗಳು ಹಾಳಾಗಿ ಹೋಗುತ್ತವೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಗಿಡಗಳ ಬುಡದಲ್ಲಿ ವಿಷಪೂರಿತ ಔಷಧಿಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಪ್ರತಿಯೊಂದು ಗಿಡಕ್ಕೂ ಕಟ್ಟಿದ್ದಾರೆ.

    ಈ ಮೂಲಕ ವನ್ಯ ಜೀವಿಗಳ ಸಂರಕ್ಷಿಸಬೇಕಾದ ಅರಣ್ಯ ಇಲಾಖೆಯೇ ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಅಲ್ಲದೇ ಅರಣ್ಯ ಪ್ರದೇಶದಲ್ಲಿ ಮೇವು ಅರಸಿ ಹೋಗುವ ಜಾನುವಾರುಗಳಿಗೂ ಕುತ್ತು ಉಂಟಾಗಿದೆ. ಈ ವಿಷಪೂರಿತ ಔಷಧಿ ಸೇವನೆಯಿಂದ ಆಗುಂಬೆ ಸುತ್ತಮುತ್ತಲಿನ ಗ್ರಾಮದಲ್ಲಿ ಇಂದು ನಾಲ್ಕು ಹಸುಗಳು ಸಹ ಪ್ರಾಣ ಕಳೆದುಕೊಂಡಿವೆ.

    ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಾನುವಾರುಗಳ ಸಾವಿಗೆ ಕಾರಣವಾಗಿರುವ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

  • ಸೋಂಕಿತರಿಂದ ಸುಲಿಗೆ- ಖಾಸಗಿ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿ

    ಸೋಂಕಿತರಿಂದ ಸುಲಿಗೆ- ಖಾಸಗಿ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿ

    – ಸೋಂಕಿತರಿಂದ 5 ಲಕ್ಷ ಪಡೆದಿರುವ ಬಗ್ಗೆ ಮಾಹಿತಿ
    – ಹಣ ಮರಳಿಸುವಂತೆ ತಾಕೀತು

    ಬೆಂಗಳೂರು: ಕೊರೊನಾ ಸೋಂಕಿತರಿಂದ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಆಸ್ಪತ್ರೆಗಳ ಮೇಲೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಇಂದೂ ಸಹ ಹಲವು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ.

    ಎಡಿಜಿಪಿ ಸುನೀಲ್ ಅಗರ್‍ವಾಲ್, ಐಎಎಸ್ ಉಮಾ ಮಹಾದೇವನ್ ತಂಡದಿಂದ ಪರಿಶೀಲನೆ ನಡೆಸಲಾಗಿದ್ದು, ಸರ್ಜಾಪುರ ರಸ್ತೆಯ ಕೊಲಂಬಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಂದ ಹೆಚ್ಚುವರಿ ಹಣ ಪಡೆದಿರುವುದು ಪತ್ತೆಯಾಗಿದೆ. 14 ಸೋಂಕಿತರಿಂದ 5,02,245 ರೂ.ಗಳನ್ನ ಪಡೆದಿದ್ದು, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆದಿರುವುದು ದಾಳಿ ವೇಳೆ ಪತ್ತೆಯಾಗಿದೆ. ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಸೋಂಕಿತ ಬ್ಯಾಂಕ್ ಖಾತೆಗೆ ಮರಳಿ ಜಮೆ ಮಾಡುವಂತೆ ಅಧಿಕಾರಿಗಳು ಆಸ್ಪತ್ರೆಗೆ ಸೂಚಿಸಿದ್ದಾರೆ. ಅಲ್ಲದೆ ಸೋಂಕಿತರಿಂದ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

    ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಲಭ್ಯವಿರುವ ಬಗ್ಗೆ ಡಿಸ್ ಪ್ಲೇ ಬೊರ್ಡ್ ಖಡ್ಡಾಯವಾಗಿ ಅಳವಡಿಸುವಂತೆ ಇದೇ ವೇಳೆ ಸೂಚನೆ ನೀಡಿದ್ದಾರೆ. ತಂಡ ಇನ್ನೂ ನಾಲ್ಕು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಮಾರತ್ ಹಳ್ಳಿಯ ಸರ್ಕಾರಿ ಆಸ್ಪತ್ರೆ, ಯಶೋಮತಿ, ವೈಟ್‍ಫೀಲ್ಡ್ ನ ಕೋಲಂಬಿಯಾ ಏಷ್ಯಾ, ವೈದೇಹಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ನಾಲ್ಕು ಆಸ್ಪತ್ರೆಗಳ ಬಿಲ್ ಪರಿಶೀಲನೆ ನಡೆಸಿದ್ದು ಹೆಚ್ಚು ಹಣ ಪಡೆಯದಂತೆ ವಾರ್ನ್ ಮಾಡಿದ್ದಾರೆ.

  • ನಿಧಿ ವದಂತಿ ನಂಬಿ ಗುಂಡಿ ತೋಡಿ ಬರಿಗೈಯಲ್ಲಿ ತೆರಳಿದ ಅಧಿಕಾರಿಗಳು

    ನಿಧಿ ವದಂತಿ ನಂಬಿ ಗುಂಡಿ ತೋಡಿ ಬರಿಗೈಯಲ್ಲಿ ತೆರಳಿದ ಅಧಿಕಾರಿಗಳು

    ಮಂಗಳೂರು: ಹೊಲದಲ್ಲಿ ನಿಧಿ ಇದೆ ಎಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಅಧಿಕಾರಿಗಳು ಬಂದು ಹುಡುಕಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿ ನಡೆದಿದೆ.

    ಬೆಳ್ತಂಗಡಿಯ ನಡ ಗ್ರಾಮದ ಪುಣಿತ್ತಡಿ ಎಂಬಲ್ಲಿನ ನಿವಾಸಿ ಆನಂದ ಶೆಟ್ಟಿಗೆ ಸೇರಿದ ಗದ್ದೆಯಲ್ಲಿ ಇತ್ತೀಚೆಗೆ ಕೊಳವೆ ಬಾವಿ ಕೊರೆಯಿಸಿದ್ದ ವೇಳೆ ಭೂಮಿ ಕುಸಿದಿದ್ದು ಸುಮಾರು 10 ಅಡಿಯಷ್ಟು ಆಳದ ಗುಂಡಿಯಾಗಿತ್ತು. ಹೀಗಾಗಿ ಭೂಮಿಯೊಳಗೆ ನಿಧಿ ಇರುವ ಶಂಕೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿದ್ದು, ಜನ ಸೇರಲಾರಂಭಿಸಿದರು.

    ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್, ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಹಿಟಾಚಿ ಮೂಲಕ ಶೋಧ ಕಾರ್ಯ ನಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ಗುಂಡಿ ತೆಗೆದು ಪರಿಶೀಲಿಸಿದ ಬಳಿಕ ಏನೂ ಸಿಗದೆ ಗುಂಡಿಗೆ ಮಣ್ಣು ಮುಚ್ಚಿ ಬರಿಗೈಯಲ್ಲೇ ವಾಪಸ್ ಹೋಗಿದ್ದಾರೆ. ಜನರ ವದಂತಿಯಿಂದ ಕೆಲಕಾಲ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು.