Tag: officers

  • ಹದಗೆಟ್ಟ ನಗರಸಭೆ ರಸ್ತೆ- ಅನಾರೋಗ್ಯ, ತುರ್ತು ಸ್ಥಿತಿಯಲ್ಲಿ ಜೋಳಿಗೆಯೇ ಗತಿ

    ಹದಗೆಟ್ಟ ನಗರಸಭೆ ರಸ್ತೆ- ಅನಾರೋಗ್ಯ, ತುರ್ತು ಸ್ಥಿತಿಯಲ್ಲಿ ಜೋಳಿಗೆಯೇ ಗತಿ

    ಕಾರವಾರ: ಕಾರವಾರ ನಗರಸಭೆ ವ್ಯಾಪ್ತಿಯಲ್ಲಿರುವ ಗುಡ್ಡೇಹಳ್ಳಿ ಅಧಿಕಾರಿಗಳ, ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಮೂಲ ಸೌಕರ್ಯವಿಲ್ಲದೆ ಅನಾರೋಗ್ಯ ಪೀಡಿತ ರೋಗಿಗಳನ್ನು ಕರೆದೊಯ್ಯಲು ಜೋಳಿಗೆ ಹೊತ್ತು ಜನ ಪರದಾಡುತಿದ್ದಾರೆ.

    ಈ ಗ್ರಾಮಕ್ಕೆ ಸಂಪರ್ಕಿಸುವ ದಾರಿ ತೀರಾ ಹದಗೆಟ್ಟಿದ್ದು, ವಾಹನ ಸಂಚಾರ ಸಾಧ್ಯವಿಲ್ಲದ ಕಾರಣ ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾಗುವ ಜನರನ್ನು ಬೆಡ್‍ಶೀಟ್ ಜೋಳಿಗೆಯಲ್ಲಿಯೇ ಹೊತ್ತು ತುರ್ತು ಚಿಕಿತ್ಸೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಇದೆ. ಇಂದು ಮಧ್ಯಾಹ್ನ ಅನಾರೋಗ್ಯಕ್ಕೆ ಒಳಗಾದ 64 ವರ್ಷದ ವೃದ್ಧ ಮಹಿಳೆಯೋಬ್ಬರನ್ನು ತುರ್ತು ಚಿಕಿತ್ಸೆಗೆ ಜೋಳಿಗೆಯಲ್ಲಿ ಹೊತ್ತು ತಂದು, ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿಕೊಟ್ಟ ಘಟನೆ ನಡೆದಿದೆ.

    ಎರಡು ದಿನ ಮುಂಚೆ ಅನಾರೋಗ್ಯದಿಂದ ಒದ್ದಾಡುತ್ತಿದ್ದ 23 ವರ್ಷದ ಯುವಕನೊಬ್ಬನನ್ನು ಇದೇ ರೀತಿ ಜೋಳಿಗೆಯಲ್ಲಿ ಹೊತ್ತು ತಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹೀಗೆ ವಯೋವೃದ್ಧರು ಸೇರಿದಂತೆ, ಯುವಕರು, ಮಹಿಳೆಯರು, ಮಕ್ಕಳು ಅನಾರೋಗ್ಯದಂತಹ ತುರ್ತು ಸ್ಥಿತಿಯಲ್ಲಿ ಜೋಳಿಗೆಯಲ್ಲಿಯೇ ಮಲಗಿಸಿ ಹೊತ್ತು ತರುವ ಅನಿವಾರ್ಯ ಸ್ಥಿತಿ ಇದೆ. ಈ ಪ್ರದೇಶ ನಗರಸಭೆ ವ್ಯಾಪ್ತಿಗೆ ಬಂದರೂ ಯಾವುದೇ ರೀತಿಯ ಮೂಲ ಸೌಕರ್ಯವನ್ನು ಒದಗಿಸಲಾಗಿಲ್ಲ.

    ಪ್ರತಿ ದಿನ ನಗರಕ್ಕೆ ಬರಬೇಕೆಂದರೆ ಇಲ್ಲಿನ ಜನ ನಡೆದುಕೊಂಡೇ ಬರಬೇಕು. ಯಾವುದೇ ವಾಹನ ಸೌಕರ್ಯವಾಗಲಿ, ನಗರ ಸಾರಿಗೆಯಾಗಲಿ ಇಲ್ಲಿ ಇಲ್ಲ. ಇದ್ದ ಚಿಕ್ಕ ರಸ್ತೆಯೂ ಮಳೆಯಿಂದ ಕೊಚ್ಚಿಹೋಗಿದ್ದು, ಜನ ನರಳಾಟದ ಬದುಕು ನಡೆಸುವಂತಾಗಿದೆ. ನಗರಸಭೆಯವರು ಆದಷ್ಟು ಶೀಘ್ರ ಇಲ್ಲಿನ ರಸ್ತೆ ಸರಿಪಡಿಸಿ ಕೊಡುವಂತೆ ಅಳಲು ತೋಡಿಕೊಳ್ಳುತ್ತಾರೆ.

    ನಗರದ ಬಿಣಗಾ ಹಾಗೂ ಹೈಚರ್ಚ್ ಸಮೀಪದಿಂದ ನೇರವಾಗಿ ಗುಡ್ಡೇಹಳ್ಳಿಗೆ ಕಾಡು-ಮೇಡುಗಳಿಂದ ಸುಮಾರು 8 ಕಿ.ಮೀ. ದೂರದ ಕಚ್ಚಾ ರಸ್ತೆ ಸಾಗಿದೆ. ಅಲ್ಲಿನ ಜನರು ಇದೇ ರಸ್ತೆಯ ಮೂಲಕವೇ ದಿನನಿತ್ಯದ ಕೆಲಸಕಾರ್ಯಕ್ಕಾಗಿ ಕಾರವಾರ-ಅಂಕೋಲಾ ಕಡೆಗೆ ಹೋಗಿ ಬರಬೇಕು. ಆದರೆ ಈ ರಸ್ತೆ ಮಾತ್ರ ತೀವ್ರ ಹದಗೆಟ್ಟಿದೆ. ಈ ರಸ್ತೆ ಮೂಲಕ ಹೋಗಿ ಬರಲು 17 ರಿಂದ 18 ಕಿಮೀ. ದೂರ ಕ್ರಮಿಸಬೇಕಾಗಿದೆ. ವಾಹನ ಸಂಚಾರ ಅಸಾಧ್ಯವಾಗಿರುವುದರಿಂದ ಜನರು ನಿತ್ಯವೂ ನಡೆದುಕೊಂಡೇ ಸಾಗಬೇಕು.

    ಪ್ರವಾಸಿಗರ ಮೆಚ್ಚಿನ ತಾಣ ಗುಡ್ಡೇಹಳ್ಳಿ
    ನಗರಸಭೆ ವ್ಯಾಪ್ತಿಯ ಬಿಣಗಾದ 31 ನೇ ವಾರ್ಡಿಗೆ ಗುಡ್ಡೇಹಳ್ಳಿ ಒಳಪಡುತ್ತದೆ. ಚಿಕ್ಕ ಹಳ್ಳಿಯಾಗಿರುವುದರಿಂದ ಚಾರಣ ಪ್ರಿಯರ ಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಎತ್ತರದ ಬೆಟ್ಟದ ಬಂಡೆಗಲ್ಲಿನ ಮೇಲೆ ನಿಂತು ಅಂಕೋಲಾ, ಗೋಕರ್ಣ ಮುಂತಾದ ಊರುಗಳನ್ನು ಮತ್ತು ಹಸಿರಿನಿಂದ ಕೂಡಿದ ಪ್ರಾಕೃತಿಕ ಸೌಂದರ್ಯ ಹಾಗೂ ಕಡಲಿನ ಸೌಂದರ್ಯ ರಾಶಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಸಮುದ್ರ ಮಟ್ಟದಿಂದ ಬಹಳ ಎತ್ತರದಲ್ಲಿರುವ ಈ ತಂಪಾದ ಹಳ್ಳಿಯೇ ಬ್ರಿಟೀಷ್ ಅಧಿಕಾರಿಗಳು ಬೇಸಿಗೆ ಕಳೆಯುವ ಇಷ್ಟದ ತಾಣವಾಗಿತ್ತು.

    ಇಲ್ಲಿ ಕಾಲ ಕಳೆಯಲು ಬ್ರಿಟೀಷರು ಕಟ್ಟಿದ ಬಂಗಲೆಗಳ ಅಡಿಪಾಯದ ಕುರುಹುಗಳು ಈಗಲೂ ಕಾಣ ಸಿಗುತ್ತವೆ. ಇಲ್ಲಿಗೆ ಬರಲು ಬ್ರಿಟೀಷರು ಇದೇ ಕಾಲು ದಾರಿಯನ್ನು ಅವಲಂಬಿಸಿಕೊಂಡಿದ್ದರು. ಕುದುರೆ ಸವಾರಿ ಮೂಲಕ ಬ್ರಿಟೀಷ್ ಅಧಿಕಾರಿಗಳು ಇಲ್ಲಿಗೆ ಬರುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ. ಆದರೆ ನಗರಸಭಾ ವ್ಯಾಪ್ತಿಯಲ್ಲಿರುವ ಈ ಹಳ್ಳಿ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

  • ಸಿಬಿಐ ಕಸ್ಟಡಿಯಲ್ಲಿದ್ದ 45 ಕೋಟಿ ಬೆಲೆಯ ಚಿನ್ನ ಮಂಗ ಮಾಯ

    ಸಿಬಿಐ ಕಸ್ಟಡಿಯಲ್ಲಿದ್ದ 45 ಕೋಟಿ ಬೆಲೆಯ ಚಿನ್ನ ಮಂಗ ಮಾಯ

    – 72 ಕೀಲಿಗಳನ್ನು ಕೋರ್ಟ್‍ಗೆ ನೀಡಿದ ಸಿಬಿಐ
    – 103 ಕೆ.ಜಿ.ಚಿನ್ನ ನಾಪತ್ತೆ

    ಚೆನ್ನೈ: ಕುತೂಹಲಕಾರಿ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದ್ದು, ಸಿಬಿಐ ಕಸ್ಟಡಿಯಲ್ಲಿದ್ದ ಬರೋಬ್ಬರಿ 45 ಕೋಟಿ ರೂ. ಬೆಲೆ ಬಾಳುವ 103 ಕೆ.ಜಿ. ಚಿನ್ನ ಕಾಣೆಯಾಗಿದೆ. ಸಿಬಿಐ ದಾಳಿ ನಡೆಸಿದ ವೇಳೆ ವಶಪಡಿಸಿಕೊಳ್ಳಲಾದ ಚಿನ್ನ ಇದಾಗಿದ್ದು, ನಾಪತ್ತೆಯಾಗಿದೆ.

    ಕಾಣೆಯಾಗಿರುವ ಚಿನ್ನದ ಬಗ್ಗೆ ತನಿಖೆ ನಡೆಸುವಂತೆ ಮದ್ರಾಸ್ ಹೈ ಕೋರ್ಟ್ ಆದೇಶ ನೀಡಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಸಿಬಿ-ಸಿಐಡಿಗೆ ವಹಿಸಲಾಗಿದೆ. 2012ರಲ್ಲಿ ಚೆನ್ನೈನ ಸುರಾನಾ ಕಾರ್ಪೋರೇಷನ್ ಲಿಮಿಟೆಡ್ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದಾಗ 400.5 ಕೆ.ಜಿ. ಬೆಳ್ಳಿ ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು. ಇದರಲ್ಲಿ 103 ಕೆ.ಜಿ.ಚಿನ್ನವನ್ನು ಎಗರಿಸಲಾಗಿದೆ.

    ದಾಳಿ ಬಳಿಕ ವಶಪಡಿಸಿಕೊಳ್ಳಲಾದ ಚಿನ್ನಾಭರಣವನ್ನು ಸಿಬಿಐ ತನ್ನ ವಶದಲ್ಲಿ ಸುರಾನಾ ಕಾರ್ಪ್‍ನ ಸುರಕ್ಷಿತ ಕೊಠಡಿಗಳಲ್ಲಿ ಇಟ್ಟುಕೊಂಡಿತ್ತು. ಅಲ್ಲದೆ ಸಿಬಿಐ ಪ್ರಕರಣಗಳಿಗಾಗಿ ಇರುವ ಚೆನ್ನೈನ ಪ್ರಧಾನ ವಿಶೇಷ ನ್ಯಾಯಾಲಯಕ್ಕೆ 72 ಕೀಲಿಗಳನ್ನು ನೀಡಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.

    ನ್ಯಾಯಾಲಯಕ್ಕೆ ನೀಡಿದ ವಿವರಣೆಯಲ್ಲಿ ಸಿಬಿಐ ಆಶ್ಚರ್ಯಕರ ಪ್ರತಿಕ್ರಿಯೆ ನೀಡಿದ್ದು, ವಶಪಡಿಸಿಕೊಳ್ಳುವ ಸಮಯದಲ್ಲಿ ಚಿನ್ನವನ್ನು ಒಟ್ಟಿಗೆ ತೂಕ ಮಾಡಲಾಗಿದೆ. ಇದನ್ನು ಲಿಕ್ವಿಡೇಟರ್‍ಗೆ ಹಸ್ತಾಂತರಿಸುವಾಗ ಚಿನ್ನವನ್ನು ಪ್ರತ್ಯೇಕವಾಗಿ ತೂಗಿಸಲಾಗುತ್ತದೆ. ವ್ಯತ್ಯಾಸಕ್ಕೆ ಇದೂ ಸಹ ಕಾರಣವಾಗಿದೆ ಎಂದು ತಿಳಿಸಿದೆ. ಸುರಾನಾ ಹಾಗೂ ಎಸ್‍ಬಿಐ ನಡುವಿನ ಸಾಲ ತೀರಿಸಲು ಲಿಕ್ವಿಡೇಟರ್ ನೇಮಿಸಲಾಗಿದೆ.

    ಸಿಬಿಐ ವಾದವನ್ನು ಮದ್ರಾಸ್ ಹೈ ಕೋರ್ಟ್ ತಿರಸ್ಕರಿಸಿದ್ದು, ಎಸ್‍ಪಿ ಅಧಿಕಾರಿಯೊಂದಿಗೆ ಸಿಬಿ-ಸಿಐಡಿ ಅಧಿಕಾರಿಗಳಿಂದ ತನಿಖೆ ನಡೆಸಲು ಸೂಚಿಸಿದೆ. 6 ತಿಂಗಳೊಳಗೆ ತನಿಖೆ ಮುಗಿಸುವಂತೆ ನ್ಯಾಯಾಲಯ ಸಿಬಿ-ಸಿಐಡಿಗೆ ಸೂಚಿಸಿದೆ.

    ಪ್ರಕರಣವನ್ನು ಸ್ಥಳೀಯ ಪೊಲೀಸರಿಗೆ ವಹಿಸಿದರೆ ನಮ್ಮ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಇದಕ್ಕೆ ಹೈ ಕೋರ್ಟ್ ಪ್ರತಿಕ್ರಿಯಿಸಿ, ಕಾನೂನು ಅಂತಹ ಅನುಮಾನವನ್ನು ಅನುಮತಿಸುವುದಿಲ್ಲ. ಎಲ್ಲ ಪೊಲೀಸರನ್ನು ನಂಬಬೇಕು. ಸಿಬಿಐಗೆ ವಿಶೇಷ ಕೊಂಬುಗಳಿವೆ, ಸ್ಥಳೀಯ ಪೊಲೀಸರಿಗೆ ಬಾಲ ಮಾತ್ರ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದೆ.

  • ನಿಯಮ ಉಲ್ಲಂಘಿಸಿ ಖಾಸಗಿ ಶಾಲೆ ತೆರೆದ ಆಡಳಿತ ಮಂಡಳಿ

    ನಿಯಮ ಉಲ್ಲಂಘಿಸಿ ಖಾಸಗಿ ಶಾಲೆ ತೆರೆದ ಆಡಳಿತ ಮಂಡಳಿ

    ಕೊಪ್ಪಳ: ಕೊರೊನಾ ಹಿನ್ನೆಲೆ ಶಾಲೆಗಳನ್ನು ಆರಂಭಿಸಬೇಕೆ, ಬೇಡವೇ ಎಂಬ ಗೊಂದಲದಲ್ಲಿ ಸರ್ಕಾರ ಇದ್ದರೆ, ಇಲ್ಲೊಂದು ಖಾಸಗಿ ಶಾಲೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಶಾಲೆಯ ತರಗತಿಗಳನ್ನು ಆರಂಬಿಸಿದೆ. ಇದರಿಂದಾಗಿ ಪೋಷಕರು ಭಯಭೀತರಾಗಿದ್ದು, ಮಕ್ಕಳಿಗೆ ಸೋಂಕು ತಗುಲಿದರೆ ಏನು ಗತಿ ಎಂಬ ಆತಂಕದಲ್ಲಿದ್ದಾರೆ.

    ಜಿಲ್ಲೆಯ ಗಂಗಾವತಿಯ ಸೇಂಟ್ ಫಾಲ್ಸ್ ಖಾಸಗಿ ಶಾಲೆಯಲ್ಲಿ ತರಗತಿಗಳನ್ನು ಆರಂಭಿಸಲಾಗಿದ್ದು, ಸರ್ಕಾರದ ನಿಯಮ ಉಲ್ಲಂಘಿಸಿ ಖಾಸಗಿ ಶಾಲೆಯನ್ನು ಆಡಳಿತ ಮಂಡಳಿ ತೆರೆದಿದೆ. ಅಲ್ಲದೆ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸಹ ನಡೆಸುತ್ತಿದೆ.

    ಪ್ರೌಢ ಶಾಲೆಯ 8, 9, 10ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ನೆಡಸುವ ಮೂಲಕ ಸೇಂಟ್ ಫಾಲ್ಸ್ ಶಾಲೆ ಆಡಳಿತ ಮಂಡಳಿ ಕೊರೊನಾ ನಿಯಮವನ್ನು ಗಳಿಗೆ ತೂರಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಶಾಲೆ ತೆರೆಯಬಾರದು ಎಂಬ ಆದೇಶವಿದ್ದರೂ ನಿಯಮ ಮೀರಿ ಶಾಲೆ ತೆರೆಯಲಾಗಿದೆ. ಅಲ್ಲದೆ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಶಿಕ್ಷಣಾಧಿಕಾರಿಗಳು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ವಿಷಯ ತಿಳಿದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುಮ್ಮನೆ ಕುಳಿತರಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.

    ರಾಜ್ಯದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ನಿರ್ಲಕ್ಷಿಸುವಂತಿಲ್ಲ. ಹೀಗಾಗಿ ಸರ್ಕಾರ ಶಾಲೆ ತೆರೆಯಲು ಅನುಮತಿ ನೀಡಲಾಗಿಲ್ಲ. ಆದರೆ ಕೆಲ ಶಾಲೆಗಳು ನಿಯಮಬಹಿರವಾಗಿ ಶಾಲೆಗಳನ್ನು ತೆರೆಯುತ್ತಿವೆ.

  • ಇತಿಹಾಸ ಪ್ರಸಿದ್ಧ ಹಳೇಬೀಡಿನ ಕೆರೆ ಕೋಡಿ ಒಡೆದು ನೀರು ಹೊರಕ್ಕೆ- ರೈತರ ಆಕ್ರೋಶ

    ಇತಿಹಾಸ ಪ್ರಸಿದ್ಧ ಹಳೇಬೀಡಿನ ಕೆರೆ ಕೋಡಿ ಒಡೆದು ನೀರು ಹೊರಕ್ಕೆ- ರೈತರ ಆಕ್ರೋಶ

    – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಕಿಡಿ

    ಹಾಸನ: ಇತಿಹಾಸ ಪ್ರಸಿದ್ಧ ಹಳೇಬೀಡಿನ ದ್ವಾರ ಸಮುದ್ರ ಕೆರೆಕೋಡಿಯನ್ನು ಒಡೆದು ನೀರು ಖಾಲಿ ಮಾಡಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು, ಸಾರ್ವಜನಿಕರು ಆಕ್ರೋಶ ಹೊರಹಾಕಿ, ಪ್ರತಿಭಟನೆ ನಡೆಸಿದ್ದಾರೆ.

    ದ್ವಾರಸಮುದ್ರ ಕೆರೆಯ ಏರಿ ಕುಸಿಯುವ ಭೀತಿ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆರೆ ಕೋಡಿ ಒಡೆದು ನೀರನ್ನು ಹೊರ ಬಿಡುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ಹೊರಹಾಕುತ್ತಿರುವ ಸಾರ್ವಜನಿಕರು, ಹದಿಮೂರು ವರ್ಷದ ನಂತರ ದ್ವಾರಸಮುದ್ರ ಕೆರೆ ತುಂಬಿದೆ. ಕೆರೆಯ ಏರಿ ಕುಸಿಯುವ ಬಗ್ಗೆ ಕೆರೆ ಖಾಲಿ ಇದ್ದಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆದರೆ ಅಧಿಕಾರಿಗಳು ಆಗ ಕೆರೆ ಏರಿ ದುರಸ್ಥಿ ಮಾಡಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈಗ ಕೆರೆ ತುಂಬಿದ ನಂತರ ಕೆರೆ ಏರಿ ಕುಸಿಯುತ್ತೆ ಎಂದು ಕೋಡಿ ಒಡೆದು ನೀರನ್ನು ಹೊರಬಿಡುತ್ತಿದ್ದಾರೆ. ಅಧಿಕಾರಿಗಳ ಬೇಜವಬ್ದಾರಿತನದಿಂದ ಕೆರೆ ತುಂಬಿದ್ದರೂ ರೈತರು ಅದರಿಂದ ಅನುಕೂಲ ಪಡೆಯದಂತೆ ಆಗಿದೆ. ಇನ್ನಾದರೂ ಅಧಿಕಾರಿಗಳು ಕೆರೆಕೋಡಿ ಪೂರ್ತಿ ಒಡೆಯುವ ಆಲೋಚನೆ ಕೈಬಿಟ್ಟು, ಕುಸಿಯುವ ಬೀತಿಯಲ್ಲಿರುವ ಕೆರೆ ಏರಿಯನ್ನು ವೈಜ್ಞಾನಿಕ ವಿಧಾನ ಅನುಸರಿಸಿ ದುರಸ್ಥಿ ಮಾಡಬೇಕಾಗಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.

  • ಹಾಸನಾಂಬೆ ದರ್ಶನ – ಜಿಲ್ಲಾಡಳಿತದ ನಿರ್ಧಾರಕ್ಕೆ ಸಾರ್ವಜನಿಕರ ಆಕ್ರೋಶ

    ಹಾಸನಾಂಬೆ ದರ್ಶನ – ಜಿಲ್ಲಾಡಳಿತದ ನಿರ್ಧಾರಕ್ಕೆ ಸಾರ್ವಜನಿಕರ ಆಕ್ರೋಶ

    ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಕೊರೊನಾದಿಂದಾಗಿ ಈ ವರ್ಷ ಹಾಸನಾಂಬ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿಲ್ಲ. ಆದರೆ ಈ ವಿಷ್ಯದಲ್ಲಿ ಜನ ಪ್ರತಿನಿಧಿಗಳ ಇಬ್ಬಗೆ ನೀತಿ ಹಾಸನ ಜನರ ಕೋಪಕ್ಕೆ ಕಾರಣವಾಗಿದೆ.

    ಹಾಸನ ನಗರದ ಹೊಸಲೈನ್ ರಸ್ತೆಯಲ್ಲಿರುವ ಹಾಸನಾಂಬ ದೇವಾಲಯದ ಬಾಗಿಲನ್ನು ವರ್ಷಕ್ಕೊಮ್ಮೆ ಮಾತ್ರ ತೆರೆದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವುದು ಬಹಳ ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಹಲವು ಪವಾಡಗಳಿಗೆ ಪ್ರಸಿದ್ಧಿಯಾದ ಹಾಸನನಾಂಬ ದೇವಿಯ ದರ್ಶನವನ್ನು ಪಡೆದರೆ ಇಷ್ಟಾರ್ಥ ಸಿದ್ಧಿಸುತ್ತೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ವರ್ಷಕ್ಕೊಮ್ಮೆ ಹಾಸನಾಂಬ ದೇವಸ್ಥಾನದ ಬಾಗಿಲು ತೆರೆದಾಗ ಲಕ್ಷಾಂತರ ಜನ ದೇವಾಲಯಕ್ಕೆ ಆಗಮಿಸಿ, ಕಿಲೋಮಿಟರ್‍ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದರು.

    ಈ ವರ್ಷವೂ ಕೂಡ ನವೆಂಬರ್ 5ರಿಂದ 16ರವರೆಗೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ಆದರೆ ಈ ವರ್ಷ ಕೊರೊನಾ ಕಾರಣದಿಂದ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಹಾಸನದ ಸುಮಾರು 12 ಕಡೆ ಎಲ್‍ಇಡಿ ಪರದೆ ಹಾಕಿ, ನೇರ ಪ್ರಸಾರದ ಮೂಲಕ ಭಕ್ತರು ಹಾಸನಾಂಬ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಬಾಗಿಲು ತೆಗೆಯುವ ವೇಳೆ ಉದ್ಘಾಟನೆಗೆ ಬರುವಂತೆ ಸಿಎಂ ಅವರನ್ನು ಕರೆಯುತ್ತೇವೆ. ಮೊದಲ ಹಾಗೂ ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹಾಸನ ಉಸ್ತುವಾರಿ ಸಚಿವ ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.

    ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಬ್ಬಗೆ ನೀತಿ ಹಾಸನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾಸನಾಂಬೆ ದೇವಾಲಯದ ಬಾಗಿಲು ತೆರೆದ ಮೊದಲನೇ ಮತ್ತು ಕೊನೆಯ ದಿನ ಆಹ್ವಾನಿತ ಗಣ್ಯರಿಗೆ ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶ ಅಂತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ತಮಗೆ ಬೇಕಾದ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಶ್ರೀಮಂತರಿಗೆ ಇವರು ದರ್ಶನ ಭಾಗ್ಯ ಕೊಡಲು ಆಹ್ವಾನಿತರಿಗಷ್ಟೇ ನೇರ ದರ್ಶನಕ್ಕೆ ಅವಕಾಶ ಅಂತಿದ್ದಾರೆ. ಹಾಗಾದರೆ ಅವರಿಂದ ಯಾರಿಗೂ ಕೊರೊನಾ ಹರಡುವುದಿಲ್ಲವೇ? ಈ ದೇಶಕ್ಕೆ ಕೊರೊನಾ ಹರಡಿದ್ದೆ ವಿಐಪಿಗಳು? ಈಗ ಆ ವಿಐಪಿಗಳು ಇಲ್ಲಿಗೆ ಬಂದು ಕೊರೊನಾ ಹರಡೋದು ಬೇಡ. ಸಾಮಾನ್ಯ ಭಕ್ತರಿಗೆ ನೇರ ದರ್ಶನ ವ್ಯವಸ್ಥೆ ಇಲ್ಲ ಎಂದ ಮೇಲೆ ಯಾರಿಗೂ ನೇರ ದರ್ಶನದ ವ್ಯವಸ್ಥೆ ಕಲ್ಪಿಸದೆ, ಎಲ್ಲರಿಗೂ ಒಂದೇ ಕಾನೂನು ಪಾಲಿಸಲಿ. ದೇವರ ದರ್ಶನ ವಿಷ್ಯವಾಗಿ ತಾರತಮ್ಯ ಮಾಡಬೇಡಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

    ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವರ ದರ್ಶನದ ವಿಚಾರವಾಗಿ ರಾಜಕಾರಣಿಗಳು, ಅಧಿಕಾರಿಗಳು ತೆಗೆದುಕೊಂಡ ಇಬ್ಬಗೆ ನೀತಿ ಹಾಸನದ ಸಾಮಾನ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರ ಆಕ್ರೋಶಕ್ಕೆ ಮಣಿದು, ಆಹ್ವಾನಿತರಿಗಷ್ಟೇ ಹಾಸನಾಂಬ ನೇರ ದರ್ಶನಕ್ಕೆ ಅವಕಾಶ ಎಂಬ ನಿಯಮವನ್ನು ಜಿಲ್ಲಾಡಳಿತ ತೆಗೆದು ಹಾಕಿ, ಎಲ್ಲರಿಗೂ ಒಂದೇ ನಿಯಮ ಎಂಬ ತೀರ್ಮಾನಕ್ಕೆ ಬರುತ್ತಾ ಕಾದು ನೋಡಬೇಕಿದೆ.

  • ಹತ್ರಾಸ್ ಪ್ರಕರಣ – ಎಸ್‍ಪಿ ಸೇರಿ ಐವರು ಪೊಲೀಸ್ ಅಧಿಕಾರಿಗಳು ಅಮಾನತು

    ಹತ್ರಾಸ್ ಪ್ರಕರಣ – ಎಸ್‍ಪಿ ಸೇರಿ ಐವರು ಪೊಲೀಸ್ ಅಧಿಕಾರಿಗಳು ಅಮಾನತು

    – ಅಮಾನತುಗೊಳಿಸಿ ಆದೇಶ ಹೊರಡಿಸಿದ ಯೋಗಿ ಸರ್ಕಾರ
    – ಸುಳ್ಳು ಪತ್ತೆ, ಮಂಪರು ಪರೀಕ್ಷೆ ಆದೇಶ

    ಲಕ್ನೋ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಪ್ರತಿಭಟನೆ, ವಿರೋಧ ಪಕ್ಷಗಳ ಆಕ್ರೋಶದ ಬಳಿಕ ಉತ್ತರ ಪ್ರದೇಶ ಸರ್ಕಾರ ಎಸ್‍ಪಿ, ಡಿಎಸ್‍ಪಿ, ಇನ್ಸ್ ಪೆಕ್ಟರ್ ಹಾಗೂ ಇತರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

    ಟ್ವೀಟ್ ಮಾಡಿದ ಕೆಲವೇ ಗಂಟೆಗಳ ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನಿರ್ಧಾರ ಕೈಗೊಂಡಿದ್ದಾರೆ. ಎಸ್‍ಪಿ ವಿಕ್ರಾಂತ್ ವೀರ್, ಡಿಎಸ್‍ಪಿ ರಾಮ್ ಶಬ್ದ್, ಇನ್ಸ್‍ಪೆಕ್ಟರ್ ದಿನೇಶ್ ವರ್ಮಾ, ಸಬ್ ಇನ್‍ಸ್ಪೆಕ್ಟರ್ ಜಗ್ವೀದ್ ಸಿಂಗ್ ಹಾಗೂ ಹೆಡ್ ಕಾನ್‍ಸ್ಟೇಬಲ್ ಮಹೇಶ್ ಪಾಲ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಾಮ್ಲಿ ಎಸ್‍ಪಿ ವಿನೀತ್ ಜೈಸ್ವಾಲ್ ಅವರಿಗೆ ಹತ್ರಾಸ್ ಚಾರ್ಜ್ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಅಮಾನತು ಆದೇಶದ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳ ಮೇಲೆ ಸುಳ್ಳು ಪತ್ತೆ ಮತ್ತು ಮಂಪರು ಪರೀಕ್ಷೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.

    ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟರ್‍ನ್ನು ಸಹ ಅಮಾನತುಗೊಳಿಸಬೇಕು ಎಂಬ ಒತ್ತಾಯ ಸಹ ಕೇಳಿ ಬರುತ್ತಿದೆ. ಆದರೆ ಸದ್ಯಕ್ಕೆ ಅವರನ್ನು ಅಮಾನತು ಮಾಡಲಾಗಿಲ್ಲ.

    ಕೆಲವೇ ಗಂಟೆಗಳ ಮುಂಚೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ ಉತ್ತರ ಪ್ರದೇಶದ ತಾಯಂದಿರು ಹಾಗೂ ಸಹೋದರಿಯರ ಗೌರವಕ್ಕೆ ಧಕ್ಕೆ ತರುವವರನ್ನು ಬಿಡುವುದಿಲ್ಲ. ಅವರು ಸರ್ವ ನಾಶವಾಗುತ್ತಾರೆ, ಕಠೋರ ಶಿಕ್ಷೆ ವಿಧಿಸಲಾಗುವುದು. ಅಲ್ಲದೆ ಭವಿಷ್ಯದಲ್ಲಿ ಮಾದರಿಯಾಗವ ರೀತಿ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ಏನಿದು ಪ್ರಕರಣ?
    ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿ ಎರಡು ವಾರಗಳ ಅಂದರೆ ಮಂಗಳವಾರ ದೆಹಲಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ 20 ವರ್ಷದ ಯುವತಿಯ ಅಂತ್ಯಸಂಸ್ಕಾರವನ್ನು ಕಳೆದ ರಾತ್ರಿ ಪೊಲೀಸರೇ ನೆರವೇರಿಸಿದ್ದರು. ಈ ವೇಳೆ ಮೃತ ಯುವತಿಯ ಕುಟುಂಬ ಮತ್ತು ಸಂಬಂಧಿಕರು ಅಂತ್ಯ ಸಂಸ್ಕಾರ ಮಾಡಲು ಬಿಡಿ ಎಂದು ಎಷ್ಟೇ ಕೂಗಾಡಿದರೂ ಅವರನ್ನು ಮನೆಯಲ್ಲೇ ಕೂಡಿಹಾಕಿ ಪೊಲೀಸರೇ ರಾತ್ರಿ 2.30ಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

    ಈ ವೇಳೆ ಯುವತಿ ಕುಟುಂಬ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ತಮ್ಮ ಮಗಳ ಮುಖವನ್ನು ನೋಡಲು ಬಿಡದಿದ್ದರಿಂದ ಉದ್ರಿಕ್ತರಾದ ಕುಟುಂಬಸ್ಥರು, ಅಂಬುಲೆನ್ಸ್ ಮೇಲೆ ಮರದ ತುಂಡುಗಳನ್ನು ಎಸೆಯುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೂ ಪೊಲೀಸರು ಮಾತ್ರ ಕ್ಯಾರೇ ಎನ್ನದೇ ಮೃತದೇಹವನ್ನು ತೆಗೆದುಕೊಂಡು ಹೋಗಿ ತಾವೇ ಅಂತ್ಯಸಂಸ್ಕಾರ ಮಾಡಿದ್ದರು. ಇದರಿಂದ ಯುವತಿಯ ಕುಟುಂಬಸ್ಥರು ಅಸಹಾಯಕರಾಗಿ ಕಣ್ಣೀರಿಟ್ಟಿದ್ದರು.

    ಘಟನೆ ಬಳಿಕ ವಿಡಿಯೋ ವೈರಲ್ ಆಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ, ಪ್ರತಿಭಟನೆಗಳು ಜೋರಾಗಿವೆ. ಅಲ್ಲದೆ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹತ್ರಾಸ್‍ಗೆ ತೆರಳಲು ಯತ್ನಿಸಿದ್ದರು. ಆದರೆ ಪೊಲೀಸರು ಅವರನ್ನು ತಡೆದು ಮರಳಿ ದೆಹಲಿಗೆ ಕಳುಹಿಸಿದ್ದರು. ಬಳಿಕ ಇಂದು ಸಹ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.

  • ಮಾಸ್ಕ್ ಹಾಕು, ಇಲ್ಲಾ ಠಾಣೆಗೆ ನಡಿ- ಪುಂಡರಿಗೆ ಲೇಡಿ ಅಧಿಕಾರಿ ಫುಲ್ ಕ್ಲಾಸ್

    ಮಾಸ್ಕ್ ಹಾಕು, ಇಲ್ಲಾ ಠಾಣೆಗೆ ನಡಿ- ಪುಂಡರಿಗೆ ಲೇಡಿ ಅಧಿಕಾರಿ ಫುಲ್ ಕ್ಲಾಸ್

    ಯಾದಗಿರಿ: ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿ ಭಾರೀ ಪ್ರಮಾಣದ ದಂಡ ವಿಧಿಸುತ್ತಿದೆ. ಆದರೂ ಜ ಕ್ಯಾರೆ ಎನ್ನದೆ ಮಾಸ್ಕ್ ಧರಿಸದೆ ತಿರುಗುತ್ತಿದ್ದಾರೆ. ಇಂತಹವರಿಗೆ ಅಧಿಕಾರಿಗಳು ದಂಡ ಹಾಕುವ ಮೂಲಕ ಬುದ್ಧಿ ಕಲಿಸುತ್ತಿದ್ದಾರೆ. ಅದೇ ರೀತಿ ನಗರದಲ್ಲಿ ಸಹ ಮಾಸ್ಕ್ ಧರಿಸದ ಪುಂಡರಿಗೆ ಲೇಡಿ ಅಧಿಕಾರಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಸಹ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಜನ ಮಾತ್ರ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಅಧಿಕಾರಿಗಳು ರಸ್ತೆಗಿಳಿದು ದಂಡ ಹಾಕಲು ಆರಂಭಿಸಿದ್ದಾರೆ. ಯಾದಗಿರಿಯಲ್ಲಿ ಸಹ ನಗರಸಭೆ ಅಧಿಕಾರಿಗಳು ಮಾಸ್ಕ್ ಧರಿಸದ ವಾಹನ ಸವಾರರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ದಂಡ ವಿಧಿಸುತ್ತಿದ್ದಾರೆ. ಈ ಮೂಲಕ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.

    ಯಾದಗಿರಿ ನಗರಸಭೆಯ ಕಿರಿಯ ಆರೋಗ್ಯ ನಿರಿಕ್ಷಕಿ ಶರಣಮ್ಮ ಅವರ ತಂಡದಿಂದ ನಗರದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗುತ್ತಿದೆ. ಇಂದು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುಂಡರಿಗೆ ಲೇಡಿ ಅಧಿಕಾರಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾಸ್ಕ್ ಧರಿಸುವಂತೆ ಯುವಕನಿಗೆ ತಿಳಿಸಿದರೆ, ಅಧಿಕಾರಿಗಳ ಮಾತಿಗೆ ಉದ್ಧಟತನ ತೋರಿದ್ದ. ಈ ವೇಳೆ ಫುಲ್ ಅವಾಜ್ ಹಾಕಿದ ಶರಣಮ್ಮ, ಮಾಸ್ಕ್ ಧರಿಸು ಇಲ್ಲವೇ ಪೊಲೀಸ್ ಠಾಣೆಗೆ ನಡೆ ಎಂದು ಎಚ್ಚರಿಸಿದ್ದಾರೆ.

    ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿದ್ದ ಬೇಕರಿ ಮಾಲೀಕನಿಗೆ ಸಹ ಇದೇ ರೀತಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೇಕರಿ ಮಾಲೀಕ ಅಧಿಕಾರಿಗಳ ಮಾತು ಕೇಳದ ಹಿನ್ನಲೆ ಸಿಬ್ಬಂದಿ ಬೇಕರಿ ಉತ್ಪನ್ನಗಳನ್ನು ಎತ್ತಿಕೊಂಡು ಹೋದ ಪ್ರಸಂಗ ಸಹ ನಡೆಯಿತು. ಮಾತ್ರವಲ್ಲ ಮಾಸ್ಕ್ ಧರಿಸದ ವಾಹನ ಸವಾರರಿಗೆ ಪೊಲೀಸರು ಸಹ ಶಾಕ್ ನೀಡುತ್ತಿದ್ದಾರೆ. ಮಾಸ್ಕ್ ಧರಿಸದೆ ನಗರದಲ್ಲಿ ಸಂಚಾರ ಮಾಡುತ್ತಿದ್ದವ ಬೈಕ್ ವಸಾರರಗಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

  • ಚಿನ್ನದ ನಾಡಿನಲ್ಲಿ 2 ದಶಕಗಳ ನಂತ್ರ ಮತ್ತೆ ಚಿನ್ನದ ಗಣಿ ಪುನರಾರಂಭಕ್ಕೆ ತಯಾರಿ

    ಚಿನ್ನದ ನಾಡಿನಲ್ಲಿ 2 ದಶಕಗಳ ನಂತ್ರ ಮತ್ತೆ ಚಿನ್ನದ ಗಣಿ ಪುನರಾರಂಭಕ್ಕೆ ತಯಾರಿ

    – ಕೋಲಾರ ಚಿನ್ನದ ಗಣಿ ಪುನಾರಂಭದ ನಿರೀಕ್ಷೆ
    – ಪರೀಕ್ಷೆಗೆ ಸೈನೈಡ್ ಮಣ್ಣು ಹೊತ್ತೊಯ್ದ ಅಧಿಕಾರಿಗಳು

    ಕೋಲಾರ: ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಚಿನ್ನದ ನಾಡಿನಲ್ಲಿ ಎರಡು ದಶಕಗಳ ನಂತರ ಮತ್ತೆ ಚಿನ್ನದ ಗಣಿ ಪುನರಾರಂಭಕ್ಕೆ ತೆರೆಮರೆಯಲ್ಲಿ ತಯಾರಿಗಳು ನಡೆಯುತ್ತಿವೆ. ಈಗಾಗಲೇ ಚಿನ್ನದ ಗಣಿಯ ಭೂಮಿ ಹಾಗೂ ಮಣ್ಣಿನ ಪರೀಕ್ಷೆಗಳು ನಡೆಯುತ್ತಿದ್ದು, ಚಿನ್ನದ ನಾಡಿನ ಗತ ವೈಭವ ಮತ್ತೆ ಮರುಕಳಿಸುತ್ತಾ ಅನ್ನೋ ನಿರೀಕ್ಷೆ ಗರಿಗೆದರಿವೆ.

    ಜಿಲ್ಲೆಯ ಕೆಜಿಎಫ್ ನಗರ ಚಿನ್ನ ಬೆಳೆಯುತ್ತಿದ್ದ ನೆಲ. ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಚಿನ್ನವನ್ನು ಕೊಟ್ಟಂತಹ ಇತಿಹಾಸವೇ ಇದೆ. ಆದರೆ ಚಿನ್ನ ಬರಿದಾಗಿ ಎರಡು ದಶಕಗಳೇ ಕಳೆದಿವೆ. ಇದರಿಂದ ಸಾವಿರಾರು ಮಂದಿ ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಸರ್ಕಾರಗಳು ನಾನಾ ಯೋಜನೆಗಳನ್ನ ಜಾರಿ ಮಾಡುವ ಭರವಸೆಗಳನ್ನ ನೀಡುತ್ತಾ ಕಣ್ಣೊರೆಸುವ ತಂತ್ರ ಮಾಡಿಕೊಂಡು ಬಂದಿವೆ. ಆದರೆ ಇದುವರೆಗೂ ಕೆಜಿಎಫ್ ಗಣಿ ಪುನಾರಂಭ ಆಗಲಿಲ್ಲ.

    ಸದ್ಯ ಸರ್ಕಾರ ಕೈಗಾರಿಕಾ ಟೌನ್ ಶಿಪ್ ಮತ್ತು ಚಿನ್ನದ ಗಣಿ ಮತ್ತೆ ಓಪನ್ ಮಾಡಲು ಮುಂದಾಗಿದೆ. ಈಗಾಗಲೇ ಚಿನ್ನದ ನಿಕ್ಷೇಪಗಳು ಎಲ್ಲೆಲ್ಲಿ ಇದೆ, ಅದರಲ್ಲಿ ಚಿನ್ನದ ಸಾಂದ್ರತೆ ಎಷ್ಟಿದೆ ಅನ್ನೋದನ್ನು ಪರೀಕ್ಷೆ ನಡೆಸಿದ್ದ ಗಣಿ ಇಲಾಖೆ ಈಗ ಮತ್ತೆ ಚಿನ್ನವನ್ನು ಬೇರ್ಪಡಿಸಿ ಹಾಕಲಾಗಿದ್ದ ಸೈನೈಡ್ ಗುಡ್ಡಗಳಲ್ಲಿ ಚಿನ್ನದ ಅಂಶ ಎಷ್ಟಿದೆ ಅನ್ನೋದನ್ನ ಪರೀಕ್ಷೆ ನಡೆಸಲು ಮುಂದಾಗಿದೆ. ಮೂರನೇ ಹಂತದ ಸೈನೈಡ್ ಗುಡ್ಡದ ಮಣ್ಣನ್ನು ಹೈದರಾಬಾದ್‍ನಲ್ಲಿ ರಾಷ್ಟ್ರೀಯ ಮಣ್ಣು ಮತ್ತು ಖನಿಜ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ.

    ಕೆಜಿಎಫ್ ಭೂಮಿಯ ಮಣ್ಣಿನಲ್ಲಿ ಇರುವ ಖನಿಜದ ಅಂಶ ಹಾಗೂ ಚಿನ್ನದ ಅಂಶ ಎಷ್ಟಿದೆ ಅನ್ನೋದರ ಬಗ್ಗೆ ಪರೀಕ್ಷೆ ನಡೆಸಿ 6 ತಿಂಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈಗಾಗಲೇ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೆಜಿಎಫ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಪಸ್ಸಾಗಿದ್ದಾರೆ. ಒಂದು ವೇಳೆ ಚಿನ್ನದ ನಿಕ್ಷೇಪ ವಿರುವುದು ಖಚಿತವಾದರೆ ಚಿನ್ನದ ಗಣಿ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

    ನಗರದಲ್ಲಿ ಇರುವ ಸೈನೈಡ್ ಗುಡ್ಡಗಳಲ್ಲಿ ಟಂಗ್ ಸ್ಟನ್, ಪೊಲಾಡಿಯಂ ಮತ್ತು ಚಿನ್ನದ ಅಂಶ ಇರುವ ಮಾಹಿತಿ ಇದೆ. ಸುಮಾರು ಇಪ್ಪತ್ತೈದು ಸಾವಿರ ಕೋಟಿ ಬೆಲೆ ಬಾಳುವಷ್ಟಿದೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಸದ್ಯ ಶೀಘ್ರದಲ್ಲಿಯೇ ಕೆಜಿಎಫ್ ನಗರ ಮತ್ತೆ ಹಿಂದಿನ ಗತವೈಭವಕ್ಕೆ ಮರಳುತ್ತದೆ ಅನ್ನೋದು ಸಾವಿರಾರು ಗಣಿ ಕಾರ್ಮಿಕರು ಹಾಗೂ ಕುಟುಂಬಗಳ ನಿರೀಕ್ಷೆಯಾಗಿದೆ. 2 ದಶಕಗಳ ನಂತರ ಈಗ ಮತ್ತೆ ಕೆಜಿಎಫ್‍ನಲ್ಲಿ ಚಿನ್ನದ ನೆಲದ ಗತವೈಭವ ಮರುಕಳಿಸುವ ಕುರಿತು ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿದೆ.

  • ಇದ್ದಕ್ಕಿದ್ದಂತೆ ಕಬಿನಿಂದ ನೀರು ಬಿಟ್ಟ ಅಧಿಕಾರಿಗಳು, ಸೇತುವೆ ಮುಳುಗಡೆ- ಜನ ಕಂಗಾಲು

    ಇದ್ದಕ್ಕಿದ್ದಂತೆ ಕಬಿನಿಂದ ನೀರು ಬಿಟ್ಟ ಅಧಿಕಾರಿಗಳು, ಸೇತುವೆ ಮುಳುಗಡೆ- ಜನ ಕಂಗಾಲು

    ಮೈಸೂರು: ಯಾವುದೇ ಮುನ್ಸೂಚನೆ, ಸೈರನ್ ಇಲ್ಲದೆ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಬಿಡುವ ಮೂಲಕ ಜಲಾಶಯದ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.

    ಡ್ಯಾಂ ಭರ್ತಿಯಾಗುತ್ತಿದೆ ಎಂಬ ಮಾಹಿತಿಯನ್ನು ನೀಡದೆ ಅಪಾರ ಪ್ರಮಾಣದ ನೀರನ್ನು ತಡರಾತ್ರಿ ಎಚ್.ಡಿ.ಕೋಟೆಯ ಕಬಿನಿ ಡ್ಯಾಂ ನಿಂದ ನದಿಗೆ ಬಿಟ್ಟಿದ್ದು, ಸೇತುವೆ ಮುಳುಗಡೆಯಾಗಿದೆ. ಇದನ್ನು ಕಂಡ ಸ್ಥಳೀಯರು ಕಂಗಾಲಾಗಿದ್ದಾರೆ. ಗೇಟ್ ಹಾಕದೆ, ಸೈರನ್ ಮಾಡದೆ, ಯಾವುದೇ ರೀತಿಯ ಮುನ್ಸೂಚನೆ ನೀಡದೆ ನದಿಗೆ ನೀರು ಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಬೀಚನಹಳ್ಳಿಯಲ್ಲಿರುವ ಡ್ಯಾಂ ನಲ್ಲಿ ಅಧಿಕಾರಿಗಳಿಂದ ಈ ಅವಾಂತರ ನಡೆದಿದೆ. ಡ್ಯಾಂ ಭರ್ತಿಯಾಗುತ್ತಿದೆ ಎಂದು ಇದೀಗ 30 ಸಾವಿರ ಕ್ಯೂಸೆಕ್ ನೀರನ್ನು ಅಧಿಕಾರಿಗಳು ಹರಿಸಿದ್ದಾರೆ.

    ಅಪಾರ ಪ್ರಮಾಣದ ನೀರು ಬಿಟ್ಟಿದ್ದಕ್ಕೆ ಹಾಗೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದಕ್ಕೆ ಜೀವ ಭಯದಲ್ಲಿ ಜನ ಒಂದು ಬದಿಯಿಂದ ಮತ್ತೊಂದಿ ಬದಿಗೆ ತೆರಳಿದ್ದಾರೆ. ಕೂಡಲೇ ಸ್ಥಳೀಯರು ಡ್ಯಾಂನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಎಚ್ಚೆತ್ತು ಅಧಿಕಾರಿಗಳು ನೀರಿನ ಪ್ರಮಾಣ ಕಡಿಮೆ ಮಾಡಿದ್ದಾರೆ. ಡ್ಯಾಂ ಮುಂಭಾದಲ್ಲಿರುವ ಬಿದರಳ್ಳಿ ಸಂಪರ್ಕದ ಸೇತುವೆ ಬಳಿ ಇದ್ದಕ್ಕಿದ್ದಂತೆ ನೀರು ಹೆಚ್ಚಾಗಿದ್ದನ್ನು ಕಂಡು ಸೇತುವೆ ಮೇಲೆ ತೆರಳುತ್ತಿದ್ದವರು ಗಾಬರಿಯಾಗಿದ್ದಾರೆ.

  • ಕೆರೆ ಒಡೆದು ನೂರಾರು ಎಕರೆ ಜಮೀನಿಗೆ ನುಗ್ಗಿದ ನೀರು- ಲಕ್ಷಾಂತರ ರೂ. ಬೆಳೆ ನಾಶ

    ಕೆರೆ ಒಡೆದು ನೂರಾರು ಎಕರೆ ಜಮೀನಿಗೆ ನುಗ್ಗಿದ ನೀರು- ಲಕ್ಷಾಂತರ ರೂ. ಬೆಳೆ ನಾಶ

    ಚಾಮರಾಜನಗರ: ಸುಮಾರು 800 ಎಕರೆ ಕೃಷಿ ಭೂಮಿಗೆ ಆಸರೆಯಾಗಿದ್ದ ಕೆರೆ ಸರಿಯಾದ ನಿರ್ವಹಣೆ ಇಲ್ಲದೆ ಒಡೆದಿದ್ದು, ನಾಟಿ ಮಾಡಿದ ಗದ್ದೆಗಳಿಗೆ ನೀರು ನುಗ್ಗಿದೆ. ಫಸಲು ಭೂಮಿಯನ್ನು ಕಳೆದು ಕೊಂಡು ರೈತರು ಸಂಕಷ್ಟ ಎದುರಿಸುವಂತಾಗಿದೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಈ ಬೃಹತ್ ಕೆರೆ ಸುಮಾರು 750 ಎಕರೆಯಿದ್ದು, ಕಬಿನಿಯಿಂದ ಬಂದ ನೀರು ತುಂಬಿತ್ತು. ಕೆರೆಯ ಏರಿ ಒಡೆಯುವ ಮುನ್ಸೂಚನೆ ರೈತರಿಗೆ ಮೊದಲೆ ತಿಳಿದು, ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದೆ, ಇಂದು ಕೆರೆ ಏರಿ ಒಡೆಯಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

    ಕೆರೆ ಏರಿ ಒಡೆದ ಪರಿಣಾಮ ಸುಮಾರು 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆ ನಾಶವಾಗಿದೆ. ಕೆರೆಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ರೈತರು ದೂರಿದ್ದಾರೆ. ಕಳೆದ ವಾರವಷ್ಟೇ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕೆರೆ ಒತ್ತುವರಿ ತೆರವು ಮಾಡಿ, ಮಾದರಿ ಕೆರೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಇಂತಹ ಅಧಿಕಾರಿಗಳನ್ನು ಕೂಡಲೇ ವಜಾ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.

    ಕೆರೆ ಒಡೆದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ನರೇಂದ್ರ, ಕೆರೆ ಒಡೆಯಲು ಅಧಿಕಾರಿಗಳೇ ಕಾರಣ. ಕೆರೆ ಒಡೆಯುವ ಮುನ್ಸೂಚನೆಯನ್ನು ರೈತರು ನೆನ್ನೆಯೇ ನೀಡಿದ್ದಾರೆ. ಏರಿಗೆ ಮಣ್ಣು ಹಾಕುವಂತೆ ಹೇಳಿದರೂ ಕೆಲಸ ಮಾಡಲಿಲ್ಲ. ಇಷ್ಟೊಂದು ಬೆಳೆ ನಾಶವಾಗಿದೆ. ಇದಕ್ಕೆ ಜವಾಬ್ದಾರರು ಯಾರು ಪ್ರಶ್ನಿಸಿದರು. ಇದೇ ವೇಳೆ ಬೆಳೆ ನಾಶವಾಗಿರುವ ರೈತರಿಗೆ ಪರಿಹಾರ ಒದಗಿಸುವ ಕುರಿತು ಭರವಸೆ ನೀಡಿದರು. ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದು, ತಾಲೂಕು ಆಡಳಿತಕ್ಕೆ ಸೂಚನೆ ನೀಡಿ ಬೆಳೆ ನಷ್ಟದ ವಿವರ ಒದಗಿಸುವಂತೆ ತಿಳಿಸಿದರು.

    ಗದ್ದೆಗೆ ನೀರು ತುಂಬಿ ಬೆಳೆ ನಾಶವಾಗಿರುವುದು ಒಂದು ಕಡೆಯಾದರೆ, ಇದೇ ನೀರಲ್ಲಿ ಗ್ರಾಮದ ಯುವಕರು ಮೀನು ಹಿಡಿಯಲು ಕಾದಾಟ ನಡೆಸುತ್ತಿದ್ದರು.