Tag: officers

  • ಕಸ ವಿಲೇವಾರಿ ಕಾರ್ಮಿಕನ ಮೇಲೆ ಹಲ್ಲೆ- ಎಲೆಕ್ಟ್ರಾನಿಕ್ಸ್ ಶಾಪ್ ಪರವಾನಿಗೆ ರದ್ದು

    ಕಸ ವಿಲೇವಾರಿ ಕಾರ್ಮಿಕನ ಮೇಲೆ ಹಲ್ಲೆ- ಎಲೆಕ್ಟ್ರಾನಿಕ್ಸ್ ಶಾಪ್ ಪರವಾನಿಗೆ ರದ್ದು

    ಉಡುಪಿ: ಕಸ ವಿಲೇವಾರಿಗೆ ಬಂದ ನಗರಸಭೆ ಪೌರಕಾರ್ಮಿಕನಿಗೆ ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರಸಭೆ ಖಂಡನಾ ನಿರ್ಣಯ ತೆಗೆದುಕೊಂಡು, ಎಲೆಕ್ಟ್ರಾನಿಕ್ಸ್ ಶಾಪ್ ಮಾಲೀಕನ ಪರವಾನಿಗೆಯನ್ನು ರದ್ದುಗೊಳಿಸಿದೆ.

    ಜಿಲ್ಲೆಯ ನಗರಸಭೆ ಕಸ ವಿಲೇವಾರಿ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಉಡುಪಿ ನಗರಸಭೆ ಖಡಕ್ ನಿರ್ಣಯ ತೆಗದುಕೊಂಡಿದೆ. ಉಡುಪಿ ನಗರಸಭೆಯಲ್ಲಿ ನಡೆದ ತುರ್ತು ಖಂಡನಾ ನಿರ್ಣಯ ಸಭೆಯಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಆಸ್ಮಾ ಕ್ಯಾಸೆಟ್ ಕಾರ್ನರ್ ಅಂಗಡಿಯ ವ್ಯಾಪಾರ ಪರವಾನಿಗೆ ರದ್ದು ಮಾಡಲು ನಿರ್ಣಯಿಸಲಾಗಿದೆ.

    ಅಧಿಕಾರಿಗಳು, ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಗುತ್ತಿಗೆ ನೌಕರರ ರಕ್ಷಣೆಗೆ ಆಡಳಿತ ವಿಭಾಗ ಬದ್ಧವಾಗಿದ್ದು, ಕೆಲವರು ಅನಗತ್ಯವಾಗಿ ನಗರಸಭೆ ವಿರುದ್ಧ ಪೌರಕಾರ್ಮಿಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಷಡ್ಯಂತ್ರಕ್ಕೆ ಅವಕಾಶ ಇಲ್ಲ ಎಂದು ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್ ಮಾತನಾಡಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ದುವರ್ತನೆ ತೋರಿದರೆ ಪಕ್ಷ ಭೇದವಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷದ ಸದಸ್ಯರು ಬೀದಿಯಲ್ಲಿ ನಿಂತು ಮಾತನಾಡುವ ಬದಲು ಅಧಿವೇಶನಕ್ಕೆ ಬಂದು ತಮ್ಮ ಅಭಿಪ್ರಾಯ ಮಂಡಿಸಬೇಕಿತ್ತು ಕಿಡಿಕಾರಿದರು.

  • ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು: ರಾಹುಲ್ ಗಾಂಧಿ

    ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು: ರಾಹುಲ್ ಗಾಂಧಿ

    ನವದೆಹಲಿ: ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು. ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಹಿಡಿದಿಟ್ಟುಕೊಳ್ಳಲು ಆರ್ ಎಸ್‍ಎಸ್ ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

    ವೆಬಿನಾರ್‍ನಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯ ಹಾಗೂ ಭಾರತದ ಮಾಜಿ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರೊಂದಿಗೆ ಮಾತನಾಡಿರುವ ಅವರು, ಆರ್‍ಎಸ್‍ಎಸ್ ಭಾರತದ ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಹಿಡಿದಿಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

    1975ರಲ್ಲಿ ಮಾಜಿ ಪ್ರಧಾನಿ ಹಾಗೂ ನನ್ನ ಅಜ್ಜಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು, ತುರ್ತು ಪರಿಸ್ಥಿತಿ ಹೇರಿದ್ದು ಖಂಡಿತವಾಗಿಯೂ ಒಂದು ದೊಡ್ಡ ತಪ್ಪು. ಇದನ್ನು ನನ್ನ ಅಜ್ಜಿ ಸಹ ಹೇಳಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದ ಘಟನೆಗಳು ಸಹ ತಪ್ಪು. ಕಾಂಗ್ರೆಸ್ ಪಕ್ಷ ದೇಶದ ಸಾಂಸ್ಥಿಕ ಚೌಕಟ್ಟನ್ನು ಹಿಡಿಯಲು ಯತ್ನಿಸಿದ ಕಾರಣ ಆಗ ಮೂಲಭುತ ವ್ಯತ್ಯಾಸವಿತ್ತು ಎಂದು ಅವರು ಹೇಳಿದ್ದಾರೆ.

    ಕಾಂಗ್ರೆಸ್ ಯಾವುದೇ ಸಮಯದಲ್ಲಿ ಭಾರತದ ಸಾಂಸ್ಥಿಕ ಚೌಕಟ್ಟನ್ನು ಹಿಡಿಯಲು ಯತ್ನಿಸಿರಲಿಲ್ಲ. ನಮ್ಮ ಪಕ್ಷಕ್ಕೆ ಆ ಸಾಮಥ್ರ್ಯವೂ ಇಲ್ಲ. ನಮ್ಮ ವ್ಯವಸ್ಥೆ ಇದನ್ನು ಅನುಮತಿಸುವುದಿಲ್ಲ. ನಾವು ಬಯಸಿದರೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

    ಆರ್ ಎಸ್‍ಎಸ್ ವ್ಯವಸ್ಥೆ ಮೂಲಭೂತವಾಗಿ ಭಿನ್ನವಾಗಿದೆ. ಹೀಗಾಗಿ ನಾವು ಚುನಾವಣೆಯಲ್ಲಿ ಬಿಜೆಪಿ ಸೋಲಿಸಿದರೂ ಸಾಂಸ್ಥಿಕ ರಚನೆಯಲ್ಲಿ ಅವರ ಜನರನ್ನು ತೊಡೆದು ಹಾಕಲು ಆಗುತ್ತಿಲ್ಲ. ಈ ಬಗ್ಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‍ನಾಥ್ ಅವರು ನನ್ನ ಬಳಿ ಚರ್ಚಿಸಿದ್ದಾರೆ. ರಾಜ್ಯದ ಹಿರಿಯ ಅಧಿಕಾರಿಗಳು ಆರ್ ಎಸ್‍ಎಸ್‍ಗೆ ಸೇರಿದ್ದರಿಂದ ಕಾಂಗ್ರೆಸ್ ಮುಖಂಡರ ಮಾತನ್ನು ಕೇಳುವುದಿಲ್ಲವೆಂದು ನನಗೆ ಹೇಳಿದ್ದರು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

  • ಸಭೆಯಲ್ಲಿ ಗಂಭೀರ ಚರ್ಚೆ ನಡೆಯುವಾಗ ಅಧಿಕಾರಿಗಳು ಮೊಬೈಲ್‍ನಲ್ಲಿ ಮಗ್ನ- ಸಚಿವೆ ಶಶಿಕಲಾ ಜೊಲ್ಲೆ ಗರಂ

    ಸಭೆಯಲ್ಲಿ ಗಂಭೀರ ಚರ್ಚೆ ನಡೆಯುವಾಗ ಅಧಿಕಾರಿಗಳು ಮೊಬೈಲ್‍ನಲ್ಲಿ ಮಗ್ನ- ಸಚಿವೆ ಶಶಿಕಲಾ ಜೊಲ್ಲೆ ಗರಂ

    ವಿಜಯಪುರ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವಾಗಲೇ ಕೆಲ ಅಧಿಕಾರಿಗಳು ಮೊಬೈಲ್‍ನಲ್ಲಿ ಮಗ್ನವಾಗಿದ್ದರೆ, ಇನ್ನೂ ಕೆಲವರು ನಿದ್ದೆಗೆ ಜಾರಿದ್ದರು. ಇದನ್ನು ಗಮನಸಿದ ಜಿಲ್ಲಾ ಉಸ್ತುವಾರಿ ಸಚಿವೆಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಗರಂ ಆಗಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಜಿ.ಪಂ. ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗಿ ಆಗಿದ್ದರು. ಪ್ರಮುಖ ವಿಷಯಗಳು ಚರ್ಚೆ ಆಗುವ ವೇಳೆ ಸರ್ವೆ ಇಲಾಖೆ ಅಧಿಕಾರಿ ಮೊಬೈಲ್ ನಲ್ಲಿ ಫುಲ್ ಬ್ಯೂಸಿ ಆಗಿದ್ದರು. ಇದನ್ನು ಗಮನಿಸಿದ ಸಚಿವೆ ಶಶಿಕಲಾ ಜೊಲ್ಲೆ, ಅಧಿಕಾರಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.

    ಗಂಭೀರ ಚರ್ಚೆ ನಡೆಯುತ್ತಿರುವಾಗ ನೀವೇನು ಸಭೆಯಲ್ಲಿ ಮೊಬೈಲ್ ನಲ್ಲಿ ಬ್ಯೂಸಿ ಇದ್ದೀರಾ ಎಂದು ಪ್ರಶ್ನಿಸಿದರು. ಇಂತಹ ಮೀಟಿಂಗ್ ನಲ್ಲೇ ನೀವು ಬ್ಯೂಸಿ ಇದ್ದೀರಾ, ಇನ್ನು ಜನರಿಗೆ ನಿವೇನು ನ್ಯಾಯ ಒದಗಿಸುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಸಭೆಯಲ್ಲಿ ನಿದ್ದೆಗೆ ಜಾರಿದ್ದರು.

    ನಂತರ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಬೇಸಿಗೆ ಬರುತ್ತಿದೆ, ಕೂಡಲೇ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಆಗದಂತೆ ಗಮನ ಹರಿಸಲು ಸಚಿವರು ಸೂಚಿಸಿದರು.

  • ಕೆಲವು ಅಧಿಕಾರಿಗಳು ಒಂದು ಕುಟುಂಬದ ರಾಜಕಾರಣಿಗಳ ಕೆಳಗೆ ಜೀತ ಪದ್ದತಿಯಲ್ಲಿಯೇ ಇದ್ದಾರೆ: ಎ.ಮಂಜು

    ಕೆಲವು ಅಧಿಕಾರಿಗಳು ಒಂದು ಕುಟುಂಬದ ರಾಜಕಾರಣಿಗಳ ಕೆಳಗೆ ಜೀತ ಪದ್ದತಿಯಲ್ಲಿಯೇ ಇದ್ದಾರೆ: ಎ.ಮಂಜು

    ಹಾಸನ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಕೂಡಾ ಹಾಸನ ಜಿಲ್ಲೆಯ ಕೆಲವು ಅಧಿಕಾರಿಗಳು ಒಂದು ಕುಟುಂಬದ ರಾಜಕಾರಣಿಗಳ ಕೆಳಗೆ ಜೀತ ಪದ್ದತಿಯಲ್ಲಿಯೇ ಇದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಆಕ್ರೋಶ ಹೊರಹಾಕಿದ್ದಾರೆ.

    ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಜಿಲ್ಲಾಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಕ್ಷೇತ್ರ ಮರು ವಿಂಗಡಣೆಯಾಗುತ್ತಿದ್ದು, ರಾಜಕೀಯದ ಕೆಲವು ನಾಯಕರುಗಳ ಒತ್ತಡಕ್ಕೆ ಮಣಿದು ಜಿಲ್ಲೆಯ ಕೆಲವು ಅಧಿಕಾರಿಗಳು ನಿಯಮ ಮೀರಿ ಕೆಲಸವನ್ನು ಮಾಡುತ್ತಿದ್ದಾರೆ. ಅಧಿಕಾರಿಗಳು ಒಂದು ಕುಟುಂಬಕ್ಕೆ ಇನ್ನು ಜೀತ ಪದ್ದತಿಯ ರೀತಿಯಲ್ಲಿ ಇದ್ದಾರೆ ಎಂದು ಭಾಸವಾಗುತ್ತಿದೆ ಎಂದು ದೇವೇಗೌಡರ ಕುಟುಂಬದ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.

    ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಪಡುವಲಹಿಪ್ಪೆಯನ್ನು ಜಿಲ್ಲಾ ಪಂಚಾಯ್ತಿ ಕ್ಷೇತ್ರವನ್ನಾಗಿ ಮಾಡುವ ಸಲುವಾಗಿ, ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಬರುವ ಕೆರಗೋಡು ಗ್ರಾಮ ಪಂಚಾಯ್ತಿಯನ್ನು ಪಡುವಲಹಿಪ್ಪೆ ಕ್ಷೇತ್ರಕ್ಕೆ ಸೇರಿಸಲು ಹೊರಟಿದ್ದಾರೆ. ಮರುವಿಂಗಡಣೆಯ ಸಮಯದಲ್ಲಿ ಆಯಾ ಕ್ಷೇತ್ರ ಸಮೀಪದ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದಿದ್ದಾರೆ.

    ಸಮೀಪದಲ್ಲಿರುವ ಎರಡು ಗ್ರಾಮಪಂಚಾಯ್ತಿಯನ್ನು ಬಿಟ್ಟು ಅರಕಲಗೂಡು ತಾಲ್ಲೂಕಿನ ಕೆರಗೋಡುನ್ನು ಸೇರ್ಪಡೆ ಮಾಡಿಕೊಳ್ಳುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಅಧಿಕಾರಿಗಳು ರಾಜಕೀಯದ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ ಎಂದರೆ ಅವರು ಜೀತ ಪದ್ದತಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  • ನಮ್ಮನೆಗಿಂತ ನೆಂಟರ ಮನೆ ಚೆಂದ – ಪಾಲಿಕೆಯಲ್ಲಿ ಉಳಿಯಲು ಬೇರೆ ಇಲಾಖೆ ಅಧಿಕಾರಿಗಳ ವ್ಯಾಮೋಹ

    ನಮ್ಮನೆಗಿಂತ ನೆಂಟರ ಮನೆ ಚೆಂದ – ಪಾಲಿಕೆಯಲ್ಲಿ ಉಳಿಯಲು ಬೇರೆ ಇಲಾಖೆ ಅಧಿಕಾರಿಗಳ ವ್ಯಾಮೋಹ

    – 2 ವರ್ಷ ಮಾತ್ರ ಎರವಲು ಸೇವೆಗೆ ಅವಕಾಶ
    – ಹಲವು ವರ್ಷಗಳಿಂದ ಅಧಿಕಾರಿಗಳ ಠಿಕಾಣಿ
    – ನಗರಾಭಿವೃದ್ಧಿ ಇಲಾಖೆಯಿಂದ ಮಾತೃ ಇಲಾಖೆಗೆ ಹೋಗುವಂತೆ ಆದೇಶ

    ಬೆಂಗಳೂರು: ಬಿಬಿಎಂಪಿ ವರ್ಗಾವಣೆ‌ ಹಗ್ಗ ಜಗ್ಗಾಟ‌ ಜೋರಾಗಿಯೇ ಸಾಗುತ್ತಿದೆ. ಎರವಲು ಸೇವೆಗೆ ಬಂದವರು ಬಿಬಿಎಂಪಿ ಬಿಟ್ಟು ಹೋಗಲು ಮನಸ್ಸಿಲ್ಲ. ಬೇರೆ ಬೇರೆ ಇಲಾಖೆಯವರಿಗೆ ಪಾಲಿಕೆಯಲ್ಲೇ ಉಳಿಯುವ ಆಸೆ ಹೆಚ್ಚಾಗಿದೆ ಹೀಗಂತ ಸಾಮಾಜಿಕ ಕಾರ್ಯಕರ್ತ ಅಮರೇಶ್ ಆರೋಪ ಮಾಡಿದ್ದಾರೆ.

    ಆದಾಯ ಮಾಡಲು ಬಿಬಿಎಂಪಿ ಬೇಕೆ ಬೇಕು ಎಂಬ ಮಾತಿದೆ. ಹೀಗಾಗಿ ಅವಧಿ ಮೀರಿ ಪಾಲಿಕೆಯ ಅಧಿಕಾರದಲ್ಲೇ ಇರಲು ಮಿನಿಸ್ಟರ್‌, ಶಾಸಕರ ಪತ್ರಗಳ ವ್ಯವಹಾರ ನಡೆಸಿದ್ದಾರೆ. ಒಂದೇ ದಿನ 25 ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಕಾರ್ಯಪಾಲಕರಗಳ ವರ್ಗಾವಣೆ ಆದೇಶ ಹೊರಡಿಸಲಾಗಿದೆ. 6 ರಿಂದ 8 ವರ್ಷ ಪಾಲಿಕೆಯಲ್ಲಿರುವ ಅಧಿಕಾರಿಗಳ ವ್ಯಾಮೋಹ ಹಾಗೇ ಮುಂದುವರೆದಿದೆ.

    ನಗರದ ಎಲ್ಲ ಕ್ಷೇತ್ರಗಳಿಂದಲೂ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ನೌಕರರು ತಮ್ಮ ಮಾತೃ ಇಲಾಖೆಗೆ ವಾಪಸ್ ಆಗಲು ಮನಸ್ಸಿಲ್ಲ. ಸಿಕ್ಕ ಸಿಕ್ಕ ಕಡೆ ಮಿನಿಸ್ಟರ್ , ಶಾಸಕರಿಂದ ಶಿಫಾರಸ್ಸು ಪತ್ರಗಳ ಪಡೆಯಲು ಅಲೆದಾಡುತ್ತಿದ್ದಾರೆ. 3,800 ಕ್ಕೂ ಹೆಚ್ಚು ಜನರು ಪಾಲಿಕೆಯ ನೇಮಕಾತಿ ಇರುವ ಸಿಬ್ಬಂದಿ , 1,900 ಕ್ಕೂ ಹೆಚ್ಚು ಜನರು ಎರವಲು ಸೇವೆಯಿಂದ ಬೇರೆ ಇಲಾಖೆಯಿಂದ ಬಂದವರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಬಿಬಿಎಂಪಿಯಲ್ಲೇ ಉಳಿಸಿಕೊಳ್ಳಿ ಎಂದು ಶಿಫಾರಸ್ಸು ಪತ್ರಗಳ ಪರಭಾರೆಗಾಗಿ ಸಿದ್ಧತೆ ನಡೆಯುತ್ತಿದೆ. ಪಾಲಿಕೆಯಲ್ಲಿ 2 ವರ್ಷಗಳು ಮಾತ್ರ ಎರವಲು ಸೇವೆಯಲ್ಲಿ ಮಾತ್ರ ಇರಲು ಅವಕಾಶ ಇದೆ. ಆದರೆ ನಗರದ ಹಲವೆಡೆ 8 ವರ್ಷಗಳಿಂದ ಎರವಲು ಸೇವೆಯಲ್ಲಿ ಮುಂದುವರೆಯಲು ಕಸರತ್ತು ನಡೆಯುತ್ತಿದೆ.

    ನಗರಾಭಿವೃದ್ಧಿ ಇಲಾಖೆಯಿಂದಲೇ ವರ್ಗಾವಣೆಗೆ ಆದೇಶ ಹೊರಬಿದ್ದಿದೆ. ಪಾಲಿಕೆ ಬಿಟ್ಟು ಮಾತೃ ಇಲಾಖೆಗೆ ವಾಪಸ್ ಆಗಿ ಎಂದು ಆದೇಶ ಹೊರಡಿಸಿದೆ. ಬರೋಬ್ಬರಿ 25 ಕಾರ್ಯಪಾಲಕ ಅಭಿಯಂತರನ್ನು ಮಾತೃ ಇಲಾಖೆಗೆ ವಾಪಸ್ ಕಳಿಸಲು ಆದೇಶ ಹೊರಡಿಸಿದೆ.

    ವರ್ಗಾವಣೆ ಪಟ್ಟಿಯಲ್ಲಿರುವ ಅಧಿಕಾರಿಗಳ ಲೆಕ್ಕ:
    ಜಕ್ಕಸಂದ್ರ ವಾರ್ಡ್ ಪ್ರದೀಪ್ ಕುಮಾರ್ 6 ವರ್ಷ, ಸರ್ವಜ್ಞ ನಗರ ಕ್ಷೇತ್ರ ಕಾರ್ಯಪಾಲಕ ಅಭಿಯಂತರ ಮೋಹನ್ ಗೌಡ 8 ವರ್ಷ, ಪಟ್ಟಾಭಿರಾಮನಗರದ ಸಹಾಯಕ ಕಾರ್ಯುಪಾಲಕ ಸತೀಶ್‌ ಕುಮಾರ್‌ 5 ವರ್ಷ, ಪಾದರಾಯನಗರದ ಸಹಾಯಕ ಕಾರ್ಯಪಾಲಕ ಮುಜಾಹಿದ್ ಪಾಷ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಈಗ ಮಾತೃ ಇಲಾಖೆಗೆ ವಾಪಸ್ ಆಗಬೇಕಿದೆ.

    ಕೋರ್ಟ್ ಆದೇಶದ ಪ್ರಕಾರ ವರ್ಗಾವಣೆ ಸಂಬಂಧಿತ ಶಿಫಾರಸ್ಸು ಪತ್ರ ನೀಡುವಂತಿಲ್ಲ. ಶಾಸಕರು, ಮಿನಿಸ್ಟರ್ ಗಳು ಪತ್ರ ವ್ಯವಹಾರ ಮಾಡುವಂತಿಲ್ಲ. ಪಾಲಿಕೆ ಮಾಡಬೇಕಾದ ಕೆಲಸ ನಗರಾಭಿವೃದ್ಧಿ ಇಲಾಖೆಯೇ ಪ್ರವೇಶ ಮಾಡಿದೆ. ಈ ವರ್ಗಾವಣೆ ಚಾಲ್ತಿ ಆಗಲೇ ಬೇಕಾಗಿದೆ. ಒಂದೊಮ್ಮೆ ಶಿಫಾರಸ್ಸು ಪತ್ರ ನೀಡಿ ಮತ್ತೆ ಪಾಲಿಕೆಯಲ್ಲಿ ಉಳಿಯಲು ಪ್ರಯತ್ನ ಪಟ್ಟರೆ ಅದು ಬಿಬಿಎಂಪಿ ಮೂಲಕ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದಂತೆ ಆಗುತ್ತದೆ.

  • 20 ಲಕ್ಷ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿ

    20 ಲಕ್ಷ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿ

    ಬೆಂಗಳೂರು: ಬರೋಬ್ಬರಿ 20 ಲಕ್ಷ ರೂ. ಹಣ ಪಡೆಯುವ ವೇಳೆ ಬಿಬಿಎಂಪಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

    ನಗರದ ಬೊಮ್ಮನಹಳ್ಳಿಯ ಯೋಜನೆ ವಿಭಾಗದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ 20 ಲಕ್ಷ ರೂ. ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಟ್ಟಡವೊಂದಕ್ಕೆ ಓಸಿ ನೀಡಲು 40 ಲಕ್ಷ ಲಂಚ ಕೇಳಿದ್ದ ದೇವೇಂದ್ರಪ್ಪ, ಈ ಪೈಕಿ 20 ಲಕ್ಷ ರೂ. ಮುಂಗಡ ಹಣ ಪಡೆಯುವ ವೇಳೆ ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಹಣ ನೀಡುವಾಗ ಮಾತ್ರವಲ್ಲದೆ, ಬಳಿಕ ಕಾರ್ ಪರಿಶೀಲನೆ ನಡೆಸಿದಾಗ ಸಹ ಕಾರಿನಲ್ಲಿ ಮತ್ತೆ 8 ಲಕ್ಷ ರೂ. ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಕೋಟ್ಯಧೀಶ ಅಧಿಕಾರಿಗಳನ್ನು ಸಹ ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಇದರ ಬೆನ್ನಲ್ಲೇ ಇದೀಗ ಈ ಪ್ರಕರಣ ಬೆಳಕಿಗೆ ಬಂದಿದೆ.

  • ನೀರೆಂದು ಸ್ಯಾನಿಟೈಸರ್ ಕುಡಿದ ಪಾಲಿಕೆ ಉಪ ಕಮಿಷನರ್ – ವೀಡಿಯೋ ವೈರಲ್

    ನೀರೆಂದು ಸ್ಯಾನಿಟೈಸರ್ ಕುಡಿದ ಪಾಲಿಕೆ ಉಪ ಕಮಿಷನರ್ – ವೀಡಿಯೋ ವೈರಲ್

    ಮುಂಬೈ: ಮಹಾಮಾರಿ ಕೊರೊನಾ ವೈರಸ್ ತಗುಲುವುದನ್ನು ತಡೆಗಟ್ಟುವ ಸಲುವಾಗಿ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಆದರೆ ಇತ್ತೀಚೆಗೆ ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಬದಲು ಈ ಸ್ಯಾನಿಟೈಸರನ್ನು ಹಾಕಿ ಎಡವಟ್ಟು ಮಾಡಲಾಗಿತ್ತು. ಇದೀಗ ಅದೇ ಸ್ಯಾನಿಟೈಸರ್ ನಿಂದ ಮತ್ತೊಂದು ಎಡವಟ್ಟಾದ ಘಟನೆ ಬೆಳಕಿಗೆ ಬಂದಿದೆ.

    ಹೌದು. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ಉಪ ಕಮಿಷನರ್ ನೀರೆಂದು ಸ್ಯಾನಿಟೈಸರ್ ಕುಡಿದಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಂದು ನಾಗರಿಕ ಸಂಸ್ಥೆಯ ಶಿಕ್ಷಣ ಬಜೆಟ್ ಮಂಡಿಸುವಾಗ ಉಪ ಕಮಿಷನರ್ ರಮೇಶ್ ಪವಾರ್ ಅವರು ನೀರಿನ ಬದಲು ಸ್ಯಾನಿಟೈಸರ್ ಕುಡಿದಿದ್ದಾರೆ.

    ಸ್ಯಾನಿಟೈಸರ್ ಪಕ್ಕದಲ್ಲಿಯೇ ನೀರಿನ ಬಾಟ್ಲಿಯನ್ನು ಇರಿಸಲಾಗಿತ್ತು. ಬಜೆಟ್ ಮಂಡಿಸುವ ಮೊದಲು ರಮೇಶ್ ಪವಾರ್ ಸ್ವಲ್ಪ ನೀರು ಕುಡಿಯಲು ನಿರ್ಧರಿಸಿದರು. ಹಾಗೆಯೇ ಅವರು ಸ್ಯಾನಿಟೈಸರ್ ಬಾಟ್ಲಿ ತೆಗೆದುಕೊಂಡು ಕುಡಿದಿದ್ದಾರೆ. ತಾನು ಕುಡಿಯುತ್ತಿರುವುದು ಸ್ಯಾನಿಟೈಸರ್ ಎಂದು ಗೊತ್ತಾದ ತಕ್ಷಣವೇ ಪವಾರ್ ಅವರು ಉಗುಳಿದ್ದಾರೆ.

    ಘಟನೆಯ ನಂತರ ರಮೇಶ್ ಪವಾರ್ ಸಭಾಂಗಣದಿಂದ ಹೊರಗೆ ಹೋಗಿ ಸ್ವಲ್ಪ ವಿರಾಮ ತೆಗೆದುಕೊಂಡು ನಂತರ ಮರಳಿದರು. ಅಲ್ಲದೆ ಬಜೆಟ್ ಮಂಡನೆ ಮುಂದುವರಿಯಿತು. ಇನ್ನು ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಯ ಸಂಪೂರ್ಣ ವೀಡಿಯೋವನ್ನು ಅಲ್ಲೇ ಇದ್ದ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸುಮಾರು 5,000ಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಅಲ್ಲದೆ ಹಲವಾರು ಲೈಕ್‍ಗಳು ಮತ್ತು ರಿಟ್ವೀಟ್‍ಗಳು ಬಂದಿವೆ. ನೆಟ್ಟಿಗರೊಬ್ಬರು ಬಜೆಟ್ ಮಂಡಿಸುವ ಮೊದಲು ಆತಂಕ ಎಂದು ಕಾಮೆಂಟ್ ಮಾಡಿದ್ದಾರೆ.

    ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಎಂಸಿ ಅಧಿಕಾರಿಗಳು, ನೀರಿನ ಬಾಟಲಿಗಳು ಮತ್ತು ಸ್ಯಾನಿಟೈಸರ್ ಎರಡನ್ನೂ ಮೇಜಿನ ಮೇಲೆ ಇರಿಸಲಾಗಿದ್ದು ಒಂದೇ ರೀತಿ ಕಾಣುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ ಘಟನೆಯ ನಂತರ ಸ್ಯಾನಿಟೈಸರ್ ಬಾಟ್ಲಿಗಳನ್ನು ತೆಗೆದುಹಾಕಲಾಗಿದೆ. ಯಾಕಂದರೆ ನೀರಿನ ಬಾಟಲಿಗಳು ಮತ್ತು ಸ್ಯಾನಿಟೈಸರ್ ಬಾಟ್ಲಿಗಳು ಒಂದೇ ರೀತಿ ಕಾಣುತ್ತಿದ್ದವು. ಆದ್ದರಿಂದ ಮುಂದೆ ಇಂತಹ ತಪ್ಪು ಮರುಕಳಿಸಬಾರದೆಂದು ನಾವು ಸ್ಯಾನಿಟೈಸರ್ ಬಾಟ್ಲಿಗಳನ್ನು ಟೇಬಲ್‍ನಿಂದ ತೆಗೆದುಹಾಕಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    https://twitter.com/thakur_shivangi/status/1356894799387758593

  • ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ – ಕಣ್ಮುಚ್ಚಿ ಕುಳಿತಿದ್ಯಾ ಲೋಕೋಪಯೋಗಿ ಇಲಾಖೆ..?

    ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ – ಕಣ್ಮುಚ್ಚಿ ಕುಳಿತಿದ್ಯಾ ಲೋಕೋಪಯೋಗಿ ಇಲಾಖೆ..?

    ವಿಜಯಪುರ: ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ ನಡೆದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ನಡೆದಿದೆ.

    ಕಳೆದ ರಾತ್ರಿ ಕ್ಲಾಸ್ 1 ಗುತ್ತಿಗೆದಾರನೊಬ್ಬ ಮುಳವಾಡ ಪ್ರವಾಸಿ ಮಂದಿರದಲ್ಲಿ ಪೆಂಡಾಲ್ ಹಾಕಿಸಿ ಭರ್ಜರಿಯಾಗಿ ಗುಂಡು ತುಂಡು ಪಾರ್ಟಿ ನಡೆಸಿದ್ದಾನೆ. ಈ ಪಾರ್ಟಿಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಎಣ್ಣೆ, ಮಾಂಸದೂಟ ಎಲ್ಲವೂ ರಾಜಾರೋಷವಾಗಿ ನಡೆದಿದೆ.

    ಪ್ರವಾಸಿ ಮಂದಿರದಲ್ಲೇ ಅಡುಗೆ ಮಾಡಲಾಗಿದ್ದು, ಉಳ್ಳವರು ಇಲ್ಲಿ ಏನು ಮಾಡಿದರೂ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದೆ. ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರ ಪಕ್ಕದಲ್ಲಿರುವ ಐಬಿಯಲ್ಲೇ ಇಷ್ಟೊಂದು ರಾಜಾರೋಷವಾಗಿ ದರ್ಬಾರ್ ನಡೆಸಿದರೂ ಸರ್ಕಾರಿ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ಪ್ರಥಮ ದರ್ಜೆಯ ಗುತ್ತಿಗೆದಾರನಿಗೆ ಐಬಿಯನ್ನೇ ಅಧಿಕಾರಿಗಳು ಬರೆದು ಕೊಟ್ರಾ..? ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ ಲೋಕೋಪಯೋಗಿ ಇಲಾಖೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

  • ನಿರಂತರ ಜ್ಯೋತಿ ಯೋಜನೆಂಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ – ಅಧಿಕಾರಿಗಳಿಗೆ ಈಶ್ವರಪ್ಪ ಕ್ಲಾಸ್

    ನಿರಂತರ ಜ್ಯೋತಿ ಯೋಜನೆಂಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ – ಅಧಿಕಾರಿಗಳಿಗೆ ಈಶ್ವರಪ್ಪ ಕ್ಲಾಸ್

    ಶಿವಮೊಗ್ಗ: ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ಜ್ಯೋತಿ ಯೋಜನೆಯ ವಿದ್ಯುತ್ ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ.

    ಈ ಯೋಜನೆಯಲ್ಲಿನ ಅವ್ಯವಹಾರ ವಿಚಾರವಾಗಿ ಆರೋಪ ಕೇಳಿ ಬಂದ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಚಿವ ಕೆ. ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಮತ್ತು ಮೆಸ್ಕಾಂ ಅಧಿಕಾರಿಗಳು ಸಭೆ ನಡೆಸಿದರು.

    ಸಭೆಯಲ್ಲಿ ಮಾತನಾಡಿದ ಅವರು, ಇದು 226 ಕೋಟಿ ವೆಚ್ಚದ ಯೋಜನೆಯಾಗಿದ್ದು, ಈಗಾಗಲೇ 148 ಕೋಟಿ ಹಣವನ್ನು ಗುತ್ತಿಗೆದಾರ ಪಡೆದಿದ್ದಾನೆ. ಇದರಲ್ಲಿಯೇ 60 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು. ಅಲ್ಲದೆ ಕಾಮಗಾರಿಯ ಬಗ್ಗೆ ಹಿರಿಯ ಅಧಿಕಾರಿಗಳು ನಿಗಾ ವಹಿಸದೇ ಇರುವುದರಿಂದ ಈ ಅವ್ಯವಹಾರ ನಡೆದಿದೆ ಎಂದು ಅಧಿಕಾರಿಗಳ ವಿರುದ್ದ ಸಚಿವ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

    ಅಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಬಿಲ್ ಮಾಡಿಕೊಟ್ಟಿದ್ದಾರೆ. ಇನ್ನು ಮುಂದಿನ ಬಿಲ್ ಮಾಡದೇ ತಡೆ ಹಿಡಿಯುವಂತೆ ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಈಗ ಸಭೆ ನಡೆಸಿ ಎಚ್ಚರಿಕೆ ನೀಡಿದ್ದೇನೆ. ಮತ್ತೆ ಮುಂದಿನ ವಾರದಲ್ಲಿ ಮತ್ತೊಮ್ಮೆ ಸಭೆ ನಡೆಸುತ್ತೇನೆ. ಅಷ್ಟರೊಳಗೆ ಅಧಿಕಾರಿಗಳು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

  • ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ: ಸಚಿವ ಪ್ರಭು ಚವ್ಹಾಣ್

    ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ: ಸಚಿವ ಪ್ರಭು ಚವ್ಹಾಣ್

    – ಹಕ್ಕಿ ಜ್ವರ ನಿಯಂತ್ರಣಕ್ಕೆ ರಾಜ್ಯಮಟ್ಟದ ಉನ್ನತ ಸಮಿತಿ

    ಬೆಂಗಳೂರು: ಹಕ್ಕಿ ಜ್ವರದ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ರಾಜ್ಯದಲ್ಲಿ ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.

    ಇಂದು ಆನ್‍ಲೈನ್ ಮೂಲಕ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಕ್ಕಿ ಜ್ವರದ ಬಗ್ಗೆ ತೀವ್ರ ನಿಗಾವಹಿಸುವಂತೆ ಸಚಿವರು ಸೂಚಿಸಿದ್ದಾರೆ.

    ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ಹಕ್ಕಿಜ್ವರ ಪ್ರಕರಣ ಕಂಡುಬಂದಿಲ್ಲ. ಆದರೂ ಇಲಾಖೆಯ ಅಧಿಕಾರಿಗಳು ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಆತಂಕ ಪಡದೆ ಮೊಟ್ಟೆ ಮತ್ತು ಮಾಂಸವನ್ನು ಸೇವಿಸಬಹುದಾಗಿದೆ. ಕೇರಳ ಹೊರತುಪಡಿಸಿ ಇತರೇ ರಾಜ್ಯಗಳಿಗೆ ಕೋಳಿ ಮತ್ತು ಕೋಳಿ ಉತ್ಪನ್ನಗಳ ಮಾರಾಟ ಹಾಗೂ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇಲ್ಲ. ಕೇರಳದಿಂದ ಬರುವ ಕೋಳಿ, ಕುಕ್ಕುಟ, ಕೋಳಿ ಉತ್ಪನ್ನಗಳ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

    ಗಡಿ ಭಾಗದಲ್ಲಿ ಹೈ ಅಲರ್ಟ್
    ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳು ಹಾಗೂ ಇತರೇ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಕ್ಕಿ ಜ್ವರ ತಡೆಗಟ್ಟಲು ರೋಗ ನಿಯಂತ್ರಣ ಸಮಿತಿ ಸಭೆಗಳನ್ನು ನಡೆಸಿ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅರಣ್ಯ ಇಲಾಖೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಹಾಗೂ ಪೊಲೀಸ್ ಇಲಾಖೆ ಜೊತೆಗೂಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ತಿಳಿಸಲಾಗಿದೆ. ಎಲ್ಲ ಕೋಳಿ ಫಾರಂಗಳಲ್ಲಿ ಮುಂಜಾಗೃತಾ ಕ್ರಮವಾಗಿ ರೋಗ ನಿಯಂತ್ರಣ ಔಷಧಿಗಳಿಂದ ಸ್ವಚ್ಛಗೊಳಿಸುವುದು ಮತ್ತು ಕನಿಷ್ಟ ಜೈವಿಕ ರಕ್ಷಣಾ ಪದ್ಧತಿ ಅಳವಡಿಕೊಳ್ಳುವಂತೆ ತೀರ್ಮಾನಿಸಿ ಕ್ರಮವಹಿಸುವಂತೆ ತಿಳಿಸಲಾಗಿದೆ ಎಂದರು.

    ಕೇರಳದ ಗಡಿ ಭಾಗದ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಕಾಡು ಹಕ್ಕಿಗಳು, ನೀರು ಹಕ್ಕಿಗಳು, ವಲಸೆ ಹಕ್ಕಿಗಳು ಬಾತುಕೋಳಿಗಳು, ಗೀಜಗದ ಹಕ್ಕಿಗಳು ಇತ್ಯಾದಿ ವಿವಿಧ ಪ್ರಭೇದದ ಹಕ್ಕಿಗಳ ಅಸಹಜ ಸಾವು ಅಥವಾ ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಗಮನಹರಿಸಿ ಕ್ರಮಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಮುಂಜಾಗ್ರತಾ ಕ್ರಮವಾಗಿ ಅವಶ್ಯವಿರುವ ಪರಿಕರಗಳು ಮತ್ತು ರೋಗ ನಿಯಂತ್ರಕ ರಾಸಾಯನಿಕಗಳನ್ನು ಕ್ರೂಢೀಕರಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಲು ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರ ಪರಿಷ್ಕರಿಸಿ ಹೊರಡಿಸಿರುವ 2021ರ ಹಕ್ಕಿಜ್ವರದ ನಿಯಂತ್ರಣ ಹಾಗೂ ನಿರ್ವಹಣೆ ಮಾರ್ಗಸೂಚಿಗಳ ಪ್ರಕಾರ ಸರ್ವೇಕ್ಷಣೆ, ಕಣ್ಗಾವಲು ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

    ನಗರ ಸಭೆ, ಪುರಸಭೆ ವ್ಯಾಪ್ತಿಯ ಪ್ರದೇಶದಲ್ಲಿ ಹಕ್ಕಿಗಳು, ಕೋಳಿಗಳ ಮರಣ ಸಂಭವಿಸಿದಲ್ಲಿ ಅದರ ಸಮೀಪ ಸಾರ್ವಜನಿಕರು ಹೊಗದಂತೆ ಮತ್ತು ಮುಟ್ಟದಂತೆ ತಿಳುವಳಿಕೆ ನೀಡಬೇಕು. ವೈಯಕ್ತಿಕ ಸುರಕ್ಷತೆಯನ್ನು ಅನುಸರಿಸಿ, ಜೈವಿಕ ಸುರಕ್ಷತಾ ಕ್ರಮಗಳೊಂದಿಗೆ ವಿಲೇವಾರಿ ಮಾಡಲು ಪಶುಸಂಗೋಪನೆ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.

    ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಕ್ಷೇತ್ರಗಳ್ಲಿ ವಿಶೇಷವಾಗಿ, ಪಕ್ಷಿಧಾಮ, ಪ್ರಾಣಿ ಸಂಗ್ರಹಾಲಯ ಹಾಗೂ ನೀರು ಸಂಗ್ರಣ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು. ಕೋಳಿಗಳು, ಹಿತ್ತಲ ಕೋಳಿಗಳು, ಹಕ್ಕಿಗಳು, ಕಾಡು ಹಕ್ಕಿಗಳು, ವಲಸೆ ಹಕ್ಕಿಗಳ ಯಾವುದೇ ಅಸ್ವಾಭಾವಿಕ ಮರಣ ಸಂಭವಿಸಿದಲ್ಲಿ ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ. ಕೋಳಿ ಶೀತ ಜ್ವರದ ಸಂಭವನೀಯತೆಯನ್ನು ಪರಿಗಣಿಸಿ, ಸಂಬಂಧಪಟ್ಟ ಪ್ರಯೋಗಾಲಯಕ್ಕೆ ವರದಿ ಮಾಡಿ, ರೋಗ ವಿಶ್ಲೇಷಣೆ ನಡೆಸುವ ಬಗ್ಗೆ ಕ್ರಮ ವಹಿಸಿ ಹಾಗೂ ಜೈವಿಕ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಚಿವರು ಸೂಚಿಸಿದ್ದಾರೆ.

    ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶೀ ರಾಜೇಂದ್ರಕುಮಾರ್ ಕಠಾರಿಯಾ, ಅಯುಕ್ತ ಹೆಚ್.ಬಸವರಾಜೇಂದ್ರ, ನಿರ್ದೇಶಕ ಡಾ.ಬಿ.ಎಸ್.ಶಿವಾರಾಮ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅರಣ್ಯ, ನಗರಾಭಿದ್ಧಿ, ಸಾರಿಗೆ, ಗೃಹ ಇಲಾಖೆ, ಕಂದಾಯ ಇಲಾಖೆ, ಹಣಕಾಸು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.