Tag: officers

  • 18-45 ವಯಸ್ಸಿನವರಿಗೆ ದೆಹಲಿಯಲ್ಲಿಂದು ಕೋವಿಡ್ ಲಸಿಕೆ

    18-45 ವಯಸ್ಸಿನವರಿಗೆ ದೆಹಲಿಯಲ್ಲಿಂದು ಕೋವಿಡ್ ಲಸಿಕೆ

    ನವದೆಹಲಿ: 18-45 ವಯಸ್ಸಿನ ಮಂದಿಗೆ ಇಂದು ದೆಹಲಿಯಲ್ಲಿ ಮೂರನೇ ಹಂತದ ಕೋವಿಡ್-19 ಲಸಿಕೆಯನ್ನು ಬೆಳಗ್ಗೆಯಿಂದ ನೀಡಲು ಆರಂಭಿಸಲಾಗಿದೆ.

    ದೆಹಲಿಯಲ್ಲಿ ಸುಮಾರು 90 ಲಕ್ಷ ಮಂದಿ ಲಸಿಕೆಯನ್ನು ಪಡೆಯಲಿದ್ದಾರೆ. 77 ಶಾಲೆಗಳಲ್ಲಿ ತಲಾ 5 ವ್ಯಾಕ್ಸಿನೇಷನ್ ಬೂತ್‍ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆಯನ್ನು ಪಡೆಯಲು ಸರ್ಕಾರ ಶಾಲೆಗಳಲ್ಲಿ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸ್ಥಾಪಿಸಿದೆ. ಈವರೆಗೂ ರಾಜಧಾನಿ ದೆಹಲಿಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸುಮಾರು 500 ಕೇಂದ್ರಗಳಲ್ಲಿ ಲಸಿಕೆಗಳನ್ನು ನೀಡಲಾಗುತ್ತಿತ್ತು. ಆದರೆ 18-45 ವಯೋಮಾನದವರಿಗೆ ವ್ಯಾಕ್ಸಿನ್ ನೀಡಲು ಪೂರ್ವ- ನೋಂದಣಿ ಕಡ್ಡಾಯವಾಗಿದೆ. ನೇರವಾಗಿ ವ್ಯಾಕ್ಸಿನ್ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಅಪೋಲೊ, ಫೋರ್ಟಿಸ್ ಮತ್ತು ಮ್ಯಾಕ್ಸ್ ಎಂಬ 3 ದೊಡ್ಡ ಆಸ್ಪತ್ರೆಗಳಲ್ಲಿ ಈಗಾಗಲೇ 18-45 ವರ್ಷದ ಮಂದಿಗೆ ಶನಿವಾರದಿಂದ ಸೀಮಿತ ಕೇಂದ್ರಗಳಲ್ಲಿ ಲಸಿಕೆ ನೀಡಲು ಆರಂಭಿಸಲಾಗಿದೆ. 1.34 ಕೋಟಿ ಲಸಿಕೆ ನೀಡಲು ದೆಹಲಿ ಸರ್ಕಾರ ಆದೇಶಿಸಿದ್ದು, ಮುಂದಿನ ಮೂರು ತಿಂಗಳಿನಲ್ಲಿ ಲಸಿಕೆಯನ್ನು ತಲುಪಿಸಲಾಗುವುದು. ಈ ಪೈಕಿ 67 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಪುಣೆ ಮೂಲಕ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಸಂಗ್ರಹಿಸಲಾಗುತ್ತಿದೆ ಎಂದು ತಿಳಿದ್ದಾರೆ.

  • ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡಿದವರಿಗೆ ಬಸ್ಕಿ ಹೊಡೆಸಿದ ಅಧಿಕಾರಿಗಳು

    ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡಿದವರಿಗೆ ಬಸ್ಕಿ ಹೊಡೆಸಿದ ಅಧಿಕಾರಿಗಳು

    ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆಗೆ ಬ್ರೇಕ್ ಹಾಕಲು ಸರ್ಕಾರ ಜನತಾ ಲಾಕ್‍ಡೌನ್ ಮೊರೆ ಹೋಗಿದೆ. ಆದರೆ ಲಾಕ್‍ಡೌನ್ ವೇಳೆಯಲ್ಲಿ ರಸ್ತೆಯಲ್ಲಿ ಬೇಕಾಬಿಟ್ಟಿ ಸುಖಾಸುಮ್ಮನೇ ಕುಂಟು ನೆಪ ಹೇಳಿ ಓಡಾಡ್ತಿದ್ದ ಯುವಕರಿಗೆ ಅಧಿಕಾರಿಗಳು ರಸ್ತೆ ಮಧ್ಯೆಯೇ ಬಸ್ಕಿ ಹೊಡೆಸಿ ಮನೆ ಕಳಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಗರದಲ್ಲಿ ನಡೆದಿದೆ.

    ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಹಾಗಾಗಿ ಸರ್ಕಾರ ಲಾಕ್‍ಡೌನ್ ಮಾಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರದ ಕಠಿಣ ನಿಯಮದ ಮಧ್ಯೆಯೂ ನಗರದಲ್ಲಿ ಜನ ಬೇಕಾಬಿಟ್ಟಿ ಓಡಾಡುತ್ತಿದ್ದರು. ಬಳಿಕ ಗಸ್ತು ತಿರುಗುತ್ತಿದ್ದ ಅಧಿಕಾರಿಗಳಿಗೆ ದಾರಿ ಮಧ್ಯೆ ಸಿಕ್ಕಿದ ಯುವಕರಿಗೆ ಅಲ್ಲೇ ಬಸ್ಕಿ ಹೊಡೆಯುವ ಶಿಕ್ಷೆ ನೀಡಿ ಬುದ್ದಿ ಕಲಿಸಿದ್ದಾರೆ.

    ನಗರದಲ್ಲಿ ಬೆಳಗ್ಗೆ 10 ಗಂಟೆ ನಂತರ ಜನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ತರಕಾರಿ ಕೊಳ್ಳಲು ಮಾರುಕಟ್ಟೆಗೆ ಬರುತ್ತಿದ್ದ ಜನ ಗುಂಪುಗೂಡುತ್ತಿದ್ದರು. ಇದನ್ನು ತಡೆಯಲು ಈಗಾಗಲೇ ಎಪಿಎಂಸಿ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿ, ಹಣ್ಣು ತರಕಾರಿಯನ್ನು ಗಾಡಿಗಳ ಮೂಲಕ ಮನೆ-ಮನೆಗೆ ಹೋಗಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ ಜನ ಕುಂಟು ನೆಪ ಹೇಳಿಕೊಂಡು ಮನೆಯಿಂದ ಹೊರಗಡೆ ಕಾಲಿಡುವಂತಿಲ್ಲ.

    ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ನೇತೃತ್ವದ ತಂಡ ಸಿಟಿ ರೌಂಡ್ಸ್ ನಡೆಸುತ್ತಿದ್ದ ವೇಳೆ, ಕುಂಟು ನೆಪ ಹೇಳಿಕೊಂಡು ಹೊರಬರುತ್ತಿದ್ದ ಯುವಕರಿಗೆ ರಸ್ತೆ ಮಧ್ಯೆಯೇ ಬಸ್ಕಿ ಹೊಡಿಸಿ ಮನೆಗೆ ಕಳಿಸಿದ್ದಾರೆ. ಮನೆಯಿಂದ ಹೊರಬಂದರೆ ಬಸ್ಕಿ ಶಿಕ್ಷೆ ಪಕ್ಕಾ ಎಂದು ಎಚ್ಚರಿಸಿದ್ದಾರೆ. ಬಸ್ಕಿ ಹೊಡೆದು ಸುಸ್ತಾಗಿರುವ ಯುವಕರು ಸಾಕಪ್ಪ ಸಾಕು ಮನೆಯಿಂದ ಹೊರಬರುವ ಸಹವಾಸವೇ ಬೇಡ ಅಂತ ಗೋಗರೆದು, ಇನ್ಮುಂದೆ ಬರಲ್ಲ ಸರ್ ಎಂದು ಹೇಳಿ ಹೋಗಿದ್ದಾರೆ.

  • ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳದ ರಾಶಿ ಸುಟ್ಟು ಭಸ್ಮ

    ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳದ ರಾಶಿ ಸುಟ್ಟು ಭಸ್ಮ

    ಹಾವೇರಿ: ಆಕಸ್ಮಿಕ ಬೆಂಕಿಗೆ ರಾಶಿ ಮಾಡಲು ಹಾಕಿದ್ದ ಮೆಕ್ಕೆಜೋಳದ ತೆನೆಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ.

    ಕಡೂರು ಗ್ರಾಮದ ಎಂಟು ಜನ ರೈತರಿಗೆ ಸೇರಿದ ಮೆಕ್ಕೆಜೋಳ ರಾಶಿಯಾಗಿದ್ದು, 20 ಎಕರೆ ಜಮೀನಿನಲ್ಲಿ ಬೆಳೆದಿದ್ದರು. ರಾಶಿ ಮಾಡಲು ಹಾಕಿದ್ದ ವೇಳೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ 700 ಕ್ವಿಂಟಾಲ್ ಗೂ ಅಧಿಕ ಮೆಕ್ಕೆಜೋಳ ಹಾನಿಯಾಗಿದೆ.

    ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಗುಳೆ ಹೋದವರು ವಾಪಸ್ – ಮಾಸ್ಕ್ ಹಾಕದರ ಮೇಲೆ ದಂಡಾಸ್ತ್ರ ಪ್ರಯೋಗ

    ಗುಳೆ ಹೋದವರು ವಾಪಸ್ – ಮಾಸ್ಕ್ ಹಾಕದರ ಮೇಲೆ ದಂಡಾಸ್ತ್ರ ಪ್ರಯೋಗ

    – ಕೊರೊನಾ ನಿಯಂತ್ರಣಕ್ಕೆ ಫೀಲ್ಡಿಗಿಳಿದ ಅಧಿಕಾರಿಗಳು

    ಗದಗ: ಸರ್ಕಾರದ ಟಫ್ ರೂಲ್ಸ್ ಮಧ್ಯೆ, ಲಾಕ್‍ಡೌನ್ ಆಗಬಹುದು ಎಂಬ ಭಯಕ್ಕೆ ವಲಸೆ ಹೋದವರು ಮರಳಿ ಗೂಡು ಸೇರುತ್ತಿದ್ದಾರೆ. ಇಂದು ವಿವಿಧ ನಗರಗಳಲ್ಲಿ ಕೆಲಸ ಅರಸಿ ಹೋದವರು ಜಿಲ್ಲೆಯ ಗಜೇಂದ್ರಗಡ ಪಟ್ಟಣಕ್ಕೆ ಹಿಂದಿರುಗಿದ್ದಾರೆ.

    ದುಡಿಯಲು ಹೋದವರು, ಉದ್ಯೋಗ ಅರಸಿ ಹೋದವರು, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ಕೋಚಿಂಗ್ ಹೋದ ಜಿಲ್ಲೆಯ ಜನರು ಮತ್ತೆ ತಮ್ಮೂರಿನತ್ತ ಮುಖ ಮಾಡುತ್ತಿದ್ದಾರೆ. ಗಜೇಂದ್ರಗಡ ಪಟ್ಟಣಕ್ಕೆ ಬಂದಿಳಿದು, ಅಲ್ಲಿಂದ ಸಿಕ್ಕ ಖಾಸಗಿ ವಾಹನಗಳ ಟಾಪ್ ಮೇಲೆ ಕುಳಿತು ತಮ್ಮ ತಮ್ಮೂರುಗಳಿಗೆ ಹೊರಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ತಮ್ಮ ಹಳ್ಳಿ ತಲುಪುತ್ತಿದ್ದಾರೆ. ನೆರೆ ರಾಜ್ಯವಾದ ಗೋವಾ, ಮಹಾರಾಷ್ಟ್ರ, ಕೇರಳ ಹಾಗೂ ನಮ್ಮ ರಾಜ್ಯದ ಬೇರೆ ಜಿಲ್ಲೆಗಳಾದ ಮಂಗಳೂರು, ಬೆಂಗಳೂರು, ಕಾರವಾರ, ಉಡುಪಿ, ಚಿಕ್ಕಮಗಳೂರು, ಮೈಸೂರು ಹೀಗೆ ಅನೇಕ ಕಡೆಗಳಿಗೆ ಕೂಲಿ ಅರಸಿ ಹೋದವರು, ಕೋಚಿಂಗ್ ಹೋದ ಉದ್ಯೋಗ ಆಕಾಂಕ್ಷಿಗಳು ಗಂಟು ಮೂಟೆಗಳನ್ನು ಕಟ್ಟಿಕೊಂಡು ಬರುತ್ತಿದ್ದಾರೆ.

    ಮಹಿಳೆಯರು, ಮಕ್ಕಳು, ಪುರುಷರು ಹೊಟ್ಟೆಪಾಡಿಗಾಗಿ ಊರು ತೊರೆದು ಜನ, ಮಹಾಮಾರಿ ಕೊರೊನಾಕ್ಕೆ ಹೆದರಿ ಮತ್ತೆ ಊರು ಸೇರುವಂತಾಗಿದೆ. ಯಾಕೆ ಊರಿಗೆ ಬರುತ್ತಿದ್ದಿರಾ ಅಂತ ಕೇಳಿದರೆ, ಕೊರೊನಾ ಹೆಚ್ಚಾಗುತ್ತಿದೆ, ಲಾಕ್‍ಡೌನ್ ಆಗಬಹುದು ಎಂದು ಊರಿಗೆ ಬರುತ್ತಿದ್ದೇವೆ. ಅಲ್ಲಿ ಉದ್ಯೋಗವಿಲ್ಲದೆ ಕೈಲಿ ಹಣ ಖರ್ಚು ಮಾಡುವುದಕ್ಕಿಂತ ಊರಲ್ಲಿದ್ದು ಗಂಜಿ ಕುಡಿದು, ಜಮೀನು ಕೆಲಸ ಮಾಡಿಯಾದ್ರೂ ಬದುಕುತ್ತೇವೆ ಎಂದು ವಲಸಿಗರು ಹೇಳುತ್ತಿದ್ದಾರೆ.

    ಜಿಲ್ಲೆಯ ಅಧಿಕಾರಿಗಳು ಮಾಸ್ಕ್ ಹಾಕದಿರುವ ಜನರಿಗೆ ದಂಡ ವಿಧಿಸುವ ಮೂಲಕ ಬಿಸಿಮುಟ್ಟಿಸುವ ಕೆಲಸ ಮಾಡಿದರು. ಜಿಲ್ಲಾಡಳಿತ, ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳ 5 ತಂಡಗಳು ಕಾರ್ಯಾಚರಣೆ ನಡೆಸಿತು. ಗದಗ ಬೆಟಗೇರಿ ಅವಳಿ ನಗರದ ಪ್ರಮುಖ ಜನದಟ್ಟಣೆಯ ಸ್ಥಳಕ್ಕೆ ಎಂಟ್ರಿಕೊಟ್ಟರು. ಮಾಸ್ಕ್ ಹಾಕದ ಸಾರ್ವಜನಿಕರಿಗೆ 100 ರೂಪಾಯಿ, ಇನ್ನೂ ಅಂಗಡಿ ಮಾಲೀಕರು, ವ್ಯಾಪಾರಿಗಳಿಗೆ 500 ರೂ. ದಂಡ ವಿಧಿಸಲಾಯಿತು.

    ಎಸಿ ರಾಯಪ್ಪ, ಗದಗ ತಹಶಿಲ್ದಾರ ಶ್ರೀನಿವಾಸ ಕುಲಕರ್ಣಿ, ಶಹರ ಪೊಲೀಸ್ ಠಾಣೆ ಸಿಪಿಐ ಪಿ.ವಿ ಸಾಲಿಮಠ, ನಗರಸಭೆ ಪೌರಾಯುಕ್ತ ರಮೇಶ್ ಜಾದಾವ್ ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿ ವರ್ಗ ದಂಡ ಕಾರ್ಯಾಚರಣೆಗೆ ಇಳಿದರು. ದಂಡ ಕಟ್ಟಲು ಎದುರು ವಾದಿಸುವವರ ಮೇಲೆ ಮುಲಾಜಿಲ್ಲದೆ ಕೇಸ್ ದಾಖಲಿಸಿದರು.

    ಅಂಗಡಿ ಮಾಲೀಕರಿಗೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಕಡ್ಡಾಯವಾಗಿ ಪಾಲಿಸಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಹಾಗೂ ಕಠಿಣ ಕ್ರಮ ಜರುಗಿಸುವುದಾಗಿ ಎಸಿ ರಾಯಪ್ಪ ಎಚ್ಚರಿಕೆ ನೀಡಿದರು.

  • ಕಲ್ಯಾಣ ಮಂಟಪಗಳಿಗೆ ದಿಢೀರ್ ಭೇಟಿ – ಮಾಸ್ಕ್ ಧರಿಸದವರಿಗೆ ದಂಡ

    ಕಲ್ಯಾಣ ಮಂಟಪಗಳಿಗೆ ದಿಢೀರ್ ಭೇಟಿ – ಮಾಸ್ಕ್ ಧರಿಸದವರಿಗೆ ದಂಡ

    ಹಾಸನ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕಂದಾಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಇಂದು ಕಲ್ಯಾಣ ಮಂಟಪಗಳಿಗೆ ತೆರಳಿ ಎಚ್ಚರಿಕೆ ನೀಡಿದರು.

    ಹಾಸನ ನಗರದ ಕಲ್ಯಾಣ ಮಂಟಪಗಳಿಗೆ ಕಂದಾಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿದರು. ಈ ವೇಳೆ ಸಾರ್ವಜನಿಕರಿಗೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿ ಹೇಳಿದರು.

    ಗುಂಪು ಗುಂಪಾಗಿ ಕುಳಿತಿದ್ದ ಜನರಿಗೆ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸಿ ಸೂಚನೆಗಳನ್ನು ನೀಡಲಾಯಿತು. ನಗರಸಭೆ ಪೌರಾಯುಕ್ತರಾದ ಕೃಷ್ಣಮೂರ್ತಿ, ಮುನಿಸಿಪಲ್ ತಹಶೀಲ್ದಾರ್ ರಮೇಶ್‍ರವರ ನೇತೃತ್ವದ ತಂಡದಿಂದ ಮಾಸ್ಕ್ ಧರಿಸದೇ ಇರುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ಊಟದ ಹಾಲ್‍ನಲ್ಲೂ ಸಹಾ ಒಂದು ಟೇಬಲ್‍ಗೆ ಎರಡು ಕುರ್ಚಿಗಳಿರುವಂತೆ ಹಾಕಿಸಲಾಯಿತು.

  • ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ – ಕೊರೊನಾ ನಿಯಮ ಉಲ್ಲಂಘಿಸಿದ ಶಿಕ್ಷಕರು, ಅಧಿಕಾರಿಗಳು

    ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ – ಕೊರೊನಾ ನಿಯಮ ಉಲ್ಲಂಘಿಸಿದ ಶಿಕ್ಷಕರು, ಅಧಿಕಾರಿಗಳು

    ನೆಲಮಂಗಲ: ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಆದರೆ ಜನ ಸಾಮಾನ್ಯರು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸಬೇಕಿದ್ದ ಶಿಕ್ಷಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಾಜ್ಯದಲ್ಲಿ ಮಹಾಮಾರಿಯಂತೆ ಹರಡುತ್ತಿರುವ ಎರಡನೇ ಅಲೆ ಕೊರೊನಾ ಸೋಂಕಿನ ನಿಯಮವನ್ನು ಗಾಳಿಗೆ ತೂರಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಿವಿಎಸ್ ಗಾರ್ಡನ್‍ನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ವಿಶ್ವ ಮಹಿಳಾ ದಿನಾಚರಣೆ ವೇಳೆ ಈ ಘಟನೆ ನಡೆದಿದೆ. ನೆಲಮಂಗಲ ತಾಲೂಕಿನ ಸುಮಾರು 200 ಶಿಕ್ಷಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ನೆಲಮಂಗಲ ಶಾಸಕ ಡಾ.ಕೆ ಶ್ರೀನಿವಾಸ್ ಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿಕ್ಷಣ ಇಲಾಖೆಯ ಡಿಡಿಪಿಐ ಗಂಗ ಮರೇಗೌಡ, ನೆಲಮಂಗಲ ಬಿಇಓ ರಮೇಶ್ ಚಾಲನೆ ನೀಡಿದರು.

    ರಾಜ್ಯದಲ್ಲಿ ಸೇರಿದಂತೆ ನೆಲಮಂಗಲ ತಾಲೂಕಿನಲ್ಲಿಯೂ ಮಹಾಮಾರಿ ಕೊರೊನಾ ದಿನೇದಿನೇ ಹೆಚ್ಚುತ್ತಿದೆ. ಹೀಗಾಗಲೇ ಸರ್ಕಾರ ಹಾಗೂ ಆರೋಗ್ಯ ಇಲಾಖೆಯಿಂದ ಸಾಕಷ್ಟು ನಿಯಮವನ್ನು ಜಾರಿಗೆ ತರಲಾಗಿದೆ. ಜನರು ಮಾಸ್ಕ್ ಧರಿಸಬೇಕು ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಸುವಂತೆ ಹೀಗೆ ಇನ್ನಿತರ ಮಾರ್ಗಸೂಚಿಯನ್ನು ಜಾರಿಗೆ ತರಲಾಗಿದೆ. ಆದರೆ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮಾಸ್ಕ್ ಬಳಸದೇ ಕೊರೊನಾ ನಿಯಮವನ್ನ ಗಾಳಿಗೆ ತೂರಲಾಗಿತ್ತು.

    ಸಾಮಾಜಿಕ ಅಂತರವಿಲ್ಲದೆ ಹಲವು ಶಿಕ್ಷಕರುಗಳು ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೊರೊನಾ 2ನೇ ಅಲೆ ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಶಿಕ್ಷಕರುಗಳು ಕೊರೊನಾ ನಿಯಮವನ್ನು ಗಾಳಿಗೆ ತೂರಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

  • ಐದು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ

    ಐದು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ

    ಮುಂಬೈ: ಐದು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಬೆಳ್ಳಂ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿರುವ ಘಟನೆ ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿ ನಡೆದಿದೆ.

    ಬೆಳಗ್ಗೆ ಸುಮಾರು 6 ಗಂಟೆಗೆ ವೀರ್ ಸಾವರ್ಕರ್ ರಸ್ತೆಯ ವಾಣಿಜ್ಯ ಕಟ್ಟಡದ ಗ್ಯಾಮನ್ ಹೌಸ್ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನಾ ಸ್ಥಳಕ್ಕೆ ಕೂಡಲೇ ಎಂಟು ಅಗ್ನಿಶಾಮಕ ವಾಹನಗಳನ್ನು ಹಾಗೂ ಏಳು ವಾಟರ್ ಟ್ಯಾಂಕರ್‍ ಗಳನ್ನು ಕಳುಹಿಸಿಲಾಗಿದೆ.

    ಅದೃಷ್ಟವಷಾತ್ ಬೆಂಕಿ ಅವಘಡದಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆನೆಂದು ಕೂಡ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಅಮೇರಿಕದಲ್ಲಿ ಭಾರೀ ಸುಂಟರಗಾಳಿ – ಐವರು ಬಲಿ

    ಅಮೇರಿಕದಲ್ಲಿ ಭಾರೀ ಸುಂಟರಗಾಳಿ – ಐವರು ಬಲಿ

    ವಾಷಿಂಗ್ಟನ್: ದಕ್ಷಿಣ ಅಮೇರಿಕದ ಅಲಬಾಮಾ ರಾಜ್ಯದಲ್ಲಿ ಗುರುವಾರ ಬೀಸಿದ ಸುಂಟರಗಾಳಿಗೆ ಸುಮಾರು ಐವರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸುಂಟರಗಾಳಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ, ಸುಂಟರಗಾಳಿ ಅಬ್ಬರಕ್ಕೆ ಮರಗಳು ಹಾಗೂ ಮನೆಗಳು ಹಾನಿಗೊಂಡಿರುವುದನ್ನು ಕಾಣಬಹುದಾಗಿದೆ. ಈ ಕುರಿತಂತೆ ರಾಜ್ಯಪಾಲರು, ಸುಂಟರಗಾಳಿ ಹಾಗೂ ಚಂಡಮಾರುತದ ಅಲೆ ಹೆಚ್ಚಾಗಿರುವುದರಿಂದ ಜನರನ್ನು ಎಚ್ಚರದಿಂದ ಇರಲು ಮನವಿ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಘಟನೆಯಲ್ಲಿ ಮರದಿಂದ ತಯಾರಿಸಿದ್ದ ಮೇಲ್ಛಾವಣಿ ಬಿದ್ದು ಒಂದೇ ಕುಟುಂಬದ ಮೂವರು ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ನಿಧನರಾಗಿದ್ದಾರೆ. ಇನ್ನೊಬ್ಬ ವ್ಯಕ್ತಿ ವೆಲ್ಲಿಂಗ್ಟನ್ ಪಟ್ಟಣದಲ್ಲಿ ಮೃತಪಟ್ಟಿದ್ದಾರೆ ಎಂದು ಕ್ಯಾಲ್ಹೌನ್ ಕೌಂಟಿ ಪರಿಷತ್ತಿನ ಪ್ಯಾಟ್ ಬ್ರೌನ್ ತಿಳಿಸಿದ್ದಾರೆ.

    ಚಂಡಮಾರುತದಿಂದ ಕ್ಯಾಲ್ಹೌನಿ ಕೌಂಟಿಯಲ್ಲಿ ಹೆಚ್ಚಾಗಿ ಹಾನಿಯಾಗಿದ್ದು, ಇನ್ನೂ ಹೆಚ್ಚಿನ ಬಿರುಗಾಳಿ ಬರುವ ಸಾಧ್ಯತೆ ಇದೆ. ಹಾಗಾಗಿ ಜನರು ರಸ್ತೆಗೆ ಇಳಿಯದೇ ಮನೆಯಲ್ಲಿಯೇ ಉಳಿಯುವಂತೆ ಸಲಹೆ ನೀಡಲಾಗಿದೆ. ಗುರುವಾರ ಅಲಬಾಮಾದಲ್ಲಿ ಸುಮಾರು 35,000 ಗ್ರಾಹಕರಿಗೆ ವಿದ್ಯುತ್‍ನ್ನು ಖಡಿತಗೊಳಿಸಲಾಗಿತ್ತು ಎಂದು ಅಮೇರಿಕ ವಿದ್ಯುತ್ ಸರಬರಾಜು ತಿಳಿಸಿದೆ.

    ರಾತ್ರಿಯಿಡೀ ಅಪಾಯಕಾರಿ ಇದೇ ಭಯಾನಕ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಪೋಷನ್ ಅಭಿಯಾನದ ಪ್ರಗತಿ ಸಭೆ ನಡೆಸಿದ ಶಶಿಕಲಾ ಜೊಲ್ಲೆ

    ಪೋಷನ್ ಅಭಿಯಾನದ ಪ್ರಗತಿ ಸಭೆ ನಡೆಸಿದ ಶಶಿಕಲಾ ಜೊಲ್ಲೆ

    ಬೆಂಗಳೂರು: ರಾಷ್ಟ್ರೀಯ ಪೋಷನ್ ಅಭಿಯಾನದ ಅನುದಾನದ ಬಳಕೆ ಹಾಗೂ ಸಾಧನೆಯಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಮುಂದಿನ ತ್ರೈಮಾಸಿಕ ಸಭೆಯ ವೇಳೆಗೆ ಮೊದಲ ಸ್ಥಾನದಲ್ಲಿರುವಂತೆ ನೋಡಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಗುರಿ ನೀಡಿದ್ದಾರೆ.

    ಪೋಷನ್ ಅಭಿಯಾನದ ಪ್ರಗತಿ ಪರಿಶೀಲನೆ ಕುರಿತಂತೆ ಬಹುಮಹಡಿ ಕಟ್ಟಡದ ಆಯುಕ್ತರ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರ ಜೊತೆಗೆ ಶಶಿಕಲಾ ಜೊಲ್ಲೆಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಅಭಿಯಾನದ ಕುರಿತಂತೆ ಪ್ರತಿಯೊಂದು ಜಿಲ್ಲೆಗಳ ಉಪನಿರ್ದೇಶಕರ ಜೊತೆಗೆ ಮಾತನಾಡಿ ಚಟುವಟಿಕೆಗಳ ಭೌತಿಕ ಹಾಗೂ ಆರ್ಥಿಕ ಮಾಹಿತಿ ಪಡೆದರು. ಅಲ್ಲದೆ ಅಭಿಯಾನದ ಜಾರಿಗೆ ಇರುವ ಸಮಸ್ಯೆಗಳ ಕುರಿತಂತೆಯೂ ಮಾಹಿತಿ ಪಡೆದರು. ಪೋಷನ್ ಟ್ರ್ಯಾಕರ್ ಅಳವಡಿಕೆ, ಸಮುದಾಯ ಆಧಾರಿತ ಕಾರ್ಯಕ್ರಮಗಳು, ಐಎಲ್‍ಎ ತರಬೇತಿ ಕಾರ್ಯಕ್ರಮ, ಇ-ಐಎಲ್‍ಎ ಪ್ರಗತಿ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಇದೇ ವೇಳೆ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ನೀಡಿರುವ ಸ್ಮಾರ್ಟ್ ಫೋನ್ ಸಮಸ್ಯೆ ಕುರಿತು ಸಚಿವೆಯರ ಗಮನಕ್ಕೆ ತಂದರು. ನಂತರ ಪ್ರತಿಕ್ರಿಯಿಸಿದ ಸಚಿವರು, ಸಮಸ್ಯೆಯನ್ನು ಲಿಖಿತ ರೂಪದಲ್ಲಿ ಆಯುಕ್ತರಿಗೆ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ ಸಂಬಂಧಪಟ್ಟ ಕಂಪನಿಗಳ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

    ಇದೇ ಸಮಯದಲ್ಲಿ ಈ ಅಭಿಯಾನದ ಜಾರಿಯಲ್ಲಿ ಎರಡನೇ ಸ್ಥಾನದಲ್ಲಿರುವುದಕ್ಕೆ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಮುಂದಿನ ಸಭೆಯ ವೇಳೆಗೆ ದೇಶದಲ್ಲಿ ಈ ಅಭಿಯಾನ ಜಾರಿಗೊಳಿಸುವುದರಲ್ಲಿ ಮೊದಲ ಸ್ಥಾನದಲ್ಲಿರುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗೆಳಿಗೆ ಗುರಿ ನೀಡಿದರು. ಸರ್ಕಾರದ ಯೋಜನೆ ಜಾರಿಯಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

  • ದಂಡ ಕಟ್ಟಿ, ಉಚಿತ ಮಾಸ್ಕ್ ಪಡೆಯಿರಿ- ನಗರಸಭೆಯಿಂದ ಕಾರ್ಯಾಚರಣೆ

    ದಂಡ ಕಟ್ಟಿ, ಉಚಿತ ಮಾಸ್ಕ್ ಪಡೆಯಿರಿ- ನಗರಸಭೆಯಿಂದ ಕಾರ್ಯಾಚರಣೆ

    ಯಾದಗಿರಿ: ಪಕ್ಕದ ಕಲಬುರಗಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಯಾದಗಿರಿ ನಗರಸಭೆ ಫುಲ್ ಅಲರ್ಟ್ ಆಗಿದೆ. ನಗರದ ಪ್ರಮುಖ ರಸ್ತೆಯಲ್ಲಿ ನಿಂತು ಮಾಸ್ಕ್ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಮಾಸ್ಕ್ ಧರಿಸದವರ ಕಡೆಯಿಂದ ದಂಡ ಕಟ್ಟಿಸಿಕೊಂಡು, ಉಚಿತವಾಗಿ ಮಾಸ್ಕ್ ನೀಡಲಾಗುತ್ತಿದೆ.

    ಕರೊನಾ ಎರಡನೇ ಅಲೆ ಭೀತಿ ಹಿನ್ನೆಲೆ ಫೀಲ್ಡ್ ಗೆ ಇಳಿದಿರುವ ನಗರಸಭೆ ಕಮಿಷನರ್ ಬಿ.ಟಿ.ನಾಯಕ್, ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿರುವ ವಾಹನ ಸವಾರರನ್ನು ನಿಲ್ಲಿಸಿ, ದಂಡ ಕಟ್ಟಿಸಿಕೊಂಡು, ಜನರಿಗೆ ತಮ್ಮ ಕೈಯಿಂದ ಮಾಸ್ಕ್ ಹಾಕಲು ಮುಂದಾಗಿದ್ದಾರೆ.

    ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿರುವವರಿಗೆ 100 ರೂ. ದಂಡದ ಜೊತೆ ಉಚಿತ ಮಾಸ್ಕ್ ಸಹ ನೀಡಲಾಗುತ್ತಿದೆ. ಕೊರೊನಾ ಎರಡನೇ ಅಲೆ ಹಿನ್ನೆಲೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ತಿಳಿಸಲಾಗುತ್ತಿದೆ. ನಗರದ ಬಸ್ ನಿಲ್ದಾಣ, ಗಂಜ್ ಪ್ರದೇಶ ಹಾಗೂ ಕೋರ್ಟ್ ಮುಂದೆ ಮಾಸ್ಕ್ ಡ್ರೈವ್ ನಡೆಯುತ್ತಿದೆ.