Tag: officers

  • ನಕಲಿ ರಸಗೊಬ್ಬರ ದಾಸ್ತಾನು ಪತ್ತೆಹಚ್ಚಿದ ರೈತರು

    ನಕಲಿ ರಸಗೊಬ್ಬರ ದಾಸ್ತಾನು ಪತ್ತೆಹಚ್ಚಿದ ರೈತರು

    ವಿಜಯಪುರ: ಅಕ್ರಮ ರಸಗೊಬ್ಬರ ತಯಾರಿಕಾ ಜಾಲವನ್ನು ರೈತರೇ ಬೇಧಿಸಿದ್ದಾರೆ. ಜಿಲ್ಲೆಯ ಇಂಡಿ ತಾಲೂಕಿನ ಇಂಗಳಗಿ ಗ್ರಾಮದ ಹೊರ ಭಾಗದಲ್ಲಿ ಅಕ್ರಮ ದಾಸ್ತಾನು ಪತ್ತೆಯಾಗಿದೆ.

    ಜಮ್ಮು ಭಾಗವಾನ್ ಅವರಿಗೆ ಸೇರಿದ ತೋಟದ ಮನೆಯಲ್ಲಿ ಅಕ್ರಮವಾಗಿ ಇಟ್ಟಿದ್ದ ರಸಗೊಬ್ಬರಗಳ ಮೂಟೆಗಳನ್ನು ರೈತರು ಪತ್ತೆಹಚ್ಚಿದ್ದಾರೆ. ನಂತರ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅಧಿಕಾರಿಗಳೊಂದಿಗೆ ದಾಳಿ ಮಾಡಿದ್ದಾರೆ.

    ದಾಳಿ ವೇಳೆ ತೋಟದ ಮನೆಯಲ್ಲಿ ಯಾರೂ ಕಂಡು ಬಂದಿಲ್ಲ. ನಂತರ ಅಧಿಕಾರಿಗಳು ರಸಗೊಬ್ಬರ ತಯಾರಿಕೆ, ಸಾಗಾಟ ಹಾಗೂ ಮಾರಾಟ ಮಾಡಿದ್ದರ ಬaಗ್ಗೆ ತನಿಖೆ ನಡೆಸಿದ್ದಾರೆ.ನಕಲಿ ರಸಗೊಬ್ಬರ ಸಂಗ್ರಹಿಸಿದ ಮನೆಗೆ ಪೊಲೀಸ್ ಕಾವಲು ಇರಿಸಿ, ನಕಲಿ ರಸಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೃಷಿ ಜಂಟಿ ನಿರ್ದೇಶಕ ರಾಜಶೇಖರ್ ವಿಲಿಯಮ್ಸ್ ಹಾಗೂ ಇತರ ಸಿಬ್ಬಂದಿಯಿಂದ ಪರಿಶೀಲನೆ ನಡೆಸಲಾಗಿದ್ದು, ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ.

  • ಪಾಲಿಕೆಯಿಂದ ರಾತ್ರೋರಾತ್ರಿ ದೇವಾಲಯ ಧ್ವಂಸ

    ಪಾಲಿಕೆಯಿಂದ ರಾತ್ರೋರಾತ್ರಿ ದೇವಾಲಯ ಧ್ವಂಸ

    ತುಮಕೂರು: ಮಾರುಕಟ್ಟೆ ಅಭಿವೃದ್ಧಿಯ ದೃಷ್ಟಿಯಿಂದ ಪಾಲಿಕೆ ರಾತ್ರೋರಾತ್ರಿ ಗಣಪತಿ ದೇವಾಲಯವನ್ನು ನೆಲಸಮಗೊಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ನಗರದ ಬಾಳನಕಟ್ಟೆ ಬಳಿಯ ವಿನಾಯಕ ನಗರದ ಸಮೀಪದ ಹಳೇ ಮಾರ್ಕೆಟ್ ಬಳಿಯಿದ್ದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನವನ್ನು ರಾತ್ರೋ ರಾತ್ರಿ ಎರಡು ಜೆಸಿಬಿಗಳ ಮೂಲಕ ನೆಲಸಮಗೊಳಿಸಲು ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ದೇವಾಲಯದ ಗರ್ಭಗುಡಿ ಹೊರತುಪಡಿಸಿ ಮಿಕ್ಕೆಲ್ಲಾ ಜಾಗವನ್ನು ಪಾಲಿಕೆ ಅಧಿಕಾರಿಗಳು ಧ್ವಂಸ ಮಾಡಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಆಗಮಿಸಿದ ನಂತರ ಮಹಾನಗರ ಪಾಲಿಕೆ ಅಧಿಕಾರಿಗಳು ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ವ್ಯಾಪಾರಿಗಳ ಮೇಲೆ ಖಾಕಿ ಖದರ್-ಕಾಲಿನಿಂದ ತರಕಾರಿ ಒದ್ದು ಪಿಎಸ್‍ಐ ದರ್ಪ

    ದೇವಾಲಯದ ತೆರವಿಗೆ ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ದೇವಾಲಯ ತೆರವುಗೊಳಿಸಲು ಆದೇಸಿದ್ದರು ಎನ್ನಲಾಗಿದೆ. ರಾತ್ರಿ ವೇಳೆಯಲ್ಲಿ ಏಕಾಏಕಿ ದೇವಾಲಯ ತೆರವುಗೊಳಿಸಲು ಮುಂದಾದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳಿಯರು ಮತ್ತು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

    ಸುಮಾರು 70 ವರ್ಷಗಳಷ್ಟು ಪುರಾತನವಾದ ಗಣಪತಿ ದೇವಾಲಯ ಇದಾಗಿದ್ದು, ಸ್ಮಾರ್ಟ್ ಸಿಟಿ ವತಿಯಿಂದ ಹಲವು ಕಾಮಗಾರಿಗಳ ನೆಪದಲ್ಲಿ ದೇವಾಲಯ ತೆರವಿಗೆ ಮುಂದಾಗಿದ್ದಾರೆ. ಘಟನೆ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಘಟನೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೃಷ್ಣಾ ನಡುಗಡ್ಡೆಗಳ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ – ಹೊರಬರಲು ಒಪ್ಪದ ನಿವಾಸಿಗಳು

    ಕೃಷ್ಣಾ ನಡುಗಡ್ಡೆಗಳ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ – ಹೊರಬರಲು ಒಪ್ಪದ ನಿವಾಸಿಗಳು

    – ಶಾಶ್ವತ ಪರಿಹಾರದ ಬೇಡಿಕೆಯಿಟ್ಟಿರುವ ಜನ
    – ಅಧಿಕಾರಿಗಳಿಂದ ನಿರಂತರ ಭೇಟಿ, ಸ್ಪಂದಿಸದ ನಿವಾಸಿಗಳು

    ರಾಯಚೂರು: ಪ್ರವಾಹ ಮುನ್ಸೂಚನೆ ಹಿನ್ನೆಲೆ ಜಿಲ್ಲೆಯ ಕೃಷ್ಣಾ ನದಿ ನಡುಗಡ್ಡೆ ಗ್ರಾಮಗಳ ಜನರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ನದಿಯಲ್ಲಿ ದಾರಿಯಿಲ್ಲದ ಹಿನ್ನೆಲೆ ಅಧಿಕಾರಿಗಳು ನೀರಿನಲ್ಲಿ ನಡೆದುಕೊಂಡು ಹೋಗಿ ನಡುಗಡ್ಡೆ ಜನರಿಗೆ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ. ಅವರ ಸಮಸ್ಯೆಗಳನ್ನ ಆಲಿಸಿ ಕಳೆದ ಬಾರಿ ಪ್ರವಾಹದ ವೇಳೆ ಆದ ಸಮಸ್ಯೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದಾರೆ.

    ಲಿಂಗಸುಗೂರು ತಾಲೂಕಿನ ಯರಗೋಡಿ ಗ್ರಾಮದ ವ್ಯಾಪ್ತಿಯ ಕೃಷ್ಣಾ ನದಿ ಪಾತ್ರದಲ್ಲಿ ಬರುವ ನಡುಗಡ್ಡೆಗಳಾದ ಓಂಕಾರಗಡ್ಡಿ, ಹಾಲಗಡ್ಡಿ, ಕರಕಲಗಡ್ಡಿಗಳಲ್ಲಿ ವಾಸಿಸುವ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಪ್ರವಾಹದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಅರಿವು ಮೂಡಿಸಿದ್ದಾರೆ. ಲಿಂಗಸುಗೂರು ಉಪವಿಭಾಗದ ಸಹಾಯಕ ಆಯುಕ್ತ ರಾಜಶೇಖರ್ ಡಂಬಳ, ತಹಶೀಲ್ದಾರ್ ಚಾಮರಾಜ ಪಾಟೀಲ್ ಸೇರಿದಂತೆ ಪೊಲೀಸ್ ಇಲಾಖೆ, ಜೆಸ್ಕಾಂ ಅಧಿಕಾರಿಗಳು ನಡುಗಡ್ಡೆಗೆ ಭೇಟಿ ನೀಡಿ ಸಮಸ್ಯೆಗಳನ್ನ ಆಲಿಸಿದ್ದಾರೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವೃದ್ಧರನ್ನ ಸ್ಥಳಾಂತರಿಸಲು ಸೂಚಿಸಿದ್ದಾರೆ. ಆದರೆ ನಡುಗಡ್ಡೆಗಳಿಂದ ಹೊರಬರಲು ಒಪ್ಪದ ಜನ ಶಾಶ್ವತ ಪರಿಹಾರದ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ:ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವು

    ಪುಟ್ಟ ನಡುಗಡ್ಡೆಗಳಲ್ಲಿನ ಜನರನ್ನ ಮಾತ್ರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಲಿಂಗಸುಗೂರು ತಾಲೂಕಿನ ಓಂಕಾರಗಡ್ಡಿ, ಹಾಲಗಡ್ಡಿ, ಕರಕಲಗಡ್ಡಿ ಗ್ರಾಮಗಳಲ್ಲಿ ಒಟ್ಟು 14 ಕುಟುಂಬಗಳು ವಾಸಿಸುತ್ತಿದ್ದು 104 ಜನ ಹಾಗೂ ಜಾನುವಾರುಗಳು ನಡುಗಡ್ಡೆಯನ್ನೆ ಅವಲಂಬಿಸಿವೆ. ರಾಯಚೂರು ತಾಲೂಕಿನ ಕುರ್ವಕುಲಾ, ಅಗ್ರಹಾರ, ಕುರ್ವಕುರ್ದ ನಡುಗಡ್ಡೆಗಳಲ್ಲಿ 298 ಕುಟುಂಬಗಳಿದ್ದು 945 ಜನ ವಾಸವಾಗಿದ್ದಾರೆ. ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳು ನಿರಂತರವಾಗಿ ನಡುಗಡ್ಡೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ನಡುಗಡ್ಡೆ ಜನರಿಗೆ ಎರಡು ತಿಂಗಳ ಪಡಿತರವನ್ನ ಮುಂಚಿತವಾಗಿಯೇ ನೀಡಲಾಗುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಪರಿಹಾರ ಕೇಂದ್ರಗಳಿಗೆ ಬರುವಂತೆ ಜನರ ಮನವೊಲಿಸಲಾಗುತ್ತಿದೆ.

    ಆದರೆ ನಡುಗಡ್ಡೆ ಜನ ಮಾತ್ರ ಜಿಲ್ಲಾಡಳಿತದ ಮನವೊಲಿಕೆಗೆ ಸ್ಪಂದಿಸುತ್ತಿಲ್ಲ. ಶಾಶ್ವತ ಪರಿಹಾರ ನೀಡಿದರೆ ಮಾತ್ರ ನಡುಗಡ್ಡೆ ಬಿಡುವುದಾಗಿ ಹೇಳುತ್ತಿದ್ದಾರೆ. ನಡುಗಡ್ಡೆಯಲ್ಲಿನ ಜಮೀನು ನಂಬಿಕೊಂಡು ಬದುಕುತ್ತಿದ್ದೇವೆ. ಕೇವಲ ಚುನಾವಣೆ, ಪ್ರವಾಹ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ನಮ್ಮ ನೆನಪಾಗುತ್ತೆ, ಉಳಿದ ಸಂದರ್ಭದಲ್ಲಿ ನಮ್ಮನ್ನ ಕೇಳುವವರೇ ಇಲ್ಲಾ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಭಾಗಮಂಡಲ ಜಲಾವೃತ – ಘಟಪ್ರಭಾ, ಕೃಷ್ಣ ನದಿ ತೀರದ ಜನರಿಗೆ ಪ್ರವಾಹ ಭೀತಿ

  • ರವಿ ಚನ್ನಣ್ಣನವರ್, ಮೈಸೂರು ಎಸ್‍ಪಿ ಸೇರಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ರವಿ ಚನ್ನಣ್ಣನವರ್, ಮೈಸೂರು ಎಸ್‍ಪಿ ಸೇರಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ರವಿ.ಡಿ.ಚನ್ನಣ್ಣನವರ್, ಮೈಸೂರು ಎಸ್‍ಪಿ ಸೇರಿ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿಯಾಗಿದ್ದ ರವಿ.ಡಿ.ಚನ್ನಣ್ಣನವರ್ ಅವರನ್ನು ಸಿಐಡಿ ಎಸ್‍ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಉಡುಪಿಯಲ್ಲಿ ಕರಾವಳಿ ಭದ್ರತಾ ಪೊಲೀಸ್ ಪಡೆಯ ಎಸ್‍ಪಿಯಾಗಿದ್ದ ಆರ್.ಚೇತನ್ ಅವರನ್ನು ಮೈಸೂರು ಎಸ್‍ಪಿಯಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಲಾಗಿದೆ.

    ಕೋಲಾರ ಎಸ್‍ಪಿಯಾಗಿದ್ದ ಕಾರ್ತಿಕ್ ರೆಡ್ಡಿಯವರನ್ನು ಬೆಂಗಳೂರಿನ ವೈರ್‍ಲೆಸ್ ವಿಭಾಗಕ್ಕೆ, ಸಿಐಡಿ ಎಸ್‍ಪಿಯಾಗಿದ್ದ ರಾಹುಲ್ ಕುಮಾರ್ ಶಹಪೂರ್‍ವಾಡ್ ಅವರನ್ನು ತುಮಕೂರು ಎಸ್‍ಪಿಯಾಗಿ ವರ್ಗಾಯಿಸಲಾಗಿದೆ.

    ದಾವಣಗೆರೆ ಎಸ್‍ಪಿಯಾಗಿದ್ದ ಹನುಮಂತರಾಯ ಅವರನ್ನು ಹಾವೇರಿ ಎಸ್‍ಪಿಯಾಗಿ, ಮೈಸೂರಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಪ್ರಕಾಶ್ ಗೌಡ ಅವರನ್ನು ಆಂತರಿಕ ಭದ್ರತಾ ಪಡೆ ಎಸ್‍ಪಿಯಾಗಿ ಹಾಗೂ ಹಾವೇರಿ ಎಸ್‍ಪಿಯಾಗಿದ್ದ ಕೆ.ಜಿ.ದೇವರಾಜು ಅವರನ್ನು ಸಿಐಡಿ ಎಸ್‍ಪಿಯಾಗಿ ಬೆಂಗಳೂರಿಗೆ ವರ್ಗಾಯಿಸಲಾಗಿದೆ.

    ಮೈಸೂರು ಎಸ್‍ಪಿಯಾಗಿದ್ದ ಸಿ.ಬಿ.ರಿಷ್ಯಂತ್ ಅವರನ್ನು ದಾವಣಗೆರೆ ಎಸ್‍ಪಿಯಾಗಿ, ಕಲಬುರಗಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ದೆಕ್ಕಾ ಕಿಶೋರ್ ಬಾಬು ಅವರನ್ನು ಕೋಲಾರ ಎಸ್‍ಪಿಯಾಗಿ, ತುಮಕೂರು ಎಸ್‍ಪಿಯಾಗಿದ್ದ ಕೋನ ವಂಶಿ ಕೃಷ್ಣ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್‍ಪಿಯಾಗಿ, ಬೆಂಗಳೂರಿನ ಆಂತರಿಕ ಭದ್ರತಾ ಪಡೆಯ ಎಸ್‍ಪಿಯಾಗಿದ್ದ ಪ್ರದೀಪ್ ಗುಂಟಿ ಅವರನ್ನು ಮೈಸೂರಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ, ಬೆಂಗಳೂರಿನ ವೈರ್‍ಲೆಸ್ ವಿಭಾಗದ ಎಸ್‍ಪಿಯಾಗಿದ್ದ ಅದ್ದೂರು ಶ್ರೀನಿವಾಸುಲು ಅವರನ್ನು ಕಲಬುರಗಿಯ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

  • ಲಸಿಕೆ ಪಡೆದ್ರೆ ಬದೋಕಲ್ಲಾ ಸಾಯೋದೆ ಇದೆ – ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದ

    ಲಸಿಕೆ ಪಡೆದ್ರೆ ಬದೋಕಲ್ಲಾ ಸಾಯೋದೆ ಇದೆ – ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದ

    ಬೀದರ್ : ಲಸಿಕೆ ಪಡೆದರೆ ಬದುಕಲ್ಲ ಸಾಯೋದೆ ಇದೆ ಎಂದು ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದಕ್ಕೆ ಇಳಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪ್ರತಿಯೊಬ್ಬರು ಕೋವಿಡ್-19 ಲಸಿಕೆ ಪಡೆಯಬೇಕೆಂದು ಸರ್ಕಾರ ಘೋಷಿಸಿದೆ. ಆದರೆ ಲಸಿಕೆ ಪಡೆದರೆ ಅಡ್ಡ ಪರಿಣಾಮಗಳಾಗುತ್ತೆ ಎಂಬ ವದಂತಿಗಳಿರುವ ಹಿನ್ನೆಲೆ ಮಹಿಳೆಯೊಬ್ಬರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ.

    ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ್ ಕೆ ಗ್ರಾಮದ ಭಾಗಮ್ಮ(55) ಎಂಬ ಮಹಿಳೆ ಲಸಿಕೆ ಪಡೆಯಲು ಸತಾಯಿಸಿದ್ದಾರೆ. ಲಸಿಕೆ ಪಡೆದುಕೊಳ್ಳಿ ಎಂದು ತಾಲೂಕು ಕಾರ್ಯನಿರ್ವಹಕ ಅಧಿಕಾರಿ, ತಹಶಿಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಎಷ್ಟೇ ಮನವೊಲಿಸಿದ್ರು ಯಾವುದೇ ಪ್ರಯೋಜವಾಗಲಿಲ್ಲ. ನಾನು ಲಸಿಕೆ ಪಡೆಯಲ್ಲಾ, ನನ್ನ ಸಾಯಿಸಿ ಹಾಕರೀ, ನಾವು ದುಡಿದು ತಿನ್ನೋದಕ್ಕೆ ಇದ್ದೇವೆ. ಲಸಿಕೆ ಪಡೆದರೆ ಬದೋಕಲ್ಲಾ ಸಾಯೋದೆ ಇದೆ ಎಂದು ಮಹಿಳೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

    ಈಗಾಗಲೇ ಭಾಲ್ಕಿ ತಾಲೂಕಿನ ಉಚ್ಛಾ ಗ್ರಾಮ ನೂರಕ್ಕೆ ನೂರು ಮಂದಿ ಲಸಿಕೆ ಪಡೆದು ಜಿಲ್ಲೆ ಸೇರಿದಂತೆ ರಾಜ್ಯಕ್ಕೆ ಮಾದರಿಯಾಗಿದೆ. ಆದರೆ ಪಕ್ಕದಲ್ಲೇ ಇರುವ ತಳವಾಡ ಕೆ ಗ್ರಾಮದ ಮಹಿಳೆ ಅಧಿಕಾರಿಗಳು ಎಷ್ಟೇ ಮನವೊಲಿಸಿದ್ರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ಇದನ್ನು ಓದಿ:ಬೆಂಗಳೂರಿನಲ್ಲಿ ಒಂದಂಕಿಗೆ ಇಳಿದ ವಲಯವಾರು ಪಾಸಿಟಿವಿಟಿ ರೇಟ್

    ಕೊರೊನಾ ಮಹಾಮಾರಿಗೆ ರಾಮ ಬಾಣ ಅಂದರೆ ಅದು ಸಂಜೀವಿನಿ ಲಸಿಕೆ. ಆದರೆ ಈ ಸಂಜೀವಿನಿ ಲಸಿಕೆ ಪಡೆಯಲು ತಪ್ಪು ವದಂತಿಗಳಿಂದ ಹಲವಾರು ಹಿಂದೇಟು ಹಾಕುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

  • ನಾವು ರಾಗಿ ಮುದ್ದೆ ತಿನ್ನೋರು, ನಮಗೆ ಯಾವ ರೋಗ ಬರಲ್ಲ – ಆದಿವಾಸಿ ಮಹಿಳೆ

    ನಾವು ರಾಗಿ ಮುದ್ದೆ ತಿನ್ನೋರು, ನಮಗೆ ಯಾವ ರೋಗ ಬರಲ್ಲ – ಆದಿವಾಸಿ ಮಹಿಳೆ

    ಮೈಸೂರು: ಆರೋಗ್ಯ ತಪಾಸಣೆ ಮಾಡಲು ಬಂದ ಅಧಿಕಾರಿಗಳಿಗೆ ಮಹಿಳೆಯೊಬ್ಬಳು ನಾವು ರಾಗಿ ಮುದ್ದೆ ತಿನ್ನುವವರು, ನಮಗೆ ಯಾವ ರೋಗ ಬರುವುದಿಲ್ಲ ಎಂದು ಅವಾಜ್ ಹಾಕಿದ್ದಾರೆ.

    ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಸಮೀಪದ ಬೀರತಮ್ಮನ ಹಳ್ಳಿ ಗಿರಿಜನ ಹಾಡಿಯಲ್ಲಿ ಮಹಿಳೆಯೊಬ್ಬಳು ನೀವು ನಮ್ಮ ಹಾಡಿಗೆ ಕಾಲು ಇಡುವುದು ಬೇಡ, ನೀವು ಹಾಡಿಯಿಂದ ಹೋಗಿ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

    ನಾವು ರಾಗಿ ಮುದ್ದೆ ತಿನ್ನುವವರು, ನಮಗೆ ಯಾವ ರೋಗನೂ ಇಲ್ಲ. ನೀವೇನು ನಮಗೆ ಟೆಸ್ಟ್ ಮಾಡಿ ರೋಗ ಕಂಡು ಹಿಡಿಯುವುದು ಬೇಡ. ರೋಗ ಬಂದರೆ ನಾವೇ ವಾಸಿ ಮಾಡಿಕೊಳ್ಳುತ್ತೇವೆ ಎಂದು ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದ್ದ ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದ ನಡೆಸಿದ್ದಾರೆ.  ಇದನ್ನು ಓದಿ: ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

    ಬೀರತಮ್ಮನಹಳ್ಳಿ ಆದಿವಾಸಿ ಹಾಡಿಯಲ್ಲಿ ಒಟ್ಟು 50ಕ್ಕೂ ಹೆಚ್ಚು ಕುಟುಂಬಗಳಿವೆ. 250ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹಾಡಿ ಇದ್ದಾಗಿದ್ದು, ಈ ಪೈಕಿ ಕೇವಲ 7 ಮಂದಿ ಮಾತ್ರ ತಪಾಸಣೆಗೆ ಒಳಗಾಗಿದ್ದಾರೆ.

     

  • ನಾನು ಸತ್ರೆ ಸಾಯ್ತೀನಿ ಬಿಡಿ ನಿಮಗೇನು? – ಅಧಿಕಾರಿಗಳ ಮೇಲೆ ಸೋಂಕಿತನ ದರ್ಪ

    ನಾನು ಸತ್ರೆ ಸಾಯ್ತೀನಿ ಬಿಡಿ ನಿಮಗೇನು? – ಅಧಿಕಾರಿಗಳ ಮೇಲೆ ಸೋಂಕಿತನ ದರ್ಪ

    ಚಿಕ್ಕಮಗಳೂರು: ನಾನು ಸತ್ತರೆ ಸಾಯುತ್ತೇನೆ ಬಿಡಿ. ನಿಮಗೇನು? ನಾನು ಮನೆಯಲ್ಲಿದ್ದರೆ ನಮ್ಮ ತೋಟಕ್ಕೆ ಗೊಬ್ಬರ ನೀವು ಹಾಕುತ್ತೀರಾ ಎಂದು ಕೊರೊನಾ ಸೋಂಕಿತ ವ್ಯಕ್ತಿ ಅಧಿಕಾರಿಗಳ ಮೇಲೆ ಪ್ರಶ್ನಿಸಿ ದರ್ಪ ತೋರಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ನೇರಡಿ ಗ್ರಾಮದಲ್ಲಿ ನಡೆದಿದೆ.

    ವ್ಯಕ್ತಿಯೊಬ್ಬನಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದರಿಂದ ಅಧಿಕಾರಿಗಳು ವರದಿ ಬರುವ ತನಕ ಆತನಿಗೆ ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಅಲ್ಲದೆ ಆ ವ್ಯಕ್ತಿಗೆ ಪಾಸಿಟಿವ್ ಬಂದಿರುವ ಬಗ್ಗೆ ಮೊಬೈಲ್‍ಗೆ ಮೆಸೇಜ್ ಕೂಡ ಕಳುಹಿಸಲಾಗಿತ್ತು. ಹೀಗಿದ್ದರೂ ಆತನಿಗೆ ಪಾಸಿಟಿವ್ ಬಂದಿದ್ದರೂ ಗ್ರಾಮದಲ್ಲಿ ಓಡಾಡಿಕೊಂಡು ಹೊಲಗದ್ದೆ ತೋಟಗಳಿಗೆ ಹೋಗಿ ಬರುತ್ತಿದ್ದನು.

    ಮರುದಿನ ಅಧಿಕಾರಿಗಳು ಆತನ ಯೋಗ-ಕ್ಷೇಮ ವಿಚಾರಿಸಲು ಮನೆಗೆ ಹೋದಾಗ ಆತ ಇರಲಿಲ್ಲ. ಅದೇ ವೇಳೆಗೆ ತೋಟದಿಂದ ಬಂದ ಆ ವ್ಯಕ್ತಿಗೆ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಆ ವ್ಯಕ್ತಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಿದ್ದಾನೆ. ನಮ್ಮ ತೋಟಕ್ಕೆ ಗೊಬ್ಬರ ಹಾಕಲು ನೀವು ಬರ್ತೀರಾ. ನಾನು ಸತ್ತರೆ ಸಾಯುತ್ತೇನೆ ಬಿಡಿ. ನಾನು ಹೊರಗಡೆ ಓಡಾಡ್ತೀನಿ ನೀವ್ಯಾರು ಕೇಳಬೇಡಿ ಎಂದು ಅಧಿಕಾರಿಗಳ ಮೇಲೆ ದರ್ಪ ಮೆರೆದಿದ್ದಾನೆ. ಇದನ್ನು ಓದಿ: ಲಾಕ್‍ಡೌನ್ ಮಧ್ಯೆ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಮಾರಿ ಹಬ್ಬ

    ವ್ಯಕ್ತಿಯ ಮನೆಯಲ್ಲಿ ಆತ ಸೇರಿದಂತೆ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ವ್ಯಕ್ತಿಯ ದಬ್ಬಾಳಿಕೆ ಕಂಡ ಅಧಿಕಾರಿಗಳು ಆತನ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈಗ ಆ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದರಿಂದ 14 ದಿನಗಳ ಬಳಿಕ ಆತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • ದಂಡ ವಿಧಿಸೋ ಮುನ್ನ ನವ ಜೋಡಿಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ ಅಧಿಕಾರಿಗಳು

    ದಂಡ ವಿಧಿಸೋ ಮುನ್ನ ನವ ಜೋಡಿಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ ಅಧಿಕಾರಿಗಳು

    ಹಾಸನ: ಸಾಮಾಜಿಕ ಅಂತರ ಪಾಲಿಸದ ವಧು-ವರರ ಪೋಷಕರಿಗೆ ಅಧಿಕಾರಿಗಳು ದಂಡ ವಿಧಿಸಿರೋ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸತ್ತಿಗಾಲ ಗ್ರಾಮದಲ್ಲಿ ನಡೆದಿದೆ.

    ಕೋವಿಡ್ ನಿಯಮ ಸಂಬಂಧ ಸಕಲೇಶಪುರ ತಾಲೂಕು ಪಂಚಾಯತ್ ಅಧಿಕಾರಿ ಹರೀಶ್ ರೌಂಡ್ಸ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮನೆಯೊಂದರ ಬಳಿ ಹೆಚ್ಚು ಜನ ಸೇರಿದ್ದರು. ಈ ವೇಳೆ ಪರಿಶೀಲನೆಗೆಂದು ಹೋದಾಗ ಹೆಚ್ಚು ಮಂದಿ ಸೇರಿ ಮದುವೆ ಮಾಡುತ್ತಿರೋದಾಗಿ ಕಂಡು ಬಂದಿದೆ.

    ಅಧಿಕಾರಿಗಳು ನವದಂಪತಿಗಳಿಗೆ ಶುಭಹಾರೈಸಿ, ಪೋಷಕರಿಗೆ ದಂಡವಿಧಿಸಿದ್ದಾರೆ. ಅಧಿಕಾರಿಗಳು ಬಂದಾಗ ಮುಹೂರ್ತ ನಡೆಯುತ್ತಿದ್ದರಿಂದ ಅಕ್ಷತೆ ಹಾಕಿ, ವಧುವರರಿಗೆ ತಲಾ ಒಂದು ಸಾವಿರ ದಂಡ ಹಾಕಿದ್ದಾರೆ. ಹೆಚ್ಚು ಜನರು ವಿಧಿಸದಂತೆ ತಾಲೂಕುಪಂಚಾಯತ್ ಇಓ ಎಚ್ಚರಿಕೆ ನೀಡಿದ್ದಾರೆ.

  • ಕೊಡಗಿನಲ್ಲಿ 3 ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ : ಡಿಸಿ ಚಾರುಲತಾ ಸೋಮಲ್

    ಕೊಡಗಿನಲ್ಲಿ 3 ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ : ಡಿಸಿ ಚಾರುಲತಾ ಸೋಮಲ್

    ಮಡಿಕೇರಿ: ಕೋವಿಡ್-19 ನಿಯಂತ್ರಣ ಜೊತೆಗೆ, ಸರ್ಕಾರದ ಮಾರ್ಗಸೂಚಿ ಪಾಲಿಸುವ ನಿಟ್ಟಿನಲ್ಲಿ ವಾರದ 3 ದಿನ ಬೆಳಗ್ಗೆ 06 ರಿಂದ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಮಾಡಲು ಉದ್ದೇಶಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‍ರವರು ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಸರ್ಕಾರ ಹೊರಡಿಸಿರುವ ಲಾಕ್‍ಡೌನ್ ಮಾರ್ಗಸೂಚಿ ಪಾಲನೆ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಗ್ಗೆ 6 ರಿಂದ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಲಿಖಿತ ಆದೇಶ ಹೊರಡಿಸಲಾಗುವುದು ಎಂದರು.

    ಸಂತೆಗೆ ಆಗಮಿಸಿ ತರಕಾರಿ, ಹಣ್ಣು ಮತ್ತು ಇತರೆ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದವರಿಗೆ, ತಾತ್ಕಾಲಿಕ ಗುರುತಿನ ಚೀಟಿ ನೀಡಿ ತರಕಾರಿ, ಹಣ್ಣನ್ನು ತಳ್ಳುಗಾಡಿ ಅಥವಾ ಚಿಕ್ಕ ಗೂಡ್ಸ್ ವಾಹನದಲ್ಲಿ ಬಡಾವಣೆಗೆ ತೆರಳಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ತರಕಾರಿ ಅಥವಾ ಇನ್ನಿತರೆ ಖರೀದಿಗೆ ಮಾರುಕಟ್ಟೆ ಬರುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಡಾವಣೆಗೆ ತೆರಳಿ ತರಕಾರಿ ಮತ್ತು ಹಣ್ಣು ಮಾರಾಟ ಮಾಡುವವರಿಗೆ ವಾರಕ್ಕೊಮ್ಮೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ಸಲಹೆ ನೀಡಿದರು. ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿಲ್ಲ, ಆದ್ದರಿಂದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡುವುದರ ಜೊತೆಗೆ, ಹೋಂ ಕ್ವಾರಂಟೈನ್‍ಗಳಲ್ಲಿ ಕಡ್ಡಾಯವಾಗಿ ಇರುವಂತೆ ಕ್ರಮವಹಿಸಬೇಕು. ಆ ನಿಟ್ಟಿನಲ್ಲಿ ಅಗತ್ಯ ಕಾಳಜಿ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    ಈ ಸಂಬಂಧ ತಹಶೀಲ್ದಾರಗಳು, ತಾಲೂಕು ಪಂಚಾಯತಿ ಇಒಗಳು ಗಮನಹರಿಸಬೇಕು. ಕೋವಿಡ್-19 ಪಾಸಿಟಿವ್ ಕಂಡುಬಂದಲ್ಲಿ ಅವರ ಮನೆಯವರ ಜೊತೆಗೆ ಸಂಪರ್ಕಿತರನ್ನು ಪತ್ತೆ ಹಚ್ಚಬೇಕು. ನಿಯಮಗಳನ್ನು ಉಲಂಘಿಸಿದ್ದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್‍ರವರು ನಿರ್ದೇಶನ ನೀಡಿದರು.

    ಜಿಲ್ಲಾಧಿಕಾರಿಯವರು ಕಂದಾಯ, ಪೊಲೀಸ್, ಪಂಚಾಯತ್‍ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸ್ಥಳೀಯ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಸಂಪರ್ಕಿತರನ್ನು ಪತ್ತೆ ಹಚ್ಚುವಲ್ಲಿ ಇನ್ನಷ್ಟು ಪ್ರಯತ್ನಿಸಬೇಕಿದೆ. ಸೋಂಕಿತರು ಕಂಡುಬಂದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು. ಅಗತ್ಯ ಮಾತ್ರೆಗಳನ್ನು ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ – ವಾರ್ ರೂಂ ಮೇಲುಸ್ತುವಾರಿ ಕುರಿತು ಸಭೆ

    ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ – ವಾರ್ ರೂಂ ಮೇಲುಸ್ತುವಾರಿ ಕುರಿತು ಸಭೆ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನಿತ್ಯ ಆಮ್ಲಜನಕದ ಸಿಲಿಂಡರ್ ಪೂರೈಕೆಗೆ ಎಷ್ಟು ಬೇಡಿಕೆ ಇದೆ, ಪೂರೈಕೆ ಎಷ್ಟಾಗಿದೆ, ಪೂರೈಕೆಗೆ ಎಷ್ಟು ಬಾಕಿ ಇದೆ ಎಂಬುದರ ಮೇಲ್ವಿಚಾರಣೆಗಾಗಿ ಕೂಡಲೇ ಎಲ್ಲಾ ವಾರ್ಡ್‍ಗಳಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಎಲ್ಲ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

    ನಗರದಲ್ಲಿ ಕೋವಿಡ್ ಸಂಬಂಧ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಮಾಡುವ ವಾರ್ ರೂಂ ಕಾರ್ಯನಿರ್ವಹಣೆ, ವ್ಯಾಕ್ಸಿನೇಷನ್ ಹಾಗೂ ಟೆಸ್ಟಿಂಗ್ ಸಂಬಂಧಿಸಿದಂತೆ ಇಂದು ನಡೆದ ವರ್ಚುವಲ್ ಸಭೆಯಲ್ಲಿ ಮುಖ್ಯ ಆಯುಕ್ತರು ಮಾತನಾಡಿ, ನಗರದಲ್ಲಿ ಕೋವಿಡ್ ಸಂಬಂಧಿಸಿದಂತೆ ಆಮ್ಲಜನಕದ ಒಟ್ಟು ದಾಸ್ತಾನು, ಆಸ್ಪತ್ರೆಗಳಿಂದ ಸ್ವೀಕರಿಸಿದ ಬೇಡಿಕೆ ಪ್ರಮಾಣ, ಪೂರೈಸಿದ ಪ್ರಮಾಣ, ದಾಸ್ತಾನು ಖಾಲಿಯಾಗಿರುವ ಬಗ್ಗೆ ಹಾಗೂ ಸಣ್ಣ ಆಸ್ಪತ್ರೆಗಳು ಅಥವಾ ನರ್ಸಿಂಗ್ ಹೋಮ್‍ಗಳಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ಬಳಕೆ ಮಾಡುತ್ತಿದ್ದು, ಇರುವ ಸಾಮಥ್ರ್ಯಕ್ಕಿಂತ ಹೆಚ್ಚಾಗಿ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ.

    ಈ ಸಂಬಂಧ ವಾರ್ಡ್‍ಗಳಲ್ಲಿ ನಿಯೋಜನೆ ಮಾಡುವ ನೋಡಲ್ ಅಧಿಕಾರಿಗಳು ಪ್ರತಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‍ಗಳಿಗೆ ಭೇಟಿ ನೀಡಿ ಎಷ್ಟು ರೋಗಿಗಳನ್ನು ದಾಖಲಿಸಿಕೊಳ್ಳುವ ಸಾಮಥ್ರ್ಯವಿದೆ ಎಂಬುದನ್ನು ಪರಿಶೀಲನೆ ನಡೆಸಬೇಕು. ಜೊತೆಗೆ ಆಮ್ಲಜನಕ ದಾಸ್ತಾನಿಗೆ ಟ್ಯಾಂಕ್ ಅಥವಾ ಸಿಲಿಂಡರ್ ಬಳಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

    ನೋಡಲ್ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಎಲ್ಲ ವಲಯ ಜಂಟಿ ಆಯುಕ್ತರು ಮಾಹಿತಿ ಸಂಗ್ರಹಿಸಿ ಕೇಂದ್ರ ಕಛೇರಿಯಲ್ಲಿರುವ ಸಮಿತಿ ತಂಡಕ್ಕೆ ಕೊಡಬೇಕು. ಆ ಬಳಿಕ ಎಂಟೂ ವಲಯಗಳ ಮಾಹಿತಿಯನ್ನು ಕ್ರೋಢೀಕರಿಸಿ ಪ್ರತಿನಿತ್ಯ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ ಸ್ಥಾಪಿಸಿರುವ ವಾರ್ ರೂಂಗಳಲ್ಲಿನ ಸಿಬ್ಬಂದಿಯು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಬಗ್ಗೆ ವಾರ್ ರೂಂಗಳ ಮೇಲ್ವಿಚಾರಣೆಗಾಗಿ ಖಾಯಂ ಅಧಿಕಾರಿಯನ್ನು ನಿಯೋಜನೆ ಮಾಡಲು ಮುಖ್ಯ ಆಯುಕ್ತರು ಎಲ್ಲ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.

    ನಗರದಲ್ಲಿ ವ್ಯಾಕ್ಸಿನೇಷನ್ ನೀಡುವ ಸಂಬಂಧ 45 ವರ್ಷ ಮೇಲ್ಪಟ್ಟವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಬಹುದು. ಅಲ್ಲದೆ ಕೋವಿಡ್ ರೋಗ ಲಕ್ಷಣಗಳಿರುವವರು ಹಾಗೂ ಪ್ರಥಮಿಕ ಸಂಪರ್ಕಿತರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಟೆಸ್ಟ್ ಮಾಡಿದ ಸ್ಯಾಂಪಲ್‍ಗಳನ್ನು ಲ್ಯಾಬ್‍ಗಳು ತ್ವರಿತವಾಗಿ ಪರೀಕ್ಷೆ ಮಾಡಿ ಫಲಿತಾಂಶವನ್ನು ನೀಡಬೇಕು. ತ್ವರಿತವಾಗಿ ಫಲಿತಾಂಶ ನೀಡದ ಲ್ಯಾಬ್‍ಗಳಿಗೆ ತ್ವರಿತವಾಗಿ ಫಲಿತಾಂಶ ನೀಡಲು ಸೂಚನೆ ನೀಡಬೇಕು ಎಂದರು.