Tag: officers

  • ಕಾಡಿನಲ್ಲಿದ್ದ ಜಿಂಕೆಯನ್ನು ಹಿಡಿದು ಆರು ತಿಂಗಳಿಂದ ಗೃಹ ಬಂಧನದಲ್ಲಿರಿಸಿದ್ದ ಭೂಪ

    ಕಾಡಿನಲ್ಲಿದ್ದ ಜಿಂಕೆಯನ್ನು ಹಿಡಿದು ಆರು ತಿಂಗಳಿಂದ ಗೃಹ ಬಂಧನದಲ್ಲಿರಿಸಿದ್ದ ಭೂಪ

    – ಅರಣ್ಯ ಇಲಾಖೆಯಿಂದ ಜಿಂಕೆ ರಕ್ಷಣೆ

    ಕಾರವಾರ: ಕಾಡಿನಲ್ಲಿದ್ದ ಜಿಂಕೆಯನ್ನು ಹಿಡಿದು ಆರು ತಿಂಗಳ ಕಾಲ ಅಕ್ರಮವಾಗಿ ಹಿಡಿದಿಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಕೊಪ್ಪದಲ್ಲಿ ಘಟನೆ ನಡೆದಿದೆ. ಸಂಚಾರಿ ಅರಣ್ಯ ಘಟಕ ದಳದವರು ಮನೆ ಮೇಲೆ ದಾಳಿ ನಡೆಸಿ, ವ್ಯಕ್ತಿಯನ್ನು ಬಂಧಿಸಿದ್ದಾರೆ. ಹಬೀಬ್ ರೆಹಮಾನ ಮಹ್ಮದ್ ಸಾಬ್(46) ಬಂಧಿತ ಆರೋಪಿ. ಕಾಡಿನಲ್ಲಿದ್ದ ಜಿಂಕೆಯನ್ನು ಹಿಡಿದು ಬಂಧಿಸಿ ಆರು ತಿಂಗಳಿಂದ ಮನೆಯಲ್ಲಿ ಇಟ್ಟುಕೊಂಡಿದ್ದ.

    ಖಚಿತ ಮಾಹಿತಿ ಮೇರೆಗೆ ದಾಂಡೇಲಿ ಸಂಚಾರಿ ಅರಣ್ಯ ಪೊಲೀಸ್ ದಳ ದಾಳಿ ನಡೆಸಿದ್ದಾರೆ. ಆರೋಪಿಯನ್ನು ಆರಣ್ಯ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದು, ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಜಿಂಕೆಯನ್ನು ವಶಪಡಿಸಿಕೊಂಡು ಶಿರಸಿ ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ದು, ಕಾರ್ಯಾಚರಣೆಯಲ್ಲಿ ದಾಂಡೇಲಿ ಸಿ.ಐ.ಡಿ ಅರಣ್ಯ ಘಟಕದ ಪಿ.ಎಸ್.ಐ. ಮಂಜುನಾಥ ಬೋರಕರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

  • ಮಾಹಿತಿ ಇಲ್ಲದೇ ಕಾರ್ಯಕ್ರಮಕ್ಕೆ ಬಂದ ಅಧಿಕಾರಿಗಳಿಗೆ ವಿ.ಸೋಮಣ್ಣ ಕ್ಲಾಸ್

    ಮಾಹಿತಿ ಇಲ್ಲದೇ ಕಾರ್ಯಕ್ರಮಕ್ಕೆ ಬಂದ ಅಧಿಕಾರಿಗಳಿಗೆ ವಿ.ಸೋಮಣ್ಣ ಕ್ಲಾಸ್

    ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣನವರು ರಾಯಚೂರು ಜಿಲ್ಲಾ ಪಂಚಾಯತಿ ಸಿಇಓ ಹಾಗೂ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಗರದ ಕೃಷಿ ವಿವಿ ಆವರಣದಲ್ಲಿ ನಡೆದಿದೆ.

    ಗ್ರಾಮ ಪಂಚಾಯ್ತಿಗಳಿಗೆ ಕಸ ನಿರ್ವಹಣೆಯ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಹಿತಿ ಇಲ್ಲದೆ, ಅಧಿಕಾರಿಗಳು ಬಂದಿದ್ದರಿಂದ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದುವರೆಗೂ ಮಂಜೂರು ಮಾಡಿದ ವಾಹನಗಳ ಸಂಖ್ಯೆ ಹಾಗೂ ತಗುಲಿದ ವೆಚ್ಚದ ಬಗ್ಗೆಯೂ ಮಾಹಿತಿ ಇಲ್ಲದೇ ಅಧಿಕಾರಿಗಳು ಬಂದಿದ್ದರು. ಹೀಗಾದರೆ ನನ್ನದೇ ಸ್ಟೈಲ್ ನಲ್ಲಿ ಮಾತನಾಡಬೇಕಾಗುತ್ತದೆ ಹುಷಾರ್ ಎಂದು ಕಿಡಿಕಾರಿದ್ದಾರೆ.

    ಸೋಮಣ್ಣನವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಅಧಿಕಾರಿಗಳು ತಬ್ಬಿಬ್ಬಾದರು. ಕಾರ್ಯಕ್ರಮದಲ್ಲಿ 35 ವಾಹನಗಳನ್ನು ಲೋಕಾರ್ಪಣೆ ಮಾಡಲಾಯಿತು. ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಬರುವಾಗ ಕನಿಷ್ಠ ಮಾಹಿತಿ ಇಲ್ಲದೆ, ಬರುವುದು ನಿಮ್ಮ ಆಡಳಿತದ ರೀತಿ ತೋರಿಸುತ್ತದೆ. ಜಿಲ್ಲೆಯಲ್ಲಿ ಮೊದಲು ಆಡಳಿತ ವ್ಯವಸ್ಥೆ ಸರಿಮಾಡಬೇಕಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂಗೆ ಅಮಿತಾ ಶಾ ಪುತ್ರನ ಹೆಸರಿಡಬಹುದು: ಟಿಎಂಸಿ ಸಂಸದ

  • ಕಾಡು ಪ್ರಾಣಿಗಳ ಭಯದ ಮಧ್ಯೆ ಮರಳು ಕಾಯುತ್ತಿದ್ದಾರೆ ಅಧಿಕಾರಿಗಳು

    ಕಾಡು ಪ್ರಾಣಿಗಳ ಭಯದ ಮಧ್ಯೆ ಮರಳು ಕಾಯುತ್ತಿದ್ದಾರೆ ಅಧಿಕಾರಿಗಳು

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ, ಅಕ್ರಮ ಮರಳು ಜಪ್ತಿ ಮಾಡಿದ್ದಾರೆ. ಆದರೆ ಜಪ್ತಿ ಮಾಡಿದ ಮರಳು ಸಾಗಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ ಅಕ್ರಮ ಮರಳು ಕಾಯುವುದೇ ಕಂದಾಯ ಇಲಾಖೆಯ ಸಿಬ್ಬಂದಿಗೆ ಸಂಕಷ್ಟವಾಗಿ ಮಾರ್ಪಟಿದೆ.

    ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆದು, ನಾಗನಹಳ್ಳಿ ಸಮೀಪದ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಆಪಾರ ಪ್ರಮಾಣದ ಮರಳು ಸಂಗ್ರಹ ಮಾಡಲಾಗಿದ್ದು, ಮಾಹಿತಿ ತಿಳಿದ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜೂನ್ 30 ರಂದು ದಾಳಿ ನಡೆಸಿ, 20 ಟ್ರ್ಯಾಕ್ಟರ್‍ಗೂ ಅಧಿಕ ಮರಳು ವಶಕ್ಕೆ ಪಡೆದು ಜಪ್ತಿ ಮಾಡಿದ್ದಾರೆ. ಸರ್ಕಾರಿ ಜಮೀನುಗಳಲ್ಲಿ ಮರಳು ಇರುವುದರಿಂದ ದಂಧೆಕೋರರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಸದ್ಯ ಮರಳಿನ ಬೆಲೆಯ ಪ್ರಕಾರ 1 ಲಕ್ಷ ರೂ.ಗೂ ಅಧಿಕ ಬೆಲೆಬಾಳುವ ಮರಳು ಇದಾಗಿದ್ದು, ಸದ್ಯ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಅಧಿಕಾರಿಗಳು ದಾಳಿ ನಡೆಸಿ, ಮರಳು ಜಪ್ತಿ ಮಾಡಿ ಈಗಾಗಲೇ 4 ದಿನಗಳು ಕಳೆದಿವೆ. ಆದರೂ ಕೂಡ ಜಪ್ತಿ ಮರಳು ಸಾಗಾಟ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ಕಂದಾಯ ಇಲಾಖೆಯವರಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಪಾರ ಪ್ರಮಾಣದ ಮರಳು ಇರುವುರಿಂದ ಅಕ್ರಮ ಮರಳು ಸಾಗಾಟಗಾರರು ರಾತ್ರೋ ರಾತ್ರಿ ಸಾಗಿಸುತ್ತಾರೆ ಎನ್ನುವ ಭಯದಲ್ಲಿ ಕಂದಾಯ ಇಲಾಖೆಯವರು ಹಗಲು, ರಾತ್ರಿ ಎನ್ನದೆ ಮರಳು ರಾಶಿಗಳನ್ನು ಕಾಯಬೇಕಾಗಿದೆ. ರಾತ್ರಿ ವೇಳೆಯಲ್ಲಿ ಮರಳು ರಾಶಿಗಳ ಮುಂದೆಯೇ ಗ್ರಾಮ ಸಹಾಯಕರು ಮಲಗುವ ಪರಿಸ್ಥಿತಿ ಉಂಟಾಗಿದೆ. ರಾತ್ರಿ ವೇಳೆ ಒಬ್ಬಂಟಿಯಾಗಿ ಮಲಗುವುದರಿಂದ ಕಾಡು ಪ್ರಾಣಿಗಳ ಕಾಟವನ್ನೂ ಸಿಬ್ಬಂದಿ ಎದುರಿಸುತ್ತಿದ್ದಾರೆ. ಸದ್ಯ ಜೀವ ಭಯದಲ್ಲಿಯೇ ಕಾಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

    ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೌನ: ಟಾಸ್ಕ್ ಫೋರ್ಸ್ ಸಮಿತಿಯಲ್ಲಿನ ಅಧಿಕಾರಿಗಳು ದಾಳಿ ನಡೆಸಿ, ಮರಳು ಜಪ್ತಿ ಮಾಡಿದರೆ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಆಗಮಿಸಿ, ಇರುವ ಮರಳಿನ ಪ್ರಮಾಣ, ಅಂದಾಜು ಬೆಲೆಯನ್ನು ನಿಗದಿ ಮಾಡಿ, ಸುರಕ್ಷಿತವಾಗಿರುವ ಬೇರೆ ಕಡೆಗೆ ಸ್ಥಳಾಂತರಿಸಬೇಕು. ನಂತರ ಅದಕ್ಕೆ ಟೆಂಡರ್ ಕರೆದು ಮಾರಾಟ ಮಾಡಬೇಕು. ಆದರೆ ಆದ್ಯಾವುದು ಇಲ್ಲಿ ನಡೆಸಯುತ್ತಿಲ್ಲ. ದಾಳಿ ನಡೆಸಿ, ಮೂರು ದಿನ ಕಳೆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಇದು ಸದ್ಯ ಗ್ರಾಮಸ್ಥರಲ್ಲಿ ನಾನಾ ಅನುಮಾನಗಳಿಗೆ ಕಾರಣವಾಗುತ್ತಿದೆ.

  • ಬೇಬಿ ಬೆಟ್ಟದಲ್ಲಿ ಸ್ಫೋಟಕಗಳು ಪತ್ತೆ

    ಬೇಬಿ ಬೆಟ್ಟದಲ್ಲಿ ಸ್ಫೋಟಕಗಳು ಪತ್ತೆ

    ಮಂಡ್ಯ: ಕಳೆದ ಒಂದುವರೆ ತಿಂಗಳಿಂದ ಸಾಕಷ್ಟು ವಿವಾದ ಮೂಡಿಸಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ನಿಷೇಧಿತ ಗಣಿ ಪ್ರದೇಶಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.

    ಬೇಬಿ ಬೆಟ್ಟದ ಸಿದ್ಧಲಿಂಗೇಶ್ವರ ಕ್ರಷರ್ ಸಮೀಪ ಸ್ಫೋಟಕ ವಸ್ತಗಳು ಪತ್ತೆಯಾಗಿವೆ. ಕಳೆದ ಒಂದೂವರೆ ತಿಂಗಳಿನಿಂದ ಬೇಬಿ ಬೆಟ್ಟದ ಗಣಿಗಾರಿಕೆಯ ಬಗ್ಗೆ ರಾಜ್ಯ ಮಟ್ಟದಲ್ಲಿ ವ್ಯಾಪಕ ಸುದ್ದಿಯಾಗಿತ್ತು. ಈ ಪ್ರದೇಶದಲ್ಲಿ ಬ್ಲಾಸ್ಟಿಂಗ್ ಮೂಲಕ ಗಣಿಗಾರಿಕೆ ಮಾಡುತ್ತಿಲ್ಲ ಎಂದು ಗಣಿ ಮಾಲೀಕರು ಹಾಗೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಇದೀಗ ಈ ಪ್ರದೇಶದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಹಿನ್ನೆಲೆ ಹಲವು ಅನುಮಾನಗಳಿಗ ಕಾರಣವಾಗಿದೆ. ಕಳೆದ ಜುಲೈ 16 ರಂದು  ಕೆಆರ್‌ಎಸ್‌ ಸರಹದ್ದಿನಲ್ಲೂ ಸಹ ಸ್ಫೋಟಕಗಳು ಪತ್ತೆಯಾಗಿದ್ದವು.

    ಇಂದು ಪತ್ತೆಯಾಗಿರುವ ಸ್ಫೋಟಕಗಳ ಪೈಕಿ 11 ಡಿಟೋನೇಟರ್, 20 ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿವೆ. ಪತ್ತೆಯಾಗಿರುವ ಸ್ಫೋಟಕಗಳನ್ನು ಪಾಂಡವಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂತಹ ಪ್ರಕರಣಗಳು ಪದೇ ಪದೇ ಬೇಬಿ ಬೆಟ್ಟದಲ್ಲಿ ಬೆಳಕಿಗೆ ಬರುತ್ತಿರುವ ಕಾರಣ ಬೆಟ್ಟದಲ್ಲಿ ಸಂಪೂರ್ಣವಾಗಿ ಗಣಿಗಾರಿಕೆಯನ್ನು ನಿಷೇಧ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೊಸ ಸ್ವರೂಪ ಪಡೆದ ಕೊರೊನಾ-ಕಣ್ಣೀರಿನಿಂದಲೂ ಸೋಂಕು ಹಬ್ಬುತ್ತೆ, ಎಚ್ಚರ..!

  • ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ: ಸುಮಲತಾ

    ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ: ಸುಮಲತಾ

    – 10 ವರ್ಷದ ನಂತರ ಅಪಾಯವಾದರೆ ಹೊಣೆ ಯಾರು?
    – ನನ್ನ ಹೇಳಿಕೆಯನ್ನು ತಿರುಚಿ, ತೇಜೋವಧೆ

    ಮಂಡ್ಯ: ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಮಂಡ್ಯದ ಕೆಆರ್‌ಎಸ್ ಕಾವೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ ಅಂಬರೀಶ್, ಡ್ಯಾಂ ಎಷ್ಟು ಲೈನ್ ಇದೆ, ಎಷ್ಟು ವಿಸ್ತಾರವಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲಿ ಸಣ್ಣಪುಟ್ಟ ಬಿರುಕು ಕೂಡ ಆಗುತ್ತೆ. ಏರ್ ಕ್ರ್ಯಾಕ್ ಅಂತಾ ಕೂಡ ಹೇಳ್ತಾರೆ. ಗ್ರೌಟಿಂಗ್ ಮೂಲಕ ಅದನ್ನು ಮುಚ್ಚುತ್ತಾರೆ. ಆದರೆ ಬಿರುಕಾಗಿರೋದು ಸತ್ಯ, ಅದನ್ನು ಗ್ರೌಟಿಂಗ್ ಮೂಲಕ ಮುಚ್ಚುತ್ತಿದ್ದಾರೆ ಎಂದು ತಿಳಿಸಿದರು.

    ಅಪಾಯ ಪ್ರಮಾಣ ಪತ್ರದ ಬಗ್ಗೆ ಸರ್ಟಿಫಿಕೇಟ್ ಕೊಡುವ ಅಧಿಕಾರಿ ನಾವಲ್ಲ ಅಂತಾ ನೀರಾವರಿ ಅಧಿಕಾರಿಗಳು ಹೇಳಿದ್ದಾರೆ. ಸರ್ಟಿಫಿಕೇಟ್ ಕೊಡಲೂ ನಮ್ಮಲ್ಲಿ ಯಾರಿಗೂ ಅಧಿಕಾರವಿಲ್ಲ. ಅವರದ್ದೆ ಆದ ಟೆಕ್ನಿಕಲ್ ಕಮಿಟಿ ಬರಬೇಕಿದೆ. ಕ್ರ್ಯಾಕ್ ಆಗುವ ಮುಂಚೆ ಎಚ್ಚರಿಕೆ ವಹಿಸಬೇಕಿದೆ. ಕೊರೊನಾ ಬಂದು 10 ದಿನದ ನಂತರ ಆಸ್ಪತ್ರೆಗೆ ಹೋದ್ರೆ ಏನು ಪ್ರಯೋಜನ? ಮೊದಲೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಹಾಗೆ ಇದು ಕೂಡ ಇವತ್ತು, ನಾಳೆ ಅಪಾಯ ಇಲ್ಲ. ಐದು, ಹತ್ತು ವರ್ಷದ ನಂತರ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

    ಕೆಆರ್‍ಎಸ್ ಅಣೆಕಟ್ಟೆಯ 20 ಕಿ.ಮೀ. ರೆಡಿಯಸ್ ನಲ್ಲಿ ಗಣಿಗಾರಿಕೆ ನಡೆಯಬಾರದು. ಈಗಾಗಲೇ ಈ ಬಗ್ಗೆ ಮೈನಿಂಗ್ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ನಾನು ಲೀಗಲ್ ಆಗಿರೋ ಗಣಿಗಾರಿಕೆ ರದ್ದು ಮಾಡಿ ಅಂತಾ ಹೇಳಿಲ್ಲ. ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಾಗುವ ರೀತಿ ಇದ್ದರೆ ಗಣಿಗಾರಿಕೆ ಬೇಡ ಎಂದು ಹೇಳಿದ್ದೇನೆ. 2019 ರಲ್ಲೇ ಸಂಸತ್‍ನಲ್ಲಿ ಈ ಪ್ರಸ್ತಾಪವನ್ನು ಇಟ್ಟಿದ್ದೆ. ಆರಂಭದಿಂದಲೂ ನನ್ನ ಹೇಳಿಕೆಯನ್ನು ತಿರುಚಲಾಗುತ್ತಿದೆ. ನನ್ನ ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ ಎಂದು ವಿರೋಧಿಸಿದವರಿಗೆ ತಿರುಗೇಟು ನೀಡಿದರು.

    ಅಧ್ಯಯನ ನಡೆಯಬೇಕು: ಪೊಲೀಸ್, ಮೈನಿಂಗ್, ಡ್ಯಾಂ ಸೆಕ್ಯೂರಿಟಿ ಟೀಂ ಎಲ್ಲರೂ ಕೂಡ ಒಟ್ಟಿಗೆ ಸೇರಿ ಕೆಲಸ ಮಾಡಬೇಕು. ಕಣ್ಣಿಗೆ ಕಾಣುವ ರೀತಿ ಬಿರುಕು ಕಾಣುತ್ತಿಲ್ಲ. ಇದರ ಬಗ್ಗೆ ವಿಸ್ತ್ರತ ಅಧ್ಯಯನ ಆಗಬೇಕಿದೆ. ಸಣ್ಣ ಪುಟ್ಟ ಬಿರುಕು ಆಗತ್ತೆ. ಬಿರುಕೇ ಆಗಿಲ್ಲ ಅನ್ನೋದು ಅಸತ್ಯ. ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗ ಸಣ್ಣಪುಟ್ಟ ಬಿರುಕು ಮುಂದಿನ ದಿನಗಳಲ್ಲಿ ಬಹಳ ಮುಖ್ಯವಾಗುತ್ತದೆ. ಅಪಾಯ ಪ್ರಮಾಣ ಪತ್ರ ನಾವು ಬೀಡಲು ಸಾಧ್ಯವಿಲ್ಲ ಅಂತಾ ಅಧಿಕಾರಿಗಳು ಹೇಳುತ್ತಾರೆ. ಜಾರ್ಖಂಡ್ ತಂಡ ಟ್ರಯಲ್ ಬ್ಲಾಸ್ಟ್ ಪರೀಕ್ಷೆ ಆಗೋ ವರೆಗೆ ನಾವು ಕಾಯಬೇಕು. ಮೈಸೂರು ಅರಸರು ಹಣವಿಲ್ಲದ ಸಮಯದಲ್ಲಿ ಕಟ್ಟಿದ್ದಾರೆ. ಇವತ್ತು ಅಪಾಯವಿಲ್ಲ ಎಂದರೂ ಮುಂದಿನದಿನ ಇರೋದಿಲ್ವಾ? ಅದನ್ನು ಕಾಪಾಡಿಕೊಳ್ಳಬೇಕು ಅಂತಾ ಹೇಳೋದು ತಪ್ಪಾ? ನಾನು ಕಾಳಜಿ ವಹಿಸೋದೇ ತಪ್ಪಾ. ಗಣಿಗಾರಿಕೆ ಟ್ರಯಲ್ ಬ್ಲಾಸ್ಟ್ ಪರೀಕ್ಷೆ ನಡೆಯುವವರೆಗೂ ನಿಲ್ಲಿಸಬೇಕು. ನಾನು ಸಂಬಂಧ ಪಟ್ಟ ಸಚಿವರ ಜತೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ:ವಿಧಾನಸೌಧಕ್ಕೆ ಇರುವ ಸೇಫ್ಟಿ KRSಗೆ ಇಲ್ಲ: ಸುಮಲತಾ ಆತಂಕ

    ಪಾರ್ಟಿ ನಿಷೇಧಿಸಿ: ಗಣಿಗಾರಿಕೆ ಸಂಪೂರ್ಣ ವಾಗಿ ನಿಷೇಧಿಸಿ ಅಂತಾ ನಾನು ಹೇಳೋದಿಲ್ಲ. ಅದರೆ ಅಣೆಕಟ್ಟೆಗೆ ಯಾವುದೇ ಧಕ್ಕೆಯಾಗಬಾರದು. ಅದಕ್ಕೆ ಸಂಬಂಧಿಸಿದ ಕ್ರಮ ಕೈಗೊಳ್ಳಬೇಕು. ಭದ್ರತಾ ಲೋಪದ ಗಮನಹರಿಸಬೇಕಿದೆ. ಪೊಲೀಸ್ ಇಲಾಖೆ, ನೀರಾವರಿ ನಿಗಮ, ಗಣಿ ಇಲಾಖೆ ಡ್ಯಾಂ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳವೇಕು. ಅಧಿಕಾರಿಗಳಾಗಲಿ ಎಂಪಿ ಆಗಲಿ, ಎಂಎಲ್‍ಎ ಆಗಲಿ ಯಾಕೆ ಪಾರ್ಟಿ ನಡೆಸಬೇಕು.? ಅವರಿಗೂ ಕ್ರಮ ಕೈಗೊಳ್ಳಬೇಕು. ಕಾವೇರಿ ಹಿನ್ನಿರಿನಲ್ಲಿ ಪಾರ್ಟಿ ಮಾಡಬಾರದು. ಇದನ್ನು ತಡೆಯುವ ಜವಾಬ್ದಾರಿ ಯಾರದ್ದೂ ಅನ್ನೋದೇ ಪ್ರಶ್ನೆ. ಹಾಗಾಗಿ ಇಲ್ಲಿ ಎಲ್ಲಾ ಇಲಾಖೆಗಳ ಜವಾಬ್ದಾರಿಯೂ ಇದೆ. ನನ್ನ ಬಳಿ ಇದ್ದ ತಾಂತ್ರಿಕ ಆಧಾರದ ಮೇಲೆ ನಾನು ಹೇಳಿಕೆ ನೀಡಿದ್ದೆ. ಜೊತೆಗೆ ಕೆಲವರ ಸಲಹೆ ಹಿನ್ನೆಲೆಯಲ್ಲಿ ಅಣೆಕಟ್ಟೆ ಸುರಕ್ಷತೆಯ ಆತಂಕ ವ್ಯಕ್ತಪಡಿಸಿದ್ದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆಗೂ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಗೆ ತಂದಿದ್ದಕ್ಕೂ ಏನು ಸಂಬಂಧ: ಸುಮಲತಾ

    ಮುಂದೆ ದೊಡ್ಡ ಹೋರಾಟ: ಈ ಬಗ್ಗೆ ನನ್ನದು ಒಂಟಿ ಧ್ವನಿ ಅಲ್ಲ. ಜವಾಬ್ದಾರಿ ಇರುವ ಎಲ್ಲಾರೂ ನನ್ನ ಜೊತೆ ಇರುತ್ತಾರೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಹೋರಾಟವಾಗಲಿದೆ. ಕೆಆರ್‍ಎಸ್‍ಗಿಂತ ದೊಡ್ಡದು ಗಣಿಗಾರಿಕೆಯಲ್ಲ. ತಾಂತ್ರಿಕ ಟೀಂ ಟ್ರಯಲ್ ಬ್ಲಸ್ಟ್ ಪರೀಕ್ಷೆ ನಡೆಸಲಿದೆ. ರೈತರು ಕೂಡ ಪರೀಕ್ಷೆ ನಡೆಸುವವರೆಗೆ ತಾಳ್ಮೆ ಇಟ್ಟುಕೊಳ್ಳಬೇಕು. ಮೊದಲು ಜಾರ್ಖಾಂಡ್ ಟೀಂ ಬ್ಲಾಸ್ಟ್ ಪರೀಕ್ಷೆ ನಡೆಸಲಿ ನೋಡೋಣ. ನಾನು ಬಿರುಕಿನ ಬಗ್ಗೆ ಹೇಳಿದ ಮೇಲೆಯೇ ವಿವಾದ ಆಗಿದ್ದು. ನಾನು ಸುಮ್ಮನೆ ಇರಬಹುದಾಗಿತ್ತು ಆಲ್ವಾ? ನಾನೇ ಎಲ್ಲಾ ಸಾಧಿಸಬೇಕು ಅಂತಾ ಹೇಳುತ್ತಿಲ್ಲ. ನನ್ನ ಧ್ವನಿ ಇಲ್ಲಿಗೆ ಕೊನೆಯಾಗುವುದಿಲ್ಲ. ಮುಂದಿನ ದಿನಗಳಲ್ಲೂ ಹೋರಾಟ ನಡೆಯಲಿದೆ. ಬಿರುಕು ಬಿಟ್ಟಿದೆ ಎಂದು ಹೇಳಿದಕ್ಕೆ ಈಗ ದುರಸ್ತಿ ಕೆಲಸ ಮಾಡುತ್ತಿದ್ದಾರೆ. ಶಾಸಕರ ನಟೋರಿಯಸ್ ಅನ್ನೋ ಪದ ಹಾಸ್ಯಾಸ್ಪದ ಪದ. ಈ ಬಗ್ಗೆ ಇನ್ನೂ ಅತಂಕ ದೂರವಾಗಿಲ್ಲ. ನನ್ನ ಆತಂಕ ಇನ್ನೂ ಹಾಗೆ ಇದೆ. ನನ್ನ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

  • ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಸಮಸ್ಯೆಗಳು ಶೀಘ್ರ ಪರಿಹಾರ: ಆರ್. ಅಶೋಕ್

    ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಸಮಸ್ಯೆಗಳು ಶೀಘ್ರ ಪರಿಹಾರ: ಆರ್. ಅಶೋಕ್

    ಬೆಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಶೀಘ್ರವಾಗಿ ಸರಿಪಡಿಸಬೇಕು, ಸರ್ವರ್ ಮತ್ತು ಒಟಿಪಿ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸಾರ್ವಜನಿಕರಿಗೆ ಆಸ್ತಿ ನೋಂದಣಿಯ ಸಮಯದಲ್ಲಿ ಸರ್ವರ್ ಮತ್ತು ಒಟಿಪಿಯಿಂದ ಆಗುವ ಸಮಸ್ಯೆಗಳ ಬಗ್ಗೆ ಹಾಗೂ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿನ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಲಾಗಿದೆ.

    ಶಿವರಾಮ್ ಕಾರಂತ್ ಬಡಾವಣೆಯಲ್ಲಿನ ಸರ್ಕಾರಿ ಜಮೀನನ್ನು ಬಿಡಿಎಗೆ ಹಸ್ತಾಂತರಿಸುವ ಕುರಿತಂತೆ ಚರ್ಚೆ:
    ಶಿವರಾಮ್ ಕಾರಂತ್ ಬಡಾವಣೆಯ ಮಧ್ಯೆ ಇರುವ ಸುಮಾರು 400 ಎಕರೆಗೂ ಹೆಚ್ಚು ಸರ್ಕಾರಿ ಜಮೀನುಗಳನ್ನು ಬಿಡಿಎಗೆ ಹಸ್ತಾಂತರಿಸುವ ಕುರಿತಂತೆ ಚರ್ಚೆ ನಡೆಸಿ, ಅದಕ್ಕೆ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಆದೇಶ ನೀಡಿದರು. ಸರಿಯಾದ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿದರೆ ಮಾತ್ರ ಬಡಾವಣೆಯ ಅಭಿವೃದ್ಧಿ ಸಾಧ್ಯ, ಆ ಕಾರಣಕ್ಕೆ ಶೀಘ್ರವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

    ಈ ಸಭೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಗೂ ಬಿಡಿಎ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾಮನ್ ಸೆನ್ಸ್ ಇಲ್ಲವಾ? – ಬೆಂಬಲಿಗನ ತಲೆಗೆ ಡಿಕೆಶಿ ಏಟು

  • ಚಿಕ್ಕಮಗಳೂರು, ಬೀದರ್‌ನಲ್ಲಿ ಭಾರೀ ಮಳೆ – ಜನ ಜೀವನ ಅಸ್ತವ್ಯಸ್ತ

    ಚಿಕ್ಕಮಗಳೂರು, ಬೀದರ್‌ನಲ್ಲಿ ಭಾರೀ ಮಳೆ – ಜನ ಜೀವನ ಅಸ್ತವ್ಯಸ್ತ

    – ಮಲೆನಾಡಿನಲ್ಲಿ 10 ದಿನಗಳ ನಂತರ ಮತ್ತೆ ವರುಣನ ಅಬ್ಬರ

    ಚಿಕ್ಕಮಗಳೂರು/ಬೀದರ್: ಶುಕ್ರವಾರ ಚಿಕ್ಕಮಗಳೂರು ಮತ್ತು ಬೀದರ್ ಜಿಲ್ಲೆಯ ಔರಾದ್ ನಲ್ಲಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೀದರ್ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಜಾಗರಣೆ ಮಾಡುವಂತಾಗಿತ್ತು. ಇತ್ತ ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಸಂತಸದ ಜೊತೆ ಆತಂಕ ಸಹ ಹೆಚ್ಚಾಗಿದೆ.

    ಮುಂಗಾರು ಮಳೆ ಆಶಾದಾಯಕವಾಗಿ ಆರಂಭವಾಗಿದ್ದರೂ ಕೂಡ ಕಳೆದ ಹತ್ತು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿತ್ತು. ಆದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಡೀ ದಿನ ಆಗಾಗ್ಗೆ ಭಾರೀ ಮಳೆ ಸುರಿದಿದೆ.

    ಮಲೆನಾಡಿಗರಿಗೆ ಸಂತಸದ ಜೊತೆ ಆತಂಕ:
    ಕಡುಗಟ್ಟಿದ ಮೋಡ, ಭಾರೀ ಗಾಳಿಯಿಂದ ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಕಳಸ, ಎನ್.ಆರ್.ಪುರ, ಶೃಂಗೇರಿ, ಕೊಪ್ಪ ಹಾಗೂ ಬಾಳೆಹೊನ್ನೂರು ಭಾಗದಲ್ಲಿ ಮಳೆಯಾಗಿದೆ. ಆದರೆ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬೈರಾಪುರ, ಚಾರ್ಮಾಡಿಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ಭಾರೀ ಮಳೆ ಸುರಿದಿದೆ. ಇದರಿಂದ ಮಲೆನಾಡಿಗರು ಮತ್ತೆ ಆತಂಕಗೊಂಡಿದ್ದಾರೆ. ಜಿಲ್ಲೆಗೆ ಈ ಮಳೆ ಅಗತ್ಯವಿತ್ತು. ಬಯಲುಸೀಮೆ ಹಾಗೂ ಮಲೆನಾಡು ಭಾಗಕ್ಕೂ ಮಳೆ ತೀರಾ ಅವಶ್ಯಕವಿತ್ತು. ಮಲೆನಾಡು ಭಾಗದಲ್ಲಿ ಭತ್ತ ಬೆಳೆದಿದ್ದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಭತ್ತದ ಸಿಸಿ ಮಡಿ ಬಿಸಿಲಿಗೆ ಬಾಡುವಂತಾಗಿತ್ತು. ಆದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಡೀ ದಿನ ಆಗಾಗ್ಗೆ ಸಮೃದ್ಧ ಮಳೆಯಾಗಿರೋದು ಕಾಫಿ ಬೆಳೆಗಾರರರು ಹಾಗೂ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.

    ಮಳೆ ಮಲೆನಾಡಿಗರಿಗೆ ಸಂತಸ ತಂದರೂ ಅದಕ್ಕಿಂತ ಹೆಚ್ಚು ಆತಂಕ ತರುತ್ತಿದೆ. ಏಕೆಂದರೆ, ಕಳೆದ ಎರಡು ವರ್ಷದಲ್ಲಿ ಅಳಿದುಳಿದ ಬದುಕು ಎಲ್ಲಿ ಈ ಬಾರಿ ಕೊಚ್ಚಿ ಹೋಗುತ್ತೋ ಎಂದು ಮಲೆನಾಡಿಗರು ಮಳೆ ಬಂದರೆ ಖುಷಿಯ ಮಧ್ಯೆಯೂ ಕಂಗಾಲಾಗುತ್ತಿದ್ದಾರೆ. ಕಳೆದ ಎರಡು ವರ್ಷದ ಹಿಂದೆ, ಮಳೆಗಾಲದಲ್ಲಿ ಆದ ಅನಾಹುತಕ್ಕೆ ಪರಿಹಾರ ಸಿಕ್ಕಿಲ್ಲ. ಈ ವರ್ಷ ಮಳೆರಾಯ ಏನೇನು ಅವಾಂತರ ಸೃಷ್ಟಿಸುತ್ತಾನೋ, ಸರ್ಕಾರ ಸೂಕ್ತ ಪರಿಹಾರ ಕೊಡುತ್ತೋ ಅಥವಾ ಆಶ್ವಾಸನೆಯಲ್ಲೇ ಕಾಲ ಕಳೆಯುತ್ತೋ ಎಂದು ಜನ ಮಳೆ-ಸರ್ಕಾರ ಎರಡರ ಬಗ್ಗೆಯೂ ಚಿಂತೆಗೀಡಾಗಿದ್ದಾರೆ. 2019ರಲ್ಲಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ 6 ಕುಟುಂಬಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು. ಅಲ್ಲಿಯ ಜನರಿಗೆ ಇಂದಿಗೂ ಸೂಕ್ತ ಹಾಗೂ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಹಾಗಾಗಿ, ಮಲೆನಾಡಿಗರಿಗೆ ಮಳೆ ಅಂದರೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

    ಜಮೀನು, ಮನೆಗೆ ನುಗ್ಗಿದ ನೀರು:
    ಬೀದರ್‌ನಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಔರಾದ್ ತಾಲೂಕಿನ ಬೋರ್ಗಿ ಗ್ರಾಮದ ಜಗದೇವಿ ಎಂಬವರ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಸಾವಿರಾರು ಮೌಲ್ಯದ ದವಸ ಧಾನ್ಯಗಳು ನೀರು ಪಾಲಾಗಿವೆ.

    ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಡರಾತ್ರಿ ಮನೆಗೆ ನೀರು ನುಗ್ಗಿ ನೀರು ಹೊರ ಹಾಕಲು ಕುಟುಂಬಸ್ಥರು ರಾತ್ರಿಯಿಡಿ ಹರಸಾಹಸ ಪಟ್ಟಿದ್ದಾರೆ. ಜೊತೆಗೆ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನ ಜಮೀನುಗಳು ಜಲಾವೃತವಾಗಿ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿವೆ. ಅಲ್ಲದೇ ಸುರಿದ ಧಾರಾಕಾರ ಮಳೆಗೆ ಜೋಜನಾ ಬಳಿ ಇರುವ ಹಳ್ಳ ತುಂಬಿ ಜೋಜನಾ ಟು ಲಿಂಗದ ಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂದು ಕೂಡಾ ದಟ್ಟ ಮೋಡ ಕವಿದ ವಾತಾವರಣವಿದ್ದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಹೀಗಾಗಿ ಜಿಲ್ಲೆಯಲ್ಲಿ 10 ರಿಂದ 13ರ ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಧಾರಕಾರ ಮಳೆಗೆ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ, ಧಾನ್ಯಗಳು ನೀರು ಪಾಲಾಗಿದೆ. ಒಳಚರಂಡಿ ವ್ಯವಸ್ಥೆ ಸೇರಿ ಮೂಲಭೂತ ಸೌಕರ್ಯ ಒದಗಿಸಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ, ಸ್ಪಂದಿಸಿಲ್ಲ ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮಳೆಯ ಅವಾಂತರದಿಂದಾಗಿ ನೊಂದವರು ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ಯುವತಿ ನೇಣಿಗೆ ಶರಣು, ಯುವಕನ ಮನೆಗೆ ಬೆಂಕಿ – ಪತಿಯನ್ನ ಬಿಟ್ಟು ಇನಿಯನ ಜೊತೆ ಮದ್ವೆ

  • ಸರ್ಕಾರದ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪ

    ಸರ್ಕಾರದ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪ

    – ಗ್ರಾಮೀಣ ಭಾಗಕ್ಕೆ ಯೋಜನೆ ತಲುಪಿಸುವಲ್ಲಿ, ಸರ್ಕಾರ ವಿಫಲ
    – 2019ರ ಮಾರ್ಚ್‍ಗೆ ಮುಗಿಯಬೇಕಿದ್ದ ಯೋಜನೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

    ಶಿವಮೊಗ್ಗ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿಬಂದಿದೆ.

    ಗ್ರಾಮೀಣ ಭಾಗಕ್ಕೆ ಕಡಿಮೆ ಯೂನಿಟ್ ದರದಲ್ಲಿ ನಿರಂತರ ವಿದ್ಯುತ್ ನೀಡುವ ಸಲುವಾಗಿ ಸರ್ಕಾರ ನಿರಂತರ ಜ್ಯೋತಿ ವಿದ್ಯುತ್ ಯೋಜನೆ ಜಾರಿಗೊಳಿಸಿತ್ತು. ಆದರೆ ಅಧಿಕಾರಿಗಳ ಅಸಡ್ಡೆ ಮತ್ತು ಭ್ರಷ್ಟಾಚಾರದಿಂದಾಗಿ ನೆನೆಗುದಿಗೆ ಬಿದ್ದಂತಾಗಿದೆ. ಸರಿ ಸುಮಾರು 2019 ಮಾರ್ಚ್‍ಗೆ ಮುಗಿಯಬೇಕಿದ್ದ ಈ ಯೋಜನೆ ಇನ್ನೂ ಕೂಡ ಪೂರ್ಣಗೊಳ್ಳದೇ ಕೆಲವು ಕಡೆ ಇನ್ನೂ ಆರಂಭವಾಗದೇ ವಿಫಲವಾಗಿದೆ.

    ನಿರಂತರ ಜ್ಯೋತಿ ವಿದ್ಯುತ್ ಯೋಜನೆಯ ಭ್ರಷ್ಟಾಚಾರದ ಆರೋಪದಲ್ಲಿ ಮೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಶಾಮೀಲಾಗಿ ಈ ಯೋಜನೆ ಫಲ ಪ್ರದವಾಗಿಸಲು ಬಿಡದೇ, ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ನೀಡದೇ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯೊಂದು ಹಳ್ಳ ಹಿಡಿಯುವಂತೆ ಮಾಡಲಾಗಿದೆ.

    ಈ ಸಂಬಂಧ ಮೆಸ್ಕಾಂ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಯೋಜನೆ ವಿಳಂಬ ಮತ್ತು ಕಳಪೆ ವಸ್ತುಗಳ ಬಳಕೆ ಮಾಡಲಾಗಿದೆ ಎಂದು ನೇರವಾಗಿ ಆರೋಪ ಮಾಡಿದ್ದರು. ಜೊತೆಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಆವೇಶ, ಕೇವಲ ಸಭೆಗೆ ಮಾತ್ರ ಸೀಮಿತವಾಯ್ತಾ ಎಂಬ ಅನುಮಾನ ಇದೀಗ ಮೂಡತೊಡಗಿದೆ.

    ಟೆಂಡರ್ ನಲ್ಲಿ ಉಲ್ಲೇಖಿಸಿರುವ ಸಾಮಾಗ್ರಿಗಳನ್ನು ಏಕೆ ಬಳಸಿಲ್ಲ. ಕಂಟ್ರಾಕ್ಟರ್ ಗೆ ಯಾರು ಕೇಳಬೇಕು. ಅದರಲ್ಲೂ ಸಾಮಾಗ್ರಿಗಳನ್ನು ಹಾಕದೇ, ಬಿಲ್ ಕೂಡ ಮಾಡಿಸಿಕೊಂಡಿದ್ದು, ನಿರಂತರ ಜ್ಯೋತಿ ಯೋಜನೆಯಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ವರದಿಯನ್ನು ನಿಮ್ಮ ಹಸ್ತಾಕ್ಷರ ಸಹಿತವಾಗಿ ನೀಡಿ ಎಂದು ಸೂಚನೆ ನೀಡಿದ್ದರು. ಆದರೆ ಸಭೆ ಕಳೆದು ಸುಮಾರು ಐದು ತಿಂಗಳು ಕಳೆಯುತ್ತಾ ಬಂದಿದಿದ್ದರೂ ಕೂಡ ಇದುವರೆಗೂ ಈ ಯೋಜನೆ ಫಲಪ್ರದವಾಗಿಲ್ಲ. ಇದನ್ನು ಸ್ವತಃ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಒಪ್ಪಿಕೊಳ್ಳುತ್ತಾರೆ.

    ಒಟ್ಟಿನಲ್ಲಿ ನಿರಂತರ ಜ್ಯೋತಿ ಯೋಜನೆಯ ಫೀಡರ್ ಖರೀದಿಯಲ್ಲಿಯೇ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಇದೀಗ ಕೇಳಿ ಬಂದಿದೆ. ಸರ್ಕಾರ ಅದರಲ್ಲೂ ಸಿ.ಎಂ. ತವರು ಜಿಲ್ಲೆಯಲ್ಲಿಯೇ ಯೋಜನೆಯೊಂದು ಹಳ್ಳ ಹಿಡಿದಿರುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದ್ದು, ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ. ಏನೇ ಆಗಲಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ತಮ್ಮ ಕ್ಷೇತ್ರದಲ್ಲಿಯೇ ಈ ರೀತಿಯ ಗಂಭೀರವಾದ ಆರೋಪ ಕೇಳಿ ಬಂದಿರುವುದಕ್ಕೆ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಇದನ್ನೂ ಓದಿ :ಭ್ರಷ್ಟಾಚಾರಿಗಳ ಪರ ಸಿಎಂ ನಿಂತಿದ್ದಾರೆ: ಎಎಪಿ ಆರೋಪ

  • ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಿದ ಅಧಿಕಾರಿಗಳು

    ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಿದ ಅಧಿಕಾರಿಗಳು

    ಹಾವೇರಿ: ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧ. ಪುರುಷನಿಗೆ 21 ಮತ್ತು ಮಹಿಳೆಗೆ ಮದುವೆಯಾಗಲು ಹಿಂದೂ ವಿವಾಹ ಕಾಯ್ದೆ ಪ್ರಕಾರ 18 ವರ್ಷ ವಯಸ್ಸಾಗಿರಬೇಕು. ಅದರೆ ಜಿಲ್ಲೆಯ ಸವಣೂರು ತಾಲೂಕಿನ ತೆಗ್ಗಿಹಳ್ಳಿಯ ಗ್ರಾಮದಲ್ಲಿ ಹದಿನಾರು ವರ್ಷದ ಬಾಲಕಿಗೆ ಮದುವೆ ಮಾಡಲು ಬಾಲಕಿಯ ಪೋಷಕರು ಸಿದ್ಧತೆ ನಡೆಸಿದ್ದರು. ಇದನ್ನು ಅರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ್ದಾರೆ.

    ಸವಣೂರು ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಯುವಕ ಮಂಜುನಾಥ ಭಜಂತ್ರಿ ಎಂಬ ಯುವಕನಿಗೆ ಆತನ ಮನೆಯವರು ಹಾವೇರಿ ನಗರದ 16 ವರ್ಷದ ಬಾಲಕಿಯೊಂದಿಗೆ ಮದುವೆ ಫಿಕ್ಸ್ ಮಾಡಿದ್ದರು. ಮಂಜುನಾಥನ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತ್ತು. ಇಂದು ತೆಗ್ಗಿಹಳ್ಳಿ ಗ್ರಾಮದಲ್ಲಿ ಮದುವೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. 16 ವರ್ಷದ ಬಾಲಕಿಗೆ ಮದುವೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಶಿಶು ಅಭಿವೃದ್ಧಿ ಅಧಿಕಾರಿಗಳು ಮಂಜುನಾಥನ ಮನೆಗೆ ಭೇಟಿ ನೀಡಿ ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧ. ಯಾವುದೇ ಕಾರಣಕ್ಕೂ ಹದಿನಾರು ವರ್ಷದ ಬಾಲಕಿಗೆ ಮದುವೆ ಮಾಡಲು ಬಿಡುವುದಿಲ್ಲ ಎಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಕಾನೂನು ಮೀರಿ ಮದುವೆ ಮಾಡಿಕೊಂಡರೆ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಮಂಜುನಾಥ್ ಮನೆಯವರಿಗೆ ಎಚ್ಚರಿಕೆ ನೀಡಿ ಅಧಿಕಾರಿಗಳು ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಹಾವೇರಿ ನಿರ್ದೇಶಕನಿಗೆ ದಾದಾಸಾಹೇಬ್ ಫಾಲ್ಕೆ ಜ್ಯೂರಿ ಪ್ರಶಸ್ತಿ

    ಮದುವೆ ಹಿನ್ನೆಲೆಯಲ್ಲಿ ನಡೆಯುವ ಕಾರ್ಯಗಳಿಗಾಗಿ ಬಾಲಕಿಯನ್ನು ಅದಾಗಲೇ ಯುವಕನ ಮನೆಗೆ ಕರೆದುಕೊಂಡು ಬರಲಾಗಿತ್ತು. ಇನ್ನೇನು ಒಂದು ದಿನ ಕಳೆದಿದ್ದರೆ ಬಾಲಕಿಗೆ ಆಕೆಯ ಮನೆಯವರು ಮದುವೆ ಮಾಡುತ್ತಿದ್ದರು. ಬಾಲಕಿಗೆ ಮದುವೆ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ವರ ಮಂಜುನಾಥನ ಮನೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಬಾಲ್ಯ ವಿವಾಹ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಾಲಕಿಗೆ ಮದುವೆ ಮಾಡುವುದಿಲ್ಲವೆಂದು ಬಾಲಕಿ ಮನೆಯವರಿಂದ ಅಧಿಕಾರಿಗಳು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ನಂತರ ಬಾಲಕಿಯನ್ನು ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಸೇರಿಸಲಾಗಿದೆ.

    ಯಾರೂ ಕೂಡ 18 ವರ್ಷ ತುಂಬದ ಹೆಣ್ಣು ಮಕ್ಕಳಿಗೆ ಮದುವೆ ಮಾಡಬಾರದು. ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧ. ಯಾರಾದರೂ ಬಾಲ್ಯ ವಿವಾಹ ಮಾಡುತ್ತಿರುವುದು ಕಂಡುಬಂದರೆ ಇಲಾಖೆ ಗಮನಕ್ಕೆ ತರುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  • ಬಸ್‍ಗಳಲ್ಲಿ ಕೊರೊನಾ ರೂಲ್ಸ್ ಬ್ರೇಕ್- ಖುದ್ದು ತಪಾಸಣೆಗಿಳಿದ ಬಿಎಂಟಿಸಿ ಅಧಿಕಾರಿಗಳು

    ಬಸ್‍ಗಳಲ್ಲಿ ಕೊರೊನಾ ರೂಲ್ಸ್ ಬ್ರೇಕ್- ಖುದ್ದು ತಪಾಸಣೆಗಿಳಿದ ಬಿಎಂಟಿಸಿ ಅಧಿಕಾರಿಗಳು

    ಬೆಂಗಳೂರು: ಬಿಎಂಟಿಸಿ ಬಸ್ ಗಳಲ್ಲಿ ಕೊರೊನಾ ನಿಯಮ ಪಾಲನೆ ಆಗದಿರುವುದನ್ನು ಮನಗಂಡ ಅಧಿಕಾರಿಗಳು, ಖುದ್ದು ಪರಿಶೀಲನೆಗೆ ಇಳಿದಿದ್ದಾರೆ.

    ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿ ಹೊರ ಹೋಗುವ ಪ್ರತಿ ಬಸ್ ಗಳಲ್ಲೂ ಪರಿಶೀಲನೆ ಮಾಡುತ್ತಿದ್ದು, ಪ್ರಯಾಣಿಕರು ನಿಯಮ ಪಾಲನೆ ಮಾಡುತ್ತಿದ್ದಾರೋ ಇಲ್ಲವೋ ಎಂದು ನೋಡಿ ಬಳಿಕ ಬಸ್ ಗಳನ್ನು ರೂಟ್ ಗಳಿಗೆ ಹೊರಡಲು ಅವಕಾಶ ನೀಡುತ್ತಿದ್ದಾರೆ.

    ಸರ್ಕಾರದ ಕೊರೊನಾ ನಿಯಮಾನುಸಾರ ಬಸ್ ಗಳಲ್ಲಿ ಶೇ.50ರಷ್ಟು ಸಾಮಥ್ರ್ಯದೊಂದಿಗೆ ಬಸ್ ಗಳಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಶೇ.50 ಕ್ಕಿಂತ ಹೆಚ್ಚು ಜನ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದರೆ, ಅಂತಹವರನ್ನು ಬಸ್ ನಿಂದ ಕೆಳಗಿಳಿಸಿ ಬೇರೆ ಬಸ್ ಗಳಲ್ಲಿ ಕಳುಹಿಸುವ ಮೂಲಕ ಕಡ್ಡಾಯ ನಿಯಮ ಪಾಲನೆಗೆ ಮುಂದಾಗಿದ್ದಾರೆ. ಬಸ್ ನಿರ್ವಾಹಕ ಮತ್ತು ಚಾಲಕರಿಗೂ ನಿಯಮ ಪಾಲನೆ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ.