ಬೀದರ್: ನಗರಸಭೆ ಅಧಿಕಾರಿಗಳು ಇದ್ದಾರೋ? ಸತ್ತಿದ್ದಾರೋ? ಜನರು ಪ್ರತಿ ದಿನ ನಾಯಿಗಳ ಹಾವಳಿಗೆ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿರುವುದು ಇವರ ಕಣ್ಣಿಗೆ ಕಾಣಿಸುತ್ತಿಲ್ಲವೆ?
ಇದು ಬೀದರ್ ನಗರದ ಮಂದಿ ಬೀದಿ ನಾಯಿ ನಿಯಂತ್ರಿಸಲು ವಿಫಲರಾದ ನಗರ ಸಭೆ ಅಧಿಕಾರಿಗಳಿಗೆ ಕೇಳುತ್ತಿರುವ ಪ್ರಶ್ನೆ.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗೋವುಗಳು ಮತ್ತು ಮನುಷ್ಯರಿಗೆ ನಾಯಿ ಭಯ ಶುರುವಾಗಿದ್ದು ಸಂಜೆಯಾಗುತ್ತಿದ್ದಂತೆ ಸಂಚಾರ ಮಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ನಾಯಿಗಳದ್ದೇ ದರ್ಬಾರ್ ಶುರುವಾಗಿದ್ದು 20 ರಿಂದ 30 ನಾಯಿಗಳು ಒಟ್ಟಿಗೆ ಸೇರಿ ಅಟ್ಯಾಕ್ ಮಾಡಿ ಗೋವುಗಳನ್ನು ಹಿಗ್ಗಾಮಗ್ಗಾ ಕಚ್ಚುತ್ತಿರುವ ದೃಶ್ಯ ನೋಡಿದ್ದರೆ ಎಂಥವರಿಗೂ ಮೈಜುಂ ಎನ್ನುತ್ತೆ.

ಬೀದರ್ ನಗರದ ಬಹುತೇಕ ಸ್ಥಳಗಳಲ್ಲಿ ನಾಯಿಗಳ ಸ್ವರಾಜ್ಯವಾಗಿದ್ದು 50 ರಿಂದ 100 ನಾಯಿಗಳ ಗುಂಪಿನ ದೃಶ್ಯ ನೋಡಿದರೆ ಎಂಥವರಿಗೆ ಈ ಕಡೆ ಹೋಗದೆ ಬೇಡಪ್ಪಾ ಎಂಬ ಭಯ ಶುರುವಾಗಿದೆ. ಈಗಾಗಲ್ಲೇ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಸಾರ್ವಜನಿಕರಿಗೆ ಗಂಭೀರವಾಗಿ ಕಚ್ಚಿದ್ದು ಈಗಲೇ ನಿಯಂತ್ರಣ ಹೇರದೇ ಇದ್ದರೆ ಮತ್ತಷ್ಟು ಮಂದಿ ನಾಯಿಗಳಿಗೆ ತುತ್ತಾಗುವ ಸಾಧ್ಯತೆಯಿದೆ.

ಸಮಸ್ಯೆಯ ಬಗ್ಗೆ ಶಾರ್ಹೇದ್ ಅಲಿ ಎಂಬುವರು ನಗರಸಭೆ ದೂರು ನೀಡಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಿದೆ ಎಂದು ಉತ್ತರ ನೀಡಿದ್ದಾರೆ. ಆದರೆ ನಾಯಿಗಳ ಹಾವಳಿ ಮಾತ್ರ ದಿನೇ ದಿನೇ ಹೆಚ್ಚುತ್ತಿದ್ದು, ನಗರಸಭೆ ಅಧಿಕಾರಿಗಳ ನಕಲಿ ಮಾಹಿತಿ ನೀಡಿ ನಿರ್ಲಕ್ಷ್ಯ ತೋರಿದ್ದಾರೆ.











