Tag: officers

  • ರಾತ್ರೋರಾತ್ರಿ ರಸ್ತೆಯಲ್ಲೇ ಕಾಂಪೌಂಡ್ ಕಟ್ಟಿದ ನಿವೃತ್ತ ಡಿಸಿಪಿ- ರಸ್ತೆಗಾಗಿ ಬೀದಿಗೆ ಬಂದ ಜನ

    ರಾತ್ರೋರಾತ್ರಿ ರಸ್ತೆಯಲ್ಲೇ ಕಾಂಪೌಂಡ್ ಕಟ್ಟಿದ ನಿವೃತ್ತ ಡಿಸಿಪಿ- ರಸ್ತೆಗಾಗಿ ಬೀದಿಗೆ ಬಂದ ಜನ

    ಬೆಂಗಳೂರು: ಅವರೆಲ್ಲಾ ಸುಮಾರು ವರ್ಷಗಳಿಂದ ಆ ರಸ್ತೆಯಲ್ಲಿ ಓಡಾಡುತ್ತಿದ್ದರು. ಆ ರಸ್ತೆ ಈ ಲೇಔಟ್ ಗೆಲ್ಲಾ ಮುಖ್ಯ ರಸ್ತೆಯಾಗಿತ್ತು. ಆದರೆ ಈಗ ಇದ್ದಕ್ಕಿದ್ದ ಹಾಗೆ ರಸ್ತೆಯನ್ನು ಬಂದ್ ಮಾಡಲಾಗಿದೆ. ರಸ್ತೆ ಪಕ್ಕದ ಸೈಟ್ ಕೊಂಡುಕೊಂಡಿರೋ ಪ್ರಭಾವಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಈಗ ಜನರ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ.

    ತಮ್ಮ ಕೆಲಸ ಕಾರ್ಯ ಬಿಟ್ಟು ಇವರೆಲ್ಲಾ ಇಲ್ಲಿ ಸೇರಿರೋದಕ್ಕೆ ಕಾರಣ ರಸ್ತೆ ಕಾಂಪೌಂಡ್. ಇವರು ಬೆಂಗಳೂರಿನ ಹೇರೋಹಳ್ಳಿಯ ವಿಘ್ನೇಶ್ವರ ಲೇಔಟ್ ನಿವಾಸಿಗಳು. ಹಲವು ದಿನಗಳಿಂದ ತಮ್ಮ ಪ್ರತಿನಿತ್ಯದ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದ ರಸ್ತೆಯಲ್ಲಿ ರಾತ್ರೋ ರಾತ್ರಿ ಕಾಂಪೌಂಡ್ ಎದ್ದಿತ್ತು. ಇದರಿಂದ ಕೆರಳಿದ ಜನ ತಾವೇ ಕಾಂಪೌಂಡ್ ಕೆಡವಿ ಹಾಕಿದರು.

    ನಿವೃತ್ತ ಡಿಸಿಪಿ ಎಲ್‍ಜಿ ಕೃಷ್ಣಪ್ಪ ಖರೀದಿಸಿರೋ ಈ ಸೈಟ್‍ನಲ್ಲಿ ಒಟ್ಟು ಎರಡು ರಸ್ತೆಗಳು ಬರುತ್ತವೆ. ಈ ಎರಡು ರಸ್ತೆಗಳನ್ನ ಮುಚ್ಚಿರೋ ಸೈಟ್ ಮಾಲೀಕರು ಓಡಾಡಕ್ಕೆ ರಸ್ತೆ ಬಿಡದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ ಅನ್ನೋದು ಜನರ ಆರೋಪ.

    ಈ ಬಗ್ಗೆ ಸ್ಥಳೀಯರು ಹಲವಾರು ಬಾರಿ ಬಿಬಿಎಂಪಿ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಯಾವ ಅಧಿಕಾರಿಯೂ ಸರಿಯಾಗಿ ಸ್ಪಂದಿಸಿಲ್ಲ. ಸ್ಥಳೀಯ ಕಾರ್ಪೋರೇಟರ್ ಸಹ ಸ್ಥಳೀಯರ ಮನವಿಗೆ ಸ್ಪಂದಿಸದ ಕಾರಣ ಇವತ್ತು ಲೇಔಟ್ ನಿವಾಸಿಗಳೇ ಕಾಂಪೌಂಡ್ ತೆರವುಗೊಳಿಸಿದರು. ತೆರವುಗೊಳಿಸಬೇಕಾದರೆ ಸ್ಥಳಕ್ಕೆ ಬಂದ ಮಾಲೀಕನ ಸಂಬಂಧಿಕರೊಬ್ಬರು ಸ್ಥಳೀಯರ ಜೊತೆ ಮಾತಿನ ಚಕಮಕಿ ನಡೆಸಿದರು.

    ನಮಗೆ ರಸ್ತೆ ಬಿಡುವ ತನಕ ಎಷ್ಟೇ ಕಾಂಪೌಂಡ್ ಹಾಕಿದರೂ ನಾವು ಕೆಡುವುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಆದರೆ ಸೈಟ್ ಮಾಲೀಕರು ಈ ಸೈಟ್ ನನ್ನದು, ರಸ್ತೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದಾರೆ.

  • ಶೌಚಾಲಯ ಕಟ್ಟಿಸಿಕೊಳ್ಳದ ಮನೆ ಮುಂದೆ ಪುರಸಭೆ ಅಧಿಕಾರಿಗಳ ಧರಣಿ

    ಶೌಚಾಲಯ ಕಟ್ಟಿಸಿಕೊಳ್ಳದ ಮನೆ ಮುಂದೆ ಪುರಸಭೆ ಅಧಿಕಾರಿಗಳ ಧರಣಿ

    ದಾವಣಗೆರೆ: ಶೌಚಾಲಯ ಕಟ್ಟಿಸಿಕೊಳ್ಳದ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ಮನೆ ಮುಂದೆ ಪುರಸಭೆ ಅಧಿಕಾರಿಗಳು ಕುಳಿತು ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ಮಲೆಬೆನ್ನೂರು ಗ್ರಾಮದ ಪುರಸಭೆ ವ್ಯಾಪ್ತಿಯ 4ನೇ ವಾರ್ಡ್ ನ ಕಾಲಭೈರವ ರಸ್ತೆಯಲ್ಲಿರುವ ರುದ್ರಗೌಡರ ಮನೆ ಮುಂದೆ ಅಧಿಕಾರಿಗಳು ಧರಣಿ ನಡೆಸಿದರು. ರುದ್ರಗೌಡರಿಗೆ ಈಗಾಗಲೇ ಮೂರು ತಿಂಗಳ ಹಿಂದೆಯೇ ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನ ಮಂಜೂರಾಗಿತ್ತು. ಆದರೆ ಮನೆಯಲ್ಲಿ ಮೂರು ತಿಂಗಳ ಬಾಣಂತಿ ಇರುವುದರಿಂದ ಶೌಚಾಲಯ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಮನೆಯಲ್ಲಿ ಬಾಣಂತಿ ಇದ್ದರೆ ಗುಂಡಿ ಅಗೆಯಬಾರದು ಎನ್ನುವ ಮೌಢ್ಯಕ್ಕೆ ಜೋತು ಬಿದ್ದ ರುದ್ರಗೋಡ ಶೌಚಾಲಯ ನಿರ್ಮಾಣ ಮಾಡಿಸಿಲ್ಲ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿ ಎಸ್.ಎನ್. ನಾಗರತ್ನ, ಕಂದಾಯ ಅಧಿಕಾರಿ ರಾಜು ಬಣಕಾರ್, ಆರೋಗ್ಯ ಅಧಿಕಾರಿ ಗುರುಪ್ರಸಾದ್ ಮತ್ತು ಪುರಸಭೆ ಸದಸ್ಯರು ರುದ್ರಗೌಡ ಮನೆ ಮುಂದೆ ಕುಳಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.

    ಅಧಿಕಾರಿಗಳು ಮತ್ತು ಸದಸ್ಯರು ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳಿದ್ದು, ವಾರ್ಡ್‍ವಾರು ಬಯಲು ಮುಕ್ತ ಶೌಚಾಲಯ ಮಾಡಲು ಸಂಕಲ್ಪ ಮಾಡಿದ್ದಾರೆ. ಈಗಾಗಲೇ 14ನೇ ವಾರ್ಡ್ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿದೆ. ಆದರೆ 4ನೇ ವಾರ್ಡ್ ನಲ್ಲಿ ರುದ್ರಗೌಡ ಮನೆಯಲ್ಲಿ ಶೌಚಾಲಯ ನಿರ್ಮಿಸಿದರೆ ಇಡೀ ವಾರ್ಡ್ ಬಯಲು ಮುಕ್ತ ಶೌಚಾಲವಾಗಲಿದೆ. ( ಇದನ್ನೂ ಓದಿ: ಎಳೇ ವಯಸ್ಸಿನಲ್ಲೇ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸ್ತಿದ್ದಾಳೆ ಬಸವನಬಾಗೇವಾಡಿಯ ಪೃಥ್ವಿ )

    ಕಳೆದ ಮೂರು ತಿಂಗಳಿನಿಂದ ರುದ್ರಗೌಡರ ಮನವೊಲಿಸಲು ಅಧಿಕಾರಿಗಳು ಮತ್ತು ಸದಸ್ಯರು ಯತ್ನಿಸಿ ವಿಫಲರಾಗಿದ್ದರು. ಆದ್ದರಿಂದ ಸತತ ಮೂರು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ್ದಾರೆ. ಪರಿಣಾಮ ರುದ್ರಗೌಡ ಮುಜುಗರಕ್ಕೆ ಒಳಗಾಗಿದ್ದಾರೆ. ಸಂಜೆ ವೇಳೆಗೆ ಮನೆಯಿಂದ ಹೊರಬಂದ ರುದ್ರಗೌಡ ಶೌಚಗೃಹ ನಿರ್ಮಾಣ ಕಾರ್ಯ ಆರಂಭಿಸುವ ಭರವಸೆ ನೀಡಿದ್ದಾರೆ. ಭರವಸೆ ದೊರೆತ ಬಳಿಕ ಅಧಿಕಾರಿಗಳು ಸಂಜೆ ಧರಣಿ ವಾಪಸ್ ಪಡೆದಿದ್ದಾರೆ. ( ಇದನ್ನೂ ಓದಿ: ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಮಾವ, ಮೈದುನನ ವಿರುದ್ಧ ದೂರು ನೀಡಿದ ಸೊಸೆ )

  • ಒಂದು ದಿನದ ನವಜಾತ ಗಂಡು ಶಿಶು ಹಾವೇರಿಯ ಚರಂಡಿಯಲ್ಲಿ ಪತ್ತೆ

    ಒಂದು ದಿನದ ನವಜಾತ ಗಂಡು ಶಿಶು ಹಾವೇರಿಯ ಚರಂಡಿಯಲ್ಲಿ ಪತ್ತೆ

    ಹಾವೇರಿ: ಆಗ ತಾನೆ ಜನಿಸಿದ ನವಜಾತ ಗಂಡು ಶಿಶು ಹಾವೇರಿ ನಗರದ ಪುರದ ಓಣಿಯ ಹಮ್ನಾಬಾದ್ ನಲ್ಲಿರುವ ಚರಂಡಿಯಲ್ಲಿ ಪತ್ತೆಯಾಗಿದೆ.

    ಬೆಳಗ್ಗೆ ಚರಂಡಿಯಲ್ಲಿ ಹಂದಿಗಳು ಎಳೆದಾಡುವ ವೇಳೆ ಶಂಷಾದ್ ಗುತ್ತಲ ಎಂಬ ಮಹಿಳೆ ನವಜಾತ ಶಿಶುವನ್ನ ರಕ್ಷಣೆ ಮಾಡಿದ್ದಾರೆ. ಈಗ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಯ ವೈದ್ಯರು ಐಸಿಯುನಲ್ಲಿ ದಾಖಲು ಮಾಡಿಕೊಂಡು ಶಿಶುವಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

    ನವಜಾತ ಶಿಶುವಿನ ತೂಕ 1 ಕೆ.ಜಿ 700 ಗ್ರಾಂ ತೂಕವಿದ್ದು, ಮಗು ಆರೋಗ್ಯವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಆದರೆ ಮಗುವನ್ನ ರಕ್ಷಣೆ ಮಾಡಿದ ಮಹಿಳೆ ಮಾತ್ರ ನನಗೆ ಮಗುವನ್ನ ನೀಡಿ ಎಂದು ಅಂಗಲಾಚಿದ್ದಾರೆ.

    ಜನಿಸಿದ ಒಂದೇ ದಿನದಲ್ಲಿ ಮಗುವನ್ನ ಚರಂಡಿಗೆ ಎಸೆದ ನಿಷ್ಕರುಣಿ ತಾಯಿಗೆ ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

  • ಪ್ಲೇ-ಸ್ಕೂಲ್‍ ಗೆ ಎಂಟ್ರಿಕೊಟ್ಟ ಚಿರತೆ: ವಿಡಿಯೋ ನೋಡಿ

    ಪ್ಲೇ-ಸ್ಕೂಲ್‍ ಗೆ ಎಂಟ್ರಿಕೊಟ್ಟ ಚಿರತೆ: ವಿಡಿಯೋ ನೋಡಿ

    ಮುಂಬೈ: ನಗರದ ಅಂಧೇರಿಯಲ್ಲಿರುವ ಶೇರ್-ಇ-ಪಂಜಾಬ್ ನ ಪ್ಲೇ-ಸ್ಕೂಲ್ ನಲ್ಲಿ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

    ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಬಾಲಕನೊಬ್ಬ ಚಿರತೆಯನ್ನು ನೋಡಿದ್ದಾನೆ ಹಾಗೂ ಜನರಿಗೆ ಚಿರತೆಯ ಬಗ್ಗೆ ಹೇಳಿದ್ದಾನೆ. ಅರಣ್ಯಾಧಿಕಾರಿಗಳು ಬರುವ ಮೊದಲು ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಶಾಲೆಯ ಸುತ್ತ ಬಲೆಯನ್ನು ಹಾಕಿ ಚಿರತೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು.

    ಶಾಲೆಯೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರಿಂದ ಸಿಸಿಟಿವಿಯ ಲೈವ್ ವಿಡಿಯೋದಿಂದ ಚಿರತೆಯನ್ನು ಕಂಡು ಹಿಡಿಯಲು ಸಾಧ್ಯವಾಗಿದೆ. ಮೊಬೈಲಿನಲ್ಲಿ ಸಿಸಿಟಿವಿ ದೃಶ್ಯ ಲೈವ್ ನೋಡಲು ಶಾಲೆಯ ಮುಖ್ಯ ಶಿಕ್ಷಕಿ ಅಧಿಕಾರಿಗಳಿಗೆ ಸಹಾಯ ಮಾಡಿದರು. ನಂತರ ಅಧಿಕಾರಿಯೊಬ್ಬರು ಶಾಲೆಯ ಹಿಂದಿನ ಕಾಂಪೌಂಡ್‍ನಿಂದ ಜಿಗಿದು ಶಾಲೆಯೊಳಗೆ ಚಿರತೆಯನ್ನು ಹುಡುಕಲು ಹೋಗಿದ್ದರು ಎಂದು ಪರಿಸರ ಕಾರ್ಯಕರ್ತರಾದ ಸುನೀಶ್ ಸುಬ್ರಮಣ್ಯಂ ತಿಳಿಸಿದ್ದಾರೆ.

    ಭಾನುವಾರ ಬೆಳಗ್ಗೆ ಸುಮಾರು 7.23 ಗಂಟೆಗೆ ನಮಗೆ ಕರೆ ಬಂದ ಕೂಡಲೇ ನಾವು ಸ್ಥಳಕ್ಕೆ ಹೋಗಿದ್ದೇವೆ. ನಾಸಿಕ್‍ನಿಂದ ಕೂಡ ಅರಣ್ಯಾಧಿಕಾರಿಗಳು ಬಂದಿದ್ದರು ಎಂದು ಎಂಐಡಿಸಿ ಪೊಲೀಸ್ ಸ್ಟೇಷನ್ ನ ಅಧಿಕಾರಿ ತಿಳಿಸಿದ್ದಾರೆ.

    2016ರ ಫೆಬ್ರವರಿಯಲ್ಲಿ ಬೆಂಗಳೂರಿಲ್ಲಿರುವ ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿ, ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿತ್ತು.

    https://www.youtube.com/watch?v=MRrQy0If424

    https://www.youtube.com/watch?v=veALHeGUpw0

    https://www.youtube.com/watch?v=DQRxPymraes

  • ರಾಯಚೂರಿನ ವಿವಿಧೆಡೆ ದಾಳಿ- 10 ಬಾಲ ಕಾರ್ಮಿಕರ ರಕ್ಷಣೆ

    ರಾಯಚೂರಿನ ವಿವಿಧೆಡೆ ದಾಳಿ- 10 ಬಾಲ ಕಾರ್ಮಿಕರ ರಕ್ಷಣೆ

    ರಾಯಚೂರು: ಬಾಲ ಕಾರ್ಮಿಕ ಯೋಜನಾ ಘಟಕದ ಅಧಿಕಾರಿಗಳು ರಾಯಚೂರಿನ ವಿವಿಧೆಡೆ ದಾಳಿ ನಡೆಸಿ 10 ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ.

    ರಾಯಚೂರು ಹೊರವಲಯದ ಯರಮಸರಸ್, ಮಂಚಲಾಪುರ, ಗದ್ವಾಲ್ ರಸ್ತೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಕೃಷಿ ಕೂಲಿ ಕೆಲಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ 4 ವಾಹನಗಳನ್ನು ಜಪ್ತಿ ಮಾಡಿದ್ದಾರೆ. 10 ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಿಂದ ಬಿಡುಗೊಳಿಸಿದ್ದಾರೆ.

    ವಶಪಡಿಸಿಕೊಳ್ಳಲಾಗಿರುವ ವಾಹನ ಮಾಲೀಕರ ವಿರುದ್ಧ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ.

  • ಅನ್ನದಾತರಿಗೆ ಪುಡಿಗಾಸು ಪರಿಹಾರ- ನದಿಯಲ್ಲಿ ನೀರಿಲ್ಲದಿದ್ರೂ ಸಮೃದ್ಧ ಬೆಳೆ ಎಂದು ಸರ್ಕಾರಕ್ಕೆ ವರದಿ

    ಅನ್ನದಾತರಿಗೆ ಪುಡಿಗಾಸು ಪರಿಹಾರ- ನದಿಯಲ್ಲಿ ನೀರಿಲ್ಲದಿದ್ರೂ ಸಮೃದ್ಧ ಬೆಳೆ ಎಂದು ಸರ್ಕಾರಕ್ಕೆ ವರದಿ

    ಹಾವೇರಿ: ಅಧಿಕಾರಿಗಳೇ ಅನ್ನದಾತರ ಬೆನ್ನಿಗೆ ಇರಿದ ಸುದ್ದಿ ಇದು. ಕಷ್ಟಪಟ್ಟು ಬೆಳೆ ಬೆಳೆದ ರೈತನಿಗೆ ಬರದಿಂದ ಬರೆ ಬಿತ್ತು. ಸರ್ಕಾರ ಕೊಡೋ ಅಲ್ಪ ಸ್ವಲ್ಪ ಪರಿಹಾರದಿಂದಾದ್ರೂ ಕೊಂಚ ಸುಧಾರಿಸಿಕೊಳ್ಳೋಣ ಎಂದರೆ ಅದಕ್ಕೆ ಕಲ್ಲು ಹಾಕಿದ್ದಾರೆ ಹಾವೇರಿ ಜಿಲ್ಲೆಯ ಹೊಣೆಗೇಡಿ ಅಧಿಕಾರಿಗಳು.

    ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಭೀಕರ ಬರಗಾಲ ತಾಂಡವವಾಡುತ್ತಿದೆ. ವರದಾ, ತುಂಗಭದ್ರಾ, ಕುಮುದ್ವಿತಿ ನದಿಗಳಲ್ಲಿ ನೀರಿಲ್ಲ. ಹೀಗಿದ್ದರೂ ಆಡೂರು, ಶೀಗಿಹಳ್ಳಿ, ಶಂಕ್ರಿಕೊಪ್ಪ ಗ್ರಾಮಗಳ ರೈತರು ವರದಾ ನದಿ ನೀರು ಬಳಸಿಕೊಂಡು ಸಮೃದ್ಧ ಬೆಳೆ ಬೆಳೆದಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ.

    ಅಷ್ಟೇ ಅಲ್ಲ ಬೆಳೆ ಪರಿಹಾರ ರೂಪದಲ್ಲಿ 50, 100, 500 ರೂಪಾಯಿ ಪರಿಹಾರ ಕೊಟ್ಟಿದೆ ಸರ್ಕಾರ. ಪ್ರತಿ ಎಕರೆಗೆ ಕನಿಷ್ಟ ಎರಡೂವರೆ ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿಯಾದರೂ ಬೆಳೆ ಹಾನಿ ಪರಿಹಾರ ಸಿಗಬೇಕು. ಕೆಲವೇ ಕೆಲವು ರೈತರಿಗೆ ಐದಾರು ಸಾವಿರ ರೂಪಾಯಿ ಪರಿಹಾರ ಬಂದಿದ್ದು ಬಿಟ್ರೆ ಉಳಿದ ಬಹುತೇಕ ರೈತರಿಗೆ ಎಕರೆಗೆ ಐವತ್ತು, ನೂರು ರೂಪಾಯಿಯಂತೆ ಪರಿಹಾರ ಹಣ ಜಮೆ ಆಗಿದೆ.

  • ಮನೆ ಬಾಗಿಲಲ್ಲೇ ತುಂಬಿ ಹರಿಯುತ್ತೆ ಕೃಷ್ಣಾ ನದಿಯ ಕಾಲುವೆ

    ಮನೆ ಬಾಗಿಲಲ್ಲೇ ತುಂಬಿ ಹರಿಯುತ್ತೆ ಕೃಷ್ಣಾ ನದಿಯ ಕಾಲುವೆ

    ಯಾದಗಿರಿ: ಇಲ್ಲಿನ ನಿವಾಸಿಗಳು ಮನೆ ಮುಂದೆ ಹರಿಯುವ ನೀರಿನಿಂದ ಭಯಪಡುವಂತಾಗಿದೆ. ಈ ಅಪಾಯದ ಕಾಲುವೆ ಮಕ್ಕಳ ಜೀವವನ್ನೇ ಬಲಿ ಪಡೆದಿವೆ. ಹೀಗಿದ್ದರು ಅಧಿಕಾರಿಗಳು ಈ ಸಮಸ್ಯೆ ಬಗೆ ಹರಿಸುವ ಗೋಜಿಗೆ ಹೋಗಿಲ್ಲ.

    ಸಾಮಾನ್ಯವಾಗಿ ಕಾಲುವೆಗಳು ಊರಾಚೆಗಿನ ಹೊಲದಲ್ಲೋ ರಸ್ತೆ ಬದಿಯಲ್ಲೋ ಹರಿಯೋದನ್ನ ನೋಡಿದ್ದೀವಿ. ಆದರೆ ಯಾದಗಿರಿಯ ಸುರಪುರ ತಾಲೂಕಿನ ಕೀರದಳ್ಳಿ ತಾಂಡಾದಲ್ಲಿ ಮನೆಗಳ ಮುಂದೆಯೇ ಕಾಲುವೆ ಹರಿಯುತ್ತಿದೆ. ಬಸವಸಾಗರ ಜಲಾಶಯದ ಎಡದಂಡೆ ಕಾಲುವೆ ಈ ತಾಂಡಾದ ಮನೆಗಳ ಮುಂಭಾಗದಲ್ಲಿದ್ದು, ಯಾವುದೇ ಸುರಕ್ಷಾ ಕ್ರಮಗಳಿಲ್ಲದ ಪರಿಣಾಮ ಇಲ್ಲಿನ ಜನರು ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ಇದೆ.

    ಮಕ್ಕಳು, ವೃದ್ಧರಂತೂ ಇಲ್ಲಿ ನಡೆದುಕೊಂಡು ಹೋಗಲು ಪ್ರಯಾಸ ಪಡುತ್ತಾರೆ. ಇನ್ನೂ ಈ ಹಿಂದೆ ಹಲವು ಮಕ್ಕಳು ಈ ಕಾಲುವೆಗೆ ಬಲಿಯಾಗಿದ್ದಾರಂತೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.

    ಇನ್ನೂ ಈ ಕಾಲುವೆ ನೀರು ಹರಿದು ಹೋಗುವ ಚಿಕ್ಕದಾದ ಸೇತುವೆ ಕೂಡ ಕಿತ್ತು ಹೋಗಿದೆ. 5 ವರ್ಷಗಳಿಂದ ಸೇತುವೆ ದುಸ್ಥಿತಿಯಲ್ಲಿದೆ. ಹೆಚ್ಚಿನ ನೀರು ಕಾಲುವೆಗೆ ಬಿಟ್ಟರೆ ಮನೆಗಳಿಗೆ ಹಾಗೂ ಊರಿನೊಳಗೆ ನೀರು ನುಗ್ಗುತ್ತಿವೆ. ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಭರವಸೆ ನೀಡುವ ಕೆಲಸ ಮಾಡಿದ್ದಾರೆ ಹೊರತು ಕಾಲುವೆಗೆ ತಡೆಗೊಡೆ ನಿರ್ಮಿಸುವ ಕೆಲಸ ಮಾಡಿಲ್ಲ.

  • ಈ ಊರಲ್ಲಿ ಎಲ್ಲಾ ಇದೆ ಆದ್ರೆ ಅದಕ್ಕಿಲ್ಲ ದಾಖಲೆ- ಗ್ರಾಮ ಹುಡುಕಿಕೊಡುವಂತೆ ಸ್ಥಳೀಯರ ಮನವಿ

    ಈ ಊರಲ್ಲಿ ಎಲ್ಲಾ ಇದೆ ಆದ್ರೆ ಅದಕ್ಕಿಲ್ಲ ದಾಖಲೆ- ಗ್ರಾಮ ಹುಡುಕಿಕೊಡುವಂತೆ ಸ್ಥಳೀಯರ ಮನವಿ

    ಕೋಲಾರ: ಅದೊಂದು ಊರಾದರೂ ಗ್ರಾಮ ಇದೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಬ್ರಿಟೀಷ್ ರೆವಿನ್ಯೂ ದಾಖಲೆಗಳಲ್ಲಿರುವ ಊರನ್ನು ತೋರಿಸುತ್ತಿದ್ದಾರೆ ಅಧಿಕಾರಿಗಳು. ಹೀಗಾಗಿ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ದೇವಾಲಯ, ಹಾಲಿನ ಡೈರಿ, ಸರ್ಕಾರಿ ಶಾಲೆ, ಮನೆಗಳು ಇವೆಲ್ಲಾ ಇದೆ ಅಂದಮೇಲೆ ಅದೊಂದು ಊರು ಅಲ್ವಾ. ಆದರೆ ಮಾಹಿತಿ ಹಕ್ಕು ಹೋರಾಟಗಾರ ರವಿ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಧ್ವನಿ ಎತ್ತಿದ್ದಾರೆ. ಇದಕ್ಕೆ ಕಾರಣ ದಾಖಲಾತಿ.

    ಕೋಲಾರ ತಾಲೂಕಿನ ಹೋಳೂರು ಬಳಿ ಇರುವ ಮಾರೇನಹಳ್ಳ ಗ್ರಾಮ ಭೌಗೋಳಿಕವಾಗಿದ್ದರೂ ಜಿಲ್ಲಾ ಪಂಚಾಯಿತಿ, ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ ಹೀಗೆ ಯಾವ ವ್ಯಾಪ್ತಿಯಲ್ಲೂ ದಾಖಲೆಗಳನ್ನೇ ಹೊಂದಿಲ್ಲ. ಹೀಗಾಗಿ ಈ ಊರಿಗೆ ಚರಂಡಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲ.

    ಮಾರೇನಹಳ್ಳಿ ಕಂದಾಯ ಇಲಾಖೆ ಸರ್ವೆ ನಂಬರ್ ನಲ್ಲಿರುವುದರಿಂದ ಗ್ರಾಮ ನಂದು ಎಂದು ಈ ಹಿಂದೆ ಖಾಸಗಿ ಜಮೀನಿನ ವ್ಯಕ್ತಿ ಒಬ್ಬರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಗ್ರಾಮದಲ್ಲಿನ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಕೂಡ ಖಾಸಗಿ ವ್ಯಕ್ತಿಗಳ ದರ್ಬಾರ್ ನಲ್ಲಿದೆ. ಈ ಬಗ್ಗೆ ಕಂದಾಯ ಇಲಾಖೆಯವರನ್ನು ಕೇಳಿದರೆ ಬ್ರಿಟೀಷ್ ರೆವಿನ್ಯೂ ದಾಖಲೆ ತೋರಿಸಿ ಮೈಸೂರು ರಾಜ್ಯದ ನಕ್ಷೆ ತೋರಿಸುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ಒಟ್ಟಿನಲ್ಲಿ ಪಂಚಾಯತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಗ್ರಾಮಸ್ಥರು ಪರಿತಪಿಸುವಂತಾಗಿದೆ.

     

  • ಪುರಸಭೆ ಕಟ್ಟಡದಲ್ಲಿನ ಭೂತದ ಕಾಟಕ್ಕೆ ಹೆದರಿ ಭಟ್ಕಳದಲ್ಲಿ ಅಧಿಕಾರಿಗಳಿಂದ ಹೋಮ!

    ಪುರಸಭೆ ಕಟ್ಟಡದಲ್ಲಿನ ಭೂತದ ಕಾಟಕ್ಕೆ ಹೆದರಿ ಭಟ್ಕಳದಲ್ಲಿ ಅಧಿಕಾರಿಗಳಿಂದ ಹೋಮ!

    ಕಾರವಾರ: ಪುರಸಭೆ ವಾಣಿಜ್ಯ ಕಟ್ಟಡಕ್ಕೆ ಭೂತದ ಕಾಟವಿದೆ ಎಂದು ತಿಳಿದು ಅಧಿಕಾರಿಗಳು ಹಾಗೂ ವರ್ತಕರು ಸೇರಿ ವಾಣಿಜ್ಯ ಕಟ್ಟಡದಲ್ಲಿ ಹೋಮ ಮಾಡಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನೆಡೆದಿದೆ.

    ಕಳೆದ ಸೆಪ್ಟೆಂಬರ್ 14 ರಂದು ಭಟ್ಕಳ ಪುರಸಭೆಯು ವಾಣಿಜ್ಯ ಮಳಿಗೆ ತೆರವು ವೇಳೆಯಲ್ಲಿ ತೆರವುಗೊಳಿಸದಂತೆ ಖಂಡಿಸಿ ರಾಮಚಂದ್ರ ನಾಯ್ಕ ಎಂಬ ವರ್ತಕರೊಬ್ಬರು, ಇದೇ ಕಟ್ಟಡದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಒಂದು ತಿಂಗಳಿಂದ ಈ ಕಟ್ಟಡದಲ್ಲಿ ಸಾಕಷ್ಟು ಸಮಸ್ಯೆಗಳು ಹೆಚ್ಚಾದ್ದರಿಂದಾಗಿ ಪುರಸಭೆ ಅಧಿಕಾರಿಗಳು ಹಾಗೂ ವರ್ತಕರು ಹೋಮದ ಮೊರೆಹೋಗಿದ್ದರು.

    ಪುರಸಭೆ ವಾಣಿಜ್ಯ ಕಟ್ಟಡದ ನೆಲಮಾಳಿಗೆಯಲ್ಲಿ ಹೋಮ ಹವನ ಮಾಡಿಸಿದ್ದಾರೆ. ಇದರ ಜೊತೆಯಲ್ಲಿ ಮೂರು ದಿನಗಳ ಕಾಲ ನಾಗಾರಾಧನೆ ನೆರವೇರಲಿದೆ. ಇನ್ನು ಈ ಕುರಿತು ಜನರೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಮೃತ ವ್ಯಕ್ತಿಗೆ ಪರಿಹಾರ ಕೊಡದೇ ವಾಣಿಜ್ಯ ಕಟ್ಟಡದಲ್ಲಿ ಪೂಜೆ ಮಾಡಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

    ಬಹಳ ವರ್ಷಗಳಿಂದ ಈ ಕಟ್ಟಡದಲ್ಲಿ ಸಮಸ್ಯೆಯಿದ್ದು, ಇದರ ಪರಿಹಾರಕ್ಕಾಗಿ ನಮ್ಮ ಸ್ವಂತ ಖರ್ಚಿನಿಂದ ಈ ಪೂಜೆ ಮಾಡಿಸಲಾಗುತ್ತಿದೆ ಎಂದು ಪುರಸಭಾ ಅಧಿಕಾರಿ ವೆಂಕಟೇಶ್ ನಾವುಡ ತಿಳಿಸಿದ್ದಾರೆ.

     

  • ರೈತರಿಗೆ ಸಿಗಬೇಕಾದ ಪರಿಹಾರದ ಹಣವನ್ನು ಹಂಚಿಕೊಂಡ ಅಧಿಕಾರಿಗಳು!

    ರೈತರಿಗೆ ಸಿಗಬೇಕಾದ ಪರಿಹಾರದ ಹಣವನ್ನು ಹಂಚಿಕೊಂಡ ಅಧಿಕಾರಿಗಳು!

    ರಾಯಚೂರು: ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸೋದು ಅಷ್ಟರಲ್ಲೇ ಇದೆ. ಆದರೆ ಹಾಗೂ ಹೀಗೂ ಕೊಡುವ ಪರಿಹಾರವೂ ಕೂಡ ರೈತರಿಗೆ ತಲುಪುತ್ತಿಲ್ಲ. ಒಂದೆಡೆ ಅಧಿಕಾರಿಗಳು ವಿಲನ್ ಆದರೆ ಮತ್ತೊಂದೆಡೆ ಪರಿಹಾರದ ಮೊತ್ತದಲ್ಲೂ ರಾಜಕೀಯ ಆರೋಪ ಕೇಳಿ ಬಂದಿದೆ.

    ರಾಯಚೂರು ನಗರದ ಶಾಸಕ ಡಾ. ಶಿವರಾಜ್ ಪಾಟೀಲ್ ಅವರ ನಿಸಹಾಯಕತೆಯ ಮಾತುಗಳಿವು. ಇಲ್ಲಿ ಶಾಸಕರ ಹೆಸರನ್ನು ಶಿವರಾಜ್ ಎಂದು ಬದಲಾಯಿಸಿ 32 ಎಕರೆ ಜಮೀನಿನ ಪರಿಹಾರದ ಮೊತ್ತವನ್ನು ಅಧಿಕಾರಿಗಳು ಜೇಬಿಗಿಳಿಸಿದ್ದಾರೆ. ಶಾಸಕರನ್ನೇ ಶಿವರಾಜ್ ಮಾಡಿ ಜಮೀನಿನ ಮೇಲೆ ದುಡ್ಡು ಹೊಡೆದ ಅಧಿಕಾರಿಗಳ ಕಥೆ ಇಲ್ಲಿಗೆ ನಿಲ್ಲುವುದಿಲ್ಲ.

    110 ರೈತರಿಗೆ ಬೆಳೆ ಹಾನಿ ಪರಿಹಾರ ಬಂದರೆ 10 ಜನರಿಗೆ ಮಾತ್ರ ಪರಿಹಾರ ವಿತರಣೆ ಆಗುತ್ತಂತೆ. ಉಳಿದ ಹಣವನ್ನು ಅಧಿಕಾರಿಗಳೇ ಹಂಚಿಕೊಳ್ಳುತ್ತಾರೆ. ಇದು ಇಂದು ನಿನ್ನೆಯ ಮಾತಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿರುವುದೇ ಹೀಗೆ ಎಂದು ಶಾಸಕರೇ ಅಸಹಾಯಕತೆ ತೋಡಿಕೊಳ್ಳುತ್ತಾರೆ. ಆ ಮೂಲಕ ಲಂಚ ಕೊಟ್ಟರೆ ಮಾತ್ರ ಪರಿಹಾರ ಎಂಬ ಸ್ಥಿತಿ ರಾಯಚೂರಿನಲ್ಲಿದೆ ಎನ್ನುವುದು ನಿಜವಾಗಿದೆ.

    ರಾಯಚೂರಿನಲ್ಲಿ ಬೆಳೆ ಪರಿಹಾರದ ಹಣವನ್ನು ಅಧಿಕಾರಿಗಳು ನುಂಗಿದರೆ, ಇತ್ತ ದಾವಣಗೆರೆಯಲ್ಲಿ ಪರಿಹಾರದ ಮೊತ್ತ ವಿತರಣೆಯಲ್ಲಿ ರಾಜಕೀಯ ಮೇಲಾಟ ನಡೆದಿದೆಯಂತೆ. ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತದ ಮೇಲೆ ಪ್ರ್ರಭಾವ ಬೀರಿ ತಮಗೆ ಬೇಕಾದವರಿಗೆ ಹೆಚ್ಚು ಪರಿಹಾರ, ಉಳಿದವರಿಗೆ ಕನಿಷ್ಟ ಪರಿಹಾರ ಮೊತ್ತ ವಿತರಿಸುತ್ತಿದ್ದಾರೆ ಎಂದು ಕೆಲ ಸಂತ್ರಸ್ಥರು ಆರೋಪಿಸುತ್ತಿದ್ದಾರೆ.

    ಮಳೆ ಬಂದರೂ ಕಷ್ಟ, ಬಾರದಿದ್ದರೂ ನಷ್ಟ. ಪರಿಹಾರ ಕೊಟ್ಟರು ಅದು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎನ್ನುವುದೇ ಡೌಟ್. ಏನೇ ಆದರೂ ಯಾವ ಸರ್ಕಾರ ಇದ್ದರೂ ನಮ್ಮ ಅನ್ನದಾತರ ಸ್ಥಿತಿ ಮಾತ್ರ ಸುಧಾರಿಸುವ ಲಕ್ಷಣವೇ ಕಾಣಿಸುತ್ತಿಲ್ಲ.