Tag: officers

  • ಕೊಪ್ಪಳದಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ ಆರ್ ಟಿಓ ಅಧಿಕಾರಿಗಳ ಹಗಲು ದರೋಡೆ!

    ಕೊಪ್ಪಳದಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ ಆರ್ ಟಿಓ ಅಧಿಕಾರಿಗಳ ಹಗಲು ದರೋಡೆ!

    ಕೊಪ್ಪಳ: ಕೂಕನಪಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ತಪಾಸಣೆ ನೆಪದಲ್ಲಿ ಆರ್ ಟಿಓ ಅಧಿಕಾರಿಗಳು ಹಗಲು ದರೋಡೆ ನಡೆಸುತ್ತಿದ್ದಾರೆ.

    ಕೊಪ್ಪಳ ತಾಲೂಕಿನ ಕೂಕನಪಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಆರ್ ಟಿಒ ಅಧಿಕಾರಿಗಳು ತಪಾಸಣೆ ನೆಪದಲ್ಲಿ ಲೂಟಿ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಗಂಭೀರವಾಗಿ ಕೇಳಿಬರುತ್ತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಪ್ರತಿಯೊಂದು ಲಾರಿಗಳನ್ನು ನಿಲ್ಲಿಸಿ ದಾಖಲಾತಿ ತಪಾಸಣೆ ನೆಪದಲ್ಲಿ ಚಾಲಕರಿಂದ ರಾಜಾರೋಷವಾಗಿ ಹಣ ಲೂಟಿ ಮಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿವೆ.

    ಆರ್ ಟಿಓ ಅಧಿಕಾರಿಗಳು ಎಲ್ಲಾ ದಾಖಲೆ ಸರಿ ಇದ್ದರೂ ಪ್ರತಿಯೊಬ್ಬ ಚಾಲಕ ಹಣ ಕೊಟ್ಟು ಹೋಗಬೇಕು ಎಂಬ ಅಲಿಖಿತ ನಿಯಮ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಹಣ ಕೊಡುವುದಕ್ಕೆ ನಿರಾಕರಿಸುವ ಲಾರಿ ಚಾಲಕರ ವಿರುದ್ಧ ಇಲ್ಲ ಸಲ್ಲದ ಪ್ರಕರಣ ದಾಖಲಿಸಿ ತೊಂದರೆ ನೀಡುತ್ತಿದ್ದಾರೆ ಎನ್ನಲಾಗಿದೆ.

  • ಪ್ರತ್ಯೇಕ ಎರಡು ಕಡೆ ಐಟಿ ದಾಳಿ – 10 ಕೋಟಿ ನಗದು, 50ಕೆಜಿ ಚಿನ್ನ ವಶ

    ಪ್ರತ್ಯೇಕ ಎರಡು ಕಡೆ ಐಟಿ ದಾಳಿ – 10 ಕೋಟಿ ನಗದು, 50ಕೆಜಿ ಚಿನ್ನ ವಶ

    ಲಕ್ನೋ: ಆದಾಯ ತೆರಿಗೆ ಇಲಾಖೆ ನಗರದಲ್ಲಿ ಎರಡು ಕಡೆ ದಾಳಿ ಮಾಡಿದ್ದು, ಬರೋಬ್ಬರಿ 50 ಕೆಜಿ ಚಿನ್ನ ಮತ್ತು 10 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಉತ್ತರಪ್ರದೇಶದ ಲಕ್ನೋದಲ್ಲಿ ಐಟಿ ದಾಳಿ ನಡೆದಿದೆ. ಕನ್ಹೈಯ್ ಲಾಲ್ ರಸ್ತೋಗಿ ಮತ್ತು ಸಂಜಯ್ ರಸ್ತೋಗಿ ಅವರ ಆಸ್ತಿ ಮತ್ತು ರಾಜ ಬಜಾರ್ ಮೇಲೆ ಐಟಿ ಅಧಿಕಾರಿಗಳು ಸತತ 36 ಗಂಟೆಗಳ ಕಾಲ ತನಿಖೆ ಮಾಡಿದ್ದಾರೆ. ಐಟಿ ದಾಳಿಗೆ ಒಳಗಾದ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಚಿನ್ನದ ವ್ಯಾಪಾರಿಯಾಗಿದ್ದು, ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಬೆಲೆ ಸುಮಾರು 16 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೇ ರಸ್ತೋಗಿ ಕುಟುಂಬದವರು ಹೆಸರಿನಲ್ಲಿರುವ 98 ಕೋಟಿ ಆಸ್ತಿಯ ದಾಖಲೆಗಳನ್ನು ವಶಪಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

    ಐಟಿ ಇಲಾಖೆಗೆ ರಸ್ತೋಗಿ ಕುಟುಂಬ ಬಡ್ಡಿ ವ್ಯವಹಾರ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭಿಸಿತ್ತು. ಮಾಹಿತಿ ಆಧಾರದ ಮೇರೆಗೆ ಲಕ್ನೋ ಮತ್ತು ಅಲಹಬಾದ್ ನ ಐಟಿ ಇಲಾಖೆ ಆಡಿಟ್ ರವಿ ಮಲ್ಹೋತ್ರ ಅವರ ನೇತೃತ್ವದಲ್ಲಿ ದಾಳಿ ಮಾಡಿದೆ.

    ಕನ್ಹೈಯಾ ಲಾಲ್ ರಸ್ತೋಗಿ ಮತ್ತು ಆತನ ಪುತ್ರನ ಮನೆಯಲ್ಲಿ 8.08 ಕೋಟಿ ನಗದು ಹಾಗೂ 50 ಕೆಜಿ ಚಿನ್ನದ ಬಿಸ್ಕೆಟ್ ಮತ್ತು 2 ಕೆಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಸಂಜಯ್ ರಸ್ತೋಗಿ ಮನೆಯಲ್ಲಿ 1.13 ಕೋಟಿ ಹಣ ಮತ್ತು 11.64 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

    ಕನ್ಹೈಯಾ ಲಾಲ್ ರಸ್ತೋಗಿ ಪತ್ನಿ ಅನಿತಾ ರಸ್ತೋಗಿ, ಮಕ್ಕಳಾದ ಉಮಾಂಗ್ ಮತ್ತು ತಾರಾಂಗ್ ರಸ್ತೋಗಿ ಹಾಗೂ ಇತರೆ ಸಂಬಂಧಿಕರನ್ನು ಒಳಗೊಂಡಂತೆ ಅನೇಕ ರಿಯಲ್ ಎಸ್ಟೆಟ್ ಕಂಪೆನಿಗಳು, ಫೈನಾನ್ಸ್ ಮತ್ತು ಚಿನ್ನದ ವ್ಯಾಪಾರ ಮಾಡುತ್ತಿದ್ದರು ಎಂದು ಐಟಿ ಇಲಾಖೆಯ ವಕ್ತಾರ ಜಯಂತ್ ವರ್ಮಾ ತಿಳಿಸಿದ್ದಾರೆ.

  • ಕೆಸಿ ವ್ಯಾಲಿ ಮೂಲಕ ಕೋಲಾರಕ್ಕೆ ಬೆಂಗ್ಳೂರಿನ ನೊರೆ ನೀರು!

    ಕೆಸಿ ವ್ಯಾಲಿ ಮೂಲಕ ಕೋಲಾರಕ್ಕೆ ಬೆಂಗ್ಳೂರಿನ ನೊರೆ ನೀರು!

    ಕೋಲಾರ: ಬರದ ನಾಡಿಗೆ ಕೋರಮಂಗಲ -ಚಲ್ಲಘಟ್ಟ ಕಣಿವೆ(ಕೆಸಿ ವ್ಯಾಲಿ) ಮೂಲಕ ಜೂನ್ ತಿಂಗಳಿನಲ್ಲಿ ನೀರು ಹರಿದು ಬಂದಾಗ ರೈತರು ಸಂಭ್ರಮಿಸಿದ್ದರು. ಆದರೆ ಈ ಸಂಭ್ರಮ ಒಂದೇ ತಿಂಗಳಿನಲ್ಲಿ ಕಮರಿ ಹೋಗಿದ್ದು ಬಂದ ಬೆಳ್ಳಂದೂರು-ವರ್ತೂರು ಕೆರೆಯಲ್ಲಿ ಸೃಷ್ಟಿಯಾಗಿದ್ದ ನೊರೆ ಈಗ ಲಕ್ಷ್ಮೀಸಾಗರ ಕೆರೆಯಲ್ಲೂ ಕಾಣಿಸಿದೆ.

    ಕೋಲಾರ ತಾಲೂಕು ಲಕ್ಷ್ಮೀಸಾಗರ ಕೆರೆ ಹಾಗೂ ಸುತ್ತಮುತ್ತಲ ಗಾಳಿಯಲ್ಲಿ ನೊರೆ ಹಾರಾಡುತ್ತಿದೆ. ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಸಂಸ್ಕರಣ ಮಾಡದೇ ಹರಿಸದ ಕಾರಣ ನೊರೆ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

    ಕೋಲಾರಕ್ಕೆ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಹರಿಸಲಾಗುತ್ತಿರುವ ಮಾರಕ ನೊರೆ ಮಿಶ್ರಿತ ನೀರನ್ನು ಅಧಿಕಾರಿಗಳು ತಕ್ಷಣವೇ ನಿಲ್ಲಿಸಿದ್ದಾರೆ. ಸದ್ಯ ಮಲಿನವಾದ ನೊರೆ ನೀರನ್ನು ಹರಿಸುತ್ತಿರುವ ಪರಿಣಾಮ ಕೋಲಾರ ಜಿಲ್ಲೆಯ ಅಂತರ್ಜಲ ಹಾಗೂ ಕೆರೆಯ ನೀರು ಹಾಳಾಗುವ ಆತಂಕ ಎದುರಾಗಿದೆ.

    ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದು, ಈ ಕೆಸಿ ವ್ಯಾಲಿ ತ್ಯಾಜ್ಯ ನೀರು ಬೇಡವೇ ಬೇಡ. ಈ ನೀರಿನಿಂದ ಕೆರೆಯ ಜಲಚರಗಳು ಹಾಗೂ ಪ್ರಾಣಿಗಳು ಸಾಯುವ ಆತಂಕ ಸೃಷ್ಟಿಯಾಗಿದೆ. ನಮಗೆ ಯಾವುದಾದರೂ ನದಿ ಮೂಲದ ನೀರನ್ನು ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.

    1400 ಕೋಟಿ ರೂ. ವೆಚ್ಚದಲ್ಲಿ ಕೋಲಾರ ಜಿಲ್ಲೆಯ 130 ಕೆರೆಗಳನ್ನು ತುಂಬಿಸುವ ಯೋಜನೆ ಸಿಕೆ ವ್ಯಾಲಿ ಆಗಿದ್ದು, ಕಳೆದ ಒಂದುವರೆ ವರ್ಷದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆಗೆ ಅಡಿಗಲ್ಲು ಹಾಕಿ, ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ರು. ಜೂನ್ 2 ರಂದು ಕೆಸಿ ವ್ಯಾಲಿ ಯೋಜನೆಯ ನೀರು ಲಕ್ಷ್ಮೀ ಸಾಗರ ಕೆರೆಯನ್ನು ಪ್ರವೇಶಿಸಿತ್ತು.

  • ಜಿಟಿಡಿ ಬಾಯಲ್ಲಿ ಅಶ್ಲೀಲ ಪದ ಪ್ರಯೋಗ – ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

    ಜಿಟಿಡಿ ಬಾಯಲ್ಲಿ ಅಶ್ಲೀಲ ಪದ ಪ್ರಯೋಗ – ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

    ಮೈಸೂರು: ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಅವ್ಯಾಚ ಶಬ್ದ ಪ್ರಯೋಗ ಮಾಡಿದ್ದು, ನಿಯಮಗಳ ಅನುಸಾರ ಕಾರ್ಯನಿರ್ವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

    ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರಕೊಪ್ಪಲಿನ ಮೈದಾನದಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ತಮ್ಮ ಅನುಭವ ಬಿಚ್ಚಿಟ್ಟ ಅವರು, ಅಧಿಕಾರಿಗಳು ಸಾರ್ವಜನಿಕರ ಜಮೀನು ಖಾತೆ ಮಾಡಿಲು ಮನವಿ ಮಾಡಿದರೆ ಸಾವಿರ ಕಥೆ ಹೇಳಿ ಲಂಚ ಕೇಳುತ್ತಾನೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಹ ಒಂದು ಖಾತೆಗಾಗಿ ಒಂದು ಲಕ್ಷ ರೂ. ಲಂಚ ಕೇಳಿದ್ದಾನೆ ಎಂದು ಏಕವಚನ ಪ್ರಯೋಗ ಮಾಡಿದರು.

    ಇದೇ ವೇಳೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳ ವರ್ತನೆ ಬಗ್ಗೆ ಕಿಡಿಕಾರಿದ ಅವರು, ಹಿಂದಿನ ಸರ್ಕಾರ ಇದ್ದಾಗ ಅವರು ಹೇಳಿದಂತೆ ಕುಣಿದಿದ್ದೀರಿ, ತಪ್ಪುಗಳನ್ನು ಮಾಡಿದ್ದೀರಿ. ಈಗ ನಿಮ್ಮ ವರ್ತನೆ ಬದಲಾಗದಿದ್ದರೆ ನಿಮಗೆ ಉಳಿಗಾಲವಿಲ್ಲ. ನಾನೂ ನಿಮಗೆ ತೊಂದರೆ ಕೊಡುವುದಿಲ್ಲ. ನೀವು ಬದಲಾಗಬೇಕು ಅಷ್ಟೆ. ಕ್ಷೇತ್ರ ವ್ಯಾಪ್ತಿಯಲ್ಲಿ ವಸತಿ ಇಲ್ಲದ ಎಲ್ಲಾ ಜನರ ಸರ್ವೇ ಕಾರ್ಯವನ್ನ ಈ ತಿಂಗಳ ಕೊನೆ ವೇಳೆಗೆ ಪಟ್ಟಿ ತಯಾರಿಸಿ ಮಾಹಿತಿ ನೀಡಿ ಎಂದು ವೇದಿಕೆಯಲ್ಲೇ ಸೂಚನೆ ನೀಡಿದರು.

    ತಮಗೆ ನೀಡಿರುವ ಉನ್ನತ ಶಿಕ್ಷಣ ಇಲಾಖೆ ಖಾತೆ ಸಮುದ್ರದಂತಹ ಖಾತೆ. ಈ ಖಾತೆಯಲ್ಲಿ ನಾನೂ ಪಾಸಾಗ ಬೇಕಾದರೆ ಕ್ಷೇತ್ರದ ಜನರ ಸಹಕಾರ ಬೇಕು. ಮೊದಲಿನಂತೆ ಮದುವೆ, ಸಾವು, ನಾಮಕರಣ ಎಲ್ಲಾ ಕಾರ್ಯಕ್ರಮಕ್ಕೆ ಬರುವುದಕ್ಕೆ ಆಗುವುದಿಲ್ಲ. ಎಲ್ಲಾ ಕಾರ್ಯಕ್ರಮಕ್ಕೆ ಬರುತ್ತ ಕುಳಿತರೆ ಖಾತೆಯಲ್ಲಿ ನಾನೂ ಫೇಲ್ ಆಗುತ್ತೇನೆ. ನಿಮ್ಮ ಕಾರ್ಯಕ್ರಮಗಳಿಗೆ ನನ್ನ ಮಗ ಅಥವಾ ಪತ್ನಿ ಬರುತ್ತಾರೆ. ನನಗೆ ಸಹಕಾರ ಕೊಡಿ ಎಂದು ಮನವಿ ಮಾಡಿದರು.

    https://www.youtube.com/watch?v=jVEnumeRcKA

    https://www.youtube.com/watch?v=Je5bZkJ7vf4

  • ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಿಂದ ಅಕ್ರಮ: ಶಾಸಕ ದೇವಾನಂದ ತರಾಟೆ

    ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಿಂದ ಅಕ್ರಮ: ಶಾಸಕ ದೇವಾನಂದ ತರಾಟೆ

    ವಿಜಯಪುರ: ರೈತ ಸಂಪರ್ಕ ಕೇಂದ್ರವೊಂದಕ್ಕೆ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರು ದಿಢೀರ್ ಭೇಟಿ ನೀಡಿದ್ದು, ಅಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆದಿದ್ದಾರೆ.

    ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಶೋಷಣೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಶಾಸಕ ದೇವಾನಂದ ಅವರು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ್ದು, ಅಕ್ರಮ ಅರಿತು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

    ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸಬೇಕಾಗಿದ್ದ ಸಲಕರಣೆಗಳನ್ನು ಖಾಸಗಿ ಜಮೀನಿನಲ್ಲಿ ಇಡಲಾಗಿದೆ ಎನ್ನುವ ಮಾಹಿತಿಯನ್ನು ಶಾಸಕ ದೇವಾನಂದ ಪಡೆದುಕೊಂಡಿದ್ದರು. ಹೀಗಾಗಿ ಅಲ್ಲಿಗೇ ಭೇಟಿ ನೀಡಿ, ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಬೀಜ, ಔಷಧಿ ಮತ್ತು ಡೀಸೆಲ್ ಪಂಪ್‍ಸೆಟ್ ಎಂಜಿನ್ ಪತ್ತೆ ಹಚ್ಚಿದ್ದಾರೆ. ಅಧಿಕಾರಿಗಳು ಡೀಸೆಲ್ ಎಂಜಿನ್ ಯಾರಿಗೂ ಗೊತ್ತಾಗಬಾರದು ಎಂದು ಕಟ್ಟಿಗೆ ಬಾಕ್ಸ್‍ನಲ್ಲಿ ಇಟ್ಟಿದ್ದರು. ಕಟ್ಟಿಗೆ ಬಾಕ್ಸ್ ಒಡೆದು ಅಧಿಕಾರಿಗಳ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಈ ವೇಳೆ ಯಾವುದೇ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸದೇ ಇರುವುದಕ್ಕೆ ಶಾಸಕರು ಅಸಮಾಧಾನ ಹೊರಹಾಕಿದರು.

    ಅಧಿಕಾರಿಗಳ ಅಕ್ರಮ ಸಂಗ್ರಹಣೆ ಆರೋಪದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ದೇವಾನಂದ ಚವ್ಹಾಣ ಅವರು, ಅಧಿಕಾರಿಗಳ ಅಕ್ರಮದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದು. ಅಲ್ಲದೇ, ಅಧಿಕಾರಿಗಳ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ಶಾಸಕರು ಹೇಳಿದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಚಾಮರಾಜನಗರ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ವರದಿ ಕೇಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು ಸಿಎಂ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಚಾಮರಾಜನಗರ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ವರದಿ ಕೇಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು ಸಿಎಂ

    ಚಾಮರಾಜನಗರ: ಪಬ್ಲಿಕ್ ಟಿವಿಯಲ್ಲಿ ಬಿತ್ತರವಾದ ಚಾಮರಾಜನಗರ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ವರದಿಗೆ ರಾಜ್ಯ ಸರ್ಕಾರ ಎಚ್ಚೆತ್ತು ಈಗ ಉನ್ನತ ಅಧಿಕಾರಿಗಳಿಂದ ವರದಿ ಕೇಳಿದೆ.

    ಬುಧವಾರ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಆಸ್ಪತ್ರೆಯ ಅವ್ಯವಸ್ಥೆ ಸುದ್ದಿಯನ್ನು ವೀಕ್ಷಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ. ಶ್ರೀನಿವಾಸ್‍ ಗೌಡ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಶ್ರೀನಿವಾಸ್‍ಗೌಡ ಅವರು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿನ ಅವ್ಯಸ್ಥೆಯ ವರದಿಯನ್ನು ಆರೋಗ್ಯ ಸಚಿವರ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸುವುದಾಗಿ ಹೇಳಿದ್ದಾರೆ.

    ರೋಗಿಗಳಿಗೆ ಮಲಗಲು ಬೆಡ್ ಮತ್ತು ಕುಳಿತುಕೊಳ್ಳಲು ಕುರ್ಚಿ ಇಲ್ಲದೆ ನೆಲದ ಮೇಲೆ ಮಲಗುವ ಮತ್ತು ಕೂರುವ ಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆಯನ್ನೂ ನೀಡುತ್ತಿಲ್ಲ. ಇದಲ್ಲದೇ ಬಾಣಂತಿಯರು ತಮ್ಮ ಮಗುವಿಗೆ ಹಾಲುಣಿಸಲು ಸ್ಥಳವಿಲ್ಲದೇ ಮೆಟ್ಟಿಲುಗಳ ಮೇಲೆ ಕುಳಿತು ಹಾಲುಣಿಸುವಂತಾಗಿತ್ತು. ಊಟ ಮಾಡಲು ಜಾಗವಿಲ್ಲದ ಕಾರಣ ರೋಗಿಗಳು ಬಾತ್ ರೂಂ ಪಕ್ಕ, ಓಡಾಡುವ ಜಾಗದಲ್ಲಿ ಕುಳಿತು ಊಟ ಮಾಡಬೇಕಾಗಿತ್ತು.

    ಈ ಬಗ್ಗೆ ಸಚಿವರುಗಳಾದ ಪುಟ್ಟರಂಗಶೆಟ್ಟಿ ಹಾಗೂ ಎನ್.ಮಹೇಶ್ ಗೆ ದೂರು ನೀಡಿ ಒಂದು ವಾರ ಕಳೆದರೂ ಆಸ್ಪತ್ರೆಯತ್ತ ಯಾರೊಬ್ಬರು ಮುಖ ಮಾಡಿಲ್ಲ. ರಾಜ್ಯಕ್ಕೆ ಇಬ್ಬರು ಸಚಿವರನ್ನು ನೀಡಿರುವ ಗಡಿ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿ ಚಿಂತಜನಕವಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

  • ಹೊಸ ಕಾರು ಖರೀದಿಗೆ ಅರ್ಜಿ ಹಾಕಿದ್ದ ನೂತನ ಸಚಿವರು, ಅಧಿಕಾರಿಗಳಿಗೆ ಶಾಕ್ ಕೊಟ್ಟ ಸಿಎಂ

    ಹೊಸ ಕಾರು ಖರೀದಿಗೆ ಅರ್ಜಿ ಹಾಕಿದ್ದ ನೂತನ ಸಚಿವರು, ಅಧಿಕಾರಿಗಳಿಗೆ ಶಾಕ್ ಕೊಟ್ಟ ಸಿಎಂ

    ಬೆಂಗಳೂರು: ಹೊಸ ಕಾರು ಖರೀದಿಗೆ ಅರ್ಜಿ ಹಾಕಿದ್ದ ನೂತನ ಸಚಿವರು ಮತ್ತು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಖಡಕ್ ಸೂಚನೆ ಕೊಟ್ಟಿದ್ದಾರೆ.

    ಹೊಸ ಕಾರು ಖರೀದಿಗೆ ಕೋರಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸಚಿವರು, ಅಧಿಕಾರಿಗಳು ಸೇರಿದಂತೆ 11 ಅರ್ಜಿ ಬಂದಿದ್ದವು. ಆದರೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಸಿಎಂ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ 11 ಅರ್ಜಿಗಳು ವಾಪಸ್ ಆಗಿದೆ.

    ಮುಖ್ಯ ಕಾರ್ಯದರ್ಶಿ ಕಚೇರಿಗೆ ಆರು ಮಂದಿ ಸಚಿವರು ಮತ್ತು 5 ಮಂದಿ ಅಧಿಕಾರಿಗಳಿಂದ ಹೊಸ ಕಾರಿಗಾಗಿ ಅರ್ಜಿ ಬಂದಿದ್ದವು. ಈ ವರ್ಷ ಅನಗತ್ಯ ವೆಚ್ಚಕ್ಕಾಗಿ ಹಣ ನೀಡದಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದರು.

    ಸಚಿವಾರದ ಕೆಜೆ ಜಾರ್ಜ್, ಡಿ.ಕೆ.ಶಿವಕುಮಾರ್, ಜಯಮಾಲಾ, ಪ್ರಿಯಾಂಕ ಖರ್ಗೆ, ಶಿವಾನಂದ ಪಾಟೀಲ್ ಮತ್ತು ಖಾದರ್ ಹೊಸ ಕಾರ್ ನೀಡುವಂತೆ ಅರ್ಜಿ ಸಲ್ಲಿಸಿದರು. ಅನುಮತಿ ಸಿಗದ ಹಿನ್ನೆಲೆಯಲ್ಲಿ ಸಚಿವರ ಕಾರು ಖರೀದಿ ಅರ್ಜಿಗಳು ವಾಪಸ್ ಮಾಡಲಾಗಿದೆ ಎನ್ನಲಾಗಿದೆ.

  • ಪ್ಲೀಸ್ ನನ್ನ ಹತ್ರ ಬರ್ಬೇಡಿ ಫೈಲ್ ನೋಡಲ್ಲ, ನೀವು ಅವರ ಹತ್ರನೇ ಹೋಗಿ ಪ್ಲೀಸ್- ಜಿ.ಟಿ ದೇವೇಗೌಡ

    ಪ್ಲೀಸ್ ನನ್ನ ಹತ್ರ ಬರ್ಬೇಡಿ ಫೈಲ್ ನೋಡಲ್ಲ, ನೀವು ಅವರ ಹತ್ರನೇ ಹೋಗಿ ಪ್ಲೀಸ್- ಜಿ.ಟಿ ದೇವೇಗೌಡ

    ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು ಇದೀಗ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತನ್ನ ಬಳಿ ಬರಬೇಡಿ ಅಂತ ವಾಪಸ್ ಕಳುಹಿಸಿದ ಪ್ರಸಂಗವೊಂದು ನಡೆದಿದೆ.

    ಪ್ಲೀಸ್ ನನ್ನ ಹತ್ರ ಬರಬೇಡಿ, ನಾನು ಫೈಲ್ ನೋಡಲ್ಲ. ನೀವು ಅವರ ಹತ್ರನೇ ಹೋಗಿ ಪ್ಲೀಸ್, ಅವರಿಗೆ ಹೇಳಿ. ಹೀಗೆ ಐಎಎಸ್ ಅಧಿಕಾರಿಗಳಿಗೆ ಪ್ಲೀಸ್ ಎಂದು ಹೇಳಿ ಇಲಾಖೆಯ ಫೈಲ್‍ಗಳನ್ನು ಸಚಿವ ಜಿ.ಟಿ ದೇವೇಗೌಡ ವಾಪಸ್ ಕಳುಹಿಸುತ್ತಿದ್ದಾರೆ.

    ಐಎಎಸ್ ಅಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಜಿಟಿ ದೇವೇಗೌಡ ಅವರ ಬಳಿ ಹೋದ್ರೆ `ಅಯ್ಯೋ ನನ್ನ ಹತ್ರ ಏಕೆ ಬರ್ತಿರಾ? ಬರಬೇಡ್ರಾಪ್ಪ ನೀವು! ಎಂದು ಹೇಳಿ ಉನ್ನತ ಶಿಕ್ಷಣ ಇಲಾಖೆಯ ಕಡತಗಳನ್ನ ವಾಪಸ್ ಕಳಿಸುತ್ತಿದ್ದಾರೆ.

    ನನಗೂ, ಈ ಖಾತೆಗೂ ಯಾವುದೇ ಸಂಬಂಧವೇ ಇಲ್ಲ, ನನಗೆ ಗೊತ್ತಿಲ್ಲ. ನೀವು ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರ ಹತ್ರನೇ ಹೋಗಿ, ಅವರಿಗೆ ಫೈಲ್ ತೋರಿಸಿ. ಸಿಎಂ ಕುಮಾರಣ್ಣ ಅವರೇ ಫೈಲ್‍ಗಳನ್ನ ಕ್ಲೀಯರ್ ಮಾಡ್ತಾರೆ, ನಾನು ಮಾಡಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಜಿಟಿಡಿ ತಿಳಿಸಿದ್ದಾರೆ.

    ಸಚಿವ ಜಿಟಿಡಿ ಹೇಳಿಕೆಯಿಂದ ಇಲಾಖೆ ಅಧಿಕಾರಿಗಳು ಕಂಗಾಲಾಗಿದ್ದಾರೆ. ಅಧಿಕೃತವಾಗಿ ಇಲಾಖೆ ಸಚಿವ ಜಿ.ಟಿ.ದೇವೇಗೌಡರ ಬಳಿಯೇ ಇದೆ. ಶೈಕ್ಷಣಿಕ ವರ್ಷ ಆರಂಭವಾಗಿರೋದ್ರಿಂದ ಹಲವು ಕಡತಗಳು ಬಾಕಿ ಇವೆ. ಹಾಗಾದ್ರೆ ಆ ಫೈಲ್‍ಗಳನ್ನ ಕ್ಲೀಯರ್ ಮಾಡೋರು ಯಾರು? ಹೇಗೆ?. ಇವತ್ತಾದ್ರೂ ಜಿಟಿಡಿ ಅವರಿಗೆ ಹೊಸ ಖಾತೆ ಸಿಗುತ್ತಾ? ಉನ್ನತ ಶಿಕ್ಷಣ ಸಿಎಂಗೆ ಬರುತ್ತಾ? ಎಂಬುದು ಕಾದು ನೋಡಬೇಕಿದೆ.

  • ವಿಮಾನದ ಶೌಚಾಲಯದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆ

    ವಿಮಾನದ ಶೌಚಾಲಯದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆ

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆಯಾಗಿದೆ.

    ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ವಿಮಾನದಲ್ಲಿ 2 ಕೆ.ಜಿ 116 ಗ್ರಾಂ ತೂಕದ 66.67 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.

    ಎಸ್‍ಜಿ 479 ಸ್ಪೈಸ್ ಜೆಟ್ ವಿಮಾನದ ಶೌಚಾಲಯದಲ್ಲಿ ಚಿನ್ನ ಪತ್ತೆಯಾಗಿದ್ದು, ಈ ವಿಮಾನ ಮುಂಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ವೇಳೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದರು.

    ಆಗ 2 ಕೆಜಿ 116 ಗ್ರಾಂ ಚಿನ್ನದ ಬಿಲ್ಲೆ ಪತ್ತೆಯಾಗಿದೆ. ಸದ್ಯಕ್ಕೆ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಮೈ-ಕೈ ಮುಟ್ಟಿ, ಎಷ್ಟು ಮಕ್ಕಳಿಗೆ ಜನ್ಮ ನೀಡ್ತೀರಾ?- ಮಕ್ಕಳಿಗೆ ಶಾಲಾ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ

    ಮೈ-ಕೈ ಮುಟ್ಟಿ, ಎಷ್ಟು ಮಕ್ಕಳಿಗೆ ಜನ್ಮ ನೀಡ್ತೀರಾ?- ಮಕ್ಕಳಿಗೆ ಶಾಲಾ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ

    ಬಳ್ಳಾರಿ: ಇಲ್ಲಿನ ಮೊರಾರ್ಜಿ ಶಾಲೆಯ ಪ್ರಾಂಶುಪಾಲರ ವಿರುದ್ಧ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಬಳಿ ಮುರಾರ್ಜಿ ಶಾಲೆಯ ನೂರಾರು ಮಕ್ಕಳು ಮಂಗಳವಾರ ಪ್ರಾಂಶುಪಾಲ ಶಶಿಧರ್, ಹೆಣ್ಣು ಮಕ್ಕಳಿಗೆ ಅವಾಚ್ಯವಾಗಿ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಭೋದನೆ ಮಾಡುತ್ತಾನೆ ಎಂದು ರೊಚಿಗೆದ್ದು ಪ್ರತಿಭಟನೆ ನಡೆಸಿದರು.

    ನಮ್ಮ ಮಾಸ್ಟರ್ ನಮ್ಮ ಮೈ-ಕೈ ಮುಟ್ಟಿ ಮಾತನಾಡಿಸ್ತಾನೆ. ಕೆಟ್ಟ ದೃಷ್ಠಿಯಿಂದ ನೋಡುತ್ತಾ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತೀರಾ? ಎಂದು ಕೇಳುತ್ತಾನೆ ಅಂತ ಮಕ್ಕಳು ಪ್ರಾಂಶುಪಾಲರ ವಿರುದ್ಧ ಧ್ವನಿಯೆತ್ತಿದ್ದಾರೆ. ಜೊತೆಗೆ ಕೂಡಲೇ ಪ್ರಾಂಶುಪಾಲರನ್ನು ವರ್ಗಾವಣೆ ಮಾಡಿ ಎಂದು ಮಕ್ಕಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

    ಮುಂಜಾನೆ 11 ಗಂಟೆಯಿಂದ ಶಾಲೆಯ ಮುಂದೆಯೇ ಪ್ರತಿಭಟನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ತಮಗಾಗುತ್ತಿರುವ ಕಿರುಕುಳದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

    ಈ ಶಾಲೆಯ ಪ್ರಾಂಶುಪಾಲ ಶಶಿಧರ್ ಈ ಹಿಂದೆ ಹಡಗಲಿಯ ಶಾಲೆಯಲ್ಲೂ ಇದೇ ರೀತಿಯಾಗಿ ವರ್ತನೆ ಮಾಡಿದ ಪರಿಣಾಮ ಇವರನ್ನು ಹಗರಿಬೊಮ್ಮನಹಳ್ಳಿಯ ಅಂಬಳಿಗೆ ವರ್ಗಾವಣೆ ಮಾಡಲಾಗಿತ್ತು ಎಂಬುದಾಗಿ ತಿಳಿದುಬಂದಿದೆ.