Tag: officers

  • ರಿಜಿಸ್ಟರ್ ಕಚೇರಿಯಲ್ಲೇ ಇಬ್ಬರು ಯುವಕರ ಜೊತೆ ಯುವತಿಯ ಮದುವೆ!

    ರಿಜಿಸ್ಟರ್ ಕಚೇರಿಯಲ್ಲೇ ಇಬ್ಬರು ಯುವಕರ ಜೊತೆ ಯುವತಿಯ ಮದುವೆ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಬ್ ರಿಜಿಸ್ಟರ್ ಆಫೀಸ್ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದು, ಇಬ್ಬರು ಯುವಕರ ಜೊತೆ ಯುವತಿಯನ್ನು ಮದುವೆ ಮಾಡಿಸಿ ಸುದ್ದಿಯಾಗಿದ್ದಾರೆ.

    ನಿಶಾ(ಹೆಸರು ಬದಲಾಯಿಸಲಾಗಿದೆ) ಇಬ್ಬರು ಯುವಕರೊಂದಿಗೆ ಮದುವೆಯಾದ ಯುವತಿ. ನಿಶಾ ಎರಡು ವರ್ಷಗಳಿಂದ ಯಲ್ಲಾಪುರದ ಗಣಪತಿ ಭಟ್‍ನನ್ನು ಪ್ರೀತಿಸಿ 9 ತಿಂಗಳ ಹಿಂದೆ ತನ್ನ ಕುಟುಂಬದವರನ್ನು ಎದುರು ಹಾಕಿಕೊಂಡು ಯಲ್ಲಾಪುರದ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗಿದ್ದಳು.

    ನಿಶಾ ಪ್ರೀತಿಸಿ ಮದುವೆಯಾಗಿದ್ದು ಆಕೆಯ ಮನೆಯವರಿಗೆ ಇಷ್ಟವಿರಲಿಲ್ಲ. ಮನೆಯವರು ಮೊದಲು ಅವರ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ನಿಶಾ ಮದುವೆ ಆದ ಬಳಿಕ ಆಕೆಯ ಪೋಷಕರು ನಾವು ಮದುವೆಯನ್ನು ಒಪ್ಪಿದ್ದೇವೆ. ಮನೆಗೆ ಬಾ ಎಂದು ಹೇಳಿದ್ದಾರೆ. ಪೋಷಕರ ಮಾತನ್ನು ನಂಬಿ ನಿಶಾ ಮನೆಗೆ ಹೋಗಿದ್ದಾಳೆ. ತವರು ಮನೆಗೆ ಹೋದ ಬಳಿಕ ಮಮತಾ ಹಾಗೂ ತಂದೆ ಧನಂಜಯ್ ಗಣಪತಿ ಭಟ್ ನನ್ನು ಬಿಟ್ಟು ಬಿಡುವಂತೆ ಮನವೊಲಿಸಿದ್ದಾರೆ.

    ಈಗ ಆಗಸ್ಟ್ 5ರಂದು ನಿಶಾಗೆ ಯಲ್ಲಾಪುರ ತಾಲೂಕಿನ ತಾರಿಮನೆ ಮಾಗೋಡಿನ ರಾಜೇಶ್‍ನೊಂದಿಗೆ ಕಾರವಾರದ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಮಾಡಿಸಿದ್ದಾರೆ. ಯಲ್ಲಾಪುರದಲ್ಲಿ ಮದುವೆ ರಿಜಿಸ್ಟರ್ ಆಗಿರುವ ಕುರಿತು ಮಾಹಿತಿ ಇದ್ದರೂ, ಕಾರವಾರದಲ್ಲಿ ಅಧಿಕಾರಿಗಳು ಇನ್ನೊಂದು ಯುವಕನೊಂದಿಗೆ ಮದುವೆ ರಿಜಿಸ್ಟರ್ ಮಾಡಿ ಎಡವಟ್ಟು ಮಾಡಿದ್ದಾರೆ.

    ಪತಿ ಗಣಪತಿ ತನ್ನ ಪತ್ನಿ ನಿಶಾಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ ವಿಷಯ ಬೆಳಕಿಗೆ ಬಂದಿದೆ. ತನ್ನ ಪತ್ನಿ ಇನ್ನೊಬ್ಬನೊಂದಿಗೆ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಈಗ ತನ್ನ ಪತ್ನಿಯನ್ನು ತನಗೆ ಒಪ್ಪಿಸಬೇಕೆಂದು ಗಣಪತಿ ಪಟ್ಟು ಹಿಡಿದಿದ್ದು ಯಲ್ಲಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡ್ತಿದ್ದ ವೈದ್ಯನ ಮನೆ ಮೇಲೆ ದಾಳಿ!

    ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡ್ತಿದ್ದ ವೈದ್ಯನ ಮನೆ ಮೇಲೆ ದಾಳಿ!

    ಹಾವೇರಿ: ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ನಕಲಿ ವೈದ್ಯ ಬಾನಪ್ಪ ವಾಲ್ಮೀಕಿ ಮನೆ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಚಿಕ್ಕಣ್ಣವರ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ವೇಳೆ ಅಧಿಕಾರಿಗಳನ್ನು ಕಂಡ ನಕಲಿ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ. ಅಧಿಕಾರಿಗಳು ಮನೆಯನ್ನು ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಸ್ಕೆತಾಸ್ಕೋಪ್, ಸಿರಿಂಜ್, ಔಷಧಿ ಬರೆಯಲು ಉಪಯೋಗಿಸುತ್ತಿದ್ದ ಚೀಟಿ ಮತ್ತು ವಿವಿಧ ಕಂಪೆನಿಯ ಔಷಧಿಗಳು ಪತ್ತೆಯಾಗಿವೆ.

    ಔಷಧಿಗಳು ಮತ್ತು ದಾಳಿ ವೇಳೆ ಸಿಕ್ಕ ವಸ್ತುಗಳನ್ನು ತಾಲೂಕು ವೈದ್ಯಾಧಿಕಾರಿಗಳು ವಶಪಡಿಸಿಕೊಂಡು ಸೀಜ್ ಮಾಡಿದ್ದಾರೆ. ಈ ಎಣ್ಣೆ ಡಾಕ್ಟರ್ ಕಳೆದ ಕೆಲವು ವರ್ಷಗಳಿಂದ ಮನೆಯಲ್ಲೇ ರಾಜಾರೋಷವಾಗಿ ಕ್ಲಿನಿಕ್ ನಡೆಸ್ತಿದ್ದನು. ಯಾವುದೇ ಕೋರ್ಸ್ ಕಲಿಯದೆ ಬಾನಪ್ಪ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

    ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕ್ರೇನ್ ಬಿದ್ದು 6 ಕಾರ್ಮಿಕರ ದುರ್ಮರಣ: ಐವರು ಅಧಿಕಾರಿಗಳ ಬಂಧನ

    ಕ್ರೇನ್ ಬಿದ್ದು 6 ಕಾರ್ಮಿಕರ ದುರ್ಮರಣ: ಐವರು ಅಧಿಕಾರಿಗಳ ಬಂಧನ

    ಕಲಬುರಗಿ: ಸಿಮೆಂಟ್ ಫ್ಯಾಕ್ಟರಿಯಲ್ಲಿ ಆರ್ಚ್ ಹಾಗೂ ಕ್ರೇನ್ ಬಿದ್ದು 6 ಕಾರ್ಮಿಕರ ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಅಧಿಕಾರಿಗಳನ್ನು ಸೇಡಂ ಪೊಲೀಸರು ಬಂಧಿಸಿದ್ದಾರೆ.

    ಆಗಸ್ಟ್ 2ರಂದು ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿರುವ ಸಿಮೆಂಟ್ ಕಾರ್ಖಾನೆಯಲ್ಲಿ ದುರ್ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಡೌನ್‍ನ ಆರ್ಚ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದ ಪ್ರೋಜೆಕ್ಟ್ ಮ್ಯಾನೇಜರ್, ಸೇಫ್ಟಿ ಆಫೀಸರ್ ಸೇರಿದಂತೆ ಐದು ಆರೋಪಿಗಳನ್ನು ಇನ್ಸ್​ಪೆಕ್ಟರ್ ಪಿ.ವಿ.ಸಾಲಿಮಠ್ ಭಾನುವಾರ ಬಂಧಿಸಿದ್ದಾರೆ. ಇದನ್ನು ಓದಿ: ಕಲಬುರಗಿಯಲ್ಲಿ ಏಕಾಏಕಿ ಬಿರುಗಾಳಿಗೆ ಕುಸಿದುಬಿದ್ದ ಕ್ರೇನ್- 6 ಮಂದಿ ದುರ್ಮರಣ

    ನಿರ್ಲಕ್ಷ್ಯ ವಹಿಸಿದ್ದಕ್ಕೆ ತಮಿಳನಾಡು ಕನ್ಯಾಕುಮಾರಿಯ ಅರವಿಂದನ್(30), ಒಡಿಶಾದ ಗುಂಜಾಮದ ಪ್ರಶಾಂತ್ (34) ಹಾಗೂ ರವೀಂದ್ರ ರಾವ್ (26) ಮಧ್ಯಪ್ರದೇಶದ ಸಾತ್ನಾ ನಿವಾಸಿ ರಾಕೇಶ್ ಸಿಂಗ್ (44) ಮತ್ತು ಉಜ್ಜೇನಿಯ ದೇವೇಂದ್ರಸಿಂಗ್ (48) ಬಂಧಿತ ಆರೋಪಿಗಳು.

    ಅಧಿಕಾರಿಗಳು ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಸಾಧನಗಳನ್ನು ಬಳಸದೆ ಕೆಲಸ ಮಾಡಿಸಿದ್ದರು. ಹೀಗಾಗಿ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

  • ಅಂಧರ ಕುಟುಂಬಕ್ಕೆ ಕಂಟಕವಾದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ!

    ಅಂಧರ ಕುಟುಂಬಕ್ಕೆ ಕಂಟಕವಾದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ!

    ಬೆಂಗಳೂರು: ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಜೀವನ ಮಾಡುತ್ತಿದ್ದ ಆ ಅಂಧರ ಕುಟುಂಬಕ್ಕೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಂಟಕವಾಗಿ ಮಾರ್ಪಟ್ಟಿದೆ. ಈ ಅಂಧರ ಜೀವನೋಪಾಯಕ್ಕಿದ್ದ ಏಕೈಕ ಟೀ ಅಂಗಡಿಯನ್ನ ಅಧಿಕಾರಿಗಳು ಕುಂಟು ನೆಪವೊಡ್ಡಿ ಎತ್ತಂಗಡಿ ಮಾಡಿಸಿದ್ದಾರೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ತಾಲೂಕಿನ ದಾಬಸ್‍ಪೇಟೆಯಲ್ಲಿ ನಡೆದಿದೆ. ಇಲ್ಲಿನ ಲೋಕೇಶ್ ಎಂಬವರ ಕುಟುಂಬ ಸಾಕಷ್ಟು ವರ್ಷಗಳಿಂದ ಟೀ ಮಾರುತ್ತಾ ನೆಮ್ಮದಿಯ ಜೀವನವನ್ನ ನಡೆಸುತ್ತಿದ್ದರು. ಕುಟುಂಬದ ಎಲ್ಲಾ ಸದಸ್ಯರಿಗೂ ಸಂಪೂರ್ಣ ಕಣ್ಣು ಕಾಣದೆ ಕೇವಲ ಶೇ.20ರಷ್ಟು ಮಾತ್ರ ಕಾಣುತ್ತದೆ. ಹೀಗಿದ್ದರೂ ಸ್ವಾಭಿಮಾನದ ಬದುಕನ್ನ ಬಿಟ್ಟುಕೊಡದ ಇವರೆಲ್ಲಾ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ, ಜೀವನೋಪಾಯಕ್ಕಾಗಿ ಟೀ ಅಂಗಡಿಯೊಂದನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

    ಆದ್ರೆ ಇದೀಗ ಕೆ.ಐ.ಎ.ಡಿ.ಬಿ ಸಂಸ್ಥೆ ಅಂಧರು ಇಟ್ಟುಕೊಂಡಿದ್ದ ಟೀ ಅಂಗಡಿಯನ್ನ ಎತ್ತಂಗಡಿ ಮಾಡಿದ್ದು, ಇವರ ಜೀವನ ಇದೀಗ ಬೀದಿಪಾಲಾಗಿದೆ. ಹೀಗಾಗಿ ನಮಗೆ ಇಲ್ಲಿನ ಅಧಿಕಾರಿಗಳು ಮತ್ತೆ ಟೀ ಅಂಗಡಿಯನ್ನ ಇಟ್ಟುಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಅಂಧ ಲೋಕೇಶ್ ಕುಟುಂಬ ಪರಿಪರಿಯಾಗಿ ಮಾಧ್ಯಮದಗಳ ಮುಂದೆ ಬೇಡಿಕೊಳ್ಳುತ್ತಿದ್ದಾರೆ.

    ಈ ವಿಚಾರದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಜನಪ್ರತಿಧಿಗಳ ಮುಂದೆ ಅಂಗಲಾಚಿ ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಅಂತ ಕುಟುಂಬದ ಹನುಮಕ್ಕ ತನ್ನ ಅಳಲು ತೋಡಿಕೊಂಡಿದ್ದಾರೆ.

  • ಕೋರ್ಟ್ ಗೆ ಸಾಕ್ಷ್ಯವಾಯ್ತು ವಾಟ್ಸಪ್ ಚರ್ಚೆ- ಐವರು ಅಧಿಕಾರಿಗಳ ವಿರುದ್ಧ ಎಫ್‍ಐಆರ್

    ಕೋರ್ಟ್ ಗೆ ಸಾಕ್ಷ್ಯವಾಯ್ತು ವಾಟ್ಸಪ್ ಚರ್ಚೆ- ಐವರು ಅಧಿಕಾರಿಗಳ ವಿರುದ್ಧ ಎಫ್‍ಐಆರ್

    ತುಮಕೂರು: ವಾಟ್ಸಪ್ ಗ್ರೂಪಲ್ಲಿ ಚರ್ಚೆಯಾಗುವ ವಿಚಾರ ಕೆಲವೊಮ್ಮೆ ಗ್ರೂಪ್ ಅಡ್ಮಿನ್ ಗೆ ಮುಳುವಾಗತ್ತೆ. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ವಾಟ್ಸಪ್ ಗ್ರೂಪಲ್ಲಿ ನಡೆದ ಚರ್ಚೆ, ಶೇರ್ ಮಾಡಿದ ವೀಡಿಯೋವನ್ನೇ ಸಾಕ್ಷ್ಯವಾಗಿ ಪರಿಗಣಿಸಿದ ನ್ಯಾಯಾಲಯ ಐದು ಜನ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಅಪರೂಪದ ಆದೇಶ ಹೊರಡಿಸಿದೆ.

    ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಎಮ್.ಎಪ್.ಸಿ ನ್ಯಾಯಾಲಯ ಇಂತಹದೊಂದು ಮಹತ್ವದ ಆದೇಶ ಹೊರಡಿಸಿದೆ. ಚಿಕ್ಕನಾಯಕನಹಳ್ಳಿ ಕೆರೆ ನೀರನ್ನು ದಂಧೆಕೋರರು ಕದ್ದು ಮಾರುತ್ತಿದ್ದರು. ಈ ದಂಧೆಯ ವೀಡಿಯೋ ಸಹಿತ “ಚಿಕ್ಕನಾಯಕನಹಳ್ಳಿ ಅಭಿವೃದ್ದಿಗಾಗಿ” ಎಂಬ ವಾಟ್ಸಪ್ ಗ್ರೂಪ್ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ನೆಪಮಾತ್ರಕ್ಕೆ ಕೆರೆಗೆ ಭೇಟಿ ಕೊಟ್ಟ ಪುರಸಭೆ ಅಧಿಕಾರಿಗಳು ಕದ್ದುಮಾರುತ್ತಿದ್ದ ನೀರಿನ ಟ್ಯಾಂಕರನ್ನು ಬಿಟ್ಟು, ಕೇವಲ ಪೈಪನ್ನು ವಶಪಡಿಸಿಕೊಂಡು ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳದೆ ಸುಮ್ಮನಾಗಿದ್ದರು.

    ಅಧಿಕಾರಿಗಳ ಈ ನಿರ್ಲಕ್ಷ್ಯತನವನ್ನು ಪ್ರಶ್ನಿಸಿ ಗ್ರೂಪ್ ಅಡ್ಮಿನ್ ಮಲ್ಲಿಕಾರ್ಜುನ್, ಕೋರ್ಟ್ ಮೊರೆ ಹೋಗಿದ್ದರು. ತಾವು ಕ್ರಿಯೆಟ್ ಮಾಡಿದ `ಚಿಕ್ಕನಾಯಕನಹಳ್ಳಿ ಅಭಿವೃದ್ದಿಗಾಗಿ’ ಎಂಬ ಗ್ರೂಪ್ ಲ್ಲಿ ಅಧಿಕಾರಿಗಳೂ ಸದಸ್ಯರಾಗಿದ್ದಾರೆ. ದಂಧೆಕೋರರು ಕೆರೆಯ ನೀರು ಕದ್ದುಮಾರುತ್ತಿರುವ ಎಲ್ಲಾ ಮಾಹಿತಿಯನ್ನು ಅವರಿಗೆ ಕೊಟ್ಟಿದ್ದೇವೆ. ನೀರು ಕಳ್ಳತನ ಆಗುತ್ತಿರುವುದನ್ನು ಗ್ರೂಪ್ ನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಒಪ್ಪಿಕೊಂಡಿದ್ದಾರೆ. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ವಾಟ್ಸಪ್ ಚರ್ಚೆಯ ಸ್ಕ್ರಿನ್ ಶಾಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಮನವರಿಕೆ ಮಾಡಿಕೊಟ್ಟಿದ್ದರು.

    ಈ ಸಾಕ್ಷ್ಯವನ್ನು ಪರಿಗಣಿಸಿದ ನ್ಯಾಯಾಲಯ ಚಿಕ್ಕನಾಯಕನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುಖ್ಯಾಧಿಕಾರಿ ಮಂಜುಳಾದೇವಿ, ಪರಿಸರ ಎಂಜಿನಿಯರ್ ಚಂದ್ರಶೇಖರ್, ಪಿಎಸೈ ಮಂಜುನಾಥ್ ಹಾಗೂ ಸಿಪಿಐ ಮಾರಪ್ಪ ಸೇರಿ ಒಟ್ಟು ಐದು ಜನ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ತಿಪಟೂರು ಡಿವೈಎಸ್ ಪಿಗೆ ತಾಕೀತು ಮಾಡಿ ಆದೇಶ ಹೊರಡಿಸಿದೆ. ಇದರಂತೆ ಇದೀಗ ಐವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

  • ಲಾರಿ ಸಮೇತ ಮರ ಜಪ್ತಿ- ಮಾರಾಟಗಾರರ ಆಕ್ರೋಶಕ್ಕೆ ಬೆದರಿ ಬಾಗಿಲು ಹಾಕಿ ಒಳಗೆ ಕುಳಿತ ಅಧಿಕಾರಿಗಳು!

    ಲಾರಿ ಸಮೇತ ಮರ ಜಪ್ತಿ- ಮಾರಾಟಗಾರರ ಆಕ್ರೋಶಕ್ಕೆ ಬೆದರಿ ಬಾಗಿಲು ಹಾಕಿ ಒಳಗೆ ಕುಳಿತ ಅಧಿಕಾರಿಗಳು!

    ಮೈಸೂರು: ಅಕ್ರಮವಾಗಿ ಮರಗಳನ್ನು ಸಾಗಾಟ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದವರೇ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರಾಜಾರೋಷವಾಗಿ ತಿರುಗಿ ಬಿದ್ದ ಘಟನೆ ನಂಜನಗೂಡಿನಲ್ಲಿ ನಡೆದಿದೆ.

    ಮರ ಸಾಗಿಸುತ್ತಿದ್ದ ಲಾರಿಯನ್ನು ಹಿಡಿದ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ಮಾರಾಟಗಾರರು, ಅರಣ್ಯ ಇಲಾಖೆಯ ಕಚೇರಿ ಬಾಗಿಲು ಬಡಿದು ದಾದಾಗಿರಿ ನಡೆಸಿದ್ದಾರೆ. ಅಲ್ಲದೆ ಮರ ಹಿಡಿದ ಅಧಿಕಾರಿಗಳ ಜೊತೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಜಮೀನುಗಳಲ್ಲಿ ಬೆಳೆದಿರುವ ಮರಗಳನ್ನು ಕಡಿಯಬೇಕಿದ್ದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಅನುಮತಿ ಪಡೆಯದೇ ಮರಗಳನ್ನ ಕಡಿದು ಅರಣ್ಯ ಇಲಾಖೆ ಕಚೇರಿ ಮುಂಭಾಗವೇ ರಾಜಾರೋಷವಾಗಿ ಸಾಗಿಸುತ್ತಿದ್ದಾಗ, ಅಧಿಕಾರಿಗಳು ಲಾರಿ ಸಮೇತ ಹಿಡಿದು ಜಪ್ತಿ ಮಾಡಿದ್ದಾರೆ.

    ಇದರಿಂದ ಆಕ್ರೋಶಗೊಂಡ ಮಾರಾಟಗಾರರು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಾರಾಟಗಾರರ ಆಕ್ರೋಶಕ್ಕೆ ಹೆದರಿದ ಅಧಿಕಾರಿಗಳು, ಕಚೇರಿಯ ಒಳಗೆ ಸೇರಿ ಬಾಗಿಲು ಭದ್ರಪಡಿಸಿಕೊಂಡು ಕುಳಿತಿದ್ದಾರೆ. ಮಾರಾಟಗಾರರು ಕಚೇರಿ ಬಾಗಿಲು ಬಡಿದು ರಾದ್ದಾಂತ ನಡೆಸಿದ್ದು, ಮಾಹಿತಿ ಅರಿತು ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

  • ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು, ಲಂಚ ಕೇಳ್ತಿರಲ್ಲ ನಾಚಿಕೆಯಾಗಲ್ವಾ?- ಅಧಿಕಾರಿಗಳಿಗೆ ರೈತರಿಂದ ತರಾಟೆ

    ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು, ಲಂಚ ಕೇಳ್ತಿರಲ್ಲ ನಾಚಿಕೆಯಾಗಲ್ವಾ?- ಅಧಿಕಾರಿಗಳಿಗೆ ರೈತರಿಂದ ತರಾಟೆ

    ಮಂಡ್ಯ: ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು. ನಮ್ಮ ಹತ್ತಿರ ದುಡ್ಡು ಕೇಳ್ತಿರಲ್ಲ ನಾಚಿಕೆಯಾಗಲ್ವ ನಿಮ್ಗೆ. ಯಾರ ಮನೆ ಅಡವಿಟ್ಟು ದುಡ್ಡು ತಂದು ಕೊಡೋಣ. ಹೊಟ್ಟೆಗೆ ಅನ್ನ ತಿಂತೀರಾ? ಏನು ತಿಂತೀರಾ ಎಂದು ಅಧಿಕಾರಿಗಳನ್ನು ಜನ ಸಂಪರ್ಕ ಸಭೆಯಲ್ಲಿ ರೈತರರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ.

    ಕೆ.ಆರ್ ಪೇಟೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಚೇರಿ ಆವರಣದಲ್ಲಿ, ಜನಸಂಪರ್ಕ ಸಭೆ ಆಯೋಜಿಸಲಾಗಿತ್ತು. ಈ ವೇಳೆ ರೈತರ ರಕ್ತ ಕುಡಿಯಲು ಹುಟ್ಟಿದ್ದೀರ ನೀವು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ಲಂಚ ಕೊಟ್ಟವರಿಗೆ ವಿದ್ಯುತ್ ಟ್ರಾನ್ಸ್ ಫಾರಂ ಕೊಡುತ್ತಿದ್ದೀರಿ. 2013ರಲ್ಲಿ ಹಣ ಕಟ್ಟಿದವರಿಗೆ ಟಿಸಿ ಕೊಡದೇ, ಲಂಚ ಪಡೆದು ಬೇಕಾದವರಿಗೆ ಟಿಸಿ ಕೊಡುತ್ತಿದ್ದೀರಾ. ಟಿಸಿಗಳು ಕೆಟ್ಟು ಹೋದರೂ ಲಂಚ ಕೊಡದೆ ಅವುಗಳನ್ನು ಸರಿಪಡಿಸುವುದಿಲ್ಲ ಎಂದು ಆರೋಪಿಸಿದರು.

    ನಿಜವಾದ ರೈತರು ಬದುಕುವುದು ಹೇಗೆ. ನೀವೆಲ್ಲ ನಾಲ್ಕು ಅಕ್ಷರ ಕಲಿತಿದ್ದೀರ ಎಂದು ದೇವಲೋಕದಿಂದ ಇಳಿದು ಬಂದ ರೀತಿ ಆಡಬಾರದು. ನೀವು ಇಂಜಿನಿಯರಿಂಗ್ ಓದಿ ಬಂದಿಲ್ಲ. ನಿಮ್ಮ ಹೆಂಡತಿಯರಿಗೆ ಸೀರೆ ಕೊಡಿಸಲು ಹಣ ಹೇಗೆ ಹೊಂದಿಸುವುದು ಎಂಬುದನ್ನು ಓದಿ ಬಂದಿದ್ದೀರ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

    ರೈತರ ಆಕ್ರೋಶಕ್ಕೆ ಬೆದರಿದ ಮೇಲಾಧಿಕಾರಿಗಳು ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗುವುದಿಲ್ಲ. ಲಂಚಬಾಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸೋದಾಗಿ ಹೇಳಿ ರೈತರನ್ನ ಸಮಾಧಾನ ಪಡಿಸಿದರು.

  • ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಕುಣಿಗಲ್ ತಹಶೀಲ್ದಾರ್, ಇ.ಒ ನಡುವೆ ಕಿತ್ತಾಟ

    ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಕುಣಿಗಲ್ ತಹಶೀಲ್ದಾರ್, ಇ.ಒ ನಡುವೆ ಕಿತ್ತಾಟ

    ತುಮಕೂರು: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕುಣಿಗಲ್ ತಹಶೀಲ್ದಾರ್ ಮತ್ತು ಇ.ಒ ಪರಸ್ಪರ ಕಿತ್ತಾಟ ಮಾಡಿಕೊಂಡಿದ್ದಾರೆ.

    ಕುಣಿಗಲ್ ಪಟ್ಟಣದ ಕಂದಾಯ ಭವನದಲ್ಲಿ ಪೂರ್ವಭಾವಿ ಸಭೆ ನಡೆಯುತಿತ್ತು. ಆ ವೇಳೆ ಕುಣಿಗಲ್ ತಹಶಿಲ್ದಾರ್ ನಾಗರಾಜು ಹಾಗೂ ಇ.ಒ. ನಾರಾಯಣಸ್ವಾಮಿ ನಡುವೆ ಕಿತ್ತಾಟ ನಡೆದಿದೆ.

    ಸಭೆ ನಡೆಯುತ್ತಿದ್ದರೂ ಈ ಸಭೆಗೂ ನನಗೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಇ.ಒ.ನಾರಾಯಣಸ್ವಾಮಿ ಕಡತಗಳಿಗೆ ಸಹಿ ಹಾಕುವುದರಲ್ಲಿ ಮಗ್ನರಾಗಿದ್ದರು. ಈ ವರ್ತನೆಗೆ ಸಿಡಿಮಿಡಿಗೊಂಡ ತಹಶೀಲ್ದಾರ್ ನಾಗರಾಜು, ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಎಲ್ಲ ಜವಾಬ್ದಾರಿ ಇ.ಒ.ಸಾಹೇಬ್ರು ವಹಿಸಿಕೊಳ್ಳಬೇಕು ಎಂದಿದ್ದಾರೆ. ಅದಕ್ಕೆ ಇ.ಒ ನಾರಾಯಣಸ್ವಾಮಿ ನಾನೇಕೆ ಮಾಡಲಿ, ನೀವು ಸಮಿತಿ ಅಧ್ಯಕ್ಷರು ನೀವೇ ಜವಾಬ್ದಾರಿ ನಿರ್ವಹಿಸಿ ಎಂದು ಪ್ರತ್ಯುತ್ತರ ನೀಡಿದ್ದಾರೆ.

    ಪರಸ್ಪರ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ಗೊಂದಲ ವಾತಾವರಣ ಉಂಟಾಗಿದೆ. ಸಿಬ್ಬಂದಿ ಇಬ್ಬರ ಕಿತ್ತಾಟ ಕಂಡು ತಬ್ಬಿಬ್ಬಾಗಿದ್ದಾರೆ. ಬಳಿಕ ಮಧ್ಯಪ್ರವೇಶಿಸಿದ ಸಂಘಟನೆಗಳ ಮುಖಂಡರು ಇಬ್ಬರೂ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡು ಸಭೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು.

  • ತಾರಕ ಜಲಾಶಯದ ಕ್ರಸ್ಟ್ ಗೇಟ್ ಸಂಪೂರ್ಣ ಮುಚ್ಚಲು ಅಧಿಕಾರಿಗಳಿಂದ ಪರದಾಟ!

    ತಾರಕ ಜಲಾಶಯದ ಕ್ರಸ್ಟ್ ಗೇಟ್ ಸಂಪೂರ್ಣ ಮುಚ್ಚಲು ಅಧಿಕಾರಿಗಳಿಂದ ಪರದಾಟ!

    ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನಲ್ಲಿರುವ ತಾರಕ ಜಲಾಶಯದ ಕ್ರಸ್ಟ್ ಗೇಟ್ ಸಂಪೂರ್ಣವಾಗಿ ಮುಚ್ಚಲು ಇನ್ನೂ ಅಧಿಕಾರಿಗಳು ಪರದಾಡುತ್ತಿದ್ದಾರೆ.

    ಭಾನುವಾರ ಸಂಜೆಯಿಂದ ಮೂರು ಕ್ರಸ್ಟ್ ಗೇಟ್ ಮುಚ್ಚಲು ಅಧಿಕಾರಿಗಳು ಪರದಾಡುತ್ತಿದ್ದು, ರಾತ್ರಿಯ ವೇಳೆಗೆ ಒಂದು ಗೇಟ್ ಅನ್ನು ಸಂಪೂರ್ಣವಾಗಿ ಮುಚ್ಚಲಾಯಿತು. ಆದರೆ ಉಳಿದ ಎರಡು ಗೇಟ್ ಗಳನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗಿಲ್ಲ. ಇದರಿಂದ ನೀರು ಪೋಲಾಗುವುದು ಮುಂದುವರಿದಿದೆ.

    ಭಾನುವಾರ ಸಂಜೆಯಿಂದ ಅಪಾರ ಪ್ರಮಾಣದ ನೀರು ಅಧಿಕಾರಿಗಳ ಬೇಜಾವಾಬ್ದಾರಿತನದಿಂದ ಪೋಲಾಗುತ್ತಿದೆ. ಐದು ವರ್ಷಗಳ ನಂತರ ಈಗ ಜಲಾಶಯ ಭರ್ತಿಯಾಗಿದೆ. ತಾರಕ ಜಲಾಶಯ 124 ಅಡಿ ಎತ್ತರವಿದ್ದು 4 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಸುಮಾರು 14 ಸಾವಿರ ಎಕ್ಟೇರ್ ಕೃಷಿ ಪ್ರದೇಶಕ್ಕೆ ನೀರು ಸಿಗುತ್ತದೆ. ಇದನ್ನೂ ಓದಿ: ತಾರಕ ಜಲಾಶಯದಿಂದ ಭಾರೀ ಪ್ರಮಾಣದ ನೀರು ಪೋಲು – ರೈತರ ಆಕ್ರೋಶ

    ಅಲ್ಲದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡು ಪ್ರಾಣಿಗಳಿಗೆ ಕುಡಿಯುವ ನೀರು ಇದರಿಂದ ದೊರೆಯುತ್ತದೆ. ಈ ಬಾರಿ ಜಲಾಶಯ ತುಂಬಿದ್ದ ಕಾರಣ ವನ್ಯ ಪ್ರಾಣಿಗಳ ಕುಡಿಯುವ ನೀರಿಗೆ ಹಾಗೂ ಕೃಷಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಭಾನುವಾರ ಸಂಜೆಯಿಂದ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗಿ ನದಿ ಪಾಲಾಗುತ್ತಿದೆ.

  • ತಾರಕ ಜಲಾಶಯದಿಂದ ಭಾರೀ ಪ್ರಮಾಣದ ನೀರು ಪೋಲು – ರೈತರ ಆಕ್ರೋಶ

    ತಾರಕ ಜಲಾಶಯದಿಂದ ಭಾರೀ ಪ್ರಮಾಣದ ನೀರು ಪೋಲು – ರೈತರ ಆಕ್ರೋಶ

    ಮೈಸೂರು: ಜಿಲ್ಲೆಯ ಎಚ್‍ಡಿ ಕೋಟೆ ತಾಲೂಕಿನ ರೈತರ ಜೀವನಾಡಿಯಾದ ತಾರಕ ಜಲಾಶಯದಿಂದ ಭಾರೀ ಪ್ರಮಾಣದ ನೀರು ಪೋಲಾಗಿದ್ದು, ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗೇಟ್‍ಗಳ ನಿರ್ವಹಣೆ ಸರಿ ಇದೆಯಾ ಎಂದು ಪರಿಶೀಲಿಸಲು ಭಾನುವಾರ ಬೆಳಗ್ಗೆ ಜಲಾಶಯ ನಿರ್ವಹಣೆಯ ಅಧಿಕಾರಿಗಳು ಗೇಟ್ ತೆರೆದಿದ್ದು ಬಳಿಕ ಗೇಟನ್ನು ಮುಚ್ಚಲಾಗದೇ ಪರದಾಟ ನಡೆಸಿದ್ದಾರೆ. ಇತ್ತ ಅಧಿಕಾರಿಗಳ ನಡೆಗೆ ರೈತರು ಇಡೀ ಶಾಪ ಹಾಕಿದ್ದಾರೆ.

    ಐದು ವರ್ಷಗಳ ನಂತರ ಜಲಾಶಯ ತಾರಕ ಜಲಾಶಯ ತುಂಬಿದರೂ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲಿ ರೈತರಿದ್ದಾರೆ. ಈ ವೇಳೆ ಜಲಾಶಯದ ಬಳಿ ಜಮಾಯಿಸಿದ್ದ ಕೆಲ ರೈತರು ಅಧಿಕಾರಿಗಳ ನಡುವೆ ವಾಗ್ವಾದವನ್ನು ನಡೆಸಿದ್ದಾರೆ.

    ಈ ಬಾರಿ ತಾರಕ ಜಲಾಶಯದ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾದ ಕಾರಣ ಜಲಾಶಯ ತುಂಬಲು ಕೇವಲ ಮೂರು ಅಡಿ ಮಾತ್ರ ಬಾಕಿ ತ್ತು. ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳು ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿದ್ದ ರೈತರಿಗೆ ಈಗಾಗಲೇ ಹೆಚ್ಚರಿಕೆ ನೀಡಿದ್ದರು. ಆದರೆ ಇದಕ್ಕೂ ಮುನ್ನವೇ ಅಪಾರ ಪ್ರಮಾಣ ನೀರು ವ್ಯರ್ಥವಾಗಿದೆ.