Tag: officers

  • ಬೆಂಗ್ಳೂರು ರಸ್ತೆ ಗುಂಡಿಗಳ ಬಿಬಿಎಂಪಿ ಲೆಕ್ಕ ಕೇಳಿದ್ರೆ ನೀವು ನಗ್ತೀರಿ! ಹೊಸದಾಗಿ ಎಷ್ಟು ಗುಂಡಿಯಿದೆ?

    ಬೆಂಗ್ಳೂರು ರಸ್ತೆ ಗುಂಡಿಗಳ ಬಿಬಿಎಂಪಿ ಲೆಕ್ಕ ಕೇಳಿದ್ರೆ ನೀವು ನಗ್ತೀರಿ! ಹೊಸದಾಗಿ ಎಷ್ಟು ಗುಂಡಿಯಿದೆ?

    ಬೆಂಗಳೂರು: ಕೋರ್ಟ್ ಚಾಟಿ ಬೀಸುವ ಮುನ್ನ ಬಿಬಿಎಂಪಿ ಲೆಕ್ಕದಲ್ಲಿದ್ದ ರಸ್ತೆ ಗುಂಡಿಗಳ ಸಂಖ್ಯೆ ಈಗ ಭಾರೀ ಏರಿಕೆಯಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿ ಈಗ ನಗೆಪಾಟಲಿಗೆ ಗುರಿಯಾಗಿದೆ.

    ರಸ್ತೆ ಗುಂಡಿಗಳ ಕುರಿತು ಲೆಕ್ಕ ನೀಡುವಂತೆ ಕೋರ್ಟ್ ಕೇಳುತ್ತಿದ್ದಂತೆ ಆತುರವಾಗಿ ಅಧಿಕಾರಿಗಳು ಕೇವಲ 52 ಅಂತಾ ತಿಳಿಸಿದ್ದರು. ಆದರೆ ಅವುಗಳ ಸಂಖ್ಯೆ ಈಗ 798ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1 ರವರೆಗೆ ಗುರುತಿಸಿದ ಹೊಸ ಪಟ್ಟಿಯ ಪ್ರಕಾರ ನಗರದಲ್ಲಿ ಹಳೇ ಗುಂಡಿ ಸೇರಿದಂತೆ ಒಟ್ಟು 850 ಗುಂಡಿಗಳಿವೆ.

    ಎಲ್ಲಲ್ಲಿ ಎಷ್ಟು ಗುಂಡಿಗಳು?:
    ಬೆಂಗಳೂರು ಪೂರ್ವ, ಪಶ್ಚಿಮ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ ವಲಯದಲ್ಲಿ ರಸ್ತೆ ಗುಂಡಿಗಳೇ ಇಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ದಕ್ಷಿಣ ವಲಯದಲ್ಲಿ 183, ರಾಜರಾಜೇಶ್ವರಿ ನಗರ ವಲಯದಲ್ಲಿ 350, ಯಲಹಂಕ ವಲಯದಲ್ಲಿ 71, ಮುಖ್ಯ ರಸ್ತೆಗಳಲ್ಲಿ 194 ಗುಂಡಿಗಳಿವೆ ಅಂತಾ ಬಿಬಿಎಂಪಿ ಲೆಕ್ಕ ಹಾಕಿದೆ. ಈವರೆಗೆ ಕೇವಲ 314 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, 536 ರಸ್ತೆ ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೆಂಗಳೂರು ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಸೆಪ್ಟೆಂಬರ್ 24ರೊಳಗಾಗಿ ಮುಚ್ಚಬೇಕು ಅಂತಾ ಹೈಕೋರ್ಟ್ ಬಿಬಿಎಂಪಿಗೆ ಖಡಕ್ ಎಚ್ಚರಿಕೆ ನೀಡಿತ್ತು. ಬಿಬಿಎಂಪಿ ಮೇಲೆ ಛೀಮಾರಿ ಹಾಕಿದ್ದ ಹೈಕೋರ್ಟ್ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಬಿಬಿಎಂಪಿಯನ್ನೇ ಮುಚ್ಚಿ ಎಂದು ಚಾಟಿ ಬೀಸಿತ್ತು. ಕಾಂಟ್ರಾಕ್ಟರ್ ಮತ್ತು ಎಂಜಿನಿಯರ್ ಗಳ ಹೆಸರು ಕೊಡಿ ಎಂದು ಕೂಡ ನ್ಯಾಯಾಲಯ ಹೇಳಿತ್ತು. ಹೈ ಕೋರ್ಟ್ ಚಾಟಿಯಿಂದ ಎಚ್ಚೆತ್ತ ಬಿಬಿಎಂಪಿ ರಾತ್ರಿ ಹಗಲು, ಎನ್ನದೆ ರಸ್ತೆ ಗುಂಡಿಗಳನ್ನು ಮುಚ್ಚಲು ಹರಸಾಹಸ ಪಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮಾಂಸ ತ್ಯಾಜ್ಯದಿಂದ ತುಂಬುತ್ತಿದೆ ವರ್ತೂರು ಕೆರೆ- ವಾಸನೆಗೆ ಬೇಸತ್ತ ಸ್ಥಳೀಯರು

    ಮಾಂಸ ತ್ಯಾಜ್ಯದಿಂದ ತುಂಬುತ್ತಿದೆ ವರ್ತೂರು ಕೆರೆ- ವಾಸನೆಗೆ ಬೇಸತ್ತ ಸ್ಥಳೀಯರು

    ಆನೇಕಲ್: ಕೆರೆಯಲ್ಲಿ ಬೆಂಕಿ ಹಾಗೂ ನೊರೆಯಿಂದ ಕುಖ್ಯಾತಿಗೆ ಒಳಗಾಗಿದ್ದ ವರ್ತೂರು ಕೆರೆಗೆ ಇದೀಗ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಳಿ, ದನದ ಮಾಂಸದ ಕಸ ತುಂಬಿಕೊಂಡು ಗಬ್ಬು ನಾರುತ್ತಿದೆ.

    ವರ್ತೂರು ಗ್ರಾಮದಿಂದ ಕೆರೆಯ ಕೋಡಿವರೆಗೂ ಅಳವಡಿಸಿರುವ ತಂತಿ ಬೇಲಿ ಅಲ್ಲಲ್ಲಿ ತೆರೆದಿದೆ. ಇದನ್ನು ದುರ್ಬಳಕೆ ಮಾಡಿಕೊಂಡು ಕೆಲವು ಕೋಳಿ, ಕಸಾಯಿಖಾನೆ ಅಂಗಡಿಗಳ ಮಾಲೀಕರು ಮಾಂಸದ ತ್ಯಾಜ್ಯವನ್ನು ರಾತ್ರೋ ರಾತ್ರಿ ತಂದು ಕೆರೆಗೆ ಸುರಿದು ಹೋಗುತ್ತಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ನಾಯಿ ಹಾಗೂ ಹದ್ದುಗಳ ಕಾಟ ಹೆಚ್ಚಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

    ಅಧಿಕಾರಿಗಳು, ಮಂತ್ರಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾಗ ಕೆಲವು ಬಿಬಿಎಂಪಿ ಕಾರ್ಮಿಕರು ದಂಡೆಯ ಮೇಲಿದ್ದ ಕಸವನ್ನು ಕೆರೆಗೆ ನೂಕುತ್ತಿದ್ದು, ಸ್ಥಳಾಂತರ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಲ್ಲಿ ಬಿದ್ದ ಮಾಂಸವನ್ನು ತಿನ್ನಲು ಹಾವುಗಳು ಬರುತ್ತಿವೆ. ಹೀಗಾಗಿ ನಮಗೆ ಹುಲ್ಲು ಕಟಾವ್ ಮಾಡಲು ಹೆದರಿಕೆ ಆಗುತ್ತಿದೆ. ಕೆರೆಗೆ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವರ್ತೂರು ನಿವಾಸಿ ಲೋಕೇಶ್ ಆಗ್ರಹಿಸಿದ್ದಾರೆ.

    ಸ್ಥಳೀಯರಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಕೆರೆಯ ದಂಡೆ ಮಾರ್ಗವಾಗಿ ಸಂಚಾರ ಮಾಡಿದರೆ ಗಬ್ಬುನಾಥಕ್ಕೆ ವಾಂತಿ ಬರುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು, ತಕ್ಷಣವೇ ಕಸ ತೆರವು ಮಾಡಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗಳೂರು ಕಿಂಗ್‍ಪಿನ್‍ಗಳ ಕ್ಲೀನ್‍ಗೆ ‘ತ್ರೀ ಮಂಥ್ ಮಿಷನ್’

    ಬೆಂಗಳೂರು ಕಿಂಗ್‍ಪಿನ್‍ಗಳ ಕ್ಲೀನ್‍ಗೆ ‘ತ್ರೀ ಮಂಥ್ ಮಿಷನ್’

    -ಸಿಸಿಬಿ ಅಧಿಕಾರಿಗಳ ಚಳಿ ಬಿಡಿಸಿದ ಅಲೋಕ್ ಕುಮಾರ್

    ಬೆಂಗಳೂರು: ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಸಿಸಿಬಿ ಎಡಿಜಿಪಿ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ‘ತ್ರೀ ಮಂಥ್ ಮಿಷನ್’ ಹೆಸರಿನಲ್ಲಿ ಬೆಂಗಳೂರು ಕಿಂಗ್‍ಪಿಂನ್‍ಗಳ ಕ್ಲೀನ್‍ಗೆ ಮುಂದಾಗಿದ್ದಾರೆ.

    ಇಂದು ಕಮೀಷನರ್ ಕಚೇರಿಯಲ್ಲಿ ಸಿಸಿಬಿಯ ಎಲ್ಲ ಎಸಿಪಿ, ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ಜೊತೆಗೆ ಅಲೋಕ್ ಕುಮಾರ ಸಭೆ ನಡೆಸಿದ್ದು, ಈ ವೇಳೆ ಕಿಂಗ್‍ಪಿನ್‍ಗಳ ಮಟ್ಟಹಾಕುವ ಕಾರ್ಯಾಚರಣೆ ಕುರಿತು ಮಾಹಿತಿ ಹಾಗೂ ಸೂಚನೆ ನೀಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

    ಸಭೆಯಲ್ಲಿ ಚರ್ಚೆ ಆಗಿದ್ದೇನು?
    ಸಂಘಟಿತ ಅಪರಾಧ ತಡೆ ಸೇರಿದಂತೆ ಮೀಟರ್ ಬಡ್ಡಿ ವ್ಯವಹಾರ, ಲ್ಯಾಂಡ್ ಗ್ರ್ಯಾಬಿಂಗ್, ಮಟ್ಕಾ ದಂಧೆ, ಇಸ್ಪೀಟ್ ಅಡ್ಡೆಗಳಿಗೆ ಬ್ರೇಕ್ ಹಾಕಲು ಮೊದಲ ಆದ್ಯತೆ ನೀಡಬೇಕು. ರಿಯಲ್ ಎಸ್ಟೇಟ್ ಮಾಫಿಯಾ, ಸಿವಿಲ್ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬಾರದು. ಸದಾ ಜಾಗೃತರಾಗಿದ್ದು, ರೌಡಿಗಳ ಪತ್ತೆ ಹಾಗೂ ಅವರ ಮೇಲೆ ನಿಗಾ ಇಡಬೇಕು. ಸಿಸಿಬಿ ಅಂದ್ರೆ ವಾರ್ ರೂಮ್, ಹಗಲು-ರಾತ್ರಿ ಕೆಲಸ ನಡೆಯುತ್ತಿರಬೇಕು. ದಿನಾಂಕ ಗುರುತಿಸಿ ಕೆಲಸ ಮಾಡುವುದನ್ನು ಬಿಟ್ಟು, 24*7 ವಾರ್ ರೀತಿ ಕೆಲಸ ಮಾಡಬೇಕು. ಕೂಡಲೇ ಎಲ್ಲರೂ ಕಾರ್ಯ ಪ್ರವೃತ್ತರಾಗಿ, ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ನಮ್ಮ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳು, ಸಾರ್ವಜನಿಕರು ಮತ್ತು ರಾಜಕಾರಣಿಗಳಿಗೆ ನಂಬಿಕೆ ಬರುವಂತಿರುವಂತೆ ಕೆಲಸ ನಿರ್ವಹಿಸಬೇಕು. ಈ ಮೂಲಕ ಸಿಸಿಬಿಗೆ ಮತ್ತೆ ಹಳೇ ಚಾರ್ಮ್ ತಂದುಕೊಡಲು ಶ್ರಮಿಸಿ ಎಂದು ಸೂಚಿಸಿರುವ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಕಳುಹಿಸಿದ್ದಾರೆ. ನಂಬಿಕೆ ಉಳಿಸಿಕೊಳ್ಳುವ ರೀತಿ ಕೆಲಸ ಆಗಬೇಕು ಎಂದು ಎಚ್ಚರಿಕೆ ನೀಡಿದ್ದಾರಂತೆ.

    ನಾರ್ವೆ ಸೋಮಶೇಖರ್ ಹೆಸರು ಎತ್ತಿದ ಅಲೋಕ್ ಕುಮಾರ್, ಸೋಮಶೇಖರ್ ಈಗ ಏನು ಮಾಡುತ್ತಿದ್ದಾನೆ ಅಂತ ನಿಮಗೆ ಗೊತ್ತಿದೆಯಾ? ಏನು ಕೆಲಸವಿಲ್ಲದೆ ಅವನಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಈ ಬಗ್ಗೆ ನನಗೆ ಮಾಹಿತಿ ಇದೆ. ಯಾರ ಹಿಂದೆ ಯಾರು ಇದ್ದಾರೆ ಎನ್ನವ ಲಿಸ್ಟ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಅಧಿಕಾರಿಗಳಿ ಕ್ಲಾಸ್:
    ಒಂದು ವರ್ಷದಿಂದ ಎಷ್ಟು ಕೆಲಸ ಮಾಡಿರುವಿರಿ, ಎಷ್ಟು ಪ್ರಕರಣ ದಾಖಲಿಸಿರುವಿರಿ, ಗೀತಾ ವಿಷ್ಣು ಪ್ರಕರಣದ ಕುರಿತು ಚಾರ್ಜ್ ಶೀಟ್ ಏಕೆ ಹಾಕಿಲ್ಲ? ಆರು ತಿಂಗಳನಿಂದ ಬಾಕಿಯಿರುವ ಪ್ರಕರಣಗಳು ಎಷ್ಟು? ಎಂದು ಪ್ರಶ್ನಿಸಿರುವ ಅವರು, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ. ನಮ್ಮ ಕೆಲಸ ನಮಗೆ ತೃಪ್ತಿ ತರುವಂತಿರಬೇಕು. ಕೆಲಸ ಮಾಡಲು ಆಗದವರು ಜಾಗ ಖಾಲಿ ಮಾಡಿ. ನಾನು ನಿಮ್ಮ ಹತ್ತಿರ ಬೇರೆ ಏನೂ ಕೇಳುವುದಿಲ್ಲ, ಕೆಲಸ ಮಾತ್ರ ಕೇಳುತ್ತೇನೆ ಎಂದು ತಿಳಿಸಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಸುವರ್ಣ ಸೌಧದಲ್ಲಿ ಸಿಎಂ ಜನತಾ ದರ್ಶನ

    ಸುವರ್ಣ ಸೌಧದಲ್ಲಿ ಸಿಎಂ ಜನತಾ ದರ್ಶನ

    ಬೆಳಗಾವಿ: ನಗರದ ಸುವರ್ಣ ಸೌಧದಲ್ಲಿ ಇಂದು ಸಿಎಂ ಪ್ರಥಮ ಜನತಾ ದರ್ಶನ ನಡೆಸಲಾಗುತ್ತಿದ್ದು, ಜಿಲ್ಲಾಡಳಿತ ಸಿಬ್ಬಂದಿ ಭಾಗವಹಿಸುತ್ತಿದ್ದಾರೆ.

    ಮಾನ್ಯ ಮುಖ್ಯಮಂತ್ರಿಗಳು ಪ್ರಥಮ ಬಾರಿ ಜನತಾ ದರ್ಶನ ಮಾಡಲಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿಗಳ ವಿಶೇಷ ವಾಹನ ತಯಾರಾಗಿದ್ದು, ಜಿಲ್ಲೆಯ ಜಿಲ್ಲಾಡಳಿತ ಸಿಬ್ಬಂದಿಗಳೆಲ್ಲಾ ಜನತಾ ದರ್ಶನಕ್ಕೆ ತೆರಳಲು ಸಿದ್ದರಾಗಿದ್ದಾರೆ. ಅಷ್ಟೇ ಅಲ್ಲದೇ ಜನತಾ ದರ್ಶನವನ್ನು ಯಾವ ರೀತಿ ಮಾಡಬೇಕು ಎಂದು ಈಗಾಗಲೇ ತರಬೇತಿಯನ್ನು ನೀಡಿದ್ದಾರೆ.

    ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. 50ಕ್ಕೂ ಹೆಚ್ಚು ಸಿಬ್ಬಂದಿ, ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಶುಕ್ರವಾರ ಜಿಲ್ಲೆಯ ಪುರಸಭೆಯಲ್ಲಿ ಯಾವ ರೀತಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಭೇಟಿ ಮಾಡಲಿದ್ದಾರೆ ಹಾಗೂ ಸಮಸ್ಯೆಗಳನ್ನು ಯಾವ ರೀತಿ ಕೇಳಬೇಕು ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಎಲ್ಲಾ ಪೂರ್ವಸಿದ್ಧತೆಗಳನ್ನು ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೋದಾಮಿನಲ್ಲಿ ಕೊಳೆಯುತ್ತಿವೆ ಕೊಡಗು, ಕೇರಳ ಸಂತ್ರಸ್ತರಿಗೆ ನೀಡಿದ ದವಸ ಧಾನ್ಯಗಳು

    ಗೋದಾಮಿನಲ್ಲಿ ಕೊಳೆಯುತ್ತಿವೆ ಕೊಡಗು, ಕೇರಳ ಸಂತ್ರಸ್ತರಿಗೆ ನೀಡಿದ ದವಸ ಧಾನ್ಯಗಳು

    ಬಳ್ಳಾರಿ: ಕೊಡಗು, ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಪರಿಸ್ಥಿತಿಗೆ ನಾಡಿನ ಜನರು ಸಾಕಷ್ಟು ನೆರವು ನೀಡಿದ್ದಾರೆ. ಸಂತ್ರಸ್ತರಿಗಾಗಿ ಸಾವಿರಾರು ಜನರು ಆಹಾರ ಧಾನ್ಯ, ದವಸ, ಬಟ್ಟೆ ಬರೆ, ಔಷಧಿಗಳನ್ನು ಸಂತ್ರಸ್ತರಿಗಾಗಿ ನೀಡಿದ್ದಾರೆ. ಆದರೆ ಸಂತ್ರಸ್ತರಿಗೆ ತಲುಪಬೇಕಾಗಿದ್ದ ರಾಶಿ ರಾಶಿ ವಸ್ತುಗಳು ಇದೀಗ ಬಳ್ಳಾರಿಯ ಗೋದಾಮವೊಂದರಲ್ಲಿ ಕೊಳೆಯುತ್ತಿವೆ.

    ಕೊಡಗು ಹಾಗೂ ಕೇರಳ ಸಂತ್ರಸ್ತರಿಗೆ ವಸ್ತುಗಳನ್ನು ತಲುಪಿಸಲು ಲಾರಿ ಸಿಗಲಿಲ್ಲ ಅಂತಾ ಬಳ್ಳಾರಿ ಜಿಲ್ಲಾಡಳಿತ ಕೈ ಚೆಲ್ಲಿ ಕುಳಿತಿದೆ. ಬಳ್ಳಾರಿ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಇದೀಗ ರಾಜ್ಯದ ಜನರು ಹಿಡಿಶಾಪ ಹಾಕುವಂತಾಗಿದೆ. ಏಕೆಂದರೆ ಕೊಡಗು ಹಾಗೂ ಕೇರಳದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯಿಂದ ನಲುಗಿದ ಸಂತ್ರಸ್ತರಿಗಾಗಿ ಬಳ್ಳಾರಿಯ ಸಾವಿರಾರು ಜನರು ಸಾಕಷ್ಟು ದವಸ, ಧಾನ್ಯ, ಬಟ್ಟೆ, ಬರೆ, ಔಷಧಿ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳನ್ನು ನೀಡಿದ್ದರು. ಆದರೆ ಬಳ್ಳಾರಿ ಜಿಲ್ಲಾಡಳಿತ ಸಂತ್ರಸ್ತರಿಗಾಗಿ ತಲುಪಿಸಬೇಕಾದ ಸಾಮಾಗ್ರಿಗಳನ್ನು ಗೊದಾಮಿನಲ್ಲಿಟ್ಟು ನಿರ್ಲಕ್ಷ್ಯ ವಹಿಸಿದ ಪರಿಣಾಮ ಸಂತ್ರಸ್ತರಿಗೆ ತಲುಪಬೇಕಿದ್ದ ಸಾಮಾಗ್ರಿಗಳು ಗೋದಾಮಿನಲ್ಲೆ ಕೊಳೆಯುವಂತಾಗಿದೆ.

    ಸಂತ್ರಸ್ತರಿಗಾಗಿ ಸಾವಿರಾರು ಜನರು ತಮ್ಮ ದುಡಿದ ದುಡಿಮೆಯಲ್ಲೇ ಸಾಕಷ್ಟು ಸಾಮಾಗ್ರಿಗಳನ್ನು ನೀಡಿದ್ದರು. ಇನ್ನೂ ಕೆಲವರು ಅಲ್ಪ ಸ್ವಲ್ಪ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡಿದ್ದರು. ಅಲ್ಲದೇ ಸಿಎಂ ಪರಿಹಾರ ನಿಧಿಗೆ ನೀಡಿದ ಸುಮಾರು 7 ಲಕ್ಷ ರೂ. ಗೂ ಅಧಿಕ ಮೊತ್ತದ ಚೆಕ್‍ಗಳನ್ನು ಸಹ ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಕೌಂಟ್‍ಗೆ ತಲುಪಿಸದೇ ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ದುರಂತಮಯವಾಗಿದೆ. ಈ ಕುರಿತು ಗೃಹರಕ್ಷಕ ದಳದ ಅಧಿಕಾರಿಯನ್ನು ಪ್ರಶ್ನೆ ಮಾಡಿದರೆ ಸಾಮಾಗ್ರಿಗಳನ್ನು ಸಾಗಿಸಲು ಲಾರಿ ಸಿಗಲಿಲ್ಲ. ನಾಳೆ ನಾಡಿದು ಕಳುಹಿಸುತ್ತೇವೆ ಅಂತಾ ನಿರ್ಲಕ್ಷ್ಯತನದ ಉತ್ತರ ನೀಡುತ್ತಾರೆ.

    ಬಳ್ಳಾರಿ ಜಿಲ್ಲೆಯಲ್ಲಿ ಸಾವಿರಾರು ಲಾರಿಗಳಿದ್ದರೂ ಜಿಲ್ಲಾಡಳಿತಕ್ಕೆ ಮಾತ್ರ ಸಂತ್ರಸ್ತರ ಸಾಮಾಗ್ರಿಗಳನ್ನು ಸಾಗಿಸಲು ಒಂದು ಲಾರಿಯೂ ಸಹ ಸಿಗಲಿಲ್ಲ ಅನ್ನೋದು ನಿಜಕ್ಕೂ ದುರಂತಮಯವಾಗಿದೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಜನರು ಇದೆಂಥ ಜಿಲ್ಲಾಡಳಿತ. ಇವರೆಂಥಾ ಜಿಲ್ಲಾಧಿಕಾರಿ ಅಂತಾ ಹಿಡಿಶಾಪ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ ಅಧಿಕಾರಿಗಳು!

    ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ ಅಧಿಕಾರಿಗಳು!

    ಗದಗ: ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.

    ಜಿಲ್ಲಾಧಿಕಾರಿ ಎಂಜಿ ಹಿರೇಮಠ್ ನೇತೃತ್ವದಲ್ಲಿ ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಜನಸ್ಪಂದನಾ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇಡೀ ಜಿಲ್ಲಾಡಳಿತದ ಅಧಿಕಾರಿಗಳು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಡೀ ಜಿಲ್ಲಾಡಳಿತವೇ ತಮ್ಮ ಗ್ರಾಮಕ್ಕೆ ಬರುವುದರಿಂದ ನಮ್ಮ ಸಮಸ್ಯೆಗಳು ಇಲ್ಲಿಗೆ ಮುಗಿಯಲಿವೆ ಅಂತ ಅಲ್ಲಿನ ಜನರು ನಂಬಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.

    ಪ್ರವಾಸಿ ಮಂದಿರದ ಎ.ಸಿ ರೂಂನಲ್ಲೇ ವಾಸ್ತವ್ಯ ಹೂಡಿ, ಮೃಷ್ಟಾನ್ನ ಭೋಜನ ಸವಿದರು. ಡಿಸಿ ಎಂ.ಜಿ ಹಿರೇಮಠ್ ನೇತೃತ್ವದ ಅಧಿಕಾರಿಗಳು ಉತ್ತರ ಕರ್ನಾಟಕದ ಭಾರೀ ಭೋಜನ ಮಾಡಿ, ಬಾಳೆ ಹಣ್ಣು, ಸೇಬುಗಳನ್ನ ಜೇಬಿಗಿಳಿಸಿ ತಿಂದು ತೇಗಿ ಎಸಿ ರೂಮ್ ನಲ್ಲಿ ಹಾಯಾಗಿ ಮಲಗಿದ್ದಾರೆ. ಡಿಸಿ ಎಂ.ಜಿ ಹಿರೇಮಠ್, ಜಿಲ್ಲಾ ಪಂಚಾಯತ್ ಸಿಇಒ ಮಂಜುನಾಥ್ ಚವ್ಹಾಣ, ಅಪರ ಡಿಸಿ ಶಿವಾನಂದ, ಎಸಿ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಗ್ರಾಮ ವಾಸ್ತವ್ಯದಲ್ಲಿ ಭಾಗಿಯಾಗಿದ್ದರು.

    ಎಲ್ಲ ಅಧಿಕಾರಿಗಳಿಗೆ ಹೈಫ್ ಕಾಟ್, ಬೆಡ್‍ಶಿಟ್, ತಲೆದಿಂಬು, ಬ್ಲಾಂಕೆಟ್ ವ್ಯವಸ್ಥೆ ಮಾಡಲಾಗಿತ್ತು. ಇದು ಗದಗ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದ ಅಸಲಿ ಕಥೆ ಆಗಿದೆ. ಇನ್ನು ಈ ಕುರಿತು ಡಿಸಿ ಅವರನ್ನು ಕೇಳಿದರೆ 52 ಅರ್ಜಿಗಳು ಬಂದಿದ್ದು, ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ. ಕೆಲ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮರಳಿಗೆ ಸರ್ಕಾರಿ ಬೆಲೆ 4 ಸಾವಿರದ 800- ದಂಧೆಕೋರರು ಪಡೆಯೋದು 14 ಸಾವಿರ

    ಮರಳಿಗೆ ಸರ್ಕಾರಿ ಬೆಲೆ 4 ಸಾವಿರದ 800- ದಂಧೆಕೋರರು ಪಡೆಯೋದು 14 ಸಾವಿರ

    – ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕರಾಗಿರುವ ಬಾದಾಮಿ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆಕೋರರು ಆಡಿದ್ದೇ ಆಟ, ಅಧಿಕಾರಿಗಳು ಮಾಡಿದ್ದೇ ಕಾರುಬಾರು ಎನ್ನುವ ಪರಿಸ್ಥಿತಿ ಎದುರಾಗಿದೆ.

    ಬಾದಾಮಿ ಜನರು ಸಿದ್ದರಾಮಯ್ಯ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆ ಈಗ ಹುಸಿಯಾಗುತ್ತಿದೆ. ಯಾಕೆಂದರೆ ಓರ್ವ ಮಾಜಿ ಸಿಎಂ ಈ ಕ್ಷೇತ್ರದ ಶಾಸಕರಾದರೂ ಕ್ಷೇತ್ರದಲ್ಲಿನ ಅಕ್ರಮ ಮರಳುಗಾರಿಕೆ ನಿಂತಿಲ್ಲ. ಬಾದಾಮಿ ತಾಲೂಕಿನ ಜಾಲಿಹಾಳ, ಚೊಳಚಗುಡ್ಡ, ನಾಗರಾಳ, ಸುಳ್ಳ, ಹೆಬ್ಬಳ್ಳಿ, ಕಿತ್ತಳಿ ಸೇರಿದಂತೆ 11 ಖಾಸಗಿ ಜಾಗದಲ್ಲಿ ಲೀಸ್ ಮೇಲೆ ಸರ್ಕಾರಿ ಬೆಲೆ ಮೂಲಕ ಮರಳು ಮಾರಾಟ ನಡೆಯುತ್ತಿದೆ. 10 ಟನ್ ಮರಳಿಗೆ 4 ಸಾವಿರ 800 ರೂಪಾಯಿ ಸರ್ಕಾರಿ ಬೆಲೆ ಇದೆ. ಆದರೆ ಲೀಸ್‍ದಾರರು 14 ಸಾವಿರ ಹಣ ಪಡೆಯುತ್ತಿದ್ದಾರೆ. ಲೀಸ್‍ದಾರರ ಜೊತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

    ಬಾದಾಮಿ ಕ್ಷೇತ್ರದ ಹನ್ನೊಂದು ಮರಳು ಬ್ಲಾಕ್‍ನಲ್ಲಿ ಅಲ್ಲಿನ ಲೀಸ್‍ದಾರರೆ ಯಜಮಾನರಾಗಿದ್ದಾರೆ. ಟಿಪ್ಪರ್ ಮಾಲೀಕರಿಗೆ ನೀಡಿದ ಮರಳಿಗೆ ಇಲ್ಲಿ ಯಾವುದೇ ಬಿಲ್‍ನ್ನು ನೀಡಲ್ಲ. ಟಿಪ್ಪರ್ ಮಾಲೀಕರು ವಾಹನ ಬಾಡಿಗೆ ಡ್ರೈವರ್ ಖರ್ಚು ಸೇರಿ ಜನರಿಗೆ 17 ಸಾವಿರಕ್ಕೆ ಮರಳನ್ನು ತಲುಪಿಸುತ್ತಿದ್ದಾರೆ. ಜೊತೆಗೆ ಮರಳಿಗಾಗಿ ಮಲಪ್ರಭಾ ನದಿಯನ್ನು ಕೂಡ ಬಗೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಬೇರೆನೇ ಕಾರಣಗಳನ್ನು ಹೇಳುತ್ತಿದ್ದಾರೆ.

    ಮಾಜಿ ಸಿಎಂ ಕ್ಷೇತ್ರದಲ್ಲಿ ಸಕ್ರಮವಾಗಿ ನಡೆಯಬೇಕಿದ್ದ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಸಿದ್ದರಾಮಯ್ಯನವರು ಇತ್ತ ಗಮನಹರಿಸಿ ಈ ಮರಳು ದಂಧೆಗೆ ಕಡಿವಾಣ ಹಾಕಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ಕುರ್ಚಿ ಭದ್ರ ಮಾಡಿಕೊಳ್ಳೋಕೆ ಹೋಗಲ್ಲ: ಸಿಎಂ ಎಚ್‍ಡಿಕೆ

    ನಾನು ಕುರ್ಚಿ ಭದ್ರ ಮಾಡಿಕೊಳ್ಳೋಕೆ ಹೋಗಲ್ಲ: ಸಿಎಂ ಎಚ್‍ಡಿಕೆ

    ಬೆಂಗಳೂರು: ಇಂದು ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿ ಆಗಿದ್ದೇನೆ. ಈ ಹಿಂದೆಯೂ ಆಕಸ್ಮಿಕವಾಗಿ ಸಿಎಂ ಆಗಿದ್ದೆ. ಮುಖ್ಯಮಂತ್ರಿಯಾಗಿ ಎಷ್ಟು ದಿನ ಇರುತ್ತೇನೆ ಎನ್ನುವುದು ಮುಖ್ಯವಲ್ಲ. ಸಿಎಂ ಕುರ್ಚಿಯಲ್ಲಿ ನಾನು ಎಷ್ಟು ದಿನ ಇರಬೇಕೆಂಬುದನ್ನು ಭಗವಂತ ನಿರ್ಧರಿಸುತ್ತಾನೆ. ಎಂದಿಗೂ ಸಹ ನಾನು ಕುಳಿತಿರುವ ಕುರ್ಚಿಯನ್ನು ಭದ್ರ ಮಾಡಿಕೊಳ್ಳೋಕೆ ಮುಂದಾಗುವುದಿಲ್ಲ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

    ನಗರದ ಉತ್ತರ ಹಳ್ಳಿಯಲ್ಲಿ ಸಮಾಜ ಸಂಪರ್ಕ ವೇದಿಕೆ ನಿರ್ಮಾಣ ಮಾಡಿರೋ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಸಿಎಂ, ಭಗವಂತ ಎಲ್ಲಿಯವರೆಗೂ ಮುಖ್ಯಮಂತ್ರಿ ಆಗಿ ಇರುವಂತೆ ಆಶೀರ್ವಾದ ಮಾಡುತ್ತಾನೋ ಅಲ್ಲಿಯವರೆಗೆ ಇರುತ್ತೇನೆ. ಕೆಲವರು ಸರ್ಕಾರವನ್ನು ಅಸ್ಥಿರ ಮಾಡುವ ಪ್ರಯತ್ನ ಮಾಡುತ್ತಿದ್ದು, ಇಂತಹ ರಾಜಕೀಯ ಬೆಳವಣಿಗೆಯ ಬಗ್ಗೆ ನಾನು ಎಂದಿಗೂ ತಲೆ ಕೆಡಿಸಿಕೊಳ್ಳಲ್ಲ. ಕಳೆದ 12 ವರ್ಷದಿಂದ ನಾನು ನೊಂದಿದ್ದೇನೆ. ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ರು.

    ಒಂದು ವರ್ಷ ಜೈಲು:
    ರೈತರು ಲೇವಾದೇವಿದಾರರ ಹತ್ತಿರ ಸಾಲ ಪಡೆದುಕೊಂಡಿದ್ರೆ, ಅವರ ಜೀವನವೆಲ್ಲಾ ಬಡ್ಡಿ ಕಟ್ಟೋದರಲ್ಲಿ ಅಂತ್ಯವಾಗುತ್ತಿದೆ. ರಾಜ್ಯದಲ್ಲಿ ಬಡ್ಡಿ ಕಟ್ಟುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಇದು ಮುಖ್ಯ ಕಾರಣವಾಗಿದೆ. ವರ್ಷಕ್ಕೆ 1 ಲಕ್ಷ 20 ಸಾವಿರಕ್ಕಿಂತಲೂ ಕಡಿಮೆ ವರಮಾನ ಹೊಂದಿರುವ ರೈತರಿಗೆ ಲೇವಾದೇವಿವಾರರು ಸಾಲ ಹಿಂದಿರುಗಿ ಕೊಡುವಂತೆ ಒತ್ತಾಯ ಮಾಡುವಂತಿಲ್ಲ. ಒಂದು ವೇಳೆ ರೈತರಿಗೆ ಒತ್ತಡ ಹಾಕಿದ್ರೆ, ಆತನನ್ನು ಒಂದು ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೆ ತರಲು ನಿರ್ಧರಿಸಲಾಗಿದೆ.

    ಈ ನಿರ್ಧಾರದಿಂದ ಸಾಲ ನೀಡಿದ ಕೆಲವರಿಗೆ ತೊಂದರೆ ಆಗಬಹುದು. ಆದ್ರೆ ರೈತರು ತಾವು ಪಡೆದ ಹಣಕ್ಕಿಂತ ಹೆಚ್ಚಾಗಿ ಬಡ್ಡಿ ಕಟ್ಟಿರುವ ಉದಾಹರಣೆಗಳು ನಮ್ಮ ಮುಂದಿವೆ. ಆದ್ರೂ ಶೇ. 80 ರಷ್ಟು ಅಸಲು ಹಣವನ್ನು ರೈತ ಬಾಂಧವರು ಪಾವತಿಸಿದ್ದಾರೆ. ಕುಮಾರಣ್ಣನ ಕೈಯಲ್ಲಿ ಏನೂ ಆಗಲ್ಲ ಅಂತಾ ಕೆಲವರು ಹೇಳುತ್ತಿದ್ದಾರೆ. ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ ಎಂದು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ರು.

    ಮಾಜಿ ಸಿಎಂ ಹೇಳಿದ್ದೇನು?:
    ನಾನು ಮತ್ತೆ ಮುಖ್ಯಮಂತ್ರಿ ಆಗಬಾರದು ಅಂತಾ ಎಲ್ಲರು ಒಂದಾಗಿದ್ದರು. ನನ್ನ ಆಡಳಿತದ ಅವಧಿಯಲ್ಲಿ ಎಲ್ಲ ಜಾತಿಯ ಬಡ ಜನರಿಗೆ ಸಹಾಯ ಮಾಡಿರುವೆ. ಹೀಗಾಗಿ ನನಗೆ ಜನರ ಆಶೀರ್ವಾದವಿದೆ, ಮತ್ತೆ ಮುಖ್ಯಮಂತ್ರಿ ಆಗುತ್ತೇನೆ. ಇಂದು ರಾಜಕೀಯ ಹಣ ಮತ್ತು ಜಾತಿಯ ಮೇಲೆ ನಡೆಯುತ್ತಿದ್ದು, ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ. ಉತ್ತಮ ಕೆಲಸಗಳನ್ನು ಮಾಡುವವರನ್ನು ಜನರು ಗೆಲ್ಲಿಸಬೇಕಿದೆ. ನನ್ನ ಆಡಳಿತದ ಅವಧಿಯಲ್ಲಿ ಹಾಲು, ಅಕ್ಕಿ, ಪಶು ಭಾಗ್ಯ, ಶೂ ಭಾಗ್ಯ ನೀಡಿರುವೆ. ಇವು ಕೇವಲ ಒಂದು ಜಾತಿಗೆ ಸಿಮೀತವಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಹಾಸನ ಜಿಲ್ಲೆಯ ಹೊಳೆ ನರಸೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಕುಮಾರಸ್ವಾಮಿಯವರ ಕರ್ಮಭೂಮಿಯಲ್ಲೇ ಮರಳು ದಂಧೆ!

    ಸಿಎಂ ಕುಮಾರಸ್ವಾಮಿಯವರ ಕರ್ಮಭೂಮಿಯಲ್ಲೇ ಮರಳು ದಂಧೆ!

    ರಾಮನಗರ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಕರ್ಮಭೂಮಿಯಲ್ಲೇ ಮರಳು ದಂಧೆಕೋರರ ಕರ್ಮಕಾಂಡ ಎಗ್ಗಿಲ್ಲದೇ ನಡೆಯುತ್ತಿದ್ದು, ನದಿಪಾತ್ರಗಳಲ್ಲೇ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೂಲಕ ಮರಳುಗಾರಿಕೆ ನಡೆಸುತ್ತಿದ್ದಾರೆ.

    ಮಳೆಯಿಂದ ಅರ್ಕಾವತಿ ನದಿ ಪಾತ್ರದಲ್ಲಿಯೇ ನೀರು ಹರಿಯುತ್ತಿದ್ದಂತೆ ದಂಧೆಕೋರರು ಬಾಲ ಬಿಚ್ಚಿದ್ದು, ಅರ್ಕಾವತಿ ನದಿ ಪಾತ್ರದಲ್ಲಿ ಅಡ್ಡೆಗಳನ್ನು ನಿರ್ಮಿಸಿಕೊಂಡು ಮರಳು ಫಿಲ್ಟರ್ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ರಾಜರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಕ್ಯಾರೇ ಎನ್ನುತ್ತಿಲ್ಲ. ನದಿಯಲ್ಲಿ ಮರಳುಗಾರಿಕೆ ನಡೆಸುವುದರ ಜೊತೆಗೆ ಬೇರೊಂದು ಸ್ಥಳಗಳಿಂದ ಮಣ್ಣು ಮಿಶ್ರಿತ ಮರಳನ್ನು ತಂದು ಅರ್ಕಾವತಿ ನದಿಯಲ್ಲಿ ದಂಧೆಕೋರರು ಫಿಲ್ಟರ್ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ರವಿ ಹೇಳಿದ್ದಾರೆ.

    ಅಕ್ರಮ ಮರಳುಗಾರಿಕೆ ತಡೆಗಟ್ಟುವ ವಿಷಯದಲ್ಲಿ ಸಂಬಂಧಿಸಿದ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸೋದನ್ನೇ ಕೈಬಿಟ್ಟಿದೆ. ಹೊಸ ಜಿಲ್ಲಾಧಿಕಾರಿ ಬಂದರೂ ಮರಳುಗಾರಿಕೆಗೆ ತಡೆ ಹಾಕುತ್ತಾರೆ ಅಂದರೆ ಕಚೇರಿ ಬಿಟ್ಟು ಹೊರಗೆ ಬರುವುದೇ ಇಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ಮರಳುಗಾರಿಕೆ ನಡೆಯುತ್ತಿದ್ದರೂ ತಡೆಗಟ್ಟುವ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಎಲ್ಲಿಯೂ ಚೆಕ್‍ಪೋಸ್ಟ್ ಗಳಾಗಲಿ, ತಪಾಸಣೆಯಾಗಲಿ ನಡೆಯುತ್ತಿಲ್ಲ. ಅಧಿಕಾರಿಗಳಂತೂ ತಾವಾಯ್ತು, ತಮ್ಮ ಕಚೇರಿಯಾಯ್ತು ಎಂದು ತಿರುಗಾಡುತ್ತಾ ಇರುವುದು ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರಿಗೆ ಆತಂಕ!

    ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರಿಗೆ ಆತಂಕ!

    ಚಿಕ್ಕೋಡಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಡೀ ಗ್ರಾಮಸ್ಥರೇ ಆತಂಕದಿಂದ ಕಾಲ ಕಳೆಯುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆಯುತ್ತಿದೆ.

    ಸ್ವಲ್ಪ ವಿದ್ಯುತ್ ತಾಗಿದರೆ ಪ್ರಾಣ ಹೋಗುತ್ತದೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿದಿದ್ದರೂ ಗ್ರಾಮದ ಬಹುತೇಕ ಮನೆಗಳ ಮೇಲೆ ಹೈ ಟೆನ್ಶನ್ ವಿದ್ಯುತ್ ಕೇಬಲ್ ಗಳನ್ನು ಹರಿ ಬಿಟ್ಟಿದ್ದು ಜನರು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಾಂಕ್ರೆಟ್ ಮನೆಗಳು ಆಗಿರುದರಿಂದ ಎಲ್ಲಿ ಸ್ವಲ್ಪ ಶಾರ್ಟ್ ಸರ್ಕ್ಯೂಟ್‍ ಆದರೂ ಮನೆಗೆಲ್ಲ ಕರೆಂಟ್ ತಾಗಿ ಬಿಡುತ್ತೆ ಎಂಬ ಭಯ ಜನರನ್ನು ಕಾಡುತ್ತಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ಲಾಸ್ಟಿಕ್ ಪೈಪ್ ಅಳವಡಿಸಿಕೊಳ್ಳಿ ಏನೂ ಆಗಲ್ಲ ಅನ್ನುತ್ತಿರುವ ಹೆಸ್ಕಾಂ ಸಿಬ್ಬಂದಿ ಮಾತು ಕೇಳಿ ಅದನ್ನೂ ಮಾಡಿದರೂ ಪ್ಲಾಸ್ಟಿಕ್ ಸುಟ್ಟು ಹೋಗುತ್ತಿದೆ. ಇದರಿಂದ ನಮಗೆ ತುಂಬ ಭಯ ಆಗುತ್ತಿದ್ದು ಚಿಕ್ಕ ಮಕ್ಕಳ ಬಗ್ಗೆ ಕಾಳಜಿ ಹೆಚ್ಚಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಜನರು ಕಿಡಿಕಾರಿದ್ದಾರೆ.

    ಇಲ್ಲಿನ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದ್ದು ಯಾವುದೇ ಅವಘಡ ಸಂಭವಿಸುವ ಮುನ್ನ ಹೆಸ್ಕಾಂ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews