ರಾಮನಗರ: ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರು ಅಧಿಕಾರಿಗಳನ್ನೇ ಮನೆಗೆ ಕರೆಸಿಕೊಂಡು ಸಭೆ ನಡೆಸುವ ಮೂಲಕ ದರ್ಬಾರ್ ನಡೆಸಿದ್ದಾರೆ.
ಚನ್ನಪಟ್ಟಣ ಟೌನ್‍ನಲ್ಲಿನ ಜೆಡಿಎಸ್ ನಗರ ಘಟಕ ಅಧ್ಯಕ್ಷ ರಾಂಪುರ ರಾಜಣ್ಣ ತಮ್ಮ ಮನೆಗೆ ಅಧಿಕಾರಿಗಳು ಹಾಗೂ ಫುಟ್‍ಪಾತ್ ವ್ಯಾಪಾರಿಗಳನ್ನು ಮನೆಗೆ ಕರೆಸಿಕೊಂಡು ಮನೆಯಲ್ಲಿಯೇ ಸುಗಮ ಸಂಚಾರಕ್ಕಾಗಿ ಫುಟ್‍ಪಾತ್ ತೆರವುಗೊಳಿಸಿದ್ದ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ತಹಶೀಲ್ದಾರ್ ಯೋಗಾನಂದ್, ನಗರಸಭಾ ಆಯುಕ್ತ ಪುಟ್ಟಸ್ವಾಮಿ, ಟ್ರಾಫಿಕ್ ಪೊಲೀಸ್ ಅಧಿಕಾರಿಗಳನ್ನು ಕರೆಸಿಕೊಂಡು ಸಭೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಸಿಎಂ ವಿಶೇಷ ಅಧಿಕಾರಿಗಳಿದ್ದರು ಕೂಡ ಜೆಡಿಎಸ್ ಮುಖಂಡರೇ ಅಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ಸಭೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶವನ್ನುಂಟು ಮಾಡಿದೆ.
ಬೆಳಗಾವಿ/ಚಿಕ್ಕೋಡಿ: ಹುಕ್ಕೇರಿ ಪಿಯು ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಡುತ್ತಿರುವ ವರದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಬಳಿಕ ಕೆಎಸ್ಆರ್‌ಟಿಸಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ವಿದ್ಯಾರ್ಥಿಗಳ ಬಸ್ಸಿಗಾಗಿ ಪರದಾಡುತ್ತಿರುವ ವರದಿಯನ್ನು ನೋಡಿದ ಬಳಿಕ ಈಗ ಎಲ್ಲ ಬಸ್ಸುಗಳು ಕಾಲೇಜಿನ ಬಳಿ ನಿಲ್ಲಿಸಬೇಕೆಂದು ಚಾಲಕ ಮತ್ತು ನಿರ್ವಾಹಕರಿಗೆ ಸಂಕೇಶ್ವರ ವಿಭಾಗೀಯ ಅಧಿಕಾರಿ ಎಸ್ ಆರ್ ಮಾಟೋಳಿ ಮೌಖಿಕ ಆದೇಶವನ್ನು ಹೊರಡಿಸಿದ್ದಾರೆ. ಅಷ್ಟೇ ಅಲ್ಲದೇ ಬಸ್ ನಿಲುಗಡೆಗಾಗಿ ಕಾಲೇಜು ಸಮೀಪ ಟ್ರಾಫಿಕ್ ಕಂಟ್ರೋಲರ್ ಅಧಿಕಾರಿಯನ್ನು ನೇಮಿಸಿದ್ದಾರೆ. ಇದನ್ನು ಓದಿ: ವಿದ್ಯಾರ್ಥಿಗಳನ್ನು ನೋಡಿ ಬಸ್ ನಿಲ್ಲಿಸದ ಚಾಲಕರು
ಏನಿದು ಘಟನೆ?
ಬಸ್ಸಿನಲ್ಲಿ ಕಲೆಕ್ಷನ್ ಕಡಿಮೆ ಆಗುತ್ತೆ ಎನ್ನುವ ಕಾರಣಕ್ಕಾಗಿ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಚಾಲಕರು ನೂರಾರು ಬಾರಿ ಯೋಚನೆ ಮಾಡುತ್ತಿದ್ದರು. ಕಾಲೇಜು ಮುಂಭಾಗದಲ್ಲಿ ನಿಲ್ದಾಣಕ್ಕೆ ಅನುಮತಿ ನೀಡಲಾಗಿದ್ದರೂ, ಬಸ್ ನಿಲ್ಲಿಸುತ್ತಿರಲಿಲ್ಲ. ಇದರಿಂದ ನಿಲ್ಲುವ ಬಸ್ಸಿಗಾಗಿ ದಿನನಿತ್ಯ ಕಾಲೇಜು ಮುಗಿದ ಮೇಲೆ ಮೂರರಿಂದ ನಾಲ್ಕು ಗಂಟೆ ವಿದ್ಯಾರ್ಥಿಗಳು ಕಾಯಬೇಕಿತ್ತು. ಇದನ್ನು ಓದಿ: ಪಾಸ್ ಇರೋ ವಿದ್ಯಾರ್ಥಿಗಳನ್ನು ಹತ್ತಿಸದ್ದಕ್ಕೆ ಬಸ್ ಚೇಸ್ ಮಾಡಿ ಸಿಬ್ಬಂದಿಗೆ ಅಂಜಲಿ ನಿಂಬಾಳ್ಕರ್ ಕ್ಲಾಸ್!
ಬಸ್ ಬಂದರೆ ಅದರಲ್ಲಿ ಕುರಿ ತುಂಬಿದ ಹಾಗೆ ವಿದ್ಯಾರ್ಥಿಗಳನ್ನು ತುಂಬುತ್ತಿದ್ದರು. ವಿದ್ಯಾರ್ಥಿಗಳು ಹತ್ತುತ್ತಿರುವಾಗಲೇ ಚಾಲಕರು ಬಸ್ ಚಾಲನೆ ಮಾಡುತ್ತಿದ್ದರು. ಇದರಿಂದಾಗಿ ಹಲವು ವಿದ್ಯಾರ್ಥಿಗಳು ಈ ಹಿಂದೆ ಗಾಯಗೊಂಡಿದ್ದರು.
ಈ ಕಾಲೇಜು ಸಮೀಪ ಯಾವುದೇ ಬಸ್ ತಂಗುದಾಣ ಇಲ್ಲದೇ ಇರುವ ಕಾರಣ ವಿದ್ಯಾರ್ಥಿಗಳು ರಸ್ತೆ ಬದಿಯೇ ನಿಂತು ಕಾಲ ಕಳೆಯುತ್ತಿದ್ದರು. ಸಾಕಷ್ಟು ಬಾರಿ ದೂರು ನೀಡಿದರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ಈ ಹಿನ್ನೆಯಲ್ಲಿ ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸಿ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು.
ನವದೆಹಲಿ: ಲೋಕಸಭಾ ಚುನಾವಣೆ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆಯಿದ್ದು ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದ್ದಂತೆ ಚುನಾವಣಾ ಆಯೋಗ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಚುನಾವಣೆಗೆ ಸಂಬಂಧಿಸಿದಂತೆ ನೇರವಾಗಿ ಭಾಗಿಯಾಗುವ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಈಗಲೇ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದೆ.
16ನೇ ಲೋಕಸಭೆಯ ಅವಧಿ ಜೂನ್ 3 ರಂದು ಅಂತ್ಯಗೊಳ್ಳಲಿದೆ. ಹೀಗಾಗಿ ಲೋಕಸಭೆಯ ಜೊತೆಗೆ ಆಂಧ್ರಪ್ರದೇಶ, ಒಡಿಸ್ಸಾ ಮತ್ತು ಸಿಕ್ಕಿಂ ರಾಜ್ಯಗಳಲ್ಲೂ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಪತ್ರದಲ್ಲಿ ಏನಿದೆ?
ಪ್ರಮುಖವಾಗಿ ರಾಜ್ಯ, ಲೋಕಸಭಾ ಚುನಾವಣೆಯಲ್ಲಿ ನೇರವಾಗಿ ಭಾಗವಹಿಸುವ ಅಧಿಕಾರಿಗಳನ್ನು ತಮ್ಮ ಸ್ವ-ಜಿಲ್ಲೆಗಳಲ್ಲಿ ಅಥವಾ ದೀರ್ಘಕಾಲದ ಸೇವೆ ಸಲ್ಲಿಸಿದ ಸ್ಥಳದಲ್ಲಿ ಪೋಸ್ಟ್ ಮಾಡಬಾರದು ಎಂದು ತಿಳಿಸಿದೆ. ಅಲ್ಲದೇ ಸ್ವಂತ ಊರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅಥವಾ 2019 ಮೇ 31ರ ಒಳಗೆ 4 ವರ್ಷಗಳಲ್ಲಿ ಅದೇ ಸ್ಥಳದಲ್ಲಿ 3 ವರ್ಷ ಕರ್ತವ್ಯವನ್ನು ಪೂರ್ಣಗೊಳಿಸಿದ್ದರೆ ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು.
ಯಾವುದೇ ಡಿಇಒ/ಆರ್‍ಒ/ಎಆರ್‍ಒ/ ಪೊಲೀಸ್ ಅಧಿಕಾರಿಗಳು ಈ ಹಿಂದೆ ನಡೆದ ಚುನಾವಣೆ ಹಾಗೂ 2017ರ ಉಪಚುನಾವಣೆ ನಡೆದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ವರ್ಗಾಯಿಸಬೇಕು.
ಚುನಾವಣೆಯ ಹಂತದ ಮತದಾನದ ವೇಳೆ ಭದ್ರತಾ ಪಡೆಗಳ ಅವಶ್ಯಕತೆ ಲಭ್ಯತೆ ಕ್ಷೇತ್ರಗಳನ್ನು ಅವಲಂಬಿಸಿರುತ್ತದೆ. ಅಲ್ಲದೇ ಲೋಕಸಭೆಯ ಜೊತೆಗೆ ಈ ರಾಜ್ಯಗಳು ವಿಧಾನಸಭೆಗೆ ತಯಾರಿ ಆರಂಭಿಸಬಹುದು.
2014ರ ಚುನಾವಣೆಯ ಸಮಯದಲ್ಲಿ ಮಾರ್ಚ್ 5 ರಂದು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿತ್ತು. 9 ಹಂತದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿತ್ತು. ಮೊದಲ ಹಂತದ ಮತದಾನ ಏಪ್ರಿಲ್ 7 ರಂದು ನಡೆದಿದ್ದರೆ, ಕೊನೆಯ ಹಂತದ ಚುನಾವಣೆ ಮೇ 12 ರಂದು ನಡೆದಿತ್ತು.
ಚಿತ್ರದುರ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಚಳ್ಳಕೆರೆ ತಾಲೂಕಿನ ದೊಡ್ಡಚೆಲ್ಲೂರು ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡು 20 ದಿನ ಕಳೆದರೂ ಅಧಿಕಾರಿಗಳು ಭೇಟಿ ನೀಡಿಲ್ಲ. ಅಲ್ಲಿನ ತಹಶೀಲ್ದಾರ್ ಕತ್ತೆ ಕಾಯಲು ಹೋಗಿದ್ದಾರಾ? ನಿಮ್ಮ ಮನೆಯಲ್ಲಿ ಇಂತಹ ಘಟನೆ ನಡೆದಿದ್ದರೆ ಸುಮ್ಮನೆ ಇರುತ್ತಿದ್ರಾ..? ಏನ್ ನಿಮ್ಮ ತಲೆ ಮಾಹಿತಿ ಸಂಗ್ರಹ ಮಾಡುವುದು. ರೈತ ಆತ್ಮಹತ್ಯೆ ಮಾಡಿಕೊಂಡ 24 ಗಂಟೆಯ ಒಳಗಾಗಿ ನೀವು ಭೇಟಿ ನೀಡಬೇಕಿತ್ತು. ಕುಟುಂಬಸ್ಥರಿಗೆ ಧೈರ್ಯ ಹೇಳಬೇಕಿತ್ತು. ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೆ ನೀವು ತಮಾಷೆ ನೋಡುತ್ತಾ ಕುಳಿತುಕೊಳ್ಳುತ್ತೀರಾ ಎಂದು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಏನು ಕ್ರಮ ಕೈಗೊಂಡಿದ್ದಾರೆ. ನೀವು ಹೇಗೆ ಮಾಹಿತಿ ಪಡೆದಿದ್ದೀರಿ ಅಂತ ನನಗೆ ಗೊತ್ತಿಲ್ಲ. ಆದಷ್ಟು ಬೇಗ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಸ್ಥರಿಗೆ ಪರಿಹಾರ ಸಿಗುವ ವ್ಯವಸ್ಥೆ ಮಾಡಿ ಎಂದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಶೇ 100 ರಷ್ಟು ಬೆಳೆನಾಶವಾಗಿದೆ. ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುವಲ್ಲಿ ವಿಫಲವಾಗಿರುವಿರಿ. ನರೇಗಾ ಯೋಜನೆ ಅವ್ಯವಹಾರದ ಬಗ್ಗೆ ಎಚ್ಚರ ವಹಿಸಿ ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋಲಾರ: ನಗರದ ಕೆಜಿಎಫ್‍ನಲ್ಲಿ ಚಿನ್ನದ ಜೊತೆಗೆ ವಜ್ರವೂ ಇದೆ ಎಂಬ ವಂದತಿಗಳಿಗೆ ಶುಕ್ರವಾರ ಹಿರಿಯ ಭೂ ವಿಜ್ಞಾನಿಗಳ ತಂಡ ಹಾಗೂ ಅಧಿಕಾರಿಗಳ ತಂಡ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪೆದ್ದಪಲ್ಲಿ ಗ್ರಾಮದ ಬಳಿಯ ಸರ್ವೆ ನಂ. 15 ಹಾಗೂ 17 ರಲ್ಲಿ, ಸುಮಾರು ಎರಡೂವರೆ ಎಕರೆಯಲ್ಲಿ ಬೆಲೆ ಬಾಳುವ ಖನಿಜ ಸಂಪತ್ತಿನೊಂದಿಗೆ ವಜ್ರ ಇದೆ ಎಂಬ ವದಂತಿಗಳು ಎಲ್ಲಡೆ ಹಬ್ಬಿತ್ತು. ಅದರಂತೆ ಕಳೆದ ದಿನ ಸ್ಥಳಕ್ಕೆ ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ ನೀಡಿದ್ದರು. ಗ್ರಾಮದಲ್ಲಿರುವ ಬಂಡೆಯನ್ನ ಪರಿಶೀನೆಯನ್ನ ನಡೆಸಿ, ಇಲ್ಲಿ ಯಾವುದೇ ಖನಿಜ ಸಂಪತ್ತು ಇಲ್ಲವೆಂದು ಸ್ಪಷ್ಟ ಪಡಿಸಿದರು.
ಹೀಗಾಗಿ ಈ ಬಂಡೆಯನ್ನ ಪೈರೋಕ್ಲಾಸಿಕ್ ರಾಕ್ ಎಂದು ಗುರುತಿಸಿ ಪ್ರವಾಸಿ ತಾಣ ಮಾಡಲು ಕೋಲಾರ ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೆ ಇದೇ ವೇಳೆ ಪೆದ್ದಪಲ್ಲಿ ಗ್ರಾಮದ ಗಂಗಮ್ಮ ದೇವಾಲಯದ ಹಿಂಭಾಗದಲ್ಲಿ ವಿಶೇಷವಾದ ಹಾಗೂ ಅಪರೂಪವಾದ ಶಿಲಾನ್ಯಾಸಗಳ ಜೊತೆಗೆ ಭೂಸ್ಮಾರಕಗಳು ಪತ್ತೆಯಾಗಿವೆ.
ಈ ಸ್ಮಾರಕಗಳನ್ನ ರಕ್ಷಣೆ ಮಾಡಿ ಪ್ರವಾಸೋದ್ಯಮ ಸ್ಥಳವನ್ನಾಗಿ ಮಾರ್ಪಡಿಸಿ, ಭೂಗೋಳ ಶಾಸ್ತ್ರ ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನಿಗಳಿಗೆ ತರಬೇತಿ ನೀಡಲು ಈ ಸ್ಥಳ ಪ್ರಸಿದ್ಧಿ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಭೂವೈಜ್ಞಾನಿಕ ಸರ್ವೇಕ್ಷಣೆ ಅಧಿಕಾರಿಗಳು, ಕರ್ನಾಟಕ ಗಣಿ ವೈಜ್ಞಾನಿಕ ಇಲಾಖೆ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು: ಅಧಿಕಾರಿಯೊಬ್ಬ ಶಿಕ್ಷಕರ ಹಾಗೂ ಹೆಡ್ ಮಾಸ್ಟರ್ ವಿರುವ ವಾಟ್ಸಾಪ್ ಗ್ರೂಪಿನಲ್ಲಿ ನೂರಕ್ಕೂ ಹೆಚ್ಚು ಸೆಕ್ಸ್ ಹಾಗೂ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದಾನೆ.
ಬೆಂಗಳೂರು ದಕ್ಷಿಣ ವಿಭಾಗ 2ರ ವಲಯ ಸಂಪರ್ಕ ಅಧಿಕಾರಿ ಅಣ್ಣೇಗೌಡ, ತಮ್ಮ ವಯಲದ ಶಾಲೆಗೆ ಸಂಬಂಧಿಸಿದ ಮಾಹಿತಿಗಳ ಬಗ್ಗೆ ಶಿಕ್ಷಕರಿಗೆ ಹಾಗೂ ಹೆಡ್ ಮಾಸ್ಟರ್ ಗಳಿಗೆ ವಿಚಾರ ತಿಳಿಸುವ ಉದ್ದೇಶದಿಂದ ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಅಣ್ಣೇಗೌಡ ಸೆಕ್ಸ್ ಫೋಟೋಗಳನ್ನು ಹಾಗೂ ಒಂದರ ಮೇಲೋಂದರಂತೆ ನೂರಕ್ಕೂ ಹೆಚ್ಚು ಬೆತ್ತಲೆ ಫೋಟೋಗಳನ್ನು ವಾಟ್ಸಾಪ್ ಗ್ರೂಪಿಗೆ ಸೆಂಡ್ ಮಾಡಿದ್ದಾನೆ. ಇದರಿಂದ ಕಂಗಾಲಾದ ಕೆಲ ಮಹಿಳಾ ಶಿಕ್ಷಕರು ಈ ಗ್ರೂಪ್ ಸಹವಾಸನೇ ಬೇಡ ಅಂತಾ ಎಗ್ಸಿಟ್ ಆಗಿದ್ದಾರೆ. ಈ ಕೆಲಸ ಮಾಡಿದ ಅಣ್ಣೇಗೌಡ ಗ್ರೂಪ್ ನಲ್ಲಿ ಉಳಿದುಕೊಂಡಿದ್ದ ಶಿಕ್ಷಕರಿಗೆ ಕರೆ ಮಾಡಿ ಆ ಫೋಟೋಗಳನ್ನು ಡಿಲೀಟ್ ಮಾಡುವಂತೆ ವಾರ್ನಿಂಗ್ ಕೂಡ ನೀಡಿದ್ದಾರೆ.
ಇದೀಗ ಈ ಸಂಬಂಧ ಶಿಕ್ಷಕರೂ ಅಣ್ಣೇಗೌಡನ ವಿರುದ್ಧ ಬಿಇಓ ಮತ್ತೆ ಡಿಡಿಪಿಐಗೆ ದೂರು ನೀಡಲು ಮುಂದಾಗಿದ್ದಾರೆ.
ಬೆಂಗಳೂರು: ಕಿಚ್ಚ ಸುದೀಪ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಪರಿಶೀಲನೆ ಅಂತ್ಯಗೊಂಡಿದೆ.
ಐಟಿ ಅಧಿಕಾರಿಗಳು ಸತತ 47 ಗಂಟೆಯವರೆಗೆ ಸುದೀಪ್ ಮನೆಯಲ್ಲಿ ಪರಿಶೀಲನೆ ನಡೆಸಿ ಇಂದು ಬೆಳಗಿನ ಜಾವ 5.30ಕ್ಕೆ ತೆರಳಿದ್ದಾರೆ. ಸುದೀಪ್ ಮನೆಯಿಂದ ಕೆಲವು ದಾಖಲೆಗಳು, ಕಾಗದ ಪತ್ರಗಳನ್ನು ಅಧಿಕಾರಿಗಳು ತಮ್ಮ ಜೊತೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಬಳಿ ಕಿಚ್ಚ ಸುದೀಪ್ ಮನವಿ
ಐಟಿ ಅಧಿಕಾರಿಗಳು ಸುದೀಪ್ ಮನೆಯಲ್ಲಿ ಸುದೀರ್ಘ ಮ್ಯಾರಥಾನ್ ರೇಡ್ ನಡೆಸಿದ್ದಾರೆ. ಒಟ್ಟು ಎಂಟು ಅಧಿಕಾರಿಗಳಿಂದ ಎರಡು ದಿನ ಪರಿಶೀಲನೆ ನಡೆದಿದೆ. ಐಟಿ ಅಧಿಕಾರಿಗಳು ಸುದೀಪ್, ಅವರ ಪತ್ನಿ ಪ್ರಿಯಾ ಹಾಗೂ ತಾಯಿಯನ್ನು ವಿಚಾರಣೆಗೆ ಒಳಪಡಿಸಿದರು.
ಸುದೀಪ್ ಆದಾಯ ಮೂಲಗಳು, ಹೂಡಿಕೆಗಳು, ಬ್ಯಾಂಕ್ ವಹಿವಾಟು, ರಿಯಾಲಿಟಿ ಶೋಗಳ ಸಂಭಾವನೆ, ಚಿತ್ರಗಳ ಸಂಭಾವನೆ, ಚಿನ್ನಾಭರಣ ಸೇರಿ ಎಲ್ಲಾ ಆಯಾಮಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಬೆಳಗ್ಗೆ ತೆರಳಿದ್ದ ಅಧಿಕಾರಿಗಳು ಮತ್ತೆ ಸುದೀಪ್ ನಿವಾಸಕ್ಕೆ ಆಗಮಿಸಿದ್ದರು. ಕೆಲವು ದಾಖಲೆಗಳಿಗೆ ಸಹಿ ಮಿಸ್ ಆಗಿದ್ದ ಕಾರಣ ಅಧಿಕಾರಿಗಳು ಪುನಃ ಸುದೀಪ್ ಅವರ ಮನೆಗೆ ಭೇಟಿ ನೀಡಿ ಸಹಿಯನ್ನು ಪಡೆದುಕೊಂಡರು. ಇಬ್ಬರು ಐಟಿ ಅಧಿಕಾರಿಗಳು ಬ್ಯಾಗ್ ಹಿಡಿದ ಮನೆ ಒಳಗಡೆ ಹೋಗಿ ಸಹಿ ಪಡೆದು ಹತ್ತೇ ನಿಮಿಷದಲ್ಲಿ ವಾಪಸ್ ಮರಳಿದ್ದಾರೆ.
ರಾತ್ರಿಯಿಡೀ ನಡೆದ ಐಟಿ ಪರಿಶೀಲನೆಗಾಗಿ ಸುದೀಪ್ ಅವರು ಅಧಿಕಾರಿಗಳೊಂದಿಗೆ ನಿದ್ದೆ ಗೆಟ್ಟಿದ್ದರು. ರಾತ್ರಿಯಿಡಿ ಅಧಿಕಾರಿಗಳು ಕೇಳಿದ ಪ್ರತಿಯೊಂದು ಪ್ರಶ್ನೆಗಳಿಗೆ ಸುದೀಪ್ ಜೊತೆಯಲ್ಲೇ ಇದ್ದು ಉತ್ತರಿಸಿದ್ದಾರೆ.
ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಸ್ಟಾರ್ ಗಳ ಮನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಪುನೀತ್ ರಾಜ್ ಕುಮಾರ್ ಮನೆಯ ತಪಾಸಣೆ ಮುಗಿದಿದೆ.
ಪ್ರತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದು, ಸಂಪಾದಿಸಿದ್ದ, ಸಂಪಾದನೆ ಮಾಡುತ್ತಿರುವ ಲೆಕ್ಕವನ್ನೆಲ್ಲಾ ಕ್ರೋಢೀಕರಿಸುತ್ತಿದ್ದಾರೆ. ಸ್ಟಾರ್ ನಟರು ಕೇವಲ ಆಕ್ಟಿಂಗ್‍ನಲ್ಲಿ ಮಾತ್ರ ತೊಡಗಿಸಿಕೊಂಡಿಲ್ಲ. ಆಕ್ಟರ್ ಕಮ್ ಬಿಸಿನೆಸ್‍ಮೆನ್‍ಗಳಾಗಿದ್ದೇ ಇವತ್ತಿನ ಐಟಿ ರೇಡ್‍ಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ
ನಟ ಪುನೀತ್ ಮತ್ತು ಯಶ್ ಮನೆಯಲ್ಲಿ ದೊರೆತ ಆಸ್ತಿಯ ಲೆಕ್ಕಗಳನ್ನು ನೋಡುವುದಾದರೆ, ಬೆಂಗಳೂರಿನಲ್ಲಿ ಪುನೀತ್ ಹೆಸರಲ್ಲಿ 10 ಆಸ್ತಿ ಪತ್ತೆಯಾಗಿದೆ. ಗಾಂಧಿನಗರದ 6ನೇ ಕ್ರಾಸ್, ಹೆಣ್ಣೂರು, ಥಣಿಸಂದ್ರ, ಕೆಂಪಾಪುರ, ಚಿರಂಜೀವಿ ಲೇಔಟ್, ರಾಜಾಜಿನಗರದ 1ನೇ ಬ್ಲಾಕ್‍ನಲ್ಲಿ ಆಸ್ತಿ ಹೊಂದಿದ್ದು, ಕೆಂಪಾಪುರ, ಚಿರಂಜೀವಿ ಲೇಔಟ್‍ನಲ್ಲಿ 3, ಕೋರಮಂಗಲದಲ್ಲಿ ಕಮರ್ಷಿಯಲ್ ಪ್ರಾಪರ್ಟಿ ಮಾಡಿದ್ದಾರೆ. ಇನ್ನೂ ಪಿಆರ್ ಕೆ ಪ್ರೊಡಕ್ಷನ್, ಪಿಆರ್ ಕೆ ಆಡಿಯೋ ವ್ಯವಹಾರ ಬಗ್ಗೆ ಮಾಹಿತಿ ಸಂಗ್ರಹವಾಗಿದೆ. ಇಡೀ ವ್ಯವಹಾರದ ಬಗ್ಗೆ ಮಾಹಿತಿ ನೀಡಲು ನಟ ಪುನೀತ್ ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೋರಿದ್ದಾರೆ. ಇದನ್ನೂ ಓದಿ: 20ಕೆಜಿ ಬೆಳ್ಳಿ, 450ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ- ಯಶ್ ಮನೆಯಲ್ಲಿ ಪತ್ತೆ..?
ಇತ್ತ ಯಶ್ ಮನೆಯಲ್ಲಿ 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450 ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಮ್ ಸರ ಪತ್ತೆಯಾಗಿವೆ. ಅಷ್ಟೇ ಅಲ್ಲದೇ 2 ಬ್ಯಾಂಕ್‍ಗಳಲ್ಲಿ 40 ಕೋಟಿ ಸಾಲ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. 8 ಬ್ಯಾಂಕ್ ಖಾತೆ ಹೊಂದಿರುವ ಯಶ್, ತಾಯಿ ಜೊತೆ 4 ಜಂಟಿ ಖಾತೆಯನ್ನು ಹೊಂದಿದ್ದಾರೆ. ಮಂಡ್ಯದಲ್ಲಿ 8 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಅಧಿಕಾರಿಗಳ ಪ್ರತಿ ಪ್ರಶ್ನೆಗೂ ಸಹನೆಯಿಂದ ಯಶ್ ತಾಯಿ ಉತ್ತರಿಸಿದ್ದಾರೆ ಐಟಿ ಮೂಲಗಳಿಂದ ತಿಳಿದು ಬಂದಿದೆ.
ಸದ್ಯಕ್ಕೆ ಇಬ್ಬರ ನಟರ ಆಸ್ತಿ ಮಾಹಿತಿ ಲಭ್ಯವಾಗಿದ್ದು, ಇನ್ನಿಬ್ಬರ ಮಾಹಿತಿಯನ್ನು ಐಟಿ ಅಧಿಕಾರಿಗಳು ಕಲೆಹಾಕಲಾಗುತ್ತಿದೆ. ನಟ ಪುನೀತ್ ರಾಜ್‍ಕುಮಾರ್ ಮನೆಯ ಮೇಲಿನ ಐಟಿ ರೇಡ್ ಮುಗಿದಿದ್ದು, ನಟ ಯಶ್, ಸುದೀಪ್ ಮತ್ತು ಶಿವರಾಜ್‍ಕುಮಾರ್ ಮನೆಯಲ್ಲಿ ಮೂರನೇ ದಿನವೂ ಐಟಿ ದಾಳಿ ಮುಂದುವರಿದಿದೆ.
ಮಡಿಕೇರಿ: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್ ಮುಂದುವರೆಯುತ್ತಾರೆ. ಯಾವುದೇ ಗೊಂದಲ ಬೇಡ. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ, ಎಚ್‍ಡಿಡಿಗೆ ಬಿಟ್ಟ ವಿಚಾರ ಅದರ ಬಗ್ಗೆ ನಾನು ಮಾತಾನಾಡುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಮಾತಾನಾಡಿದ ಅವರು, ಬೇರೆ ಇಲಾಖೆಯ ಅಧಿಕಾರಿಗಳನ್ನು ನಾನು ವರ್ಗಾವಣೆ ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ. ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದೆ, ಯಾವುದೇ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೊಡಗು, ಹಾಸನ, ಚಿಕ್ಕಮಗಳೂರು ಕಾಫಿ ಬೆಳೆಗಾರರಿಗೆ ಆದ ನಷ್ಟದ ಶೇ. 50ರಷ್ಟು ಪರಿಹಾರವನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸ್ಪಂದಿಸುವ ಭರವಸೆ ಇದೆ. ಕೊಡಗಿನ ರಸ್ತೆಗೆ 44 ಕೋಟಿ ಹಣ ಬಿಡುಗಡೆಯಾಗಿದೆ. ಅಧಿಕಾರಿಗಳು ಕಾನೂನು ಬಿಟ್ಟು ಕೆಲಸ ಮಾಡಬಾರದು. ಕಾನೂನು ಬಾಹಿರ ಕೆಲಸ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು.
ರೈತರ ಸಾಲಮನ್ನಾ ಮಾಡುವ ಬಗ್ಗೆ ಮಾತಾನಾಡಿ ರೇವಣ್ಣ, ಬಿಜೆಪಿಯವರಿಗೆ ಮಾನಮರ್ಯಾದೆ ಇದ್ದರೆ ಸಾಲಮನ್ನಾದ ಬಗ್ಗೆ ಮಾತನಾಡಬಾರದು. ರೈತರು ಸಾಲದ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ. ನಮ್ಮ ಸರ್ಕಾರದಲ್ಲಿಯೇ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದರು.
ಹೈದರಾಬಾದ್: ತೆಲುಗು ಸ್ಟಾರ್ ಮಹೇಶ್ ಬಾಬುಗೆ ಆದಾಯ ತೆರಿಗೆ ಇಲಾಖೆ ಶಾಕ್ ಕೊಟ್ಟಿದ್ದು, ತೆರಿಗೆ ವಂಚನೆ ಆರೋಪದಡಿ ಅವರ ಬ್ಯಾಂಕ್ ಅಕೌಂಟ್ಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.
ಹೈದರಾಬಾದ್ ಜಿಎಸ್ಟಿ ಕಮೀಷನರೇಟ್ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ, ನಟ ಮಹೇಶ್ ಬಾಬು 2007-08ರಲ್ಲಿ ಸೇವಾ ತೆರಿಗೆಯನ್ನು ಪಾವತಿಸಲಿಲ್ಲ. ಅವರು ಬ್ರಾಂಡ್ ಅಂಬಾಸಿಡರ್, ಜಾಹೀರಾತು ಹಾಗೂ ಇತರ ಉತ್ಪನ್ನಗಳ ಪ್ರಚಾರಕ್ಕಾಗಿ ಜಾಹೀರಾತನ್ನು ನೀಡಿದ್ದರು. ಅದರಿಂದ ಬಂದಂತಹ ಹಣಕ್ಕೆ ತೆರಿಗೆ ಕಟ್ಟಿರಲಿಲ್ಲ.
ಮಹೇಶ್ ಬಾಬು ಸುಮಾರು 18.5 ಲಕ್ಷದಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಆದರೆ ಅದಕ್ಕೆ ಬಡ್ಡಿ, ದಂಡ ಸೇರಿ 73.5 ಲಕ್ಷ ಹಣ ಆದಾಯ ಇಲಾಖೆಗೆ ಪಾವತಿಸಬೇಕಿತ್ತು. ಹೀಗಾಗಿ ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಖಾತೆಗಳನ್ನು ತೆರಿಗೆ ಇಲಾಖೆ ವಶಕ್ಕೆ ಪಡೆದು ನೋಟಿಸ್ ನೀಡಿದೆ. ಈ ವಿಷಯದ ಬಗ್ಗೆ ಮಹೇಶ್ ಬಾಬು ಮೇಲ್ಮನವಿ ಪ್ರಾಧಿಕಾರದಿಂದ ಹಿಂಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ನಾವು ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇಂದು ಆಕ್ಸಿಸ್ ಬ್ಯಾಂಕಿನಿಂದ 42 ಲಕ್ಷ ರೂ.ಗಳನ್ನು ನಾವು ಪಡೆದುಕೊಂಡಿದ್ದೇವೆ. ಐಸಿಐಸಿಐ ಬ್ಯಾಂಕ್ ನಿಂದ ನಾಳೆ ಉಳಿದ ಬ್ಯಾಲೆನ್ಸ್ ಹಣವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ನಾಳೆ ಪಾವತಿಸದಿದ್ದರೆ ಐಸಿಐಸಿಐ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಬ್ಯಾಂಕ್ ಗೆ ಹಣ ಸೆಟ್ಲ್ ಮಾಡುವರೆಗೆ ನಟ ತನ್ನ ಖಾತೆಯನ್ನು ಮುಟ್ಟುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.