Tag: officers

  • ತುಂಬು ಗರ್ಭಿಣಿಯನ್ನು ಹೊರ ಹಾಕಿದ ಅಧಿಕಾರಿಗಳು!

    ತುಂಬು ಗರ್ಭಿಣಿಯನ್ನು ಹೊರ ಹಾಕಿದ ಅಧಿಕಾರಿಗಳು!

    ಉಡುಪಿ: ಲೋಕೋಪಯೋಗಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಮಹಿಳೆಯೊಬ್ಬರು ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ಇಲಾಖೆಯ ಅಧಿಕಾರಿಗಳು ನೆಲಸಮ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ನ್ಯಾಯಾಲಯದ ಆದೇಶದಂತೆ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗರ್‍ದಂಡೆ ಕೊಡಪಟ್ಯ ಬಳಿ ಸುಂದರಿ ಆಚಾರ್ಯ ಎಂಬವರ ಮನೆ ಕೆಡವಲಾಗಿದೆ. ಸ್ಥಳೀಯ ಪಾಂಡುರಂಗ ಹೆಗ್ಡೆ ಎಂಬವರಿಗೆ ಸೇರಿದ ಜಮೀನಿಗೆ ಹೊಂದಿಕೊಂಡು ಇದ್ದ ಲೋಕೋಪಯೋಗಿ ಇಲಾಖೆಯ ಜಮೀನಿನಲ್ಲಿ ಸುಂದರಿ ಆಚಾರ್ಯ ಅವರು ಅಕ್ರಮವಾಗಿ ಮನೆ ನಿರ್ಮಿಸಿದ್ದರು.

    ಇದರ ವಿರುದ್ಧ ಹೆಗ್ಡೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಳೆದ ಹಲವು ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಹೈಕೋರ್ಟ್ ಮನೆ ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿದೆ. ಒಂದು ವೇಳೆ ಆದೇಶ ಪಾಲಿಸದಿದ್ದಲ್ಲಿ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಜರಗಿಸುವುದಾಗಿ ನ್ಯಾಯಾಲಯ ತಿಳಿಸಿತ್ತು.

    ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಯವರ ಮಾರ್ಗದರ್ಶನದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನೆ ತೆರವುಗೊಳಿಸುವ ಸಂದರ್ಭ ಅಮಾನವೀಯ ಘಟನೆ ನಡೆದಿದೆ. ಮನೆಯಲ್ಲಿ ಒಂಬತ್ತು ತಿಂಗಳ ತುಂಬು ಗರ್ಭಿಣಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಬೀಗ ಹಾಕಲಾಯಿತ್ತು. ಬಳಿಕ ಮನೆಯನ್ನು ನೆಲಸಮ ಮಾಡಲಾಯ್ತು.

    ಈ ಸಂದರ್ಭ ಮನೆಯವರು ಪೊಲೀಸರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ, ಅಳು, ಆಕ್ರೋಶ, ಚೀರಾಟ ನಡೆದಿದೆ. ಕಾಲಾವಕಾಶ ನೀಡಿದರೂ ಮನೆ ತೆರವು ಮಾಡಿಲ್ಲ ಎಂಬೂದು ಅಧಿಕಾರಿಗಳ ವಾದವಾಗಿದೆ. ನ್ಯಾಯಾಲಯಕ್ಕೆ, ಪೊಲೀಸರಿಗೆ, ಅಧಿಕಾರಿಗಳಿಗೆ ದೂರು ನೀಡಿದ ಹೆಗ್ಡೆ ಕುಟುಂಬಕ್ಕೆ ಮಾನವೀಯತೆ ಇಲ್ಲ ಎಂದು ನೆಟ್ಟಿಗರು ಆಕ್ರೋಶದಿಂದ ವಿಡೀಯೋವನ್ನು ಶೇರ್ ಮಾಡುತ್ತಿದ್ದಾರೆ.

  • ಮೆಸ್ಕಾಂ ತೋಡಿದ್ದ ಹಳ್ಳಕ್ಕೆ ಬಿದ್ದು ನರಳಾಡಿದ ದನಕರು

    ಮೆಸ್ಕಾಂ ತೋಡಿದ್ದ ಹಳ್ಳಕ್ಕೆ ಬಿದ್ದು ನರಳಾಡಿದ ದನಕರು

    ಚಿಕ್ಕಮಗಳೂರು: ವಿದ್ಯುತ್ ಇಲಾಖೆ ತೋಡಿದ್ದ ಗುಂಡಿಗೆ ಐದಾರು ದನಕರುಗಳು ಬಿದ್ದು ಇಡೀ ರಾತ್ರಿ ನರಳಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್‍ನಲ್ಲಿ ನಡೆದಿದೆ.

    ಚಿಕ್ಕಮಗಳೂರಿನ ಸುಭಾಷ್ ನಗರದಲ್ಲಿ ಮೆಸ್ಕಾಂ ಸಿಬ್ಬಂದಿ ಸುಮಾರು 10-15 ಅಡಿ ಆಳದ 20 ಗುಂಡಿಗಳನ್ನ ತೋಡಿದ್ದರು. ಆದರೆ ಅದರ ಸುತ್ತಲೂ ಯಾವುದೇ ಬೇಲಿಯನ್ನೂ ಹಾಕಿರಲಿಲ್ಲ. ಸೋಮವಾರ ಸಂಜೆ ಮೇವು ಮೇಯ್ದುಕೊಂಡು ಬಂದ ಆರು ದನಕರುಗಳು ಆ ಗುಂಡಿಯಲ್ಲಿ ಬಿದ್ದಿದೆ. ಇಡೀ ರಾತ್ರಿ ಅಲ್ಲೇ ಗೋಳಿಟ್ಟಿವೆ. ಬೆಳಗ್ಗೆ ಗುಂಡಿಯಿಂದ ದನಕರುಗಳು ಕೂಗುತ್ತಿದ್ದ ಸದ್ದನ್ನು ಕೇಳಿ ಸ್ಥಳೀಯರು ಹಗ್ಗದ ಸಹಾಯದಿಂದ ಹಸುಗಳನ್ನ ಮೇಲೆತ್ತಿದ್ದಾರೆ.

    ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಅಂಗನವಾಡಿಯೂ ಇದೆ. ಆದರೆ ಗುಂಡಿಯನ್ನು ತೋಡಿಟ್ಟು ಮೆಸ್ಕಾಂ ಅಧಿಕಾರಿ ಸುಮ್ಮನಿದ್ದಾರೆ. ಅಪಾಯವನ್ನ ಬಾಯ್ತೆರೆದು ಕುಳಿತುರುವ ಗುಂಡಿಗಳ ಸುತ್ತಲೂ ಇಲಾಖೆ ಯಾವುದೇ ಬಂದೋಬಸ್ತ್ ಕೂಡ ಮಾಡಿಲ್ಲ. ಇಂದು ದನಕರುಗಳು ಬಿದ್ದಿವೆ. ನಾಳೆ ಪುಟ್ಟ ಪುಟ್ಟ ಮಕ್ಕಳು ಬಿದ್ದು ಹೆಚ್ಚುಕಮ್ಮಿಯಾದರೆ ಏನು ಗತಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಇಲಾಖೆ ಗುಂಡಿಯ ಸುತ್ತಲೂ ಬೇಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಜೈಲಿನಲ್ಲಿದ್ದ ಸ್ವಾಮೀಜಿ ಹೆಸರಿಗೆ ಆಸ್ತಿ ಖಾತೆ – ಮೂವರು ಅಧಿಕಾರಿಗಳು ಸಸ್ಪೆಂಡ್

    ಜೈಲಿನಲ್ಲಿದ್ದ ಸ್ವಾಮೀಜಿ ಹೆಸರಿಗೆ ಆಸ್ತಿ ಖಾತೆ – ಮೂವರು ಅಧಿಕಾರಿಗಳು ಸಸ್ಪೆಂಡ್

    ಚಾಮರಾಜನಗರ: ಜೈಲಿನಲ್ಲಿರುವ ಸ್ವಾಮೀಜಿ ಹೆಸರಿಗೆ ಮಠದ ಆಸ್ತಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದ ಮೂವರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ಕೊಳ್ಳೇಗಾಲ ಕಸಬಾ ಹೋಬಳಿ ರಾಜಸ್ವ ನಿರೀಕ್ಷರಾದ ನಿರಂಜನ್, ಸತೀಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಹೇಮಾ ಮೂವರನ್ನು ಅಮಾನತು ಮಾಡುವಂತೆ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶ ನೀಡಿದ್ದಾರೆ. ಮಹದೇಶ್ವರಬೆಟ್ಟದ ಸಾಲೂರು ಮಠಕ್ಕೆ ಸೇರಿದ ಆಸ್ತಿಯನ್ನು ಸುಳ್ವಾಡಿ ವಿಷಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮೀಜಿ ಹೆಸರಿಗೆ ಖಾತೆಗೆ ಮೂವರು ಅಧಿಕಾರಿಗಳು ಮಾಡಿಕೊಟ್ಟಿದ್ದರು.

    ಜೈಲಿನಲ್ಲಿರುವ ಸ್ವಾಮೀಜಿಯೊಂದಿಗೆ ಶಾಮೀಲಾಗಿ ಅಧಿಕಾರಿಗಳು ಖಾತೆ ಮಾಡಿ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತಕ್ಷಣ ಮೂವರನ್ನೂ ಅಮಾನತು ಮಾಡುವಂತೆ ಜೊತೆಗೆ ಖಾತೆ ರದ್ದುಪಡಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.

    ಕೊಳ್ಳೇಗಾಲ ಕಸಬಾ ಹೋಬಳಿ ಲಿಂಗಣಾಪುರ ಸರ್ವೆ ನಂಬರ್ ರಲ್ಲಿ 203 ರಲ್ಲಿನ 2 ಎಕರೆ 44 ಸೆಂಟ್ಸ್ ಭೂಮಿಯನ್ನು ಜೈಲಿನಲ್ಲಿದ್ದುಕೊಂಡೇ ಇಮ್ಮಡಿ ಮಹದೇವಸ್ವಾಮೀಜಿ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದನು. ಇದು ಕೋಟ್ಯಂತರ ಬೆಲೆಬಾಳುವ ಭೂಮಿಯಾಗಿದೆ. ಸದ್ಯಕ್ಕೆ ಸ್ವಾಮೀಜಿ ಬೇಲ್ ಸಿಗದೆ ಜೈಲಿನಲ್ಲಿದ್ದಾನೆ.

    ಸ್ವಾಮೀಜಿ ಹಣಕ್ಕಾಗಿ ಮಠದ ಆಸ್ತಿ ಮಾರಾಟಕ್ಕೆ ಹುನ್ನಾರ ನಡೆಸಿದ್ದನು. ಈಗ ಆರೋಪಿ ಸ್ವಾಮೀಜಿ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಲು ಹಣ ಹೊಂದಿಸಲು ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.

  • ನಿಷೇಧಿತ ಕ್ಯಾಟ್‍ಫಿಶ್ ಸಾಕಾಣಿಕಾ ಅಡ್ಡೆ ಮೇಲೆ ದಾಳಿ

    ನಿಷೇಧಿತ ಕ್ಯಾಟ್‍ಫಿಶ್ ಸಾಕಾಣಿಕಾ ಅಡ್ಡೆ ಮೇಲೆ ದಾಳಿ

    ರಾಮನಗರ: ತಾಲೂಕಿನ ಕಂಚುಗಾರನಹಳ್ಳಿಯಲ್ಲಿ ನಿಷೇಧಿತ ಕ್ಯಾಟ್‍ಫಿಶ್ ಸಾಕಾಣಿಕಾ ಅಡ್ಡೆಯ ಮೇಲೆ ರಾಮನಗರ ತಹಶೀಲ್ದಾರ್ ರಾಜು ನೇತೃತ್ವದಲ್ಲಿ ಅಧಿಕಾರಗಳ ತಂಡ ದಾಳಿ ನಡೆಸಿದೆ.

    ಕಂಚುಗಾರನಹಳ್ಳಿ ಹೊರವಲಯದ ಎಸ್‍ಪಿಆರ್ ತಿಮ್ಮೇಗೌಡ ಎಂಬವರಿಗೆ ಸೇರಿದ ಜಮೀನಿನಲ್ಲಿ ಬರೋಬ್ಬರಿ 38 ಹೊಂಡಗಳಲ್ಲಿ ಕ್ಯಾಟ್‍ಫಿಶ್ ಸಾಕಾಣಿಕೆ ಮಾಡಲಾಗ್ತಿತ್ತು. ಬೆಂಗಳೂರಿನ ರಜಾಕ್‍ಪಾಳ್ಯದ ನಜೀರ್ ಎಂಬವರು ಜಮೀನನ್ನು ಲೀಸ್‍ಗೆ ಪಡೆದು ಹಲವು ವ್ಯಕ್ತಿಗಳ ಜೊತೆ ಸೇರಿ ಹೊಂಡಗಳನ್ನು ನಿರ್ಮಿಸಿ ಕ್ಯಾಟ್‍ಫಿಶ್‍ಗಳನ್ನು ಸಾಕುತ್ತಿದ್ದರು.

    ಸ್ಥಳೀಯ ಗ್ರಾಮಸ್ಥರ ದೂರಿನ ಮೇರೆಗೆ ದಾಳಿ ನಡೆಸಿದ ರಾಮನಗರ ತಹಶೀಲ್ದಾರ್ ರಾಜು ಅವರು ಕ್ಯಾಟ್‍ಫಿಶ್ ಅಡ್ಡೆಗಳನ್ನು ತೆರವುಗೊಳಿಸುವಂತೆ, ಅಲ್ಲದೆ ಸಾಕಾಣಿಕೆ ಮಾಡಿರುವ ಕ್ಯಾಟ್‍ಫಿಶ್‍ನ್ನು ನಾಶಗೊಳಿಸುವಂತೆ ಆದೇಶಿಸಿದ್ದರು ನಂತರ ಜೆಸಿಬಿ ಮೂಲಕ ಹೊಂಡಗಳಿಂದ ನೀರನ್ನು ಹೊರಹಾಕಿ ಕ್ಯಾಟ್‍ಫಿಶ್ ಅಡ್ಡೆ ಹೊಂಡಗಳ ಮೇಲೆ ಮಣ್ಣು ಹಾಕುವಂತಹ ಕಾರ್ಯವನ್ನು ನಡೆಸಲಾಯಿತು.

    ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಮೀನ್‍ನ ಮಾಲೀಕರು ಹಾಗೂ ಕ್ಯಾಟ್‍ಫಿಶ್ ಸಾಕಾಣಿಕೆ ಮಾಡುತ್ತಿದ್ದವರ ಮೇಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.

  • ಅಧಿಕಾರಿಗಳ ನಿರ್ಲಕ್ಷ್ಯ – ಮತದಾನದ ಹಕ್ಕು ಕಳೆದುಕೊಂಡ ರಾಯಚೂರು ಜನತೆ

    ಅಧಿಕಾರಿಗಳ ನಿರ್ಲಕ್ಷ್ಯ – ಮತದಾನದ ಹಕ್ಕು ಕಳೆದುಕೊಂಡ ರಾಯಚೂರು ಜನತೆ

    ರಾಯಚೂರು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಲ್ಲೆಯಲ್ಲಿ ನೂರಾರು ಜನ ಮತದಾರರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ.

    ಮತದಾರರ ಪಟ್ಟಿಯಲ್ಲಿ ಮಹಾಗೊಂದಲವನ್ನ ಸೃಷ್ಟಿಸಿರುವ ಅಧಿಕಾರಿಗಳು ಬದುಕಿರುವ ಮತದಾರರ ಹೆಸರನ್ನೆ ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದಾರೆ. ರಾಯಚೂರು ತಾಲೂಕಿನ ಜಾಗೀರ್ ವೆಂಕಟಾಪುರ ಗ್ರಾಮವೊಂದರಲ್ಲೆ 20ಕ್ಕೂ ಹೆಚ್ಚು ಮತದಾರರಿಗೆ ವಂಚನೆಯಾಗಿದೆ.

    ಬೇರೆ ಬೇರೆ ಗ್ರಾಮಗಳು ಸೇರಿದಂತೆ ನೂರಾರು ಮತದಾರರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆ. ಹೀಗಾಗಿ ಗ್ರಾಮಸ್ಥರು ನಾವು ಬದುಕಿದ್ದೇವೆ ನಮಗೆ ಮತದಾನಕ್ಕೆ ಅವಕಾಶ ಕೊಡಿ ಎಂದು ಆಗ್ರಹಿಸಿದ್ದಾರೆ.

    ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ಫೋಟೋದಲ್ಲೂ ತಪ್ಪು ಮಾಹಿತಿಯನ್ನ ಮುದ್ರಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಅರ್ಜಿ ಸಲ್ಲಿಸದೇ ಇದ್ದರೂ ಮತದಾರರ ಬೂತ್‍ಗಳ ಬದಲಾವಣೆ ಮಾಡಿ ಮತದಾರರಿಗೆ ಅನಾನುಕೂಲ ಮಾಡಲಾಗಿದೆ.

    ರಾಯಚೂರಿನಲ್ಲಿ ಮುಸ್ಲಿಮರು ವಾಸಮಾಡುವ ಎಲ್‍ಬಿಎಸ್ ನಗರ ಸೇರಿ ಇತರ ವಾರ್ಡ್ ಗಳ ಮತದಾರರನ್ನು ಬೇರೆ ವಾರ್ಡ್ ಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಗೊಂದಲಕ್ಕೆ ರಾಯಚೂರು ತಹಶಿಲ್ದಾರ್ ಡಾ.ಹಂಪಣ್ಣ ಸಜ್ಜನ್ ಹಾಗೂ ಶಿರಸ್ತೆದಾರ್ ಕಾರಣ ಅಂತ ಮುಸ್ಲಿಂ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡಿಲೀಟ್ ಪ್ರಕ್ರಿಯೆ ಹೇಗೆ ನಡೆಯುತ್ತೆ?
    ಮತದಾರ ಒಂದು ಗ್ರಾಮದಲ್ಲಿ ವಾಸಿಸುತ್ತಿದ್ದರೆ ಆತ ಬದುಕಿರುವವರೆಗೂ ಮತದಾನದ ಪಟ್ಟಿಯಲ್ಲಿ ಹೆಸರು ಇರುತ್ತದೆ. ಒಂದು ವೇಳೆ ಮತದಾರ ಮೃತಪಟ್ಟರೆ ಮಾತ್ರ ಮತದಾನದ ಪಟ್ಟಿಯಿಂದ ಹೆಸರನ್ನು ಡಿಲೀಟ್ ಮಾಡಲಾಗುತ್ತದೆ. ಇಲ್ಲವಾದಲ್ಲಿ ಮತದಾರ ಬೇರೆ ಗ್ರಾಮ-ನಗರಕ್ಕೆ ಹೋಗಿ ನೆಲೆಸಿದರೆ, ಮತದಾರ ತಮ್ಮ ಮತದಾನದ ಬೂತ್‍ಗಳ ಬದಲಾವಣೆ ಮಾಡಿ ಎಂದು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಆಗ ಅಧಿಕಾರಿಗಳು ಪರಿಶೀಲನೆ ನಡೆಸಿ ಮತದಾರನ ವಿಳಾಸಕ್ಕೆ ಬೂತ್‍ಗಳ ಬದಲಾವಣೆ ಮಾಡಿ ನಂತರ ಪಟ್ಟಿಯಿಂದ ಡಿಲೀಟ್ ಮಾಡಬೇಕಾಗುತ್ತದೆ.

  • ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ

    ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ

    ರಾಯಚೂರು: ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಶಿವರಾಜ್ ಎಂಬವರ ಹೋಟೆಲ್‍ನಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಇಡಲಾಗಿತ್ತು. ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ರಾಯಚೂರಿನ ಲಿಂಗಸುಗೂರಿನ ಮುದಗಲ್‍ನ ಹೋಟೆಲ್ ಮೇಲೆ ದಾಳಿ ನಡೆಸಿ ಅಕ್ರಮ ಮದ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    7,800 ಲೀಟರ್ ಬಿಯರ್ ಹಾಗೂ 163 ಲೀಟರ್ ಲಿಕ್ಕರ್ ಸೇರಿದಂತೆ ಲಕ್ಷಾಂತರ ರೂ. ಅಕ್ರಮವಾಗಿ ಸಂಗ್ರಹಿಸಿಟ್ಟ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

    ಲಿಂಗಸುಗೂರು ಅಬಕಾರಿ ನಿರೀಕ್ಷರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ಆರೋಪಿ ಶಿವರಾಜ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿ ಮಂಜುನಾಥ್ ಹಾಗೂ ಶಿವಾನಂದ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

  • ಮತಗಟ್ಟೆ ಅಧಿಕಾರಿ ಹೃದಯಾಘಾತದಿಂದ ಸಾವು

    ಮತಗಟ್ಟೆ ಅಧಿಕಾರಿ ಹೃದಯಾಘಾತದಿಂದ ಸಾವು

    ಚಾಮರಾಜನಗರ: ಮತಗಟ್ಟೆ ಅಧಿಕಾರಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಶಾಂತಮೂರ್ತಿ (48) ಮೃತ ಮತಗಟ್ಟೆ ಅಧಿಕಾರಿ. ಸುಲ್ತಾನ ಷರೀಫ್ ಸರ್ಕಲ್ ಬಳಿ ಮತಗಟ್ಟೆ ಸಂಖ್ಯೆ 48ರಲ್ಲಿ ಈ ಘಟನೆ ನಡೆದಿದೆ. ಶಾಂತಮೂರ್ತಿ ಹನೂರು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    ಪ್ರಜಾಪ್ರಭುತ್ವದ ಹಬ್ಬ ಭವಿಷ್ಯಕ್ಕಾಗಿ ಪ್ರಜೆಗಳು ತಮ್ಮ ಪವರ್ ತೋರಿಸುತ್ತಿದ್ದಾರೆ. ಕರ್ನಾಟಕ ದಕ್ಷಿಣಾರ್ಧ ಭಾಗದ 14 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. 14 ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್, 4ರಲ್ಲಿ ಜೆಡಿಎಸ್ ಸ್ಪರ್ಧಿಸಿದೆ. ಈ 14 ಕ್ಷೇತ್ರಗಳ ಪೈಕಿ ಮಂಡ್ಯ ಕಣ ಅತ್ಯಂತ ಹೈವೋಲ್ಟೇಜ್, ಹಾಟ್‍ಸೀಟ್ ಎನಿಸಿಕೊಂಡಿದೆ.

  • ತುಮಕೂರಿನ 20 ಕೋಟಿಯ ಮೇವು ಹಗರಣಕ್ಕೆ ಮರುಜೀವ

    ತುಮಕೂರಿನ 20 ಕೋಟಿಯ ಮೇವು ಹಗರಣಕ್ಕೆ ಮರುಜೀವ

    -130 ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ

    ತುಮಕೂರು: ಜಿಲ್ಲೆಯ ಗೋ ಶಾಲೆಗಳಲ್ಲಿ ನಡೆದಿದೆ ಎನ್ನಲಾದ ಸುಮಾರು 20 ಕೋಟಿ ರೂ ಮೇವು ಹಗರಣಕ್ಕೆ ಮತ್ತೇ ಜೀವ ಪಡೆದುಕೊಂಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 130 ಅಧಿಕಾರಿಗಳ ವಿರುದ್ಧ ಇಲಾಖೆ ತನಿಖೆ ನಡೆಸುವಂತೆ ಸರ್ಕಾರ ಲೋಕಾಯುಕ್ತಕ್ಕೆ ನಿರ್ದೆಶನ ನೀಡಿದೆ. ತನಿಖೆಯಾದರೆ ಪಶು ಇಲಾಖೆಹಾಗೂ ಕಂದಾಯ ಇಲಾಖೆ ಐಎಎಸ್ ಅಧಿಕಾರಿಗಳಿಗೂ ಉರುಳಾಗುವ ಸಾಧ್ಯತೆ ಇದೆ.

    2017-18ರ ಸಾಲಿನಲ್ಲಿ ಭೀಕರ ಬರಗಾಲವಿತ್ತು. ಈ ವೇಳೆ ತುಮಕೂರು ಜಿಲ್ಲೆಯಲ್ಲಿ ತೆರೆಯಲಾದ 200ಕ್ಕೂ ಹೆಚ್ಚು ಗೋಶಾಲೆಗಳಲ್ಲಿ ಮೇವು ಹಗರಣ ನಡೆದಿರುವ ಬಗ್ಗೆ ವಾಸನೆ ಬಂದಿತ್ತು. ಜಾನುವಾರುಗಳಿಗೆ ನೀಡುವ ಒಣಹುಲ್ಲು, ಹಸಿ ಹುಲ್ಲಿನ ತೂಕದಲ್ಲಿ ವ್ಯತ್ಯಾಸ ಮಾಡಿ ಮೋಸ ಮಾಡಲಾಗ್ತಿದೆ ಎಂದು ಅಂದಿನ ಪಶುಸಂಗೋಪನಾ ಸಚಿವರಾದ ಟಿ.ಬಿ.ಜಯಚಂದ್ರರ ಮೇಲೆಯೂ ಆರೋಪ ಕೇಳಿಬಂದಿತ್ತು.

    ಈ ಬಗ್ಗೆ ಗುಬ್ಬಿ ತಾಲೂಕು ಚೇಳೂರಿನ ಮಲ್ಲಿಕಾರ್ಜುನ್ ಎಂಬವರು ಜಿಲ್ಲೆಯಲ್ಲಿ ಸುಮಾರು 20 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಲೋಕಾಯುಕ್ತ ಒಂದೂವರೆ ವರ್ಷಗಳ ಧೀರ್ಘ ಪರಿಶೀಲನೆ ಬಳಿಕ ಅವ್ಯವಹಾರ ನಡೆದಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದೇ ವರದಿ ಆಧರಿಸಿ ಸರ್ಕಾರ ಅವ್ಯವಹಾರದ ಹಣವನ್ನು ತಪ್ಪಿತಸ್ಥ ಅಧಿಕಾರಿಗಳಿಂದಲೇ ಭರಿಸಿಕೊಳ್ಳುವಂತೆ ಸೂಚಿಸಿದೆ. ಸರ್ಕಾರದ ಆದೇಶ ಕೇಳಿ ಭ್ರಷ್ಟ ಅಧಿಕಾರಿಗಳು ನಡುಗಿ ಹೋಗಿದ್ದಾರೆ.

    ದೂರುದಾರ ಮಲ್ಲಿಕಾರ್ಜುನ್‍ಗೆ ಲೋಕಾಯುಕ್ತದಲ್ಲೂ ಸಂಪೂರ್ಣ ನ್ಯಾಯ ಸಿಗುವ ಭರವಸೆ ಇಲ್ಲದಾಗಿ ಹೈಕೋರ್ಟ್ ಮೂಲಕ ಸಿಬಿಐ ತನಿಖೆ ಮಾಡಿಸುವಂತೆ ಮೇಲ್ಮನವಿ ಸಲ್ಲಿಸಲು ತಯಾರಾಗಿದ್ದಾರೆ. ಒಟ್ಟಿನಲ್ಲಿ ಜಾನುವಾರುಗಳ ಮೇವನ್ನು ಬಿಡದ ಭ್ರಷ್ಟ ಅಧಿಕಾರಿಗಳು ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಐಎಎಸ್ ಅಧಿಕಾರಿ ಹೆಸ್ರಲ್ಲಿ ಕರೆ ಮಾಡಿ, ಯಾಮಾರಿಸಿ ರಾಜಾತಿಥ್ಯ ಪಡೆದ ವ್ಯಕ್ತಿ

    ಐಎಎಸ್ ಅಧಿಕಾರಿ ಹೆಸ್ರಲ್ಲಿ ಕರೆ ಮಾಡಿ, ಯಾಮಾರಿಸಿ ರಾಜಾತಿಥ್ಯ ಪಡೆದ ವ್ಯಕ್ತಿ

    ಚಾಮರಾಜನಗರ: ವ್ಯಕ್ತಿಯೊಬ್ಬ ಐಎಎಸ್ ಅಧಿಕಾರಿಗಳ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಅಧಿಕಾರಿಗಳನ್ನು ಯಾಮಾರಿಸಿದ ಪ್ರಕರಣವೊಂದು ಚಾಮರಾಜನಗರ ಜಿಲ್ಲೆ ಯಳಂದೂರುನಲ್ಲಿ ಬೆಳಕಿಗೆ ಬಂದಿದೆ.

    ಸುರೇಶ್ ಅಧಿಕಾರಿಗಳನ್ನು ಯಾಮಾರಿಸಿದ ವ್ಯಕ್ತಿ. ಸುರೇಶ್ ಮೂಲತಃ ಮೈಸೂರಿನ ಸಿದ್ದಲಿಂಗಪುರದವನಾಗಿದ್ದು, ಐಎಎಸ್ ಅಧಿಕಾರಿಗಳಾದ ಅಂಜುಂ ಪರ್ವೇಜ್ ಹಾಗು ಲಕ್ಷ್ಮಿನಾರಾಯಣ ಹೆಸರಿನಲ್ಲಿ ಕರೆ ಮಾಡಿ ಒಂದಲ್ಲ, ಎರಡಲ್ಲ ಮೂರ್ನಾಲ್ಕು ಬಾರಿ ಯಾಮಾರಿಸಿ ರಾಜಾತಿಥ್ಯ ಪಡೆದಿದ್ದಾನೆ.

    ಸುರೇಶ್ ಚಾಮರಾಜನಗರ ಜಿಲ್ಲೆ ಯಳಂದೂರು ತಹಶೀಲ್ದಾರ್ ವರ್ಷಾ ಒಡೆಯರ್‍ಗೆ ಕರೆ ಮಾಡಿ, “ನಮ್ಮ ಕಡೆಯವರು ಬಿಳಿಗಿರಿರಂಗನ ಬೆಟ್ಟಕ್ಕೆ ಬರುತ್ತಾರೆ. ಅವರಿಗೆ ದೇವರ ದರ್ಶನ, ಊಟ ವಸತಿ ವ್ಯವಸ್ಥೆ ಕಲ್ಪಿಸಿ” ಎಂದು ಹೇಳಿದ್ದಾನೆ. ಕರೆ ನಂಬಿದ ಅಧಿಕಾರಿಗಳು ರಾಜಾತಿಥ್ಯ ನೀಡಿ ಮೋಸ ಹೋಗಿದ್ದಾರೆ.

    ಕೊನೆಗೆ ಅನುಮಾನ ಬಂದು ಕಂದಾಯ ಅಧಿಕಾರಿಗಳು ತಂಡ ರಚನೆ ಮಾಡಿ ಆತನನ್ನು ಯಳಂದೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಕೇವಲ ಎನ್‍ಸಿಆರ್(ನಾನ್ ಕಾಗ್ನಿಸೆಬಲ್ ರಿಪೋರ್ಟ್) ದಾಖಲಿಸಿಕೊಂಡು ಆರೋಪಿಯನ್ನು ಬಿಡುಗಡೆ ಮಾಡಿ ಕಳುಹಿಸಿದ್ದಾರೆ. ಐಎಎಸ್ ಅಧಿಕಾರಿಗಳ ಹೆಸರನ್ನು ದುರುಪಯೋಗಿಸಿಕೊಂಡಿದ್ದರೂ ಪೊಲೀಸರು ಮಾತ್ರ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್ ಸಂಭಾಷಣೆ ವೈರಲ್ – ಆರ್‌ಟಿಐ ಕಾರ್ಯಕರ್ತ, ಸಿಬ್ಬಂದಿಯನ್ನು ಬಲಿಪಶು ಮಾಡಲು ಮುಂದಾದ ತಹಶೀಲ್ದಾರ್

    ಮೊಬೈಲ್ ಸಂಭಾಷಣೆ ವೈರಲ್ – ಆರ್‌ಟಿಐ ಕಾರ್ಯಕರ್ತ, ಸಿಬ್ಬಂದಿಯನ್ನು ಬಲಿಪಶು ಮಾಡಲು ಮುಂದಾದ ತಹಶೀಲ್ದಾರ್

    ಮೈಸೂರು: ಜಿಲ್ಲೆಯ ತಹಶೀಲ್ದಾರ್ ಹುದ್ದೆಗೆ ಒಂದೇ ಸಮುದಾಯದ ಇಬ್ಬರು ಅಧಿಕಾರಿಗಳ ನಡುವೆ ನಡೆದಿದ್ದ ಮೊಬೈಲ್ ಸಂಭಾಷಣೆ ವೈರಲ್ ಆಗಿದ್ದು, ಈ ಸಂಬಂಧ ಆರ್‌ಟಿಐ ಕಾರ್ಯಕರ್ತನನ್ನು ಹಾಗೂ ಕಚೇರಿಯ ಸಿಬ್ಬಂದಿಯನ್ನು ಬಲಿಪಶು ಮಾಡಲು ಮೈಸೂರು ತಹಶೀಲ್ದಾರ್ ಮುಂದಾಗಿರುವ ವಿಚಾರವೊಂದು ಬೆಳಕಿಗೆ ಬಂದಿದೆ.

    ಆರ್‌ಟಿಐ ಕಾರ್ಯಕರ್ತ ನಾಗೇಂದ್ರ ಹಾಗೂ ಮೈಸೂರು ತಾಲೂಕು ಕಚೇರಿ ಸಿಬ್ಬಂದಿ ವಿರುದ್ಧ ಮೈಸೂರು ತಾಲೂಕು ತಹಶೀಲ್ದಾರ್ ರಮೇಶ್ ಬಾಬು ಅವರು ಈ ಬಗ್ಗೆ ಅಶೋಕಪುರಂನಲ್ಲಿರುವ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

    ದೂರಿನಲ್ಲೇನಿದೆ..?
    ನಾನು ರೇಣುಕುಮಾರ್ ಮಾತನಾಡಿದ್ದು ನನ್ನ ಮೊಬೈಲ್‍ನಲ್ಲಿಯೇ ರೆಕಾರ್ಡ್ ಆಗಿದೆ. ಕಣ್ತಪ್ಪಿನಿಂದ ನಮ್ಮ ಆಫೀಸ್ ವಾಟ್ಸಾಪ್ ಗ್ರೂಪ್‍ಗೆ ಶೇರ್ ಮಾಡಿದ್ದೇನೆ. ನಾನು ಸರಿಯಾಗಿ ಡಿಲೀಟ್ ಮಾಡಿರಲಿಲ್ಲ. ಹೀಗಾಗಿ ನಮ್ಮ ಕಚೇರಿ ಸಿಬ್ಬಂದಿ ಆರ್‌ಟಿಐ ನಾಗೇಂದ್ರಗೆ ಆಡಿಯೋ ಕಳುಹಿಸಿಕೊಟ್ಟಿದ್ದಾರೆ. ಅದನ್ನು ಆರ್‌ಟಿಐ ಕಾರ್ಯಕರ್ತ ನಾಗೇಂದ್ರ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಮೈಸೂರು ತಹಶೀಲ್ದಾರ್ ಕುರ್ಚಿ ಉಳಿಸಿಕೊಳ್ಳಲು ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರದ ಮಾತುಗಳನ್ನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣದ ನಂತರ ತನ್ನ ಚೇಂಬರ್ ಬಾಗಿಲಿಗೆ ಬೀಗ ಹಾಕಿಸಿ ಗುಪ್ತವಾಗಿ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿ ಈಗ ತಾವು ಮಾಡಿದ ತಪ್ಪಿಗೆ ಆರ್‌ಟಿಐ ಕಾರ್ಯಕರ್ತನನ್ನು ಹಾಗೂ ಕಚೇರಿ ಸಿಬ್ಬಂದಿಯನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv