Tag: officers

  • ಗಂಜಿ ಕೇಂದ್ರದಲ್ಲಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾದ ಸಿಬ್ಬಂದಿಗೆ ಶಾಸಕ ತರಾಟೆ

    ಗಂಜಿ ಕೇಂದ್ರದಲ್ಲಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾದ ಸಿಬ್ಬಂದಿಗೆ ಶಾಸಕ ತರಾಟೆ

    ರಾಯಚೂರು: ಗಂಜಿ ಕೇಂದ್ರದಲ್ಲಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾದ ಸಿಬ್ಬಂದಿಗೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ತರಾಟೆಗೆ ತೆಗೆದುಕೊಂಡಿದ್ದಾರೆ.

    ರಾಯಚೂರಿನ 270 ಜನರಿಗೆ 3 ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ಗುರ್ಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ನಿರಾಶ್ರಿತರಿಗೆ ಸಿಬ್ಬಂದಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾಗಿದ್ದರು.

    ಸಿಬ್ಬಂದಿ ಮಕ್ಕಳಿಗೆ ಅರೆಬೆಂದ ಅನ್ನ ಸಾಂಬರ್ ನೀಡಲು ಮುಂದಾದಾಗ ಶಾಸಕ ಬಸನಗೌಡ ದದ್ದಲ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮತ್ತೊಮ್ಮೆ ಅಡುಗೆ ಮಾಡಿ ಊಟ ಬಡಿಸಲು ಸೂಚನೆ ನೀಡಿದ್ದಾರೆ. ಈ ವೇಳೆ ಶಾಲಾ ಬಿಸಿಯೂಟ ಸಿಬ್ಬಂದಿಯಿಂದಲೇ ಅಡುಗೆ ಮಾಡಿಸುತ್ತಿರುವುದ್ದನ್ನು ನೋಡಿ ಬಸನಗೌಡ ಅವರು ಅಧಿಕಾರಿಗಳ ವಿರುದ್ಧ ಗರಂ ಆದರು.

    ಕೃಷ್ಣ ನದಿಯಲ್ಲಿ ಪ್ರವಾಹ ಹೆಚ್ಚಳ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ 4,51,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಜಿಲ್ಲೆಯ ನದಿ ತೀರದ ಹಲವು ದೇವಾಲಯಗಳು ಜಲಾವೃತವಾಗಿವೆ. ನೀರು ಹೆಚ್ಚಳ ಹಿನ್ನೆಲೆ ದೇವದುರ್ಗದ ಹೀರೆರಾಯಕುಂಪಿ ಗ್ರಾಮಕ್ಕೂ ನೀರು ನುಗ್ಗುವ ಭೀತಿಯಿದೆ. ಈಗಾಗಲೇ ಗ್ರಾಮದ ಜಮೀನುಗಳು ಜಲಾವೃತವಾಗಿವೆ. ಹೀಗಾಗಿ ಗ್ರಾಮದ 40 ಮನೆಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಜಮೀನಿನಲ್ಲಿನ ಬೆಳೆ ಕಳೆದುಕೊಂಡ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

  • ಹಿಂದಿನ ಸಿಎಂ ಟೈಂ ಬೇಕಿಲ್ಲ – ದಿಢೀರ್ ಭೇಟಿ ಕೊಟ್ಟು ಅಧಿಕಾರಿಗಳಿಗೆ ಸಿಎಂ ಕ್ಲಾಸ್

    ಹಿಂದಿನ ಸಿಎಂ ಟೈಂ ಬೇಕಿಲ್ಲ – ದಿಢೀರ್ ಭೇಟಿ ಕೊಟ್ಟು ಅಧಿಕಾರಿಗಳಿಗೆ ಸಿಎಂ ಕ್ಲಾಸ್

    ಬೆಂಗಳೂರು: ಹಿಂದಿನ ಸಿಎಂ ಟೈಂ ನನಗೆ ಬೇಕಿಲ್ಲ, ನಿಗದಿಯಾಗಿದ್ದ ಸಮಯಕ್ಕೆ ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಶಿಸ್ತು ಪಾಲಿಸುವುದು ಕಡ್ಡಾಯ ಎಂದು ವಿಧಾನಸೌಧದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿಧಾನಸೌಧದ ನೆಲಮಹಡಿಯಲ್ಲಿರುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸದ ಹಿನ್ನೆಲೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಆಗಮಿಸದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

    ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ವೇಳೆ ಅಧಿಕಾರಿಗಳು ಇನ್ನೂ ಆಗಮಿಸಿರಲಿಲ್ಲ. ತಡವಾದರೂ ಆಗಮಿಸದ ಸಿಬ್ಬಂದಿಯ ವರ್ತನೆಗೆ ಸಿಎಂ ಕೆಂಡಾಮಂಡಲರಾಗಿದ್ದು, ಸರ್ಕಾರಿ ಕೆಲಸದ ವೇಳೆಯಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರಬೇಕು. ಇಲ್ಲವಾದಲ್ಲಿ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇದೇ ವೇಳೆ ಮೇಲಧಿಕಾರಿಗಳಿಗೂ ಸಿಎಂ ವಾರ್ನ್ ಮಾಡಿದ್ದಾರೆ. ಹಿಂದಿನ ಸಿಎಂ ಟೈಂ ನನಗೆ ಬೇಕಿಲ್ಲ. ನಿಗದಿಯಾಗಿದ್ದ ಸಮಯಕ್ಕೆ ನಾನು ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಸಮಯ ಹಾಗೂ ಶಿಸ್ತು ಪಾಲಿಸುವುದು ಕಡ್ಡಾಯ. ನಿಮ್ಮ ಕೆಳ ಸಿಬ್ಬಂದಿಗೂ ಈ ಕುರಿತು ಎಚ್ಚರಿಕೆ ನೀಡಿ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಸಿಎಂ ಗುಡುಗಿದ್ದಾರೆ.

    ಆರ್ಥಿಕ ಇಲಾಖೆ ಸಭೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಯವರ ಸಲಹೆಗಾರ ಎಂ.ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯದ ಜೊತೆಗೆ ಎಚ್ಚರಿಕೆ ಕೊಟ್ಟ ಬಿಎಸ್‍ವೈ – ಇನ್‍ಸೈಡ್ ಸುದ್ದಿ

    ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯದ ಜೊತೆಗೆ ಎಚ್ಚರಿಕೆ ಕೊಟ್ಟ ಬಿಎಸ್‍ವೈ – ಇನ್‍ಸೈಡ್ ಸುದ್ದಿ

    ಬೆಂಗಳೂರು: ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಅಧಿಕಾರಿಗಳ ಸಭೆ ನಡೆಸಿ ಸಂಪೂರ್ಣ ಸ್ವಾತಂತ್ರ್ಯದ ಜತೆಗೆ ಎಚ್ಚರಿಕೆ ಕೊಟ್ಟಿದ್ದಾರೆ.

    ಸುದ್ದಿಗೋಷ್ಠಿ ಬಳಿಕ ಬಿಎಸ್ ಯಡಿಯೂರಪ್ಪ ಅವರು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಹಿಂದಿನ ಸರ್ಕಾರದಂತೆ ಯಾವುದೇ ಕೆಲಸ ತಡವಾಗುವಂತಿಲ್ಲ. ನಿಮಗೆ ಪೂರ್ಣ ಸ್ವಾತಂತ್ರ್ಯ ನೀಡುತ್ತೇನೆ. ಆದರೆ ಸ್ವಾತಂತ್ರ್ಯ ದುರುಪಯೋಗವಾದರೆ ಅದಕ್ಕೆ ನೀವೇ ಜವಾಬ್ದಾರರು. ಯಾರ ಮರ್ಜಿನಿಂದ ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ನಾವು ರೂಪಿಸುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಬರ ಪರಿಹಾರ ಸಮರೋಪಾದಿಯಲ್ಲಿ ನಡೆಯಬೇಕು. ಮುಂಗಾರು ಪ್ರಾರಂಭವಾಗಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸಮಸ್ಯೆ ಆಗಬಾರದು. ಪ್ರತಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು. ಮಳೆಗಾಲದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮವಹಿಸಿ. ಎಲ್ಲೇ ಲೋಪವಾದರೂ ಅದಕ್ಕೆ ನೀವೇ ಹೊಣೆ ಎಂದು ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.

    ಕೇಂದ್ರದಿಂದ ಸಿಗುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ಕೊಡುತ್ತೇವೆ. ರೈತರಿಗೆ ಈ ಹಣ ಸಹಾಯವಾಗಲಿದೆ. ಈ ಮೂಲಕ ರೈತರಿಗೆ ಒಟ್ಟಾರೆ 10 ಸಾವಿರ ರೂ. ಸಿಗುತ್ತದೆ. ಈ ಯೋಜನೆ ರೈತರಿಗೆ ತಲುಪಬೇಕು. 15 ದಿನಕೊಮ್ಮೆ ಅಧಿಕಾರಿಗಳು ಸಭೆ ಮಾಡುವುದು ಕಡ್ಡಾಯ. ಬರ ನಿರ್ವಹಣೆ, ಮಳೆಗಾಲದ ನಿರ್ವಾಹಣೆ ಅಧಿಕಾರಿಗಳು ಸಭೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

    ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಜಿಲ್ಲಾಧಿಕಾರಿಗಳು 15 ದಿನಕ್ಕೊಮ್ಮೆ ಸಭೆ ಮಾಡಿ, ವಾಸ್ತವ್ಯ ಹೂಡಿ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳು ತಿಂಗಳಿಗೆ 2 ಬಾರಿ ಜಿಲ್ಲಾ ಪ್ರವಾಸ ಮಾಡಿ ಸಮಸ್ಯೆಯನ್ನು ಅವಲೋಕನ ಮಾಡಿ ಪರಿಹಾರ ಕೈಗೊಳ್ಳುವುದು ಕಡ್ಡಾಯ ಎಂದು ಆದೇಶಿಸಿದ್ದಾರೆ.

    ಬೆಂಗಳೂರಿನಲ್ಲಿ ಆಗಸ್ಟ್ 2 ಹಾಗೂ 3ರಂದು ಎಲ್ಲಾ ಜಿಲ್ಲಾಧಿಕಾರಿಗಳು, ಸಿಇಓಗಳ ಸಭೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಅಧಿಕಾರಿಗಳಿಂದ ರಾಜ್ಯದ ಆರ್ಥಿಕ ಸ್ಥಿತಿಗತಿ, ಬರ ಪರಿಹಾರ, ಅತಿವೃಷ್ಟಿ, ವಿವಿಧ ಕಾಮಗಾರಿಗಳು, ಅನುದಾನ ಹಂಚಿಕೆ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಉಳಿದಂತೆ ಸಾಲಮನ್ನಾಕ್ಕೆ ನೀಡಲಾದ ಅನುದಾನ, ಸಾಲದ ಸ್ಥಿತಿಗತಿ, ಮೋಡ ಬಿತ್ತನೆ, ಮಳೆ ಸ್ಥಿತಿಗತಿ, ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಬಗ್ಗೆ ಅಧಿಕಾರಿಗಳಿಂದ ಯಡಿಯೂರಪ್ಪ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

  • ರೇಷ್ಮೆ ಗೂಡು ಮಾರಿ ತಿಂಗಳಾದ್ರೂ ಹಣವಿಲ್ಲ- ಎಚ್‍ಡಿಕೆ ಕ್ಷೇತ್ರದ ರೈತರ ಗೋಳು

    ರೇಷ್ಮೆ ಗೂಡು ಮಾರಿ ತಿಂಗಳಾದ್ರೂ ಹಣವಿಲ್ಲ- ಎಚ್‍ಡಿಕೆ ಕ್ಷೇತ್ರದ ರೈತರ ಗೋಳು

    ರಾಮನಗರ: ನಿರ್ಗಮಿತ ಮುಖ್ಯಮಂತ್ರಿಗಳ ತವರು ಕ್ಷೇತ್ರದ ರೇಷ್ಮೆ ಮಾರುಕಟ್ಟೆಯಲ್ಲಿ ರೈತರ ಗೋಳನ್ನು ಕೇಳುವವರೆ ಇಲ್ಲದಂತಾಗಿದೆ. ರೇಷ್ಮೆ ಗೂಡು ಮಾರಿ ತಿಂಗಳು ಕಳೆದರೂ ಇನ್ನೂ ಹಣ ಪಾವತಿಯಾಗದೆ, ರೈತರು ಪರದಾಡುವಂತಾಗಿದೆ.

    ರೈತರಿಗೆ ವರವಾಗಬೇಕಿದ್ದ ಆನ್‍ಲೈನ್‍ನಲ್ಲಿ ಹಣ ಪಾವತಿ ವ್ಯವಸ್ಥೆ, ಅವರ ಜೀವ ಹಿಂಡುತ್ತಿದೆ. ಪ್ರಾಯೋಗಿಕವಾಗಿ ಅಳವಡಿಸಿಕೊಂಡಿರುವ ಆನ್‍ಲೈನ್ ಹಣ ಪಾವತಿ ವ್ಯವಸ್ಥೆ ಎಡವಟ್ಟಿಗೆ ಕಾರಣವಾಗಿದ್ದು, ಅದೇ ಈಗ ರೈತರ ಕಷ್ಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ತಿಂಗಳ ಪೂರ್ತಿ ಶ್ರಮವಹಿಸಿ ರೇಷ್ಮೆ ಸಾಕಾಣಿಕೆ ಮಾಡಿದ ರೈತರು ದಿನನಿತ್ಯ ಹಣಕ್ಕಾಗಿ ಮಾರುಕಟ್ಟೆಗೆ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷ್ಮೆ ಗೂಡು ಖರೀದಿಸುವಾಗ ಆನ್‍ಲೈನ್ ಪೇಮೆಂಟ್ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಎರಡು ದಿನಗಳಲ್ಲಿ ಹಣ ಹಾಕುವುದಾಗಿ ಅಧಿಕಾರಿಗಳು ಹಾಗೂ ಡೀಲರ್ಸ್‍ಗಳು ರೈತರಿಗೆ ಸಬೂಬು ಹೇಳಿ ಸಾಗಹಾಕುತ್ತಿದ್ದಾರೆ. ಸಾವಿರಾರು ರೂ.ಗಳನ್ನು ಖರ್ಚು ಮಾಡಿಕೊಂಡು ತಿಂಗಳುಗಟ್ಟೆಲೆ ರೈತರು ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳ ವಿರುದ್ಧ ರೈತರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

  • ಜನರಿಗೆ ಕೋಟ್ಯಂತರ ರೂ. ವಂಚನೆ- ಅಧಿಕಾರಿಗಳಿಂದ ಆಸ್ತಿ ಜಪ್ತಿ

    ಜನರಿಗೆ ಕೋಟ್ಯಂತರ ರೂ. ವಂಚನೆ- ಅಧಿಕಾರಿಗಳಿಂದ ಆಸ್ತಿ ಜಪ್ತಿ

    ಧಾರವಾಡ: ಅಧಿಕ ಬಡ್ಡಿ ನೀಡುವುದಾಗಿ ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದ ಹರ್ಷಾ ಎಂಟಪ್ರ್ರೈಸಸ್ ಮಾಲೀಕರಾದ ಖಾಸನೀಸ್ ಸಹೋದರರಿಗೆ ಸೇರಿದ ಆಸ್ತಿಯನ್ನು ಧಾರವಾಡ ಉಪವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಜಪ್ತಿ ಮಾಡಲಾಯಿತು.

    ಹುಬ್ಬಳ್ಳಿಯ ಬೈರಿದೇವರಕೊಪ್ಪ ಬಳಿಯ 1 ಗುಂಟೆಯಲ್ಲಿರುವ ಪ್ಲಾಟ್ ಜಪ್ತಿ ಮಾಡಿದ್ದಾರೆ. ಧಾರವಾಡ ಉಪವಿಭಾಗ ಅಧಿಕಾರಿ ಮಹ್ಮದ್ ಜುಬೇರ್ ಹಾಗೂ ತಹಶೀಲ್ದಾರ್ ಶಶೀಧರ ಮಾಡ್ಯಾಳ ನೇತೃತ್ವದಲ್ಲಿ ಜಪ್ತಿ ಮಾಡಿದ್ದಾರೆ.

    ಕಲಘಟಗಿಯಲ್ಲಿ ಹರ್ಷಾ ಎಂಟರ್ಪ್ರೈಸಸ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ಖಾಸನೀಸ್ ಸಹೋದರರಾದ ಸತ್ಯಭೋದ ಖಾಸ್‍ನೀಸ್, ಸಂಜೀವ ಖಾಸನೀಸ್ ಹಾಗೂ ಶ್ರೀಕಾಂತ್ ಖಾಸ್‍ನೀಸ್ ಎಂಬವರು ವಂಚನೆ ಮಾಡಿದ್ದು, 2017 ರಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.

    ಈ ಪ್ರಕರಣವನ್ನು ಸಿಐಡಿ ಸಂಸ್ಥೆಯಿಂದ ಕೂಡ ತನಿಖೆ ಕೈಗೊಳ್ಳಲಾಗಿತ್ತು. ಸಿಐಡಿ ವರದಿಯಲ್ಲಿ ಉಲ್ಲೇಖಿತ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತಿದ್ದು, ಹುಬ್ಬಳ್ಳಿ, ಕಲಘಟಗಿ, ಹಾಗೂ ಬಳ್ಳಾರಿಯಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಜಪ್ತಿ ಮಾಡಿಕೊಳ್ಳಲಾಗಿದೆ.

  • 10 ಗಂಟೆಯಾದ್ರೂ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು- ಡಿಸಿ ಗರಂ

    10 ಗಂಟೆಯಾದ್ರೂ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು- ಡಿಸಿ ಗರಂ

    ಹಾಸನ: ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ಧ ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷಾ ಗರಂ ಆಗಿದ್ದಾರೆ.

    ಇಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಸ್ವತಃ, ಪ್ರತಿ ಅಧಿಕಾರಿ ಕಚೇರಿಗೆ ಬಂದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸಮಯ 10 ಗಂಟೆಯಾದರೂ ಕೆಲ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಕಚೇರಿಗಳಲ್ಲಿ ಯಾವೊಬ್ಬ ಅಧಿಕಾರಿ ಇಲ್ಲದಿರುವುದನ್ನು ನೋಡಿ ಆಕ್ರೋಶಕೊಂಡ ಡಿಸಿ ಅಕ್ರಂ ಪಾಷಾ ಅವರು ಕೋಪಗೊಂಡಿದ್ದಾರೆ.

    ನಾಳೆಯಿಂದ 10 ಗಂಟೆ ಒಳಗೆ ಅಧಿಕಾರಿಗಳು ಕಚೇರಿಗೆ ಆಗಮಿಸಬೇಕೆಂದು ಡಿಸಿ ಅಕ್ರಂ ಪಾಷಾ ವಾರ್ನಿಂಗ್ ಕೊಟ್ಟಿದ್ದಾರೆ. ಜೊತೆಗೆ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ ಇದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ. ಇದೇ ವೇಳೆ ಕಚೇರಿ ಸ್ವಚ್ಛತೆ ಬಗ್ಗೆಯೂ ಡಿಸಿ ಪರಿಶೀಲನೆ ನಡೆಸಿದ್ದಾರೆ.

    ಹಾಸನ ಡಿಸಿಯಾಗಿದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ವರ್ಗಾವಣೆಯಾದ ಬಳಿಕ ಎಡರನೇ ಬಾರಿಗೆ ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂ ಪಾಷಾ ನೇಮಕವಾಗಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಂ ಪಾಷಾ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಆಗ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ನೇಮಕ ಮಾಡಿತ್ತು.

    ಅಕ್ರಂಪಾಷಾ ಅವರು ಫೆಬ್ರವರಿ 22 ರಂದು ಹಾಸನಕ್ಕೆ ವರ್ಗಗೊಂಡು ಆಗಮಿಸಿದ್ದರು. ಆದರೆ ಒಂದು ತಿಂಗಳ ಅವಧಿಯಲ್ಲೇ ಪಾಷಾರನ್ನು ಕೂಡ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂಪಾಷಾ ಬಂದಿದ್ದಾರೆ.

  • ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದರೆ, ಇತ್ತ ಮೈತ್ರಿಯ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಸಚಿವ ಹೆಚ್.ಡಿ.ರೇವಣ್ಣರ ಇಲಾಖೆಯಲ್ಲಿ ಒಂದೇ ದಿನದಲ್ಲಿ 800 ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಎಂಜಿನಿಯರ್ ಗಳನ್ನು ವರ್ಗಾವಣೆಯ ಆದೇಶಕ್ಕೆ ರೇವಣ್ಣ ಸಹಿ ಹಾಕಿದ್ದಾರೆ.

    ಸೋಮವಾರ ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ, ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದಾರೆ. ಮೈತ್ರಿ ಉಳಿಸಿಕೊಳ್ಳಲು ಎರಡೂ ಪಕ್ಷದ ಮುಖಂಡರು ಓಡಾಡುತ್ತಿದ್ದರೆ, ರೇವಣ್ಣ ಅವರು ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಎಂದು ಅಧಿಕಾರಿಗಳಿಗೆ ಬಡ್ತಿ ನೀಡಿರುವ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದಾರೆ. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದೆ.

    ಬಡ್ತಿ ಪಡೆದ ಅಧಿಕಾರಿಗಳ ವಿವರ ಹೀಗಿದೆ
    ಎಇ ಹುದ್ದೆಯಿಂದ ಎಇಇ ಹುದ್ದೆ-100
    ಜೆಇ ಹುದ್ದೆಯಿಂದ ಎಇಇ(2)-200
    ಎಇಇ ಹುದ್ದೆಯಿಂದ ಇಇ – 400
    ಇಇ ಹುದ್ದೆಯಿಂದ ಎಸ್‍ಇ-126

  • ನಿಮಗೇನು ಮಾನ ಮರ್ಯಾದೆ ಇಲ್ವಾ, ಸಮಸ್ಯೆ ಬಗೆಹರಿಸಲು ಲಂಚ ಕೇಳ್ತೀರಾ – ಮಂಡ್ಯ ರೈತರ ಆಕ್ರೋಶ

    ನಿಮಗೇನು ಮಾನ ಮರ್ಯಾದೆ ಇಲ್ವಾ, ಸಮಸ್ಯೆ ಬಗೆಹರಿಸಲು ಲಂಚ ಕೇಳ್ತೀರಾ – ಮಂಡ್ಯ ರೈತರ ಆಕ್ರೋಶ

    – ಅಧಿಕಾರಿಗಳು ಲಂಚ ಪಡೀತಾರೆ, ಲಂಚ ಪಡೆದರೂ ಕೆಲಸ ಮಾಡಲ್ಲ

    ಮಂಡ್ಯ: ನಿಮಗೇನು ಮಾನ ಮರ್ಯಾದೆ ಇಲ್ವಾ? ರೈತರ ಸಮಸ್ಯೆ ಬಗೆಹರಿಸಿ ಎಂದರೆ ಲಂಚ ಕೇಳ್ತೀರಾ? ಲಂಚ ತಗೊಂಡು ಕೆಲಸ ಮಾಡಿಕೊಡದೇ ಸತಾಯಿಸುತ್ತೀರಾ ಎಂದು ಮಂಡ್ಯ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಂದು ಶಾಸಕ ಸುರೇಶ್‍ಗೌಡ ಅಧ್ಯಕ್ಷತೆಯಲ್ಲಿ ಚೆಸ್ಕಾಂ ಎಂಡಿ ಗೋಪಾಲಕೃಷ್ಣ, ಮೈಸೂರು ಮುಖ್ಯ ಅಭಿಯಂತರ ಶ್ರೀನಿವಾಸ ಮೂರ್ತಿ ಮತ್ತು ನಾಗಮಂಗಲ ತಾಲೂಕಿನ ಚೆಸ್ಕಾಂ ಅಧಿಕಾರಿಗಳು ಸೇರಿದಂತೆ ಚೆಸ್ಕಾಂ ಕುಂದು ಕೊರತೆ ಸಭೆಯನ್ನು ನಡೆಸಲಾಯಿತು.

    ಈ ಸಭೆಯ ಮಧ್ಯೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಂಡ್ಯ ರೈತರು, ಶಾಸಕ ಸುರೇಶ್‍ಗೌಡ ಅವರ ಮುಂದೆಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಮಗೇನು ಮಾನ ಮರ್ಯಾದೆ ಇಲ್ವಾ. ನಿಮ್ಮಿಂದ ಶಾಸಕರ ಮರ್ಯಾದೇನೂ ಕಳೆಯುತ್ತಿರಾ. ಸರಿಯಾಗಿ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅಧಿಕಾರಿಗಳು ಲಂಚ ಪಡೆಯುತ್ತಾರೆ. ಲಂಚ ಪಡೆದರೂ ಕೆಲಸ ಮಾಡಲ್ಲ ಎಂದು ಆಕ್ರೋಶ ಹೊರಹಾಕಿದರು.

    ಈ ಸಭೆಯಲ್ಲಿ ರೈತರ ಕಷ್ಟಗಳನ್ನು ಅಲಿಸಿದ ಶಾಸಕ ಸುರೇಶ್‍ಗೌಡ ಮತ್ತು ಚೆಸ್ಕಾಂ ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ರೈತರಿಗೆ ಭರವಸೆ ನೀಡಿದರು.

  • ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡದ ಅಧಿಕಾರಿಗಳಿಗೆ ಮೂಡಬಿದಿರೆ ಶಾಸಕರಿಂದ ತರಾಟೆ

    ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡದ ಅಧಿಕಾರಿಗಳಿಗೆ ಮೂಡಬಿದಿರೆ ಶಾಸಕರಿಂದ ತರಾಟೆ

    ಮಂಗಳೂರು: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ನೀಡದ ಮೂಡಬಿದಿರೆ ನಾಡ ಕಚೇರಿಯ ಅಧಿಕಾರಿಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಾರ್ವಜನಿಕರ ಕುಂದು ಕೊರತೆ ನೀಗಿಸಲು ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಶಾಸಕ ಉಮಾನಾಥ ಕೋಟ್ಯಾನ್ ಅವರು ಏಕಾಏಕಿ ಮೂಡಾ ಕಚೇರಿಗೆ ತೆರಳಿದ್ದಾರೆ. ಈ ವೇಳೆ ಜನರು ಸರತಿ ಸಾಲಿನಲ್ಲಿ ನಿಂತದ್ದನ್ನು ಕಂಡ ಶಾಸಕರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತನ್ನ ರೌದ್ರಾವತಾರ ತೋರಿದ್ದಾರೆ.

    ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ. ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ಅವರ ಸಮಸ್ಯೆ ಕೇಳುವವರಿಲ್ಲ. ಸವಲತ್ತುಗಳಿಗಾಗಿ ಅವರು ನಿಮ್ಮಲ್ಲಿ ಗೋಗರೆಯ ಬೇಕೇ ಎಂದು ಪ್ರಶ್ನಿಸಿ ತರಾಟೆ ತೆಗೆದುಕೊಂಡರು.

    ಅಲ್ಲದೆ ಅಧಿಕಾರಿಗಳು ಯಾವಾಗಲೂ ಮೊಬೈಲ್‍ನಲ್ಲೇ ಬ್ಯುಸಿಯಾಗುತ್ತಿದ್ದಾರೆ. ಇನ್ನು ಮುಂದೆ ಕೆಲಸದ ವೇಳೆ ಯಾರಾದರೂ ಮೊಬೈಲ್ ಬಳಸುತ್ತಿರುವುದು ಕಂಡಲ್ಲಿ ಅವರನ್ನು ನೋಡಿಕೊಳ್ಳುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ಬೆಳಗಾವಿ ಏಕಾಏಕಿ ಕಿ.ಮೀ ಗಟ್ಟಲೇ ಬಾಯಿ ಬಿಟ್ಟ ಭೂಮಿ – ಗ್ರಾಮಸ್ಥರಲ್ಲಿ ಆತಂಕ

    ಬೆಳಗಾವಿ ಏಕಾಏಕಿ ಕಿ.ಮೀ ಗಟ್ಟಲೇ ಬಾಯಿ ಬಿಟ್ಟ ಭೂಮಿ – ಗ್ರಾಮಸ್ಥರಲ್ಲಿ ಆತಂಕ

    ಬೆಳಗಾವಿ: ಜಿಲ್ಲೆಯಲ್ಲೊಂದು ಭಯಾನಕ ಘಟನೆ ನಡೆದಿದ್ದು ಏಕಾಏಕಿ ಕಿ.ಮೀ ಗಟ್ಟಲೇ ಭೂಮಿ ಬಾಯಿ ಬಿಡುತ್ತಿದೆ. ಭೂಮಿ ಬಾಯಿ ಬಿಡುತ್ತಿರುವ ದೃಶ್ಯ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುಳ್ಳುರು ಗ್ರಾಮದಲ್ಲಿ ಕಂಡು ಬಂದಿದೆ. ಈ ದೃಶ್ಯ ನೋಡಿದ ಇಲ್ಲಿನ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ಈ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿರುವ ಭೂಮಿ ದೊಡ್ಡ ಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಕುಳ್ಳುರ್ ನಿಂದ ಬಿಚಗುತ್ತಿ ತಿಮ್ಮಾಪುರ್ ಸೇರಿ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ಕೂಡ ಭೂಮಿ ಕುಸಿದಿದ್ದು ಸುರಂಗದಂತಾಗಿ ಇಲ್ಲಿ ಮಾರ್ಪಟ್ಟಿದೆ. ಈ ಕಾರಣಕ್ಕೆ ರಸ್ತೆಯಲ್ಲಿ ಕಲ್ಲಿಟ್ಟು ಎಚ್ಚರಿಕೆ ಬೋರ್ಡ್ ಕೂಡ ಹಾಕಿ ಜನರನ್ನ ಆ ಕಡೆ ಓಡಾಡದಂತೆ ಸ್ಥಳೀಯರು ನೋಡಿಕೊಳ್ಳುತ್ತಿದ್ದಾರೆ.

    ಆರು ತಿಂಗಳ ಹಿಂದೆಯೇ ಸ್ವಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದ ಭೂಮಿ ಈಗ ಏಕಾಏಕಿ ಕುಸಿಯುತ್ತಿರುವುದರಿಂದ ಗ್ರಾಮಸ್ಥರು ಆ ಕಡೆ ಸುಳಿಯುವುದನ್ನೇ ಬಿಟ್ಟಿದ್ದಾರೆ. ಸುಮಾರು ಎರಡು ಕಿ.ಮೀ ನಷ್ಟು ಭೂಮಿ ಕುಸಿದಿದ್ದು ನಿತ್ಯವೂ ಇದರ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿದೆ. ಈ ಕುರಿತು ರಾಮದುರ್ಗ ತಹಶೀಲ್ದಾರರ ಗಮನಕ್ಕೆ ತಂದರೆ ಅದು ನನಗೆ ಸಂಬಂಧ ಇಲ್ಲ. ಬೇಕಾದರೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹೇಳಿ ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದಾರೆ.

    ಇತ್ತ ಇಪ್ಪತ್ತರಿಂದ ಮೂವತ್ತು ಅಡಿಯಷ್ಟು ಭೂಮಿ ಕೆಳಭಾಗದಲ್ಲಿ ಕುಸಿದಿದ್ದು ಪ್ರಳಯದ ಆತಂಕ ಇಲ್ಲಿ ಸೃಷ್ಟಿಯಾಗಿದೆ. ಕೆಲವರು ದೇವರ ಮೊರೆ ಹೋದರೆ ಮತ್ತೆ ಕೆಲವರು ಭೂವಿಜ್ಞಾನಿಗಳ ಮೊರೆ ಹೋಗಿ ಭೂ ಕುಸಿತದ ಕಾರಣ ಹುಡುಕುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಆದರೂ ಕೂಡ ಅಧಿಕಾರಿಗಳು ಮಾತ್ರ ಇಲ್ಲಿ ಬಾರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.