Tag: officers

  • ತುಂಗಭದ್ರಾ ನದಿ ಮೈದುಂಬಿ ಹರಿದರೂ ಕಾಲುವೆಗೆ ನೀರಿಲ್ಲ

    ತುಂಗಭದ್ರಾ ನದಿ ಮೈದುಂಬಿ ಹರಿದರೂ ಕಾಲುವೆಗೆ ನೀರಿಲ್ಲ

    ರಾಯಚೂರು: ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಸಿದ ನದಿಗಳಲ್ಲಿ ತುಂಗಭದ್ರಾ ನದಿ ಕೂಡ ಒಂದು. ಆದರೆ ನದಿ ಮೈತುಂಬಿ ಹರಿಯುತ್ತಿದ್ದರೂ ಕಾಲುವೆಗೆ ಮಾತ್ರ ನೀರಿಲ್ಲ. ಜಲಾಶಯದಿಂದ ಟಿಎಲ್‍ಬಿಸಿ ಕೆಳಭಾಗದ ಕಾಲುವೆಗೆ ಸಮರ್ಪಕ ನೀರು ದೊರೆಯುತ್ತಿಲ್ಲ.

    ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನೀರಿಲ್ಲದೆ ಭತ್ತದ ಬೆಳೆ ಒಣಗುತ್ತಿದೆ. ತಾಲೂಕಿನ ಮೇಲ್ಭಾಗದಲ್ಲಿ ನಾಲೆಯಿಂದ ಅಕ್ರಮವಾಗಿ ನದಿ ನೀರು ಬಳಕೆ ಮಾಡುತ್ತಿದ್ದ ಹಿನ್ನೆಲೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಟಿಎಲ್‍ಬಿಸಿ ಕಾಲುವೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೇದಮೂರ್ತಿ ಅವರು ಉಪಕಾಲುವೆ ಹಾಗೂ ಕೆಳಭಾಗದ ನಾಲೆಗೆ ಹರಿಯುವ ನೀರಿನ ಗೇಜ್ ಪರಿಶೀಲನೆ ಮಾಡಿ, ಕೆಳಭಾಗದ ನಾಲೆಗೆ ನೀರು ಹರಿಸಿದ್ದರು.

    ಆದರೆ ಹೆಚ್ಚು ನೀರು ಹರಿಯುತ್ತಿದ್ದ ಕಾರಣಕ್ಕೆ 37 ಮತ್ತು 38ನೇ ಡಿಸ್ಟ್ರಿಬ್ಯೂಟರ್ ನೀರಿನ ಪ್ರಮಾಣ ಇಳಿಕೆ ಮಾಡಲಾಗಿದೆ. ಇದರಿಂದ ಕಾಲುವೆಯಲ್ಲಿ ನೀರು ಇಲ್ಲದಂತಾಗಿದೆ. ಮೊದಲೇ ಪ್ರವಾಹದಿಂದ ಸಾಕಷ್ಟು ನಷ್ಟ ಅನುಭವಿಸುತ್ತಿರುವ ರೈತರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಪ್ರವಾಹ ಬಂದಾಗ ನೀರಿನಲ್ಲಿ ಬೆಳೆ ಕೊಳೆತು ನಷ್ಟವಾಗಿದೆ ಎಂದು ಕಣ್ಣೀರಿಡುತ್ತಿದ್ದ ರೈತರು, ಈಗ ಬೆಳೆಗೆ ಪೂರಕ ನೀರು ಸಿಗುತ್ತಿಲ್ಲ ಎಂದು ಕಂಗಾಲಾಗಿ ಕೂತಿದ್ದಾರೆ.

    ಆದ್ದರಿಂದ ಒಣಗಿರುವ ಕಾಲುವೆಗೆ ಅಧಿಕಾರಿಗಳು ನದಿ ನೀರು ಹರಿಸಿದರೆ ಬೆಳೆಗೆ ಅನುಕೂಲವಾಗುತ್ತದೆ. ದಯಮಾಡಿ ಕಾಲುವೆಗೆ ನೀರು ಹರಿಸಿ ಬೆಳೆಯನ್ನು ಉಳಿಸಿ ಎಂದು ರೈತರು ಮನವಿ ಮಾಡಿದ್ದಾರೆ.

  • ಅಧಿಕಾರಿಗಳ ನಿರ್ಲಕ್ಷ್ಯ- ಸಂತ್ರಸ್ತರಿಗೆ ತಲುಪದ ದಾನಿಗಳು ನೀಡಿದ್ದ ವಸ್ತುಗಳು

    ಅಧಿಕಾರಿಗಳ ನಿರ್ಲಕ್ಷ್ಯ- ಸಂತ್ರಸ್ತರಿಗೆ ತಲುಪದ ದಾನಿಗಳು ನೀಡಿದ್ದ ವಸ್ತುಗಳು

    ರಾಯಚೂರು: ಹಲವೆಡೆ ನೆರೆ ಸಂತ್ರಸ್ತರು ಇನ್ನೂ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಿದೆ. ದಾನಿಗಳು ನೀಡಿದ ಆಹಾರ ಪದಾರ್ಥಗಳನ್ನು ರಾಯಚೂರಿನಲ್ಲಿ ಸಮರ್ಪಕವಾಗಿ ಸಂತ್ರಸ್ತರಿಗೆ ವಿತರಿಸದೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಸಾವಿರಾರು ರೂ. ಬೆಲೆ ಬಾಳುವ ವಸ್ತುಗಳು ಹಾಳಾಗಿವೆ.

    ದಾನಿಗಳು ನೀಡಿದ ದಿನಬಳಕೆ ವಸ್ತು, ಆಹಾರ, ಸಾಮಗ್ರಿಗಳನ್ನು ನೆರೆ ಸಂತ್ರಸ್ತರಿಗೆ ನೀಡದೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಲಿಂಗಸುಗೂರಿನ ಗುರುಭವನದಲ್ಲಿ ಸಂತ್ರಸ್ತರ ಪರಿಹಾರ ಸಹಾಯ ಕೇಂದ್ರವನ್ನು ಆರಂಭಿಸಿ ದಾನಿಗಳು ನೀಡಿದ ಸಾಮಾಗ್ರಿಗಳನ್ನ ಸಂಗ್ರಹಿಸಲಾಗಿತ್ತು. ಕೆಲ ಆಹಾರ ಪದಾರ್ಥಗಳು ಕೊಳೆತು ನಾರುತ್ತಿವೆ, ರೊಟ್ಟಿ, ಆಹಾರ ಧಾನ್ಯಗಳಿಗೆ ಫಂಗಸ್ ಹಿಡಿದು ಬಳಕೆಗೆ ಬಾರದಂತಾಗಿದೆ.

    ತಾಲೂಕಿನ ಕಡದರಗಡ್ಡಿ, ಯಳಗುಂದಿ, ಯರಗೋಡಿ, ಜಲದುರ್ಗ, ಹಂಚಿನಾಳ ಗ್ರಾಮಗಳೂ ಸೇರಿ ನಾಲ್ಕಾರು ನಡುಗಡ್ಡೆಗಳು ಕೃಷ್ಣೆಯ ಪ್ರವಾಹಕ್ಕೆ ನಲುಗಿ ಹೋಗಿದ್ದವು. ರಾಜ್ಯದ ವಿವಿಧೆಡೆಯಿಂದ ದಿನ ಬಳಕೆ ವಸ್ತುಗಳು, ಆಹಾರ ಸಾಮಗ್ರಿ, ಬಟ್ಟೆ, ಹಾಸಿಗೆ, ಹೊದಿಕೆ ಸೇರಿ ಅಪಾರ ಪ್ರಮಾಣದ ನೆರವು ಹರಿದು ಬಂದಿತ್ತು. ಪ್ರವಾಹ ತಗ್ಗಿದ ನಂತರ ಬಂದ ಸಾಮಾಗ್ರಿಗಳನ್ನು ಕಿಟ್ ಮಾಡಿ ವಿತರಣೆ ಮಾಡಲಾಗುವುದೆಂದು ಲಿಂಗಸುಗೂರು ತಹಶೀಲ್ದಾರ್ ತಿಳಿಸಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಸಂತ್ರಸ್ತರಿಗೆ ಸೇರಬೇಕಾದ ವಸ್ತುಗಳು ಇಟ್ಟಲ್ಲೇ ಕೊಳೆತು ಹೋಗಿವೆ.

    ಕೃಷ್ಣಾ ನದಿ ಪ್ರವಾಹದಿಂದ ರಾಯಚೂರು ಜಿಲ್ಲೆಯ ಬಹುತೇಕ ಗ್ರಾಮಗಳು ಜಲಾವೃತಗೊಂಡಿದ್ದವು. ಸಾರ್ವಜನಿಕರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಸರ್ಕಾರ ಆಹಾರವನ್ನು ನೀಡಿದರೂ ಸಹ ದಾನಿಗಳು ದೊಡ್ಡ ಮನಸ್ಸಿನಿಂದ ಸಾಕಷ್ಟು ಉಪಯುಕ್ತ ವಸ್ತುಗಳನ್ನು ನೀಡಿದ್ದರು. ಅವುಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಸಾವಿರಾರು ರೂ.ಗಳ ವಸ್ತುಗಳು ಬಳಕೆಗೆ ಬಾರದಂತಾಗಿವೆ.

  • ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ ಎಸ್‍ಪಿ – ಕೇವಲ 6 ತಿಂಗ್ಳಲ್ಲಿ ಸಾವಿರ ರೇಡ್

    ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ ಎಸ್‍ಪಿ – ಕೇವಲ 6 ತಿಂಗ್ಳಲ್ಲಿ ಸಾವಿರ ರೇಡ್

    -ಎಸ್‍ಪಿಗೆ ಅಬಕಾರಿ ಅಧಿಕಾರಿಗಳು ಒತ್ತಡ
    -ಕ್ಯಾರೇ ಎನ್ನದ ಎಸ್‍ಪಿಗೆ ಜನರಿಂದ ಮೆಚ್ಚುಗೆ

    ಚಿಕ್ಕಬಳ್ಳಾಪುರ: ಜಿಲ್ಲೆಗೆ ಬಂದ ನೂತನ ಅಧಿಕಾರಿಯೊಬ್ಬರು ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ್ದು, ಕೇವಲ 6 ತಿಂಗಳಲ್ಲೇ ಮಾರಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ.

    ಜಿಲ್ಲೆಯಲ್ಲಿ ಒಂದು ಕಡೆ ಮಳೆಯಿಲ್ಲ, ಮತ್ತೊಂದೆಡೆ ಮಳೆಯಿಲ್ಲದೆ ಬೆಳೆಯೂ ಇಲ್ಲ. ಇತ್ತ ಸರ್ಕಾರ ಕುಡಿಯೋಕೆ ನೀರು ಕೊಡದಿದ್ದರೂ ಆ ಜಿಲ್ಲೆಗೆ ಸಾಕು ಎನ್ನುವಷ್ಟು ಮದ್ಯ ಸರಬರಾಜಾಗುತ್ತಿದೆ. ಹೀಗಾಗಿ ಪ್ರತಿ ಹಳ್ಳಿಯಲ್ಲಿರುವ ಚಿಲ್ಲರೆ ಅಂಗಡಿಗಳು ಮದ್ಯ ಮಾರಾಟ ಅಂಗಡಿಗಳಾಗಿ ಮಾರ್ಪಾಡಾಗಿದ್ದವು. ಇದರಿಂದ ಗ್ರಾಮೀಣ ಭಾಗದ ಬಹಳಷ್ಟು ಮಂದಿ ಹಳ್ಳಿಗಳಲ್ಲಿನ ಚಿಲ್ಲರೆ ಅಂಗಡಿಗಳಲ್ಲೇ ಸಿಗುತ್ತಿದ್ದ ಮದ್ಯದ ಚಟಕ್ಕೆ ದಾಸರಾಗಿ ಬದುಕು ಹಾಳು ಮಾಡಿಕೊಂಡಿದ್ದರು.

    ಈ ಬಗ್ಗೆ ಜಿಲ್ಲೆಗೆ ಬಂದ ನೂತನ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರಿಗೆ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಕರೆ ಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿಸುವಂತೆ ಮನವಿ ಮಾಡಿಕೊಂಡಿದ್ದರು. ಇದರಿಂದ ಎಚ್ಚೆತ್ತ ಎಸ್‍ಪಿ ಸಂತೋಷ್ ಬಾಬು, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ ಹಗಲು ರಾತ್ರಿ ಎನ್ನದೆ ಅಕ್ರಮ ಮದ್ಯ ಮಾರಾಟ ಹಾಗೂ ಸರಬರಾಜು ಕಂಡು ಬಂದರೆ ಸಾಕು ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಂಡು ಕೇಸ್ ಮಾಡುವಂತೆ ತಾಕೀತು ಮಾಡಿದರು. ಹೀಗಾಗಿ ಕೇವಲ 6 ತಿಂಗಳಲ್ಲಿ 1000ಕ್ಕೂ ಹೆಚ್ಚು ಅಕ್ರಮ ಮದ್ಯ ಮಾರಾಟದ ಕೇಸ್ ದಾಖಲಾಗಿದ್ದು, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದಂತಾಗಿದೆ.

    ಜಿಲ್ಲೆಯ ಆರು ತಾಲೂಕುಗಳು, ಗಡಿಭಾಗದ ಹಳ್ಳಿಗಳಲ್ಲಂತೂ ಅಕ್ರಮ ಮದ್ಯ ಮಾರಾಟ ಬಲು ಜೋರಾಗಿಯೇ ಇತ್ತು. ಅದರಲ್ಲೂ ಅನುಮತಿ ಪಡೆದಿರುವ ಬಾರ್ ಮಾಲೀಕರೇ ಸ್ವತಃ ಅಬಕಾರಿ ಅಧಿಕಾರಿಗಳ ಕೊಡುವ ಟಾರ್ಗೆಟ್ ರೀಚ್ ಮಾಡೋಕೆ ಹಳ್ಳಿ ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡುತ್ತಿದ್ದರು. ಆದರೆ ಈಗ ಅದೆಲ್ಲಕ್ಕೂ ಕಡಿವಾಣ ಬಿದ್ದಿದ್ದು ಎಸ್‍ಪಿ ಸಂತೋಷ್ ಬಾಬು ಕಾರ್ಯಕ್ಕೆ ಸಾರ್ವಜನಿಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಪೊಲೀಸರು ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಬ್ರೇಕ್ ಹಾಕಿದ್ದೇ ತಡ ಅಬಕಾರಿ ಇಲಾಖಾಧಿಕಾರಿಗಳು ಸರ್ ಟಾರ್ಗೆಟ್ ರೀಚ್ ಮಾಡೋಕೆ ಕಷ್ಟ ಆಗುತ್ತದೆ. ಕುಡಿಯೋರು ಕುಡಿಯಲಿ ಬಿಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ ಅಬಕಾರಿ ಅಧಿಕಾರಿಗಳು ಏನೇ ಹೇಳಿದರೂ ಕೇಳದ ಎಸ್‍ಪಿ ಮಾತ್ರ ಪ್ರತಿ ದಿನ ಅಕ್ರಮ ಮದ್ಯ ಮಾರಾಟದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದು, ಪ್ರತಿದಿನ ಹತ್ತಾರು ಕೇಸ್ ದಾಖಲಾಗುತ್ತಿವೆ.

  • ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜಕೀಯ ಮಾಡಬೇಡಿ: ಅಧಿಕಾರಿಗಳಿಗೆ ಸಚಿವೆ ಖಡಕ್ ವಾರ್ನಿಂಗ್

    ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜಕೀಯ ಮಾಡಬೇಡಿ: ಅಧಿಕಾರಿಗಳಿಗೆ ಸಚಿವೆ ಖಡಕ್ ವಾರ್ನಿಂಗ್

    ಬೆಳಗಾವಿ: ಜನರ ನಡುವೆಯೇ ನೂತನ ಸಚಿವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.

    ನೂತನ ಸಚಿವೆ ಶಶಿಕಲಾ ಜೊಲ್ಲೆ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮ ಮಾಂಜರಿ ಭೇಟಿ ನೀಡಿದ್ದರು. ಗ್ರಾಮದ ಪ್ರವಾಹ ಪರಿಸ್ಥಿತಿ ಅವಲೋಕನದ ವೇಳೆ ಶಶಿಕಲಾ ಅವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಲ್ಲದೆ ಪರಿಹಾರ ಕೊಡುವಲ್ಲಿ ರಾಜಕೀಯ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಮಾತನಾಡಿದ ಶಶಿಕಲಾ ಅವರು, ಶೇ.15ರಿಂದ 20ರಷ್ಟು ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ 25 ಸಾವಿರ ರೂ., ಶೇ. 50ರಿಂದ 75ರಷ್ಟು ಮನೆ ಕಳೆದುಕೊಂಡವರಿಗೆ ಅವರಿಗೆ 1 ಲಕ್ಷ ರೂ. ಹಾಗೂ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಅವರಿಗೆ 5 ಲಕ್ಷ ರೂ. ನೀಡಲಾಗುತ್ತೆ. ಈ ಹಣವನ್ನು ಯಾರು ದುರುಪಯೋಗ ಮಾಡದಂತೆ ಪ್ರಮಾಣಿಕವಾಗಿ ಸಂತ್ರಸ್ತರಿಗೆ ಉಪಯೋಗ ಆಗುವಂತೆ ಈ ಊರಿನವರೇ ಅಧಿಕಾರಗಳ ಜೊತೆಗೂಡಿ ಕೆಲಸ ಮಾಡಬೇಕು ಎಂದರು.

    ಬಳಿಕ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ರಾಜಕೀಯ ಮಾಡಬೇಡಿ. ಅವರು ಪ್ರೆಷರ್ ಹಾಕಿದ್ರು, ಇವರು ಪ್ರೆಷರ್ ಹಾಕಿದ್ರು ಎಂದು ನನ್ನ ಬಳಿ ಹೇಳಿದ್ದರೆ ನಾನು ಸುಮ್ಮನೆ ಇರುವುದಿಲ್ಲ. ಅವರು ಹೀಗಂದ್ರು ಇವರು ಹೀಗಂದ್ರು ಎಂದು ನನಗೆ ಸಬೂಬು ನೀಡಿದ್ದರೆ ನಾನು ಸಹಿಸುವುದಿಲ್ಲ. ಅಲ್ಲದೆ, ಈ ವಿಷಯದಲ್ಲಿ ಏನೇ ತಪ್ಪು ನಡೆದರೂ ಸಹ ಕ್ರಮ ಜರುಗಿಸುವ ಅಧಿಕಾರ ನನಗಿದೆ. ನನಗೆ ಅಲ್ಲದೆ ಹಿರಿಯ ಅಧಕಾರಿಗಳಿಗೆ, ಸರ್ಕಾರಕ್ಕೆ ಕ್ರಮ ಜರುಗಿಸುವ ಅಧಿಕಾರವಿದೆ ಎಂದು ಹೇಳಿದರು.

  • ಬೋಗಿಗಳನ್ನ ಬಿಟ್ಟು 10 ಕಿ.ಮೀ ಸಾಗಿದ ಎಂಜಿನ್

    ಬೋಗಿಗಳನ್ನ ಬಿಟ್ಟು 10 ಕಿ.ಮೀ ಸಾಗಿದ ಎಂಜಿನ್

    ಹೈದರಾಬಾದ್: ರೈಲು ಎಂಜಿನ್ ತನ್ನ ಬೋಗಿಗಳಿಂದ ಬೇರ್ಪಟ್ಟು ಸುಮಾರು 10 ಕಿ.ಮೀ. ದೂರದವರೆಗೂ ಹೋಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

    ಭುವನೇಶ್ವರ-ಸಿಕಂದರಾಬಾದ್ ನಡುವೆ ಸಂಪರ್ಕ ಕಲ್ಪಿಸುವ ವಿಶಾಖ ಎಕ್ಸ್ ಪ್ರೆಸ್‍ಗೆ ಸೇರಿದ ಎಂಜಿನ್ ಇದಾಗಿದೆ. ಎಂಜಿನ್ ಮತ್ತು ಬೋಗಿಗಳ ನಡುವಿನ ರಾಡ್‍ಗಳು ಮುರಿದುಹೋಗಿದೆ. ಪರಿಣಾಮ ಅದು ನರಸಿಪಟ್ನಮ್ ಮತ್ತು ಟುನಿ ರೈಲ್ವೆ ನಿಲ್ದಾಣಗಳ ನಡುವೆ ಎಂಜಿನ್ ತನ್ನ ಬೋಗಿಯಿಂದ ಬೇರ್ಪಟ್ಟು ಮುಂದೆ ಹೋಗಿದೆ. ತಕ್ಷಣ ಈ ಘಟನೆ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ರೈಲ್ವೆ ಅಧಿಕಾರಿಗಳು ತಂತ್ರಜ್ಞರ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಇದರಿಂದ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಇತರ ಕೆಲವು ರೈಲುಗಳು ತಡವಾಗಿದೆ ಹೋಗಿವೆ. ಆದರೆ ಇದರಿಂದ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ರೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎಂಜಿನ್ ರೈಲು ಬೋಗಿಗಳನ್ನು ಬಿಟ್ಟು ಚಲಿಸುತ್ತಿದ್ದುದ್ದನ್ನು ನೋಡಿ ಸಾರ್ವಜನಿಕರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯಕ್ಕೆ ರೈಲ್ವೆ ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ.

  • ಎರಡೇ ಕೊಠಡಿಗಳಲ್ಲಿ 100ಕ್ಕೂ ಹೆಚ್ಚು ಸಂತ್ರಸ್ತರು – ನಿರಾಶ್ರಿತರ ಕೇಂದ್ರದಲ್ಲಿ ಉಸಿರುಗಟ್ಟುವ ಸ್ಥಿತಿ

    ಎರಡೇ ಕೊಠಡಿಗಳಲ್ಲಿ 100ಕ್ಕೂ ಹೆಚ್ಚು ಸಂತ್ರಸ್ತರು – ನಿರಾಶ್ರಿತರ ಕೇಂದ್ರದಲ್ಲಿ ಉಸಿರುಗಟ್ಟುವ ಸ್ಥಿತಿ

    ಬೆಳಗಾವಿ: ರಾಯಭಾಗ ತಾಲೂಕಿನಲ್ಲಿ ತೆರೆಯಲಾದ ಎರಡು ನಿರಾಶ್ರಿತರ ಕೇಂದ್ರದಲ್ಲಿ 100 ಹೆಚ್ಚು ಸಂತ್ರಸ್ತರು ತಂಗಿದ್ದು ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ.

    ಹುಬ್ಬರವಾಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಗಂಜಿ ಕೇಂದ್ರದಲ್ಲಿ ಸಂತ್ರಸ್ತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಈ ನಿರಾಶ್ರಿತ ಕೇಂದ್ರದಲ್ಲಿ ಎರಡೇ ಕೊಠಡಿಗಳಿದ್ದು, ಇದರಲ್ಲೇ 100 ಕ್ಕೂ ಹೆಚ್ಚು ಮಂದಿ ತಂಗಿದ್ದಾರೆ.

    ಕಳೆದ ಒಂದು ವಾರದಿಂದ ಸಂತ್ರಸ್ತರು ಎರಡೇ ಕೋಣೆಗಳಲ್ಲಿ ರಾತ್ರಿ ಮಲಗಿಕೊಂಡು ಕಾಲ ಕಳೆಯುತ್ತಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರ ಮಾಂಜರಿ, ಯಡೂರು ಸೇರಿದಂತೆ ವಿವಿಧ ಗ್ರಾಮಗಳ 91 ಕುಟುಂಬಗಳ 215 ಜನ ಈ ನಿರಾಶ್ರಿತ ಕೇಂದ್ರದಲ್ಲಿದ್ದಾರೆ.

    ಪಬ್ಲಿಕ್ ಟಿವಿ ಈ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಜನ ಮಾತ್ರ ಇದ್ದರು. ಮಹಿಳೆಯರು, ವೃದ್ಧರು, ಮಕ್ಕಳು ಎಲ್ಲರನ್ನೂ ಎರಡೇ ಕೋಣೆಯಲ್ಲಿ ಕೂಡಿ ಹಾಕಲಾಗಿದೆ. ಎರಡು ಕೋಣೆಗಳಲ್ಲಿ ತಮ್ಮ ದುಸ್ಥರ ಜೀವನವನ್ನು ಸಂತ್ರಸ್ತರು ಸಾಗಿಸುತ್ತಿದ್ದಾರೆ. ಒಂದು ವೇಳೆ ಸಾಂಕ್ರಾಮಿಕ ರೋಗಗಳು ಹರಡಿದರೆ ಏನು ಗತಿ ಎಂಬ ಭಯ ಇದೀಗ ನಿರಾಶ್ರಿತರಲ್ಲಿ ಮೂಡಿದೆ.

    ಇಲ್ಲಿ ನಮಗೆ ಊಟದ ವ್ಯವಸ್ಥೆ ಸರಿ ಇದೆ. ಆದರೆ, ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೇಗೆ ಜೀವನ ಸಾಗಿಸುವುದು? ನಮ್ಮ ಮನೆಗಳೆಲ್ಲ ನೀರಲ್ಲಿ ಮುಳುಗಿ ಹೋಗಿವೆ. ಏನೇ ಆದರೂ ಮನೆಯಲ್ಲಿ ಇದ್ದಂತ ಸುಃಖ ನಮಗೆ ಸಿಗುವುದಿಲ್ಲ ಎಂದು ಮಹಿಳೆಯರು ಪಬ್ಲಿಕ್ ಟಿವಿ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

  • ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ- ವಿವಾದಕ್ಕೀಡಾದ ಸಿಎಂ ಹೇಳಿಕೆ

    ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ- ವಿವಾದಕ್ಕೀಡಾದ ಸಿಎಂ ಹೇಳಿಕೆ

    ಶಿವಮೊಗ್ಗ: ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ, ಸ್ವಲ್ಪ ಎಚ್ಚರಿಕೆಯಿಂದ ಅಂಕಿ ಅಂಶ ಕೊಡಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.

    ರಾಜ್ಯದ 17 ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಸಿದ ಅವಾಂತರಕ್ಕೆ ಪರಿಹಾರ ಸಿಕ್ಕಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ಅಧಿಕಾರಗಳ ಜೊತೆ ನೆರೆ ವಿಚಾರವಾಗಿ ಸಭೆ ನಡೆಸುವಾಗ ಸಿಎಂ ವಿವಾದ ಎಬ್ಬಿಸುವ ಹೇಳಿಕೆ ಕೊಟ್ಟಿದ್ದಾರೆ.

    ಪ್ರವಾಹದಿಂದ ಬೆಳೆ ನಾಶವಾಗಿದೆ ಎಂದು ಹೇಳುತ್ತಿದ್ದೀರಿ. ಆದರೆ ನೀರು ಇಳಿದ ಮೇಲೆ ನಾಶವಾಗದೇ ಇರುವ ಬೆಳೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ. ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ ಎಂದು ಸಿಎಂ ಹೇಳಿದ್ದಾರೆ.

    ಎಷ್ಟು ನಷ್ಟವಾಗಿದೆ ಎನ್ನುವ ಅಂಕಿ ಅಂಶವನ್ನು ಎಚ್ಚರಿಕೆಯಿಂದ ಕೊಡಿ. ಸಮಾಧಾನವಾಗಿ ಒಂದು ವಾರ ಕಾಯಿರಿ, ಬಿಸಿಲು ಬೀಳಲಿ, ನೀರೆಲ್ಲಾ ಕಡಿಮೆಯಾಗಲಿ. ಆಮೇಲೆ ನಿಮ್ಮ ಲೆಕ್ಕಾಚಾರ ಕೊಡಿ. ಟೇಕ್ ಯುವರ್ ಓನ್ ಟೈಂ. ನಾವೇನು ಅರ್ಜೆಂಟ್ ಮಾಡಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ರಾಜ್ಯದ ಜನತೆ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದಾರೆ. ತಾವು ಕಷ್ಟಪಟ್ಟು ಮಾಡಿದ್ದ ಆಸ್ತಿಪಾಸ್ತಿ, ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ವೇಳೆ ಸಿಎಂ ಪರಿಹಾರ ನೀಡಲು ಈ ರೀತಿ ಹೇಳಿಕೆ ಕೊಟ್ಟಿರುವುದು ಸಂತ್ರಸ್ತರ ಸಿಟ್ಟಿಗೆ ಕಾರಣವಾಗಿದೆ.

  • ನಮ್ಮೂರಿಗೆ ಬನ್ನಿ ಆಗ ಗೊತ್ತಾಗುತ್ತೆ: ಪ್ರವಾಹದಲ್ಲಿ ಮನೆ ಕಳೆದುಕೊಂಡ ವ್ಯಕ್ತಿಯ ಅಳಲು

    ನಮ್ಮೂರಿಗೆ ಬನ್ನಿ ಆಗ ಗೊತ್ತಾಗುತ್ತೆ: ಪ್ರವಾಹದಲ್ಲಿ ಮನೆ ಕಳೆದುಕೊಂಡ ವ್ಯಕ್ತಿಯ ಅಳಲು

    ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಗ್ರಾಮಸ್ಥರು ರೋಧಿಸುತ್ತಿದ್ದಾರೆ.

    ಇಷ್ಟು ಪ್ರಮಾಣದಲ್ಲಿ ಮನೆಗಳನ್ನು ಕಳೆದುಕೊಂಡರು ಅಧಿಕಾರಿಗಳು ತಿರುಗಿ ನೋಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ನಿವಾಸಿಯೊಬ್ಬರು ಮನೆಯನ್ನು ನೋಡಿ ಗೋಳಾಡುತ್ತಾ ಕಣ್ಣೀರಿಡುತ್ತಿರುವ ದೃಶ್ಯ ಮನಕಲುಕುವಂತಿದೆ. ಪರಿಹಾರ ಕೇಂದ್ರಕ್ಕೆ ಬಂದು ಭರವಸೆ ಕೊಡುವ ಬದಲು ಮನೆಗಳು ಯಾವ ಪ್ರಮಾಣದಲ್ಲಿ ಬಿದ್ದು ಹೋಗಿದೆ ಯಾವ ರೀತಿಯಲ್ಲಿ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸ್ಥಳಕ್ಕೆ ಬಂದು ನೋಡಬೇಕು ಎಂದು ಅಳಲನ್ನು ವ್ಯಕ್ತಪಡಿಸುತ್ತಾರೆ.

    ಇದು ನನ್ನ ಮನೆ. ಇದುವರೆಗೂ ಅಧಿಕಾರಿಗಳು ಇಲ್ಲಿ ಬಂದು ನೋಡಿಲ್ಲ. ಮನೆ ಸಂಪೂರ್ಣ ನೆಲಸಮವಾಗಿದೆ. ಸಹಾಯ ಮಾಡುವುದಕ್ಕೆ ಯಾರು ಬರುತ್ತಿಲ್ಲ. ಯಾವ ಅಧಿಕಾರಿಗಳು ಇದೂವರೆಗೂ ಬಂದು ನೋಡಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಈಗ ಪರಿಹಾರ ಕೇಂದ್ರದಲ್ಲಿ ಇದ್ದೇನೆ. ಪರಿಹಾರ ಕೇಂದ್ರದಲ್ಲಿ ಎಲ್ಲ ಸೌಕರ್ಯವನ್ನು ಕೊಡುತ್ತಿದ್ದಾರೆ. ಆದರೆ ಇಲ್ಲಿ ಮನೆ ನೆಲಸಮವಾಗಿದೆ. ಸಾಲ ಮಾಡಿ ನಾನು ಮನೆ ಕಟ್ಟಿದ್ದೇನೆ. ಮಕ್ಕಳು ಎಲ್ಲರೂ ಇಲ್ಲಿ ಇದ್ದೇವೆ ಎಂದರು.

    ಪರಿಹಾರ ಕೇಂದ್ರಕ್ಕೆ ಬಂದು ನಮ್ಮನ್ನು ನೋಡುತ್ತಾರೆ. ಮತ್ತೆ ಅಲ್ಲಿಂದ ಹೋಗುತ್ತಾರೆ. ಆದರೆ ನಮ್ಮನ್ನು ಕೇಳಲು ಇಲ್ಲಿ ಯಾರೂ ಇಲ್ಲ. ನಾನು ಎಲ್ಲರಿಗೂ ಮಾಹಿತಿ ನೀಡಿದ್ದೇನೆ. ಆದರೆ ಅವರು ಬಂದು ಎಷ್ಟು ಜನ ಇದ್ದೀರ. ಎಷ್ಟು ಮಕ್ಕಳಿದ್ದಾರೆ ಎಂಬುದನ್ನು ಕೇಳಿ ಬರೆದುಕೊಂಡು ಹೋಗುತ್ತಾರೆ ಅಷ್ಟೇ. ಯಾರೇ ಆದರೂ ಸರಿ ನಮಗೆ ಸಹಾಯ ಮಾಡಿ ಎಂದು ವ್ಯಕ್ತಿಯೊಬ್ಬರು ತಮ್ಮ ನಿವಾಸದ ಮುಂದೆ ನಿಂತು ಕಣ್ಣೀರು ಹಾಕಿದ್ದಾರೆ.

  • ಬೈಂದೂರಿನಲ್ಲಿ 100 ವರ್ಷದ ಹಳೇಯ ಶಾಲೆಯ ಕಟ್ಟಡ ಕುಸಿತ

    ಬೈಂದೂರಿನಲ್ಲಿ 100 ವರ್ಷದ ಹಳೇಯ ಶಾಲೆಯ ಕಟ್ಟಡ ಕುಸಿತ

    ಉಡುಪಿ: ಭಾರೀ ಮಳೆಯಿಂದಾಗಿ ಗುಡ್ಡ ಕುಸಿಯುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮನೆ, ಶಾಲೆ ಸೇರಿದಂತೆ ಕಟ್ಟಡಗಳು ನೆಲಸಮವಾಗುತ್ತಿದ್ದು, ಸಾರ್ವಜನಿರಿಕರು ಭಯದ ವಾತಾವರಣದಲ್ಲೇ ಬದುಕುವಂತಾಗಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರ್ಗಾಲು ನಂದನವನ ಶಾಲೆ ಕುಸಿದುಬಿದ್ದಿದೆ. ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾದ ಪರಿಣಾಮ ಈ ಶಾಲೆ ಕಟ್ಟಡ ನೆಲಕ್ಕೆ ಉರುಳಿದೆ. ಶನಿವಾರ ತಡರಾತ್ರಿ ಈ ಅವಘಡ ಸಂಭವಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

    ಶನಿವಾರ ಮಧ್ಯಾಹ್ನದ ವೇಳೆಗೆ ಶಾಲೆಯ ಗೋಡೆಗಳು ಉದುರಲು ಪ್ರಾರಂಭವಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಭಾರಿ ಶಬ್ದದೊಂದಿಗೆ ಕಟ್ಟಡ ಬಹುತೇಕ ನೆಲಕಚ್ಚಿದೆ. ರಾತ್ರಿ ಈ ದುರ್ಘಟನೆ ಸಂಭವಿಸಿದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

    ಕಟ್ಟಡ ಪೂರ್ತಿ ನೆಲಸಮವಾಗಿದ್ದು ಶಾಲೆಯ ಮಧ್ಯವಿರುವ ಕೊಠಡಿ ಸಂಪೂರ್ಣ ನೆಲಸಮಗೊಂಡಿದೆ. ಈ ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಸಹಿತ 25 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಪಕ್ಕದ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನಲೆಯಲ್ಲಿ ಕಟ್ಟಡ ತೇವವಾಗಿದೆ. ಹೀಗಾಗಿ ಕುಸಿದು ಬಿದ್ದಿದೆ. 100 ವರ್ಷ ಇತಿಹಾಸ ಇರುವ ಶಾಲೆ ಇದಾಗಿದ್ದು, ಕಟ್ಟಡ ಸುಮಾರು 45 ವರ್ಷ ಹಳೆಯದಾಗಿದೆ. ಸ್ಥಳಕ್ಕೆ ಶಾಸಕರು, ವಿವಿಧ ಅಧಿಕಾರಿಗಳು, ಪಂಚಾಯತ್ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ನಡುಗಡ್ಡೆಯಲ್ಲಿ 7 ಯುವಕರ ಪ್ರಾಣ ಸಂಕಟ- ಅಧಿಕಾರಿಗಳು ನಿರ್ಲಕ್ಷ್ಯ

    ನಡುಗಡ್ಡೆಯಲ್ಲಿ 7 ಯುವಕರ ಪ್ರಾಣ ಸಂಕಟ- ಅಧಿಕಾರಿಗಳು ನಿರ್ಲಕ್ಷ್ಯ

    – 30 ಜನರ ರಕ್ಷಣೆಗೆ ಮುಂದಾದ ಎನ್‌ಡಿಆರ್‌ಎಫ್‌

    ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ದಿನೇ ದಿನೇ ಹೆಚ್ಚುತ್ತಿದ್ದು, ಗ್ರಾಮಗಳು ಮುಳುಗಡೆಯಾಗುತ್ತಿವೆ. ಮಲಪ್ರಭಾ ನದಿಯ ಪ್ರವಾಹದಿಂದಾಗಿ ಮನೆಯಲ್ಲಿ ಸಿಲುಕಿರುವ ಏಳು ಮಂದಿ ಯುವಕರಿಗೆ ಪ್ರಾಣ ಸಂಕಟ ಎದುರಾಗಿದೆ.

    ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಖ್ಯಾಡ ಗ್ರಾಮದ ಮನೆಯಲ್ಲಿ ಪ್ರವಾಹಕ್ಕೆ ಸಿಲುಕಿ ಯುವಕರು ನರಳಾಡುತ್ತಿದ್ದಾರೆ. ಮಲಪ್ರಭಾ ನದಿಯ ಭಾರೀ ಪ್ರವಾಹದಿಂದ ಮನೆಗಳು ನಡುಗಡ್ಡೆಯಂತಾಗಿದ್ದು ಮುತ್ತಣ್ಣ, ಶ್ರೀಶೈಲ್, ಈರಣ್ಣ, ಗೌಡಪ್ಪ, ಹನುಮಂತ, ಹನುಮಪ್ಪ, ಬಸಪ್ಪ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ.

    ಮನೆಯ ಸುತ್ತ ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿ ಪ್ರವಾಹ ಆವರಿಸಿಕೊಂಡಿದ್ದು, ಪ್ರವಾಹದ ಪ್ರಮಾಣ ಅಧಿಕವಾದರೆ ಏಳು ಜನರ ಜೀವಕ್ಕೂ ಅಪಾಯ ಎದುರಾಗಲಿದೆ. ಇಷ್ಟಾದರೂ ಅಧಿಕಾರಿಗಳು ಖ್ಯಾಡ ಗ್ರಾಮಕ್ಕೆ ಭೇಟಿ ನೀಡಿಲ್ಲ. ನಡುಗಡ್ಡೆಯಲ್ಲಿ ಸಿಲುಕಿರುವ ಏಳು ಜನರ ಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಅವರು ಸ್ಪಂದಿಸುತ್ತಿಲ್ಲ. ನಾವು ಎಲ್ಲರನ್ನೂ ರಕ್ಷಿಸಿದ್ದೇವೆ ಎಂದು ಹೇಳಿ ಬದಾಮಿ ತಹಶೀಲ್ದಾರ್ ಫೋನ್ ಕಟ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸದ್ಯ ಈ ಏಳು ಯುವಕರನ್ನು ರಕ್ಷಿಸಲು ಇರುವ ಏಕೈಕ ಮಾರ್ಗ ಏರ್ ಲಿಫ್ಟ್. ಇಂದೂ ಪ್ರವಾಹ ಹೆಚ್ಚಾದಲ್ಲಿ ಯುವಕರನ್ನು ರಕ್ಷಿಸುವುದು ಅಸಾಧ್ಯ ಎನ್ನುವಂತಾಗಿದೆ. ತುರ್ತಾಗಿ ರಕ್ಷಣೆ ಮಾಡುವ ಅಗತ್ಯವಿದೆ. ಇಲ್ಲವಾದಲ್ಲಿ ಏಳು ಜನರ ಪ್ರಾಣಕ್ಕೆ ಕುತ್ತು ಬರಲಿದೆ ಎಂದು ತಿಳಿದುಬಂದಿದೆ.

    ಗುಹೆ ಮೇಲಿನವರ ರಕ್ಷಣೆ
    ಪ್ರವಾಹದ ಭೀತಿಯಿಂದ ಬಾಗಲಕೋಟೆಯ ಪಟ್ಟದಕಲ್ಲಿನ ಗುಹೆ ಮೇಲೆ ಕೂಡ 30ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದರು. ಜನರ ರಕ್ಷಣೆಗೆ ಎನ್‌ಡಿಆರ್‌ಎಫ್‌ ತಂಡ ಮುಂದಾಗಿದ್ದು, ಜಲಾವೃತವಾದ ರಸ್ತೆ ಮಾರ್ಗವಾಗಿ ಬೋಟ್ ಮೂಲಕ ತೆರಳಿ ಜನರ ರಕ್ಷಣೆ ಮಾಡುತ್ತಿದ್ದಾರೆ.

    ಬದಾಮಿಯ ನಂದಿಕೇಶ್ವರ ಗ್ರಾಮದಿಂದ ಪಟ್ಟದಕಲ್ಲಿಗೆ ಸಾಗುವ ರಸ್ತೆ ಸುಮಾರು 6 ಕಿ.ಮೀ ವರೆಗೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಪಟ್ಟದಕಲ್ಲಿನ ಗ್ರಾಮ ಸಂಪೂರ್ಣ ಜಲಾವೃತವಾದ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ಜನ ಗುಹೆ ಮೇಲೆ ಆಶ್ರಯ ಪಡೆದಿದ್ದಾರೆ. ರಕ್ಷಣೆಗಾಗಿ ಬೋಟ್ ನಲ್ಲಿ ಎನ್‌ಡಿಆರ್‌ಎಫ್‌ ತಂಡ ತೆರಳಿದೆ. ಹೆಲಿಕಾಪ್ಟರ್ ನಲ್ಲಿ ರಕ್ಷಣೆ ಮಾಡಿ ಬೋಟ್ ಮೂಲಕ ನಂದಿಕೇಶ್ವರ ಗ್ರಾಮದ ಕಡೆ ಸಂತ್ರಸ್ತರನ್ನು ಎನ್‍ಡಿಆರ್‍ಎಫ್ ತಂಡ ಕರೆ ತರಲಿದೆ. ಪಟ್ಟದಕಲ್ಲು, ನಂದಿಕೇಶ್ವರ ಸುತಮುತ್ತ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು ಬೆಳೆಗಳು ನಾಶವಾಗಿವೆ. ಎತ್ತ ನೋಡಿದರೂ ನೀರು ಕಾಣುತ್ತಿದೆ.