Tag: officers

  • ಕೆಎಸ್ಆರ್‌ಟಿಸಿ ಬಸ್ ಪಲ್ಟಿ – ತಪ್ಪಿದ ಭಾರೀ ಅನಾಹುತ

    ಕೆಎಸ್ಆರ್‌ಟಿಸಿ ಬಸ್ ಪಲ್ಟಿ – ತಪ್ಪಿದ ಭಾರೀ ಅನಾಹುತ

    ಕೊಪ್ಪಳ: ಕೆಎಸ್ಆರ್‌ಟಿಸಿ ಬಸ್ ಪಲ್ಟಿಯಾಗಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಬಳಿ ನಡೆದಿದೆ.

    ಇಂದು ಬೆಳ್ಳಂಬೆಳಗ್ಗೆ ಬಸ್ ರಸ್ತೆ ಪಕ್ಕಕ್ಕೆ ಉರುಳಿದ ಪರಿಣಾಮ ಐವರಿಗೆ ಗಾಯವಾಗಿದ್ದು, ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಸದ್ಯ ಗಾಯಾಳುಗಳನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೈಸೂರು ಗ್ರಾಮಂತರ ಘಟಕ 1 ಡಿಪೋಗೆ ಈ ಬಸ್ ಸೇರಿದ್ದು, 14ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಇಂದು ಬೆಳ್ಳಂಬೆಳಗ್ಗೆ ಬಸ್ ಮೈಸೂರಿನಿಂದ ಕಲಬುರಗಿಗೆ ಪೊಲೀಸರನ್ನು ಡ್ರಾಪ್ ಮಾಡಿ ಡಿಪೋಗೆ ಮರಳುವಾಗ ಈ ಘಟನೆ ಸಂಭವಿಸಿದೆ.

    ಡಿಪೋ ಅಧಿಕಾರಿಗಳು ರಾತ್ರೋರಾತ್ರಿ ವಾಪಸ್ಸಾಗುವಂತೆ ಚಾಲಕ ಹಾಗೂ ನಿರ್ವಾಹಕರಿಗೆ ಸೂಚಿಸಿದ್ದರು. ಅಲ್ಲದೆ ಖಾಲಿ ಬರುವ ಬದಲು ಪ್ರಯಾಣಿಕರನ್ನು ತುಂಬಿಕೊಂಡು ಬರಲು ಹೇಳಿದ್ದರು. ವಿಶ್ರಾಂತಿ ಇಲ್ಲದೇ ಕರ್ತವ್ಯ ಮಾಡುತ್ತಿದ್ದೇವೆ ಎಂದು ಚಾಲಕ-ನಿರ್ವಾಹಕರಿಗೆ ಹೇಳಿದ್ದಾರೆ.

  • ಪ್ರತಿಭಟನೆಗೆ ಬಂದವರೇ ರಸ್ತೆ ಸರಿಮಾಡಿದ್ರು

    ಪ್ರತಿಭಟನೆಗೆ ಬಂದವರೇ ರಸ್ತೆ ಸರಿಮಾಡಿದ್ರು

    ಕಾರವಾರ: ಮಳೆಯಿಂದ ಹೊಂಡ, ಗುಂಡಿಗಳಾದ ರಸ್ತೆ ಸರಿಪಡಿಸಿ ಎಂದು ಪ್ರತಿಭಟನೆಗೆ ಬಂದ ಗ್ರಾಮಸ್ಥರೇ ತಮ್ಮೂರಿನ ರಸ್ತೆ ಸರಿಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಉದ್ಯಮ ನಗರದಲ್ಲಿ ನಡೆದಿದೆ.

    ಅಧಿಕ ಮಳೆಯಿಂದ ಉದ್ಯಮ ನಗರದ ಯಲ್ಲಾಪುರ ತಟಗಾರ ರಸ್ತೆ ಗುಂಡಿಗಳು ಬಿದ್ದು ಸಂಪೂರ್ಣ ಹಾನಿಯಾಗಿತ್ತು. ಆದ್ದರಿಂದ ಇದರ ದುರಸ್ತಿಗೆ ಲೋಕೋಪಯೋಗಿ ಇಲಾಖೆಯಿಂದ ಹಣ ಕೂಡ ಮಂಜೂರಾಗಿತ್ತು. ಆದರೇ ಮಳೆ ನೆಪ ಹೇಳಿ ಅಧಿಕಾರಿಗಳು ರಸ್ತೆ ಸರಿಪಡಿಸಿರಲಿಲ್ಲ. ಹೀಗಾಗಿ ಈ ಊರಿನ ಜನ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಹ ನೀಡಿದ್ದರು. ಗ್ರಾಮಸ್ಥರ ಮನವಿಗೆ ಅಧಿಕಾರಿಗಳು ಮಾತ್ರ ಸ್ಪಂದಿಸಿರಲಿಲ್ಲ. ಇದನ್ನೂ ಓದಿ:ರಿಪೇರಿ ಮಾಡಿಸದ ರಸ್ತೆಯಲ್ಲಿ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ

    ಈ ಹಿನ್ನೆಲೆಯಲ್ಲಿ ಕೋಪಗೊಂಡ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಆದರೂ ಕೂಡ ಗ್ರಾಮಸ್ಥರಿಗೆ ಅಧಿಕಾರಿಗಳು ಸ್ಪಂದಿಸಲೇ ಇಲ್ಲ. ಅಧಿಕಾರಿಗಳು ಇಂದು ರಸ್ತೆ ರಿಪೇರಿ ಮಾಡಿಸುತ್ತಾರೆ. ನಾಳೆ ರಿಪೇರಿ ಮಾಡಿಸುತ್ತಾರೆ ಎಂದು ಕಾಯುತ್ತಿದ್ದ ಜನರು ಬೇಸತ್ತು, ಕೊನೆಗೆ ತಾವೇ ರಸ್ತೆ ಸರಿಪಡಿಸಿದ್ದಾರೆ.

    ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಇದ್ದು ಪ್ರಯೋಜನವಿಲ್ಲ ಎಂದು ಅರಿತು ಜನರೇ ತಮ್ಮೂರಿನ ರಸ್ತೆಗಳನ್ನು ಸರಿಪಡಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ರಸ್ತೆ ದುರಸ್ಥಿ ಕಾರ್ಯಕ್ಕೆ ಸರ್ಕಾರ ಹಣ ನೀಡಿದ್ದರೂ ಅಧಿಕಾರಿಗಳು ಮಾತ್ರ ಕಾಮಗಾರಿ ಮಾಡಿಲ್ಲ. ಜನರ ಸಮಸ್ಯೆಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶಾಲೆಯಲ್ಲಿ ನಿಗೂಢವಾಗಿ ಬೀಳುವ ಕಲ್ಲುಗಳಿಂದ ತಾತ್ಕಾಲಿಕ ಮುಕ್ತಿ

    ಶಾಲೆಯಲ್ಲಿ ನಿಗೂಢವಾಗಿ ಬೀಳುವ ಕಲ್ಲುಗಳಿಂದ ತಾತ್ಕಾಲಿಕ ಮುಕ್ತಿ

    ಬಾಗಲಕೋಟೆ: ಕಳೆದ ಒಂದು ತಿಂಗಳಿನಿಂದ ಶಾಲೆಯಲ್ಲಿ ನಿಗೂಢವಾಗಿ ಬೀಳುತ್ತಿದ್ದ ಪ್ರಕರಣಕ್ಕೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಶಾಲೆಯಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಶಾಲೆಯಲ್ಲಿ ಅದೃಶ್ಯವಾಗಿ ಬೀಳುತ್ತಿದ್ದ ಕಲ್ಲುಗಳಿಗೆ ಈಗ ಬ್ರೆಕ್ ಬಿದ್ದಿದೆ. ಆದರೆ ಇದರ ಹಿಂದಿನ ಮರ್ಮ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.

    ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಇಂಜಿನವಾರಿ ಗ್ರಾಮದ ಶಾಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಿಗೂಢವಾಗಿ ಮಕ್ಕಳ ಮೇಲೆ ಕಲ್ಲುಗಳು ಬೀಳುತ್ತಿದ್ದವು. ಪರಿಣಾಮ ಹಲವು ಮಕ್ಕಳ ತಲೆಗೆ ಗಾಯಗಳಾಗಿತ್ತು. ಇದರಿಂದ ಭಯಭೀತರಾಗಿ ಮಕ್ಕಳು ಶಾಲೆ ಬಿಟ್ಟ ಘಟನೆಗಳು ಕೂಡ ನಡೆದು ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಭಾನಾಮತಿಯ ಕಾಟದಿಂದ ಕಲ್ಲು ಬೀಳುತ್ತಿವೆ ಎಂದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು.

    ಸೋಮವಾರ ಮಾತ್ರ ಶಾಲೆಯಲ್ಲಿ ಕಲ್ಲುಗಳ ಸದ್ದಿಲ್ಲ. ಒಂದು ಕಲ್ಲು ಶಾಲೆಯತ್ತ ಮುಖ ಮಾಡಿಲ್ಲ. ಶಿಕ್ಷಣ ಇಲಾಖೆಯ ಸಿಬ್ಬಂದಿ ಶಾಲೆಯಲ್ಲಿ ಐದು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಶಾಲೆಯ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆದರೆ ಸೋಮವಾರ ಮಾತ್ರ ಶಾಲೆಯಲ್ಲಿ ಕಲ್ಲು ಬೀಳದೇ ಇರುವುದರಿಂದ ಶಾಲೆಯಲ್ಲಿ ಮಕ್ಕಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಶಾಲೆಯಲ್ಲಿ ಅದೃಶ್ಯವಾಗಿ ಬೀಳುತ್ತಿದ್ದ ಕಲ್ಲುಗಳ ಪ್ರಕರಣದಿಂದ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷಾ ದೃಷ್ಠಿಯಿಂದ ಕಳೆದ ಎರಡು ದಿನಗಳಿಂದ ಶಾಲೆಗೆ ರಜೆ ಘೋಷಿಸಿತ್ತು. ಸೋಮವಾರ ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ವಿಜ್ಞಾನ ಪರಿವೀಕ್ಷಕರು, ಪವಾಡ ಬಯಲು ತಜ್ಞರು ಶಾಲೆಗೆ ಭೇಟಿ ನೀಡಿ ಪವಾಡ ಬಯಲು ಮಾಡುವ ಪ್ರಯತ್ನ ಮಾಡಿದರು. ಮಕ್ಕಳ ಮುಂದೆ ಕೆಲ ತಾಂತ್ರಿಕ ಪ್ರಯೋಗ ಮಾಡಿದರು.ಶಾಲೆಯನ್ನೆಲ್ಲ ಜಾಲಾಡಿ ಕಲ್ಲು ಬೀಳುವ ಪ್ರಕರಣದ ಸತ್ಯಸತ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು. ಆದರೆ ವಿಜ್ಞಾನ ಪರಿವೀಕ್ಷಕರು, ಪವಾಡ ಬಯಲು ತಜ್ಞರು ಭೇಟಿ ನೀಡಿದಾಗಲೂ ಯಾವುದೇ ಕಲ್ಲುಗಳು ಬೀಳಲಿಲ್ಲ. ಆದರೆ ಮಕ್ಕಳು ಮಾತ್ರ ಎಂದಿನಂತೆ ಮಂತ್ರಿಸಿದಿ ನಿಂಬೆಹಣ್ಣು, ದೇವರ ಪ್ರಸಾದ ಹಿಡಿದುಕೊಂಡು ಬಂದದ್ದು ಮಾತ್ರ ಅಲ್ಲಿನ ಭಯದ ವಾತಾವರಣವನ್ನು ಪ್ರತಿಬಿಂಬಿಸುತ್ತಿತ್ತು.

    ಸಿಸಿಟಿವಿ ಅಳವಡಿಕೆ, ಪೊಲೀಸ್ ಭದ್ರತೆ, ವಿಜ್ಞಾನ ಪರಿವೀಕ್ಷಕರು ಭೇಟಿ ಬಳಿಕ ಕಲ್ಲುಗಳು ಬೀಳುವುದಕ್ಕೆ ಬ್ರೇಕ್ ಬಿದ್ದಿದೆ. ಶಾಲೆ ಪರಿಶೀಲಿಸಿದ ಅಧಿಕಾರಿಗಳು ಹಾಗೂ ಪವಾಡ ಬಯಲು ತಜ್ಞರು ಇದು ಕಿಡಿಗೇಡಿಗಳ ಕಾರ್ಯ ಯಾವುದೇ ಬಾನಾಮತಿ ಕಾಟ ಎಂಬುದು ಸುಳ್ಳು. ಇದು ಮಾನವ ನಿರ್ಮಿತ ಕೃತ್ಯ ಇಂತಹ ವದಂತಿಗಳಿಗೆ ಕಿವಿಕೊಡಬಾರದು ಎಂದು ಸಲಹೆ ನೀಡಿದರು. ಜೊತೆಗೆ ಕೆಲವೇ ದಿನದಲ್ಲಿ ಇಂಜಿನವಾರಿ ಗ್ರಾಮದಲ್ಲಿ ಮೂಢನಂಬಿಕೆ, ಮಂತ್ರ ತಂತ್ರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

  • ಸರ್ಕಾರ ಬಿದ್ರೂ ಮನೆ ಖಾಲಿ ಮಾಡದ ಮಾಜಿ ಸಚಿವರು

    ಸರ್ಕಾರ ಬಿದ್ರೂ ಮನೆ ಖಾಲಿ ಮಾಡದ ಮಾಜಿ ಸಚಿವರು

    ಬೆಂಗಳೂರು: ಸರ್ಕಾರ ಹೋದ ಮೇಲೂ ಮಾಜಿ ಸಚಿವರು ಸರ್ಕಾರಿ ಬಂಗಲೆಯಲ್ಲೇ ಠಿಕಾಣಿ ಹೂಡಿದ್ದಾರೆ.

    ಸಮ್ಮಿಶ್ರ ಸರ್ಕಾರ ಬಿದ್ದು ಹೋದ ಮೇಲೆ ಅರ್ಧಕ್ಕರ್ಧ ಮಾಜಿ ಮಂತ್ರಿಗಳು ಇನ್ನು ಸರ್ಕಾರಿ ಬಂಗಲೆ ಖಾಲಿ ಮಾಡಿಲ್ಲ. ಅಲ್ಲದೆ ಲಕ್ಷಾಂತರ ರೂ. ಖರ್ಚು ಮಾಡಿ ವಾಸ್ತು ಪ್ರಕಾರ ರೆಡಿ ಮಾಡಿದ ಬಂಗಲೆ ಬಿಡುವುದಕ್ಕೆ ಕಷ್ಟ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

    ಸದ್ಯ ಹೊಸ ಸಚಿವರಿಗೆ ಬಂಗಲೆ ಕೊಡುವುದಕ್ಕೆ ಅಧಿಕಾರಿಗಳು ಕಷ್ಟಪಡುತ್ತಿದ್ದಾರೆ. ಬಂಗಲೆ ಖಾಲಿ ಮಾಡಲು ಸೂಚಿಸಿದರು ಮಾಜಿ ಸಚಿವರು ಇನ್ನು ಬಂಗಲೆ ಖಾಲಿ ಮಾಡಿಲ್ಲ. ಮಾಜಿ ಮಂತ್ರಿಗಳು ಸರ್ಕಾರಿ ಬಂಗಲೆಯಲ್ಲಿ ಇರುವುದರಿಂದ ಹಾಲಿ ಮಂತ್ರಿಗಳು ಬಂಗಲೆ ಇಲ್ಲದೆ ಪರದಾಡುತ್ತಿದ್ದಾರೆ.

    ಸದ್ಯ ಅಧಿಕಾರಿಗಳು ಇದುವರೆಗೂ 3-4 ಸಚಿವರಿಗೆ ಮಾತ್ರ ಬಂಗಲೆ ನೀಡಿದ್ದಾರೆ. ಅಧಿಕಾರಿಗಳು ಬಂಗಲೆ ಬಿಟ್ಟು ಹೋಗ್ರಿ ಎಂದರು ಸಹ ಮಾಜಿ ಸಚಿವರು ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿ ಹೋಗುತ್ತಿಲ್ಲ. ಇದನ್ನೂ ಓದಿ: ನಾವು ಮನೆ ಖಾಲಿ ಮಾಡಲ್ಲ – ಎಚ್ಚರಿಕೆಗೆ ಡೋಂಟ್‍ಕೇರ್ ಎಂದ 80 ಮಾಜಿ ಸಂಸದರು

    ಬಂಗಲೆ ಖಾಲಿ ಮಾಡದ ಮಾಜಿ ಸಚಿವರು:
    * ಸಿದ್ದರಾಮಯ್ಯ- ಮಾಜಿ ಸಿಎಂ, ಕಾವೇರಿ ಬಂಗಲೆ.
    * ಪರಮೇಶ್ವರ್ – ಮಾಜಿ ಡಿಸಿಎಂ, ಸದಾಶಿವನಗರ ಬಂಗಲೆ.
    * ಎಚ್.ಡಿ.ರೇವಣ್ಣ- ಸೂಪರ್ ಸಿಎಂ, ಕುಮಾರಕೃಪ ಬಂಗಲೆ.
    * ಡಿಕೆ ಶಿವಕುಮಾರ್- ಕ್ರಸೆಂಟ್ ರೋಡ್ ಬಂಗಲೆ.
    * ಆರ್.ವಿ.ದೇಶಪಾಂಡೆ- ರೇಸ್ ಕೋರ್ಸ್ ಬಂಗಲೆ.
    * ಮನಗುಳಿ – ಸೆವೆನ್ ಮಿನಿಸ್ಟರ್ ಕ್ವಾಟ್ರಸ್.
    * ಬಂಡೆಪ್ಪ ಕಾಶಂಪೂರ್- ಸೆವೆನ್ ಮಿನಿಸ್ಟರ್ ಕ್ವಾಟ್ರಸ್.
    * ರಮೇಶ್ ಜಾರಕಿಹೋಳಿ- ಸೆವೆನ್ ಮಿನಿಸ್ಟರ್ ಕ್ವಾಟ್ರಸ್.

  • ಪ್ರವಾಹಕ್ಕೀಡಾದ ಪ್ರದೇಶಗಳಿಗೆ ಸಿಎಂ ಭೇಟಿ – ಅಧಿಕಾರಿಗಳ ಕಾರಿನಲ್ಲಿ ರಾಶಿ ರಾಶಿ ಸ್ನ್ಯಾಕ್ಸ್

    ಪ್ರವಾಹಕ್ಕೀಡಾದ ಪ್ರದೇಶಗಳಿಗೆ ಸಿಎಂ ಭೇಟಿ – ಅಧಿಕಾರಿಗಳ ಕಾರಿನಲ್ಲಿ ರಾಶಿ ರಾಶಿ ಸ್ನ್ಯಾಕ್ಸ್

    – ಸಂತ್ರಸ್ತರ ಆಹಾರ ವಿತರಣೆಗೆ ಕಾಳಜಿಯಿಲ್ಲ
    – ತಮ್ಮ ಹಸಿವಿಗೆ ಎಲ್ಲ ವ್ಯವಸ್ಥೆ ಮಾಡ್ಕೊಂಡ ಅಧಿಕಾರಿಗಳು

    ಬೆಳಗಾವಿ: ಒಂದು ಕಡೆ ಜ್ವರ, ಹಸಿವಿನಿಂದ ಬಳಲಿ ಬಾಲಕ ಮೃತಪಟ್ಟರೆ ಇತ್ತ ಅಧಿಕಾರಿಗಳು ಮಾತ್ರ ಉಪಹಾರ, ಕೋಲ್ಡ್ ಡ್ರಿಂಕ್ಸ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.

    ಹೌದು. ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲಾ ಪ್ರವಾಹ ಪಿಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಉಪಹಾರ, ಸ್ನ್ಯಾಕ್ಸ್ ಗಳ ವ್ಯವಸ್ಥೆ ಮಾಡಿದ್ದಾರೆ. ಬೆಳಗಾವಿ ಉಪವಿಭಾಗದ ಅಧಿಕಾರಿಗಳ ವಾಹನದಲ್ಲಿ ಉಪಹಾರ, ಕೋಲ್ಡ್ ಡ್ರಿಂಕ್ಸ್ ಗಳನ್ನು 200 ಕ್ಕೂ ಹೆಚ್ಚು ಬಾಕ್ಸ್‍ಗಳಲ್ಲಿ ತಂದಿದ್ದಾರೆ. ನಂತರ ವೆಜ್ ಪನ್ನೀರ್ ರೋಲ್, ಕುಕ್ಕೀಸ್, ಸ್ಯಾಂಡ್ ವಿಚ್, ಫ್ರೂಟಿ, ಕೇಕ್ ಇವುಗಳನ್ನು ಸಿಎಂ ಹಿಂದೆ ಹೋಗುವ ವಾಹನಗಳಿಗೆ ಶಿಫ್ಟ್ ಮಾಡಲಾಗಿದೆ.

    ಪ್ರವಾಹದಿಂದ ಒಂದಡೆ ಜನರು ಮನೆ ಮಠ ಕಳೆದುಕೊಂಡು ಊಟವಿಲ್ಲದೆ ಪರದಾಟ ಅನುಭವಿಸುತ್ತಿದ್ದರೆ, ಇತ್ತ ಅಧಿಕಾರಿಗಳು ಮಾತ್ರ ತಮ್ಮ ಹಸಿವಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕು ಅಧಿಕಾರಿಗಳಿಗೆ ತಮ್ಮ ಹೊಟ್ಟೆ ಬಗ್ಗೆ ಇರುವ ಕಾಳಜಿ ಸಂತ್ರಸ್ತರ ಮೇಲೆ ಯಾಕಿಲ್ಲ ಎಂಬ ಪ್ರಶ್ನೆ ಎದ್ದಿದೆ.

    ಬಾಲಕ ಸಾವು!
    ಜಿಲ್ಲೆಯ ರಾಮದುರ್ಗ ತಾಲಹ ಅಧಿಕಾರಿಗಳ ವಿರುದ್ಧ ತಾಲೂಕಿನ ಸುರೇಬಾನ್ ಗ್ರಾಮದ ಕಾಳಜಿ ಕೇಂದ್ರದಲ್ಲಿದ್ದ ದೊಡ್ಡ ಹಂಪಿಹೊಳಿ ಗ್ರಾಮದ ಅಬ್ದುಲ್ ಸಾಬ್(5) ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರವಾಹಕ್ಕೆ ಸಿಲುಕಿ ಅಬ್ದುಲ್‍ನ ಮನೆ ಬಿದ್ದಿರುವ ಹಿನ್ನೆಲೆಯಲ್ಲಿ ಬಾಲಕನ ಕುಟುಂಬ ಕಳೆದ ಒಂದು ತಿಂಗಳಿಂದ ಎಪಿಎಂಸಿ ಆವರಣದಲ್ಲಿ ಆಶ್ರಯ ಪಡೆದುಕೊಂಡಿತ್ತು. ಇಲ್ಲಿ ಸರಿಯಾದ ಆಹಾರ ಸಿಗುತ್ತಿರಲಿಲ್ಲ. ಅಲ್ಲದೆ ಬಾಲಕನಿಗೆ ಜ್ವರ ಕೂಡ ಬಂದಿತ್ತು. ಆದರೆ ಸರಿಯಾದ ಚಿಕಿತ್ಸೆ ಸಿಗದ ಪರಿಣಾಮ ಜ್ವರ ಹೆಚ್ಚಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

    ಈ ಬಗ್ಗೆ ಅಲ್ಲಿನ ತಹಶೀಲ್ದಾರ್ ಮಾತನಾಡಿ ಮಗು ಹಸಿವಿನಿಂದ ಸಾವನ್ನಪ್ಪಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಕಾಳಜಿ ಕೇಂದ್ರಕ್ಕೆ ಸೋಮವಾರ ಸ್ವತಃ ನಾನೇ ಭೇಟಿ ಕೊಟ್ಟಿದ್ದೆ. ರಾತ್ರಿ ಅಲ್ಲಿ ಇದ್ದ ನಿರಾಶ್ರಿತರೆಲ್ಲರೂ ಊಟ ಮಾಡಿದ ಬಳಿಕವೇ ನಾನು ವಾಪಸ್ ಹೋದೆ. ಈ ಬಾಲಕ ಸಾವನ್ನಪ್ಪಿದ್ದು ಹಸಿವಿನಿಂದ ಅಲ್ಲ. ಆತನಿಗೆ ಜ್ವರ ಬಂದಿತ್ತು, ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನೂ ಕೊಡಿಸಿದ್ದೆವು. ಆದರೂ ಜ್ವರ ನಿಯಂತ್ರಣಕ್ಕೆ ಬಾರದೇ, ಹೆಚ್ಚಾಗಿ ನೆತ್ತಿಗೆ ಏರಿದ್ದರಿಂದ ಬಾಲಕ ಸಾವನ್ನಪ್ಪಿದ್ದಾನೆ. ಒಂದು ವೇಳೆ ಕಾಳಜಿ ಕೇಂದ್ರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರೆ, ಜಿಲ್ಲಾಧಿಕಾರಿಗಳಿಗೆ ತಿಳಿಸಿ ಅಂತಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

    ಸಿಎಂ ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದು, ಇಂದು ಎಪಿಎಂಸಿಯ ಕಾಳಜಿ ಕೇಂದ್ರ ಭೇಟಿ ನೀಡಲಿದ್ದಾರೆ. ಅಲ್ಲದೆ ಕಾಳಜಿ ಕೇಂದ್ರದಲ್ಲಿ ಬಾಲಕನ ಸಾವಿನ ಬಗ್ಗೆ ತಿಳಿದು ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ.

    https://www.youtube.com/watch?v=Bts1dZ54X1Q

  • ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಹಾಜರ್ – ಅಧಿಕಾರಿಯನ್ನು ಅಮಾನತುಗೊಳಿಸಿದ ಪ್ರಭು ಚವ್ಹಾಣ್

    ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಹಾಜರ್ – ಅಧಿಕಾರಿಯನ್ನು ಅಮಾನತುಗೊಳಿಸಿದ ಪ್ರಭು ಚವ್ಹಾಣ್

    – ಪಶು ವೈದ್ಯಕೀಯ ಕಚೇರಿಗೆ ದಿಢೀರ್ ಭೇಟಿ
    – ಅಧಿಕಾರಿಗಳಿಗೆ ಸಚಿವರ ಫುಲ್ ಕ್ಲಾಸ್

    ಬೀದರ್: ಜಿಲ್ಲೆಯ ಶಾಹಗಾಂಜ್‍ನಲ್ಲಿರುವ ಪಶು ವೈದ್ಯಕೀಯ ಕಚೇರಿಗೆ ದಿಢೀರ್ ಭೇಟಿ ನೀಡಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗುಟ್ಕಾ, ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಬಂದಿದ್ದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ.

    ಇಂದು ಶಾಹಗಾಂಜ್‍ನಲ್ಲಿರುವ ಪಶು ವೈದ್ಯಕೀಯ ಕಚೇರಿಗೆ ಪ್ರಭು ಚವ್ಹಾಣ್ ಅವರು ದಿಢೀರ್ ಭೇಟಿ ನೀಡಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದ ಕಾರಣಕ್ಕೆ ಸಚಿವರನ್ನು ಕಂಡು ಕಂಗಾಲಾಗಿದ್ದಾರೆ. ಕಚೇರಿಯಲ್ಲಿ ಸ್ವಚ್ಛತೆ ಕಾಪಾಡದೇ ಕರ್ತವ್ಯ ಲೋಪ ಎಸೆಗಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಾನುವಾರು ಅಭಿವೃದ್ಧಿ ಅಧಿಕಾರಿ ಎನ್. ಗಾಂಧಿ ಹಾಗೂ ಡಿ ಗ್ರೂಪ್ ನೌಕರ ಬಾಬು ಗುಟ್ಕಾ ಹಾಗೂ ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಬಂದಿದ್ದರು. ಇವರನ್ನು ಗಮನಿಸಿದ ಸಚಿವರು ಇಬ್ಬರನ್ನು ಅಮಾನತುಗೊಳಿಸುವಂತೆ ಆದೇಶ ನೀಡಿದ್ದಾರೆ.

    ಕೆಲಸಕ್ಕೆ ಗೈರಾದ ಅಧಿಕಾರಿಗಳಿಗೂ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಕೆಲಸಕ್ಕೆ ಹಾಜರಾಗದ 6ಕ್ಕೂ ಹೆಚ್ಚು ಅಧಿಕಾರಿಗಳ ಹೆಸರನ್ನು ಪಡೆದು ಅವರ ಮೇಲೆ ಕ್ರಮ ತೆಗದುಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ. ಅಲ್ಲದೆ ಕರ್ತವ್ಯ ಲೋಪ ಮಾಡುವ ಸಿಬ್ಬಂದಿ ಅಥವಾ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಮಗಳು ಮೃತಪಟ್ಟರೂ ಕಂಡಕ್ಟರ್ ಕೆಲಸಕ್ಕೆ ಹಾಜರಾಗಲು ಸೂಚಿಸಿದ ಅಧಿಕಾರಿ

    ಮಗಳು ಮೃತಪಟ್ಟರೂ ಕಂಡಕ್ಟರ್ ಕೆಲಸಕ್ಕೆ ಹಾಜರಾಗಲು ಸೂಚಿಸಿದ ಅಧಿಕಾರಿ

    – ರಾತ್ರಿ ಡಿಪೋಗೆ ಬಂದಾಗ ನಿರ್ವಾಹಕನಿಗೆ ಶಾಕ್
    – ರಜೆ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡ ನಿರ್ವಾಹಕ

    ಕೊಪ್ಪಳ: ಮಗಳು ಮೃತಪಟ್ಟ ವಿಷಯವನ್ನು ಮುಚ್ಚಿಟ್ಟು ಕರ್ತವ್ಯಕ್ಕೆ ಕಳುಹಿಸಿದ ಅಮಾನವೀಯ ಘಟನೆಯೊಂದು ಕೊಪ್ಪಳದ ಕೆಎಸ್‍ಆರ್ ಟಿಸಿ ಡಿಪೋದಲ್ಲಿ ನಡೆದಿದೆ.

    ಗಂಗಾವತಿ ಕೆಎಸ್‍ಆರ್ ಟಿಸಿ ಡಿಪೋದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪ್ರಮಾದ ಎಸಗಿದ್ದರಿಂದ ಕಂಡಕ್ಟರ್ ಮಂಜುನಾಥ್ ಅವರು ತನ್ನ ಮಗಳು ಮೃತಪಟ್ಟಿದ್ದರೂ ಕೊನೆಗಳಿಗೆ ಮುಖವನ್ನು ನೋಡದಂತೆ ಆಗಿದೆ.

    ಕೊಪ್ಪಳದ ಗಂಗಾವತಿ ಕೊಲ್ಲಾಪುರ ಬಸ್ಸಿನ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ತಾಲೂಕಿನ ರಾಂಪೂರದ ಮಂಜುನಾಥ್ ಅವರ ಪುತ್ರಿ ಕವಿತಾ ಅನಾರೋಗ್ಯದ ಕಾರಣ ಬುಧವಾರ ಮುಂಜಾನೆ 10 ಗಂಟೆ ಸುಮಾರಿಗೆ ಮೃತಪಟ್ಟಿದ್ದಾಳೆ. ಕವಿತಾ ಸಾವನ್ನಪ್ಪಿದ ವಿಷಯವನ್ನು ತಂದೆ ಮಂಜುನಾಥ್‍ಗೆ ತಿಳಿಸಲು ಕುಟುಂಬ್ಥರು ಗಂಗಾವತಿ ಬಸ್ ಡಿಪೋಗೆ ಫೋನ್ ಮಾಡಿ ಹೇಳಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಮಂಜುನಾಥ್‍ಗೆ ಮಗಳು ಮೃತಪಟ್ಟಿರುವ ವಿಷಯ ತಿಳಿಸದೇ ಕೆಲಸಕ್ಕೆ ಕಳುಹಿಸಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಚಾಲಕರೇ ಹುಷಾರ್ – ಮೊಬೈಲ್ ಇಟ್ಕೊಂಡ್ರೆ ಕೆಲ್ಸ ಕಳ್ಕೋತಿರಾ!

    ಮಂಜುನಾಥ್ ಕೆಲಸಕ್ಕೆ ಹೋಗಿ ಗುರುವಾರ ರಾತ್ರಿ ಡಿಪೋಗೆ ಬಂದಾಗ ವಿಷಯ ಗೊತ್ತಾಗಿದೆ. ಮಗಳ ಸಾವಿನ ವಿಷಯವನ್ನು ಒಂದು ದಿನ ತಡವಾಗಿ ತಿಳಿದ ಮಂಜುನಾಥ್ ದಿಗ್ಭ್ರಮೆಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಮಂಜುನಾಥ್ ಅವರು ಅಧಿಕಾರಿಗಳ ಬಳಿ ಹೋಗಿ ಮಗಳು ಸಾವನ್ನಪ್ಪಿರುವ ವಿಷಯ ತಿಳಿಸಿದ್ದಾರೆ. ನನಗೆ ಶುಕ್ರವಾರ ರಜೆ ಕೊಡಿ ಊರಿಗೆ ಹೋಗುತ್ತೇನೆ ಎಂದು ಅಂಗಲಾಚಿ ಬೇಡಿಕೊಂಡರೂ ಅಧಿಕಾರಿಗಳು ಮಾತ್ರ ರಜೆ ನೀಡಲು ನಿರಾಕರಿಸಿದ್ದಾರೆ.

    ಕೊನೆಯ ಸಾರಿ ಮಗಳ ಮುಖವನ್ನು ನೋಡದ ಹಾಗೆ ಮಾಡಿದ ಅಧಿಕಾರಿಗಳು ಇದೀಗ ಮನೆಗೆ ಹೋಗಲು ಸಹ ರಜೆ ನೀಡುತಿಲ್ಲ ಎಂದು ಸಹೋದ್ಯೋಗಿಗಳ ಜೊತೆ ಮಂಜುನಾಥ್ ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.

    ಫೋನ್ ಬಳಕೆಯಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಚಾಲಕ ಮತ್ತು ನಿರ್ವಾಹಕರಿಗೆ ಮೊಬೈಲ್ ಫೋನ್ ಬಳಕೆಯನ್ನು ನಿರ್ಬಂಧಿಸಿದೆ. ಒಂದು ವೇಳೆ ಆದೇಶ ಮೀರಿ ನಡೆದುಕೊಂಡರೆ ಕೆಲಸದಿಂದಲೇ ಅಮಾನತು ಮಾಡಲಾಗುತ್ತದೆ.

  • 5 ವರ್ಷದಲ್ಲಿ ಎಷ್ಟು ಸಸಿ ನೆಡಲಾಗಿದೆ – ಅರಣ್ಯ ಅಧಿಕಾರಿಗಳಿಗೆ ಸಿಎಂ ಫುಲ್ ಕ್ಲಾಸ್

    5 ವರ್ಷದಲ್ಲಿ ಎಷ್ಟು ಸಸಿ ನೆಡಲಾಗಿದೆ – ಅರಣ್ಯ ಅಧಿಕಾರಿಗಳಿಗೆ ಸಿಎಂ ಫುಲ್ ಕ್ಲಾಸ್

    ಬೆಂಗಳೂರು: ಇಂದು ವಿಧಾನಸೌಧದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅರಣ್ಯ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕಾಡು ಪ್ರಾಣಿಗಳ ದಾಳಿಯಿಂದ ಮೃತ ಪಟ್ಟವರಿಗೆ ಶೀಘ್ರವಾಗಿ ಪರಿಹಾರ ನೀಡಬೇಕು. ಮೊದಲು ಎರಡು ಲಕ್ಷ, ಮರಣೋತ್ತರ ಪರೀಕ್ಷೆ ಬಳಿಕ ಮೂರು ಲಕ್ಷ ಅಂದರೆ ಹೇಗೆ? ಒಂದೇ ಬಾರಿ ಪೂರ್ತಿ ಹಣ ಬಿಡುಗಡೆ ಮಾಡಬೇಕು. ಜನರೇ ನಿಮ್ಮ ಹತ್ತಿರ ಬರಬೇಕೇ? ಸ್ಥಳ ಪರೀಶಿಲನೆಗೆ ನೀವೇ ಹೋಗಬೇಕು. ನೀವೇ ಘಟನಾ ಸ್ಥಳಕ್ಕೆ ಹೋಗಿ ಪರಿಹಾರ ವಿತರಣೆ ಮಾಡಬೇಕು. 5 ಲಕ್ಷ ಮೃತರ ಕುಟುಂಬಕ್ಕೆ ನೀಡಬೇಕು ಎಂದು ಸೂಚಿಸಿದ್ದಾರೆ.

    ಅರಣ್ಯ ಇಲಾಖೆಯಿಂದ ಐದು ವರ್ಷಗಳಲ್ಲಿ ಎಷ್ಟು ಸಸಿ ನೆಡಲಾಗಿದೆ. ಈಗಿನ ಪರಿಸ್ಥಿತಿ ಹೇಗಿದೆ? ನೀವೂ ಹಳೇ ಫೋಟೋಗಳನ್ನು ಈಗ ನೀಡೋದಲ್ಲ. ನಾನು ಸ್ಪಾಟ್‍ಗೆ ಭೇಟಿ ನೀಡುತ್ತೇನೆ. ಈಗ ಪರಿಸ್ಥಿತಿ ಹೇಗಿದೆ? ನೀವು ನೆಟ್ಟಿರುವ ಸಸಿಗಳು ಹೇಗಿವೆ ಎಂದು ಪರಿಶೀಲನೆ ನಡೆಸುತ್ತೇನೆ. ಸುಮ್ಮನೆ ಕಾಲ ಕಳೆಯೋದಲ್ಲ ಎಂದು ಅಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡರು.

  • ಆಧಾರ್ ಕಾರ್ಡ್ ಇದ್ರೆ ರೇಷನ್, ಚೆಕ್ ಕೊಡ್ತೀವಿ- ಸಂತ್ರಸ್ತರಿಗೆ ಗೋಳಾಡಿಸುತ್ತಿರುವ ಅಧಿಕಾರಿಗಳು

    ಆಧಾರ್ ಕಾರ್ಡ್ ಇದ್ರೆ ರೇಷನ್, ಚೆಕ್ ಕೊಡ್ತೀವಿ- ಸಂತ್ರಸ್ತರಿಗೆ ಗೋಳಾಡಿಸುತ್ತಿರುವ ಅಧಿಕಾರಿಗಳು

    ಬೆಳಗಾವಿ: ಉತ್ತರ ಕರ್ನಾಟಕದ ಜನರ ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ತಿನ್ನೋಕೆ ಆಹಾರವಿಲ್ಲದೆ, ಬದುಕೋಕೆ ಸೂರಿಲ್ಲದೆ ವಿಲವಿಲ ಒದ್ದಾಡುತ್ತಿದ್ದಾರೆ. ಇದರ ಮಧ್ಯೆ ಚೆಕ್ ಹಾಗೂ ರೇಷನ್ ಪಡೆಯೋಕೆ ಆಧಾರ್ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಸಂತ್ರಸ್ತರಿಗೆ ಗೋಳಾಡಿಸುತ್ತಿದ್ದಾರೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡಿಯೂರಿನಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಚೆಕ್ ಹಾಗೂ ರೇಷನ್ ಪಡೆಯೋಕೆ ಆಧಾರ್ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಸಂತ್ರಸ್ತರಿಗೆ ಗೋಳಾಡಿಸುತ್ತಿದ್ದಾರೆ. ಎಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಅಂದರೆ, ಎಲ್ಲಾದರೂ ಹೋಗಿ ಏನಾದರೂ ಮಾಡಿ, ಆಧಾರ್ ತಗೆದುಕೊಂಡು ಬಂದರೇನೆ ನಿಮಗೆ ಚೆಕ್ ಕೊಡುತ್ತೇವೆ ಎಂದು ಅಧಿಕಾರಿಗಳು ಸಂತ್ರಸ್ತರನ್ನು ಪೀಡಿಸುತ್ತಿದ್ದಾರೆ. ಪ್ರವಾಹಕ್ಕೆ ಕೆಲವರ ರೇಷನ್ ಕಾರ್ಡ್ ಕೂಡ ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ರೇಷನ್ ಸಿಗದೆ, ಕೆಲಸವೂ ಇಲ್ಲದೆ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ಈ ನೋವಿನಲ್ಲೂ ಅಸಾಹಯಕರ ಜೀವ ಹಿಂಡುತ್ತಿರುವ ಅಧಿಕಾರಿಗಳ ಈ ಕಿರುಕುಳದಿಂದ ಸಂತ್ರಸ್ತರು ಕಣ್ಣೀರು ಹಾಕುವಂತಾಗಿದೆ. ಇದನ್ನೂ ಓದಿ:ನೆರೆ ‘ಪೀಡಕರು’- ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರಿಗೆ ತಲುಪುತ್ತಿಲ್ಲ ಪರಿಹಾರ

    ಪ್ರವಾಹದಿಂದ ಏನೆಲ್ಲಾ ಅನಾಹುತಗಳಾಗಿವೆ ಅನ್ನೋದು ರಾಜ್ಯದ ಜನತೆಗೆ ತಿಳಿದಿದೆ. ಪ್ರವಾಹ ಪೀಡಿತ ಪ್ರದೇಶದ ಜನರ ಬದುಕಿನ ಬಂಡಿಯ ಚಕ್ರಗಳೇ ಕಳಚಿಕೊಂಡಿವೆ. ಈಗ ಮತ್ತೆ ಆರಂಭದಿಂದ ಅವರು ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಒಂದು ಹೊತ್ತಿನ ಊಟಕ್ಕೂ ಬೇಡಿ ತಿನ್ನೋ ಪರಿಸ್ಥಿತಿ ಬಂದಿದೆ. ಹಾಕೋಳೋಕೆ ಇರೋ ಒಂದೇರಡು ಬಟ್ಟೆಯಲ್ಲೆ ಕಂಡವರ ಮನೆಯಲ್ಲಿ ಜೀವನ ನಡೆಸುವ ಹಾಗಾಗಿದೆ. ಆದರೆ ಇದರ ಮಧ್ಯೆ ಸ್ಥಳೀಯ ಅಧಿಕಾರಿಗಳ ಕಾಟ ಅತೀರೇಕವಾಗಿದೆ.

    ಸಿಎಂ ಯಡಿಯೂರಪ್ಪ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಂಡು ಸಂತ್ರಸ್ತರ ನೆರವಿಗೆ ಬರಬೇಕಿದೆ. ಚೆಕ್ ಕೊಟ್ಟಿದ್ದೀವಿ ಎಂದು ಸಾಧನೆ ಮಾಡಿರುವ ರೀತಿ ಹೇಳಿಕೊಳ್ಳುವ ನಾಯಕರು ಇತ್ತ ಗಮನಕೊಡಿ. ಪ್ರವಾಹದಲ್ಲಿ ಎಲ್ಲಾ ಕಳೆದುಕೊಂಡವರ ಬಳಿ ಆಧಾರ ಕಾರ್ಡ್ ಎಲ್ಲಿರುತ್ತೆ? ನಿಮ್ಮ ಅಧಿಕಾರಿಗಳಿಗೆ ಚೆಕ್ ಕೊಡೋಕೆ ಆಧಾರ್ ಬೇಕಂತೆ, ರೇಷನ್ ತಗೋಕೆ ರೇಷನ್ ಕಾರ್ಡ್ ಬೇಕಂತೆ. ಇದು ಯಾವ ನ್ಯಾಯ? ಜೀವ ಉಳಿಸಿಕೊಂಡು ಮನೆ ಬಿಟ್ಟು ಬಂದಿರುವವರ ಬಳಿ ಆಧಾರ್ ಕಾರ್ಡ್ ಎಲ್ಲಿಂದ ಬರುತ್ತೆ? ಮನೆ ಕಾಗದ ಪತ್ರಗಳನ್ನೆ ಕಳೆದುಕೊಂಡು, ಜೀವ ಉಳಿಸಿಕೊಳ್ಳಲು ಒದ್ದಾಡಿದ ಜನರು ಪ್ರವಾಹದಲ್ಲಿ ಆಧಾರ್ ಕಾರ್ಡ್ ಹುಡುಕಿಕೊಂಡು ತೆಗೆದುಕೊಂಡು ಹೋಗಬೇಕಿತ್ತಾ? ಅಧಿಕಾರಿಗಳಿಗೆ ಅಷ್ಟು ಕಾಮನ್ ಸೆನ್ಸ್ ಇಲ್ಲವಾ? ಎಂದು ಪ್ರಶ್ನಿಸಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬೆಳ್ಳಂಬೆಳಗ್ಗೆ ಶಾಸಕರಿಂದ ಅಧಿಕಾರಿಗಳಿಗೆ ಕ್ಲಾಸ್

    ಬೆಳ್ಳಂಬೆಳಗ್ಗೆ ಶಾಸಕರಿಂದ ಅಧಿಕಾರಿಗಳಿಗೆ ಕ್ಲಾಸ್

    ಬಳ್ಳಾರಿ: ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬಳ್ಳಾರಿಯ ಗಣೇಶ್ ಕಾಲೋನಿಯಲ್ಲಿ ಒಳಚರಂಡಿ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಯಿಂದ ಹೊರಬಂದಿದ್ದರು. ಹೀಗಾಗಿ ಸೋಮಶೇಖರ್ ಅವರು ಮಹಾನಗರ ಪಾಲಿಕೆ ಆಯುಕ್ತೆ ತುಷಾರಾಮಣಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಜನರ ಸಮಸ್ಯೆ ಪರಿಹಾರ ಮಾಡದೇ ಇರುವ ಹಿನ್ನೆಲೆಯಲ್ಲಿ ಸೋಮಶೇಖರ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಜಲಾವೃತ ಆದ ಮನೆಯ ಕಟ್ಟೆಯ ಮೇಲೆ ಕುಳಿತು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

    ನಗರದಲ್ಲಿ ಪದೇ ಪದೇ ಯುಜಿಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುತ್ತಿದೆ. ಸೋಮಶೇಖರ್ ಕ್ಲಾಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾಹನಗಳನ್ನು ತರಿಸಿ ಕ್ಲೀನ್ ಮಾಡಲು ಮುಂದಾಗಿದ್ದಾರೆ.