Tag: officers

  • ಆರ್‌ಟಿಪಿಎಸ್‌ನಲ್ಲಿ ಕಲ್ಲಿದ್ದಲು ಶಾಖಕ್ಕೆ ಸುಟ್ಟು ಕರಕಲಾದ ಕಾರ್ಮಿಕ

    ಆರ್‌ಟಿಪಿಎಸ್‌ನಲ್ಲಿ ಕಲ್ಲಿದ್ದಲು ಶಾಖಕ್ಕೆ ಸುಟ್ಟು ಕರಕಲಾದ ಕಾರ್ಮಿಕ

    ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಆರ್‌ಟಿಪಿಎಸ್‌ನಲ್ಲಿ ಅವಘಡ ಸಂಭವಿಸಿದ್ದು, ಗುತ್ತಿಗೆ ಕಾರ್ಮಿಕನೋರ್ವ ಕಲ್ಲಿದ್ದಲು ಶಾಖಕ್ಕೆ ಸುಟ್ಟು ಕರಕಲಾದ ದುರಂತ ನಡೆದಿದೆ.

    ಓರಿಸ್ಸಾ ಮೂಲದ ದೀಪಕ್ ನಾಯಕ್(27) ಮೃತ ಕಾರ್ಮಿಕ. ಗುತ್ತಿಗೆ ಆಧಾರದ ಮೇಲೆ ದೀಪಕ್ ಆರ್‌ಟಿಪಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದನು. ಕಲ್ಲಿದ್ದಲು ಬಂಕರ್‌ನಲ್ಲಿ ದೀಪಕ್ ಕೆಲಸ ಮಾಡುವಾಗ ಈ ಘಟನೆ ನಡೆದಿದೆ. ರಾತ್ರಿ ಸುಮಾರು 11:30ರ ವೇಳೆಗೆ ಈ ದುರಂತ ನಡೆದಿದೆ ಎನ್ನಲಾಗಿದೆ. ರಾತ್ರಿ ತನ್ನ ಪಾಳಿ ಸಮಯ ಮುಗಿದ ಮೇಲೂ ಕಾರ್ಮಿಕ ಹೆಚ್ಚುವರಿ ಕೆಲಸ ಮಾಡುತ್ತಿದ್ದ ವೇಳೆ ಕಲ್ಲಿದ್ದಲು ಶಾಖಕ್ಕೆ ಸಾವನ್ನಪ್ಪಿದ್ದಾನೆ.

    ಅಧಿಕಾರಿಗಳ ನಿರ್ಲಕ್ಷ್ಯವೇ ಕಾರ್ಮಿಕನ ಸಾವಿಗೆ ಕಾರಣ. ಅಧಿಕಾರಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಕಾರ್ಮಿಕರಿಗೆ ಒದಗಿಸಿದೆ ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದಲೇ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ಇತರೆ ಕಾರ್ಮಿಕರು ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉದ್ಘಾಟನೆಗೊಂಡ ತಿಂಗ್ಳಲ್ಲೇ ಎಲ್ಲವೂ ಮಂಗಮಾಯ- ಕೊಪ್ಪಳದಲ್ಲಿ ರೈಲು ಪ್ರಯಾಣಿಕರು ಪರದಾಟ

    ಉದ್ಘಾಟನೆಗೊಂಡ ತಿಂಗ್ಳಲ್ಲೇ ಎಲ್ಲವೂ ಮಂಗಮಾಯ- ಕೊಪ್ಪಳದಲ್ಲಿ ರೈಲು ಪ್ರಯಾಣಿಕರು ಪರದಾಟ

    ಕೊಪ್ಪಳ: ಕತ್ತಲಲ್ಲಿ ರೈಲ್ವೆ ಪ್ರಯಾಣಿಕರು ಪರದಾಡುತ್ತಿದ್ದು, ಇದನ್ನು ನೋಡಿಯೂ ಅಧಿಕಾರಿಗಳು ಕ್ಯಾರೇ ಎನ್ನದೇ ಇರುವುದು

    ಆರು ತಿಂಗಳ ಹಿಂದಷ್ಟೇ ಕೊಪ್ಪಳದ ಗಂಗಾವತಿಯಲ್ಲಿ ರೈಲ್ವೆ ನಿಲ್ದಾಣ ಉದ್ಘಾಟನೆಗೊಂಡಿತ್ತು. ಸಂಸದ ಸಂಗಣ್ಣ ಕರಡಿ ಅವರು ಈ ರೈಲ್ವೆ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದರು. ಆದರೆ ಈಗ ಈ ರೈಲ್ವೆ ನಿಲ್ದಾಣದಲ್ಲಿ ಕರೆಂಟ್ ಹೋಗಿ ಐದು ತಿಂಗಳು ಆಯಿತು.

    ಉದ್ಘಾಟನೆಗೊಂಡ ಒಂದೇ ತಿಂಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ಎಲ್ಲವೂ ಮಂಗ ಮಾಯವಾಗಿದ್ದು, ಕರೆಂಟ್, ಬಸ್, ಸುರಕ್ಷತೆ, ಇಲ್ಲದಂತಾಗಿದೆ. ರಾತ್ರಿ 9:30ಕ್ಕೆ ಹುಬ್ಬಳ್ಳಿಯಿಂದ ಬರುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅಲ್ಲದೆ ಮೊಬೈಲ್ ಟಾರ್ಚ್ ಹಾಕಿಕೊಂಡು ರೈಲ್ವೆ ನಿಲ್ದಾಣದಲ್ಲಿ ಇಳಿಯುವ ಪರಿಸ್ಥಿತಿ ಬಂದಿದೆ.

    ರೈಲ್ವೆ ನಿಲ್ದಾಣದಲ್ಲಿ ಹೆಸರಿಗೆ ಮಾತ್ರ ಸಾಲು-ಸಾಲು ವಿದ್ಯುತ್ ಕಂಬ ಅಳವಡಿಸಲಾಗಿದ್ದು, ಒಂದು ಕಂಬದಲ್ಲೂ ದ್ವೀಪ ಉರಿಯಲ್ಲ. ಹುಬ್ಬಳ್ಳಿಯಿಂದ ಗಂಗಾವತಿಗೆ 75 ರೂ. ಕೊಟ್ಟರೆ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ 50 ರೂ. ಆಟೋ ಚಾರ್ಜ್ ಆಗುತ್ತದೆ. ಇಲ್ಲವೆಂದರೆ ಪ್ರಯಾಣಿಕರು ಸುಮಾರು 3 ಕಿ.ಮೀ ಕತ್ತಲಲ್ಲೇ ನಡೆದುಕೊಂಡು ಹೋಗಬೇಕಾಗುತ್ತದೆ.

    ಸದ್ಯ ಪ್ರಯಾಣಿಕರು ರೈಲ್ವೆ ಆಡಳಿತದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅಲ್ಲದೆ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ದ್ವೀಪ ಅಳವಡಿಸುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಸಂಸದ ಸಂಗಣ್ಣ ಕರಡಿ ಅವರಿಗೆ ಮನವಿ ಮಾಡಿದ್ದಾರೆ.

  • ಪಹಣಿಯಲ್ಲಿ 24 ಲಕ್ಷ ರೂ. ಸಾಲ ಕಂಡು ದಂಗಾದ ರೈತ

    ಪಹಣಿಯಲ್ಲಿ 24 ಲಕ್ಷ ರೂ. ಸಾಲ ಕಂಡು ದಂಗಾದ ರೈತ

    ಧಾರವಾಡ: ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಧಾರವಾಡದ ರೈತರೊಬ್ಬರು ಪರದಾಡುವಂತಾಗಿದ್ದು, ಬ್ಯಾಂಕಿನಿಂದ ಸಾಲ ಸಿಗದೇ ಪರಿತಪಿಸುತ್ತಿದ್ದಾರೆ.

    ಅಧಿಕಾರಿಗಳ ಎಡವಟ್ಟಿನಿಂದ ತಾಲೂಕಿನ ರೈತ ನರೇಂದ್ರ ಗ್ರಾಮದ ನಾಗಪ್ಪ ಮೊರಬ ಬ್ಯಾಂಕಿನಿಂದ ಬ್ಯಾಂಕ್‍ಗೆ ಹಾಗೂ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಇವರ ಜಮೀನಿನ ಪಹಣಿ ಪತ್ರದಲ್ಲಿ 24 ಲಕ್ಷ ರೂ. ಸಾಲದ ಭೋಜಾ ಏರಿಸಲಾಗಿದ್ದು, ಇದರಿಂದ ಭೋಜಾ ಇಳಿಸದೇ ಯಾವುದೇ ಬ್ಯಾಂಕಿನವರು ಸಾಲ ಕೊಡಲು ನಿರಾಕರಿಸುತ್ತಿದ್ದಾರೆ. ಇನ್ನೂ ಅಚ್ಚರಿ ಸಂಗತಿ ಎಂದರೆ 7 ಎಕ್ರೆ ಜಮೀನಿನ ಈ ಪಹಣಿ ಪತ್ರದಲ್ಲಿ ಎಸ್‍ಬಿಎಂ ಬ್ಯಾಂಕ್‍ನ ಸಾಲ ಎಂದು ನಮೂದಿಸಲಾಗಿದೆ.

    ಆದರೆ ಈ ಬ್ಯಾಂಕ್‍ನಲ್ಲಿ ನಾಗಪ್ಪ ಮೊರಬ ಅವರ ಖಾತೆಯೇ ಇಲ್ಲ. ಹೀಗಾಗಿ ಇವರು ಸಾಲ ಕೇಳಲು ಬ್ಯಾಂಕ್‍ಗಳಿಗೆ ಹೋದರೆ ಸಾಲದ ಭೋಜಾ ಇದೆ ಅದನ್ನು ಕಡಿಮೆ ಮಾಡಿಸಿಕೊಂಡು ಬನ್ನಿ ಇಲ್ಲವೇ ಎಸ್‍ಬಿಎಂನಿಂದ ಎನ್‍ಒಸಿ ತೆಗೆದುಕೊಂಡು ಬನ್ನಿ ಎನ್ನುತ್ತಿದ್ದಾರೆ. ಇತ್ತ ಎಸ್‍ಬಿಎಂ ವಿಲೀನಗೊಂಡ ಹಿನ್ನೆಲೆ ನಾಗಪ್ಪ ಅವರು ಎಸ್‍ಬಿಐನ ಹುಬ್ಬಳ್ಳಿ ಶಾಖೆಗೆ ಹೋಗಿ ಭೋಜಾದ ಎನ್‍ಒಸಿ ಕೊಡುವಂತೆ ಕೇಳಿದ್ದಾರೆ. ನಮ್ಮಲ್ಲಿ ಖಾತೆಯೇ ಇಲ್ಲದೇ ಎನ್‍ಒಸಿ ಹೇಗೆ ಕೊಡುವುದು ಎಂದು ಪ್ರಶ್ನಿಸಿದ್ದಾರೆ.

    ಒಂದೆಡೆ ಎನ್‍ಒಸಿ ಇಲ್ಲದೇ ಬೇರೆ ಬ್ಯಾಂಕ್‍ಗಳು ಸಾಲ ಕೊಡುತ್ತಿಲ್ಲ. ಇತ್ತ ಭೋಜಾ ತೆಗೆದುಕೊಡಿ ಎಂದು ತಹಶೀಲ್ದಾರ ಕಚೇರಿಗೆ ಅಲೆದಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಈ ಹಿಂದೆ ಪಹಣಿ ಪತ್ರಗಳನ್ನು ಗಣಕೀಕೃತಗೊಳಸುವಾಗ ಅಧಿಕಾರಿಗಳು ಈ ರೀತಿ ಎಡವಟ್ಟು ಮಾಡಿದ್ದಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ರೈತ ನಾಗಪ್ಪ ಅವರು ಮಾತ್ರ ಸಾಲ ಸಿಗದೆ ಪರದಾಡುತ್ತಿದ್ದಾರೆ.

  • ಕೆಲ್ಸ ಆಗದಿದ್ರೆ ಖಾನಾಪುರ ತೊರೆಯಿರಿ – ಪೆನ್ಷನ್ ಮಾಡಿಕೊಡದ ಅಧಿಕಾರಿಗಳಿಗೆ ಶಾಸಕಿ ನಿಂಬಾಳ್ಕರ್ ಕ್ಲಾಸ್

    ಕೆಲ್ಸ ಆಗದಿದ್ರೆ ಖಾನಾಪುರ ತೊರೆಯಿರಿ – ಪೆನ್ಷನ್ ಮಾಡಿಕೊಡದ ಅಧಿಕಾರಿಗಳಿಗೆ ಶಾಸಕಿ ನಿಂಬಾಳ್ಕರ್ ಕ್ಲಾಸ್

    ಬೆಳಗಾವಿ: ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಪೆನ್ಷನ್ ಮಾಡಿಕೊಡದ ಅಧಿಕಾರಿಗಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಮೈಚಳಿ ಬಿಡಿಸಿದ್ದಾರೆ.

    ಜಿಲ್ಲೆಯ ಖಾನಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕಿ, ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಪೆನ್ಷನ್ ಮಾಡಿಕೊಡ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂಜಲಿ ನಿಂಬಾಳ್ಕರ್ ಕಳೆದ ವರ್ಷ 160 ಪೆನ್ಷನ್ ಅರ್ಜಿ ನೀಡಿದ್ದರು. ಒಂದು ವರ್ಷವಾದರೂ ಅಧಿಕಾರಿಗಳು ಪೆನ್ಷನ್ ಮಾಡಿಕೊಟ್ಟಿರಲಿಲ್ಲ, ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.

    ಒಂದು ವರ್ಷವಾದರೂ ಅರ್ಜಿಯನ್ನು ವಿಲೇವಾರಿ ಮಾಡದ್ದಕ್ಕೆ ಪೆನ್ಷನ್ ಸೂಪರ್ ವೈಸರ್ ಮತ್ತು ಕೇಸ್ ವರ್ಕರ್‌ಗೆ ಶಾಸಕಿ ಮೈಚಳಿ ಬಿಡಿಸಿದ್ದು, ದಾಖಲೆ ಸಮೇತ ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಜನರ ಪರವಾಗಿ ಕೆಲಸ ಮಾಡದಿದ್ದರೆ ಖಾನಾಪುರ ಬಿಡುವಂತೆ ಎಚ್ಚರಿಕೆ ನೀಡಿದ್ದಾರೆ.

    ಯಾವ ರೀತಿ ಅರ್ಜಿಗಳ ವಿಲೇವಾರಿ ಮಾಡುತ್ತೀರಿ ಹೇಳಿ, ಅಧಿಕಾರಿಗಳು ಶಾಸಕಿ ಮುಂದೆಯೇ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಒಬ್ಬರ ಮೇಲೆ ಒಬ್ಬರು ಹಾಕಿ ಜಾರಿಕೊಳ್ಳಲು ಯತ್ನಿಸಿದರು. ಮಧ್ಯಾಹ್ನ ಆದರೂ ಎರಡನೇ ದರ್ಜೆ ಅಧಿಕಾರಿಗಳು ಕಚೇರಿಗೆ ಬಂದಿರಲಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

    ಅಧಿಕಾರಿಗಳ ಮಾತಿನಿಂದ ಬೇಸರಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್, ನಿಮ್ಮ ವೇತನ ಆಗದಿದ್ದರೆ ಸರ್ಕಾರ ಮತ್ತು ತಹಶಿಲ್ದಾರ ತಲೆ ತಿನ್ನುತ್ತೀರಿ. ನಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಡಿ ಎಂದು ಕೇಸ್ ವರ್ಕರ್‌ಗೆ ಕೈ ಮುಗಿದು ಬೇಡಿಕೊಂಡಿದ್ದಾರೆ. ನಿಮ್ಮ ಕಾಲಿಗೆ ಬೇಕಾದರೂ ಬೀಳುತ್ತೇನೆ ಕೆಲಸ ಮಾಡಿ. ಜನರ ಬಗ್ಗೆ ಸ್ವಲ್ಪ ಕಳಕಳಿ ಇಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಸಾರ್ವಜನಿಕ ಸ್ಥಳದಲ್ಲಿ ಮೂತ್ರ- ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ ಅಧಿಕಾರಿ

    ಸಾರ್ವಜನಿಕ ಸ್ಥಳದಲ್ಲಿ ಮೂತ್ರ- ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ ಅಧಿಕಾರಿ

    ಭೋಪಾಲ್: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಇಬ್ಬರು ವ್ಯಕ್ತಿಗಳಿಗೆ ಮಧ್ಯಪ್ರದೇಶದ ಇಂದೋರ್ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಬಸ್ಕಿ ಹೊಡೆಸಿದ್ದಾರೆ.

    ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆಟೋ ಚಾಲಕ ಹಾಗೂ ಪ್ರಯಾಣಿಕನಿಗೆ ಅಧಿಕಾರಿ ಬಸ್ಕಿ ಹೊಡೆಸಿದ್ದಾರೆ. ಸಿಕ್ಕಿಬಿದ್ದ ತಕ್ಷಣ ಅಧಿಕಾರಿ ದಂಡ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಇಬ್ಬರೂ ತಮ್ಮ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ. ಆಗ ಅಧಿಕಾರಿ ಹಾಗೂ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

    ಅಧಿಕಾರಿಯ ಮುಂದೆ ಇಬ್ಬರೂ ಬಸ್ಕಿ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ರವಿ ಎಂದು ಗುರುತಿಸಲಾಗಿದೆ. ಆಟೋ ರೈಲ್ವೇ ನಿಲ್ದಾಣದಿಂದ ಬರುತ್ತಿತ್ತು.

    ಐಎಂಸಿ ಮುಖ್ಯ ನೈರ್ಮಲ್ಯ ಅಧಿಕಾರಿ(ವಲಯ-1) ಶೈಲೇಂದ್ರ ಪಾಲ್ ಅವರ ಪ್ರಕಾರ, ಆಟೋ ಪ್ರಯಾಣಿಕ ರವಿ ಹಾಗೂ ಚಾಲಕ ಇಬ್ಬರೂ ಮಾರಿಮಾತಾ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನು ಕಂಡು ಅಧಿಕಾರಿ ಇಬ್ಬರನ್ನೂ ಪ್ರಶ್ನಿಸಿದ್ದಾರೆ.

    ಅಧಿಕಾರಿ ಇಬ್ಬರಿಗೆ ತಲಾ 250 ರೂ. ದಂಡ ಪಾವತಿಸುವಂತೆ ಕೇಳಿದ್ದಾರೆ. ಆಟೋ ಚಾಲಕ ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾನೆ. ಪ್ರಯಾಣಿಕ ರವಿ ತನ್ನ ಬಳಿ ಕೇವಲ 100 ರೂ. ಇರುವುದಾಗಿ ಹೇಳಿದ್ದಾನೆ. ಆಗ ಅಧಿಕಾರಿ 100 ರೂ. ಪಡೆದು, ಇಬ್ಬರೂ ಸಹ ಬಸ್ಕಿ ಹೊಡೆಯುವಂತೆ ಸೂಚಿಸಿದ್ದಾರೆ. ಈ ರೀತಿ ಶಿಕ್ಷೆ ನೀಡಿದರೆ ಇಬ್ಬರೂ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಶೈಲೇಂದ್ರ ಪಾಲ್ ಹೇಳಿದ್ದಾರೆ.

  • ಸರ್ಕಾರಿ ಕಚೇರಿಯಲ್ಲಿ ಖಾಸಗಿ ದರ್ಬಾರ್-ಲಂಚ ಕೊಟ್ರೆ ಮಾತ್ರ ಆಗುತ್ತೆ ನಿಮ್ಮ ಕೆಲಸ

    ಸರ್ಕಾರಿ ಕಚೇರಿಯಲ್ಲಿ ಖಾಸಗಿ ದರ್ಬಾರ್-ಲಂಚ ಕೊಟ್ರೆ ಮಾತ್ರ ಆಗುತ್ತೆ ನಿಮ್ಮ ಕೆಲಸ

    ಕೋಲಾರ: ಜಿಲ್ಲೆಯ ಮಾಲೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಲಂಚ ನೀಡಿದರೆ ಮಾತ್ರ ನಿಮ್ಮ ಕೆಲಸಗಳು ನಡೆಯುತ್ತವೆ ಎಂಬ ಆರೋಪಗಳು ಕೇಳಿ ಬಂದಿವೆ.

    ಇಲ್ಲಿನ ಸರ್ಕಾರಿ ಕಚೇರಿಯೊಳಗೆ ಖಾಸಗಿ ವ್ಯಕ್ತಿಗಳು ಪತ್ಯೇಕ ಆಸನದ ವ್ಯವಸ್ಥೆ ಮಾಡಿಕೊಂಡು ದರ್ಬಾರ್ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಚೇರಿಯಿಂದ ಹೊರಗೆ ಸಾರ್ವಜನಿಕರೊಂದಿಗೆ ಮಧ್ಯವರ್ತಿಗಳು ಅಧಿಕಾರಿಗಳ ಮುಂದೆಯೇ ವ್ಯಾಪಾರ ಮಾಡುತ್ತಾರೆ.

    ಹೌದು, ಇಲ್ಲಿ ದಿನದಿಂದ ದಿನಕ್ಕೆ ಮಧ್ಯವರ್ತಿಗಳ ದರ್ಬಾರ್ ಮಿತಿಮೀರಿದೆ. ಕಚೇರಿಯಲ್ಲಿ ದಲ್ಲಾಳಿಗಳಿಗೆ ಟೇಬಲ್ ವ್ಯವಸ್ಥೆ ಮಾಡಿಕೊಟ್ಟು ಸಾರ್ವಜನಿಕರಿಂದ ನೇರವಾಗಿ ಅಧಿಕಾರಿಗಳೇ ಸುಲಿಗೆ ಮಾಡಿಸುತ್ತಿದ್ದಾರೆ. ಇದನ್ನು ತಿಳಿಯದ ಸಾರ್ವಜನಿಕರು, ಮಧ್ಯವರ್ತಿಗಳನ್ನೇ ಸರ್ಕಾರಿ ನೌಕರರೆಂದು ಭಾವಿಸಿ ಕೇಳಿದಷ್ಟು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಚೇರಿಯ ಉಪನೊಂದಣಾಧಿಕಾರಿ ಪದ್ಮಾವತಿ ಸಹ ನಿಗದಿಗಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ.

    ಈ ಮಧ್ಯವರ್ತಿಗಳಿಗೆ ಹಣ ಕೊಡಲಿಲ್ಲ ಅಂದರೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಜನರನ್ನು ಪದೇ-ಪದೇ ಕಚೇರಿಗೆ ಅಲೆಯುವಂತೆ ಮಾಡುತ್ತಾರೆ. ಹೆಚ್ಚಿನ ಹಣ ನೀಡಿದರೆ ಕಣ್ಮುಚ್ಚಿ ಸಹಿ ಹಾಕುವುದು ಇಲ್ಲಿ ಹವ್ಯಾಸವಾಗಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ವಿಷಯ ತಿಳಿದ ಮಾಧ್ಯಮಗಳು ಕಚೇರಿಗೆ ತೆರಳಿದರೆ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದ ಮಧ್ಯವರ್ತಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ಖಾಸಗಿ ವ್ಯಕ್ತಿಗಳು ಕಚೇರಿಯಲ್ಲಿ ಕೆಲಸ ಮಾಡುತ್ತಿರೋದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

    ಒಟ್ಟಿನಲ್ಲಿ ನಿವೇಶನ, ಮದುವೆ ನೊಂದಣಿಗೆ ಎಂದು ಬರುವ ಅಮಾಯಕರನ್ನು ಯಾಮಾರಿಸಿ ಪರ್ಸಂಟೇಜ್ ಫಿಕ್ಸ್ ಮಾಡಿ ಸಾರ್ವಜನಿಕರಿಂದ ಹಗಲು ದರೋಡೆ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

  • ಸರ್ಕಾರಿ ದುಡ್ಡಿನಲ್ಲಿ 10 ದಿನ ಶೆಟ್ಟರ್ ವಿದೇಶಿ ಪ್ರವಾಸ- ಅಧಿಕಾರಿಗಳ ಜೊತೆ ಪತ್ನಿಯರಿಗೂ ಟೂರ್

    ಸರ್ಕಾರಿ ದುಡ್ಡಿನಲ್ಲಿ 10 ದಿನ ಶೆಟ್ಟರ್ ವಿದೇಶಿ ಪ್ರವಾಸ- ಅಧಿಕಾರಿಗಳ ಜೊತೆ ಪತ್ನಿಯರಿಗೂ ಟೂರ್

    ಬೆಂಗಳೂರು: ಊರಿಗೆಲ್ಲಾ ಬುದ್ಧಿ ಹೇಳುವ ಬಿಜೆಪಿ ಡಬಲ್ ಗೇಮ್ ತಂತ್ರವನ್ನು ಅನುಸರಿಸುತ್ತಿದೆ. ಮಾಜಿ ಸಿಎಂ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ತಮ್ಮ ಇಲಾಖೆಯ ಅಧಿಕಾರಿಗಳ ಜೊತೆಗೆ ಸರ್ಕಾರದ ಹಣದಲ್ಲಿ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸಕ್ಕೆ ಸಚಿವರು ಹಾಗೂ ಅಧಿಕಾರಿಗಳು ಪತ್ನಿ ಸಮೇತ ಹೋಗುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ರಾಜ್ಯದಲ್ಲಿ ಉಂಟಾದ ನೆರೆಯಿಂದ ಜನರು ಸುಧಾರಿಸಿಕೊಂಡಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರು ಪ್ರವಾಹದ ಹಾನಿಯಿಂದ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅವರ ಪತ್ನಿ, ಅಧಿಕಾರಿಗಳು ಹಾಗೂ ಆಪ್ತರ ವಲಯದ ಜೊತೆಗೆ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.

    ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಅವರ ಪತ್ನಿಯನ್ನು ಒಳಗೊಂಡಂತೆ ಒಟ್ಟು 9 ಜನರ ತಂಡಕ್ಕೆ ವಿದೇಶಿ ಪ್ರವಾಸದ ಪ್ಲ್ಯಾನ್ ಸಿದ್ಧವಾಗಿದೆ. ಒಟ್ಟು 10 ದಿನದ ಪ್ರವಾಸಕ್ಕೆ ಸರ್ಕಾರಿ ಹಣವನ್ನೆ ಬಳಸಿಕೊಳ್ಳಲಾಗುತ್ತಿದೆ. ನವೆಂಬರ್ 6ರಿಂದ 17ರ ವರೆಗೆ ಚೀನಾದಲ್ಲಿ 6 ದಿನ, 4 ದಿನ ಲಂಡನ್ ಸುತ್ತಾಡಲಿದ್ದಾರೆ. ಈಗಾಗಲೇ ಫ್ಲೈಟ್ ಬುಕ್ ಆಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಸೆಮಿನಾರ್ ನೆಪದಲ್ಲಿ ಎರಡು ದೇಶಗಳ ಪ್ರವಾಸಕ್ಕೆ ಸರ್ಕಾರದ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಸಚಿವರು, ಅಧಿಕಾರಿಗಳಿಗೆ ಸರ್ಕಾರಿ ಹಣವನ್ನು ಬಳಸಲಾಗುತ್ತಿದೆ. ಅವರೊಟ್ಟಿಗೆ ಬರುವ ಪತ್ನಿಯರಿಗೆ ವೈಯಕ್ತಿಯ ಹಣವನ್ನು ಭರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

    ಯಾರೆಲ್ಲ ಹೋಗ್ತಾರೆ?
    ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅವರ ಪತ್ನಿ ಶೀಲ್ಪಾ ಶೆಟ್ಟರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದಶಿ ಗೌರವ ಗುಪ್ತಾ, ಅವರ ಪತ್ನಿ ರೀನಾ ಗುಪ್ತಾ, ಜಗದೀಶ್ ಶೆಟ್ಟರ್ ಆಪ್ತ ಕಾರ್ಯದರ್ಶಿ ಧವಳೇಶ್ವರ್, ಎಂಎಸ್‍ಐಎಲ್ ಎಂಡಿ ಪ್ರಕಾಶ್, ಅವರ ಪತ್ನಿ, ಎಂಎಸ್‍ಐಎಲ್ ಅಧಿಕಾರಿ ಚಂದ್ರಪ್ಪ, ಹಾಗೂ ಪತ್ನಿ ವಿದೇಶ ಪ್ರವಾಸದ ಲಿಸ್ಟ್ ನಲ್ಲಿ ಇದ್ದಾರೆ.

    ಶೆಟ್ಟರ್‌ಗೆ ‘ಪಬ್ಲಿಕ್’ ಪ್ರಶ್ನೆ:
    *ಪ್ರಶ್ನೆ 1- ನೆರೆಯಿಂದ ಬೆಳಗಾವಿ ತತ್ತರಿಸಿ ಹೋಗಿದೆ. ಉಸ್ತುವಾರಿ ಸಚಿವರು ಹೇಗೆ ಹೋಗ್ತೀರಾ..?
    *ಪ್ರಶ್ನೆ 2 – ಅಧಿಕೃತ ಸರ್ಕಾರಿ ಪ್ರವಾಸದಲ್ಲಿ ಪತ್ನಿಯನ್ನು ಏಕೆ ಕರೆದುಕೊಂಡು ಹೋಗ್ತೀರಾ..?
    *ಪ್ರಶ್ನೆ 3 – ಪತ್ನಿಯ ಪ್ರವಾಸ ವೆಚ್ಚ ಸರ್ಕಾರ ಭರಿಸದಿದ್ದರೂ ಪತ್ನಿ ಜೊತೆಗೆ ಹೋಗುವುದು ಏಕೆ..?
    *ಪ್ರಶ್ನೆ 4 – ಅಧಿಕೃತ ಸರ್ಕಾರಿ ಪ್ರವಾಸದಲ್ಲಿ ಅಧಿಕಾರಿಗಳ ಪತ್ನಿಯರಿಗೆ ಏನು ಕೆಲಸ..?
    *ಪ್ರಶ್ನೆ 5 – ರಾಹುಲ್ ಗಾಂಧಿ ಇಂಡೋನೇಷ್ಯಾ ಖಾಸಗಿ ಪ್ರವಾಸ ಟೀಕಿಸುವ ಬಿಜೆಪಿ ಈಗ ಏನ್ ಹೇಳುತ್ತೆ..?
    *ಪ್ರಶ್ನೆ 6 – ಜೆಡಿಎಸ್ ಶಾಸಕರ ಮಲೇಷ್ಯಾ ಪ್ರವಾಸ ಟೀಕಿಸುವ ಬಿಜೆಪಿ ಈಗ ಏನ್ ಹೇಳುತ್ತೆ…?

  • ಅಕೌಂಟ್‍ನಲ್ಲಿ ಹಣವಿಲ್ಲದಿದ್ರೂ 1.28 ಕೋಟಿ ವರ್ಗಾವಣೆ – ಐಟಿ ನೋಟಿಸಿಗೆ ಅಕ್ಕಿ ವ್ಯಾಪಾರಿ ತಬ್ಬಿಬ್ಬು

    ಅಕೌಂಟ್‍ನಲ್ಲಿ ಹಣವಿಲ್ಲದಿದ್ರೂ 1.28 ಕೋಟಿ ವರ್ಗಾವಣೆ – ಐಟಿ ನೋಟಿಸಿಗೆ ಅಕ್ಕಿ ವ್ಯಾಪಾರಿ ತಬ್ಬಿಬ್ಬು

    ಬೆಂಗಳೂರು: ನೋಟಿಸ್ ನೀಡುವ ಮೂಲಕ ಅಕ್ಕಿ ವ್ಯಾಪರಿಯೊಬ್ಬರನ್ನು ಆದಾಯ ತೆರಿಗೆ ಇಲಾಖೆ(ಐಟಿ)ಯ ಅಧಿಕಾರಿಗಳು ತಬ್ಬಿಬ್ಬಾಗುವಂತೆ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ಅಕ್ಕಿ ವ್ಯಾಪಾರದ ವಹಿವಾಟಿಗೆಂದು ಸುರೇಶ್ ಆಕ್ಸಿಸ್ ಬ್ಯಾಂಕಿನಲ್ಲಿ 2013ರಿಂದ ಚಾಲ್ತಿ ಖಾತೆ ಹೊಂದಿದ್ದರು. ಈ ಮಧ್ಯೆ ಲೋನ್‍ಗೆ ಅರ್ಜಿ ಹಾಕಿದ್ದರು. ಈ ಸಂಬಂಧ ಸಹಿ ಮಾಡಿದ್ದ ಎರಡು ಖಾಲಿ ಚೆಕ್ ಬ್ಯಾಂಕ್‍ಗೆ ನೀಡಿದ್ದರು. ಆದರೆ ಸಾಲ ಸಿಗದ ಹಿನ್ನೆಲೆಯಲ್ಲಿ ಚೆಕ್ ವಾಪಸ್ ಪಡೆಯದೆ ಸುರೇಶ್ ಸುಮ್ಮನಾಗಿದ್ದರು.

    ಬಳಿಕ ಅಕ್ಕಿ ವ್ಯಾಪಾರ ನಷ್ಟವಾಗಿ 2016ರಲ್ಲಿ ಉದ್ಯೋಗ ಅರಸಿ ಸುರೇಶ್ ಕೆನಡಾಗೆ ತೆರಳಿದ್ದರು. ಈ ಮಧ್ಯೆ ನೋಟ್ ಬ್ಯಾನ್ ಸಂದರ್ಭದಲ್ಲಿ ಸುರೇಶ್ ಖಾತೆಯಿಂದ ಅಪರಿಚಿತರು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಸುರೇಶ್ ಖಾತೆಗೆ ದಿಲೀಪ್ ಎಂಬವರ ಹೆಸರಿನಲ್ಲಿ 88 ಲಕ್ಷ ರೂಪಾಯಿ ವರ್ಗಾವಣೆ ಆಗಿದೆ. ಬಳಿಕ ನವೆಂಬರ್ 12ರಂದು 40 ಲಕ್ಷ ರೂ. ಮತ್ತೆ ಸುರೇಶ್ ಖಾತೆಗೆ ಬಿದ್ದಿದೆ.

    ಅದೇ ದಿನ ಇವರ ಖಾತೆಯಿಂದ ಶ್ರಾವಣಿ ಪ್ರಾಜೆಕ್ಟ್ ಎಂಬ ಖಾತೆಗೆ 1.28 ಕೋಟಿ ಹಣ ವರ್ಗಾವಣೆ ಆಗಿದೆ. ಇದನ್ನು ಗಮನಿಸಿದ ಐಟಿ ಇಲಾಖೆ, ಹಣ ವರ್ಗಾವಣೆ ದಾಖಲೆ ಕೇಳಿ ನೊಟೀಸ್ ಜಾರಿ ಮಾಡಿದೆ. ಐಟಿ ಅಧಿಕಾರಿಗಳ ನೋಟಿಸ್ ಕಂಡು ಸುರೇಶ್ ತಬ್ಬಿಬ್ಬಾಗಿದ್ದಾರೆ.

    ನವೆಂಬರ್ 14ರಂದು ದಾಖಲೆ ತರುವಂತೆ ನೋಟೀಸ್ ನೀಡಲಾಗಿದೆ. ಈ ಸಂಬಂಧ ರಾಮಮೂರ್ತಿನಗರ ಠಾಣೆಗೆ ಸುರೇಶ್ ದೂರು ನೀಡಿದ್ದಾರೆ.

  • ಸರ್ಕಾರಿ ಕಚೇರಿಗಳಿಗೆ ಸಚಿವ ಪ್ರಭು ಚೌವ್ಹಾಣ್ ದಿಢೀರ್ ಭೇಟಿ – ಅಧಿಕಾರಿಗಳಿಗೆ ಫುಲ್ ಕ್ಲಾಸ್

    ಸರ್ಕಾರಿ ಕಚೇರಿಗಳಿಗೆ ಸಚಿವ ಪ್ರಭು ಚೌವ್ಹಾಣ್ ದಿಢೀರ್ ಭೇಟಿ – ಅಧಿಕಾರಿಗಳಿಗೆ ಫುಲ್ ಕ್ಲಾಸ್

    ಬೀದರ್: ಸರ್ಕಾರಿ ಕಚೇರಿಗಳಿಗೆ ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಚಿವರು ದಿಢೀರ್ ಭೇಟಿ ನೀಡಿದರು. ಈ ವೇಳೆ ಗುಟಕಾ ತಿಂದು ಕಿಟಕಿ ಬಾಗಿಲಲ್ಲಿ ಊಗುಳಿ ಹೊಲಸು ಮಾಡಲಾಗಿತ್ತು. ಇದನ್ನು ಗಮನಿಸಿದ ಪ್ರಭು ಚೌವ್ಹಾಣ್ ಅವರು ಸ್ವಚ್ಚತೆ ಕಾಪಾಡದ್ದಕ್ಕೆ ತಾಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

    ಔರಾದ್ ಪಟ್ಟಣ ಪಂಚಾಯತ್‍ನಲ್ಲಿ ಸಾಮೂಹಿಕವಾಗಿ ಗೈರಾದ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 16 ಜನ ಅಧಿಕಾರಿಗಳ ಪೈಕಿ 9 ಜನರಿಗೆ ಕಾರಣ ಕೇಳಿ ನೋಟಿಸ್ ನೀಡಿವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು.

    ಇದೇ ವೇಳೆ ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ಗೈರಾದ ದಂತ ವೈದ್ಯ ಡಾ. ಮೆಹಬಿನ್ ಫೀರ್ದೊಸ್ ಎಂಬಾತನನ್ನು ಸಸ್ಪೆಂಡ್ ಮಾಡುವಂತೆ ಪ್ರಭು ಚೌವ್ಹಾಣ್ ಆದೇಶಿಸಿದ್ದಾರೆ. ಬಳಿಕ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ ಮುಖ್ಯಾಧಿಕಾರಿ, ಸಿಬ್ಬಂದಿಗೆ ಮೈ ಚಳಿ ಬಿಡಿಸಿದರು.

  • ಕಚೇರಿ ಬದಲು ಖಾಸಗಿ ರೆಸಾರ್ಟ್‌ನಲ್ಲಿ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ

    ಕಚೇರಿ ಬದಲು ಖಾಸಗಿ ರೆಸಾರ್ಟ್‌ನಲ್ಲಿ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ

    ಚಿಕ್ಕಬಳ್ಳಾಪುರ: ಡಿಸಿಎಂ ಅಶ್ವಥ್ ನಾರಾಯಣ್ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಜೊತೆ ಮಾಡಬೇಕಾದ ಸಭೆಯನ್ನು ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಅಶ್ವಥ್ ನಾರಾಯಣ್ ಜಿಲ್ಲೆಗೆ ಆಗಮಿಸಿದ್ದಾರೆ. ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸಭೆ ನಡೆಸಿದರು. ಸಭೆ ನಂತರ ಮಾತನಾಡಿದ ಡಿಸಿಎಂ, ನಂದಿಗಿರಿಧಾಮದ ಸಮಗ್ರ ಅಭಿವೃದ್ಧಿ ಹಾಗೂ ಬೋಗನಂಧಿಶ್ವರ ದೇವಾಲಯದಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ ಜಿಲ್ಲೆಯಲ್ಲಿನ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

    ಖಾಸಗಿ ರೆಸಾರ್ಟ್‌ನಲ್ಲಿ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಕೇವಲ ನಂದಿಗಿರಿಧಾಮ ಮಾತ್ರವಲ್ಲ ಜಿಲ್ಲೆಯ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಜಾಗ ಸೂಕ್ತವಾಗಿತ್ತು. ಹೀಗಾಗಿ ಇಲ್ಲಿ ಸಭೆ ನಡೆಸಲಾಗಿದೆ ಹೊರತು ಬೇರೆನೂ ಉದ್ದೇಶ ಇಲ್ಲ ಎಂದು ಸಭೆ ಬಗ್ಗೆ ಸಮರ್ಥನೆ ಮಾಡಿಕೊಂಡರು.

    ಸರ್ಕಾರಿ ಕಚೇರಿಗಳಲ್ಲಿ ಅಥವಾ ನಂದಿಬೆಟ್ಟದಲ್ಲಿ ಮಾಡಬೇಕಾದ ಸಭೆಯನ್ನು ಖಾಸಗಿ ರೆಸಾರ್ಟ್‍ನಲ್ಲಿಆಯೋಜಿಸಿದ್ದು ಯಾಕೆ? ಸರ್ಕಾರದ ದುಡ್ಡಲ್ಲಿ ಖಾಸಗಿ ರೆಸಾರ್ಟ್‍ನಲ್ಲಿ ಸಭೆ ನಡೆಸಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಸದ್ಯ ಸಭೆ ನಂತರ ಡಿಸಿಎಂ ವಿಶ್ವವಿಖ್ಯಾತ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟೂರು ಮುದ್ದೇನಹಳ್ಳಿಗೆ ಆಗಮಿಸಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿಶ್ವೇಶ್ವರಯ್ಯನವರು ವಾಸವಿದ್ದ ಮನೆ ಹಾಗೂ ಮ್ಯೂಸಿಯಂಗೆ ಭೇಟಿ ನೀಡಿದರು.