Tag: officers

  • ರಸ್ತೆಯಲ್ಲೇ ಹೈಟೆನ್ಷನ್ ಕಾಮಗಾರಿ- ವಾಹನ ಸವಾರರಿಗೆ ಫುಲ್ ಟೆನ್ಶನ್

    ರಸ್ತೆಯಲ್ಲೇ ಹೈಟೆನ್ಷನ್ ಕಾಮಗಾರಿ- ವಾಹನ ಸವಾರರಿಗೆ ಫುಲ್ ಟೆನ್ಶನ್

    ರಾಮನಗರ: ಬೊಂಬೆನಗರಿ ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಹೈಟೆನ್ಷನ್ ಕಾಮಗಾರಿ ಇದೀಗ ವಾಹನ ಸವಾರರಿಗೆ ಪೀಕಲಾಟವನ್ನು ತಂದೊಡ್ಡಿದೆ. ಹೈಟೆನ್ಷನ್ ಕಾಮಗಾರಿ ಹೆಸರಿನಲ್ಲಿ ಚನ್ನಪಟ್ಟಣ-ಸಾತನೂರು ರಸ್ತೆಯಲ್ಲಿ ತೆರೆದಿರುವ ಗುಂಡಿಗಳು ಸಾವಿಗೆ ಆಹ್ವಾನವನ್ನ ನೀಡುತ್ತಿವೆ.

    ಚನ್ನಪಟ್ಟಣದ ಸಾತನೂರು ವೃತ್ತದಿಂದ ನೀಲಸಂದ್ರದವರೆಗೂ ಸುಮಾರು 4 ಕಿ.ಮೀನಷ್ಟು ದೂರದವರೆಗೆ ಕೆಪಿಟಿಸಿಎಲ್ ವತಿಯಿಂದ ಹೈಟೆನ್ಷನ್ ವೈರ್ ಕಾಮಗಾರಿ ನಡೆಯುತ್ತಿದೆ. ಆದರೆ, ಈ ಕಾಮಗಾರಿಗೆ ಸಂಬಂಧಿಸಿದಂತೆ ಮುನ್ನೆಚರಿಕಾ ಕ್ರಮವನ್ನು ತೆಗೆದುಕೊಳ್ಳದೇ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದರಿಂದ ವಾಹನ ಸವಾರರು ಬೆಳಗ್ಗೆ ಹಾಗೂ ರಾತ್ರಿ ವೇಳೆ ಸಾಕಷ್ಟು ಆತಂಕದಲ್ಲೇ ವಾಹನ ಚಲಾಯಿಸುತ್ತಿದ್ದಾರೆ.

    ಮುಂಜಾಗ್ರತಾ ಕ್ರಮಗಳೇ ಇಲ್ಲ:
    ಯಾವುದೇ ಕಾಮಗಾರಿ ನಡೆಯುವುದಾದರೆ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯ. ಆದರೆ ಹೈಟೆನ್ಷನ್ ಕಾಮಗಾರಿಯಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನೇ ತೆಗೆದುಕೊಂಡಿಲ್ಲ. ಗುಂಡಿ ತೆಗೆದಿರುವ ಜಾಗದಲ್ಲಿ ಕೇವಲ ಪೊಲೀಸ್ ಬ್ಯಾರಿಕೇಡ್‍ಗಳನ್ನು ಹಾಕಲಾಗಿದೆ. ಡೈವರ್ಸನ್ ಸೂಚನಾ ಫಲಕ, ರಿಪ್ಲೆಕ್ಟ್ ಸ್ಟಿಕ್ಕರ್ ಬೋರ್ಡ್ ಸೇರಿದಂತೆ ಯಾವೊಂದು ಸೂಚನೆಗಳನ್ನು ಸಹ ಅಳವಡಿಸಿಲ್ಲ. ಹೀಗಾಗಿ, ರಾತ್ರಿ ವೇಳೆಯಲ್ಲಿ ಸಂಚರಿಸುವ ಸವಾರರು ಸ್ವಲ್ಪ ಎಚ್ಚರ ತಪ್ಪಿದರೆ ಈ ಗುಂಡಿಯೊಳಗೆ ಸಮಾಧಿ ಆಗಬೇಕಾಗುತ್ತದೆ.

    ಅಷ್ಟೇ ಅಲ್ಲದೆ ಪ್ರವಾಸಿ ತಾಣಗಳಿಗೆ, ಪ್ರಸಿದ್ಧ ದೇವಾಲಯಗಳಿಗೆ ಇದೇ ಮಾರ್ಗವಾಗಿ ಪ್ರವಾಸಿಗರು ತೆರಳುತ್ತಾರೆ. ಸರಿಯಾದ ಮಾಹಿತಿ ತಿಳಿಯದೆ, ರಸ್ತೆಯ ಪರಿಸ್ಥಿತಿ ನೋಡದೆ ಗಾಡಿ ಚಲಾಯಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

  • ಸಾರ್ವಜನಿಕರು ಅಧಿಕಾರಿಗಳ ಭೇಟಿಗೆ ಸಮಯ ನಿಗದಿ

    ಸಾರ್ವಜನಿಕರು ಅಧಿಕಾರಿಗಳ ಭೇಟಿಗೆ ಸಮಯ ನಿಗದಿ

    ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡಲು ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

    ಅಧಿಕಾರಿಗಳು ಯಾರೂ ಸರಿಯಾಗಿ ಭೇಟಿಯಾಗಲು ಸಿಗುವುದಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

    ರಜೆಯನ್ನ ಹೊರತುಪಡಿಸಿ ಪ್ರತಿದಿನ ಸಾರ್ವಜನಿಕರು ಅಧಿಕಾರಿಗಳನ್ನು ಮಧ್ಯಾಹ್ನ 3.30 ರಿಂದ 5.30 ವರೆಗೆ ಭೇಟಿಯಾಗಬಹುದು. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಡಿಸಿ ಕಚೇರಿ, ಬಿಬಿಎಂಪಿ ಸೇರಿದಂತೆ ಎಲ್ಲ ಜಿಲ್ಲೆಗಳ ಸರ್ಕಾರಿ ಕಚೇರಿಗಳಿಗೂ ಈ ಆದೇಶ ಅನ್ವಯವಾಗಲಿದೆ. ಹಿಂದೆಯೂ ಈ ಆದೇಶ ಇತ್ತು. ಆದರೆ ಅದು ಸರಿಯಾಗಿ ಪಾಲನೆಯಾಗದ ಕಾರಣ ಸರ್ಕಾರ ಹೊಸ ಆದೇಶ ಹೊರಡಿಸಿದೆ.

    ಹೊಸ ಅದೇಶದ ಪ್ರಕಾರ 3.30 ರಿಂದ 5.30 ವರೆಗೆ ಸಾರ್ವಜನಿಕರು ಅಧಿಕಾರಿಗಳನ್ನ ಭೇಟಿಯಾಗಬಹುದು. ಸಾರ್ವಜನಿಕರ ಭೇಟಿಗೆ ನಿಗದಿಪಡಿಸಿರುವ ಸಮಯದಲ್ಲಿ ಅಧಿಕಾರಿಗಳು ಯಾವುದೇ ಸಭೆಗಳನ್ನ ನಡೆಸಬಾರದು. ನಿಗದಿ ಮಾಡಿದ ಸಮಯದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸಮಯಾವಕಾಶ ನೀಡಬೇಕು ಎಂದು ತಾಕೀತು ಮಾಡಲಾಗಿದೆ.

    ಒಂದು ವೇಳೆ ಅಧಿಕಾರಿಗಳು ಈ ಆದೇಶವನ್ನು ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ. ಸರ್ಕಾರದ ಹೊಸ ಕಟ್ಟುನಿಟ್ಟಿನ ಆದೇಶದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

  • ಪರಿಹಾರ ನೀಡದ್ದಕ್ಕೆ ವಿದ್ಯುತ್ ಕಂಬವನ್ನೇರಿ ಆತ್ಮಹತ್ಯೆಗೆ ಯತ್ನಿಸಿದ ರೈತ

    ಪರಿಹಾರ ನೀಡದ್ದಕ್ಕೆ ವಿದ್ಯುತ್ ಕಂಬವನ್ನೇರಿ ಆತ್ಮಹತ್ಯೆಗೆ ಯತ್ನಿಸಿದ ರೈತ

    ಮಂಡ್ಯ: ಅಧಿಕಾರಿಗಳು ಪರಿಹಾರ ನೀಡದ ಕಾರಣ ರೈತರೊಬ್ಬರು ವಿದ್ಯುತ್ ಕಂಬವನ್ನು ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಚಿಕ್ಕಸೋಮನಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಚಿಕ್ಕಸೋಮನಹಳ್ಳಿ ಗ್ರಾಮದ ರೈತ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೇ ಗ್ರಾಮದ ಹೊರ ವಲಯದಲ್ಲಿ ಕುಮಾರ್ ಅವರ ಜಮೀನು ಇದ್ದು, ಆ ಜಮೀನಿನ ಮೇಲೆ 66/11 ಕೆವಿ ವಿದ್ಯುತ್ ಕಂಬ ಹೋಗಿದೆ. ಹೀಗಾಗಿ ಈ ಸ್ಥಳದಲ್ಲಿ ಬೆಳೆ ಬೆಳೆಯಲು ಕಷ್ಟವಾಗುತ್ತಿದೆ, ನನಗೆ ಬರಬೇಕಾದ ಪರಿಹಾರ ಹಣವನ್ನು ಕೊಡಿಸಿ ಎಂದು ಅಧಿಕಾರಿಗಳ ಬಳಿ ಕುಮಾರ್ ಕೇಳಿದ್ದರು. ಆದರೆ ಅಧಿಕಾರಿಗಳು ಮಾತ್ರ ರೈತನ ಮಾತಿಗೆ ಬೆಲೆ ನೀಡದೆ ಇದುವರೆಗೂ ಪರಿಹಾರ ನೀಡಲು ಕುಮಾರ್ ಅವರನ್ನು ಅಲೆಸಿದ್ದಾರೆ.

    ಅಷ್ಟೇ ಅಲ್ಲದೆ ಪೊಲೀಸ್ ಹೆಸರು ಹೇಳಿಕೊಂಡು ನಿನ್ನ ಮೇಲೆ ಎಫ್‍ಐಆರ್ ಆಗಿದೆ ಎಂದು ಕುಮಾರ್ ಅವರನ್ನು ಹೆದರಿಸಿದ್ದಾರೆ. ಪರಿಹಾರ ಕೊಡಲಿಸಲು ಆಗಲ್ಲ ಎಂದು ರೈತರಿಗೆ ಧಮ್ಕಿ ಹಾಕಿದ್ದಾರೆ. ಇದರಿಂದ ಮನನೊಂದ ರೈತ ತನ್ನ ಜಮೀನಿನಲ್ಲಿದ್ದ ವಿದ್ಯುತ್ ಕಂಬವನ್ನು ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಗ್ರಾಮಸ್ಥರು ಸ್ಥಳಕ್ಕೆ ಬಂದು ಕುಮಾರ್ ಅವರ ಮನವೊಲಿಸಿ ವಿದ್ಯುತ್ ಕಂಬದಿಂದ ಕೆಳಗಿಳಿಸಿದ್ದಾರೆ.

  • ತೋಟಕ್ಕೆ ವಿದ್ಯುತ್ ತಂತಿ ಬೇಲಿ – ಕೋಡಿನ ಆಸೆಗೆ ಕೋಣವನ್ನು ಹೂತಿಟ್ಟು ಜೈಲು ಪಾಲಾದ ರೈತರು

    ತೋಟಕ್ಕೆ ವಿದ್ಯುತ್ ತಂತಿ ಬೇಲಿ – ಕೋಡಿನ ಆಸೆಗೆ ಕೋಣವನ್ನು ಹೂತಿಟ್ಟು ಜೈಲು ಪಾಲಾದ ರೈತರು

    ಕಾರವಾರ: ತೋಟಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿ ಕೋಣದ ಕೋಡಿಗೆ ಆಸೆಪಟ್ಟ ರೈತರು ಜೈಲುಪಾಲಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸಮೀಪದ ಹೊಸ್ತೋಟದಲ್ಲಿ ತೋಟಕ್ಕೆ ಕಾಡು ಪ್ರಾಣಿಗಳು ಬರುತ್ತವೆ ಎಂದು ವಿದ್ಯುತ್ ಬೇಲಿಯನ್ನು ಅಕ್ರಮವಾಗಿ ಹಾಕಲಾಗಿತ್ತು. ಆದರೆ ನೀರು ಕುಡಿಯಲು ಬಂದ ಕಾಡುಕೋಣ ಅಕ್ರಮವಾಗಿ ಹಾಕಿರುವ ವಿದ್ಯುತ್ ಬೇಲಿಯ ಮೇಲೆ ಕಾಲಿಟ್ಟಿದ್ದು ವಿದ್ಯುತ್ ಶಾಕ್ ನಿಂದ್ ಸಾವು ಕಂಡಿತ್ತು. ಇದನ್ನು ನೋಡಿದ ಆರೋಪಿಗಳು ಯಾರಿಗೂ ತಿಳಿಯದಂತೆ ಅದನ್ನು ಹೂತು ಹಾಕಿದ್ದರು. ಕಾಡುಕೋಣದ ಕೋಡು ಬೆಲೆ ಬಾಳುತ್ತವೆ ಎನ್ನುವ ಕಾರಣಕ್ಕೆ ತನ್ನ ತೋಟದಲ್ಲಿ ಮಾಂಸ ಕೊಳೆಯಲು ಹುದುಗಿಸಿಟ್ಟಿದ್ದರು.

    ಇದರ ಜಾಡು ಹಿಡಿದ ಜಾನ್ಮನೆ ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯ ಅಧಿಕಾರಿ ಪವಿತ್ರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕಾಡುಕೋಣವನ್ನು ಹೂತು ಹಾಕಿದ ಆರೋಪಿಗಳಾದ ಕೃಷ್ಣಮೂರ್ತಿ ಸುಬ್ರಾಯ ಜೋಶಿ ಹೊಸ್ತೋಟ, ಪುಟ್ಟಾ ಅಜ್ಜು ಗೌಡ, ತಳಗಾರ ಹರಿಗಾರ, ಮಹೇಶ ಪುಟ್ಟಾ ಗೌಡ, ತಳಗಾರ ಹರಿಗಾರ, ಗೋವಿಂದ ಗಣಪ ಗೌಡ, ಅತ್ತೀಸವಲು ಬಾಳೇಕೊಪ್ಪ, ಈಶ್ವರ ದುಗ್ಗಾ ಗೌಡ, ಅತ್ತೀಸವಲು ಬಾಳೇಕೊಪ್ಪ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    ಕಾಡುಪ್ರಾಣಿಗಳ ಉಪಟಳದಿಂದ ಬೆಳೆ ರಕ್ಷಿಸಿಕೊಳ್ಳಲು ಸಿದ್ದಾಪುರ ಭಾಗದ ಹಲವು ರೈತರು ಅಕ್ರಮವಾಗಿ ವಿದ್ಯುತ್ ಲೈನ್‍ನ ವಿದ್ಯುತ್ ಬಳಸಿ ಬೇಲಿ ನಿರ್ಮಿಸುತ್ತಾರೆ. ಈ ಬೇಲಿಯು ಹೈ ಪವರ್ ವಿದ್ಯುತ್ ಪ್ರವಹಿಸುತ್ತದೆ ಇದರಿಂದಾಗಿ ನೀರಿನ ದಾಹ ಹಾಗೂ ಆಹಾರದ ಆಸೆಗೆ ಬರುವ ಪ್ರಾಣಿಗಳು ಶಾಕ್ ಹೊಡೆದು ಸಾವನ್ನಪ್ಪುತ್ತವೆ. ಕಳೆದ ನಾಲ್ಕು ತಿಂಗಳಲ್ಲಿ ಈ ಅಕ್ರಮ ವಿದ್ಯುತ್ ಬೇಲಿಗೆ ಆರು ಕಾಡುಕೋಣ, ಎರಡು ಕಡವೆ, ಒಂದು ಚಿರತೆ ಸಾವು ಕಂಡರೆ ಸಿದ್ದಾಪುರ ಕಾನಸೂರಿನಲ್ಲಿ ಓರ್ವ ಯುವಕ ಶಾಕ್ ಹೊಡೆದು ಸಾವನ್ನಪ್ಪಿದ್ದ.

    ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಾಗಲಿ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಹೆಚ್ಚು ಮುತುವರ್ಜಿ ವಹಿಸಿರಲಿಲ್ಲ. ಯಾವಾಗ ಕಾನಸೂರಿನಲ್ಲಿ ವಿದ್ಯುತ್ ತಂತಿಗೆ ಯುವಕ ಬಲಿಯಾಗುತ್ತಾನೋ ಆಗ ಎಚ್ಚೆತ್ತುಕೊಂಡ ಸಂಬಂಧ ಪಟ್ಟ ಇಲಾಖೆ ಕಠಿಣ ಕ್ರಮ ಕೈಗೊಂಡಿತ್ತು. ಈ ಘಟನೆ ನಂತರ 12 ಜನರನ್ನು ಬಂಧಿಸಿ ಸ್ಥಳೀಯ ರೈತರಿಗೆ ವಿದ್ಯುತನ್ನು ಬೇಲಿಗೆ ಹರಿಸದಂತೆ ಎಚ್ಚರಿಕೆ ನೀಡಲಾಗಿತ್ತು.

    ಕೆಲವರು ಪ್ರಾಣಿಗಳ ಮಾಂಸ, ಚರ್ಮಕ್ಕಾಗಿ ಸಹ ವಿದ್ಯುತ್ ತಂತಿಯನ್ನು ಕಾಡಿನ ಮಧ್ಯದಲ್ಲಿಟ್ಟು ಅದಕ್ಕೆ ವಿದ್ಯುತ್ ಹರಿಸಿ ಬೇಟೆ ಆಡುತ್ತಿದ್ದರು. ಆದರೆ ಅರಣ್ಯ ಇಲಾಖೆ ಗುಪ್ತ ಮಾಹಿತಿಗಳನ್ನು ಪಡೆದು ಇಂತವರನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಿದೆ. ಇಂದು ಕೂಡ ಇದೇ ರೀತಿಯ ಘಟನೆಯನ್ನು ಬೇದಿಸುವಲ್ಲಿ ಅರಣ್ಯ ಇಲಾಖೆ ಸಫಲವಾಗಿದ್ದು ತೋಟದ ಮಾಲೀಕ ಕಾಡುಕೋಣದ ಕೋಡಿನ ಆಸೆಗೆ ಈಗ ಜೈಲುಪಾಲಾಗುವಂತೆ ಆಗಿದ್ದು, ಈ ಮೂಲಕ ಅಕ್ರಮ ಎಸಗುವವರಿಗೆ ಕಠಿಣ ಸಂದೇಶ ರವಾನಿಸಿದಂತಾಗಿದೆ.

  • ಅಧಿಕಾರಿಗಳಿಗೆ ಶಾಸಕರಿಂದ ಕೃಷಿ ಪಾಠ

    ಅಧಿಕಾರಿಗಳಿಗೆ ಶಾಸಕರಿಂದ ಕೃಷಿ ಪಾಠ

    ಯಾದಗಿರಿ: ಬೀಜ ಉತ್ಪಾದನೆಯಲ್ಲಿ ನಿರ್ಲಕ್ಷ್ಯ ತೋರಿದ ಕೃಷಿ ಅಧಿಕಾರಿಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ, ಯಾದಗಿರಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ವ್ಯವಸಾಯದ ಬಗ್ಗೆ ಭರ್ಜರಿ ಪಾಠ ಮಾಡಿದ್ದಾರೆ.

    ಯಾದಗಿರಿ ನಗರದ ಹೊರ ವಲಯದಲ್ಲಿ ಸುಮಾರು 35 ಎಕರೆ ಸರ್ಕಾರಿ ಭೂಮಿದ್ದು, ಇದರಲ್ಲಿ ಬೀಜ ಉತ್ಪಾದನಾ ಕೇಂದ್ರವಿದೆ. ಬೀಜ ಉತ್ಪಾದನೆಗಾಗಿ ಜಿಲ್ಲಾಡಳಿತದಿಂದ ವರ್ಷ ಲಕ್ಷ-ಲಕ್ಷ ಅನುದಾನ ಸಹ ನೀಡಲಾಗುತ್ತದೆ. ಹೀಗಿದ್ದರೂ ಬೀಜ ಉತ್ಪಾದನೆ ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ.

    ಅಲ್ಲದೆ ಸಾಕಷ್ಟು ಜಮೀನು ಇದ್ದರು ಕೇವಲ ಕಾಟಾಚಾರಕ್ಕೆ ಬೆಳೆ ಬೆಳೆಯುತ್ತಿದ್ದಾರೆ. ಅಧಿಕಾರಗಳ ಬೇಜಾವಾಬ್ದಾರಿಗೆ ಬೇಸತ್ತ ಶಾಸಕ ಮುದ್ನಾಳ, ಜಿಲ್ಲಾ ಕೃಷಿ ಮುಖ್ಯಾಧಿಕಾರಿ ದೇವಿಕಾ ಮತ್ತು ಇಲಾಖೆ ಪ್ರಮುಖ ಅಧಿಕಾರಿಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ, ಬೆಳೆಯನ್ನು ಹೇಗೆ ಬೆಳೆಯಬೇಕು, ಹೊಲವನ್ನು ಹೇಗೆ ಉಳುಮೆ ಮಾಡಬೇಕು ಎಂದು ಹೇಳಿಕೊಟ್ಟು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಇದು ಸಿಟಿಯಲ್ಲ ರಾಮನಗರ, ಎಸ್ಪಿಗೆ ಶಿಸ್ತು ಕಲಿಯಲು ಹೇಳು – ಡಿಕೆ ಸುರೇಶ್ ಗರಂ

    ಇದು ಸಿಟಿಯಲ್ಲ ರಾಮನಗರ, ಎಸ್ಪಿಗೆ ಶಿಸ್ತು ಕಲಿಯಲು ಹೇಳು – ಡಿಕೆ ಸುರೇಶ್ ಗರಂ

    ರಾಮನಗರ: ಇದು ಸಿಟಿಯಲ್ಲ ರಾಮನಗರ ಜಿಲ್ಲೆ ನೆನಪಿರಲಿ ಎಸ್ಪಿಗೆ ಶಿಸ್ತು ಕಲಿಯಲು ಹೇಳು ಎಂದು ಸಂಸದ ಡಿಕೆ ಸುರೇಶ್ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.

    ಎಲ್ಲಿ ನಿಮ್ ಎಸ್ಪಿ, ಇದು ಬೇರೆ ತರಹ ಅಲ್ಲ ನಿಮ್ ಎಸ್ಪಿಗೆ ಹೇಳಿ. ಯಶವಂತಪುರಕ್ಕೆ ಏನ್ ಡ್ಯೂಟಿಗೆ ಹೋಗಿದ್ದಾರಾ ಬಂದೋಬಸ್ತ್‍ಗೆ ಹೋಗಿದ್ದಾರಾ? ಎಲೆಕ್ಷನ್ ಅದರ ಪಾಡಿಗೆ ನಡೆಯುತ್ತೆ ಮೀಟಿಂಗ್ ಇದೆ ಬರಬೇಕು. ಇದು ರಾಮನಗರ ಜಿಲ್ಲೆ ಅಂತಾ ಹೇಳಿ. ಬೇರೆ ಎಲ್ಲ ಮಾತನಾಡೋಕೆ ಆಗುತ್ತೆ ಮೀಟಿಂಗ್ ಅಟೆಂಡ್ ಮಾಡೋಕೆ ಆಗಲ್ವಾ ಎಂದು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಮೇಲೆ ಡಿಕೆ ಸುರೇಶ್ ಕಿಡಿಕಾರಿದ್ರು.

    ನಿಮ್ ಎಸ್ಪಿಗೆ ಹೇಳು ಶಿಸ್ತು ಕಲಿತ್ಕೋಳಿ ಅಂತಾ ಗೊತ್ತಾಯ್ತಾ. ಇದು ಬೆಂಗಳೂರು ಸಿಟಿ ಅಲ್ಲ ರಾಮನಗರ ಜಿಲ್ಲೆ ನೆನಪಿರಲಿ. ಪೊಲೀಸ್ ಇಲಾಖೆನಲ್ಲಿ ಕೆಲಸ ಮಾಡ್ತಿರೋದು ಡಿಸಿಪ್ಲೈನ್ ಕಲಿತುಕೊಳ್ಳೋಕೆ ಹೇಳು. ಉಳಿದಿದ್ದನ್ನು ಅಮೇಲೆ ಮಾತನಾಡುತ್ತೇನೆ. ನಾನ್ ಹೇಳ್ದೆ ಎಂದು ನಿಮ್ ಎಸ್ಪಿಗೆ ಹೇಳಿ ಎಂದು ರಾಮನಗರ ಟೌನ್ ಸಬ್ ಇನ್ಸ್ ಪೆಕ್ಟರ್ ಹೇಮಂತ್ ಗೆ ಹೇಳಿದ ಸಂಸದ ಡಿಕೆ ಸುರೇಶ್ ಸೂಚಿಸಿದ್ದಾರೆ.

    ಜಿಲ್ಲೆಗೆ ಬಂದಿರುವ ಅಧಿಕಾರಿಗಳೆಲ್ಲ ಇಲ್ಲಿ ಕೆಲಸ ಮಾಡ್ಕೊಂಡು ಇರಬೇಕು, ನಾನು ಅಷ್ಟು ದುಡ್ಡು ಇಷ್ಟು ದುಡ್ಡು ಕೊಟ್ಟು ಬಂದಿದ್ದೀನಿ ಅನ್ನೋದಲ್ಲ. ಕೆಲಸ ಮಾಡೋಕೆ ಬಂದಿದ್ದೀರಿ ಕೆಲಸ ಮಾಡ್ಕೊಂಡು ಹೋಗಬೇಕು ಅಷ್ಟೇ. ಹೊಸದಾಗಿ ಜಿಲ್ಲೆಗೆ ಬಂದಿರುವವರು ತಮ್ಮ ಪರಿಚಯ ಮಾಡಿಕೊಳ್ಳಿ ಎಂದು ಡಿಸಿಯಿಂದ ಹಿಡಿದು ಸಿಇಓ ಸೇರಿದಂತೆ ಹೊಸದಾಗಿ ಬಂದಿರುವ ಇಲಾಖೆಯ ಅಧಿಕಾರಿಗಳಿಗೆ ಸರೇಶ್ ಅವರು ಹೇಳಿದ್ದಾರೆ.

    ಒಬ್ಬೊಬ್ಬರಾಗಿ ಎಲ್ಲರನ್ನೂ ಪರಿಚಯ ಮಾಡಿಕೊಂಡು ಸಾರ್ವಜನಿಕ ಕೆಲಸ ಮಾತ್ರ ಮಾಡಬೇಕು. ಬೇರೆ ರೀತಿಯಲ್ಲಿ ಪಕ್ಷದವರು ಹೇಳಿದರು, ಮುಖಂಡರು, ಕಾರ್ಯಕರ್ತರು ಹೇಳೋದಲ್ಲ ಇಲ್ಲಿ ನಡೆಯಲ್ಲ. ಇಲ್ಲಿ ಅಗಲ್ಲ ಅನ್ನೋರು ಜಾಗ ಖಾಲಿ ಮಾಡ್ಕೊಂಡು ಹೋಗಿ ಎಂದು ಡಿಕೆ ಸುರೇಶ್ ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.

  • ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ- ಅಧಿಕಾರಿಗಳಿಂದ ಚುರುಕುಗೊಂಡ ಸ್ಥಳ ಪರಿಶೀಲನೆ

    ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ- ಅಧಿಕಾರಿಗಳಿಂದ ಚುರುಕುಗೊಂಡ ಸ್ಥಳ ಪರಿಶೀಲನೆ

    ರಾಯಚೂರು: ದೇಶದಲ್ಲಿಯೇ ಹಿಂದುಳಿದಿರುವ ರಾಯಚೂರು ನಗರಕ್ಕೆ ನಾಗರಿಕ ವಿಮಾನ ನಿಲ್ದಾಣ ಆರಂಭದ ಕನಸು ಚಿಗುರೊಡೆದಿದೆ. ಇಂದು ವಿಮಾನ ನಿಲ್ದಾಣಕ್ಕಾಗಿ ತಜ್ಞರ ತಂಡ ರಾಯಚೂರಿಗೆ ಆಗಮಿಸಿ ಸ್ಥಳ ಪರಿಶೀಲಿಸಿದೆ. ಆದರೆ ಈಗ ಗುರುತಿಸಿರುವ ಸ್ಥಳದಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಚಿಮಣಿ ಅಡ್ಡಿಯಾಗಿದೆ. ಇದೇ ಕಾರಣಕ್ಕೆ ಯೋಜನೆ ಕೈತಪ್ಪುತ್ತಾ ಎನ್ನುವ ಅನುಮಾನ ಶುರುವಾಗಿದೆ.

    ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದಲ್ಲಿಯೇ ಅತ್ಯಂತ ಹಿಂದುಳಿದಿರುವ ರಾಯಚೂರು ಜಿಲ್ಲೆಯಲ್ಲಿ ಕೃಷಿಯೊಂದಿಗೆ ಕೈಗಾರಿಕೆಗೆ ವಿಫುಲ ಅವಕಾಶಗಳಿವೆ. ಅಲ್ಲದೆ ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಶಾಖೋತ್ಪನ್ನ ಸ್ಥಾವರಗಳು ಇಲ್ಲಿವೆ. ಆದರೆ ಇಲ್ಲಿ ಬೃಹತ್ ಕೈಗಾರಿಕೆಗಳಿಗೆ ವಿಮಾನ ನಿಲ್ದಾಣ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹಿಂದಿನಿಂದ ನೆನೆಗುದಿಗೆ ಬಿದ್ದ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ವಿಮಾನ ನಿಲ್ದಾಣ ಪ್ರಾಧಿಕಾರವು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.

    ಇಂದು ವಿಮಾನ ತಜ್ಞರಾಗಿರುವ ಕ್ಯಾಪ್ಟನ್ ಶಾಮಂತ ನೇತ್ರತ್ವದ ತಂಡ ಭೇಟಿ ನೀಡಿತು. ಈ ತಂಡವು ಈಗಾಗಲೇ ವಿಮಾನ ನಿಲ್ದಾಣಕ್ಕಾಗಿ ಗುರುತಿಸಿದ ವೈಟಿಪಿಎಸ್ ಪಕ್ಕದ ಭೂಮಿ ಪರಿಶೀಲಿಸಿದ್ದು, ಇಲ್ಲಿಯ ಚಿಮಣಿ ಹಾಗು ವಿದ್ಯುತ್ ಲೈನ್‍ಗಳು ಹಾಗು ಜುರಾಲಾದಿಂದ ಹೈ ಟೆನ್ಶನ್ ವಿದ್ಯುತ್ ಹಾಯ್ದು ಹೋಗುವುದರಿಂದ ಈ ಸ್ಥಳ ಎಷ್ಟು ಸೂಕ್ತ ಎಂಬ ಬಗ್ಗೆ ಪರಿಶೀಲಿಸಿತು.

    ಈ ಹಿಂದೆ ಯರಮರಸ್ ಏಗನೂರು ಸೀಮಾಂತರದಲ್ಲಿ ವೈಟಿಪಿಎಸ್ ನಿರ್ಮಾಣವಾಗದ ಮುನ್ನ ವಿಮಾನ ನಿಲ್ದಾಣಕ್ಕಾಗಿ 420 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆದರೆ ವೈಟಿಪಿಎಸ್ ನಿರ್ಮಾಣದ ನಂತರ ಈ ಸ್ಥಳ ಸೂಕ್ತವಾಗಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ವೇಳೆ ರಾಯಚೂರು ತಾಲೂಕಿನ ಸಿಂಗನೋಡಿ ಬಳಿಯಲ್ಲಿ ಸುಮಾರು 600 ಎಕರೆ ಭೂಮಿ ಗುರುತಿಸಲಾಗುದ್ದು, ಇವುಗಳಲ್ಲಿ ಯಾವುದು ಸೂಕ್ತ ಹಾಗೂ ಆರ್ಥಿಕ ಹೊರೆ ಕಡಿಮೆಯಾಗಬಹುದು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ.

    ಅಲ್ಲದೆ, ವೈಟಿಪಿಎಸ್ ಪಕ್ಕ ಗುರುತಿಸಿರುವ ಸ್ಥಳವು ಒಂದಿಷ್ಟು ಐತಿಹಾಸಿಕ ಮಹತ್ವ ಪಡೆದುಕೊಂಡಿದ್ದು, 1954ರಲ್ಲಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ರಾಯಚೂರು ಮಾರ್ಗವಾಗಿ ಹೋಗುವಾಗ ವಿಮಾನದಲ್ಲಿ ತಾಂತ್ರಿಕ ತೊಂದರೆಯಾಗಿ ಇದೇ ಸ್ಥಳದಲ್ಲಿ ವಿಮಾನ ಇಳಿಸಲಾಗಿತ್ತು. ಇದೇ ಕಾರಣಕ್ಕೆ ಇಲ್ಲಿಯೇ ವಿಮಾನ ನಿಲ್ದಾಣವಾಗಲಿ ಎಂಬ ವಾದವು ಇದೆ. ಇನ್ನೂ ಕೆಲವರು ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಆರಂಭವಾಗಿದೆ. ಕಲಬುರಗಿಗಿಂತ ಮೊದಲೇ ಪ್ರಸ್ತಾಪಿತವಾದ ರಾಯಚೂರು ವಿಮಾನ ನಿಲ್ದಾಣ ಎಲ್ಲಿಯಾದರೂ ಆಗಲಿ ಬೇಗ ಆರಂಭವಾಗಲಿ ಎಂದು ಜನರು ಆಶಿಸುತ್ತಿದ್ದಾರೆ.

  • ಕೆರೆಯ ಕಟ್ಟೆ ಒಡೆದು ನೂರಾರು ಮನೆಗಳಿಗೆ ನುಗ್ಗಿದ ನೀರು

    ಕೆರೆಯ ಕಟ್ಟೆ ಒಡೆದು ನೂರಾರು ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಕೆರೆಯನ್ನು ಸ್ವಚ್ಛ ಮಾಡುವಾಗ ಕೆರೆ ಕಟ್ಟೆ ಒಡೆದು ಮನೆಗಳಿಗೆ ನೀರು ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್‍ನಲ್ಲಿ ನಡೆದಿದೆ.

    ಹುಳಿಮಾವು ಕೆರೆಯ ಕಟ್ಟೆ ಒಡೆದು ಈ ಅವಾಂತರ ಸೃಷ್ಟಿಯಾಗಿದೆ. ಇಂದು ಬೆಳಗ್ಗೆಯಿಂದ ಬಿಬಿಎಂಪಿ ವತಿಯಿಂದ ಕೆರೆಯ ಕಾಮಗಾರಿ ಕೆಲಸ ನಡೆಯುತ್ತಿತ್ತು. ಈ ವೇಳೆ ಕೆರೆಯ ನೀರನ್ನು ಬೇರೆಡೆಗೆ ಹರಿಸುವ ಕೆಲಸ ನಡೆಯುತ್ತಿತ್ತು. ಆಗ ಕೆರೆಯ ಕಟ್ಟೆ ಒಡೆದಿದ್ದು, 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

    ಹುಳಿಮಾವು ಕೆರೆ ಒಟ್ಟು 140 ಎಕರೆ ಇರುವುದರಿಂದ ಕೆರೆಯ ಅಕ್ಕಪಕ್ಕದ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಶಾಂತಿನಿಕೇತನ, ಕೃಷ್ಣನಗರ, ಹುಳಿಮಾವು ಸೇರಿದಂತೆ ಹಲವು ಲೇಔಟ್‍ಗಳಿಗೆ ನೀರು ನುಗ್ಗಿದೆ. ನೀರನ್ನ ತಡೆಯಲು ಪಾಲಿಕೆಯ ಅಧಿಕಾರಿಗಳು ಹರಸಹಾಸ ಪಡುತ್ತಿದ್ದಾರೆ. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದರಿಂದ ಸ್ಥಳೀಯರು ಮತ್ತಷ್ಟು ಮನೆಗಳು ಮುಳುಗಡೆಯಾಗುವ ಆತಂಕದಲ್ಲಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪಾಲಿಕೆಯ ಕಾರ್ಪೋರೇಟರ್‌ಗಳು ಮತ್ತು ಕಮಿಷನರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ ಸ್ಥಳೀಯ ಕಾರ್ಪೋರೇಟರ್ ಅನುಮತಿಯಿಲ್ಲದೇ ಕೆರೆಯ ನೀರನ್ನ ಖಾಲಿ ಮಾಡುವ ಕೆಲಸ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

  • ಅಧಿಕಾರಿಗಳು, ರೈತರ ಮಾತಿನ ಚಕಮಕಿ- ಹಾಲು ಹಾಕಿಸಿಕೊಳ್ಳೋದನ್ನೇ ನಿಲ್ಲಿಸಿದ ಡೈರಿ

    ಅಧಿಕಾರಿಗಳು, ರೈತರ ಮಾತಿನ ಚಕಮಕಿ- ಹಾಲು ಹಾಕಿಸಿಕೊಳ್ಳೋದನ್ನೇ ನಿಲ್ಲಿಸಿದ ಡೈರಿ

    – ಸಾವಿರ ಲೀಟರಿಗೂ ಅಧಿಕ ಹಾಲು ಕೆರೆ ಪಾಲು

    ರಾಮನಗರ: ಬಮೂಲ್(ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ) ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಣಾಮ ಅಧಿಕಾರಿಗಳು ರೈತರು ತಂದ ಹಾಲನ್ನು ಸ್ವೀಕರಿಸದೆ ದ್ವೇಷ ಸಾಧಿಸುತ್ತಿದ್ದಾರೆ.

    ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಅಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಗರ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಬಮೂಲ್ ಅಧಿಕಾರಿಗಳು ಡೈರಿಗೆ ಬಂದಿದ್ದಾಗ, ರೈತರು ಡೈರಿ ಕಾರ್ಯದರ್ಶಿ ಬಳಿ ಲೆಕ್ಕ ಪತ್ರದ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಆತ ಸರಿಯಾಗಿ ಮಾಹಿತಿ ನೀಡಿಲ್ಲ. ಅಲ್ಲದೆ ಅಧಿಕಾರಿಗಳು ಸಹ ಸರಿಯಾಗಿ ಸ್ಪಂದಿಸಿಲ್ಲ. ಆದರೆ ಕಳೆದ ಎರಡು ದಿನಗಳಿಂದ ರೈತು ಡೈರಿಗೆ ತಂದ ಹಾಲನ್ನು ಪಡೆದುಕೊಂಡು ನಂತರ ಸಾವಿರ ಲೀಟರ್‍ಗೂ ಹೆಚ್ಚು ಹಾಲನ್ನು ಕೆರೆಗೆ ಚೆಲ್ಲಿದ್ದಾರೆ. ಅಲ್ಲದೆ ಗ್ರಾಮದ ರೈತರ ಹಾಲು ಬೇಡವೇ ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದರಿಂದ ಆಕ್ರೋಶಗೊಂಡ ರೈತರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಒಟ್ಟಾಗಿ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಹಾಲು ಪಡೆದು ಕೆರೆಗೆ ಚೆಲ್ಲಿರುವ ಬಗ್ಗೆ ಹಾಗೂ ಎರಡು ದಿನಗಳಿಂದ ಹಾಲನ್ನು ಹಾಕಿಸಿಕೊಳ್ಳದೇ ನಷ್ಟವನ್ನುಂಟು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದರು.

  • ಹೊಟ್ಟೆಗೆ ಏನು ತಿಂತೀರಿ, ಹಣ ಎಲ್ಲಿ ಹೋಯ್ತು – ಅಧಿಕಾರಿಗೆ ಸಚಿವ ಸಿ.ಟಿ.ರವಿ ಕ್ಲಾಸ್

    ಹೊಟ್ಟೆಗೆ ಏನು ತಿಂತೀರಿ, ಹಣ ಎಲ್ಲಿ ಹೋಯ್ತು – ಅಧಿಕಾರಿಗೆ ಸಚಿವ ಸಿ.ಟಿ.ರವಿ ಕ್ಲಾಸ್

    ಬೀದರ್: ಹೊಟ್ಟೆಗೆ ಏನು ತಿಂತೀರಿ ಎಂದು ಅಧಿಕಾರಿಯೊಬ್ಬರಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬೀದರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಪ್ರಸಂಗ ನಡೆದಿದ್ದು, ಸಿ.ಟಿ.ರವಿ ಅಧಿಕಾರಿಗೆ ಫುಲ್ ತರಾಟೆ ತಗೆದುಕೊಂಡಿದ್ದಾರೆ. ನಿರ್ಮಿತಿ ಕೇಂದ್ರದ ಕಾಮಗಾರಿ ಸ್ಥಗಿತವಾಗಿರುವುದು ನಿನಗೆ ಗೋತ್ತಿದೆಯೋ ಇಲ್ವಾ? ನೀವು ಹಾಗೂ ನಿರ್ಮಿತಿ ಕೇಂದ್ರದವರು ಸೇರಿ ಇಲಾಖೆ ಮುಳುಗಿಸಬೇಕು ಎಂದು ಮಾಡಿದ್ದೀರಾ ಎಂದು ಪ್ರಶ್ನಿಸಿ ಬೆವರಿಳಿಸಿದ್ದಾರೆ.

    ಹಣ ವಾಪಸ್ ತರಸಿ ಹಾಗೂ ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಮೇಲಧಿಕಾರಿಗೆ ಸಚಿವರು ಸೂಚನೆ ನೀಡಿದರು. ನಿರ್ಮಿತಿ ಕೇಂದ್ರದ ಕಾಮಗಾರಿ ಸ್ಥಗಿತವಾಗಿದ್ದರೂ ಒಂದು ಕೋಟಿ ರೂ. ಬಿಡುಗಡೆ ಮಾಡುವಂತೆ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಪತ್ರ ಬರೆಯುತ್ತೀರಿ. ದುಡ್ಡು ತೆಗೆದುಕೊಂಡು ಏನು ಮಾಡುತ್ತೀರಿ? ನಿಮಗೇನು ತಿಳಿಯುವುದಿಲ್ಲವೇ? ಹಿಂದೆ ಬಿಡುಗಡೆ ಮಾಡಿದ ಆ ಒಂದು ಕೋಟಿ ರೂ. ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.

    ಪತ್ರ ಬರೆದಿದ್ದರಿಂದ ಕೆಂಡಾಮಂಡಲರಾದ ಸಚಿವರು ಅಧಿಕಾರಿಗೆ ಫುಲ್ ತರಾಟೆ ತೆಗೆದುಕೊಂಡು ಒಂದು ಕೋಟಿ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು. ಈ ಹಣ ನಿನ್ನ ಸಂಬಳದಲ್ಲಿ ಕಡತಗೊಳಿಸಬೇಕೇ ಎಂದು ಅಧಿಕಾರಿ ವಿರುದ್ಧ ಗರಂ ಆದರು. ಒಂದು ಕೋಟಿ ರೂ. ಹಣ ಎಲ್ಲಿ ಹೋಗಿದೆ? ಪರಿಶೀಲನೆ ನಡೆಸಿ ಈ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಸಚಿವರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದರೂ ಅಧಿಕಾರಿಗಳು ಮಾತ್ರ ತುಟಿ ಪಿಟಿಕ್ ಎನ್ನದೆ ಮೌನಕ್ಕೆ ಶರಣಾಗಿದ್ದರು.