Tag: officers

  • ಸಭೆಗೆ ಅಧಿಕಾರಿಗಳು ಗೈರು – ಸಿಬ್ಬಂದಿಯನ್ನೂ ಸಭೆಯಿಂದ ಹೊರಹಾಕಿದ ಶಾಸಕ

    ಸಭೆಗೆ ಅಧಿಕಾರಿಗಳು ಗೈರು – ಸಿಬ್ಬಂದಿಯನ್ನೂ ಸಭೆಯಿಂದ ಹೊರಹಾಕಿದ ಶಾಸಕ

    ಬೀದರ್: ಪ್ರಗತಿ ಪರಿಶೀಲನಾ ಸಭೆಗೆ ಕೆಲ ಇಲಾಖೆಗಳ ಅಧಿಕಾರಿಗಳು ತಾವು ಬಾರದೇ ತಮ್ಮ ಪರವಾಗಿ ಬೇರೊಬ್ಬ ಅಧಿಕಾರಿಯನ್ನು ಕಳುಹಿಸಿದ್ದು, ಇದರಿಂದ ಕೋಪಗೊಂಡ ಶಾಸಕ ನಾರಾಯಣರಾವ್ ಸಿಬ್ಬಂದಿಯನ್ನು ಸಭೆಯಿಂದ ಹೊರ ಹಾಕಿದ ಪ್ರಸಂಗ ನಡೆದಿದೆ.

    ಬಸವಕಲ್ಯಾಣ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಕೆಲ ಇಲಾಖೆ ಅಧಿಕಾರಿಗಳು ತಾವು ಬಾರದೇ ತಮ್ಮ ಪರವಾಗಿ ಬೇರೊಬ್ಬ ಅಧಿಕಾರಿಯನ್ನು ಕಳುಹಿಸಿದ್ದರು. ಇದರಿಂದ ಕೋಪಗೊಂಡ ಶಾಸಕರು ಸಿಬ್ಬಂದಿಯನ್ನು ಸಭೆಯಿಂದ ಹೊರ ಹಾಕಿದ್ದಾರೆ.

    ಬೆಳಗ್ಗೆ ಆರಂಭವಾಗಬೇಕಿದ್ದ ಸಭೆ ತಡವಾಗಿ ಮಧ್ಯಾಹ್ನ ಆರಂಭವಾಯಿತು. ಈ ವೇಳೆ ಬಹುತೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಅಧಿಕಾರಿಗಳ ಗೈರು ಕುರಿತು ಗಮನಿಸಿ ಗರಂ ಆದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ ಅವರು, ಸಭೆ ಆರಂಭದಲ್ಲಿಯೇ ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ತಾ.ಪಂ ಸಿಇಒ ಪಿ.ಎಸ್.ಮಡೋಳಪ್ಪ ಅವರಿಗೆ ಸೂಚಿಸಿದರು.

    ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ನಾರಾಯಣರಾವ್, ಸಭೆಯಲ್ಲಿ ತಮ್ಮ ಇಲಾಖೆಯ ಮುಖ್ಯ ಅಧಿಕಾರಿಗಳ ಪರವಾಗಿ ಪಾಲ್ಗೊಂಡಿರುವ ಸಹಾಯಕ ಸಿಬ್ಬಂದಿ ಎದ್ದು ನಿಲ್ಲಿ ಎಂದು ತಿಳಿಸಿದರು. ಆಗ ನೀರಾವರಿ, ಮೀನುಗಾರಿಕೆ, ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಸಭೆಯಲ್ಲಿ ಎದ್ದು ನಿಂತರು. ನಿಮ್ಮ ಇಲಾಖೆ ಅಧಿಕಾರಿಗಳು ಎಲ್ಲಿಗೆ ಹೋಗಿದ್ದಾರೆ ಎಂದು ಶಾಸಕರು ಪ್ರಶ್ನಿಸಿದರು. ಸಭೆಗೆ ಬರಲು ಸಾಧ್ಯವಾಗದವರು ನಮಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿ, ಸಭೆಯಲ್ಲಿ ಪಾಲ್ಗೊಂಡಿದ್ದ ಸಹಾಯಕ ಸಿಬ್ಬಂದಿಯನ್ನು ಸಭೆಯಿಂದ ಹೊರ ಹೋಗುವಂತೆ ಸೂಚಿಸಿದರು.

  • ರೈತ ಸಂಘದಿಂದ ಸರ್ಕಾರಕ್ಕೆ ಮನವಿ – ಕೆರೆ ಅಭಿವೃದ್ಧಿಯಲ್ಲಿ ಅಧಿಕಾರಿಗಳು ವಿಫಲ

    ರೈತ ಸಂಘದಿಂದ ಸರ್ಕಾರಕ್ಕೆ ಮನವಿ – ಕೆರೆ ಅಭಿವೃದ್ಧಿಯಲ್ಲಿ ಅಧಿಕಾರಿಗಳು ವಿಫಲ

    ನೆಲಮಂಗಲ: ರಾಷ್ಟ್ರೀಯ ಕಿಸಾನ್ ಸಂಘದ ರೈತರು ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳ ವರ್ತನೆಗೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಅಮಾನಿಕೆರೆ ಬಿನ್ನಮಂಗಲ ಮಲ್ಲಾಪುರ ಕೆರೆ ಸೇರಿದಂತೆ ತಾಲೂಕಿನ ಕೆರೆ ಅಭಿವೃದ್ಧಿ ಮಾಡದೆ ಕುಂಠಿತವಾಗಿವೆ.

    ಈ ಕೆರೆಗಳಿಗೆ ಪಟ್ಟಣದಿಂದ ರಾಜಕಾಲುವೆ ಮೂಲಕ ಮಲಮೂತ್ರದ ತ್ಯಾಜ್ಯವನ್ನು ನೇರವಾಗಿ ಹರಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ನಾನಾ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತಿದ್ದು, ಅಂತರ್ಜಲ ಮಟ್ಟಕೂಡ ಕಲುಷಿತವಾಗುತ್ತಿದೆ.

    ಈ ಬಗ್ಗೆ ಸಾಕಷ್ಟು ಬಾರಿ ಆಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಯಾರೊಬ್ಬರೂ ಗಮನ ಹರಿಸದೇ ನಿರ್ಲಕ್ಷಿಸಿದ್ದಾರೆ. ಇತ್ತ ಕೆಲ ಪ್ರಭಾವಿಗಳು ಕೆರೆ ಕುಂಟೆ ಸೇರಿದಂತೆ ರಾಜಕಾಲುವೆಗಳನ್ನ ಒತ್ತುವರಿ ಮಾಡಿದ್ದು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಸಾಕಷ್ಟು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಮುಂದಿನ ದಿನದಲ್ಲಿ ಹೋರಾಟದ ಎಚ್ಚರಿಕೆಯನ್ನ ರೈತ ಮುಖಂಡರು ನೀಡಿದ್ದು, ಕೆರೆ ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ರಮಗಳು ನಡೆದಿದ್ದು ಎಲ್ಲವನ್ನು ತನಿಖೆ ನಡೆಸುವಂತೆ ರೈತರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ಹನಿಟ್ರ್ಯಾಪ್​ಗೆ ಬಿದ್ದು ಪಾಕಿಗೆ ಭಾರತೀಯ ನೌಕೆಯ ಮಾಹಿತಿ – ಕಾರವಾರದ ಇಬ್ಬರು ನಾವಿಕರು ಅರೆಸ್ಟ್

    ಹನಿಟ್ರ್ಯಾಪ್​ಗೆ ಬಿದ್ದು ಪಾಕಿಗೆ ಭಾರತೀಯ ನೌಕೆಯ ಮಾಹಿತಿ – ಕಾರವಾರದ ಇಬ್ಬರು ನಾವಿಕರು ಅರೆಸ್ಟ್

    ಕಾರವಾರ: ಹನಿಟ್ರ್ಯಾಪ್ ಹಾಗೂ ಹಣದ ಅಮಿಷಕ್ಕೆ ಒಳಗಾಗಿ ಭಾರತೀಯ ನೌಕಾದಳದ ಹಡಗುಗಳ ಚಲನವಲನ ಹಾಗೂ ಆಂತರಿಕ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಗೆ ಮಾಹಿತಿ ನೀಡುತ್ತಿದ್ದ ಕಾರವಾರದ ಕದಂಬ ನೌಕಾನೆಲೆಯ ರಾಜಸ್ಥಾನ, ಒಡಿಶಾ ಮೂಲದ ಇಬ್ಬರು ಸೈಲರ್ ಸಿಬ್ಬಂದಿ ಸೇರಿದಂತೆ ಎಂಟು ಜನರನ್ನು ಆಂಧ್ರದ ಸಿ.ಐ ಸೆಲ್ ಪೊಲೀಸರು ಇಂದು ಬಂಧಿಸಿದ್ದಾರೆ.

    ಆಂಧ್ರದ ಸಿ.ಐ ಸೆಲ್ ಪೊಲೀಸರು ಕಾರವಾರದ ಅರಗಾದ ಕದಂಬ ನೌಕಾನೆಲೆ, ಮುಂಬೈ, ವಿಶಾಖಪಟ್ಟಣದಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿ ಬಂಧಿಸಿದ್ದಾರೆ. ಕಾರವಾರದ ಕದಂಬ ನೌಕಾನೆಲೆಯ ಇಬ್ಬರು, ವಿಶಾಖಪಟ್ಟಣದ ಮೂವರು, ಮುಂಬೈನ ಭೂಗತ ಲೋಕದ ನಂಟು ಹೊಂದಿರುವ ಹವಾಲ ಹಣ ವ್ಯವಹಾರದ ವ್ಯಕ್ತಿ ಸೇರಿ ಮೂವರು ಒಟ್ಟು ಎಂಟು ಜನರನ್ನು ರಾತ್ರೋರಾತ್ರಿ ವಶಕ್ಕೆ ಪಡೆದು ಬಂದಿಸಿದ್ದಾರೆ.

    ಬಂಧಿತರಿಂದ ಮೊಬೈಲ್, ಅಂತರಾಷ್ಟ್ರೀಯ ಬ್ಯಾಂಕ್ ವ್ಯವಹಾರ ಮಾಡಿದ ದಾಖಲೆ, ನೌಕಾನೆಲೆಯ ಆಂತರಿಕ ಸಿಗ್ನಲ್ ಮ್ಯಾಪ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಗಳಿಗೆ ಕಾರವಾರ ಸೇರಿದಂತೆ ದೇಶದ ಪ್ರಮುಖ ನೌಕೆಗಳ ಚಲನವಲನದ ಬಗ್ಗೆ ಹಾಗೂ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡುತಿದ್ದರು. ಇದಲ್ಲದೇ ಇವರೊಂದಿಗೆ ಹಲವು ಅಧಿಕಾರಿಗಳು ಹನಿಟ್ರ್ಯಾಪ್ ಆಗಿರುವ ಬಗ್ಗೆ ಆಂಧ್ರದ ಗುಪ್ತದಳ ಮಾಹಿತಿ ಪಡೆದಿದ್ದು, ಅವರನ್ನು ಬಂಧಿಸುವಲ್ಲಿ ಕಾರ್ಯೋನ್ಮುಕವಾಗಿದೆ. ಘಟನೆ ಸಂಬಂಧ ಆಂಧ್ರ ಪ್ರದೇಶದ ವಿಜಯವಾಡ ಇಂಟಲಿಜನ್ಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿಕ್ಕಿದ್ದು ಹೇಗೆ?
    ಆಂಧ್ರದ ಸಿ.ಐ ಸೆಲ್ ನ ಅಧಿಕಾರಿಗಳಿಗೆ ಮುಂಬೈನಲ್ಲಿರುವ ಹವಾಲ ಹಣ ವ್ಯವಹಾರ ಮಾಡುತಿದ್ದ ಭೂಗತ ಲೋಕದ ನಂಟು ಹೊಂದಿದ್ದ ವ್ಯಕ್ತಿಯನ್ನು ಆಂಧ್ರದ ವಿಜಯವಾಡದಲ್ಲಿ ಬಂಧಿಸಲಾಗಿತ್ತು. ಈತನನ್ನು ತನಿಖೆ ನಡೆಸಿದಾಗ ಹವಾಲ ಹಣ ಬಳಸಿ ಹಾಗೂ ಹನಿಟ್ರ್ಯಾಪ್ ಮಾಡುವ ಮೂಲಕ ಕಾರವಾರದ ಕದಂಬ ನೌಕಾನೆಲೆ, ವಿಶಾಖಪಟ್ಟಣ, ಮುಂಬೈ ನೌಕಾನೆಲೆಯ ನೌಕೆಯ ಸೈಲರ್ ಗಳ ಮೂಲಕ ಕಾರವಾರದ ಕದಂಬ ನೌಕಾನೆಲೆ, ವಿಶಾಖಪಟ್ಟಣಮ್, ಮುಂಬೈ ನೌಕಾನೆಯಲ್ಲಿ ಯುದ್ಧ ಹಡಗುಗಳ ಚಲನವಲನ, ಮ್ಯಾಪ್ ಗಳು, ಸಿಗ್ನಲ್ ಗಳ ಬಗ್ಗೆ ಮಾಹಿತಿ ಪಡೆಯಲಾಗುತಿತ್ತು. ಈ ಕುರಿತು ಮಾಹಿತಿಯನ್ನು ಆತ ಬಾಯಿ ಬಿಟ್ಟಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಆಂಧ್ರ ಸಿ.ಐ ಸೆಲ್ ಅಧಿಕಾರಿಗಳು ಆತನ ಫೋನ್ ಸೇರಿದಂತೆ ಬ್ಯಾಂಕ್ ವ್ಯವಹಾರದ ದಾಖಲೆ ಪರಿಶೀಲಿಸಿದ್ದು ಈ ವೇಳೆ ವಿಷಯ ಹೊರಬಂದಿದೆ. ನಂತರ ಏಕ ಕಾಲದಲ್ಲಿ ದಾಳಿ ನಡೆಸಿ ಇಂದು ಏಳು ಜನ ನೌಕಾದಳದ ಸೈಲರ್ ಸಿಬ್ಬಂದಿಗಳನ್ನು ವಶಕ್ಕೆ ಪಡೆಯಲಾಗಿದೆ.

    ಗೋವಾದಲ್ಲಿ ಹನಿಟ್ರ್ಯಾಪ್!
    ಕಾರವಾರ, ಮುಂಬೈನ ನಾವಿಕರಿಗೆ ಹೆಣ್ಣಿನ ಆಸೆ ತೋರಿಸಿ ಪಾಕಿಸ್ತಾನದ ಗುಪ್ತದಳ ಸಂಸ್ಥೆ ಗೋವಾದ ಪ್ರತಿಷ್ಠಿತ ಹೋಟಲ್ ನಲ್ಲಿ ರೂಮ್ ಬುಕ್ ಮಾಡುವ ಮೂಲಕ ಹನಿಟ್ರ್ಯಾಪ್ ಮಾಡಿದೆ. ಇದಲ್ಲದೇ ಬಂಧಿತರಿಗೆ ಹಣ ಕೂಡ ನೀಡಲಾಗಿದ್ದು ಅವರ ಖಾತೆಗಳಿಗೆ ಅಂತರಾಷ್ಟ್ರೀಯ ಬ್ಯಾಂಕ್ ವ್ಯವಹಾರದ ದಾಖಲೆ ಸಹ ಸಿಕ್ಕಿದೆ. ಈ ಹನಿಟ್ರ್ಯಾಪ್ ಗೆ ಕೇವಲ ನೌಕೆಯ ಸೈಲರ್ ಗಳಲ್ಲದೇ ನೌಕಾ ನೆಲೆಯ ಪ್ರಮುಖ ಹುದ್ದೆಯಲ್ಲಿರುವ ದೆಹಲಿ ಸೇರಿದಂತೆ ಪ್ರಮುಖ ನೌಕಾ ಕಚೇರಿಯ ಅಧಿಕಾರಿಗಳು ಸಹ ಒಳಗಾಗಿರುವ ಕುರಿತು ತನಿಖೆ ನಡೆಸಲಾಗುತ್ತಿದ್ದು ವಿಚಾರಣೆ ಮುಂದುವರಿದಿದೆ.

  • ಕ್ಯಾಟ್ ಫಿಶ್ ಹೊಂಡಗಳ ಮೇಲೆ ಅಧಿಕಾರಿಗಳ ದಾಳಿ – ಈ ಮೀನುಗಳು ಅಪಾಯಕಾರಿ ಯಾಕೆ?

    ಕ್ಯಾಟ್ ಫಿಶ್ ಹೊಂಡಗಳ ಮೇಲೆ ಅಧಿಕಾರಿಗಳ ದಾಳಿ – ಈ ಮೀನುಗಳು ಅಪಾಯಕಾರಿ ಯಾಕೆ?

    ಬೆಂಗಳೂರು: ದೇಶಾದ್ಯಂತ ನಿಷೇಧಗೊಂಡಿರುವ ಕ್ಯಾಟ್ ಫಿಶ್ ಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡುತ್ತಿದ್ದ ಹೊಂಡಗಳ ಮೇಲೆ ಇಂದು ಅಧಿಕಾರಿಗಳು ದಾಳಿ ನಡೆಸಿ ಜೆಸಿಬಿ ಮೂಲಕ ತೆರವು ಗೊಳಿಸಿದ್ದಾರೆ.

    ಹೊಸಕೋಟೆ ತಾಲೂಕಿನ ಬೈಲಾನರಸಾಪುರ ಹಾಗು ಎನ್.ಹೊಸಹಳ್ಳಿ ಗ್ರಾಮಗಳಲ್ಲಿ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ತಾಲೂಕು ತಹಶೀಲ್ದಾರ್, ಮೀನುಗಾರಿಕೆ ಇಲಾಖೆ ಹಾಗೂ ನಂದಗುಡಿ ಪೋಲಿಸ್ ಇಲಾಖೆಯ ಅಧಿಕಾರಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

    ಗ್ರಾಮಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದು ಎರಡು ತಂಡಗಳಾಗಿ 2 ಜೆಸಿಬಿಗಳ ಮೂಲಕ ಕ್ಯಾಟ್ ಫಿಶ್ ಹೊಂಡಗಳನ್ನು ತೆರವು ಕಾರ್ಯಚರಣೆ ನಡೆಸಿದರು. ಈ ಹಿಂದೆಯೂ ಸಹ ಜಿಲ್ಲಾ ಎಸ್ಪಿ ರವಿ ಡಿಚನ್ನಣ್ಣನವರ್ ಅವರ ನೇತೃತ್ವದಲ್ಲಿ ತೆರವುಗೊಳಿಸಿದ್ದರೂ ಸಹ ಮತ್ತೆ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಪ್ರಾರಂಭಿಸಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ದಾಳಿ ನಡೆಸಿ ಹೊಂಡಗಳನ್ನು ಧ್ವಂಸಗೊಳಿಸಿದ್ದಾರೆ.

    ಇಂದು ದಿನಪೂರ್ತಿ ಅಧಿಕಾರಿಗಳ ತಂಡ ತೆರವು ಕಾರ್ಯಚರಣೆ ಮಾಡಿ ಎರಡು ಗ್ರಾಮಗಳಲ್ಲಿ ಸಂಪೂರ್ಣ ಕ್ಯಾಟ್ ಫಿಶ್ ಹೊಂಡಗಳನ್ನು ತೆರವುಗೊಳಿಸಿದ್ದಾರೆ. ಕ್ಯಾಟ್ ಫಿಶ್ ಸಾಕಾಣಿಕೆ ಹಾಗೂ ಹೊಂಡಗಳ ಜಾಗದ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಕ್ಯಾಟ್ ಫಿಶ್ ಅಪಾಯವೇಕೆ?
    ಕ್ಯಾಟ್ ಫಿಶ್ ಗಳನ್ನು ಕೊಳೆತ ಕೊಳದೊಳಗೆ ಸಾಕಲಾಗುತ್ತದೆ. ಈ ಮೀನಿಗೆ ಆಹಾರವಾಗಿ ಸತ್ತ ಪ್ರಾಣಿಗಳು, ಸತ್ತ ದನ ಮತ್ತು ನಾಯಿಯ ಶವ ಹಾಕಲಾಗುತ್ತದೆ. ಅದನ್ನೇ ತಿಂದ ಕ್ಯಾಟ್ ಫಿಶ್ ಗಳು ದಷ್ಟ ಪುಷ್ಟವಾಗಿ ಬೆಳೆಯುತ್ತದೆ. ಕಡಿಮೆ ಬೆಲೆ ನಿಗದಿ ಆಗಿರುವ ಕಾರಣ ಗ್ರಾಹಕರು ತಿಳಿಯದೇ ಈ ಮೀನನ್ನು ಖರೀದಿ ಮಾಡುತ್ತಾರೆ.

    ಈ ಮೀನುಗಳಲ್ಲಿ ಪಾದರಸ ಅಂಶವಿದ್ದು, ಮನುಷ್ಯ ನರವ್ಯೂಹಕ್ಕೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಕ್ಯಾನ್ಸರ್ ಕಾರಕ ಅಂಶವಿದ್ದು, ಗರ್ಭಿಣಿಯರು ತಿಂದರೆ ಹುಟ್ಟುವ ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

    ದಷ್ಟ ಪುಷ್ಟವಾಗಿ ಬಳೆದ ಪರಿಣಾಮ ಮೀನಿನಲ್ಲಿ ಮುಳ್ಳು ಕಮ್ಮಿ ಇರುತ್ತದೆ. ಈ ಕಾರಣಕ್ಕೆ ಜನರು ಇದನ್ನು ಹೆಚ್ಚು ತಿನ್ನ ಇಷ್ಟಪಡುತ್ತಾರೆ. ಆದರೆ ಇದನ್ನು ತಿಂದರೆ ರಕ್ತ ಹೆಪ್ಪುಗಟ್ಟಿ ಹೃದಯ ಸಂಬಂಧಿ ಖಾಯಿಲೆ ಬರುತ್ತದೆ. ಮೀನುಗಾರಿಕಾ ಇಲಾಖೆಯ ಅಧ್ಯಯನದಲ್ಲಿ ಈ ಅಂಶಗಳು ದೃಢಪಟ್ಟಿರುವುದರಿಂದ ಈ ಮೀನನ್ನು ಭಾರತದಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿದೆ.

  • ಬಿಡಿಎ ಒತ್ತುವರಿ ತೆರವು ಕಾರ್ಯಚರಣೆ ಚುರುಕು

    ಬಿಡಿಎ ಒತ್ತುವರಿ ತೆರವು ಕಾರ್ಯಚರಣೆ ಚುರುಕು

    ಬೆಂಗಳೂರು: ಉಪಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತೆ ಒತ್ತುವರಿ ತೆರವು ಕಾರ್ಯಚರಣೆ ಆರಂಭಿಸಿದೆ.

    ನಾಗವಾರ ಗ್ರಾಮದ ಸರ್ವೆ ನಂಬರ್ 75ರಲ್ಲಿ ಹೆಚ್‍ಬಿಆರ್ 2ನೇ ಹಂತ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಧಿಕಾರ ನೋಟಿಫಿಕೇಶನ್ ಹೊರಡಿಸಿದ್ದ ಜಾಗದ ಒತ್ತುವರಿಯಾಗಿತ್ತು. ಈ ಒತ್ತುವರಿಯಲ್ಲಿ 3 ಅಂತಸ್ತಿನ ಕಟ್ಟಡ, ಹಲವು ಶೆಡ್‍ಗಳ ನಿರ್ಮಾಣವಾಗಿತ್ತು. ಎಲ್ಲವನ್ನ ಇಂದು ಬಿಡಿಎ ತನ್ನ ವಶಕ್ಕೆ ಪಡೆದಿದೆ. ಸುಮಾರು 6 ಎಕ್ರೆ 3 ಗುಂಟೆ ಬಿಡಿಎಗೆ ಸೇರಬೇಕಾದ ಜಾಗ ಒತ್ತುವರಿಯಾಗಿದ್ದು, ಎಲ್ಲಾ ಜಾಗವನ್ನ ವಶಕ್ಕೆ ಪಡೆಯಲಾಗಿದೆ. ಸುಮಾರು 320 ಕೋಟಿ ರೂ. ಬೆಲೆ ಬಾಳುವ ಜಾಗವನ್ನು ಒತ್ತುವರಿ ಮಾಡಿಕೊಂಡಿರೋ ಸ್ಥಳೀಯರಿಂದ ಜಾಗವನ್ನು ವಶಕ್ಕೆ ಪಡೆಯಲಾಯಿತು.

    ಈ ವೇಳೆ ಮಾತನಾಡಿದ ಬಿಡಿಎ ಆಯುಕ್ತ ಪ್ರಕಾಶ್, ಇಷ್ಟು ದಿನ ನೀತಿ ಸಂಹಿತೆ ಇತ್ತು. ಆದ್ದರಿಂದ ಇಷ್ಟು ದಿನ ಒತ್ತುವರಿ ತೆರವಿಗೆ ಮುಂದಾಗಿರಲಿಲ್ಲ. ಒಟ್ಟು ನಗರದಲ್ಲಿ 5 ಸಾವಿರ ಕೋಟಿ ರೂ. ಮೊತ್ತದ ಜಾಗ ಒತ್ತುವರಿಯಾಗಿದೆ. ಇನ್ನು 6 ತಿಂಗಳೊಳಗೆ ಬಿಡಿಎಗೆ ಸೇರಬೇಕಾದ ಎಲ್ಲಾ ಜಾಗವನ್ನು ವಶಕ್ಕೆ ಪಡೆಯುತ್ತೇವೆ. ಇಂದಿನಿಂದ ಒತ್ತುವರಿ ತೆರವು ಆರಂಭ ಮಾಡಿದ್ದೇವೆ. ನಾಗಾವಾರದಲ್ಲಿ 6 ಎಕ್ರೆ 17 ಗುಂಟೆ ಜಾಗ ಒತ್ತುವರಿಯಾಗಿದೆ. ಸುಮಾರು 320 ಕೋಟಿ ರೂ. ಬೆಲೆಬಾಳುವ ಜಾಗ ಇದಾಗಿದೆ. ಈ ಜಾಗವನ್ನು ಇಂದು ಇದನ್ನು ವಶಕ್ಕೆ ಪಡೆದಿದ್ದೇವೆ. ಸುಮಾರು 20 ವರ್ಷಗಳಿಂದಲೂ ಈ ಜಾಗ ಹೀಗೇ ಇತ್ತು. ಈ ಹಿನ್ನೆಲೆ ಇಂದು ಜಾಗವನ್ನು ನಮ್ಮ ವಶಕ್ಕೆ ಪಡೆದಿದ್ದೇವೆ ಎಂದರು.

  • ಸಹಕಾರಿ ಸಂಘದ ಗೂಂಡಾಗಿರಿ- ಗ್ರಾಹಕರಿಂದ ಪ್ರತಿಭಟನೆ

    ಸಹಕಾರಿ ಸಂಘದ ಗೂಂಡಾಗಿರಿ- ಗ್ರಾಹಕರಿಂದ ಪ್ರತಿಭಟನೆ

    ಚಾಮರಾಜನಗರ: ಸಾಲ ಪಡೆದ ರೈತರು ಮತ್ತು ಗ್ರಾಹಕರಿಗೆ ಇಂಡಿಯನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ಚಾಮರಾಜೇಶ್ವರ ದೇವಸ್ಥಾನದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಶ್ರೀಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿ, ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸೊಸೈಟಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಿಬಿಐ ತನಿಖೆ ನಡೆಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

    ಕೂಲಿ ಕಾರ್ಮಿಕರು, ವರ್ತಕರು, ಮಹಿಳೆಯರು, ರೈತರು ಹಾಗೂ ಉದ್ಯಮಿಗಳು ಸೇರಿದಂತೆ ಅಂದಾಜು 900 ಗ್ರಾಹಕರಿಗೆ 1 ರಿಂದ 50 ಲಕ್ಷ ರೂ.ವರೆಗೆ ದೈನಂದಿನ ಸಾಲವನ್ನು ಸೊಸೈಟಿ ವಿತರಿಸಿದೆ. 1 ಲಕ್ಷ ರೂ.ಗೆ 18 ಸಾವಿರ ರೂ., 5 ಲಕ್ಷ ರೂ.ಗೆ 90 ಸಾವಿರ ರೂ.ಹಣವನ್ನು ಠೇವಣಿ ಇರಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಸೂಕ್ತ ರಶೀದಿಯನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಗ್ರಾಹಕರಿಗೆ ಸಾಲ ಕೊಡುವಾಗ 4 ಖಾಲಿ ಚೆಕ್, ಸೇರಿದಂತೆ ದಾಖಲಾತಿಗಳನ್ನು ಪಡೆಯುತ್ತಾರೆ. ಸಾಲ ಮರುಪಾವತಿ ಮಾಡಿರುವ ಗ್ರಾಹಕರಿಗೆ ಮಾತ್ರ ಯಾವುದೇ ರಶೀದಿ ನೀಡುತ್ತಿಲ್ಲ. ಸಾಲಗಾರರಿಗೆ ರೌಡಿಗಳನ್ನು ಬಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಸಹಕಾರಿ ಬ್ಯಾಂಕ್ ವಿರುದ್ಧ ಧರಣಿ ನಡಿಸಿದ ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಸೊಸೈಟಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಪ್ರಶಾಂತ್, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಕೂಸ್ಲೂರು ಗ್ರಾಪಂ ಸದಸ್ಯ ಮಹದೇವಸ್ವಾಮಿ, ಕಾಂಗ್ರೆಸ್ ಮುಖಂಡ ಸಿ.ಆರ್.ಮಹೇಶ್, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಜಿ.ಎಂ.ಶಂಕರ್ ಹಾಗೂ ಇತರರು ಭಾಗವಹಿಸಿದ್ದರು.

  • ಅಭಿವೃದ್ದಿಗಿಂತ ಶಾಸಕರನ್ನು ಸಮಾಧಾನಪಡಿಸುವುದೇ ಸಿಎಂಗೆ ದೊಡ್ಡ ಕೆಲಸವಾಗುತ್ತೆ- ನಾರಾಯಣಸ್ವಾಮಿ

    ಅಭಿವೃದ್ದಿಗಿಂತ ಶಾಸಕರನ್ನು ಸಮಾಧಾನಪಡಿಸುವುದೇ ಸಿಎಂಗೆ ದೊಡ್ಡ ಕೆಲಸವಾಗುತ್ತೆ- ನಾರಾಯಣಸ್ವಾಮಿ

    – ಶರತ್ ಬಚ್ಚೆಗೌಡ ಪಕ್ಷಕ್ಕೆ ಬಂದ್ರೆ ಸ್ವಾಗತ
    – ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲಿ

    ಕೋಲಾರ: ಬಿಜೆಪಿ ಸರ್ಕಾರದಲ್ಲಿ ಸಿಎಂ ಯಡಿಯೂರಪ್ಪಗೆ ರಾಜ್ಯದ ಅಭಿವೃದ್ಧಿಗಿಂತ ತಮ್ಮ ಪಕ್ಷದ ಶಾಸಕರನ್ನು ಸಮಾದಾನ ಪಡಿಸುವುದೇ ದೊಡ್ಡ ಕೆಲಸವಾಗುತ್ತದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲಾ ಪಂಚಾಯತ ಕೆಡಿಪಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ಸಿನಲ್ಲಿ ಅಧಿಕಾರ ಪಡೆದುಕೊಂಡವರು ಬಿಜೆಪಿಗೆ ಹೋಗಿದ್ದಾರೆ, ಹೊಸ ನೀರು ಹೋದಮೇಲೆ ಹಳೆ ನೀರಿಗೆ ಅಲ್ಲಿ ಬೆಲೆ ಇಲ್ಲ ಹಾಗಾಗಿ ಬಿಜೆಪಿಯಲ್ಲಿ ಸಚಿವ ಸಂಪುಟ ವಿಚಾರವಾಗಿ ಗೊಂದಲ ಮುಂದುವರೆಯುತ್ತದೆ. ಎಂಟಿಬಿಗೆ ಬಿಜೆಪಿಯಲ್ಲಿ ಸ್ಥಾನಮಾನ ಕೊಡಲು ಸಾಧ್ಯವೇ ಇಲ್ಲ. ಗೆದ್ದಿರುವವರಿಗೆ ಸ್ಥಾನಮಾನ ಕೊಡುವುದೇ ಕಷ್ಟವಾಗಿದೆ. ಹಳಬರು-ಹೊಸಬರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದೇ ಸಿಎಂಗೆ ಸರ್ಕಸ್ ಆಗುತ್ತದೆ ಎಂದರು.

    ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ನೂತನ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್‍ಗೆ ಬಂದರೆ ಸ್ವಾಗತಿಸುತ್ತೇವೆ. ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿರುವ ಶರತ್ ಏಕೆ ಕಾಂಗ್ರೆಸ್‍ಗೆ ಬರಬಾರದು ಎಂದು ಪ್ರಶದನಿಸಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಹೈಕಮಾಂಡ್‍ಗೆ ಒತ್ತಾಯ ಮಾಡುತ್ತೇನೆ ಎಂದರು.

    ಸಂಸದ, ಶಾಸಕರ ನಡುವೆ ವಾಗ್ವಾದ
    ಕೆಡಿಪಿ ಸಭೆಯಲ್ಲಿ ಸಂಸದ ಮುನಿಸ್ವಾಮಿ ಹಾಗೂ ಮಾಲೂರು ಕಾಂಗ್ರೇಸ್ ಶಾಸಕ ಹಾಗೂ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ನಂಜೇಗೌಡ ನಡುವೆ ಏರು ಧ್ವನಿಯಲ್ಲಿ ವಾಗ್ವಾದ ನಡೆಯಿತು. ಕೆಎಂಎಫ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಎಂದು ಸಂಸದ ಮುನಿಸ್ವಾಮಿಗೆ ಆರೋಪಿಸಿದರು. ಇದಕ್ಕೆ ಉತ್ತರಿಸುವ ವೇಳೆ ಶಾಸಕರು ಏಕವಚನದಲ್ಲಿ ಮಾತನಾಡಿ ನೀನು ಎಂದು ಸಂಭೋಧಿಸಿದರು. ಇದಕ್ಕೆ ಕೋಪಗೊಂಡ ಸಂಸದರು ನ್ಯಾಯವಾಗಿ ಮಾತನಾಡಿ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸಂಸದರು ಹಾಗೂ ಶಾಸಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಸಭೆಯಲ್ಲಿದ್ದ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಮತ್ತು ಸಚಿವ ನಾಗೇಶ್ ಸಮಾಧಾನ ಪಡಿಸಿದರು. ನಂತರ ಸಭೆಯಲ್ಲಿ ಒಬ್ಬರಿಗೊಬ್ಬರು ಸಮರ್ಥಿಸಿಕೊಂಡರು. ಮಧ್ಯಾಹ್ನದ ಊಟವನ್ನು ಇಬ್ಬರೂ ಜೊತೆಯಲ್ಲೆ ಸವಿದರು.

    ಉಸ್ತುವಾರಿ ಸಚಿವರ ಮೌನ
    ಸಂಸದರ ಜೊತೆ ಮಾತನಾಡುತ್ತ ಕುಳಿತ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಬದಲಾಗಿ ಇಡೀ ಸಭೆಯನ್ನು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ನಡೆಸಿಕೊಟ್ಟರು. ಸಚಿವ ನಾಗೇಶ್ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೂರು ತಿಂಗಳ ನಂತರ ಮೂರು ಬಾರಿ ದಿನಾಂಕ ನಿಗದಿ ಮಾಡಿ ನಂತರ ಮುಂದೂಡಿ ಕೊನೆಗೆ ಇಂದು ಸಭೆ ನಡೆಸಿದರು. ಆದರೆ ನಡೆಸಿಕೊಟ್ಟವರು ಮಾತ್ರ ನಾರಾಯಣಸ್ವಾಮಿ.

    ಸಭೆಯಲ್ಲಿ ಪ್ರತಿ ವಿಷಯದ ಮೇಲೆ ಚರ್ಚೆ ಬಂದಾಗಲೂ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ಸಚಿವರೇ ಅದೇಶ ನೀಡುತ್ತಿದ್ದರು. ಆದರೆ ಈ ಬಾರಿ ನಾರಾಯಣಸ್ವಾಮಿಯವರು ಮಾಡಿದ್ದಾರೆ.

    ಈ ವೇಳೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಗೆ ಸರಿಯಾಗಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಕೋಲಾರ ತಾಲೂಕು ವಡಗೂರು ಗ್ರಾಮದಲ್ಲಿ ರಾಜೀವ್‍ಗಾಂಧಿ ಸೇವಾ ಕೇಂದ್ರವನ್ನು ನನ್ನ ಗಮನಕ್ಕೆ ತರದೆ ಉದ್ಘಾಟನೆ ಮಾಡಲಾಗಿದೆ ಎಂದು ಆರೋಪಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿದ್ದ ಎಲ್ಲ ಜನಪ್ರತಿನಿಧಿಗಳು ಧ್ವನಿಗೂಡಿಸಿದರು. ಜಿಲ್ಲಾಧಿಕಾರಿಗಳು ಉತ್ತರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಸಭೆಗೂ ನಮಗೂ ಸಂಬಂಧವೇ ಇಲ್ಲವೆಂದು ಕುಳಿತಿದ್ದ ಅಧಿಕಾರಿಗಳು, ಕೆಲವರು ನಿದ್ದೆಗೆ ಜಾರಿದರೆ, ಬಹುತೇಕರು ಮೊಬೈಲ್ ನಲ್ಲೇ ಮುಳುಗಿದ್ದರು. ಸಭೆಯಲ್ಲಿ ಜನರ ಸಮಸ್ಯೆಗಳಿಗಿಂತ ಹೆಚ್ಚಾಗಿ ಶಾಸಕರು ಮತ್ತು ಸಚಿವರು ತಮ್ಮ ಸಮಸ್ಯೆಗಳ ಬಗ್ಗೆಯೇ ಚಿಂತಿಸಿದ್ದು, ಮತ್ತೊಂದು ವಿಶೇಷವಾಗಿತ್ತು.

  • ದಾಯಾದಿಗಳ ಮತ್ಸರಕ್ಕೆ ನಲುಗಿದ ಮಕ್ಕಳು- ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲದೆ ಪರದಾಟ

    ದಾಯಾದಿಗಳ ಮತ್ಸರಕ್ಕೆ ನಲುಗಿದ ಮಕ್ಕಳು- ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲದೆ ಪರದಾಟ

    – ಮಾಜಿ ಡಿಸಿಎಂ ಕ್ಷೇತ್ರದಲ್ಲೇ ದೌರ್ಜನ್ಯ

    ತುಮಕೂರು: ದಾಯಾದಿಗಳ ಮತ್ಸರಕ್ಕೆ ಇಡೀ ಗ್ರಾಮ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದರೂ ಒಂದು ಮನೆಗೆ ಮಾತ್ರ ವಿದ್ಯುತ್ ಸಂಪರ್ಕ, ಶೌಚಾಲಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಘಟನೆ ಜಿಲ್ಲೆ ಕೊರಟಗೆರೆ ಕ್ಷೇತ್ರದ ಚಿಕ್ಕತೊಟ್ಟುಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಗ್ರಾಮದ ರಾಮಸ್ವಾಮಿ ಎಂಬವರ ಮನೆಗೆ ಕಳೆದ 18 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲ. ಊರಿಗೆಲ್ಲಾ ವಿದ್ಯುತ್ ಸೌಕರ್ಯ ಇದ್ದರೂ ರಾಮಸ್ವಾಮಿ ಮನೆಗೆ ಮಾತ್ರ ಅಧಿಕಾರಿಗಳು ವಿದ್ಯುತ್ ಹಾಗೂ ಶೌಚಾಲಯದ ಸೌಕರ್ಯ ಒದಗಿಸುತ್ತಿಲ್ಲ. ಪರಿಣಾಮ ರಾಮಸ್ವಾಮಿಯ ಮಕ್ಕಳು ಮನೆ ಮುಂದಿರುವ ಬೀದಿ ದೀಪದಲ್ಲೇ ಓದಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಚಿಮಣಿ ದೀಪದ ಬೆಳಕಲ್ಲಿ ಓದೋಣ ಎಂದರು ಸೀಮೆ ಎಣ್ಣೆನೂ ರೇಷನಲ್ಲಿ ಕೊಡುತ್ತಿಲ್ಲ.

    ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರ ಕ್ಷೇತ್ರದಲ್ಲೇ ಇಂತಹ ದೌರ್ಜನ್ಯ ನಡೆಯುತ್ತಿದ್ದು, ರಾಮಸ್ವಾಮಿ ಹಾಗೂ ಅವರ ದಾಯಾದಿಯೊಬ್ಬರ ನಡುವೆ ಜಮೀನು ವಿವಾದ ಇದಕ್ಕೆಲ್ಲ ಕಾರಣವಾಗಿದೆ. ಕೋರ್ಟಿನಲ್ಲಿ ರಾಮಸ್ವಾಮಿ ಪರ ತೀರ್ಪು ಬಂದರೂ ಮನೆ ಕಟ್ಟಿಕೊಂಡು ಮೂಲ ಸೌಲಭ್ಯ ಒದಗಿಸಿಕೊಳ್ಳಲು ದಾಯಾದಿಗಳು ಅಡ್ಡಿಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಪ್ರಭಾವಿಗಳಾಗಿದ್ದ ದಾಯಾದಿಗಳು ಅಧಿಕಾರಿಗಳ ಜೊತೆ ಪಿತೂರಿ ನಡೆಸಿ ದೌರ್ಜನ್ಯ ನಡೆಸುತ್ತಿದ್ದಾರೆ. ಒಮ್ಮೆ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಕೆಲವೇ ದಿನದಲ್ಲಿ ಕಡಿತಗೊಳಿಸಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ವಾಟರ್ ಮ್ಯಾನ್ ಕೆಲಸ ಮಾಡುತಿದ್ದರೂ ನನ್ನ ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳಲು ಆಗಿಲ್ಲ. ಪರಿಣಾಮ ವಯಸ್ಸಿಗೆ ಬಂದ ನನ್ನ ಹೆಣ್ಣುಮಕ್ಕಳು ರಾತ್ರಿ ವೇಳೆ ಬಯಲಿಗೆ ಹೋಗಬೇಕಾಗಿದೆ ಎಂದು ರಾಮಸ್ವಾಮಿ ಅವರು ಸಂಕಟ ತೋಡಿಕೊಂಡಿದ್ದಾರೆ.

    ಕನಿಷ್ಟ ಪಕ್ಷ ಶೌಚಾಲಯ, ವಿದ್ಯುತ್ ಸಂಪರ್ಕವನ್ನಾದರೂ ಕೊಡಿ ಎಂದು ಅಧಿಕಾರಗಳ ಬಳಿ ರಾಮಸ್ವಾಮಿ ಮಕ್ಕಳು ಅಂಗಲಾಚಿ ಬೇಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ಮೌನವಹಿಸಿದ್ದಾರೆ.

  • ಮಂಗಳೂರಿನಲ್ಲಿದೆ ದೇಶದ ಅತೀ ದುಬಾರಿ ಕ್ಲಾಕ್ ಟವರ್

    ಮಂಗಳೂರಿನಲ್ಲಿದೆ ದೇಶದ ಅತೀ ದುಬಾರಿ ಕ್ಲಾಕ್ ಟವರ್

    – ಅಗತ್ಯವಿಲ್ಲದಿದ್ದರೂ 1 ಕೋಟಿ ವ್ಯರ್ಥ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸುಂದರ ಭಾರತದ ಕನಸು ಕಾಣುತ್ತಿದ್ದು, ಅದಕ್ಕಾಗಿ ಕೆಲವೊಂದು ನಗರಗಳನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡಬೇಕೆಂದು ನಿರ್ಧರಿಸಿ ದೇಶದ ಪ್ರಮುಖ ನಗರಗಳನ್ನು ಗುರುತಿಸಿ ಹಣವನ್ನೂ ಬಿಡುಗಡೆ ಮಾಡಿದ್ದಾರೆ.

    ಈ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ ಕರಾವಳಿಯ ಮಂಗಳೂರು ಸೇರ್ಪಡೆಗೊಂಡಿತ್ತು. ಅದರಂತೆ ಮಂಗಳೂರು ಸ್ಮಾರ್ಟ್ ಸಿಟಿಯೇನೋ ಆಗುತ್ತಿದೆ. ಅದಕ್ಕಾಗಿ ನೂರಾರು ಕೋಟಿ ಬಿಡುಗಡೆಯಾಗಿದ್ದೂ ಆಗಿದೆ. ಆದರೆ ಈ ಸ್ಮಾರ್ಟ್ ಸಿಟಿಯ ಹಣ ಹೇಗೆ ಬಳಕೆಯಾಗುತ್ತಿದೆ, ಜನರು ಕಟ್ಟಿದ ತೆರಿಗೆಯ ಹಣವನ್ನು ಸ್ಮಾರ್ಟ್ ನೆಪದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಗೆ ಜೇಬಿಗೆ ಇಳಿಸುತ್ತಿದ್ದಾರೆ ಅನ್ನೋದಕ್ಕೆ ಮಂಗಳೂರು ನಗರದಲ್ಲಿ ತಲೆ ಎತ್ತಿ ನಿಂತಿರೋ ಕ್ಲಾಕ್ ಟವರ್ ಜೀವಂತ ಉದಾಹರಣೆಯಾಗಿದೆ.

    ಗಡಿಯಾರ ಗೋಪುರ ಎನ್ನುವ ಪರಿಕಲ್ಪನೆಯೇ ಮಾಸಿಹೋಗಿರುವ ಇಂದಿನ ಕಾಲದಲ್ಲಿ ಮಂಗಳೂರು ನಗರದ ಮಧ್ಯೆ ಬೃಹತ್ ಕ್ಲಾಕ್ ಟವರ್ ತಲೆಯೆತ್ತಿದೆ. ಅಷ್ಟೇ ಅಲ್ಲ ದೇಶದ ದುಬಾರಿ ಕ್ಲಾಕ್ ಟವರ್ ಅನ್ನುವ ಹಣೆಪಟ್ಟಿಯನ್ನೂ ಅಂಟಿಸಿಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಲಾಕ್ ಟವರ್ ನಿರ್ಮಿಸಿರುವುದು. ಮಂಗಳೂರಿನ ಹಂಪನಕಟ್ಟೆಯ ವೃತ್ತದ ಬಳಿ ಹಿಂದೆ 1968 ರಲ್ಲಿ ಜನರಿಗೆ ಸಮಯ ಗೊತ್ತಾಗಲೆಂದು ಕ್ಲಾಕ್ ಟವರ್ ನಿರ್ಮಿಸಲಾಗಿತ್ತು. ಗಂಟೆ ಗಂಟೆಗೆ ಬೆಲ್ ಮಾಡುತ್ತಾ ನಗರ ಭಾಗದ ಜನರನ್ನು ಎಚ್ಚರಿಸುತ್ತಿದ್ದ ಕ್ಲಾಕ್ ಟವರ್ ಜನರ ಕೈಗೆ ವಾಚ್ ಬರುತ್ತಿದ್ದಂತೆ ಅಪ್ರಸ್ತುತ ಎನ್ನುವಂತಾಗಿತ್ತು.

    ಹೀಗಾಗಿ 1994ರಲ್ಲಿ ನಗರದ ಮಧ್ಯೆ ಟ್ರಾಫಿಕ್ ದಟ್ಟಣೆಗೆ ಕಾರಣವಾಗುತ್ತಿದೆ ಎಂದು ಹಳೆಯ ಕ್ಲಾಕ್ ಟವರನ್ನು ಕೆಡವಲಾಗಿತ್ತು. ಆದರೆ ಇದೀಗ 24 ವರ್ಷಗಳ ಬಳಿಕ ಅದೇ ಜಾಗದಲ್ಲಿ 75 ಅಡಿ ಎತ್ತರದಲ್ಲಿ ಕ್ಲಾಕ್ ಟವರ್ ನಿರ್ಮಿಸಲಾಗಿದೆ. ಹೆಚ್ಚೆಂದರೆ 20 ಲಕ್ಷ ಖರ್ಚು ಆಗಬಹುದಾದ ಟವರ್ ನಿರ್ಮಾಣಕ್ಕೆ ಒಂದು ಕೋಟಿ ವ್ಯಯಿಸಿದ್ದಾಗಿ ಹೇಳುತ್ತಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಸ್ಮಾರ್ಟ್ ಹೆಸರಲ್ಲಿ ಜನರ ದುಡ್ಡನ್ನು ಜೇಬಿಗಿಳಿಸುತ್ತಿರುವುದಕ್ಕೆ ಜ್ವಲಂತ ನಿದರ್ಶನ ಎಂದು ಸ್ಥಳೀಯ ಸಾಮಾಜಿಕ ಹೋರಾಟಗಾರರಾದ ದಿನೇಶ್ ಹೊಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಗಳೂರಿಗೆ ಕ್ಲಾಕ್ ಟವರ್ ಅಗತ್ಯ ಇಲ್ಲದಿದ್ದರೂ, ಎರಡು ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಕವಿತಾ ಸನಿಲ್, ಹಲವರ ವಿರೋಧದ ಮಧ್ಯೆಯೇ ಟವರ್ ನಿರ್ಮಾಣಕ್ಕೆ ನಿರ್ಧರಿಸಿದ್ದರು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಸ್ಮಾರ್ಟ್ ಸಿಟಿಯ ಹೆಸರಲ್ಲಿ ನಡೆದ ಮೊದಲ ಯೋಜನೆಯೇ ಅತ್ಯಂತ ದುಬಾರಿ ಎನಿಸಿದೆ. ಹೀಗಾಗಿ ಸ್ಮಾರ್ಟ್ ಸಿಟಿ ನೆಪದಲ್ಲಿ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಟೀಕೆ ಜಾಲತಾಣದಲ್ಲಿ ಜೋರಾಗಿದೆ. ಆದರೆ ಸ್ಮಾರ್ಟ್ ಸಿಟಿ ಯೋಜನಾ ನಿರ್ದೇಶಕರು ಮಾತ್ರ ದುಂದು ವೆಚ್ಚ ಆಗಿರುವುದನ್ನು ನಿರಾಕರಿಸಿದ್ದಾರೆ.

    ಸ್ಮಾರ್ಟ್ ಸಿಟಿ ಹೆಸರಲ್ಲಿ ಬಂದ ಹಣವನ್ನು ಮಂಗಳೂರಿನಲ್ಲಿ ಅನಗತ್ಯ ಕೆಲಸಗಳಿಗಾಗಿ ವ್ಯಯಿಸಲಾಗುತ್ತಿದೆ. ಪ್ರತಿ ಸ್ಮಾರ್ಟ್ ಸಿಟಿ ಯೋಜನೆಗೂ ಐಎಎಸ್ ದರ್ಜೆಯ ಅಧಿಕಾರಿ ನೇಮಕ ಆಗಬೇಕಿದ್ದರೂ ಮಂಗಳೂರಿಗೆ ಇನ್ನೂ ಅಧಿಕಾರಿಯ ನೇಮಕ ಆಗಿಲ್ಲ. ಹೀಗಾಗಿ ಆನೆ ನಡೆದಿದ್ದೇ ದಾರಿ ಅನ್ನುವಂತೆ ಸ್ಥಳೀಯ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಜನರ ತೆರಿಗೆಯ ದುಡ್ಡನ್ನು ಪೋಲು ಮಾಡುತ್ತಿದ್ದಾರೆ. ದುಡ್ಡು ಪೋಲು ಮಾಡುತ್ತ ಸ್ಮಾರ್ಟ್ ಸಿಟಿ ಯೋಜನೆಯ ಮೂಲ ಉದ್ದೇಶಕ್ಕೆ ಮಣ್ಣೆರಚುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಹಣ ಹಾಕಿದ್ರೂ ನೀರು ಬರಲ್ಲ- ಬಾಗಿಲು ಮುಚ್ಚಿತು ಕುಡಿಯುವ ನೀರಿನ ಘಟಕ

    ಹಣ ಹಾಕಿದ್ರೂ ನೀರು ಬರಲ್ಲ- ಬಾಗಿಲು ಮುಚ್ಚಿತು ಕುಡಿಯುವ ನೀರಿನ ಘಟಕ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುನಗನಕೊಪ್ಪ ಎಸ್.ಸಿ ಕೇರಿಯಲ್ಲಿ 2017-18ನೇ ಸಾಲಿನಲ್ಲಿ ಸ್ಥಾಪನೆಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೇವಲ ಒಂದೇ ವರ್ಷದಲ್ಲಿ ಬಾಗಿಲು ಮುಚ್ಚಿದೆ. ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ, ಸಾರ್ವಜನಿಕರಿಗೆ ಉಪಯೋಗಕ್ಕೂ ಬಾರದೆ ಹಾಳು ಬಿದ್ದಿದೆ.

    ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ 8.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಹೆಗಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಜೂರು ಮಾಡಿತ್ತು.

    ಸಾರ್ವಜನಿಕರು 1 ರೂ. ನಾಣ್ಯವನ್ನು ಬಳಸಿ 20 ಲೀಟರ್ ಶುದ್ಧ ಕುಡಿಯುವ ನೀರನ್ನು ಈ ಘಟಕದಿಂದ ಪಡೆಯಲು ಸೌಲಭ್ಯವಿತ್ತು. ಆದರೆ, ಇದರ ಜವಾಬ್ದಾರಿಯನ್ನು ಪಡೆದ ಇಲಾಖೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕದ ಪ್ರಯೋಜನವನ್ನು ಸಾರ್ವಜನಿಕರಿಗೆ ದೊರೆಯದಂತೆ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

    ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿ ವರ್ಷಗಳೇ ಕಳೆದಿದೆ. ಇದುವರೆಗೂ ಜನರಿಗೆ ಮಾತ್ರ ಇದರ ಪ್ರಯೋಜನ ಸರಿಯಾಗಿ ದೊರೆಯುತ್ತಿಲ್ಲ. ಅಲ್ಲದೇ ಈ ಘಟಕಕ್ಕೆ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ. ನೀರಿನ ಘಟಕದ ನಿರ್ಮಾಣಕ್ಕೂ ಪೂರ್ವದಲ್ಲೇ ಈ ಬಗ್ಗೆ ಚಿಂತಿಸಿ, ಸೂಕ್ತ ಸ್ಥಳವನ್ನು ನಿಗದಿಗೊಳಿಸಬಹುದಿತ್ತು ಅಥವಾ ಪರ್ಯಾಯವಾಗಿ ಈಗಿರುವ ಸ್ಥಳದಲ್ಲೇ ಕೊಳವೆಬಾವಿ ಕೊರೆಸಿ, ಕುಡಿಯುವ ನೀರಿನ ಘಟಕಕ್ಕೆ ನೀರಿನ ಪೂರೈಕೆ ಮಾಡಬಹುದಿತ್ತು. ಈ ಕುರಿತು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಂಡು ಆದಷ್ಟು ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಪ್ರಯೋಜನವನ್ನು ಸಾರ್ವಜನಿಕರಿಗೆ ಲಭಿಸುವಂತೆ ಮಾಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

    ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಿರ್ಮಾಣಗೊಂಡಿರುವ ಈ ಘಟಕವನ್ನು ಇದುವರೆಗೂ ಗ್ರಾಮ ಪಂಚಾಯ್ತಿಗೆ ಹಸ್ತಾಂತರ ಮಾಡಿಲ್ಲ. ಹಸ್ತಾಂತರದ ಬಳಿಕವೇ ಪಂಚಾಯ್ತಿ ನಿರ್ವಹಣೆ ಮಾಡಬೇಕೆಂಬ ನಿಬಂಧನೆ ಇದೆ. ಇಲಾಖೆ ಇದೀಗ ಕೊಳವೆಬಾವಿ ಕೊರೆಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಗೆ ಚಿಂತನೆ ನಡೆಸಲಾಗಿದೆ ಎಂದು ಹೆಗಡೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ್ ಪಟಗಾರ ತಿಳಿಸಿದರು.

    ನಿರ್ಮಾಣಗೊಂಡು ವರ್ಷ ಕಳೆದರು ಸಾರ್ವಜನಿಕರಿಗೆ ನೀರಿನ ಘಟಕದ ಪ್ರಯೋಜನ ದೊರೆಯುತ್ತಿಲ್ಲ. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಸ್ಥಳೀಯರು ಈ ಘಟಕದ ಪ್ರಯೋಜನವನ್ನು ಪಡೆಯುವಂತಾಗಲು ಸಂಬಂಧಿಸಿದ ಇಲಾಖೆ ಶೀಘ್ರದಲ್ಲಿ ಇದನ್ನು ಬಳಕೆಗೆ ಬರುವಂತೆ ಮಾಡಬೇಕಿದೆ ಎಂದು ಹೆಗಡೆ ನಿವಾಸಿ ಲಿಂಗು ಗದ್ದೆಮನೆ ಅವರು ಹೇಳಿದರು.