Tag: officers

  • ಅಧಿಕಾರಿಗಳ ಎಡವಟ್ಟು – ಕೋಟ್ಯಂತರ ರೂ. ಖರ್ಚು ಮಾಡಿ ಕೆರೆಯಲ್ಲೇ ಗಾಜಿನ ಮನೆ ನಿರ್ಮಾಣ

    ಅಧಿಕಾರಿಗಳ ಎಡವಟ್ಟು – ಕೋಟ್ಯಂತರ ರೂ. ಖರ್ಚು ಮಾಡಿ ಕೆರೆಯಲ್ಲೇ ಗಾಜಿನ ಮನೆ ನಿರ್ಮಾಣ

    ಚಿಕ್ಕಬಳ್ಳಾಪುರ: ನಗರ ಹೊರವಲಯ ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ನಿರ್ಮಾಣ ಮಾಡಿರುವ ನೂತನ ಗಾಜಿನ ಮನೆ ತೆರವುಗೊಳಿಸಿ, ಕೆರೆಯ ಮೂಲ ಸ್ವರೂಪ ಮರುಸೃಷ್ಟಿ ಮಾಡುವಂತೆ ಲೋಕಾಯುಕ್ತ ಸಂಸ್ಥೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಆದೇಶಿಸಿದೆ.

    ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ, ಒಂದಲ್ಲ ಎರಡಲ್ಲ ಅಂತ ಸರಿ ಸುಮಾರು ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಿ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೆರೆಯಂಗಳದಲ್ಲೇ 70 ಎಕೆರೆ ಪ್ರದೇಶಕ್ಕೆ ಕಾಂಪೌಂಡ್ ಹಾಕಿ, ಅದರೊಳಗೆ ಗಾಜಿನ ಮನೆ, ಉದ್ಯಾನವನ ಎಂದು ಗಿಡ ನೆಟ್ಟು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದೆ.

    70 ಎಕೆರೆ ವಿಶಾಲವಾದ ಪ್ರದೇಶದಲ್ಲಿ ಜಿಲ್ಲಾಡಳಿತದ ಅನುದಾನದಿಂದ ಮೂರೂವರೆ ಕೋಟಿ ಖರ್ಚು ಮಾಡಿ ಸುಸಜ್ಜಿತ ಗಾಜಿನ ಮನೆ ನಿರ್ಮಾಣವಾಗಿದ್ದು, ತೋಟಗಾರಿಕಾ ಇಲಾಖೆ ವತಿಯಿಂದ ಸರಿ ಸುಮಾರು 3 ಕೋಟಿ ರೂಪಾಯಿ ಖರ್ಚು ಮಾಡಿ, 70 ಎಕೆರೆ ಪ್ರದೇಶಕ್ಕೆ ತಡೆಗೋಡೆ, ತಡೆಗೋಡೆಗೆ ಮುಖ್ಯ ದ್ವಾರ ಬಾಗಿಲು. ಅದರಲ್ಲಿ ಉದ್ಯಾನವನ ಅಭಿವೃದ್ಧಿ ಉದ್ಯಾನವನಕ್ಕೆ ನೀರೊದಗಿಸಲು ಕೊಳವೆಬಾವಿ, ಹಾಗೂ ನೀರು ಶೇಖರಿಸಲು ತೊಟ್ಟಿ, ವಾಚ್ ಗಾರ್ಡ್ ಮನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನ ನಡೆಸಲಾಗಿದೆ.

    ಆದರೆ ಕೆರೆಗಳನ್ನು ಉಳಿಸಬೇಕಾದ ಅಧಿಕಾರಿಗಳೇ ಕೆರೆಗೆ ಕಂಟಕವಾಗಿದ್ದಾರೆ ಎಂದು ಬೆಂಗಳೂರು ಮೂಲದ ನಾರಾಯಣ ಎನ್ನುವವರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಿದ್ರು. ಕೆರೆಯ ನೀರು ಮುಳುಗಡೆ ಪ್ರದೇಶವನ್ನು ಸರ್ಕಾರಿ ಖರಾಬ್ ಅಂತ ಅಧಿಕಾರಿಗಳು ದಾಖಲೆಗಳಲ್ಲಿ ತಿದ್ದಿತೀಡಿ ಅದರಲ್ಲಿ 70 ಎಕೆರೆಯನ್ನು ಉದ್ಯಾನವನ ಮಾಡಿ ಗಾಜಿನ ಮನೆ ನಿರ್ಮಾಣ ಮಾಡಿದ್ದಾರೆ ಅಂತ ನಾರಾಯಣ ಎಂಬವರು ಲೋಕಾಯುಕ್ತ ಸಂಸ್ಥೆ ಮೊರೆ ಹೋದ ಕಾರಣ, ಪರ ವಿರೋಧ ವಾದ ಆಲಿಸಿದ ಲೋಕಾಯುಕ್ತರು, ಕೆರೆಯಲ್ಲಿ ಕಾಮಗಾರಿ ಮಾಡಿದ್ದು ತಪ್ಪು ಅಂತ ಎತ್ತಿ ಹಿಡಿದಿದ್ದು, ಕೆರೆಯಂಗಳದಲ್ಲಿ ನಿರ್ಮಿಸಿರುವ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ತೆರವುಗೊಳಿಸಿ ಮೊದಲಿನಂತೆಯೇ ಕೆರೆಯನ್ನು ಮರುಸೃಷ್ಟಿಸಿ ಅಂತ ಆದೇಶ ಮಾಡಿದ್ದಾರೆ.

    ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಚಿಕ್ಕಬಳ್ಳಾಪುರ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗೆ ಪತ್ರ ಬರೆದು ಲೋಕಾಯುಕ್ತರ ಆದೇಶ ಅನುಷ್ಠಾನ ಮಾಡುವಂತೆ ಸೂಚಿಸಿದೆ. ಕೆರೆ ಹಾಗೂ ಕರೆಯಂಗಳದಲ್ಲಿ ಯಾವುದೇ ಕಾಮಗಾರಿಗಳನ್ನ ಮಾಡಬಾರದು ಎಂಬ ಕಟ್ಟುನಿಟ್ಟಿನ ಆದೇಶವಿದ್ದರೂ, ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಈಗ ಸರಿಸುಮಾರು ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರೋ ಗಾಜಿನಮನೆ ಎಲ್ಲವೂ ಕೆರೆಗೆ ಆಹಾರವಾಗಲಿದೆ ಎಂಬ ಆತಂಕ ಕಾಡುತ್ತಿದೆ.

    ಇದ್ರಿಂದ ಸದ್ಯ ಪೇಚಿಗೆ ಸಿಲಿಕಿರೋ ಅಧಿಕಾರಿಗಳು ಗಾಜಿನಮನೆ ತೆರವು ಮಾಡೋದಾ ಇಲ್ಲ ಸುಮ್ಮನಿರೋದಾ ಎಂದು ಇಕ್ಕಟ್ಟಿಗೆ ಸಿಲುಕಿ ಮೀನಾಮೇಷ ಎಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ಜನರ ತೆರಿಗೆ ಹಣದ ಆರೂವರೆ ಕೋಟಿ ಕೆರೆಯ ನೀರಿಗೆ ಹೋಮ ಮಾಡಿದಂತಾಗುತ್ತಿದೆಯಲ್ಲಾ ಎಂಬುದು ಸಹ ಬೇಸರದ ಸಂಗತಿ ಎಂದು ಸಾರ್ವಜನಿಕರು ಅಸಮಾಧಾನ ತೋಡಿಕೊಂಡಿದ್ದಾರೆ.

  • ಅಧಿಕಾರಿಗಳಿಗೆ ಶ್ರೀರಾಮುಲು ಕ್ಲಾಸ್- ಸಭೆಗೆ ಗೈರಾಗಿದ್ದ ಟಿಎಚ್‍ಓ ಸಸ್ಪೆಂಡ್‍ಗೆ ಸೂಚನೆ

    ಅಧಿಕಾರಿಗಳಿಗೆ ಶ್ರೀರಾಮುಲು ಕ್ಲಾಸ್- ಸಭೆಗೆ ಗೈರಾಗಿದ್ದ ಟಿಎಚ್‍ಓ ಸಸ್ಪೆಂಡ್‍ಗೆ ಸೂಚನೆ

    ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಹಲವು ಸಭೆಗಳಿಗೆ ಪದೇ ಪದೇ ಗೈರು ಹಾಜರಾಗುತ್ತಿದ್ದ ಮೊಳಕಾಲ್ಮೂರಿನ ಟಿಎಚ್‍ಓ ತುಳಸಿ ರಂಗನಾಥ್ ಅವರನ್ನು ಅಮಾನತುಗೊಳಿಸಲು ಸೂಚನೆ ನೀಡಿದ್ದಾರೆ.

    ಮೊಳಕಾಲ್ಮೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಟಿತವಾಗಲು ಎಇಇ ಶಿವಕುಮಾರ್ ಪವಾರ್ ಕಾರಣವಾಗಿದ್ದಾರೆ. ಅವರಿಗೆ ನೋಟಿಸ್ ನೀಡಬೇಕು ಎಂದು ಉನ್ನತ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಇದೇ ವೇಳೆ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಯಲ್ಲಿನ ಸಮಸ್ಯೆ ಕುರಿತು ತೀವ್ರ ಕಾಳಜಿವಹಿಸಿ, ಸಭೆಯಲ್ಲಿನ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಜೊತೆಗೆ ಆಸ್ಪತ್ರೆಗೆ ಅಗತ್ಯವಿರುವ ರೇಡಿಯಾಲಜಿಸ್ಟ್, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ಚರ್ಮ ರೋಗ ತಜ್ಞರು, ಫಿಸಿಯೋಥೆರಪಿಸ್ಟ್, 3 ಔಷಧ ವಿತರಕರು, 11 ಶುಶ್ರೂಷಕಿಯರು ಹಾಗೂ ಅತಿ ಮುಖ್ಯವಾಗಿ ಅಲ್ಟ್ರಾ ಸ್ಕ್ಯಾನಿಂಗ್ ಮೆಷಿನ್, ಪಲ್ಸ್ ಆಕ್ಸಿ ಮೀಟರ್, ಎಕ್ಸ್ ರೇ ಮೆಷಿನ್‍ಗಳನ್ನು ಆದಷ್ಟು ಬೇಗ ಒದಗಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಸಚಿವ ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದ ರಾಯಪುರದಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜ್ ಹಾಗೂ ಹೋಮಿಯೋಪತಿ ಕಾಲೇಜ್ ಸಹ ಸ್ಥಾಪನೆ ಮಾಡುವ ಇಂಗಿತ ವ್ಯಕ್ತಪಡಿಸಿದರು. ಪಶುಸಂಗೋಪನೆ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗೂ ಸಭೆಯಲ್ಲಿ ಮನವಿ ಮಾಡಿದಾಗ, ಸಂಪುಟದಲ್ಲಿ ಈ ಬಗ್ಗೆ ಚರ್ಚಿಸುವ ಭರವಸೆ ನೀಡಿದರು.

    ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಂಗನವಾಡಿಗಳ ಬಳಿ ನೆಲ್ಲಿಕಾಯಿ, ಸೀಬೆಕಾಯಿ, ಹುಣಸೆ ಕಾಯಿ ಮರಗಳ ಸಸಿ ನೆಟ್ಟು ಬೆಳೆಸಲು ವೈದ್ಯರ ನೀಡಿದ ಸಲಹೆ ಹಾಗೂ ಮನವಿಯನ್ನು ಸಚಿವರು ಪಡೆದರು. ಬಳಿಕ ಅಂಗನವಾಡಿಗಳ ಬಳಿ ಕುಡಿಯುವ ನೀರಿನ ಸೌಲಭ್ಯ ಜೊತೆಗೆ ಗಿಡಮರಗಳನ್ನು ಬೆಳೆಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅಂಗನವಾಡಿ ಸಿಬ್ಬಂದಿಗೆ ಗೌರವಧನ ಹಾಗೂ ಮೊಟ್ಟೆಗೆ ಹಣ ಬಿಡುಗಡೆಯಲ್ಲಿ ವಿಳಂಭವಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಸಚಿವ ಶ್ರೀರಾಮುಲು ಅವರು ಗರಂ ಆದರು.

    ಮೊಳಕಾಲ್ಮೂರು ಕ್ಷೇತ್ರದಲ್ಲಿ 1.35 ಲಕ್ಷ ಬಿಪಿಎಲ್ ಕಾರ್ಡ್ ಗಳಿವೆ. ಆದರೆ ಸಂಪೂರ್ಣ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡದ ಅಧಿಕಾರಿಗೆ ಸಚಿವರು ತರಾಟೆ ತೆಗೆದುಕೊಂಡರು. ತಕ್ಷಣ ಕಾರ್ಡ್ ವಿತರಿಸಲು ಸೂಚಿಸಿದರು. ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಬೇಡಿಕೆಗೂ ಸ್ಪಂದಿಸಿದ ಅವರು, ವಿದ್ಯಾರ್ಥಿಗಳ ಹಾಸ್ಟೆಲ್ ಪೂರ್ಣಗೊಂಡ ಬಳಿಕ ಆರಂಭಿಸುವ ಭರವಸೆ ನೀಡಿದರು.

    ಭಾಗ್ಯ ಲಕ್ಷ್ಮಿ ಬಾಂಡ್ ವಿತರಣೆ ಮತ್ತೆ ಆರಂಭ:
    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಈ ಹಿಂದೆ ಜಾರಿಗೆ ತರಲಾಗಿದ್ದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ವಿಳಂಬದ ಬಗ್ಗೆ ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು. ಆಗ ಅವರ ಮಾತಿಗೆ ಉತ್ತರಿಸಿದ ಅಧಿಕಾರಿಗಳು, 2015-16ರಿಂದ ಈಚೆಗೆ ವಿತರಣೆ ಆಗಿರಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಬಾಂಡ್ ವಿತರಿಸುತ್ತಿರುವುದಾಗಿ ತಿಳಿಸಿದರು.

    ದೇವರಾಜ ಅರಸು ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆ ಆಗಿದೆ. ಕೆಲಸ ಕೂಡ ನಡೆಯುತ್ತಿದ್ದು, ಉಳಿದ 50 ಲಕ್ಷ ರೂ. ಬಿಡುಗಡೆಗೆ ಅಧಿಕಾರಿಗಳಿಂದ ಮನವಿ ಸಲ್ಲಿಸಲಾಯಿತು. ಆಗ ಸಚಿವರು ತಕ್ಷಣ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು.

    ಗಡಿಭಾಗದ ಅಧಿಕಾರಿಗಳು ನಿಷ್ಠೆ ಹಾಗೂ ಬದ್ಧತೆಯಿಂದ ಕೆಲಸ ಮಾಡಬೇಕು. ತಾಲೂಕು ಕೇಂದ್ರಗಳಲ್ಲಿರುವ ಅಧಿಕಾರಿಗಳು ಹೆಡ್ ಕ್ವಾರ್ಟರ್ಸ್ ನಲ್ಲಿಯೇ ಉಳಿಯಬೇಕು. ಒಂದು ವೇಳೆ ಸರಿಯಾಗಿ ಕೆಲಸ ಮಾಡಲು ಆಗದವರು ಹೊರಗಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಬಾರದ ರೀತಿ ಜನರಿಗೆ ಸ್ಪಂದಿಸಬೇಕು, ಜನರ ಕೆಲಸ ಮಾಡಬೇಕು ಎಂದು ಸಚಿವ ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದರು.

  • ಮಧ್ಯರಾತ್ರಿ ಅಕ್ರಮ ಗಣಿಗಾರಿಕೆ ಅಡ್ಡೆ ಮೇಲೆ ದಾಳಿ – 8 ವಾಹನ ವಶ

    ಮಧ್ಯರಾತ್ರಿ ಅಕ್ರಮ ಗಣಿಗಾರಿಕೆ ಅಡ್ಡೆ ಮೇಲೆ ದಾಳಿ – 8 ವಾಹನ ವಶ

    ಚಿಕ್ಕಬಳ್ಳಾಪುರ: ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಗಣಿ ಹಾಗೂ ಭೂ ವಿಜ್ಞಾನ ಇಲಾಖಾಧಿಕಾರಿಗಳು, ಅಕ್ರಮ ಗಣಿಗಾರಿಕೆಗೆ ಬಳಸುತ್ತಿದ್ದ 8 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ತಾಲೂಕು ಚಿಕ್ಕನಾಗವಲ್ಲಿ ಗ್ರಾಮದ ಬಳಿಯ ಬೆಟ್ಟದಲ್ಲಿ, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಕ್ವಾರಿ ಮೇಲೆ ದಾಳಿ ನಡೆಸಿ, 5 ಟಿಪ್ಪರ್ ಗಳು, 1 ಕಂಪ್ರೈಸರ್ ವಾಹನ, 2 ಜೆಸಿಬಿ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಾಗರ್ ಮಂಜು ಎಂಬಾತ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದನೆ ಎಂಬ ಆರೋಪ ಕೇಳಿ ಬಂದಿದ್ದು, ಈಗ ಈತ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

    ಸಾಗರ್ ಮಂಜು ವಿರುದ್ಧ ಅಕ್ಕ ಪಕ್ಕದ ಗುತ್ತಿಗೆದಾರರು ಹಾಗೂ ಸಾರ್ವಜನಿಕರು ದೂರು ನೀಡಿದ್ದು, ಈ ಸಂಬಂಧ ತಡರಾತ್ರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ವಾಹನಗಳನ್ನು ಬಿಟ್ಟು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಖದೀಮರು ಪರಾರಿಯಾಗಿದ್ದಾರೆ.

  • ದಸರಾ ಕ್ರೀಡಾಪಟುಗಳ ನಗದು ಬಹುಮಾನ ವಿಳಂಬ- ಒಂದೇ ದಿನದಲ್ಲಿ ಸಚಿವ ಸೋಮಣ್ಣ ಇತ್ಯರ್ಥ

    ದಸರಾ ಕ್ರೀಡಾಪಟುಗಳ ನಗದು ಬಹುಮಾನ ವಿಳಂಬ- ಒಂದೇ ದಿನದಲ್ಲಿ ಸಚಿವ ಸೋಮಣ್ಣ ಇತ್ಯರ್ಥ

    ಮೈಸೂರು: ದಸರಾ ಮುಗಿದು ಮೂರು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ದಸರಾ ಕ್ರೀಡಾಕೂಟದಲ್ಲಿ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲು ವಿಳಂಬ ಮಾಡಿದ್ದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಬೆವರಳಿಸಿದ ಕೆಲವೇ ಗಂಟೆಗಳಲ್ಲಿ ಪ್ರಶಸ್ತಿಯ ನಗದು ಹಣ ಬಿಡುಗಡೆಯಾಗಿದೆ.

    ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿದ್ದ ಕ್ರೀಡಾಪಟುಗಳಿಗೆ ಬಹುಮಾನದ ಹಣವನ್ನು ಈವರೆಗೆ ಬಿಡುಗಡೆ ಮಾಡಿರಲಿಲ್ಲ. ಶುಕ್ರವಾರ ಬೆಳಗ್ಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸಿದ್ದ ಸಚಿವರ ಗಮನಕ್ಕೆ ಈ ವಿಷಯ ಬಂತು. ಬಹುಮಾನ ಹಣ ಪಾವತಿಸಲು ವಿಳಂಬ ಮಾಡಿದ್ದ ಅಧಿಕಾರಿಗಳಿಗೆ ಸ್ಥಳದಲ್ಲೇ ತರಾಟೆ ತೆಗೆದುಕೊಂಡಿದ್ದು, ಸಚಿವರು ತಕ್ಷಣ ಸಮಸ್ಯೆ ಇತ್ಯರ್ಥ ಆಗಬೇಕು ಎಂದು ತಾಕೀತು ಮಾಡಿದರು.

    ಅಷ್ಟೇ ಅಲ್ಲದೇ ಈ ಸಮಸ್ಯೆ ಇತ್ಯರ್ಥಕ್ಕೆ ಬೇಕಾದ 54 ಲಕ್ಷ ರೂ. ಅನುದಾನವನ್ನು ಸಚಿವರು ಸಂಜೆಯೊಳಗೆ ಬಿಡುಗಡೆ ಮಾಡಿಸಿದ್ದಾರೆ. ದಸರಾ ಕ್ರೀಡಾಕೂಟದ 1,451 ವಿಜೇತರಿಗೆ ಬಹುಮಾನ ಹಣವನ್ನು ನೀಡಬೇಕಾಗಿತ್ತು. ಈ ಪೈಕಿ 726 ವೈಯಕ್ತಿಕ ಬಹುಮಾನಗಳು ಹಾಗೂ 725 ಗುಂಪು ಸ್ಪರ್ಧೆ ಬಹುಮಾನಗಳು ಸೇರಿವೆ. ಈ ಎಲ್ಲರ ಬ್ಯಾಂಕ್ ಖಾತೆಗೆ ಈಗ ಹಣ ವರ್ಗಾವಣೆ ಆಗುತ್ತಿದೆ.

    ಎಲ್ಲಾ ಬಹುಮಾನದ ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ಫಲಾನುಭವಿಗಳ ಖಾತೆಗೆ ಕೂಡಲೇ ವರ್ಗಾಯಿಸಲಾಗುವುದು. ಕ್ರೀಡಾಪಟುಗಳು ಆತಂಕಪಡಬೇಕಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಕ್ರೀಡಾಕೂಟಕ್ಕೆ ಊಟೋಪಚಾರ ಸರಬರಾಜು ಮಾಡಿದವರಿಗೂ ಬಿಲ್ ಬಾಕಿ ಇದ್ದು, ಅದನ್ನೂ ಕೂಡ ಕೂಡಲೇ ಪಾವತಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

  • ಪುರಸಭೆ ಅಧಿಕಾರಿಗಳಿಂದ ಮಾಂಸದಂಗಡಿಗಳ ಮೇಲೆ ದಾಳಿ – ಅಂಗಡಿ ಮಾಲೀಕರಿಗೆ ಎಚ್ಚರಿಕೆ

    ಪುರಸಭೆ ಅಧಿಕಾರಿಗಳಿಂದ ಮಾಂಸದಂಗಡಿಗಳ ಮೇಲೆ ದಾಳಿ – ಅಂಗಡಿ ಮಾಲೀಕರಿಗೆ ಎಚ್ಚರಿಕೆ

    ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿನ ಮಾಂಸದಂಗಡಿಗಳು, ಮದ್ಯದಂಗಡಿಗಳು ಸೇರಿದಂತೆ ಇತರ ಅಂಗಡಿಗಳ ಮೇಲೆ ಪುರಸಭೆಯ ಅಧಿಕಾರಿಗಳು ದಾಳಿ ನಡೆಸಿ ಅಂಗಡಿ ಮಾಲೀಕರಿಗೆ ಶುಚಿತ್ವಕ್ಕೆ ಗಮನ ನೀಡದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಕೆಆರ್ ಪೇಟೆ ವ್ಯಾಪ್ತಿಯಲ್ಲಿ ಬರುವ ಹಲವು ಮಾಂಸದ ಅಂಗಡಿಗಳು, ಮದ್ಯದ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳಲ್ಲಿನ ತ್ಯಾಜ್ಯಗಳಗಳನ್ನು ಪಟ್ಟಣದ ಸಮೀಪವಿರುವ ದೇವೀರಮ್ಮಣ್ಣಿ ಕೆರೆಗೆ ಸುರಿಯುತ್ತಿದ್ದಾರೆ. ಇದರಿಂದ ಕೆರೆಯ ಸೌಂದರ್ಯ ಹಾಳು ಮಾಡುವುದರ ಜೊತೆಗೆ ಪರಿಸರವನ್ನು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಪುರಸಭೆಗೆ ಸಾರ್ವಜನಿಕರು ದೂರು ನೀಡಿದ್ದರು. ದೂರಿನ ಅನ್ವಯ ಇಂದು ಪುರಸಭೆಯ ಅಧಿಕಾರಿಗಳು ಪಟ್ಟಣದ ಹಲವು ಅಂಗಡಿಗಳಿಗೆ ದಾಳಿ ಮಾಡಿದ್ದಾರೆ.

    ದಾಳಿ ಮಾಡಿ ಅಂಗಡಿಗಳಲ್ಲಿ ಇದ್ದ ಪ್ಲಾಸ್ಟಿಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಬೀದಿಗಳಲ್ಲಿ ಸುರಿದಿರುವ ಕಸದ ರಾಶಿಗಳತ್ತ ಅಂಗಡಿ ಮಾಲೀಕರನ್ನು ಕರೆದುಕೊಂಡು ಹೋಗಿ ತರಾಟಗೆ ತೆಗೆದುಕೊಂಡಿದ್ದಾರೆ. ನಗರ ಸ್ವಚ್ಛವಾಗಿ ಇರಬೇಕು ಅಂದ್ರೆ, ಮೊದಲು ನೀವು ಶುಚಿತ್ವ ಕಾಪಾಡಿಕೊಳ್ಳಬೇಕು. ಅದನ್ನು ಬಿಟ್ಟು ಹೀಗೆ ಮಾಡಿದರೆ ಪಟ್ಟಣ ಗಲೀಜಾಗಿ ಇರುತ್ತದೆ. ಇನ್ನೂ ಮುಂದೆ ಕೆರೆಯ ಬಳಿ ಹಾಗೂ ರಸ್ತೆಗಳಲ್ಲಿ ಕಸ ಹಾಕಿದ್ದು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

  • ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಸಹಕರಿಸುವ ಅಧಿಕಾರಿಗಳ ಬ್ಲಾಕ್ ಲಿಸ್ಟ್‌ಗೆ  ಸೇರಿಸಿ: ಪ್ರತಾಪ್ ಸಿಂಹ

    ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಸಹಕರಿಸುವ ಅಧಿಕಾರಿಗಳ ಬ್ಲಾಕ್ ಲಿಸ್ಟ್‌ಗೆ  ಸೇರಿಸಿ: ಪ್ರತಾಪ್ ಸಿಂಹ

    ಮೈಸೂರು: ಕೆಲ ಅಧಿಕಾರಿಗಳು ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಸಹಕರಿಸುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಪಟ್ಟಿಮಾಡಿ ಬ್ಲಾಕ್ ಲಿಸ್ಟ್ ಗೆ ಸೇರಿಸಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

    ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇವತ್ತು ನಡೆದ ಕೆ.ಡಿ.ಪಿ ಸಭೆಯಲ್ಲಿ ಸಚಿವ ಸೋಮಣ್ಣರಿಗೆ ಸಂಸದ ಪ್ರತಾಪ್ ಸಿಂಹ ಈ ಮನವಿ ಮಾಡಿದರು. ಆರೇಳು ವರ್ಷದಿಂದ ಅಧಿಕಾರಿಗಳು ಇಲ್ಲೆ ಬೇರು ಬಿಟ್ಟಿದ್ದಾರೆ. ಇದರಿಂದ ಸರ್ಕಾರಿ ಕೆಲಸಗಳು ಸರಿಯಾಗಿ ಜಾರಿ ಆಗುತ್ತಿಲ್ಲ. ಈ ಜಿಲ್ಲೆಯವರೆ ಸಿಎಂ ಆಗಿದ್ದರು ಎಸ್‍ಎಸ್‍ಎಲ್‍ಸಿ ಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಜಿಲ್ಲೆಗೆ ದಕ್ಷ ಅಧಿಕಾರಿಗಳು ನೇಮಿಸಿ ಎಂದರು.

    ಇದೇ ವೇಳೆ ಪ್ರತಾಪ್ ಸಿಂಹ ಜಿಪಂ ಅನುದಾನವನ್ನು ಹೆಚ್ಚು ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದರು. ಒಂದು ವರ್ಷದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿದೆ. ಕೆಲಸ ಮಾಡದೆ ಜಿ.ಪಂ ಚುನಾವಣೆಗೆ ಜನರ ಮುಂದೆ ಹೇಗೆ ಹೋಗೋಕೆ ಆಗುತ್ತದೆ? ಹಿಂದೆ ಪ್ರತಿ ಸದಸ್ಯರಿಗೆ 60 ಲಕ್ಷ ಅನುದಾನ ಸಿಕ್ತಿತ್ತು. ಆದರೆ ಈಗ ಅನುದಾನ ಕಡಿತವಾಗಿದೆ. ಸಿಎಂಗೆ ಈ ವಿಚಾರದ ಬಗ್ಗೆ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.

  • ಪಬ್ಲಿಕ್ ಟಿವಿ ಸುದ್ದಿಗೆ ಫಲಶ್ರುತಿ – ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿದ ಅಧಿಕಾರಿಗಳು

    ಪಬ್ಲಿಕ್ ಟಿವಿ ಸುದ್ದಿಗೆ ಫಲಶ್ರುತಿ – ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿದ ಅಧಿಕಾರಿಗಳು

    ಮಡಿಕೇರಿ: ಗುರುವಾರ ಪಬ್ಲಿಕ್ ಟಿವಿ ವೆಬ್‍ನಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆಯಲ್ಲಿ ಉಪಯೋಗಕ್ಕೆ ಬಾರದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹ ಎಂದು ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸರಿಪಡಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮುಂದಾಗಿದ್ದಾರೆ.

    ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಿಂದಲೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂದು ಗುರುವಾರ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ವರದಿಯಾಗಿತ್ತು. ಅಲ್ಲದೆ ಕೊಡಗಿನ ಅನೇಕ ವಾಟ್ಸಾಪ್ ಗ್ರೂಪ್ ನಲ್ಲಿ ಚರ್ಚೆ ಆಗಿತ್ತು.  ಇದನ್ನೂ ಓದಿ: ಕೂಡಿಗೆಯಲ್ಲಿ ನೀರಿನ ಘಟಕವಿದ್ರೂ ಪ್ರಯೋಜನವಿಲ್ಲ – ಮೂರು ತಿಂಗಳಿಂದ ಜನರ ಪರದಾಟ

    ಈ ವರದಿಯಿಂದ ಎಚ್ಚೇತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸುತ್ತಿದ್ದಾರೆ. ಏನೇ ಆಗಲಿ ಈ ವ್ಯಾಪ್ತಿಯ ಗ್ರಾಹಕರು ಕಾರ್ಡನ್ನು ಗ್ರಾಮ ಪಂಚಾಯಿತಿಗೆ ಹಿಂತಿರುಗಿಸಲು ನಿರ್ಧರಿಸಿದರು. ಆದರೆ ಗುರುವಾರ ವರದಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಲು ಮುಂದಾಗಿದ್ದಾರೆ.

    ಸದ್ಯ ಪಬ್ಲಿಕ್ ಟಿವಿ ವರದಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕೂಡಿಗೆಯಲ್ಲಿ ನೀರಿನ ಘಟಕವಿದ್ರೂ ಪ್ರಯೋಜನವಿಲ್ಲ – ಮೂರು ತಿಂಗಳಿಂದ ಜನರ ಪರದಾಟ

    ಕೂಡಿಗೆಯಲ್ಲಿ ನೀರಿನ ಘಟಕವಿದ್ರೂ ಪ್ರಯೋಜನವಿಲ್ಲ – ಮೂರು ತಿಂಗಳಿಂದ ಜನರ ಪರದಾಟ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳುಗಳಿಂದ ಶುದ್ಧ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಅಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಶುದ್ಧ ನೀರಿನ ಘಟಕ ಮೂರು ತಿಂಗಳುಗಳಿಂದ ಸ್ಥಗಿತಗೊಂಡಿದೆ.

    ಈ ವ್ಯಾಪ್ತಿಯ ಗ್ರಾಮಸ್ಥರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುತ್ತಾ ಬಂದಿದ್ದರೂ ಯಾರೂ ಇದನ್ನು ಸರಿಪಡಿಸಲು ಮುಂದಾಗಿಲ್ಲ. ಸಮಸ್ಯೆ ಹೇಳಿದರೆ ಬೇಜವಾಬ್ದಾರಿ ಉತ್ತರವನ್ನು ನೀಡುತ್ತಿದ್ದಾರೆ ಎಂದು ಕೂಡಿಗೆ ಗ್ರಾಮಸ್ಥರು ಆರೋಪಿಸಿದರು. ಇದನ್ನೂ ಓದಿ: ಅಶುದ್ಧಗೊಂಡಿದೆ ಶುದ್ಧ ಕುಡಿಯುವ ನೀರಿನ ಘಟಕ

    ಇದೇ ಸಂದರ್ಭದಲ್ಲಿ ಮಾತನಾಡಿದ ಕೂಡಿಗೆ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷರಾದ ಕೆ.ಎಸ್ ಕಾಂತರಾಜ್ ಅವರು, ಕಳೆದ ಎರಡು ವರ್ಷಗಳ ಹಿಂದೆ ಕೂಡಿಗೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡಿದೆ. ಆದರೆ ಇಲ್ಲಿಯ ಜನರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಗ್ರಾಮ ಪಂಚಾಯ್ತಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರನ್ನು ಪಡೆಯಲು ಕಾರ್ಡನ್ನು ವಿತರಿಸಲಾಯಿತು. ಆದರೆ ಸಮರ್ಪಕವಾಗಿ ನೀರು ದೊರಕದ ಕಾರಣ ಗ್ರಾಮಸ್ಥರು ಕಾರ್ಡನ್ನು ಗ್ರಾಮ ಪಂಚಾಯ್ತಿಗೆ ಹಿಂತಿರುಗಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

    ಮಳೆಗಾಲ ಪ್ರಾರಂಭವಾದರೂ ಮಳೆಯಾಗದ ಕಾರಣ ಈ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರು ಕುಡಿಯುವ ನೀರಿನ ಘಟಕದಿಂದ ಕಾರ್ಡನ್ನು 300 ರೂ. ಕೊಟ್ಟು ಗ್ರಾಮ ಪಂಚಾಯ್ತಿಯಲ್ಲಿ ತೆಗೆದುಕೊಂಡಿದ್ದಾರೆ. ಆದರೆ ಜನರಿಗೆ ಯಾವುದೇ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಇಷ್ಟಾದರೂ ಕೂಡಿಗೆ ಗ್ರಾಮ ಪಂಚಾಯ್ತಿ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನಾದರೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾರ್ವಜನಿಕರ ಉಪಯೋಗಕ್ಕೆ ಬರುವ ರೀತಿಯಲ್ಲಿ ಆದಷ್ಟು ಬೇಗನೆ ಸರಿಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

  • ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಒತ್ತಡ ಹೇರಲ್ಲ: ಶರತ್ ಬಚ್ಚೇಗೌಡ

    ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಒತ್ತಡ ಹೇರಲ್ಲ: ಶರತ್ ಬಚ್ಚೇಗೌಡ

    – ಅಧಿಕಾರಿಗಳು ಪಕ್ಷಪಾತ ತೋರದೆ ಕೆಲಸ ನಿರ್ವಹಿಸಿ

    ಬೆಂಗಳೂರು: ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಯಾವುದೇ ಅಧಿಕಾರಿಯ ಮೇಲೆ ಒತ್ತಡ ತರುವುದಿಲ್ಲ. ಅಧಿಕಾರಿಗಳು ಸಹ ಪಕ್ಷಪಾತ ಮಾಡದೆ ಕೆಲಸ ಮಾಡಿ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಮನವಿ ಮಾಡಿಕೊಂಡಿದ್ದಾರೆ.

    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳು ಸಂಬಂಧಪಟ್ಟ ಪಲಾನುಭವಿಗೆ ತಲುಪಬೇಕು. ಇದರಲ್ಲಿ ಯಾರದೋ ಕೈವಾಡವಾಗಲಿ ರಾಜಕೀಯವಾಗಿಲಿ ಮಾಡುವುದು ಬೇಡ. ನಾನು ಸಹ ಅಭಿವೃದ್ಧಿಯ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ರಾಜಕೀಯ ಮಾಡದೇ ಕೆಲಸ ಮಾಡೋಣ. ಈಗಾಗಲೇ ತಾಲೂಕು ಪಂಚಾಯಿತಿ ಹಂತದಲ್ಲಿ ಸಾಕಷ್ಟು ಕೆಲಸ ನಡೆಯುತ್ತಿದ್ದು, ಇದಕ್ಕಾಗಿ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

    ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ತಾಲೂಕಿನಲ್ಲಿ ಈವರೆಗೆ ಶೇ.69.94ರಷ್ಟು ಕೆಲಸವಾಗಿದ್ದು, ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅಧಿಕ ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಗೌಡ ತಿಳಿಸಿದರು. ತಾಲೂಕಿನಲ್ಲಿ 268 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 8 ಮಾತ್ರ ಕೆಲಸ ಮಾಡುತ್ತಿಲ್ಲ. ಉಳಿದಂತೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.

    ತಾಲೂಕಿನ ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಊರಿನ ಎಲ್ಲ ಬೀದಿ ದೀಪಗಳಿಗೂ ಸೋಲಾರ್ ಕರೆಂಟ್ ಅಳವಡಿಸಿದ್ದು, ಇದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡೆಸಿದರು. ನೀರಿಗೆ ಹೆಚ್ಚು ಒತ್ತು ಕೊಟ್ಟು ಕೆಲಸಮಾಡಿ, ನೀರಿನ ಸಮಸ್ಯೆ ಬಗೆಹರಿಸಿವಂತೆ ಅಧಿಕಾರಿಗಳಿಗೆ ಸೂಚಿಸಿದರು.

  • ಕಂಠಪೂರ್ತಿ ಕುಡಿದು ಹಿರಿಯ ಅಧಿಕಾರಿಗಳಿಗೇ ಅವಾಜ್ ಹಾಕೋ ಡಿ ಗ್ರೂಪ್ ನೌಕರ

    ಕಂಠಪೂರ್ತಿ ಕುಡಿದು ಹಿರಿಯ ಅಧಿಕಾರಿಗಳಿಗೇ ಅವಾಜ್ ಹಾಕೋ ಡಿ ಗ್ರೂಪ್ ನೌಕರ

    – ವಿಡಿಯೋ ಮಾಡಿ ಈತನ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ಆಗ್ರಹ

    ಬೆಂಗಳೂರು: ಪ್ರತಿ ದಿನವೂ ಡಿ ಗ್ರೂಪ್ ನೌಕರನೋರ್ವ ಕಂಠಪೂರ್ತಿ ಕುಡಿದು ಹಿರಿಯ ಅಧಿಕಾರಿಗಳಿಗೆ ಕ್ಯಾರೆ ಅನ್ನದೇ ಅವಾಜ್ ಹಾಕುತ್ತಾನೆ. ನಿತ್ಯವು ಈತನ ರಂಪಾಟದಿಂದ ಬೇಸತ್ತ ಅಧಿಕಾರಿಗಳು ವಿಡಿಯೋ ಮಾಡಿ ಈತನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

    ಪ್ರತಿನಿತ್ಯ ಕಂಠಪೂರ್ತಿ ಕುಡಿದು ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರನ್ನ ಹಿಗ್ಗಾಮುಗ್ಗಾ ನಿಂದಿಸುವ ಡಿ ಗ್ರೂಪ್ ನೌಕರನ ಹೆಸರು ಸುರೇಶ್. ಈತ ಬೆಂಗಳೂರು ಹೊರವಲಯದ ನೆಲಮಂಗಲ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಕಚೇರಿಯಲ್ಲಿ ಈತನ ದರ್ಬಾರ್ ಮೀತಿ ಮೀರಿದೆ. ಕೆಲಸದ ಸಮಯದಲ್ಲೇ ಕಾಲು ಮೇಲೆ ಕಾಲು ಹಾಕಿ ಹಿರಿಯ ಅಧಿಕಾರಿಗೆ ಧಮ್ಕಿ ಹಾಕುವುದು, ಮಹಿಳಾ ಅಧಿಕಾರಿಗಳ ಮುಂದೆ ಅಸಭ್ಯ ವರ್ತನೆ ತೋರುವುದೇ ಈತನ ನಿತ್ಯ ಕೆಲಸವಾಗಿದೆ.

    ಬೆಳ್ಳಂಬೆಳಗ್ಗೆಯೇ ಕೆಲಸಕ್ಕೆ ಕುಡಿದು ಬರುವ ಸುರೇಶ್ ರಂಪಾಟದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಆತನ ಕಾಟಕ್ಕೆ ಯಾರೂ ಬ್ರೇಕ್ ಹಾಕುತ್ತಿಲ್ಲ. ಈತನ ಬಗ್ಗೆ ಹೀಗಾಗಲೇ ಇತರೇ ಸಿಬ್ಬಂದಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳು ಹಿಂದೇಟು ಹಾಕಿದ್ದಾರೆ.

    ಪ್ರತಿ ನಿತ್ಯವೂ ಈತನ ರಂಪಾಟದಿಂದ ಕಚೇರಿಯಲ್ಲಿರುವ ಅಧಿಕಾರಿಗಳು ಮಾತ್ರ ಬೇಸತ್ತಿದ್ದಾರೆ. ಈತನ ರಂಪಾಟ ತಾಳಲಾರದೆ ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ, ಈಗಲಾದರೂ ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.