Tag: officers

  • ಜಿ.ಪಂ ಬಾಗಿಲಲ್ಲಿ ನಾಗರಹಾವು ಕಾವಲು-ಅಧಿಕಾರಿಗಳು ಕಂಗಾಲು

    ಜಿ.ಪಂ ಬಾಗಿಲಲ್ಲಿ ನಾಗರಹಾವು ಕಾವಲು-ಅಧಿಕಾರಿಗಳು ಕಂಗಾಲು

    ರಾಮನಗರ: ಜಿಲ್ಲಾ ಪಂಚಾಯತ್‍ನ ಮುಂಭಾಗದ ಪಿಲ್ಲರ್ ಬಳಿ ಮೂರಡಿ ಉದ್ದದ ನಾಗರಹಾವು ಪ್ರತ್ಯೇಕ್ಷವಾಗಿ ಅಧಿಕಾರಿಗಳು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೇ ಕಚೇರಿಗೆ ಪ್ರವೇಶ ಮಾಡಲು ಹೆದರಿ ಮತ್ತೊಂದು ಗೇಟ್ ಮೂಲಕ ಪ್ರವೇಶಿಸುವಂತಹ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿತ್ತು.

    ಪಂಚಾಯತ್ ಕಟ್ಟಡದ ಕಚೇರಿಯೊಳಗೆ ಹೋಗುತ್ತಿದ್ದ ಸಾರ್ವಜನಿಕರ ಕಣ್ಣಿಗೆ ನಾಗರ ಹಾವು ಕಾಡಿಸಿಕೊಂಡಿದೆ. ವಿಚಾರ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸಹ ಭಯಬೀತರಾಗಿದ್ದರು. ದಿನನಿತ್ಯ ಇಲ್ಲೇ ಓಡಾಡುತ್ತಿದ್ದೇವೆ ಈ ದಿನ ಎಲ್ಲಿಂದ ಬಂತು, ನಾನು ಇಲ್ಲೇ ಆಗಲೇ ಕಚೇರಿ ಒಳಗೆ ಹೋದ ಕಚ್ಚಿದ್ದರೆ ಅಷ್ಟೇ ಎಂದು ತಮ್ಮ ಸಹೋದ್ಯೋಗಿಗಳ ಬಳಿ ಆತಂಕ ವ್ಯಕ್ತಪಡಿಸಿದ್ದರು.

    ಕಚೇರಿಯ ಮುಂಭಾಗ ಹಾವು ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದು, ಉರಗ ತಜ್ಞರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಯುವಕ ಹಾವನ್ನ ರಕ್ಷಿಸಿ ಗೋಣಿಚೀಲದಲ್ಲಿ ಹಾಕಿಕೊಂಡು ಹೋಗಿದ್ದಾನೆ. ಬಳಿಕ ನಾಗರ ಹಾವನ್ನ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಡಲಾಗಿದೆ.

  • ರಾಯಚೂರಿನ ಸಾರಿಗೆ ಸಿಬ್ಬಂದಿ ಕಷ್ಟಕ್ಕೆ ಸಿಕ್ಕಿತು ಪರಿಹಾರ – ಪಬ್ಲಿಕ್ ಟಿವಿ ವರದಿಗೆ ಅಧಿಕಾರಿಗಳ ಸ್ಪಂದನೆ

    ರಾಯಚೂರಿನ ಸಾರಿಗೆ ಸಿಬ್ಬಂದಿ ಕಷ್ಟಕ್ಕೆ ಸಿಕ್ಕಿತು ಪರಿಹಾರ – ಪಬ್ಲಿಕ್ ಟಿವಿ ವರದಿಗೆ ಅಧಿಕಾರಿಗಳ ಸ್ಪಂದನೆ

    ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದ ಅವ್ಯವಸ್ಥೆ ಹಾಗೂ ರಾತ್ರಿ ತಂಗುವ ಸಿಬ್ಬಂದಿ ನರಕಯಾತನೆ ಕುರಿತ ಪಬ್ಲಿಕ್ ಟಿವಿ ವರದಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಪಂದಿಸಿದೆ. ಶೀಘ್ರದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ರಾಯಚೂರು ಬಸ್ ನಿಲ್ದಾಣದಲ್ಲಿ ರಾತ್ರಿ ವಸತಿ ಮಾಡುವ ಸಾರಿಗೆ ಸಿಬ್ಬಂದಿಗಳಿಗೆ ಮಲಗಲು ಸುರಕ್ಷಿತ ಸ್ಥಳವಿಲ್ಲದೇ ಬಸ್‍ನಲ್ಲಿಯೇ ಸಿಬ್ಬಂದಿ ಸೊಳ್ಳೆ ಕಾಟದಲ್ಲಿ ಮಲಗುತ್ತಾರೆ. ಪ್ರಯಾಣಿಕರ ಟಿಕೆಟ್ ದುಡ್ಡಿಗೆ ಸುರಕ್ಷತೆಯಿಲ್ಲ. ಕುಡಿಯಲು ನೀರು, ಸ್ನಾನಕ್ಕೆ ಕೋಣೆ, ಶೌಚಾಲಯವೂ ಸರಿಯಾಗಿಲ್ಲ ಎನ್ನುವುದರ ಕುರಿತು ರಾಯಚೂರು ಕೇಂದ್ರ ಬಸ್ ನಿಲ್ದಾಣದಲ್ಲಿನ ರಾತ್ರಿ ವಸತಿಯ ದುಸ್ಥಿತಿ ಬಗ್ಗೆ ವಿವರಿಸಲಾಗಿತ್ತು. ಇದಕ್ಕೆ ಸ್ಪಷ್ಟಿಕರಣ ನೀಡಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಾರಿಗೆ ಸಿಬ್ಬಂದಿ ಘಟಕಕ್ಕೆ ತೆರಳಿ ಸೌಲಭ್ಯವನ್ನು ಉಪಯೋಗಿಸಿಕೊಳ್ಳದೇ ಬಸ್ ನಿಲ್ದಾಣದಲ್ಲಿ ವಸತಿ ಮಾಡುತ್ತಿದ್ದಾರೆ ಹಾಗೂ ಕೆಲವೊಂದು ಸಿಬ್ಬಂದಿ ಬಸ್ ನಿಲ್ದಾಣದ ಮತ್ತು ಘಟಕಗಳು ಸಮೀಪವಿಲ್ಲದ ಕಾರಣದಿಂದ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದಾರೆ ಎಂದಿದ್ದಾರೆ. ಜೊತೆಗೆ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಗೆ ರೆಸ್ಟ್ ರೂಂ ಹಾಗೂ ಇತರೆ ಸೌಲಭ್ಯಗಳು ಇಲ್ಲದೇ ಇರುವುದನ್ನು ಒಪ್ಪಿಕೊಂಡಿದ್ದಾರೆ.

    2018-19ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯ ಹೊಸ ಕಾಮಗಾರಿಗಳ ಕ್ರಿಯಾ ಯೋಜನೆ ಅಡಿಯಲ್ಲಿ ರಾಯಚೂರು ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು 75 ಲಕ್ಷ ಮಂಜೂರಾಗಿತ್ತು. ಮಂಜೂರಾದ ಮೊತ್ತದಲ್ಲಿ ಬಸ್ ನಿಲ್ದಾಣದ ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಬಾಕಿ ಉಳಿದ ಆವರಣಕ್ಕೆ ಕಾಂಕ್ರೀಟ್, ಬಸ್ ನಿಲ್ದಾಣ ಮುಖ್ಯ ಕಟ್ಟಡದ ಮೊದಲನೇ ಅಂತಸ್ತಿನ ಎಡಭಾಗದಲ್ಲಿ ಸಿಬ್ಬಂದಿಗಳಿಗೆ ವಿಶ್ರಾಂತಿ ಗೃಹವನ್ನು ಶೌಚಾಲಯಗಳನ್ನೊಳಗೊಂಡಂತೆ ಮತ್ತು ಬಸ್ ನಿಲ್ದಾಣ ಮುಖ್ಯ ಕಟ್ಟಡಕ್ಕೆ ಸುಣ್ಣ-ಬಣ್ಣ ಹಾಗೂ ಹಾಲಿ ಇರುವ ಸೈಕಲ್ ಸ್ಟಾಂಡ್‍ನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಿದೆ ಮತ್ತು ವಿದ್ಯುತ್ ಕೆಲಸವನ್ನು ನಿರ್ವಹಿಸಲು ಯೋಜಿಸಲಾಗಿದೆ. ಆದರೆ 4 ಬಾರಿ ಟೆಂಡರ್ ಕರೆಯಲಾಗಿದ್ದು, 3 ಟೆಂಡರ್ ನಲ್ಲಿ ಗುತ್ತಿಗೆದಾರರು ಭಾಗವಹಿಸಿರುವುದಿಲ್ಲ ಕಾರಣ ಕಾಮಗಾರಿ ಕೆಲಸವನ್ನು ಕೈಗೆತ್ತಿಕೊಳ್ಳುವಲ್ಲಿ ವಿಳಂಭವಾಗಿದೆ. ಮತ್ತು 4ನೇ ಟೆಂಡರ್ ನಲ್ಲಿ ಭಾಗವಹಿಸಿದ ಗುತ್ತಿಗೆದಾರರು ಅಂತಿಮವಾಗುವ ಸಾಧ್ಯತೆಯಿದೆ. ಸದರಿ ಪಕ್ರಿಯೆ ಮುಗಿದ ನಂತರ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ವಿಶ್ರಾಂತಿ ಕೋಣೆ, ಶೌಚಾಲಯ, ಸ್ನಾನದ ಕೋಣೆ ಹಾಗೂ ಇನ್ನಿತರ ಕೆಲಸಗಳನ್ನು ಕೈಗೊಳ್ಳುವುದಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಭಜರಂಗಿ 2 ಸಿನಿಮಾಗೆ ಮತ್ತೆ ಸಂಕಷ್ಟ – ಬೆಂಕಿ ಬಿದ್ದ ಸೆಟ್ ಗೋದಾಮಿಗೆ ಬೀಗ ಹಾಕಿ ಅಧಿಕಾರಿಗಳಿಂದ ಸೀಜ್

    ಭಜರಂಗಿ 2 ಸಿನಿಮಾಗೆ ಮತ್ತೆ ಸಂಕಷ್ಟ – ಬೆಂಕಿ ಬಿದ್ದ ಸೆಟ್ ಗೋದಾಮಿಗೆ ಬೀಗ ಹಾಕಿ ಅಧಿಕಾರಿಗಳಿಂದ ಸೀಜ್

    ಬೆಂಗಳೂರು: ನೆಲಮಂಗಲದ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಭಜರಂಗಿ-2 ಸಿನಿಮಾ ಶೂಟಿಂಗ್ ವೇಳೆ ನಡೆದ ಅಗ್ನಿ ಅವಘಡ ಪ್ರಕರಣದಿಂದ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದೆ. ಸ್ಟುಡಿಯೋಗೆ ಭೇಟಿ ಕೊಟ್ಟ ತಹಶೀಲ್ದಾರ್ ಬೀಗ ಜಡಿದು ನೋಟಿಸ್ ಕೊಟ್ಟು ಬಂದಿದ್ದಾರೆ.

    ಮೋಹನ್ ಬಿ.ಕೆರೆ ಸ್ಟುಡಿಯೋ ಅಂದರೆ ಸಿನಿಮಾ ಮಂದಿಗೆ ಸಿಗುವ ಅದ್ಧೂರಿಯಾಗಿ ಮತ್ತೊಂದು ಪ್ರಪಂಚ ಸೃಷ್ಟಿಸುವ ಲೋಕ. ಅಥಾರ್ತ್ ಸಿನಿಮಾಗಾಗಿ ಸೆಟ್ ಹಾಕಿ ಶೂಟಿಂಗ್ ಮಾಡಿಕೊಳ್ಳುವ ಹಾಟ್ ಸ್ಪಾಟ್. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶ್ರೀನಿವಾಸಪುರ ಗ್ರಾಮದ ಬಳಿಯ ಆರ್ಟ್ ಡೈರೆಕ್ಟರ್ ಮೋಹನ್ ಬಿ.ಕೆರೆ ಒಡೆತನದ ಸ್ಟುಡಿಯೋದಲ್ಲಿ ಕಳೆದ 10 ದಿನಗಳಿಂದ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ‘ಭಜರಂಗಿ-2’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಇದನ್ನೂ ಓದಿ:   ಭಜರಂಗಿ-2 ಸಿನಿಮಾ ಸೆಟ್‍ನಲ್ಲಿ ಮತ್ತೆ ಬೆಂಕಿ ಅವಘಡ

    ದುರಾದೃಷ್ಟವಶಾತ್ ಎರಡು ಬಾರಿ ಈ ಸಿನಿಮಾಗೆ ಹಾಕಲಾಗಿದ್ದ ಗುಹೆಯ ಬೃಹತ್ ಸೆಟ್‍ಗೆ ಬೆಂಕಿ ಬಿದ್ದು ಅನಾಹುತ ಸಂಭವಿಸಿತ್ತು. ಹೀಗಾಗಿ ಸತತ ಎರಡು ಬೆಂಕಿ ಅವಘಡಗಳ ಬಳಿಕ ಎಚ್ಚೆತ್ತ ಸ್ಥಳೀಯ ಆಡಳಿತ ಮೋಹನ್ ಬಿ.ಕೆರೆ ಸ್ಟುಡಿಯೋಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೀಜ್ ಮಾಡಿದೆ. ಈ ಸ್ಟುಡಿಯೋ ಸಿನಿಮಾ ಶೂಟಿಂಗ್ ಮಾಡಲು ಯೋಗ್ಯ ಜಾಗವಾಗಿದೆಯೇ, ಫೈರ್ ಎಕ್ಸಿಟ್ ಸೇರಿ ಮೂಲಭೂತ ಸೌಕರ್ಯಗಳು, ಅಧಿಕೃತ ಪರವಾನಗಿ ಹೀಗೆ ಚಲನಚಿತ್ರ ಚಿತ್ರೀಕರಣದ ಸಮಯದಲ್ಲಿ ಇರಬೇಕಾದ ಎಲ್ಲಾ ಸೌಕರ್ಯಗಳು ಮತ್ತು ದಾಖಲೆಗಳನ್ನ ಕೂಡಲೇ ನೀಡುವಂತೆ ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸಯ್ಯ ಸ್ಟುಡಿಯೋ ಮಾಲೀಕರಿಗೆ ನೋಟಿಸ್ ಜಾರಿ, ಸ್ಟುಡಿಯೋವನ್ನು ಸೀಜ್ ಮಾಡಿದ್ದಾರೆ. ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನೀಡುವಂತೆ ಹೇಳಿ ನೋಟಿಸ್ ಜಾರಿ ಮಾಡಿದ್ದೇವೆ ಸೂಕ್ತ ಸಮಯದಲ್ಲಿ ನೋಟಿಸ್ ಗೆ ಉತ್ತರ ಕೊಡದೆ ಇದ್ದರೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವುದಾಗಿ ತಹಶೀಲ್ದಾರ್ ಶ್ರೀನಿವಾಸಯ್ಯ ಹೇಳಿದ್ದಾರೆ. ಇದನ್ನೂ ಓದಿ:  ‘ಭಜರಂಗಿ-2’ ಚಿತ್ರತಂಡಕ್ಕೆ ಮತ್ತೊಂದು ಶಾಕ್- 60 ಮಂದಿ ಕಲಾವಿದರಿದ್ದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ

    ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತರಾಜು ಮಾತನಾಡಿ, ನಾವು ಈ ಜಮೀನಿನಲ್ಲಿ ವ್ಯವಹಾರಿಕ ಕೆಲಸ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಪ್ರಶ್ನೆ ಮಾಡಿದ್ದೇವು. ಆಗಲೂ ಯಾವುದೇ ಸೂಕ್ತ ಉತ್ತರ ನೀಡಿರಲಿಲ್ಲ. ಈಗಲಾದರೂ ಸ್ಥಳೀಯ ಆಡಳಿತ ಎಚ್ಚೆತ್ತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಆಗ್ರಹಿಸಿದರು.

  • ದೇವಸ್ಥಾನದಲ್ಲೇ ಕಾಲ ಕಳೆದ ನೆರೆ ಸಂತ್ರಸ್ತೆ- ಮನೆ ಇಲ್ಲದೆ ಬಿದಿಗೆ ಬಿದ್ದ ಬದುಕು

    ದೇವಸ್ಥಾನದಲ್ಲೇ ಕಾಲ ಕಳೆದ ನೆರೆ ಸಂತ್ರಸ್ತೆ- ಮನೆ ಇಲ್ಲದೆ ಬಿದಿಗೆ ಬಿದ್ದ ಬದುಕು

    ಧಾರವಾಡ: ನೇರೆ ಸಂತ್ರಸ್ತೆಯೊಬ್ಬರು ಕಳೆದ ರಾತ್ರಿ ದೇವಸ್ಥಾನದಲ್ಲಿಯೇ ಮಲಗಿ ಕಾಲ ಕಳೆದ ಘಟನೆ ಧಾರವಾಡ ಜಿಲ್ಲೆಯ ಮಾರಡಗಿ ಗ್ರಾಮದಲ್ಲಿ ನಡೆದಿದೆ.

    ಕಳೆದ 4 ತಿಂಗಳ ಹಿಂದೆ ನೇರೆ ಹಾಗೂ ಪ್ರವಾಹದಿಂದ ಮಹಿಳೆ ನೀಲಮ್ಮ ಕಲಕೇರಿಯವರ ಮನೆ ಬಿದ್ದಿತ್ತು. ನಂತರ ಈ ಮಹಿಳೆ ಅದೇ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಶನಿವಾರ ಬಾಡಿಗೆ ಮನೆ ಮಾಲೀಕ ಏಕಾಏಕಿ ನೀಲಮ್ಮಳನ್ನು ಮನೆ ಬಿಡಿಸಿದ್ದಾರೆ. ಇದರಿಂದ ನೀಲಮ್ಮ ಎಲ್ಲಿಗೆ ಹೋಗಬೇಕು ಎಂದು ತಿಳಿಯದೇ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ರಾತ್ರಿ ಕಳೆದಿದ್ದಾರೆ.

    ಬೆಳಗ್ಗೆ ಎದ್ದ ನಂತರವೂ ನೀಲಮ್ಮ ಅದೇ ದೇವಸ್ಥಾನದ ಆವರಣದಲ್ಲಿ ಅಡುಗೆ ಮಾಡಿಕೊಂಡಿದ್ದಳು. ಮನೆ ಬಿದ್ದಿರುವ ಬಗ್ಗೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ತಿಳಿಸಿ, ಮನೆ ಕಟ್ಟಿ ಕೊಡಲು ಮನವಿ ಮಾಡಿದ್ದರು ಕೂಡ ಯಾರೂ ಸ್ಪಂದಿಸಿಲ್ಲ. ಹೀಗಾಗಿ ಕಣ್ಣೀರು ಹಾಕುತ್ತಲೇ ನೀಲಮ್ಮ ತಮ್ಮ ಅಳಲು ತೊಡಿಕೊಂಡಿದ್ದಾರೆ. ನಾನು ಸತ್ತರೂ ಇದೇ ದೇಸ್ಥಾನದಲ್ಲಿ ಮಣ್ಣು ಮಾಡಿಬಿಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನೀಲಮ್ಮ ಅವರಿಗೆ ಬಿಪಿ, ಶುಗರ್ ಕಾಯಿಲೆ ಇದ್ದು, ಇವರ ಸಂಬಂಧಿಕರು ಯಾರೂ ಇಲ್ಲ. ಮನೆ ಬಿದ್ದಾಗ ಅಧಿಕಾರಿಗಳು 50 ಸಾವಿರ ರೂ. ನೀಡಿ ಕೈ ತೊಳೆದುಕೊಂಡಿದ್ದಾರೆ. ನಂತರ ಈವರೆಗೆ ಹೆಚ್ಚಿನ ಪರಿಹಾರ ನೀಡಿಲ್ಲ. ಹೀಗಾಗಿ ನೀಲಮ್ಮ ಅವರ ಜೀವನ ಬೀದಿ ಪಾಲಾಗಿದೆ. ಈ ಕುರಿತು ಗ್ರಾಮಸ್ಥರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

  • ಅಕ್ರಮವಾಗಿ ಕಲ್ಲು ಸಾಗಿಸ್ತಿದ್ದ ಲಾರಿಗಳ ವಶ – ಬೆಳ್ಳಂಬೆಳಗ್ಗೆ ಗಣಿ ಅಧಿಕಾರಿಗಳ ರೇಡ್

    ಅಕ್ರಮವಾಗಿ ಕಲ್ಲು ಸಾಗಿಸ್ತಿದ್ದ ಲಾರಿಗಳ ವಶ – ಬೆಳ್ಳಂಬೆಳಗ್ಗೆ ಗಣಿ ಅಧಿಕಾರಿಗಳ ರೇಡ್

    ಚಾಮರಾಜನಗರ: ಬೆಳ್ಳಂಬೆಳಗ್ಗೆ ಗಣಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಅಕ್ರಮ ಕ್ವಾರಿಗಳಲ್ಲಿ ಪರವಾನಿಗೆ ಇಲ್ಲದೆ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಗಣಿ ಇಲಾಖೆ ಉಪ ನಿರ್ದೇಶಕಿ ಲಕ್ಷ್ಮಮ್ಮ ಆದೇಶದಂತೆ ಭೂ ವಿಜ್ಞಾನ ಎರಡು ತಂಡ ರಚಿಸಿದ್ದು, ಜಿಲ್ಲಾದ್ಯಂತ ಗಸ್ತು ಕಾರ್ಯ ಕೈಗೊಂಡಿದ್ದಾರೆ. ಚಾಮರಾಜನಗರದಲ್ಲಿ ಮೂರು ಲಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಲಾರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಅಲ್ಲದೇ ಗುಂಡ್ಲುಪೇಟೆಯಲ್ಲಿಯೂ ಕೂಡ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದ್ದು, ಎರಡು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಖನಿಜ ಸಾಗಾಣಿಕೆ ಮಾಡಲೂ ಪರವಾನಿಗೆ ಇಲ್ಲದಿರುವುದರಿಂದ ಸದರಿ ವಾಹನಗಳನ್ನು ವಶಪಡಿಸಿಕೊಂಡು ಪೊಲೀಸರ ಸುಪರ್ದಿಗೆ ನೀಡಲಾಗಿದೆ.

  • ಮೂರು ಕಾರಣಗಳಿಂದ ರಶ್ಮಿಕಾ ಮನೆ ಮೇಲೆ ಐಟಿ ದಾಳಿ

    ಮೂರು ಕಾರಣಗಳಿಂದ ರಶ್ಮಿಕಾ ಮನೆ ಮೇಲೆ ಐಟಿ ದಾಳಿ

    ಬೆಂಗಳೂರು: ಬೆಳ್ಳಂಬೆಳಗ್ಗೆ ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐಟಿ ಅಧಿಕಾರಿಗಳು ಮೂರು ಕಾರಣಗಳಿಂದ ನಟಿ ರಶ್ಮಿಕಾ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ನಟಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದಾರೆ.

    ಮೊದಲನೆಯದಾಗಿ ನಟಿ ರಶ್ಮಿಕಾ ಪಡೆಯುತ್ತಿರುವ ಸಂಭಾವನೆಯ ಬಗ್ಗೆ ತಪ್ಪು ಮಾಹಿತಿ ನೀಡಿರುವುದು. ಜಾಹೀರಾತು ಏಜೆನ್ಸಿಗಳ ಜೊತೆಯೂ ರಶ್ಮಿಕಾ ಷೇರು ವ್ಯವಹಾರ ನಡೆಸುತ್ತಿದ್ದಾರೆ. ಜೊತೆಗೆ ರಶ್ಮಿಕಾ ಟಾಲಿವುಡ್‍ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಹೀಗಾಗಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಶ್ಮಿಕಾ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

    10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದೆ. ಶೂಟಿಂಗ್ ಗಾಗಿ ರಶ್ಮಿಕಾ ಹೈದರಾಬಾದಿಗೆ ಹೋಗಿದ್ದಾರೆ. ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮನೆ ಮಾತಾಗಿರುವ ರಶ್ಮಿಕಾ ಮಂದಣ್ಣ ಆದಾಯದಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೇ ಇದ್ದು ಇಲ್ಲವಾಯ್ತು ‘ಪಶು ಪಾಲಿ ಕ್ಲಿನಿಕ್’

    ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೇ ಇದ್ದು ಇಲ್ಲವಾಯ್ತು ‘ಪಶು ಪಾಲಿ ಕ್ಲಿನಿಕ್’

    ಬೀದರ್: 2014ರಲ್ಲಿ ಬಿಜೆಪಿ ಸರ್ಕಾರ ‘ಪಶು ಪಾಲಿ ಕ್ಲಿನಿಕ್’ ಗಳನ್ನು ರಾಜ್ಯಾದ್ಯಂತ ಘೋಷಣೆ ಮಾಡಿ, ಕೋಟ್ಯಂತರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿತ್ತು. ಆದರೆ ಗಡಿಯಲ್ಲಿರುವ ಸ್ವತಃ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ಕ್ಷೇತ್ರವಾದ ಬೀದರ್ ನಲ್ಲಿರುವ ಪಶು ಪಾಲಿ ಕ್ಲೀನಿಕ್‍ಗೆ ಇನ್ನು ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

    ಗ್ರಾಮೀಣ ಪ್ರದೇಶದ ಪಶುಗಳಿಗೆ ಉನ್ನತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಸರ್ಕಾರ 1.84 ಲಕ್ಷ ರೂ. ಅನುದಾನದಲ್ಲಿ ಪಶು ಪಾಲಿ ಕ್ಲಿನಿಕ್ ಆರಂಭಿಸಿತ್ತು. ಈ ಪಶು ಪಾಲಿ ಕ್ಲಿನಿಕ್ ನಿರ್ಮಾಣವಾಗಿ 6 ತಿಂಗಳುಗಳಾದರೂ ಇನ್ನು ಉದ್ಘಾಟನೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

    ತಜ್ಞರು, ವೈದ್ಯರು, ಯಂತ್ರೋಪಕರಣಗಳು ಹಾಗೂ ಮೂಲಭೂತ ಸೌಕರ್ಯದ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದ ಉದ್ಘಾಟನೆ ಭಾಗ್ಯಕ್ಕೆ ತೊಡಕಾಗಿದೆ. ಬೀದರ್ ಅಷ್ಟೇ ಅಲ್ಲದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಪಶು ಪಾಲಿ ಕ್ಲಿನಿಕ್ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.

    ಈ ಪಶು ಪಾಲಿ ಕ್ಲಿನಿಕ್ ನಲ್ಲಿ ಹೈಟೆಕ್ ಲ್ಯಾಬ್, ಪಶು ರಕ್ತ ಪರಿಶೀಲನೆ, ಶ್ರಸ್ತಚಿಕಿತ್ಸೆ ಸೇರಿದಂತೆ ಹಲವಾರು ರೀತಿ ಹೈಟೆಕ್ ಚಿಕಿತ್ಸೆಯನ್ನು ಜಾನುವಾರಗಳಿಗೆ ನೀಡಬಹುದು. ಆದರೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಂದು ಲಕ್ಷಾಂತರ ರೂ. ಅನುದಾನದಲ್ಲಿ ನಿರ್ಮಾಣವಾದ ಪಶು ಪಾಲಿ ಕ್ಲಿನಿಕ್ ಮಾತ್ರ ಹಾಳುಕೊಂಪೆಯಾಗಿದೆ. ಪಶು ಸಂಗೋಪನಾ ಸಚಿವರು ಕೂಡಾ ಬೀದರ್ ಜಿಲ್ಲೆಯವರೇ ಆಗಿದ್ದು, ಈ ಬಗ್ಗೆ ಗಮನ ಹರಿಸಿ ಕ್ಲಿನಿಕ್ ಉದ್ಘಾಟನೆ ಮಾಡುತ್ತಾರಾ ಎಂದು ರೈತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

  • ಜಸ್ಟ್ ಒಂದು ಕರೆಯಿಂದ ಮಕ್ಕಳ ಮದುವೆಗೆ ತಡೆ

    ಜಸ್ಟ್ ಒಂದು ಕರೆಯಿಂದ ಮಕ್ಕಳ ಮದುವೆಗೆ ತಡೆ

    ಯಾದಗಿರಿ: ಜಿಲ್ಲೆಯ ಅಂಬೇಡ್ಕರ್ ನಗರದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಅಂಬೇಡ್ಕರ್ ನಗರದ ವೆಂಕಟರಮಣ ದೇವಸ್ಥಾನದಲ್ಲಿ ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಜಿಲ್ಲೆಯ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಅನಾಮಧೇಯ ಕರೆ ಬಂದಿತ್ತು. ಕರೆಯ ಅನುಸಾರ ತಕ್ಷಣವೇ ಕಾರ್ಯಪ್ರವೃತ್ತರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿವಾಹವನ್ನು ನಿಲ್ಲಿಸಿದ್ದಾರೆ.

    ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ ಅಧಿಕಾರಿಗಳು ವಧು ಮತ್ತು ವರನ ತಂದೆ-ಯಿಗೆ ಬುದ್ಧಿ ಹೇಳಿದ್ದಾರೆ. ಬಾಲ್ಯವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಸಹ ಮಾಡಿದ್ದಾರೆ. ಬಾಲಕಿಯನ್ನು ಸದ್ಯ ಬಾಲ ಭವನದಲ್ಲಿ ಉಪಚರಿಸಲಾಗುತ್ತಿದೆ.

    ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನೆ ನಿರ್ದೇಶಕ ರಘುವೀರ ಸಿಂಗ್ ಠಾಕೂರ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ರಾಧಾ ಎಚ್. ಚನ್ನಕ್ಕಿ, ಡಿಸಿಪಿಯು ಘಟಕದ ಸಿಬ್ಬಂದಿ ಗೋವಿಂದ್ ಸೇರಿದಂತೆ ಇತರೆ ಅಧಿಕಾರಿಗಳು ಬಾಲ್ಯವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

  • ಯಾದಗಿರಿಯನ್ನು ಬಾಲ ಕಾರ್ಮಿಕ ಪದ್ಧತಿಯಿಂದ ವಿಮುಕ್ತಿಗೊಸಲು ಖಾಕಿ ಸಜ್ಜು

    ಯಾದಗಿರಿಯನ್ನು ಬಾಲ ಕಾರ್ಮಿಕ ಪದ್ಧತಿಯಿಂದ ವಿಮುಕ್ತಿಗೊಸಲು ಖಾಕಿ ಸಜ್ಜು

    ಯಾದಗಿರಿ: ನಗರದ ಪೊಲೀಸ್ ಆಡಳಿತ ಭವನದಲ್ಲಿ ಜಿಲ್ಲೆಯ ಎಲ್ಲಾ ಠಾಣೆಗಳ ಸಿಪಿಐ ಮತ್ತು ಪಿಎಸ್‍ಐ ಅಧಿಕಾರಿಗಳಿಗೆ, 1986ರ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಹಾಗೂ ನಿಷೇಧಿತ ತಂಬಾಕು ಕುರಿತು ವಿಶೇಷ ಕಾರ್ಯಾಗಾರವನ್ನು ನಡೆಸಲಾಯಿತು.

    ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ್ ಮತ್ತು ಡಿವೈಎಸ್‍ಪಿ ಶರಣಪ್ಪ ಅವರು ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂಬ ವಿಷಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜಿಲ್ಲಾದ್ಯಂತ ಅನಿರೀಕ್ಷಿತ ತಪಾಸಣೆ ಕೈಗೊಂಡು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಲು ಮಾಲೀಕರುಗಳಿಗೆ ಸೂಚನೆ ನೀಡಬೇಕು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ಮಾಲೀಕರುಗಳಿಗೆ ಪ್ರತಿ ಬಾಲ ಕಾರ್ಮಿಕರಿಂದ 50,000 ರೂಪಾಯಿ ದಂಡ ವಿಧಿಸಿ, ಜೈಲು ಶಿಕ್ಷೆ ಕೂಡ ವಿಧಿಸಬಹುದಾದ ಕಾನೂನಿನ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

    ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದು ಕಂಡುಬಂದಲ್ಲಿ ಕಾರ್ಮಿಕ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಠಾಣೆಗಳ ಕಾರ್ಯವ್ಯಾಪ್ತಿಯಲ್ಲಿ ಅನಿರೀಕ್ಷಿತ ದಾಳಿ ಅಥವಾ ತಪಾಸಣೆಯನ್ನು ಕೈಗೊಳ್ಳಬೇಕು. ಮಕ್ಕಳನ್ನು ರಕ್ಷಿಸಿ, ಪುನರ್ವಸತಿ ನೀಡುವ ಮೂಲಕ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಮೂಲಕ ಯಾದಗಿರಿ ಜಿಲ್ಲೆಯನ್ನು ಬಾಲ ಕಾರ್ಮಿಕ ಪದ್ಧತಿಯಿಂದ ವಿಮುಕ್ತಿಗೊಳಿಸಬೇಕು ಎಂಬ ನಿರ್ಣಯವನ್ನು ಈ ಕಾರ್ಯಾಗಾರದಲ್ಲಿ ಪೊಲೀಸ್ ಅಧಿಕಾರಿಗಳು ಕೈಗೊಂಡರು.

  • ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದ ಸಚಿವ ಚೌವ್ಹಾಣ್

    ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದ ಸಚಿವ ಚೌವ್ಹಾಣ್

    ಬೀದರ್: ಮುಂದಿನ ತಿಂಗಳು ಮೂರು ದಿನಗಳ ಕಾಲ ಬೀದರ್ ನ ಪಶು ವಿವಿಯಲ್ಲಿ ನಡೆಯಲಿರುವ ಪಶುಮೇಳದ ಪೂರ್ವಭಾವಿ ಸಿದ್ಧತೆ ಸಭೆ ಇಂದು ಕರೆಯಲಾಗಿತ್ತು.

    ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಪ್ರತಿಯೊಂದು ವಿಭಾಗದ ಅಧಿಕಾರಿಗಳನ್ನು ಕರೆದು ಸಿದ್ಧತೆ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಈ ವೇಳೆ ನಗರಸಭೆ ಆಯುಕ್ತರು ಸೇರಿದಂತೆ ಬಹುತೇಕ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದರು.

    ಅಧಿಕಾರಿಗಳು ಗೈರಾಗಿದ್ದು ಕಂಡು ಕೆಂಡಾಮಂಡಲರಾದ ಸಚಿವ ಪ್ರಭು ಚೌವ್ಹಾಣ್ ಮಾಹಿತಿ ಇದ್ದರೂ ಯಾಕೆ ಅಧಿಕಾರಿಗಳು ಗೈರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ ಗೆ ಕೇಳಿದರು. ಸಮರ್ಪಕ ಉತ್ತರ ಸಿಗದಿದ್ದಾಗ ಜಿಲ್ಲಾ ಪಂಚಾಯತ್ ಸಿಇಓ ಗ್ಯಾನೇಂದ್ರಕುಮಾರ್ ಗೆ ಗೈರಾದ ಎಲ್ಲಾ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚನೆ ನೀಡಿದರು.

    ಮುಂದಿನ ತಿಂಗಳು 07 ರಿಂದ 09ರವರೆಗೆ ನಡೆಯಲಿರುವ ಪಶು ಮೇಳವನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದು, ಈ ಮೇಳದ ಪೋಸ್ಟರ್ ಅನ್ನು ಇಂದು ಸಚಿವರು ಬಿಡುಗಡೆ ಮಾಡಿದರು. ಎಂಎಲ್‍ಸಿ ರಘುನಾಥ್ ಮಲ್ಕಾಪೂರೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತ ಚಿದ್ರಿ, ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ್, ಜಿಲ್ಲಾ ಪಂಚಾಯ್ತಿ ಸಿಇಓ ಗ್ಯಾನೇಂದ್ರ ಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪೂರ್ವ ಸಭೆಯಲ್ಲಿ ಭಾಗಿಯಾಗಿದ್ದರು.