Tag: officers

  • ಮಾರ್ಚ್ ಒಳಗಾಗಿ ಎಲ್ಲಾ ಯೋಜನೆಗಳ ಅನುಷ್ಠಾನ: ಡಿ.ಸಿ ಕೆ.ಬಿ ಶಿವಕುಮಾರ್

    ಮಾರ್ಚ್ ಒಳಗಾಗಿ ಎಲ್ಲಾ ಯೋಜನೆಗಳ ಅನುಷ್ಠಾನ: ಡಿ.ಸಿ ಕೆ.ಬಿ ಶಿವಕುಮಾರ್

    ಶಿವಮೊಗ್ಗ: ಎಲ್ಲಾ ಇಲಾಖೆಗಳು ಮಾರ್ಚ್ ಅಂತ್ಯದ ಒಳಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಎಲ್ಲಾ ಯೋಜನೆಗಳ ಗುರಿಯನ್ನು ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರು ಸೂಚಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಡಿಸಿ ಪ.ಜಾತಿ/ಪಂಗಡ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದು ಕಾರ್ಯಕ್ರಮ ಅನುಷ್ಠಾನದ ಹಂತದಲ್ಲಿದೆ. ಆದರೆ ಇನ್ನೂ ಫಲಾನುಭವಿಗಳ ಆಯ್ಕೆ ಮಾಡದೇ ಇರುವ ಇಲಾಖೆಗಳು ತಕ್ಷಣ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ವರದಿ ನೀಡಬೇಕು. ಫಲಾನುಭವಿಗಳಿಗೆ ಬ್ಯಾಂಕ್ ಮೂಲಕ ಸಬ್ಸಿಡಿ ನೀಡುವ ಯೋಜನೆ ಹೊಂದಿರುವ ನಿಗಮ ಮಂಡಳಿಗಳು ಫೆಬ್ರವರಿ ಅಂತ್ಯದ ಒಳಗಾಗಿ ಫಲಾನುಭವಿಗಳ ಪಟ್ಟಿಯನ್ನು ಬ್ಯಾಂಕ್‍ಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಗುರಿ ಸಾಧಿಸದ ಇಲಾಖೆಗಳಿಗೆ ನೊಟೀಸ್:
    ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ನಿಗದಿತ ಗುರಿಯನ್ನು ಸಾಧಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಜನವರಿ ಕೊನೆಯ ಒಳಗೆ ನಿಗದಿತ ಗುರಿಯನ್ನು ಸಾಧಿಸದಿರುವ ಇಲಾಖೆಗಳಿಗೆ ನೊಟೀಸ್ ಜಾರಿಗೊಳಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನೆ ಅನುಷ್ಠಾನ ಮಂದಗತಿಯಲ್ಲಿದ್ದು, ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮೇಲಾಧಿಕಾರಿಗಳ ಕಿರುಕುಳ- ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ

    ಮೇಲಾಧಿಕಾರಿಗಳ ಕಿರುಕುಳ- ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ

    ಮಂಡ್ಯ: ಮೇಲಾಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯನ ಕಿರುಕುಳದಿಂದ ಬೇಸತ್ತು ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ತಾಲೂಕಿನ ಕಾಗೇಹಳ್ಳ ದೊಡ್ಡಿ ಗ್ರಾಮದಲ್ಲಿ ಜರುಗಿದೆ.

    ಕಾಗೇಹಳ್ಳ ದೊಡ್ಡಿ ಗ್ರಾಮದ ಅಂಗನವಾಡಿಯ ಆಶಾ ಕಾರ್ಯಕರ್ತೆ ಭಾಗ್ಯಮ್ಮ (45) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮತ್ತು ಪರಿಷ್ಕರಿಸುವ ಕೆಲಸಕ್ಕೆ ಭಾಗ್ಯಮ್ಮ ಅವರನ್ನು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸುವಂತೆ ಒತ್ತಡ ಹೇರಿದ್ದರು. ಇದಕ್ಕೆ ಭಾಗ್ಯ ಅವರು ನಿರಾಕರಿಸಿದರು ಎನ್ನಲಾಗಿದೆ.

    ಬಳಿಕ ರಾಜಕೀಯ ಪ್ರಭಾವ ಬಳಸಿ ಭಾಗ್ಯಮ್ಮ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ವಿಚಾರದಲ್ಲಿ ಮೇಲಾಧಿಕಾರಿಗಳು ಶಾಮೀಲಾಗಿ ಕಿರುಕುಳ ನೀಡುತ್ತಿದ್ದರು ಎಂದು ಭಾಗ್ಯಮ್ಮ ಹೇಳಿಕೊಂಡಿದ್ದರು ಎನ್ನಲಾಗಿದೆ.

    ಕಿರುಕುಳದಿಂದ ಬೇಸತ್ತು ಭಾಗ್ಯಮ್ಮ ಮಂಗಳವಾರ ಅಂಗನಾಡಿಯಲ್ಲೇ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಅಂಗನವಾಡಿಯ ಸಹಾಯಕಿ ಹಾಗೂ ಗ್ರಾಮಸ್ಥರು ಭಾಗ್ಯಮ್ಮರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಭಾಗ್ಯಮ್ಮ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು!

    ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು!

    ಮೈಸೂರು: ಚಾಮುಂಡಿ ಬೆಟ್ಟದಲ್ಲಿನ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಕೆಲವರು ಆತಂಕ ಮತ್ತು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ನಂದಿ ವಿಗ್ರಹ ಪರಿಶೀಲನೆ ನಡೆಸಿದೆ.

    ನಂದಿ ವಿಗ್ರಹ ಬಿರುಕು ಬಿಟ್ಟಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪಾರಂಪರಿಕ ತಜ್ಞರ ಸಮಿತಿಯನ್ನು ರಚಿಸಿ ವಿಗ್ರಹ ಪರಿಶೀಲನೆಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಶಿಲ್ಪಿ ತಂಡ ವಿಗ್ರಹ ಪರಿಶೀಲನೆ ನಡೆಸಿದೆ. ಕೆಲವು ಕಡೆ ಬಿರುಕು ಬಿಟ್ಟಿರುವ ರೀತಿ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ಅದು ಬಿರುಕಲ್ಲ, ಕಲ್ಲಿನ ನೈಜತೆ ಎಂದು ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಸಮಿತಿ ವರದಿ ನೀಡಲಿದ್ದು, ಬಿರುಕು ಬಿಟ್ಟಿದೆ ಎಂದು ತಜ್ಞರು ಸ್ಪಷ್ಟಪಡಿಸಿದರೆ ಅದನ್ನು ಮುಚ್ಚಲು ಕೂಡ ಜಿಲ್ಲಾಡಳಿತ ಮುಂದಾಗಲಿದೆ.

    ಸುಮಾರು 400 ವರ್ಷಗಳ ಹಳೆಯದಾದ ನಂದಿ ವಿಗ್ರಹ ಇದ್ದಾಗಿದ್ದು, 1659-73ರಲ್ಲಿ ನಿರ್ಮಾಣಗೊಂಡಿದೆ. ಚಾಮುಂಡಿ ಬೆಟ್ಟದ ಪ್ರಮುಖ ಕೇಂದ್ರ ಬಿಂದುವೇ ಈ ನಂದಿ ವಿಗ್ರಹ. ವಿಗ್ರಹದ ಕಾಲು, ಕುತ್ತಿಗೆ ಹಾಗೂ ಮುಖದ ಕೆಲವೆಡೆ ಬಿರುಕು ಕಾಣಿಸಿಕೊಂಡಿದೆ ಎಂದು ಭಕ್ತರು ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಕಪ್ಪಾಗಿದ್ದ ನಂದಿ ವಿಗ್ರಹವನ್ನು ಇತ್ತೀಚೆಗೆ ಪಾಲಿಶ್ ಮಾಡಿ ಹೊಸ ರೂಪ ಕೊಡಲಾಗಿತ್ತು. ಈ ವೇಳೆ ಬಿರುಕು ಬಿಟ್ಟಿರುವುದು ಪತ್ತೆಯಾಗಿತ್ತು.

  • ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಯನ್ನು ಗೃಹ ಬಂಧನದಲ್ಲಿಟ್ಟ ಕಿಡಿಗೇಡಿಗಳು!

    ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಯನ್ನು ಗೃಹ ಬಂಧನದಲ್ಲಿಟ್ಟ ಕಿಡಿಗೇಡಿಗಳು!

    ಬೆಂಗಳೂರು: ಬಿಬಿಎಂಪಿಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಾಲ್ವರು ಕಿಡಿಗೇಡಿಗಳು ಗೃಹ ಬಂಧನದಲ್ಲಿಟ್ಟು ಧಮ್ಕಿ ಹಾಕಿರುವ ಘಟನೆ ಬೆಂಗಳೂರಿನ ವಿಜಯನಗರ ಬಿಬಿಎಂಪಿ ಕಂದಾಯ ಕಚೇರಿಯಲ್ಲಿ ನಡೆದಿದೆ.

    ಅದೊಂದು ಕೋಮಿನ ಸೈಟ್‍ಗೆ ಬಿಬಿಎಂಪಿ ಅಧಿಕಾರಿಗಳು ಸರ್ಕಾರಿ ಜಾಗ ಸೇರಿ ಖಾತೆ ಮಾಡಿಕೊಟ್ಟಿದ್ರು. ಇದಕ್ಕೆ ಮತ್ತೊಂದು ಕೋಮಿನವರು ಆಕ್ರೋಶ ವ್ಯಕ್ತಪಡಿಸಿ ಖಾತೆ ಕ್ಯಾನ್ಸಲ್ ಮಾಡುವಂತೆ ದೂರು ಕೂಡ ಕೊಟ್ಟಿದ್ರು. ಖಾತೆ ಮಾಡಲು ಆದೇಶ ಕೂಡ ಆಗಿತ್ತು. ಆದರೆ ಈಗ ಆ ದಾಖಲೆಗಳು ಪಾಲಿಕೆ ಕಚೇರಿಯಿಂದ ಮಂಗಮಾಯವಾಗಿದೆ. ಇದಕ್ಕೆ ಕೆರಳಿದ ಗುಂಪೊಂದು ಏಕಾಏಕಿ ಪಾಲಿಕೆಯ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

    ಬಿಬಿಎಂಪಿಯ ಅಧಿಕಾರಿ, ಸಿಬ್ಬಂದಿಯನ್ನು ಕಚೇರಿ ಬಂಧನಲ್ಲಿಟ್ಟು ಡೋರ್ ಕ್ಲೋಸ್ ಮಾಡಿ, ದಾಖಲೆಗಳು ಬೇಕು ಅಷ್ಟೆ ಅಂತ ಅವಾಜ್ ಹಾಕಿದ್ದಾರೆ. ವಿಜಯನಗರದ ವಾರ್ಡ್ ನಂ- 124ರ ಹೊಸಹಳ್ಳಿಯಲ್ಲಿರುವ ಒಂದು ಟ್ರಸ್ಟ್ ಗೆ, ಬಿಬಿಎಂಪಿಯ ಜಾಗವನ್ನು ಸೇರಿಸಿ ಪಾಲಿಕೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ರು. ಆದರೆ ಆ ದಾಖಲೆಗಳು ಈಗ ಕಾಣೆಯಾಗಿವೆ. ಅದನ್ನು ಹುಡಿಕಿ ಅಂತ ಸ್ಥಳೀಯ ಶಿವಕುಮಾರ್ ಹಾಗೂ ತನ್ನ 25 ಜನರ ಪಟಾಲಂ ಬಿಬಿಎಂಪಿ ಕಚೇರಿಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಕಚೇರಿ ಬಂದ್ ಮಾಡಿ ರಾತ್ರಿ 10 ಗಂಟೆಯವರೆಗೆ ಕೂಡಿ ಹಾಕಿ ಮೊಬೈಲ್ ಕಸಿದುಕೊಂಡು ಅವಾಜ್ ಹಾಕಿದ್ದಾರೆ ಅಂತ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಸಿದ್ದಾರೆ.

    ವಿಜಯನಗರದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಸಂಜೆ 5 ರಿಂದ ರಾತ್ರಿ 10 ಗಂಟೆಯ ತನಕ ಪಾಲಿಕೆ ಅಧಿಕಾರಿಗಳನ್ನ ಕಚೇರಿಯಲ್ಲಿಯೇ ಕಿಡಿಗೇಡಿಗಳು ಲಾಕ್ ಮಾಡಿದ್ದಾರೆ. ಈ ವೇಳೆ 15ಕ್ಕೂ ಹೆಚ್ಚು ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ರಂತೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೊಬೈಲ್, ಬ್ಯಾಗ್ ಗಳನ್ನ ಕಸಿದುಕೊಂಡು ಫೈಲ್ ಹುಡ್ಕುವಂತೆ ಧಮ್ಕಿ ಹಾಕಿದ್ದಾರೆ.

    ವಾಡ್9 124 ಹೊಸಹಳ್ಳಿಯ ಇಸ್ಲಾಮಿಕ್ ವೆಲ್ ಫೇರ್ ಟ್ರಸ್ಟ್ ಗೆ ಸರ್ಕಾರಿಯ ಐದು ಅಡಿ ಜಾಗ ಸೇರಿ ಖಾತೆ ಮಾಡಿಕೊಟ್ಟಿದ್ದ ಬಿಬಿಎಂಪಿ ಅಧಿಕಾರಿಗಳು ಆ ಖಾತಾ ರದ್ದು ಮಾಡುವಂತೆ ಸ್ಥಳೀಯ ಶಿವಕುಮಾರ್ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ಆ ಫೈಲ್ ಸಿಕ್ಕಿಲ್ಲ, ಕಾಲಾವಕಾಶ ಕೊಡಿ ಅಂತ ಕೇಳಿದ್ದಾರೆ. ಆದರೆ ಏಕಾಏಕಿ ಕಳೆದ ನಾಲ್ಕು ದಿನದ ಹಿಂದೆ ಕಚೇರಿಗೆ ನುಗಿದ್ದ ಶಿವಕುಮಾರ್ ಹಾಗೂ ತನ್ನ 25 ಮಂದಿಯಿಂದಿಗೆ ಬಿಬಿಎಂಪಿ ಆಫೀಸ್ ಬಾಗಿಲು ಹಾಕಿ ಕಡತಗಳನ್ನು ಹುಡುಕುವಂತೆ ಧಮ್ಕಿ ಹಾಕಿದ್ದಾರೆ. ಈ ವೇಳೆ ಇದನ್ನು ವಿಡಿಯೋ ಮಾಡಲು ಬಂದ ಮಹಿಳಾ ಸಿಬ್ಬಂದಿಯ ಫೋನ್ ಕಸಿದುಕೊಂಡು ನಿಂದಿಸಿದ್ದಾರಂತೆ. ರಾತ್ರಿ 10 ಗಂಟೆಯವರೆಗೆ ಕಚೇರಿ ಬಂಧನದಲ್ಲಿಟ್ಟಿದ್ದಾರೆ. ನಂತರ ಸೌತ್ ಜೆಸಿ ವೀರಭದ್ರ ಸ್ವಾಮಿ ನಾಳೆ ದಾಖಲೆಯನ್ನು ಹುಡುಕಿಕೊಡ್ತಿವಿ ಅಂತ ಹೇಳಿದ ಮೇಲೆ ಸಿಬ್ಬಂದಿಯನ್ನು ಕಚೇರಿಯಿಂದ ಹೊರ ಕಳಿಸಿದ್ದಾರಂತೆ.

    ಬಿಬಿಎಂಪಿ ಅಧಿಕಾರಿಗಳ ಆರೋಪವನ್ನ ಶಿವಕುಮಾರ್ ತಳ್ಳಿ ಹಾಕಿದ್ದಾರೆ. ಕಡತಗಳನ್ನ ಕೇಳಿದ್ದೇನೆ. ಆದರೆ ನಾನು ಅಧಿಕಾರಿ, ಸಿಬ್ಬಂದಿಯನ್ನು ಗೃಹ ಬಂಧನದಲ್ಲಿ ಇಟ್ಟಿಲ್ಲ ಅಂತಿದ್ದಾರೆ. ನಾಳೆಯೊಳಗೆ ಶಿವಕುಮಾರ್ ಗ್ಯಾಂಗ್ ನನ್ನ ಬಂಧಿಸಬೇಕು. ಇಲ್ಲವಾದರೆ ಬಿಬಿಎಂಪಿಯ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗ್ತಾರೆ ಅಂತ ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ ಎಚ್ಚರಿಸಿದ್ದಾರೆ.

    ಪ್ರಕರಣ ಸಂಬಂಧ ಈಗಾಗಲೇ ಶಿವಕುಮಾರ್ ಹಾಗೂ ಟೀಂ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಬೇಕಂತಲೇ ಶಿವಕುಮಾರ್ ಮೇಲೆ ಆರೋಪ ಮಾಡಿದ್ರಾ ಅಥವಾ ನಿಜವಾಗಿಯೂ ಶಿವಕುಮಾರ್ ಪಾಲಿಕೆ ಕಚೇರಿಗೆ ಹೋಗಿ ದಾಂಧಲೆ ನಡೆಸಿದ್ರಾ ಅನ್ನೋದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬರಬೇಕಿದೆ.

  • ಮಾಜಿ ಸಚಿವ ರೇವಣ್ಣ ಆಪ್ತನಿಗೆ ಐಟಿ ಶಾಕ್

    ಮಾಜಿ ಸಚಿವ ರೇವಣ್ಣ ಆಪ್ತನಿಗೆ ಐಟಿ ಶಾಕ್

    ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಆಪ್ತ, ಗುತ್ತಿಗೆದಾರ ಶಿವಕುಮಾರ್ ಮನೆ ಮೇಲೆ ಮಂಗಳವಾರ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

    ಹಾಸನದ ಅಡ್ಲಿಮನೆ ರಸ್ತೆಯಲ್ಲಿರುವ ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇವಣ್ಣ ಆಪ್ತ ಶಿವಕುಮಾರ್, ನಾನು ರೇವಣ್ಣ ಜೊತೆ ಇದ್ದೇನೆ. ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಆದರೆ ಎಚ್.ಡಿ.ರೇವಣ್ಣ ಆಪ್ತ ಎಂದು ನನ್ನ ಮೇಲೆ ಐಟಿ ರೇಡ್ ಮಾಡಿಲ್ಲ ಎಂದರು.

    ಸುಮಾರು 8 ಜನ ಐಟಿ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ಸುಮಾರು 12:30 ರಿಂದ ಮಧ್ಯರಾತ್ರಿ 1 ಗಂಟೆವರೆಗೆ ದಾಖಲೆ ಪರಿಶೀಲನೆ ಮಾಡಿದ್ದಾರೆ. ಕಾನೂನು ಬದ್ಧವಾಗಿ ಏನನ್ನು ಕೇಳಿದ್ದಾರೆ ಎಲ್ಲವನ್ನೂ ಕೊಟ್ಟಿದ್ದೇನೆ. ಇಂದು ನನ್ನನ್ನು ಐಟಿ ಕಚೇರಿಗೆ ಬರಲು ಹೇಳಿದ್ದಾರೆ. ಈ ವರ್ಷ ಮಾತ್ರ ನಾನು ಐಟಿ ರಿಟರ್ನ್ ಮಾಡಿರಲಿಲ್ಲ. ಹೀಗಾಗಿ ಪೆನಾಲ್ಟಿ ಹಾಕುತ್ತೇನೆ ಎಂದಿದ್ದಾರೆ. ನಮ್ಮ ಟರ್ನ್ ಓವರ್ ಮೇಲೆ ಎಷ್ಟು ಪೆನಾಲ್ಟಿ ಎಂದು ಇಂದು ಗೊತ್ತಾಗುತ್ತೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

  • ಕೃಷ್ಣಾ ನದಿ ಪ್ರವಾಹದ ಸಂತ್ರಸ್ತರಿಗೆ ಅಧಿಕಾರಿಗಳಿಂದ ವಂಚನೆ

    ಕೃಷ್ಣಾ ನದಿ ಪ್ರವಾಹದ ಸಂತ್ರಸ್ತರಿಗೆ ಅಧಿಕಾರಿಗಳಿಂದ ವಂಚನೆ

    – ಕಂದಾಯ ಇಲಾಖೆ ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿ

    ರಾಯಚೂರು: ಕೃಷ್ಣಾ ನದಿ ಪ್ರವಾಹದಿಂದ ಜನ ನೆಮ್ಮದಿಯನ್ನು ಕಳೆದುಕೊಂಡು ಐದು ತಿಂಗಳಾದರೂ ನೆರೆಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ರಾಯಚೂರಿನಲ್ಲಿ ನೆರೆ ಸಂತ್ರಸ್ತರ ಹೆಸರಿನಲ್ಲಿ ಇನ್ಯಾರದೋ ಬ್ಯಾಂಕ್ ಖಾತೆಗಳಿಗೆ ಸಾವಿರಾರು ರೂಪಾಯಿ ಹಣ ಬಂದಿದೆ. ಅಧಿಕಾರಿಗಳ ವಂಚನೆಗೆ ಸಂತ್ರಸ್ತರು ಮಾತ್ರ ಮತ್ತೆ ಮತ್ತೆ ಸಂತ್ರಸ್ತರಾಗುತ್ತಿದ್ದಾರೆ.

    ದೇವದುರ್ಗದ ಬೊಮ್ಮನಾಳ, ರಾಯಚೂರಿನ ಎಚ್.ತಿಮ್ಮಾಪುರ ಗ್ರಾಮದ ನೂರಾರು ಜನ ಸಂತ್ರಸ್ತ ರೈತರಿಗೆ ಪರಿಹಾರ ವಿತರಣೆಯಲ್ಲಿ ವಂಚನೆಯಾಗಿದೆ. ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷರ ವಂಚನೆಯಿಂದ ಪಹಣಿ, ಆಧಾರ್ ಸಂಖ್ಯೆ ಸೇರಿದಂತೆ ಇತರೆ ದಾಖಲೆಗಳನ್ನೇ ಬದಲಿಸಿ ಬೇರೆಯವರ ಖಾತೆಗೆ ಹಣ ಜಮಾಮಾಡಿ ಡ್ರಾ ಮಾಡಿಕೊಳ್ಳಲಾಗಿದೆ. ನೆರೆಹಾವಳಿಗೆ ಸಂಬಂಧವೇ ಇಲ್ಲದ ಜಮೀನಿನ ರೈತರ ಖಾತೆಗೆ ಹಣ ಹಾಕಿ ಅಧಿಕಾರಿಗಳೇ ಡ್ರಾಮಾಡಿಕೊಂಡಿದ್ದಾರೆ. ಇದರಿಂದ ನಿಜವಾದ ಸಂತ್ರಸ್ತರಿಗೆ ವಂಚನೆಯಾಗಿದೆ. ಸರ್ಕಾರದ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಅಂತ ರೈತ ಮುಖಂಡ ವಾಸುದೇವ ಮೇಟಿ ಆರೋಪಿಸಿದ್ದಾರೆ.

    ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದ 150 ರೈತರಿಗೆ ಮೋಸವಾಗಿದೆ. ರಾಯಚೂರಿನ ಎಚ್.ತಿಮ್ಮಾಪುರ ಗ್ರಾಮದಲ್ಲೂ ಸಾಕಷ್ಟು ರೈತರಿಗೆ ವಂಚನೆಯಾಗಿದ್ದು, ಈಗ ಬೆಳಕಿಗೆ ಬರುತ್ತಿದೆ. ಜಿಲ್ಲೆಯಲ್ಲಿ ಒಟ್ಟು 5400 ಜನ ರೈತರು ನೆರೆ ಹಾವಳಿಯಿಂದ ಬೆಳೆ ಕಳೆದುಕೊಂಡಿದ್ದು 18 ಜನರಿಗೆ ಮಾತ್ರ ಜಿಲ್ಲಾಡಳಿತ ದಾಖಲೆ ಕೊರತೆಯಿಂದ ಹಣ ಜಮಾ ಮಾಡಿಲ್ಲ. ಆದರೆ ಅಧಿಕಾರಿಗಳ ಗೋಲ್ ಮಾಲ್ ನಿಂದ ಕಂಡಕಂಡವರ ಖಾತೆಗೆ ಹಣಹೋಗಿದ್ದು ದುರುಪಯೋಗ ಮಾಡಿಕೊಳ್ಳಲಾಗಿದೆ. ರೈತರಿಗಾದ ವಂಚನೆಯನ್ನು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಒಪ್ಪಿಕೊಂಡಿದ್ದು ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ಸಂತ್ರಸ್ತರ ಪರಿಹಾರದ ಹಣದ ಮೇಲೂ ಭ್ರಷ್ಟ ಅಧಿಕಾರಿಗಳು ಕಣ್ಣಾಕಿರುವುದು ದುರಂತ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ. ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರವನ್ನ ಕೂಡಲೇ ಒದಗಿಸಬೇಕಿದೆ.

  • ನ್ಯಾಯ ಕೊಡಿಸಿ ಇಲ್ಲವೇ ಸಾಯಿಸಿ – ಅಧಿಕಾರಿಗಳ ಜೀಪಿಗೆ ಅಡ್ಡ ಮಲಗಿದ ಮಹಿಳೆ

    ನ್ಯಾಯ ಕೊಡಿಸಿ ಇಲ್ಲವೇ ಸಾಯಿಸಿ – ಅಧಿಕಾರಿಗಳ ಜೀಪಿಗೆ ಅಡ್ಡ ಮಲಗಿದ ಮಹಿಳೆ

    – ನಿವೇಶನ ಹಂಚಿಕೆಯಲ್ಲಿ ಗೋಲ್‍ಮಾಲ್

    ರಾಯಚೂರು: ನ್ಯಾಯ ಕೊಡಿಸಿ ಇಲ್ಲವೇ ಸಾಯಿಸಿ ಎಂದು ಮಹಿಳೆಯೊಬ್ಬರು ಅಧಿಕಾರಿಗಳ ಜೀಪಿಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತುಂಬಲಗಡ್ಡಿ ಗ್ರಾಮದಲ್ಲಿ ನಡೆದಿದೆ.

    ತುಂಬಲಗಡ್ಡಿ ಪುನರ್ವಸತಿ ಪುನರ್ನಿಮಾಣ ಕೇಂದ್ರದಿಂದ ಮಂಜೂರಾಗಿದ್ದ ನಿವೇಶನವನ್ನ 26 ವರ್ಷಗಳಾದರೂ ನೀಡದ ಹಿನ್ನೆಲೆ ಮಹಿಳೆ ಕೆಬಿಜೆಎನ್‍ಎಲ್(ಕೃಷ್ಣ ಭಾಗ್ಯ ಜಲ ನಿಗಮ ಮಂಡಲಿ) ಅಧಿಕಾರಿಗಳ ಜೀಪಿಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1984ರಲ್ಲಿ ಬಸ್ಸಮ್ಮ ಅವರ ಪತಿ ಸಂಗಪ್ಪ ಹೆಸರಿಗೆ ಹಂಚಿಕೆಯಾಗಿದ್ದ ನಿವೇಶನವನ್ನ ನೀಡಲು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಅಧಿಕಾರಿಗಳು ಪ್ಲಾಟ್ ನಂ. 35ನ್ನು 34 ಎಂದು ಹೇಳಿ ಮೋಸ ಮಾಡುತ್ತಿದ್ದಾರೆ ಎಂದು ಬಸ್ಸಮ್ಮ ಆರೋಪಿಸಿದ್ದಾರೆ.

    ಪತಿ ನಿಧನದ ಬಳಿಕ ಒಂಟಿಯಾಗಿ ನಿವೇಶನಕ್ಕಾಗಿ ಹೋರಾಟ ನಡೆಸಿರುವ ಬಸ್ಸಮ್ಮ ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಬಡಾವಣೆಯ ಮೂಲ ನಕಾಶೆ ಮತ್ತು ದಾಖಲೆಗಳನ್ನೇ ಬದಲಾಯಿಸಿರುವ ಅಧಿಕಾರಿಗಳು ಒಂದೇ ನಿವೇಶನವನ್ನು ಇಬ್ಬರ ಹೆಸರಿಗೆ ಮಾಡಿ ಗೊಂದಲ ಸೃಷ್ಟಿಸಿದ್ದಾರೆ. ಹೀಗಾಗಿ ನನ್ನ ನಿವೇಶನ ನನಗೆ ಹುಡುಕಿಕೊಡಿ ಎಂದು ಬಸ್ಸಮ್ಮ ಹೋರಾಟ ನಡೆಸಿದ್ದಾರೆ.

  • ಬೆಂಗಳೂರಿನಲ್ಲಿ ಅಪರೂಪದ ಬಿಳಿ ನಾಗರಹಾವು ಪತ್ತೆ

    ಬೆಂಗಳೂರಿನಲ್ಲಿ ಅಪರೂಪದ ಬಿಳಿ ನಾಗರಹಾವು ಪತ್ತೆ

    ಬೆಂಗಳೂರು: ಸಿಲಿಕಾನ್ ಸಿಟಿ ಪ್ರದೇಶದಲ್ಲಿ ನಾಗರಹಾವು ಕಂಡಾಗ ಹೆಚ್ಚು ಮಂದಿ ಬೆಚ್ಚಿ ಬೀಳುತ್ತಾರೆ. ಆದರೆ ಇಂದು ಅತೀ ಅಪರೂಪದ ಶ್ವೇತ ನಾಗನ ಕಂಡು ಜನರು ಭಯದ ಜೊತೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಇಂದು ಬಿಬಿಎಂಪಿ ಅರಣ್ಯ ಘಟಕಕ್ಕೆ ಎಂದಿನಂತೆ ಹಾವು ರಕ್ಷಣೆಗಾಗಿ ಕರೆ ಬಂದಿತು. ಯಲಹಂಕ ಬಾಗಲೂರು ಕ್ರಾಸ್‍ನಲ್ಲಿ ಕಂಪೌಂಡ್ ಒಳಗಿನ ಖಾಲಿ ಜಾಗದಲ್ಲಿ ಶ್ವೇತ ನಾಗ ಓಡಾಡುತ್ತಿತ್ತು. ಸ್ಥಳೀಯರು ಕರೆ ಮಾಡಿದಾಗ ಪಾಲಿಕೆ ಅರಣ್ಯ ಘಟಕದ ಸಿಬ್ಬಂದಿ ಹೋಗಿ ಹಾವನ್ನು ರಕ್ಷಿಸಿದರು.

    ಈ ಬಗ್ಗೆ ಮಾತನಾಡಿದ ವನ್ಯಜೀವಿ ಸಂರಕ್ಷಕ ರಾಜೇಶ್, ಶ್ವೇತ ನಾಗ ಅಥವಾ ವೈಟ್ ಕೋಬ್ರಾ ತುಂಬಾ ವಿಭಿನ್ನವಾದ ಹಾವು. ಮೂರು ವರ್ಷದಲ್ಲಿ ಈ ರೀತಿಯ ಮೂರು ಹಾವು ಬೆಂಗಳೂರಲ್ಲಿ ರಕ್ಷಣೆ ಮಾಡಲಾಗಿದೆ. ಈ ಹಾವು ಐದು ಅಡಿ ಇದ್ದು, ಹದ್ದುಗಳಿಗೆ ಆಹಾರವಾಗದೆ ಇಷ್ಟು ಸಮಯ ಬದುಕಿರುವುದು ಬಹಳ ಅಪರೂಪ. ಹಾವಿನ ಚರ್ಮದ ಸಮಸ್ಯೆಯಿಂದ ಬಿಳಿ ಬಣ್ಣದಲ್ಲಿದೆ. ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಲಹೆ, ಗೈಡ್ ಲೈನ್ ಪ್ರಕಾರ ಅದನ್ನು ಸುರಕ್ಷಿತ ಜಾಗಕ್ಕೆ ಬಿಡುಗಡೆ ಮಾಡಲಾಗುವುದು ಎಂದರು.

    ಇದೇ ವೇಳೆ ಉರಗ ತಜ್ಞ ನಾಗಭೂಷಣ್ ಮಾತನಾಡಿ, ಝೂ ನಲ್ಲಿ ಈ ಹಾವು ಇಡಬೇಕು ಎಂದು ಅಧಿಕಾರಿಗಳ ಸಲಹೆ ಪಡೆಯಲಾಗುತ್ತದೆ. ಈ ಹಾವು ತುಂಬಾ ಸೂಕ್ಷ್ಮವಾಗಿದೆ. ಬಿಸಿಲಿಗೆ ಚರ್ಮ, ಕಣ್ಣುಗಳ ರಕ್ಷಣೆ ಮಾಡಲು ಸುರಕ್ಷಿತ ಜಾಗದ ಅಗತ್ಯವಿದೆ ಎಂದರು.

  • ಗಣರಾಜ್ಯೋತ್ಸವಕ್ಕೆ ಬಾರದ ಪಾಲಿಕೆ ಅಧಿಕಾರಿಗಳು-ಮೇಯರ್ ಫುಲ್ ಗರಂ

    ಗಣರಾಜ್ಯೋತ್ಸವಕ್ಕೆ ಬಾರದ ಪಾಲಿಕೆ ಅಧಿಕಾರಿಗಳು-ಮೇಯರ್ ಫುಲ್ ಗರಂ

    ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರಾಸಕ್ತಿ ಮತ್ತೆ ಎದ್ದು ಕಾಣುತ್ತಿದೆ. ಇಂದು ಪಾಲಿಕೆಯ ಆವರಣದಲ್ಲಿ ನಡೆದ ಗಣರಾಜೊತ್ಸವ ಆಚರಣೆಗೆ ಪಾಲಿಕೆಯ ಅಧಿಕಾರಿಗಳು ಭಾಗಿಯಾಗದೇ ನಿರಾಸಕ್ತಿ ತೋರಿಸಿದ್ದಾರೆ.

    ಪ್ರತಿ ವರ್ಷದ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಭಾಗಿಯಾಗದೇ ಪಾಲಿಕೆ ಅಧಿಕಾರಿಗಳು ನಾಪತ್ತೆಯಾಗುತ್ತಾರೆ. ಇದು ಸರಿಯಾದ ಕ್ರಮವಲ್ಲ. ಎಲ್ಲರೂ ಭಾಗಿಯಾಗಬೇಕು ಎಂದು ಮೇಯರ್, ಕಮಿಷನರ್ ಸೂಚಿಸಿದರೂ ಡೊಂಟ್ ಕೇರ್ ಎಂದಿದ್ದಾರೆ.

    ಇಂದು ಪಾಲಿಕೆಯ ಆವರಣದಲ್ಲಿ ನಡೆದ ಧ್ವಜಾರೋಹಣದಲ್ಲಿ ಬಹುತೇಕ ಪಾಲಿಕೆ ಅಧಿಕಾರಿಗಳು ಗೈರಾಗಿದ್ದರು. ಇದನ್ನ ಕಂಡ ಮೇಯರ್ ಗೌತಮ್ ಕುಮಾರ್ ಗೈರಾದ ಅಧಿಕಾರಿಗಳ ವಿರುದ್ಧ ಗರಂ ಆದರು. ಗೈರಾದ ಅಧಿಕಾರಿಗಳ ಒಂದು ದಿನದ ವೇತನ ಕಡಿತಗೊಳಿಸಲು ನಿರ್ಧಾರ ಮಾಡಿದ್ದಾರೆ. ಶನಿವಾರ ಮೇಯರ್ ಗೌತಮ್ ಕುಮಾರ್ ಎಲ್ಲಾ ಪಾಲಿಕೆ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ಆಚರಣೆಗೆ ಬರುವಂತೆ ಸೂಚನೆಯನ್ನ ನೀಡಿದ್ದರು.

    ಮೇಯರ್ ಮಾತಿಗೆ ಸೊಪ್ಪು ಹಾಕದ ಪಾಲಿಕೆ ಅಧಿಕಾರಿಗಳು ಬೆಚ್ಚಗೆ ಮನೆಯಲ್ಲೇ ಮಲಗಿದ್ದಾರೆ. ಇನ್ನೂ ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅನೀಲ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ಇದೊಂದು ರೀತಿ ಪಾಲಿಕೆ ಅಧಿಕಾರಿಗಳ ನಿರಾಸಕ್ತಿ. ಎಲ್ಲರೂ ಹಾಜರಾಗುವಂತೆ ಸೂಚಿಸಿದ್ದರೂ ಹಾಜರಾಗಿಲ್ಲ. ಗೈರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

  • ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ವಾರ್

    ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ವಾರ್

    ಮಂಡ್ಯ: ಸಹಕಾರ ಸಂಘಗಳ ಉಪ ನಿಬಂಧಕ ಹುದ್ದೆಗಾಗಿ ಇದೀಗ ಜಟಾಪಟಿ ಏರ್ಪಟ್ಟಿದೆ. ಕೃಷ್ಣಮೂರ್ತಿ ಹಾಗೂ ವಿಕ್ರಮರಾಜೇ ಅರಸ್ ಎಂಬ ಇಬ್ಬರು ಅಧಿಕಾರಿಗಳ ನಡುವೆ ಕುರ್ಜಿಗಾಗಿ ವಾರ್ ನಡೆಯುತ್ತಿದೆ. ಮಂಡ್ಯದ ಸಹಕಾರ ಸಂಘಗಳ ಉಪ ನಿಬಂಧಕರಾಗಿ ಕೃಷ್ಣಮೂರ್ತಿ ಅವರು ಕಳೆದ ಐದು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಸರ್ಕಾರ ಜನವರಿ 18 ರಂದು ಕೃಷ್ಣಮೂರ್ತಿ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಲಾಗಿತ್ತು.

    ಈ ಹುದ್ದೆಗೆ ಮೈಸೂರಿನ ಕಾಫಿ ಸಂಸ್ಕರಣ ಸಹಕಾರ ಸಂಘದ ಉಪ ನಿಬಂಧಕರಾಗಿದ್ದ ವಿಕ್ರಮರಾಜೇ ಅರಸ್ ಅವರನ್ನು ಮುಂಬಡ್ತಿ ನೀಡಿ ಮಂಡ್ಯದ ಸಹಕಾರ ಸಂಘಗಳ ಉಪ ನಿಬಂಧಕರಾಗಿ ನೇಮಕ ಮಾಡಿತ್ತು. ನಂತರ ಜನವರಿ 20ರಂದು ಕೃಷ್ಣಮೂರ್ತಿ ಅವರ ಅನುಪಸ್ಥಿತಿಯಲ್ಲಿ ವಿಕ್ರಮರಾಜೇ ಅರಸ್ ಅವರು ಅಧಿಕಾರ ವಹಿಸಿಕೊಂಡಿದ್ದರು.

    ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೃಷ್ಣಮೂರ್ತಿ ನಾನು ಇಲ್ಲಿ ಕೆಲಸಕ್ಕೆ ಬಂದು ಐದು ತಿಂಗಳಾಗಿದೆ. ಹೀಗಿರುವಾಗ ಸರ್ಕಾರ ನನ್ನ ಇಷ್ಟು ಬೇಗ ವರ್ಗಾವಣೆ ಮಾಡುವಂತಿಲ್ಲ. ಒಬ್ಬರಿಗೆ ಮುಂಬಡ್ತಿ ನೀಡಬೇಕು ಎಂದರೆ ಖಾಲಿ ಇರುವ ಜಾಗಕ್ಕೆ ಹಾಕಬೇಕು ಎಂದು ಕೃಷ್ಣಮೂರ್ತಿ ಅವರು ಜನವರಿ 21 ರಂದು ಕೆಎಟಿ ಮೊರೆ ಹೋಗಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದರು. ಇದಕ್ಕೆ ಕೆಎಟಿ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಯ್ದುಕೊಂಡು, ಕೃಷ್ಣಮೂರ್ತಿ ಅವರು ಕಾರ್ಯನಿರ್ಹಿಸಬೇಕೇಂದು ಆದೇಶ ನೀಡಿತ್ತು.

    ವಿಕ್ರಮರಾಜೇ ಅರಸ್ ನನ್ನನ್ನು ಸರ್ಕಾರ ನೇಮಕ ಮಾಡಿದ್ದು, ಹೀಗಾಗಿ ನಾನು ಇಲ್ಲಿಯೇ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಒಪ್ಪದ ಕೃಷ್ಣಮೂರ್ತಿ ನಾನು ಕೆಲಸ ಮಾಡುತ್ತೇನೆ, ನೀವು ಹೊರಗೆ ಹೋಗಿ ಎಂದು ಹೇಳ್ತಾ ಇದ್ದಾರೆ. ಸದ್ಯ ಇಬ್ಬರು ಕಚೇರಿಗೆ ಬಂದು ಕುಳಿತುಕೊಂಡು ಕುರ್ಚಿಗಾಗಿ ವಾರ್ ಮಾಡುತ್ತಿದ್ದಾರೆ.