Tag: officers

  • ಕೊರೊನಾ ವೈರಸ್ ಭೀತಿ- ಬೆಂಗ್ಳೂರಿನ ಪೊಲೀಸರಿಗೆ ಹೆಚ್ಚುವರಿ 3 ಸಾವಿರ ಮಾಸ್ಕ್ ವಿತರಣೆ

    ಕೊರೊನಾ ವೈರಸ್ ಭೀತಿ- ಬೆಂಗ್ಳೂರಿನ ಪೊಲೀಸರಿಗೆ ಹೆಚ್ಚುವರಿ 3 ಸಾವಿರ ಮಾಸ್ಕ್ ವಿತರಣೆ

    ಬೆಂಗಳೂರು: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ರಾಜ್ಯದ ಮೇಲೂ ಕರಿನೆರಳು ಬೀರಿರುವ ಕೊರೊನಾಗೆ ಈಗಾಗಲೇ 4 ಮಂದಿ ತುತ್ತಾಗಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಸಿಬ್ಬಂದಿ ಸುರಕ್ಷತೆಗಾಗಿ ಹೆಚ್ಚುವರಿ 3 ಸಾವಿರ ಮಾಸ್ಕ್‌ಗಳನ್ನು ವಿತರಣೆ ಮಾಡಿದೆ.

    ದಿನೇ ದಿನೇ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರ ಎಫೆಕ್ಟ್ ಹಂತ ಹಂತವಾಗಿ ಎಲ್ಲಾ ವಲಯಗಳಿಗೂ ಹಬ್ಬುತ್ತಿದ್ದು, ಎಲ್ಲರೂ ಭಯಭೀತರಾಗಿದ್ದಾರೆ. ಸದಾ ಜನರ ಮಧ್ಯೆ ಕೆಲಸ ಮಾಡುವ ಬೆಂಗಳೂರು ನಗರ ಸಂಚಾರಿ ಪೊಲೀಸರು ಮೊದಲಿಗೆ ಈ ಸೋಂಕಿನ ಭೀತಿ ಹಿನ್ನೆಲೆ ಮಾಸ್ಕ್ ನೀಡುವಂತೆ ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಸಿಬ್ಬಂದಿ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು, ಎಲ್ಲಾ ಕರ್ತವ್ಯ ನಿರತ ಪೊಲೀಸರಿಗೆ ಸೂಕ್ತ ಭದ್ರತೆ ಇರುವ ಮಾಸ್ಕ್‌ಗಳನ್ನು ವಿತರಣೆ ಮಾಡುವಂತೆ ತಿಳಿಸಿ, ತೀರ ಅನಿವಾರ್ಯ ಇರುವವರಿಗೆ ಮಾತ್ರ ಮೊದಲಿಗೆ ಮಾಸ್ಕ್ ವಿತರಿಸಿದ್ದರು.

    ಯಾವಾಗ ಕೊರೊನಾ ವೈರಸ್ ಹರಡುತ್ತಿರುವವರ ಸಂಖ್ಯೆ ಹೆಚ್ಚಾಯ್ತೋ ಎಲ್ಲಾ ಟ್ರಾಫಿಕ್ ಮತ್ತು ಸಿವಿಲ್ ಪೊಲೀಸರು ಕೂಡ ನಮಗೂ ಮಾಸ್ಕ್ ಕೊಡಿ ಎಂದು ಒತ್ತಾಯಿಸಿದ್ದರು. ಇದರಿಂದ ಎಚ್ಚುತ್ತ ಪೊಲೀಸ್ ಇಲಾಖೆ ಇಂದು ಹೆಚ್ಚುವರಿಯಾಗಿ 3 ಸಾವಿರ ಮಾಸ್ಕ್‌ಗಳನ್ನು ಇಲಾಖೆ ವತಿಯಿಂದ ಸಿಬ್ಬಂದಿಗೆ ನೀಡಿದ್ದಾರೆ.

    ಇದು ಹಂತ ಹಂತವಾಗಿ ಅವಶ್ಯಕತೆ ಇರುವ ಎಲ್ಲಾ ಇಲಾಖೆಗೆ ವಿಸ್ತರಿಸುವ ಸಾಧ್ಯತೆ ಇದ್ದು, ಸದ್ಯಕ್ಕೆ ಪೊಲೀಸರಿಗೆ ಮಾತ್ರ ಮಾಸ್ಕ್‌ಗಳನ್ನು ನೀಡಲಾಗ್ತಿದೆ. ಎಲ್ಲಾ ಸಿವಿಲ್ ಪೊಲೀಸರಿಗೂ ಮಾಸ್ಕ್ ಕಡ್ಡಾಯ ಗೊಳಿಸಿದರೆ ಸಾವಿರಾರು ಸಂಖ್ಯೆಯಲ್ಲಿ ಮಾಸ್ಕ್ ಗಳು ಬೇಕಾಗುತ್ತೆ. ಹೀಗಾಗಿ ಸದ್ಯ ಟ್ರಾಫಿಕ್ ಮತ್ತು ತೀರ ಅವಶ್ಯಕತೆ ಇರುವ ಪೊಲೀಸರಿಗೆ ಮಾತ್ರ ಮಾಸ್ಕ್‌ಗಳನ್ನು ನೀಡಲಾಗುತ್ತಿದೆ.

  • ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ- ವಿಡಿಯೋ ವೈರಲ್

    ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ- ವಿಡಿಯೋ ವೈರಲ್

    ವಿಜಯಪುರ: ಜಿಲ್ಲೆಯ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ, ಇದೀಗ ಖರೀದಿ ಕೇಂದ್ರದ ಸಿಬ್ಬಂದಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿನ ತೊಗರಿ ಖರೀದಿ ಕೇಂದ್ರದಲ್ಲಿ ಹಣ ವಸೂಲಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಇಸಾಕ್ ಬಡಿಗೇರ್ ರೈತರಿಂದ ಪ್ರತಿ ಕ್ವಿಂಟಲ್ ಗೆ 100 ರಿಂದ 150 ರೂಪಾಯಿ ವಸೂಲಿ ಮಾಡುತ್ತಿದ್ದಾನೆ. ಕಾಖಂಡಕಿ ತೊಗರಿ ಖರೀದಿ ಕೇಂದ್ರ ದಲ್ಲಿನ ಸಿಬ್ಬಂದಿಯ ಈ ವರ್ತನೆಯಿಂದ ರೈತರು ಬೇಸತ್ತಿದ್ದಾರೆ.

    ಪ್ರತಿ ರೈತರಿಂದ ಉಚಿತವಾಗಿ ತೊಗರಿ ಖರೀದಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಆದೇಶ ನೀಡಿದರೂ, ಈ ಕಂಪ್ಯೂಟರ್ ಆಪರೇಟರ್ ಮಾತ್ರ ರಾಜಾರೋಷವಾಗಿ ರೈತರಿಂದ ಸುಲಿಗೆ ಮಾಡುತ್ತಿದ್ದಾನೆ. ಒಬ್ಬ ರೈತರಿಂದ 10 ಕ್ವಿಂಟಲ್ ತೊಗರಿ ಖರೀದಿ ಮಾಡಬೇಕು ಎಂದು ಸರ್ಕಾರದ ಸೂಚನೆಯಿಂದ ಪ್ರತಿ ರೈತರಿಂದಲೂ 10 ಕ್ವಿಂಟಲ್ ಗೆ ಕಡಿಮೆ ಎಂದರೂ ಸಾವಿರ ರೂಪಾಯಿ ಸುಲಿಗೆ ಮಾಡಲಾಗುತ್ತಿದೆ.

    ಎರಡು ದಿನಗಳ ಹಿಂದಷ್ಟೇ ಇಂತಹ ಅಕ್ರಮ ದಂಧೆಯ ತೊಗರಿ ಖರೀದಿ ಕೇಂದ್ರದ ಮೇಲೆ ಎಸಿಬಿ ದಾಳಿ ನಡೆಸಿತ್ತು. ಆದರೂ ಎಚ್ಚೆತ್ತುಗಳ್ಳದ ಖದೀಮರು ಅದೇ ಕೆಲಸ ಮುಂದುವರಿಸಿದ್ದು, ರೈತರಿಂದ ಸುಲಿಗೆ ಮಾಡುತ್ತಿದ್ದಾರೆ.

  • ರೈತರ ತೋಟ ನಾಶ ಪ್ರಕರಣ- ಸಂತ್ರಸ್ತರ ಮನೆಗೆ ಹಲವು ಮುಖಂಡರ ಭೇಟಿ

    ರೈತರ ತೋಟ ನಾಶ ಪ್ರಕರಣ- ಸಂತ್ರಸ್ತರ ಮನೆಗೆ ಹಲವು ಮುಖಂಡರ ಭೇಟಿ

    ತುಮಕೂರು: ಗುಬ್ಬಿ ತಾಲೂಕಿನ ತಿಪ್ಪೂರಿನ ಉಡುಸಲಮ್ಮ ದೇವಸ್ಥಾನದ ಅರ್ಚಕರಿಗೆ ಸೇರಿದ ತೋಟವನ್ನು ನಾಶಪಡಿಸಿದ್ದ ಹಿನ್ನೆಲೆಯಲ್ಲಿ ಇಂದು ಹಲವಾರು ಮುಖಂಡರು, ರೈತ ನಾಯಕರು ಸಂತ್ರಸ್ತ ಅರ್ಚಕರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

    ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಬೆಳೆದು ನಿಂತಿದ್ದ ತೆಂಗಿನ ಮರವನ್ನು ಉರುಳಿಸಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಯುವ ಮುಖಂಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ ಭೇಟಿ ಕೊಟ್ಟು ಸಾಂತ್ವಾನ ಹೇಳಿದ್ದಾರೆ. ಅಲ್ಲದೆ ತೋಟ ಕಳೆದುಕೊಂಡು ಕಂಗಾಲಾಗಿದ್ದ ರೈತ ಮಹಿಳೆ ಸಿದ್ದಮ್ಮಗೆ ಧನಸಹಾಯ ಮಾಡಿದ್ದಾರೆ. ಇದನ್ನೂ ಓದಿ: 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟ ನಾಶ ಮಾಡಿದ್ರಾ ತಹಶೀಲ್ದಾರ್?

    ಬಳಿಕ ಮಾತನಾಡಿದ ರಾಜೇಂದ್ರ, ಕಾನೂನು ಗಾಳಿಗೆ ತೂರಿ ಮರಗಳನ್ನು ಉರುಳಿಸಿದ್ದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ರೈತರಾಗಿದ್ದರೆ ಅವರ ಕಷ್ಟ ಏನು ಎಂದು ಗೊತ್ತಾಗೋದು. ವ್ಹೀಲ್ ಚೇರ್ ಮೇಲೆ ಕುಳಿತವರಿಗೆ ರೈತರ ಕಷ್ಟ ಎಲ್ಲಿ ಗೊತ್ತಾಗಬೇಕು. ಈ ಕೂಡಲೇ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

  • ರೈತ ಮಹಿಳೆಯ ಮರ ಕಡಿಯಲು ನಾನು ಅನುಮತಿ ನೀಡಿಲ್ಲ: ತಹಶೀಲ್ದಾರ ಮಮತಾ

    ರೈತ ಮಹಿಳೆಯ ಮರ ಕಡಿಯಲು ನಾನು ಅನುಮತಿ ನೀಡಿಲ್ಲ: ತಹಶೀಲ್ದಾರ ಮಮತಾ

    – ನಮ್ಮ ಸಿಬ್ಬಂದಿ ಮರ ಕಡಿದಿದ್ದು ತಪ್ಪು

    ತುಮಕೂರು: ರೈತ ಮಹಿಳೆಯ ಮರ ಕಡಿಯಲು ನಾನು ಅನುಮತಿ ನೀಡಿಲ್ಲ. ಆದರೂ ನಮ್ಮ ಸಿಬ್ಬಂದಿ ಮರ ಕಡಿದು ತಪ್ಪು ಮಾಡಿದ್ದಾರೆ ಎಂದು ಗುಬ್ಬಿ ತಾಲೂಕಿನ ತಹಶೀಲ್ದಾರ್ ಮಮತಾ ಹೇಳಿದ್ದಾರೆ.

    ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಅವರಿಗೆ ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು. ಆದರೆ ಜಾತ್ರೆಗೆ ಜಾಗ ಬೇಕು ಎಂದು ಈ ಜಮೀನಿನಲ್ಲಿ ಬೆಳದಿದ್ದ ಅಡಕೆ, ತೆಂಗು ಮತ್ತು ಬಾಳೆಯನ್ನು ಕಡಿದು ಹಾಕಲಾಗಿತ್ತು. ಇದನ್ನು ಮಮತಾ ಅವರ ಆದೇಶ ಮೇರೆಗೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

    ಈಗ ಈ ಆರೋಪವನ್ನು ತಳ್ಳಿ ಹಾಕಿರುವ ಮಮತಾ, ನಾನು ರೈತ ಮಹಿಳೆ ಸಿದ್ದಮ್ಮರ ಮರ ಕಡಿಯಲು ಅನುಮತಿ ನೀಡಿರಲಿಲ್ಲ. ಆದರೂ ನಮ್ಮ ಸಿಬ್ಬಂದಿ ಮರ ಕಡಿದು ತಪ್ಪು ಮಾಡಿದ್ದಾರೆ. ಗ್ರಾಮ ಲೆಕ್ಕಿಗ ಮುರುಳಿ ಸೇರಿದಂತೆ ಇತರ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಪ್ಪಿಗೆ ಕೊಟ್ಟ ಅರ್ಚಕರ ಮರವನ್ನು ಮಾತ್ರ ತೆರುಗೊಳಿಸಲು ಆದೇಶಿಸಲಾಗಿತ್ತು. ಆದರೆ ನಮ್ಮ ಸಿಬ್ಬಂದಿ ಅಲ್ಲಿಗೆ ಹೋದಾಗ ಅನುಮತಿ ಇಲ್ಲದಿದ್ದರು ಈ ಕೆಲಸ ಮಾಡಿದ್ದಾರೆ ಎಂದು ಮಮತಾ ಅವರು ತಿಳಿಸಿದ್ದಾರೆ.

    ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗುವುದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶೀಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿತ್ತು. ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಿ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 300 ಅಡಿಕೆ, 30 ತೆಂಗು ಮತ್ತು ಬಾಳೆ ಗಿಡಗಳನ್ನು ಉರುಳಿಸಿದ್ದರು. ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿದ್ದಾರೆ. ಹೀಗಾಗಿ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಜಮೀನು ಕೊಡುಗೆಯಾಗಿ ಕೊಟ್ಟಿದ್ದರು. ಅಲ್ಲದೆ ಜಮೀನು ಪೂರ್ಣ ಸ್ವಾಧೀನ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಮುನಿ ಕೆಂಪಯ್ಯ ಕುಟುಂಬ ಅರ್ಜಿ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಗಿಡಗಳನ್ನು ನಾಶ ಮಾಡಿದ್ದಾರೆ.

    ಈ ನಡುವೆ ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮರ ಮಧ್ಯೆಯೇ ಜಮೀನು ಹಂಚಿಕೆಯಲ್ಲಿ ವಿವಾದ ಉಂಟಾಗಿತ್ತು. ಇದರ ಲಾಭ ಪಡೆದುಕೊಂಡ ತಾಲೂಕು ಆಡಳಿತ ಏಕಾಏಕಿ ತೋಟವನ್ನು ಉರುಳಿಸಿದೆ. ಗುಬ್ಬಿ ಪೊಲೀಸರ ಸಮುಖದಲ್ಲೇ ಗ್ರಾಮ ಲೆಕ್ಕಿಗ ಮುರುಳಿ ಮರಗಳನ್ನು ಕಡಿದಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕುಟುಂಬ ದುಃಖದ ಮಡುವಿನಲ್ಲಿದೆ.

  • ಸರ್ಕಾರಿ ಸಂಬಳ ತಗೊಳಲ್ವಾ, ಸುಮ್ನೆ ಕೆಲಸ ಮಾಡ್ತೀರಾ: ಸಚಿವ ಗೋಪಾಲಯ್ಯ ಗರಂ

    ಸರ್ಕಾರಿ ಸಂಬಳ ತಗೊಳಲ್ವಾ, ಸುಮ್ನೆ ಕೆಲಸ ಮಾಡ್ತೀರಾ: ಸಚಿವ ಗೋಪಾಲಯ್ಯ ಗರಂ

    ಚಿಕ್ಕಬಳ್ಳಾಪುರ: ಸರ್ಕಾರಿ ಸಂಬಳ ತಗೊಳಲ್ವಾ, ಮಾಹಿತಿ ಇಲ್ಲದೆ ಸಭೆಗೆ ಬರ್ತಿರಾ? ನಾನೇನು ಸಭೆಗೆ ಮಾತಾಡಿಕೊಂಡು ಹೋಗೋಕೆ ಬಂದಿದ್ದನಾ..? ಬುಕ್ ಲ್ಲಿ ಪ್ರಿಂಟ್ ಆಗಿರೋದು ನೋಡಿಕೊಂಡು ಹೋಗೋಕಾ ಗೋಪಾಲಯ್ಯ ಬಂದಿರೋದಾ ಸಭೆಗೆ ಅಂತ ತಮ್ಮದೇ ಇಲಾಖಾಧಿಕಾರಿ ವಿರುದ್ಧ ಸಚಿವ ಗೋಪಾಲಯ್ಯ ಗರಂ ಆಗಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ವೇಳೆ ಸಮರ್ಪಕ ಮಾಹಿತಿ ನೀಡದ ಜಿಲ್ಲೆಯ ಆಹಾರ ಇಲಾಖೆಯ ಉಪನಿದೇರ್ಶಕ ಸೋಮಶೇಖರ್ ವಿರುದ್ಧ ಗರಂ ಆದರು. ಬೆಂಗಳೂರಿನಲ್ಲಿ ಸಭೆ ನಡೆಸಿ ತ್ವರಿತಗತಿಯಲ್ಲಿ ಪಡಿತರ ಕಾರ್ಡ್ ವಿತರಣೆ ಮಾಡುವಂತೆ ಸೂಚಿಸಿದ್ರೂ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಯಾವ ಯಾವ ಕಾರ್ಡ್‍ಗಳು ಎಷ್ಟಿವೆ ಎಂಬ ಮಾಹಿತಿಯೂ ಇಲ್ಲ ಸುಮ್ನೆ ಸಭೆಗೆ ಬರ್ತಿರಾ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

    ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಡಿಡಿ ಸಮರ್ಪಕ ಮಾಹಿತಿ ನೀಡಿಲ್ಲ. ಹೀಗೆ ಮುಂದುವರೆದರೆ ಇಲಾಖೆಗೆ ಇಂತಹ ಅಧಿಕಾರಿ ಅವಶ್ಯಕತೆ ಇಲ್ಲ ಅಂತ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

  • ಅರೆ ಬೆತ್ತಲೆಯಾಗಿ ಬೇವಿನ ಸೀರೆ ಹರಕೆ – ಕೋಣದ ಬಲಿ ತಡೆಯಲು ಅಧಿಕಾರಿಗಳ ಜಾಗರಣೆ

    ಅರೆ ಬೆತ್ತಲೆಯಾಗಿ ಬೇವಿನ ಸೀರೆ ಹರಕೆ – ಕೋಣದ ಬಲಿ ತಡೆಯಲು ಅಧಿಕಾರಿಗಳ ಜಾಗರಣೆ

    ದಾವಣಗೆರೆ: ಎರಡು ವರ್ಷಗಳಿಗೊಮ್ಮೆ ನಡೆಯುವ ದಾವಣಗೆರೆ ನಗರ ದೇವತೆ ದುಗ್ಗಮ್ಮನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದ್ದು, ಭಕ್ತರು ದೇವಿಯ ಕೃಪೆಗೆ ಪಾತ್ರರಾಗಲು ಹರಕೆ ತೀರುಸುತ್ತಿದ್ದಾರೆ. ಈ ನಡುವೆ ಮಕ್ಕಳು ಹಾಗೂ ಮಹಿಳೆಯರಿಗೆ ಅರೆ ಬೆತ್ತಲೆಯಾಗಿ ಬೇವಿನ ಸೀರೆ ಉಟ್ಟು ದೇವಸ್ಥಾನ ಪ್ರದಕ್ಷಿಣೆ ಹಾಕುತ್ತಿದ್ದರು. ಈ ಆಚರಣೆಯನ್ನು ಕಂಡು ಡಿಸಿ ಮಹಾಂತೇಶ್ ಬೀಳಗಿ ಹಾಗೂ ಎಸ್‍ಪಿ ಹನುಮಂತರಾಯ ಇದನ್ನು ಪಾಲಿಸುತ್ತಿದ್ದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ದಾವಣಗೆರೆ ನಗರದ ದೇವತೆ ದುಗ್ಗಮ್ಮ ದೇವಸ್ಥಾನದ ರಸ್ತೆಯಲ್ಲಿ ಮಕ್ಕಳನ್ನು ಬೆತ್ತಲೆ ಮಾಡಿ ನೀರು ಹಾಕಿ ಬೇವಿನ ಸೀರೆ ಉಡಿಸುತ್ತಿದ್ದ ಪೋಷಕರಿಗೆ ಅಧಿಕಾರಿಗಳು ಕ್ಲಾಸ್ ತೆಗೆದುಕೊಂಡಿದ್ದಲ್ಲದೆ, ಈ ರೀತಿ ಮೂಡ ನಂಬಿಕೆಯಿಂದ ಮಕ್ಕಳಿಗೆ ಹಿಂಸೆ ನೀಡಬಾರದು ಎಂದು ತಿಳಿಹೇಳಿದ್ದಾರೆ. ಅಲ್ಲದೆ ಎಸ್‍ಪಿ ಹನುಮಂತರಾಯ ಕರ್ತವ್ಯದಲ್ಲಿ ಇದ್ದ ಪೋಲೀಸ್ ಸಿಬ್ಬಂದಿಗೆ ಕೂಡ ತರಾಟೆಗೆ ತೆಗೆದುಕೊಂಡರು.

    ಇತ್ತ ದೇವರಿಗೆ ಕೋಣದ ಬಲಿ ತಡೆಯಲು ಡಿಸಿ, ಎಸ್‍ಪಿ ಸೇರಿದಂತೆ ಅಧಿಕಾರಿಗಳು ದೇವಸ್ಥಾನದ ಎದುರು ಇಡೀ ರಾತ್ರಿ ಜಾಗರಣೆ ಮಾಡಿದರು. ಸರ್ಕಾರದ ಆದೇಶದಂತೆ ದೇವಿಗೆ ಬಿಟ್ಟ ಕೋಣದ ರಕ್ತ ಸಿರಿಂಜ್‍ನಿಂದ ತೆಗೆದು ದೇವಿಗೆ ಅರ್ಪಣೆ ಮಾಡಿದ್ದಲ್ಲದೆ, ಧಾನ್ಯದಲ್ಲಿ ಬೆರಸಿ ಇಡೀ ನಗರಕ್ಕೆ ಚರಕ ಚಲ್ಲಿದರು. ಅಲ್ಲದೆ ದುರ್ಗಾಂಬಿಕಾ ದೇವಿ ಜಾತ್ರೆಯ ಪ್ರಯುಕ್ತ ದೇವಿಗೆ ಕೋಣ ಬಲಿ ಕೊಡುವುದು ಇಲ್ಲಿಯ ಸಂಪ್ರದಾಯವಾಗಿದ್ದು, ಈ ಬಾರಿ ಸಂಪೂರ್ಣ ನಿಷೇಧ ಮಾಡಿದ್ದಲ್ಲದೆ ದೇವಸ್ಥಾನ ಧರ್ಮದರ್ಶಿ ಸಮಿತಿಯ ಸಹಕಾರದೊಂದಿಗೆ ಜಿಲ್ಲಾಡಳಿತ ಕೋಣ ಬಲಿ ತಡೆಯೊಡ್ಡಿದೆ.

    ದೇವಸ್ಥಾನ ಸುತ್ತಲು 100 ಮೀಟರ್ ಪ್ರದೇಶದಲ್ಲಿ ಯಾವುದೇ ಪ್ರಾಣಿ ಬಲಿ ನಡೆಯದಂತೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನದ ಸುತ್ತಮುತ್ತ 1 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ನಿಯೋಜಿಸಲಾಗಿದೆ. ಅಲ್ಲದೆ ರಾತ್ರಿಯಿಡಿ ಭಕ್ತರು ದೀಡ್ ನಮಸ್ಕಾರ, ಉರುಳುಸೇವೆ ಮಾಡಿ ದೇವಿಗೆ ಹರಕೆ ತೀರಿಸಿದರು.

  • ಅನಾಥ ಯುವತಿಯರಿಗೆ ಕೂಡಿಬಂತು ಕಂಕಣ ಭಾಗ್ಯ- ಇಲ್ಲಿ ಅಧಿಕಾರಿಗಳೇ ಪೋಷಕರು

    ಅನಾಥ ಯುವತಿಯರಿಗೆ ಕೂಡಿಬಂತು ಕಂಕಣ ಭಾಗ್ಯ- ಇಲ್ಲಿ ಅಧಿಕಾರಿಗಳೇ ಪೋಷಕರು

    ದಾವಣಗೆರೆ: ಅಲ್ಲಿ ಸಡಗರ ಮನೆ ಮಾಡಿತ್ತು. ಮದುವೆ ಮನೆ ಎಂದರೆ ಕೇಳಬೇಕೇ ಸಂಭ್ರಮವೇ ಹೆಚ್ಚು ಆದರೆ ಇಲ್ಲಿ ಸಂಬಂಧಿಕರ ಕಲರವವಿರಲಿಲ್ಲ. ಸ್ನೇಹಿತರು, ಹಿತೈಷಿಗಳು ಹಾಗೂ ಅಧಿಕಾರಿಗಳ ಶುಭಹಾರೈಕೆ ಇತ್ತು. ಸಾಂಪ್ರದಾಯಿಕ ವಾತಾವರಣದಲ್ಲಿ ಸಂಪ್ರದಾಯ ಬದ್ಧವಾಗಿ ಅಧಿಕಾರಿಗಳೇ ಸಂಬಂಧಿಕರ ಸ್ಥಾನದಲ್ಲಿ ನಿಂತು ಇಬ್ಬರು ಯುವತಿಯರಿಗೆ ಧಾರೆಯೆರೆದು ಅವರ ಬಾಳಿಗೆ ಬೆಳಕು ನೀಡಿದ್ದು ವಿಶೇಷವಾಗಿತ್ತು.

    ಹೌದು. ದಾವಣಗೆರೆ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀರಾಮನಗರದ ರಾಜ್ಯ ಮಹಿಳಾ ನಿಲಯದಲ್ಲಿಂದು ಇಂದು ವಿವಾಹದ ಸಂಭ್ರಮ ಕಂಡುಬಂದಿತ್ತು. ಹೆತ್ತವರಿಂದ ದೂರವಾಗಿ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಅನಿತಾ ಹಾಗೂ ರೇಣುಕಾ ಗೊರವಪ್ಪನವರ ವಿವಾಹ ಇಂದು ಬೆಳಗ್ಗೆ 11ರಿಂದ 11.30 ವರೆಗೂ ಇದ್ದ ವೃಶ್ಚಿಕ ಲಗ್ನದಲ್ಲಿ ಸಂಭ್ರಮದಿಂದ ಜರುಗಿತು.

    ಅನಿತಾ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾಳೆಕೊಪ್ಪದ ಲೋಲಾಕ್ಷಿ, ಸುಬ್ಬರಾಯ ಹೆಗಡೆಯವರ ಪುತ್ರ ವಿನಾಯಕ ಹೆಗಡೆ ಬಾಳ ಸಂಗಾತಿಯನ್ನಾಗಿಸಿಕೊಂಡರು. ರೇಣುಕಾ ಗೊರವಪ್ಪನವರ ಅವರ ವಿವಾಹ ಶಿರಸಿ ತಾಲೂಕಿನ ಶಿವಳ್ಳಿಯ ಸೀತಾ ಹಾಗೂ ಜನಾರ್ದನ ಸುಬ್ಬರಾಯ ಭಟ್ಟ ಅವರ ಪುತ್ರ ನಾಗೇಂದ್ರಭಟ್ಟ ಅವರೊಂದಿಗೆ ಜರುಗಿತು. ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಪೋಷಕರ ಸ್ಥಾನದಲ್ಲಿ ನಿಂತು ಈ ಇಬ್ಬರು ಯುವತಿಯರಿಗೆ ಧಾರೆ ಎರೆದು ಕೊಟ್ಟಿದ್ದು ವಿಶೇಷವಾಗಿತ್ತು.

    ತಮ್ಮ ಮನೆಯ ಮಕ್ಕಳಂತೆ ಅಧಿಕಾರಿಗಳಿಬ್ಬರೂ ಮನಃಪೂರ್ವಕವಾಗಿ ಹರಸಿ ಹೊಸಬಾಳಿಗೆ ಅಡಿಯಿಟ್ಟ ದಂಪತಿಗೆ ಶುಭಾಶಯ ಕೋರಿದರು. ಅನಾಥ ಭಾವದಿಂದ ಕೊರಗುತ್ತಿದ್ದ ಹೆಣ್ಣು ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿದ್ದು ಆ ಕ್ಷಣದಲ್ಲಿ ಕಂಡಿತು.

    ಇದರೊಂದಿಗೆ ಮೌಢ್ಯತೆಯ ಅಂಧಕಾರಕ್ಕೆ ಬಲಿಯಾದ ಹೆಣ್ಣು ಮಗಳೊಬ್ಬಳ ಕರುಳಿನ ಕುಡಿಯ ನಾಮಕರಣ ಕೂಡ ಸಂಭ್ರಮದಿಂದ ನಡೆಯಿತು. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಅಣಬೂರು ಗೊಲ್ಲರಹಟ್ಟಿ ನಿವಾಸಿ. ಹುಟ್ಟಿನಿಂದಲೇ ಮಾತು ಬರುತ್ತಿರಲಿಲ್ಲ. ಈ ಮುಗ್ಧ ಮಹಿಳೆ ಮೇಲೆ ಕಳೆದ ಒಂದು ವರ್ಷದ ಹಿಂದೆ ಪಾಪಿಯೊಬ್ಬ ಅತ್ಯಾಚಾರವೆಸಗಿದ್ದ, ಈ ಕಾರಣ ಒಂದು ಗಂಡು ಮಗುವಿಗೆ ಜನ್ಮವಿತ್ತಳು ಮಹಾತಾಯಿ. ವಿಚಿತ್ರ ಎಂದರೆ ಯಾದವ ಸಮುದಾಯದವರಾದ ಈ ಮಹಿಳೆಯನ್ನ ಗ್ರಾಮದಿಂದಲೇ ಹೊರಗೆ ಇಡಲಾಗಿತ್ತು.

    ಮೌಢ್ಯತೆ ಹಿನ್ನೆಲೆ ಗ್ರಾಮಸ್ಥರು ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಬಹಿಷ್ಕಾರ ಹಾಕಿದ್ದರು. ಗ್ರಾಮದ ಹೊರವಲಯದಲ್ಲಿ ಮಗುವಿನೊಂದಿಗೆ ಮೂಗ ಮಹಿಳೆ ವಾಸ ಮಾಡುತ್ತಿದ್ದಳು. ಜಿಲ್ಲಾಧಿಕಾರಿಗಳೇ ಗ್ರಾಮಕ್ಕೆ ಭೇಟಿ ನೀಡಿ ಮನವೊಲಿಸಿದ್ದರೂ ಸ್ಥಳೀಯರು ಮಾತ್ರ ಮಹಿಳೆ ಗ್ರಾಮ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ನಂತರ ಜಿಲ್ಲಾಧಿಕಾರಿಗಳು ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿದ್ದರು. ಇದೀಗ ಆ ಮಗುವಿಗೆ ಜಿಲ್ಲಾಡಳಿ ನೇತೃತ್ವದಲ್ಲಿ ನಾಮಕರಣ ಮಾಡಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಂದಮ್ಮನ ಕಿವಿಯಲ್ಲಿ ಮೂರು ಬಾರಿ ಮಗುವಿನ ಹೆಸರು ಹೇಳಿ ನಾಮಕರಣ ಮಾಡಿದರು.

  • ಜೈಲಿನಲ್ಲೇ ಆರೋಪಿಯ ಸೆಲ್ಫಿ – ಫೋಟೋ ಫೇಸ್‍ಬುಕ್‍ಗೆ ಅಪ್ಲೋಡ್

    ಜೈಲಿನಲ್ಲೇ ಆರೋಪಿಯ ಸೆಲ್ಫಿ – ಫೋಟೋ ಫೇಸ್‍ಬುಕ್‍ಗೆ ಅಪ್ಲೋಡ್

    – ಬೆಳಗಾವಿ ಜೈಲು ಅಧಿಕಾರಿಗಳ ಕರ್ತವ್ಯ ನಿಷ್ಠೆಯ ಕೈಗನ್ನಡಿ

    ಮಂಡ್ಯ: ಜೈಲಿನಲ್ಲಿ ಆರೋಪಿಗಳು ಹಾಗೂ ಕೈದಿಗಳು ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಂಡು ಫೇಸ್‍ಬುಕ್ ಬಳಕೆ ಮಾಡಿಕೊಂಡು ಆರಾಮವಾಗಿ ಇರುವಂತೆ ಕಾಣುತ್ತಿದೆ. ಇದಕ್ಕೆ ತಾಜ ಉದಾಹರಣೆ ಬೆಳಗಾವಿ ಜೈಲಿನಲ್ಲಿ ಜರುಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯ ಆರೋಪಿ ಟಿ.ಪಿ ಮುತ್ತೇಶ್ ಬೆಳಗಾವಿ ಜೈಲಿನಲ್ಲಿ ಇದ್ದುಕೊಂಡು ಸೆಲ್ಫಿ ಫೋಟೋವನ್ನು ಫೇಸ್‍ಬುಕ್‍ಗೆ ಅಪ್ಲೋಡ್ ಮಾಡಿದ್ದಾನೆ. ಮುತ್ತೇಶ್ 2016ರಲ್ಲಿ ತೋಪ್ಪನಹಳ್ಳಿಯಲ್ಲಿ ನಡೆದ ಜೋಡಿ ಕೋಲೆ ಹಾಗೂ 2018ರಲ್ಲಿ ಮದ್ದೂರಿನಲ್ಲಿ ನಡೆದ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯ ಪ್ರಕರಣಗಳಲ್ಲಿನ ಆರೋಪಿಯಾಗಿದ್ದಾನೆ.

    ಈ ಎರಡು ಪ್ರಕರಣಗಳ ಆರೋಪಿಯಾಗಿದ್ದರಿಂದ ಮುತ್ತೇಶ್‍ನನ್ನು ಬೆಳಗಾವಿ ಜೈಲಿನಲ್ಲಿ ಇಡಲಾಗಿದೆ. ಇದೀಗ ಮುತ್ತೇಶ್ ಜೈಲಿನಲ್ಲಿ ಇದ್ದುಕೊಂಡು, ಜೈಲಿನ ಡ್ರಸ್‍ನಲ್ಲಿಯೇ ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾನೆ. ಈ ಸೆಲ್ಫಿ ಫೋಟೋವನ್ನು ಮಂಗಳವಾರ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಆರೋಪಿಗಳು ಹಾಗೂ ಕೈದಿಗಳು ಜೈಲಿನಲ್ಲಿ ಇದ್ದುಕೊಂಡು ಮೊಬೈಲ್ ಬಳಕೆ ಮಾಡಿಕೊಂಡು ಈ ರೀತಿ ಚಟುವಟಿಕೆಯಲ್ಲಿ ತೊಡಗಿರುವುದು ಜೈಲು ಅಧಿಕಾರಿಗಳ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೆಳಗಾವಿ ಜೈಲಿನ ಕುರಿತು ತನಿಖೆಯಾಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಲಾಗುತ್ತಿದೆ.

  • ಅಧಿಕಾರಿಗಳ ನಿರ್ಲಕ್ಷ್ಯ – ತುಕ್ಕು ಹಿಡಿಯುತ್ತಿವೆ ಶವ ಸಾಗಿಸುವ ವಾಹನಗಳು

    ಅಧಿಕಾರಿಗಳ ನಿರ್ಲಕ್ಷ್ಯ – ತುಕ್ಕು ಹಿಡಿಯುತ್ತಿವೆ ಶವ ಸಾಗಿಸುವ ವಾಹನಗಳು

    ಮೈಸೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶವಸಾಗಿಸುವ ವಾಹನಗಳು ಬಡವರಿಗೆ ಉಪಯೋಗವಾಗದೆ, ನಿಂತಲ್ಲೇ ನಿಂತಿದ್ದು, ತುಕ್ಕು ಹಿಡಿದಿವೆ.

    ಜಿಲ್ಲೆಯ ನಂಜನಗೂಡು ನಗರಸಭೆ ಆವರಣದಲ್ಲಿ ಶವಸಾಗಿಸುವ ವಾಹನ ತುಕ್ಕು ಹಿಡಿಯುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಕಳೆದ ಮೂರು ವರ್ಷಗಳಿಂದ ಈ ವಾಹನಗಳು ನಿಷ್ಕ್ರಿಯವಾಗಿವೆ. ಈ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂಧನ್ ಶಾಸಕರ ಅನುದಾನದಲ್ಲಿ ಈ ವಾಹನ ಕೊಟ್ಟಿದ್ದರು. 2 ಕೋಟಿ ರೂ. ಅನುದಾನದಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತು ವಾಹನಗಳನ್ನು ಗೋ.ಮಧುಸೂಧನ್ ನೀಡಿದ್ದರು. 2015ರಲ್ಲಿ ಕೊಟ್ಟ ವಾಹನಗಳು ಈಗ ತುಕ್ಕು ಹಿಡಿಯುತ್ತಿವೆ. ಬಡವರ್ಗದ ಜನತೆಗೆ ಅನುಕೂಲವಾಗಲೆಂದು ಈ ವಾಹನಗಳನ್ನು ನೀಡಲಾಗಿತ್ತು. ಆದರೆ ಸೂಕ್ತವಾಗಿ ಬಳಸದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿವೆ. ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸರ್ಕಾರಿ ಬಂಗ್ಲೆಗಾಗಿ ಸಾಹುಕಾರನ ಹುಡುಕಾಟ

    ಸರ್ಕಾರಿ ಬಂಗ್ಲೆಗಾಗಿ ಸಾಹುಕಾರನ ಹುಡುಕಾಟ

    ಬೆಂಗಳೂರು: ಸರ್ಕಾರಿ ಬಂಗಲೆಗಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹುಡುಕಾಟ ನಡೆಸತೊಡಗಿದ್ದಾರೆ. ಕ್ಷೇತ್ರದ ಜನರು ಮತ್ತು ಅಧಿಕಾರಿಗಳ ಭೇಟಿಗೆ ಮನೆ ಇಲ್ಲದೆ ಸಮಸ್ಯೆ ಆಗಿದೆ. ಹೀಗಾಗಿ ಆದಷ್ಟು ಬೇಗ ಸರ್ಕಾರಿ ನಿವಾಸ ನೀಡಿ ಎಂದು ಸಾಹುಕಾರ ಅಧಿಕಾರಿಗಳ ಬೆನ್ನು ಬಿದ್ದಿದ್ದಾರೆ.

    ಹಿಂದಿದ್ದ ಸರ್ಕಾರಿ ಬಂಗಲೆ ಖಾಲಿ ಮಾಡಿರುವುದರಿಂದ ಸಚಿವ ರಮೇಶ್ ಜಾರಕಿಹೊಳಿಗೆ ಈ ಸಮಸ್ಯೆ ಎದುರಾಗಿದೆ. ಪ್ರಸ್ತುತ ಮಂತ್ರಿಗ್ರೀನ್ಸ್ ನ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿರುವ ರಮೇಶ್ ಜಾರಕಿಹೊಳಿಗೆ ಖಾಸಗಿ ನಿವಾಸಕ್ಕೆ ಜನ, ಅಧಿಕಾರಿಗಳನ್ನು ಕರೆಸಿ ಮಾತನಾಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ಹಾಗೂ ಅಧಿಕಾರಿಗಳ ಭೇಟಿಗೆ ರಮೇಶ್ ಜಾರಕಿಹೊಳಿಗೆ ಸಮಸ್ಯೆ ಆಗಿದೆ.

    ಸದಾಶಿವನಗರದ ಬಿಡಿಎ ಕ್ವಾಟ್ರಸ್‍ಗಾಗಿ ರಮೇಶ್ ಜಾರಕಿಹೊಳಿ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಹಿಂದಿದ್ದ ಸವೆನ್ ಮಿನಿಸ್ಟರ್ ಕ್ವಾಟ್ರಸ್ ನಿವಾಸಕ್ಕೂ ಗೋಕಾಕ್ ಸಾಹುಕಾರ ಬೇಡಿಕೆ ಇಟ್ಟಿದ್ದರು. ಆದರೆ ಪ್ರಸ್ತುತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಗೆ ಸವೆನ್ ಮಿನಿಸ್ಟರ್ ನಿವಾಸ ಹಂಚಿಕೆಯಾಗಿದೆ.

    ಜಯಮಹಲ್ ಬಳಿ ಎರಡು ಸರ್ಕಾರಿ ಬಂಗ್ಲೆಗಳು ಖಾಲಿ ಇವೆ ಆದರೆ ಜಾಗ ಜಾಸ್ತಿ ಇಲ್ಲ ಎನ್ನುವ ಕಾರಣಕ್ಕೆ ಅದನ್ನು ರಮೇಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. 9 ಸಚಿವರುಗಳಿಗೆ ಸರ್ಕಾರಿ ನಿವಾಸ ಕೊಡಬೇಕಿದೆ. ಆದರೆ ಸೂಕ್ತ ಬಂಗಲೆ ಸಿಗದೆ ಸಚಿವ ರಮೇಶ್ ಜಾರಕಿಹೊಳಿ ಏನಾದರು ಮಾಡಿ ಆದಷ್ಟು ಬೇಗ ಒಳ್ಳೆ ಸರ್ಕಾರಿ ಬಂಗಲೆ ಕೊಡಿ ಎಂದು ಅಧಿಕಾರಿಗಳ ಬೆನ್ನು ಬಿದ್ದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.