ಧಾರವಾಡ: ಬಾರ್ ಬಾಗಿಲು ಒಪನ್ ಆಗಿದ್ದನ್ನು ನೋಡಿ ಜನರು ಓಡೋಡಿ ಬಂದಿದ್ದು, ಕೊನೆಗೆ ನಿರಾಶೆಯಿಂದ ಸಪ್ಪೆ ಮೋರೆ ಹೊತ್ತು ವಾಪಸ್ ನಡೆದಿದ್ದಾರೆ.
ನಗರದ ಟೋಲ್‍ಗೇಟ್ ಬಳಿಯ ದುರ್ಗಾ ವೈನ್ಸ್‍ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂದಿದ್ದರು. ಬಾರ್ ಬಾಗಿಲು ಓಪನ್ ಆಗುತ್ತಿದ್ದಂತೆ ಒಡೋಡಿ ಬಂದ ಜನರು, ಬಾರ್ ಶುರುವಾಯ್ತಾ ಎಂದು ಕೇಳಿದ್ದಾರೆ. ಆದರೆ ಅಧಿಕಾರಿಗಳು ಆಗಮಿಸಿದ್ದಕ್ಕೆ ಕಾರಣವೇ ಬೇರೆ ಇತ್ತು. ಬಂದ ಜನರಿಗೆಲ್ಲ ಬಾರ್ ಒಪನ್ ಆಗಿಲ್ಲ ಎಂದು ಹೇಳುವಷ್ಟರಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿ ಸುಸ್ತಾಗಿದ್ದಾರೆ.

ಲಾಕ್‍ಡೌನ್ ಇದ್ದಾಗಲೂ ಬಾರ್ ಮಾಲೀಕ ಕಳ್ಳತನದಿಂದ ಮದ್ಯ ಮಾರಾಟ ಮಾಡಿದ್ದಾನೆ ಎಂದು ಶಂಕೆ ವ್ಯಕ್ತವಾದ ಹಿನ್ನೆಲೆ ಪರಿಶೀಲನೆಗಾಗಿ ಬಾರ್ ಒಪನ್ ಮಾಡಲಾಗಿತ್ತು. ಈ ವೇಳೆ ದಾಳಿ ಮಾಡಿ ಮದ್ಯ ಸಂಗ್ರಹ ಎಣಿಕೆ ಮಾಡುತ್ತಿರುವ ಸಿಬ್ಬಂದಿಗೆ ರಸ್ತೆ ಮೇಲೆ ಹೊರಟಿದ್ದ ಜನರು ಮದ್ಯ ಕೇಳುವುದನ್ನೇ ಮಾಡಿದ್ದಾರೆ. ಅಬಕಾರಿ ಇಲಾಖೆ ಸಿಬ್ಬಂದಿ ಉತ್ತರದ ಬಳಿಕ ಮದ್ಯ ಪ್ರಿಯರು ನಿರಾಶೆಯಿಂದ ವಾಪಸ್ ಆಗಿದ್ದಾರೆ.




















