ಕೋಲಾರ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಮೂರನೇ ಬಾರಿ ಲಾಕ್‍ಡೌನ್ ಮುಂದುವರಿಸಿದೆ. ಇಷ್ಟಾದರೂ ಸಾರ್ವಜನಿಕರಿಗೆ ಅರಿವಾಗುತ್ತಿಲ್ಲ. ಹೀಗಾಗಿ ದಂಡ ಹಾಕಲು ಅಧಿಕಾರಿಗಳು ಮುಂದಾಗಿದ್ದು, ಕೋಲಾರದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ್ದಾರೆ.
ಕೋಲಾರದಲ್ಲಿ ಬಹುತೇಕ ಜನ ಮಾಸ್ಕ್ ಇಲ್ಲದೆ ರಸ್ತೆಗಿಳಿದಿದ್ದು, ಬೈಕ್ ಸವಾರರೂ ಹಾಗೇ ಓಡಾಡುತ್ತಿದ್ದಾರೆ. ಇಂತಹವರಿಗೆ ಬಿಸಿ ಮುಟ್ಟಿಸಲು ಅಧಿಕಾರಿಗಳು ದಂಡ ವಿಧಿಸಲು ಮುಂದಾಗಿದ್ದಾರೆ. ಮಾಸ್ಕ್ ಇಲ್ಲದೆ ಓಡಾಡುವವರಿಗೆ ನೂರು ರೂ. ದಂಡ ವಿಧಿಸಲಾಗುತ್ತಿದೆ. ನಗರಸಭೆ, ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಮಾಸ್ಕ್ ಇಲ್ಲದವರಿಗೆ ಚಳಿ ಬಿಡಿಸುತ್ತಿದ್ದಾರೆ.
ಕೋಲಾರ ಜಿಲ್ಲೆ ಗ್ರೀನ್ ಝೋನ್ ಪ್ರದೇಶವಾದರೂ ಮುಂಜಾಗ್ರತೆಯಿಂದ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಮಾಸ್ಕ್ ಇಲ್ಲದೆ ಓಡಾಡುವ ಜನರಿಗೆ ಮತ್ತು ವಾಹನ ಸವಾರರಿಗೆ ಅಧಿಕಾರಿಗಳು ಮುಲಾಜಿಲ್ಲದೆ ದಂಡ ವಿಧಿಸಿದ್ದಾರೆ.
ಬಾಗಲಕೋಟೆ: ಒಂದೇ ದಿನ 3 ವಿವಿಧ ಕಳ್ಳಬಟ್ಟಿ ಅಡ್ಡೆಗಳ ಮೇಲೆ ಜಿಲ್ಲಾ ಅಬಕಾರಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 1 ಸಾವಿರ ಲೀಟರ್ ಗೂ ಅಧಿಕ ಕಳ್ಳಬಟ್ಟಿ ನಾಶಪಡಿಸಿದ್ದಾರೆ.
ತಾಲೂಕಿನ ನಾಯನೇಗಲಿ, ಸೀತಿಮನಿ ತಾಂಡಾದಲ್ಲಿನ ಅಡ್ಡೆಗಳ ಮೇಲೆ ದಾಳಿ ವೇಳೆ 800 ಲೀಟರ್ ಬೆಲ್ಲದ ಕೊಳೆ, ಬೀಳಗಿ ತಾಲೂಕಿನ ಬಿಸನಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಮಾರು 200 ಲೀಟರ್ ಬೆಲ್ಲದ ಕೊಳೆ ಪತ್ತೆಯಾಗಿದೆ. ಒಟ್ಟು ಸುಮಾರು 1 ಸಾವಿರ ಲೀಟರ್ ಬೆಲ್ಲದ ಕೊಳೆಯನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ.
ದಂಧೆಕೋರರು ನೀರಿನ ಬಿಂದಿಗೆಗಳಲ್ಲಿ ಹೂತಿಟ್ಟ ಕೊಳೆಯನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ. ಅಲ್ಲದೆ ಇದೇ ವೇಳೆ ಕಳ್ಳಬಟ್ಟಿ ಸಾಗಿಸುತ್ತಿದ್ದ ಇಬ್ಬರನ್ನು ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಓರ್ವ ಪರಾರಿಯಾಗಿದ್ದು, ಪರಾರಿಯಾಗಲು ಬಳಸಿದ್ದ ಮೂರು ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.
ಬಳ್ಳಾರಿ: ಲಾಕ್‍ಡೌನ್ ನಡುವೆಯೂ ಅಕ್ಷಯ ತೃತಿಯ ನಿಮಿತ್ತ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಾಲ್ಕು ಜೋಡಿ ಬಾಲ್ಯವಿವಾಹ ಪ್ರಕರಣಗಳು ಪತ್ತೆ ಯಾಗಿವೆ.
ಕೂಡ್ಲಿಗಿ ತಾಲೂಕು, ಬಳ್ಳಾರಿ ನಗರ, ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನಲ್ಲಿ ನಡೆಯುತ್ತಿದ್ದ ಎರಡು ನಿಶ್ಚಿತಾರ್ಥ ಹಾಗೂ ಎರಡು ಬಾಲ್ಯವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಮೂಲದ 17 ವರ್ಷದ ಯುವತಿಗೆ ಬೆಳಗ್ಗೆ 5 ಗಂಟೆಗೆ ತರಾತುರಿಯಲ್ಲಿ ನಿಶ್ಚಿತಾರ್ಥ ಮಾಡಿ ಮುಗಿಸಿದ್ದಾರೆ. ಇನ್ನೊಂದೆಡೆ ಬಳ್ಳಾರಿ ಗಾಂಧಿನಗರ ಮೂಲದ 16.8 ವರ್ಷದ ಬಾಲಕಿಗೆ ನಿಶ್ಚಿತಾರ್ಥ ಮಾಡಲು ಮುಂದಾದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ರಕ್ಷಿಸಿದ್ದಾರೆ. ಈ ಇಬ್ಬರು ಬಾಲಕಿಯೊಂದಿಗೆ ಮದುವೆಯಾಗಲು ಮುಂದಾಗಿದ್ದ ವರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನ ಯಾಳ್ಪಿ ಗ್ರಾಮದಲ್ಲಿ ನಡೆಯಬೇಕಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಅಲ್ಲದೆ ಬಾಲ್ಯ ವಿವಾಹ ತಡೆಯಲು ಹೋಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಧು-ವರರ ಕಡೆಯವರು ಕಟ್ಟುಕಥೆಗಳನ್ನು ಹೇಳಿದ್ದಾರೆ. ಬಳ್ಳಾರಿಯ ಗಾಂಧಿನಗರ ಮೂಲದ 16 ವರ್ಷದ ಬಾಲಕಿಯ ಕಡೆಯವರು ಪ್ರೀತಿ, ಪ್ರೇಮ, ಪ್ರಣಯದ ಮಾತುಗಳನ್ನಾಡಿದ್ದಾರೆ. ನನ್ನ ಮಗಳು ಕಾಲೇಜು ಹಂತದಲ್ಲಿ ಹುಡುಗನನ್ನು ಪ್ರೀತಿ ಮಾಡಿದ್ದಾಳೆ. ಹೀಗಾಗಿ ನನ್ನ ಮನೆತನದ ಪ್ರತಿಷ್ಠೆ- ಗೌರವ ಏನಾದೀತು ಎಂಬ ಕಟ್ಟುಕಥೆಯನ್ನು ಕಟ್ಟಿದ್ದಾರೆ.
ಇಬ್ಬರು ಬಾಲಕಿಯರು ಶಾಂತಿಧಾಮದಲ್ಲಿ, ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹಾಗೂ ಬಳ್ಳಾರಿ ಗಾಂಧಿನಗರ ಮೂಲದ ಇಬ್ಬರು ಬಾಲಕಿಯರನ್ನು ರಕ್ಷಣೆ ಮಾಡಿ ನಗರದ ಶಾಂತಿಧಾಮದಲ್ಲಿ ಇರಿಸಲಾಗಿದೆ. ಅಲ್ಲದೆ ನಾಲ್ಕು ಜನ ವರನ ಅವಲಂಬಿತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ರಾಯಚೂರು: ಜನಪ್ರತಿನಿಧಿಗಳು ಜಾತಿ, ರಾಜಕೀಯ ಬಿಟ್ಟು ನಿಜವಾಗಿ ಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕಿದೆ. ಎಲ್ಲವೂ ಸರ್ಕಾರದಿಂದ ಸಾಧ್ಯವಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಜೀವ ಮತ್ತು ಜೀವನ ಉಳಿಸಲು ಹಾಗೂ ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕರೆ ನೀಡಿದ್ದಾರೆ.
ರಾಯಚೂರು ಜಲ್ಲೆಯಲ್ಲಿ ಡಿಸಿಎಂ ಅಕಾಲಿಕ ಮಳೆಯಿಂದಾಗಿ ಹಾನಿಯಾದ ಬೆಳೆ ವೀಕ್ಷಣೆ ಮಾಡಿದರೆ. ಬಳಿಕ ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ಕೊರೊನಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಹಸಿರು ವಲಯದಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕೊರೊನಾ ಸೋಂಕು ಜಿಲ್ಲೆಗೆ ತಗುಲದಂತೆ ನೋಡಿಕೊಳ್ಳಬೇಕಿದೆ. ಆಂಧ್ರಪ್ರದೇಶ, ತೆಲಂಗಾಣದಿಂದ ಭತ್ತ ತರುವುದು ಆತಂಕಕ್ಕೆ ಕಾರಣವಾಗಿದೆ. ಭತ್ತದ ಚೀಲಗಳ ಮೂಲಕ ರಾಯಚೂರಿಗೆ ಕೊರೊನಾ ಸೋಂಕು ಬರಬಾರದು. ಹೀಗಾಗಿ ರಾಯಚೂರು ಜಿಲ್ಲಾಡಳಿತ ಇನ್ನೂ ಎಚ್ಚರಿಕೆಯಿಂದ ಇರಬೇಕು. ಮೈಮರೆಯದೆ ಜಾಗೃತಿಯಿಂದ ಇರಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಲಾಕ್‍ಡೌನ್ ಇದಿಯೋ ಇಲ್ಲವೋ ಅನ್ನೋ ಪರಸ್ಥಿತಿ ಜಿಲ್ಲೆಯಲ್ಲಿ ಇರಬಾರದು ಎಂದು ಎಚ್ಚರಿಸಿದರು.
ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜಾಗೃತಿಯಿದೆ. ಸರ್ಕಾರದಿಂದಲೇ ಎಲ್ಲವೂ ಸಾಧ್ಯವಿಲ್ಲ, ಜನರು ಕೂಡ ಸಹಕರಿಸಬೇಕಿದೆ. ಉತ್ತರ ಪ್ರದೇಶ ಹಾಗೂ ಕೇರಳದ ಆಯ್ದ ಅಂಶಗಳ ಹೊಸ ಕಾನೂನುನಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿದ್ದೇವೆ. ಇದರಿಂದ ಈಗ ಪೊಲೀಸರಿಗೆ ಕೆಲಸ ಮಾಡಲು ಹೊಸ ಆಸರೆ ಸಿಗಲಿದೆ. ಬೇರೆ ಜಿಲ್ಲೆಗಳ ಕೂಲಿಕಾರ್ಮಿಕರನ್ನ ಕರೆತರಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿನ ಕೂಲಿಕಾರ್ಮಿಕರನ್ನ ಕರೆತರಲು ಚರ್ಚೆ ನಡೆದಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆಗೆ 25 ಲಕ್ಷ ಸಾಲುವುದಿಲ್ಲ. ಟಾಸ್ಕ್ ಫೋರ್ಸ್‍ಗೆ ಹೆಚ್ಚು ಅನುದಾನ ಕೊಡಬೇಕು ಅಂತ ಶಾಸಕರಾದ ಶಿವನಗೌಡ ನಾಯಕ್, ಬಸನಗೌಡ ದದ್ದಲ ಸಭೆಯಲ್ಲಿ ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ನಿಮ್ಮ ಕ್ಷೇತ್ರಗಳಿಗೆ ಬೇಕಿರುವ ಅನುದಾನದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಬಿಡುಗಡೆ ಮಾಡೋಣ ಎಂದರು. ಈಗ ಕೊಟ್ಟಿರುವ ಪಡಿತರ ಜನರಿಗೆ ಮೂರು ತಿಂಗಳು ಸಾಲುತ್ತೆ. ಅಕ್ಕಿ ಜೊತೆ ಇತರೆ ಅಡುಗೆ ಪದಾರ್ಥಗಳನ್ನ ಕೊಡುವ ಬಗ್ಗೆ ಯೋಚಿಸುತ್ತೇವೆ ಎಂದರು.
ಇದೇ ವೇಳೆ ಲಾಕ್‍ಡೌನ್‍ನಿಂದ ಮದ್ಯದ ಅಂಗಡಿಗಳು ಬಂದ್ ಆಗಿರುವ ಹಿನ್ನೆಲೆ ಅಕ್ರಮ ಮದ್ಯ, ಕಳ್ಳಭಟ್ಟಿ, ಅಕ್ರಮ ಸಿಎಚ್ ಪೌಡರ್, ಸೇಂದಿ ಮಾರಾಟ ಜೋರಾಗಿದೆ ಅಂತ ಅಬಕಾರಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ತೆಲಂಗಾಣ ಗಡಿಯಿಂದ ಬರುತ್ತಿರುವ ಸಿಎಚ್ ಪೌಡರ್, ಅಕ್ರಮ ಮದ್ಯದ ದಂಧೆ ಸಂಪೂರ್ಣ ನಿಲ್ಲಬೇಕು. ಕಳ್ಳಭಟ್ಟಿ ದಂಧೆ ಮಾಡುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತೆ. ಬಾರ್ ಮಾಲೀಕರೇ ತಮ್ಮ ಬಾರ್ ಕಳ್ಳತನ ಮಾಡಿಸುತ್ತಿರುವ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಅಬಕಾರಿ ಡಿಸಿಗೆ ಡಿಸಿಎಂ ಎಚ್ಚರಿಕೆ ನೀಡಿದರು.
ಹಾಸನ: ಸರ್ಕಾರ ವಿಕಲಚೇತನರಿಗೆ ನೀಡುತ್ತಿದ್ದ 1400 ರೂಪಾಯಿ ಪೆನ್ಷನ್ ಹಣ 9 ತಿಂಗಳುಗಳಿಂದ ಬಾರದ ಕಾರಣ ಎರಡು ಕಾಲಿನಲ್ಲಿ ಸ್ವಾಧೀನವಿಲ್ಲದ ಮಹಿಳೆಯೊಬ್ಬಳು ಓರ್ವ ಮಗನೊಂದಿಗೆ ಸರಿಯಾಗಿ ಊಟವಿಲ್ಲದೆ ಸಂಕಟ ಪಡುತ್ತಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಮಲ್ಲೇಶ್ವರ ನಗರದಲ್ಲಿ ನಡೆದಿದೆ.
ವಿಕಲಚೇತನೆ ಭಾಗ್ಯಲಕ್ಷ್ಮಿ ತನ್ನ ಮಗನೊಂದಿಗೆ ಅರಸೀಕೆರೆ ಪಟ್ಟಣದಲ್ಲಿ ವಾಸವಿದ್ದು ಹೂಕಟ್ಟಿ ಜೀವನ ಸಾಗಿಸುತ್ತಿದ್ದರು. ಕೊರೊನಾ ಲಾಕ್‍ಡೌನ್ ಆದ ನಂತರ ಹೂ ಕಟ್ಟುವ ಕಾಯಕಕ್ಕೂ ಕುತ್ತು ಬಿದ್ದಿದೆ. ಪರಿಣಾಮ ದಿನದ ದುಡಿಮೆಯಿಲ್ಲದೆ, ಓರ್ವ ಮಗನನ್ನು ಸಾಕಲಾಗದೇ ವಿಕಲಚೇತನೆ ಭಾಗ್ಯಲಕ್ಷ್ಮಿ ಸಂಕಟ ಪಡುತ್ತಿದ್ದಾರೆ.
ಭಾಗ್ಯಲಕ್ಷ್ಮಿಗೆ ಎರಡು ಕಾಲಿನಲ್ಲಿ ಸ್ವಾಧೀನ ಇಲ್ಲ. ಹೀಗಾಗಿ ಸರ್ಕಾರದಿಂದ 1400 ರೂಪಾಯಿ ಪೆನ್ಷನ್ ಬರುತ್ತಿತ್ತು. ಅಕೌಂಟ್ ನಂಬರ್‍ನಲ್ಲಿ ತಾಂತ್ರಿಕ ದೋಷವಿದೆ ಎಂದು ಹೇಳಿ ಕಳೆದ ಒಂಬತ್ತು ತಿಂಗಳಿಂದ ಅಧಿಕಾರಿಗಳು ಭಾಗ್ಯಲಕ್ಷ್ಮಿಗೆ ಬರುತ್ತಿದ್ದ ಪೆನ್ಷನ್ ನಿಲ್ಲಿಸಿದ್ದಾರೆ. ಇದರಿಂದ ಮೊದಲೇ ಬಡತನದಲ್ಲಿ ದಿನ ದೂಡುತ್ತಿದ್ದ ಭಾಗ್ಯಲಕ್ಷ್ಮಿ ಬದುಕು ಕೊರೊನಾ ಲಾಕ್‍ಡೌನ್ ನಂತರ ನಿತ್ಯ ನರಕವಾಗಿದೆ.
ಒಂದು ಹೊತ್ತಿನ ಊಟಕ್ಕೂ, ಅಗತ್ಯ ವಸ್ತುಕೊಳ್ಳಲು ಪರದಾಡುವಂತಾಗಿದೆ. ಭಾಗ್ಯಲಕ್ಷ್ಮಿ ಪೆನ್ಷನ್ ಹಣಕ್ಕಾಗಿ ಅಧಿಕಾರಿಗಳ ಬಳಿ ಅಲೆದು ಅಲೆದು ಸುಸ್ತಾಗಿದ್ದಾರೆ. ಇಂತಹ ಸಂಕಷ್ಟದಲ್ಲಿರುವ ಮಹಿಳೆಗೆ ರಾಜ್ಯ ಸರ್ಕಾರ ಆದಷ್ಟು ಬೇಗ ನೆರವಿನ ಹಸ್ತ ಚಾಚಿ ಸ್ಪಂದಿಸಬೇಕಿದೆ.
ಚಿಕ್ಕೋಡಿ: ರಸ್ತೆಯಲ್ಲಿ ಒಂದು ರೂಪಾಯಿ ಬಿದ್ದಿದ್ದರೂ ಎತ್ಕೊಂಡು ಜೇಬಿಗೆ ಹಾಕ್ತಿದ್ರು. ಆದರೆ ಕೊರೊನಾ ಹುಟ್ಟಿಸಿರುವ ಭೀತಿಗೆ ರಸ್ತೆಯಲ್ಲಿ ನೂರು ರೂಪಾಯಿ ಬಿದ್ದಿದ್ದರೂ ಎತ್ತಿಕೊಳ್ಳದೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಡಿ ಕರೆಸಿ ನೂರು ರೂಪಾಯಿಯನ್ನು ಅವರ ವಶಕ್ಕೆ ನೀಡಿದ್ದಾರೆ.
ಕೊರೊನಾ ಭೀತಿ ಹುಟ್ಟಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಯಾರೋ ಅಪರಿಚಿತರು ಸಾರ್ವಜನಿಕರಲ್ಲಿ ಭೀತಿ ಮೂಡಿಸಲು 100 ರೂ. ನೋಟನ್ನು ರಸ್ತೆಯಲ್ಲಿ ಎಸೆದಿದ್ದರು. ಇದನ್ನು ಕಂಡ ಸಂಕೇಶ್ವರ ಪಟ್ಟಣದ ನಿಡಸೋಸಿ ರಸ್ತೆಯ ನಲವಡೆ ಪ್ಲಾಟ್ ದಲ್ಲಿರುವ ಜನ ನೋಟು ಎತ್ತಿಕೊಳ್ಳದೆ, ಗಾಬರಿಯಿಂದ ಪುರಸಭೆಗೆ ಕರೆ ಮಾಡಿ ತಿಳಿಸಿದ್ದಾರೆ.
ಕರೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪುರಸಭೆಯ ಮುಖ್ಯಾಧಿಕಾರಿಗಳಾದ ಜಗದೀಶ್ ಈಟಿ, ಪರಿಸರ ಅಭಿಯಂತರಾದ ನಾರಾಯಣ್ ನಾಯಕ್, ಕಿರಿಯ ಅಭಿಯಂತರಾದ ರವೀಂದ್ರ ಗಡಾದ, ಆರೋಗ್ಯ ವಿಭಾಗದ ವಿಶ್ವನಾಥ್ ಸೊಗಲದ ಹಾಗೂ ಶ್ರೀಧರ ಬೆಳವಿ ಪೋಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು 100 ರೂ. ನೋಟನ್ನು ಪರಿಶೀಲಿಸಿ ನೋಟಿಗೆ ಸ್ಯಾನಿಟೈಸರ್ ಸಿಂಪಡಿಸಿ ಪುರಸಭೆಗೆ ತೆಗೆದುಕೊಂಡು ಹೋಗಿದ್ದಾರೆ.
ಭೋಪಾಲ್: ಮದ್ಯದ ಬಾಟಲಿ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದ ಮಧ್ಯಪ್ರದೇಶದ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಕಂದಾಯ ಇಲಾಖೆಯ ಅಜಟ್ ಧಕಡ್, ಧರ್ಮೇಂದ್ರ ಮೆಹ್ರಾ ಹಾಗೂ ದಯಾರಾಮ್ ಅರ್ಮಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಈಗಾಗಲೇ ಲಾಕ್‍ಡೌನ್‍ನಿಂದ ಮದ್ಯ ಸಿಗದೆ ಎಣ್ಣೆ ಪ್ರಿಯರು ಬೇಸತ್ತು ಹೋಗಿದ್ದಾರೆ. ಈ ನಡುವೆ ಅಧಿಕಾರಿಗಳು ಮದ್ಯದ ಬಾಟಲಿಗಳನ್ನು ಹಿಡಿದು ಪೋಸ್ ನೀಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
Madhya Pradesh: 3 revenue department officials have been suspended in Raisen district, by the Bareli Sub Divisional Magistrate, after a photograph showing them holding liquor bottles went viral on social media. pic.twitter.com/edC7VxGr8P
ಎಲ್ಲೆಡೆ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಎಚ್ಚೆತ್ತ ಮಧ್ಯಪ್ರದೇಶ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮೂವರೂ ಅಧಿಕಾರಿಗಳನ್ನು ಅಮಾನತು ಮಾಡಿದೆ.
ಚಿತ್ರದುರ್ಗ: ಮುಂಗಾರು ಹಂಗಾಮು ಪ್ರಾರಂಭವಾಗಿದೆ ಹೀಗಾಗಿ ರೈತರಿಗೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜವನ್ನು ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಬಾರದು. ಒಂದು ವೇಳೆ ಕಳಪೆ ಬೀಜ ಪೂರೈಕೆ ಮಾಡಿದರೆ ರೈತನ ಕೊಲೆ ಮಾಡಿದಂತಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕೃಷಿ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.
ಕೆಲ ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ತಮ್ಮ ಪತ್ನಿಯ ತಾಳಿ ಮಾರಾಟ ಮಾಡಿ ಬೀಜ ಖರೀದಿಸಿ ಬೆಳೆ ಬೆಳೆದಿರುತ್ತಾರೆ. ಆದ್ದರಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಮುನ್ನ ಬಿತ್ತನೆ ಬೀಜ ಪರೀಕ್ಷೆ ಮಾಡಬೇಕು. ಒಂದು ವೇಳೆ ಅದು ಕಳಪೆಯಾಗಿದ್ದರೆ ಅವುಗಳನ್ನು ತಿರಸ್ಕರಿಸಬೇಕು. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಚಿತ್ರದುರ್ಗದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಲಾಕ್‍ಡೌನ್ ಹಿನ್ನೆಲೆ ಇಂದು ಕೃಷಿ ಉತ್ಪನ್ನಗಳ ಸರಕು ಸಾಗಾಣಿಕೆ, ಬೀಜ, ಗೊಬ್ಬರ ಸರಬರಾಜು ಸೇರಿದಂತೆ ಕೃಷಿ ಚಟುವಟಿಕೆಗಳ ಬಗ್ಗೆ ಕೈಗೊಂಡ ಅಗತ್ಯ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು ಮಾತನಾಡಿ, ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಕೃಷಿ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧ ಇಲ್ಲ. ಏಪ್ರಿಲ್ 1ರಿಂದಲೇ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಇತರೆ ಜಿಲ್ಲೆಗಳು ಸೇರಿದಂತೆ ಅಂತರಾಜ್ಯಗಳಿಗೂ ಸಾಗಾಟ ನಡೆಯುತ್ತಿದೆ. ರೈತರಿಗೆ ಮುಂದಿನ ದಿನಗಳಲ್ಲಿ ಬೇಕಾಗಿರುವ ಬಿತ್ತನೆ ಬೀಜ, ಕೃಷಿ ಪರಿಕರಗಳು, ಇದಕ್ಕೆ ಪೂರಕವಾದ ರಿಪೇರಿ ಕೇಂದ್ರಗಳನ್ನು ತೆರೆಯಲು ಸೂಚಿಸಿದ್ದು, ಯಾವುದೇ ಅಡೆತಡೆಗಳಿರುವುದಿಲ್ಲ. ಉಳುಮೆ, ಕೊಯ್ಲ ನಡೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೈತರು ಕೃಷಿ ಚಟುವಟಿಕೆ ಕೈಗೊಳ್ಳಬಹುದು ಎಂದು ಹೇಳಿದರು.
ಇದೇ ವೇಳೆ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು, ತರಕಾರಿಗಳು ಬೆಳೆಯಲಾಗುತ್ತಿದ್ದು, ಇವುಗಳನ್ನು ಹೆಚ್ಚಿನ ದಿನ ಸಂಗ್ರಹಿಸುವ ದೃಷ್ಠಿಯಿಂದ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕೋಲ್ಡ್ ಸ್ಟೋರೆಜ್‍ಗಳು ಹಾಗೂ ಆಹಾರ ಸಂಸ್ಕರಣೆ ಘಟಕಗಳ ಅವಶ್ಯಕತೆ ಇದೆ. ಇದರಿಂದ ರೈತರಿಗೆ ತುಂಬಾ ಸಹಾಯಕವಾಗಲಿದೆ. ಈ ನಿಟ್ಟಿನಲ್ಲಿ ಕಂಟೈನರ್ ಗಳ ಮೂಲಕ ತಾತ್ಕಾಲಿಕವಾಗಿ ಎಲ್ಲಾ ಎಪಿಎಂಸಿಗಳಲ್ಲಿ ಕೋಲ್ಡ್ ಸ್ಟೋರೇಜ್ ಮಾಡಿದಲ್ಲಿ ಇಂತಹ ಸಂದರ್ಭದಲ್ಲಿ ರೈತರಿಗೆ, ಬೆಳೆಗಾರರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಮಾರುಕಟ್ಟೆ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.
ರೈತರು ಬೆಳೆದ ಯಾವುದೇ ಬೆಳೆ ಮಾರಾಟ, ತೋಟಗಾರಿಕೆ ಹಣ್ಣು-ತರಕಾರಿ ಮಾರಾಟಕ್ಕೆ ಅಡೆತಡೆಗಳಿರುವುದಿಲ್ಲ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹ ಯಾವುದೇ ಅಡೆತಡೆಗಳಿರುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುವ ಮೂಲಕ ರೈತರಿಗೆ ನೆರವಾಗಲು ತಿಳಿಸಿದರು.
ಈ ಸಭೆಯಲ್ಲಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಗೂಳಿಹಟ್ಟಿ ಡಿ. ಶೇಖರ್, ಟಿ. ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೊನ್ನಾಂಬ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.
ಭೋಪಾಲ್: ಕೊರೊನಾ ವಿರುದ್ಧ ಹೋರಾಡುತ್ತಿರುವ 94 ಆರೋಗ್ಯಾಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ತಮ್ಮ ಜೀವನದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗೂ ಕೊರೊನಾ ಮಹಾಮಾರಿ ಕಾಡುತ್ತಿದೆ. ಭೋಪಾಲ್‍ನಲ್ಲಿ ಈವರೆಗೂ 94 ಆರೋಗ್ಯಾಧಿಕಾರಿಳು ಮತ್ತು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಸುಮಾರು 166 ಪ್ರಕರಣಗಳು ವರದಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಐಎಎಸ್ ಅಧಿಕಾರಿಯೊಬ್ಬರಿಗೆ ಕಳೆದ ಮಂಗಳವಾರ ಕೊರೊನಾ ಪಾಸಿಟಿವ್ ಬಂದಿತ್ತು. ಆರೋಗ್ಯ ಇಲಾಖೆ ಮೊದಲ ಪ್ರಕರಣ ಏಪ್ರಿಲ್ 2ರಂದು ಬೆಳಕಿಗೆ ಬಂದಿತ್ತು. ರಾಷ್ಟ್ರೀಯ ಆರೋಗ್ಯ ಮಿಷನ್‍ನ ವ್ಯವಸ್ಥಾಪಕ ನಿರ್ದೇಶಕರು ಮೊದಲಿಗೆ ಕೊರೊನಾ ವೈರಸ್‍ಗೆ ತುತ್ತಾಗಿದ್ದರು. ಇದಾದ ಎರಡು ದಿನಗಳ ನಂತರ ಮತ್ತೊಬ್ಬ ಐಎಎಸ್ ಅಧಿಕಾರಿ ವೈರಸ್‍ಗೆ ತುತ್ತಾಗಿದ್ದರು.
ಮಧ್ಯಪ್ರದೇಶದ ಅರೋಗ್ಯ ಇಲಾಖೆಯ ವಿದೇಶದಿಂದ ಮರಳಿದ ಇಬ್ಬರು ಹೆಚ್ಚುವರಿ ನಿರ್ದೇಶಕರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇದರ ಜೊತಗೆ ಮಗನ ಯುಎಸ್ ಪ್ರವಾಸದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಬಚ್ಚಿಟ್ಟಿದ್ದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಕೂಡ ಕೊರೊನಾ ಪರೀಕ್ಷೆ ಮಾಡಿದಾಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಈ ಎಲ್ಲರನ್ನೂ ಸೇರಿ ಸುಮಾರು 94 ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದೆ.
ಆರೋಗ್ಯ ಇಲಾಖೆ ಬುಧವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಮಧ್ಯಪ್ರದೇಶದಲ್ಲಿ ಮಂಗಳವಾರ ಒಂದೇ ದಿನ 197 ಹೊಸ ಪ್ರಕರಣಗಳನ್ನು ವರದಿಯಾಗಿವೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 938 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬರೋಬ್ಬರಿ 544 ಪ್ರಕರಣಗಳು ಇಂದೋರ್ ನಗರದಲ್ಲಿ ಪತ್ತೆಯಾಗಿವೆ. ಈ ಮೂಲಕ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಸುಮಾರು 58% ಸೋಂಕಿತರು ಈ ಪ್ರದೇಶದಲ್ಲೇ ಇದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಸುಲೇಮಾನ್ ಅವರು, ಮಧ್ಯಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಪರೀಕ್ಷೆಗಳ ಹೆಚ್ಚಿನ ಸಂಖ್ಯೆಯಲ್ಲಿ ಮಾಡಲು ತೀರ್ಮಾನ ಮಾಡಿದ್ದೇವೆ. ನಮ್ಮ ದೇಶದಲ್ಲೇ ಕಡಿಮೆ ದರದಲ್ಲಿ ಕೊರೊನಾ ಪರೀಕ್ಷೆಯನ್ನು ಮಾಡಲು ನಿರ್ಧಾರ ಮಡಿದ್ದೇವೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ: ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ದರವನ್ನು ಬೇಕಾಬಿಟ್ಟಿಯಾಗಿ ಹೆಚ್ಚಳ ಮಾಡಿದ್ದ ಔಷಧಿ ಅಂಗಡಿಗಳ ಮೇಲೆ ಕಾನೂನು ಮಾಪನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಮೊಕದ್ದಮೆ ದಾಖಲಿಸಿ 75 ಸಾವಿರ ರೂ. ದಂಡ ವಿಧಿಸಿದ್ದಾರೆ.
ಹುಬ್ಬಳ್ಳಿ ನಗರ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ದಾಳಿ ನಡೆಸಿದ್ದು, ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ದರ ಹೆಚ್ಚಳ ಮಾಡಿದ್ದು ಕಂಡು ಬಂದ ಹಿನ್ನೆಲೆ ಔಷಧಿ ಅಂಗಡಿಗಳಿಗೆ ದಂಡ ವಿಧಿಸಿ, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಒಟ್ಟು 236 ಅಂಗಡಿಗಳನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದು, 10 ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಅಲ್ಲದೆ 20 ಸಾವಿರ ದಂಡ ವಸೂಲಿ ಮಾಡಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಸರ್ಕಾರ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ 179 ನ್ಯಾಯಬೆಲೆ ಅಂಗಡಿಗಳನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ವಿವಿಧ ನಿಯಮಗಳನ್ನು ಉಲಂಘಸಿದ ನ್ಯಾಯಬೆಲೆ ಅಂಗಡಿಗಳ ಮೇಲೆ 62 ಮೊಕದ್ದಮೆ ದಾಖಲಿಸಿ 75 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ನಿಯಂತ್ರಕರಾದ ಮಧುಕರ.ಆರ್.ಘೋಡಕೆ, ನೀರಿಕ್ಷಕರಾದ ಸಿದ್ದಪ್ಪ ಪೂಜಾರಿ, ವೆಂಕಟೇಶ ತಿಳಗೊಳ, ಎಸ್.ಎಸ್.ಹಿರೇಮಠ ಭಾಗವಹಿಸಿದ್ದರು.