Tag: officers

  • ರಿಪೋರ್ಟ್ ಬರುವ ಮೊದಲೇ ಮನೆಗೆ ಕಳುಹಿಸಿದ್ರು-ಸರ್ಕಾರದ ಎಡವಟ್ಟಿಗೆ ಜನರ ಆಕ್ರೋಶ

    ರಿಪೋರ್ಟ್ ಬರುವ ಮೊದಲೇ ಮನೆಗೆ ಕಳುಹಿಸಿದ್ರು-ಸರ್ಕಾರದ ಎಡವಟ್ಟಿಗೆ ಜನರ ಆಕ್ರೋಶ

    – ಮನೆ ಸೇರಿದ್ದ 13 ಮಂದಿ ಆಸ್ಪತ್ರೆಗೆ ಶಿಫ್ಟ್
    – ಉಡುಪಿಯಲ್ಲಿ ಸೋಂಕಿತರ ಸಂಖ್ಯೆ 177ಕ್ಕೇರಿಕೆ

    ಉಡುಪಿ: ಮಹಾರಾಷ್ಟ್ರದಿಂದ ಬಂದು ಏಳು ದಿನ ಕ್ವಾರಂಟೈನ್ ಮುಗಿಸಿ ಮನೆಗೆ ಹೋದ 12 ಜನ ಕೊರೊನಾ ಸ್ಫೋಟಿಸಿದ್ದಾರಾ ಎಂಬ ಅನುಮಾನ ಎದ್ದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹದ್ದೊಂದು ಎಡವಟ್ಟು ನಡೆದಿದ್ದು, ಉಡುಪಿಯ ಜನ ಭಯಭೀತರಾಗಿದ್ದಾರೆ.

    ಮಹಾರಾಷ್ಟ್ರದಿಂದ ಬಂದ 12 ಜನರಲ್ಲಿ ಮತ್ತು ತೆಲಂಗಾಣದಿಂದ ಬಂದ ಓರ್ವಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಇಲಾಖೆಯ ಸೂಚನೆಯಂತೆ ಏಳು ದಿನ ಕ್ವಾರಂಟೈನ್ ಮುಗಿಸಿದವರನ್ನು ಶುಕ್ರವಾರವಷ್ಟೇ ಮನೆಗೆ ಕಳುಹಿಸಲಾಗಿತ್ತು. ಆಗಿನ್ನೂ ಇವರ ವರದಿ ಬಂದಿರಲಿಲ್ಲ. ಇಂದು ಕೆಲ ವೈದ್ಯಕೀಯ ವರದಿಗಳು ಜಿಲ್ಲಾಡಳಿತದ ಕೈ ಸೇರಿದ್ದು, ಈ ಪೈಕಿ ಹದಿಮೂರು ಮಂದಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ.

    ನೆಮ್ಮದಿಯಾಗಿ ಮನೆ ಸೇರಿದ್ದ ಹದಿಮೂರು ಮಂದಿಯನ್ನು ಗುರುತಿಸಿ ಜಿಲ್ಲಾಡಳಿತ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದೆ. ಕೊರೊನಾ ಪೀಡಿತರು ಕುಟುಂಬಸ್ಥರ ಜೊತೆ ಸೇರಿದ್ದರಿಂದ ಅವರಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ. ಇದೀಗ ಸೋಂಕಿತರ ಮನೆಯನ್ನು ಕ್ಲೋಸ್ ಮಾಡಬೇಕಾ, ಇಡೀ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಬೇಕಾ ಎಂಬ ಗೊಂದಲ ಜಿಲ್ಲಾಡಳಿತಕ್ಕಿದೆ. ಗಂಟಲ ದ್ರವ ಪಡೆದು, ವರದಿ ಬರುವ ಮೊದಲೇ ಮನೆಗೆ ಕಳುಹಿಸಿರುವ ಅಧಿಕಾರಿಗಳ ಎಡವಟ್ಟಿನಿಂದಾಗಿ ಅಲ್ಲಿನ ಜನತೆ ಆತಂಕ ಪಡುವಂತಾಗಿದೆ.

    ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 177ಕ್ಕೆ ಏರಿಕೆಯಾಗಿದ್ದು, ಶನಿವಾರ ಒಂದೇ ದಿನ 13 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

  • ಗಡಿಯಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗಿಲ್ಲ ಸುರಕ್ಷತೆ

    ಗಡಿಯಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗಿಲ್ಲ ಸುರಕ್ಷತೆ

    – ಕನಿಷ್ಟ ಮುನ್ನೆಚರಿಕಾ ಕ್ರಮ ಕೈಗೊಳ್ಳದ ಪೊಲೀಸರು

    ಕೋಲಾರ: ಕೊರೊನಾ ಸೋಂಕು ಹರಡದಂತೆ ಹಗಲಿರುಳು ರಾಜ್ಯದ ಗಡಿಯಲ್ಲಿ ಕಾಯುವ ಕೊರೊನಾ ವಾರಿಯರ್ಸ್‍ಗೆ ಭಯ, ಆತಂಕ ಎದುರಾಗಿದೆ. ಗಡಿ ಜಿಲ್ಲೆ ಕೋಲಾರಕ್ಕೆ ನೆರೆ ಯ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಕಂಟಕವಾಗಿದ್ದು, ಕೊರೊನಾ ವಾರಿಯರ್ಸ್‍ಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿದೆ.

    ಆಂಧ್ರ ಹಾಗೂ ತಮಿಳುನಾಡು ಗಡಿಯಲ್ಲಿ ಹಗಲಿರುಳು ಕೆಲಸ ಮಾಡುವ ಸಿಬ್ಬಂದಿಗೆ ಸುರಕ್ಷತೆ ಇಲ್ಲದಂತಾಗಿದೆ. ಸಿಬ್ಬಂದಿ ಮಾಸ್ಕ್ ಮಾತ್ರ ಧರಿಸಿ ಕೆಲಸ ಮಾಡುತ್ತಿದ್ದು, ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್ ಇಲ್ಲದೆ ಭಯದಲ್ಲೇ ಕೆಲಸ ಮಾಡುತ್ತಿದ್ದಾರೆ. ಗಡಿಯಲ್ಲಿ ಕೇಕೆ ಹಾಕುತ್ತಿರುವ ಕಿಲ್ಲರ್ ಕೊರೊನಾ, ಜಿಲ್ಲೆಯಲ್ಲೂ ತನ್ನ ಅಟ್ಟಹಾಸ ಮುಂದುವರೆಸಿದೆ. ಕೋಲಾರದ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರಿನ ಮುಳಬಾಗಲು ತಾಲೂಕಿನ ನಂಗಲಿ ಚೆಕ್ ಪೋಸ್ಟ್, ವಿಕೋಟ ಕೆಜಿಎಫ್ ತಾಲೂಕಿನ ವೆಂಕಟಾಪುರ ಚೆಕ್ ಪೋಸ್ಟ್, ಕುಪ್ಪಂನ ಕೆಂಪಾಪುರ ಚೆಕ್ ಪೋಸ್ಟ್, ಶ್ರೀನಿವಾಸಪುರ ತಾಲೂಕಿನ ರಾಯಲಪಾಡು ಚೆಕ್ ಪೋಸ್ಟ್ ಗಳಲ್ಲಿ 10ಕ್ಕೂ ಹೆಚ್ಚು ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

    ತಮಿಳುನಾಡಿನ ಕೃಷ್ಣಗಿರಿಗೆ ಸಂಪರ್ಕ ಕಲ್ಪಿಸುವ ಬಂಗಾರಪೇಟೆ ತಾಲೂಕಿನ ಬಲಮಂದೆ ಚೆಕ್ ಪೋಸ್ಟ್, ಹೊಸೂರು ಸಂಪರ್ಕ ಕಲ್ಪಿಸುವ ಮಾಲೂರು ತಾಲೂಕಿನ ಕೆಸರಗೆರೆ ಹಾಗೂ ಸಂಪಂಗೆರೆ ಚೆಕ್ ಪೋಸ್ಟ್ ನಲ್ಲಿ ಪೊಲೀಸ್, ಅರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ಯಾವುದೇ ಮುನ್ನಚ್ಚರಿಕೆ ಆಕ್ರಮಗಳನ್ನ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಡಿಯಲ್ಲಿ ಕೆಲಸ ಮಾಡುವ ಕೊರೊನಾ ವಾರಿಯರ್ಸ್‍ಗೆ ಸೋಂಕು ತಗುಲಿದರೆ ಗತಿಯೇನು ಎಂಬ ಭಯ ಕಾಡುತ್ತಿದೆ.

  • ಬಳ್ಳಾರಿಯಲ್ಲಿ ಏಕಕಾಲಕ್ಕೆ ನಡೆಯಬೇಕಿದ್ದ 8 ಬಾಲ್ಯ ವಿವಾಹಕ್ಕೆ ಬ್ರೇಕ್

    ಬಳ್ಳಾರಿಯಲ್ಲಿ ಏಕಕಾಲಕ್ಕೆ ನಡೆಯಬೇಕಿದ್ದ 8 ಬಾಲ್ಯ ವಿವಾಹಕ್ಕೆ ಬ್ರೇಕ್

    ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿಯಲ್ಲಿ ನಾನಾ ಕಡೆಗಳಲ್ಲಿ ಏಕಕಾಲಕ್ಕೆ ನಡೆಯಬೇಕಿದ್ದ ಎಂಟು ಬಾಲ್ಯ ವಿವಾಹಗಳನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ತಡೆಹಿಡಿದಿದ್ದಾರೆ.

    ಜಿಲ್ಲಾ ಮಕ್ಕಳ ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ ಶನಿವಾರ-ಭಾನುವಾರ ಎರಡು ದಿನಗಳ ಕಾಲ ದಾಳಿ ನಡೆಸಿ ಬಾಲ್ಯ ವಿವಾಹಗಳನ್ನು ತಡೆ ಹಿಡಿಯಲಾಗಿದೆ. ಬಳ್ಳಾರಿ ತಾಲೂಕಿನ ರೂಪನಗುಡಿಯಲ್ಲಿ 2, ಕಪ್ಪಗಲ್ಲು, ಸಿರವಾರ, ವದ್ದಟ್ಟಿ, ಕೊಳಗಲ್ಲು ಗ್ರಾಮಗಳಲ್ಲಿ ತಲಾ ಒಂದೊಂದು ಹಾಗೂ ಸಿರುಗುಪ್ಪ ತಾಲೂಕಿನ ತೊಂಡೆಹಾಳ್ ಗ್ರಾಮದ ಬಾಲಕ- ಬಾಲಕಿಯೊಂದಿಗೆ ನಡೆಯಬೇಕಿದ್ದ ಬಾಲ್ಯ ವಿವಾಹಗಳನ್ನ ತಡೆದ ಅಧಿಕಾರಿಗಳ ತಂಡ, ಅವರ ಪೋಷಕರಿಂದ ಮುಚ್ಚಳಿಕೆ ಪತ್ರಗಳನ್ನು ಬರೆಸಿಕೊಂಡಿದ್ದಾರೆ.

    ಪೋಷಕರ ವಿರುದ್ಧ ಪ್ರತ್ಯೇಕವಾಗಿ ನಾಲ್ಕು ಪ್ರಕರಣಗಳು ದಾಖಲಿಸಲಾಗಿದೆ. ಬಳ್ಳಾರಿ ಗ್ರಾಮಾಂತರ ಸಿಡಿಪಿಒ ಉಷಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದ್ ಪಾಷಾ, ಸಿಬ್ಬಂದಿಯಾದ ರಾಜಾನಾಯ್ಕ, ಈಶ್ವರ್ ರಾವ್, ಉಮೇಶ್, ಜ್ಯೋತಿ, ನಾಗುಬಾಯಿ ನೇತೃತ್ವದ ಪೊಲೀಸ್ ಅಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡವು ಈ ದಾಳಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಆರ್.ನಾಗರಾಜ ತಿಳಿಸಿದ್ದಾರೆ.

  • ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯಲ್ಲೇ ಎಡವಟ್ಟು ಮಾಡಿದ ಅಧಿಕಾರಿಗಳು

    ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯಲ್ಲೇ ಎಡವಟ್ಟು ಮಾಡಿದ ಅಧಿಕಾರಿಗಳು

    – ಏಪ್ರಿಲ್ ತಿಂಗಳಲ್ಲಿ 30 ದಿನ ಹೋಗಿ 31 ದಿನ ಎಂದು ನಮೂದು

    ಧಾರವಾಡ: ನಗರದಲ್ಲಿ ಇಂದು ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವ್ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ತಯಾರಿಯಲ್ಲೇ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಧಾರವಾಡ ಗಾಂಧಿನಗರದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಇವರ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಯದ್ವಾತದ್ವಾ ತಯಾರಿಸಿದ್ದಾರೆ. ಅಧಿಕಾರಿಗಳ ತಪ್ಪು ನೊಡದೆಯೇ ಜಿಲ್ಲಾಧಿಕಾರಿ ಕೂಡ ಸಹಿ ಮಾಡಿ ಮುಂದಿನ ಕ್ರಮಕ್ಕೆ ರವಾನಿಸಿದ್ದಾರೆ. ಅಲ್ಲದೆ ಯಾವ ತಿಂಗಳಲ್ಲಿ ಎಷ್ಟು ದಿನಾಂಕ ಎನ್ನುವ ಪರಿಜ್ಞಾನವೂ ಇಲ್ಲದಂತೆ ಅಧಿಕಾರಿಗಳು ವರ್ತಿಸಿದ್ದಾರೆ.

    ಪಾಸಿಟಿವ್ ವ್ಯಕ್ತಿಯ ಮಾಹಿತಿ ನೀಡುವ ವಿಷಯದಲ್ಲೇ ನಿರ್ಲಕ್ಷ್ಯ ವಹಿಸಿದ್ದು, ಟ್ರಾವೆಲ್ ಹಿಸ್ಟರಿಯಲ್ಲಿ ಅಧಿಕಾರಿಗಳು ಏಪ್ರಿಲ್ 31 ಎಂದು ನಮೂದು ಮಾಡಿದ್ದಾರೆ. ಆದರೆ ಏಪ್ರಿಲ್ ತಿಂಗಳಲ್ಲಿ ಇರುವುದು 30 ದಿನ ಮಾತ್ರ. ಪಾಸಿಟಿವ್ ವ್ಯಕ್ತಿ ಏಪ್ರಿಲ್ 31ರಂದು ಪುಣೆಯಿಂದ ಆಗಮನ ಎಂದು ಆತನ ಪ್ರವಾಸದ ಹಿಸ್ಟರಿಯಲ್ಲಿ ಹಾಕಲಾಗಿದ್ದು, ಮತ್ತೊಂದೆಡೆ ಪಾಸಿಟಿವ್‍ವ್ಯಕ್ತಿಯ ಒಂದು ತಿಂಗಳ ಮಾಹಿತಿಯೂ ಗೊಂದಲದ ಗೂಡಾಗಿದೆ. ಮಾರ್ಚ್ 24ರ ವರೆಗಿನ ಮಾಹಿತಿ ನೀಡಿ ನೇರವಾಗಿ ಏಪ್ರಿಲ್ 24ರ ಮಾಹಿತಿಯನ್ನು ಅಧಿಕಾರಗಳು ತಿಳಿಸಿದ್ದಾರೆ. ಮಾ.25ರಿಂದ ಏಪ್ರಿಲ್ 23ರ ವರೆಗಿನ ಮಾಹಿತಿಯೇ ಪ್ರತಿಯೇ ಲಭ್ಯವಿಲ್ಲ. ಹೀಗೆ ಟ್ರಾವೆಲ್ ಹಿಸ್ಟರಿ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

  • ಎಣ್ಣೆ ಕೊಡದಿದ್ದರೆ ಧರಣಿ- ನಿವೃತ್ತ ಸೈನಿಕರ ಎಚ್ಚರಿಕೆಗೆ ಮಣಿದ ಅಬಕಾರಿ ಇಲಾಖೆ

    ಎಣ್ಣೆ ಕೊಡದಿದ್ದರೆ ಧರಣಿ- ನಿವೃತ್ತ ಸೈನಿಕರ ಎಚ್ಚರಿಕೆಗೆ ಮಣಿದ ಅಬಕಾರಿ ಇಲಾಖೆ

    ಶಿವಮೊಗ್ಗ: ಮದ್ಯ ನೀಡುವಂತೆ ನಿವೃತ್ತ ಸೈನಿಕರು ಆಗ್ರಹಿಸಿ, ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಗರದಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಮಿಲಿಟರಿ ಕ್ಯಾಂಟೀನ್ ಸಹ ಬಂದ್ ಆಗಿತ್ತು. ಆದರೆ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ದಿನದಿಂದ ಮಿಲಿಟರಿ ಕ್ಯಾಂಟೀನ್ ಓಪನ್ ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಯಾವುದೇ ಸಮಸ್ಯೆ ಇಲ್ಲದೇ ನಿವೃತ್ತ ಸೈನಿಕರು ಕ್ಯಾಂಟೀನ್‍ನಲ್ಲಿ ಮದ್ಯ ಖರೀದಿ ಮಾಡುತ್ತಿದ್ದರು.

    ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ನೂರಾರು ಮಂದಿ ನಿವೃತ್ತ ಸೈನಿಕರು ಇಂದು ಬೆಳಗ್ಗೆ ನಗರದ ಹೊಳೆ ಬಸ್ ನಿಲ್ದಾಣದ ಸಮೀಪದ ಮಿಲಿಟರಿ ಕ್ಯಾಂಟೀನ್‍ಗೆ ಮದ್ಯ ಖರೀದಿಸಲೆಂದು ಆಗಮಿಸಿದ್ದರು. ಈ ವೇಳೆ ನಿವೃತ್ತ ಸೈನಿಕರು ಮದ್ಯ ಖರೀದಿಗೆ ಸರದಿ ಸಾಲಿನಲ್ಲೇ ನಿಂತಿದ್ದರು. ಆದರೆ ಸ್ಥಳಕ್ಕೆ ಬಂದ ಅಬಕಾರಿ ಇನ್ಸ್‌ಪೆಕ್ಟರ್ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಮದ್ಯದ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಕ್ಯಾಂಟೀನ್‍ನಲ್ಲಿದ್ದ ಸ್ಟಾಕ್ ಸಹ ಪರಿಶೀಲನೆ ನಡೆಸಿದರು.

    ಈ ವೇಳೆ ಎರಡು ಬ್ರಾಂಡ್‍ನ ಬಾಟಲಿಗಳ ಮೇಲೆ ಪೇಪರ್ ಸೀಲ್ ಇಲ್ಲದಿರುವುದು ಕಂಡು ಬಂದಿದೆ. ಹೀಗಾಗಿ ಅಬಕಾರಿ ಇನ್ಸ್‌ಪೆಕ್ಟರ್ ಅವರು ಮದ್ಯ ಮಾರಾಟ ನಿಲ್ಲಿಸುವಂತೆ ಮಿಲಿಟರಿ ಅಧಿಕಾರಿಗಳಿಗೆ ಸೂಚಿಸಿ ತೆರಳಿದರು. ಅದರಂತೆ ಕ್ಯಾಂಟೀನ್‍ನಲ್ಲಿ ಮದ್ಯ ಮಾರಾಟವನ್ನು ಅಧಿಕಾರಿಗಳು ಸ್ಥಗಿತಗೊಳಿಸಲಾಗಿದೆ. ಇದರಿಂದ ಕೆರಳಿದ ನಿವೃತ್ತ ಸೈನಿಕರು ಅಬಕಾರಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮದ್ಯದ ಬಾಟಲಿಗಳು ಕ್ಯಾಂಟೀನ್‍ಗೆ ತಲುಪುವ ಮುನ್ನ ನಾಲ್ಕೈದು ಕಡೆ ಪರಿಶೀಲನೆ ನಡೆಸಲಾಗುತ್ತದೆ. ಪರಿಶೀಲಿಸಿದ ನಂತರವೇ ಕ್ಯಾಂಟೀನ್‍ಗೆ ಬರುತ್ತವೆ. ಹೀಗಿರುವಾಗ ಸೀಲ್ ಇಲ್ಲ ಅಂದರೆ ಅದು ಅಬಕಾರಿ ಇಲಾಖೆಯವರ ತಪ್ಪು. ಸೀಲ್ ಇಲ್ಲ ಅಂದ ಮೇಲೆ ಯಾಕೆ ಕಳುಹಿಸಿದರು ಎಂದು ಅಬಕಾರಿ ಸಿಬ್ಬಂದಿ ವಿರುದ್ಧವೇ ನಿವೃತ್ತ ಸೈನಿಕರು ಗುಡುಗಿದರು.

    ನಾವು ಕೊರೊನಾ ಪಾಸ್ ಪಡೆದು ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ದೂರ ದೂರದ ಊರುಗಳಿಂದ ಮದ್ಯ ಖರೀದಿಸಲು ಬಂದಿದ್ದೇವೆ. ನಾವು ಮದ್ಯ ತೆಗೆದುಕೊಂಡೇ ಹೋಗುವುದು. ಒಂದು ವೇಳೆ ನೀವು ಕೊಡದಿದ್ದರೆ ಅಬಕಾರಿ ಇಲಾಖೆ ಕಚೇರಿ ಎದುರೇ ಧರಣಿ ನಡೆಸುತ್ತೇವೆ ಎಂದು ನಿವೃತ್ತ ಸೈನಿಕರು ಎಚ್ಚರಿಕೆ ನೀಡಿದರು.

    ಇದರಿಂದಾಗಿ ಅಬಕಾರಿ ಇಲಾಖೆ ಸಿಬ್ಬಂದಿ ಮತ್ತೊಮ್ಮೆ ಪರಿಶೀಲನೆ ನಡೆಸುವ ನೆಪ ಹೇಳಿ, ಸುಮ್ಮನೆ ಯಾಕೆ ನಿವೃತ್ತ ಸೈನಿಕರನ್ನು ಎದುರು ಹಾಕಿಕೊಳ್ಳುವುದು ಎಂಬ ಕಾರಣದಿಂದ ನಾವು ಇದನ್ನು ನಂತರ ಪರಿಶೀಲಿಸುತ್ತೇವೆ. ಸದ್ಯ ನೀವೀಗ ಮದ್ಯ ತೆಗೆದುಕೊಂಡು ಹೋಗಿ ಎಂದು ಹೇಳಿ ಕ್ಯಾಂಟೀನ್‍ನಲ್ಲಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟರು.

  • ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ನಿಂತ್ರಾ ಅಧಿಕಾರಿಗಳು?

    ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ನಿಂತ್ರಾ ಅಧಿಕಾರಿಗಳು?

    – ಅನಾಮಿಕರು ಅಕ್ಕಿ ಸಂಗ್ರಹಿಸಿದ್ದಾರೆಂದು ಎಫ್‍ಐಆರ್

    ದಾವಣಗೆರೆ: ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ಅಧಿಕಾರಿಗಳು ನಿಂತ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮೇಲೆ ದಾಳಿ ಮಾಡಿ ನಕಲಿ ಎಫ್‍ಐಆರ್ ಹಾಕಿದ್ದಾರೆಂಬ ಆರೋಪವೊಂದು ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿದೆ.

     

    ದಾವಣಗೆರೆ ನಗರದ ಕೆ.ಆರ್ ರಸ್ತೆ ಬಳಿಯ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. ಈ ವಿಚಾರ ತಿಳಿದ ಆಹಾರ ನಿರೀಕ್ಷಕ ರವಿ ಶಿವಮೂರ್ತಿ ಹಿಪ್ಪರಗಿ ಹಾಗೂ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆದು ಸುಮಾರು 250 ಪ್ಯಾಕೇಟ್ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಗೋದಾಮಿನಲ್ಲಿ ಬೃಹತ್ ಪ್ರಮಾಣದ ಅಕ್ಕಿ ಸಿಕ್ಕರೂ ನಕಲಿ ಎಫ್‍ಐಆರ್ ದಾಖಲು ಮಾಡಿದ್ದಾರೆ. ಅಲ್ಲದೆ ಅನಾಮಿಕರು ಅಕ್ಕಿ ಸಂಗ್ರಹಿಸಿದ್ದಾರೆಂದು ಎಫ್‍ಐಆರ್ ದಾಖಲು ಮಾಡಿದ್ದಾರೆ. ಈ ಮೂಲಕ ಪಡಿತರ ಅಕ್ಕಿ ದಂಧೆಕೋರರಿಗೆ ಅಧಿಕಾರಿಗಲೇ ಸಾಥ್ ಕೊಡ್ತಿದ್ದಾರಾ ಎಂಬ ಅನುಮಾನವೊಂದು ಮೂಡಿದೆ.

    ಗೋದಾಮಿನ ಮಾಲೀಕನ ವಿರುದ್ಧ ಎಫ್‍ಐಆರ್ ಮಾಡೋದು ಬಿಟ್ಟು ಯಾರೋ ಅನಾಮಿಕ ಅಂತ ಎಫ್‍ಐಆರ್ ಮಾಡಿದ್ದಾರೆ. ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ತನಿಖೆ ನಡೆಸಿ ದಂಧೆಕೋರರ ವಿರುದ್ಧ ಎಫ್‍ಐಆರ್ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ದಂಧೆಕೋರರ ಜೊತೆ ಶಾಮೀಲಾಗಿ ತಹಶೀಲ್ದಾರ್ ಅವರೇ ಡಮ್ಮಿ ಎಫ್‍ಐಆರ್ ಮಾಡಿದ್ರಾ?, ಅಲ್ಲದೆ ಡಮ್ಮಿ ಎಫ್‍ಐಆರ್ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನ ನಡೀತಾ ಎಂಬ ಪ್ರಶ್ನೆಗಳು ಮೂಡಿವೆ.

  • ವಿದೇಶಿಗರ ಕ್ವಾರಂಟೈನ್‍ಗೆ ಸಿದ್ಧತೆ, ಹಳ್ಳಿಗೂ ಕೊರೊನಾ ವ್ಯಾಪಿಸುವ ಭಯ- ಗ್ರಾಮಸ್ಥರ ವಿರೋಧ

    ವಿದೇಶಿಗರ ಕ್ವಾರಂಟೈನ್‍ಗೆ ಸಿದ್ಧತೆ, ಹಳ್ಳಿಗೂ ಕೊರೊನಾ ವ್ಯಾಪಿಸುವ ಭಯ- ಗ್ರಾಮಸ್ಥರ ವಿರೋಧ

    ಬೆಂಗಳೂರು: ವಿದೇಶಿಗರನ್ನು ಗ್ರಾಮದ ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿದೇಶದಿಂದ ಬರುವ ಭಾರತ ಮೂಲದ ಜನರನ್ನು ಕ್ವಾರಂಟೈನ್ ಮಾಡಲು ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳ ಸೂಚನೆಯಂತೆ ಬೆಂಗಳೂರು ಹೊರವಲಯದ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು ಹೋಬಳಿಯ ನರಸಾಪುರ ಹಾಗೂ ಬಾಣವಾಡಿ ಗ್ರಾಮಗಳಲ್ಲಿ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಕ್ವಾರಂಟೈನ್ ಕೇಂದ್ರ ಸಿದ್ಧತೆ ಮಾಡಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ತಡೆಯೊಡ್ಡಿದ್ದಾರೆ. ನಮ್ಮ ಗ್ರಾಮಗಳಲ್ಲಿ ಮಕ್ಕಳಿದ್ದಾರೆ. ಸ್ವಾಮಿ ನಾವು ಹಳ್ಳಿ ಜನರು ಯಾಕೆ ಇಲ್ಲಿ ಕ್ವಾಂರಟೈನ್ ಹೋಮ್ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಿಗೆ ಇನ್ನೂ ಕೊರೊನಾ ಕಾಲಿಟ್ಟಿಲ್ಲ, ಹೀಗೆ ಹಳ್ಳಿಗಳಲ್ಲಿ ಕ್ವಾರಂಟೈನ್ ಮಾಡಿದರೆ ಇಲ್ಲಿಗೂ ಮಹಾಮಾರಿ ವ್ಯಾಪಿಸುತ್ತದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

    ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ ಎಂದು ಜನರ ಮನವಿ ಮಾಡಿದ್ದು, ವಿದೇಶಿ ಜನರ ಕ್ವಾರಂಟೈನ್‍ಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹಳ್ಳಿಗಾಡಿನ ಜನರ ವಿರೋಧ ಮಾಡುತ್ತಿದ್ದಾರೆ. ಅಲ್ಲದೆ ಹೀಗೆ ಮಾಡುವುದರಿಂದ ಹಳ್ಳಿ ಹಳ್ಳಿಗೆ ಕರೊನಾ ವ್ಯಾಪಿಸುತ್ತದೆ ಎಂದು ವಿರೋಧಿಸುತ್ತಿದ್ದಾರೆ.

  • ತೆರಿಗೆ ಸಂಗ್ರಹಕ್ಕೆ ವರ್ಕೌಟ್ ಆದ ಪಾಲಿಕೆ ಪ್ಲಾನ್- 2 ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹ

    ತೆರಿಗೆ ಸಂಗ್ರಹಕ್ಕೆ ವರ್ಕೌಟ್ ಆದ ಪಾಲಿಕೆ ಪ್ಲಾನ್- 2 ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹ

    ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್ ಬಂದ ನಂತರ ವಿಶ್ವದ ಆರ್ಥಿಕ ಪರಿಸ್ಥಿತಿಯೇ ಪಾತಾಳಕ್ಕೋಗಿದೆ. ಭಾರತದಲ್ಲೂ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಇತ್ತ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗುತ್ತಾ ಬರುತ್ತಿದೆ. ಆದರೆ ಲಾಕ್‍ಡೌನ್ ನಡುವೆಯೂ ಅವಳಿ ನಗರದ ಮಹಾನಗರ ಪಾಲಿಕೆಯ ಖಜಾನೆಗೆ ಕೋಟಿ ಕೋಟಿ ಹಣ ಹರಿದು ಬಂದಿದೆ.

    ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕೊರೊನಾ ಲಾಕ್‍ಡೌನ್ ಬರಸಿಡಿಲು ಬಡಿದಂತಾಗಿತ್ತು. ಹೀಗಾಗಿ ಆರ್ಥಿಕ ಪುನಶ್ಚೇತನಕ್ಕೆ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ಮಾಡಿದ ಐಡಿಯಾ ವರ್ಕೌಟ್ ಆಗಿದೆ.

    ಜನ ಕಚೇರಿಗೆ ಬಾರದೇ ಆನ್‍‍ಲೈನ್‍‍ನಲ್ಲಿ ತೆರಿಗೆ ಪಾವತಿಸುವಂತೆ ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಪಾಲಿಕೆ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಜನತೆ ಆಸ್ತಿ ತೆರಿಗೆಯನ್ನ ಆನ್‍ಲೈನ್ ಮೂಲಕ ಪಾವತಿಸಿದ್ದಾರೆ. ಪರಿಣಾಮ ಮಹಾನಗರ ಪಾಲಿಕೆ ಲಾಕ್‍ಡೌನ್ ಸಂದರ್ಭದಲ್ಲೂ ಬರೋಬ್ಬರಿ 2 ಕೋಟಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ತಿಳಿಸಿದ್ದಾರೆ.

    ಪಾಲಿಕೆ ಅಧಿಕಾರಿಗಳು ಸಾಮಾಜಿಕ ಜಾಲತಾಣ ಬಳಸಿಕೊಂಡು ಆಸ್ತಿ ತೆರಿಗೆ ಕಟ್ಟುವಂತೆ ಜನಜಾಗೃತಿ ಮೂಡಿಸಿದರು. ಮೇ ತಿಂಗಳೊಳಗೆ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಅಷ್ಟೇ ಅಲ್ಲದೇ ಆಸ್ತಿ ತೆರಿಗೆ ದರ ಹೆಚ್ಚಿಸದೇ ಹಳೆ ದರದಲ್ಲೇ ತೆರಿಗೆ ಕಟ್ಟಿಸಿಕೊಂಡಿದ್ದಾರೆ. ಪರಿಣಾಮ ಪಾಲಿಕೆಯ ಬೊಕ್ಕಸಕ್ಕೆ ಹಣ ಹರಿದುಬಂದಿದೆ ಎಂದು ಸ್ಥಳೀಯ ನಿವಾಸಿ ನಾಗರಾಜ್ ಹೇಳಿದರು.

    ಲಾಕ್‍ಡೌನ್ ನಡುವೆ ಆಸ್ತಿ ತೆರಿಗೆ ಸಂಗ್ರಹ ಮಾಡುವುದು ಸವಾಲಿನ ಕೆಲಸವಾಗಿದೆ. ಆದರೆ ಈ ಸವಾಲನ್ನ ಸಾಮಾಜಿಕ ಜಾಲತಾಣಗಳ ಸದ್ಬಳಕೆಯಿಂದ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಲ್ಲದೇ ಪಾಲಿಕೆ ಅಧಿಕಾರಿಗಳು ತೆರಿಗೆ ಸಂಗ್ರಹಣೆ ಮಾಡುವಲ್ಲಿ ಯಶ್ವಸಿಯಾಗಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ.

  • ಕೆರೆಯಲ್ಲಿ ಮಣ್ಣು ಅಗೆಯಲು ನಿಂತ ಶಿವಮೊಗ್ಗ ಜಿ.ಪಂ ಸಿಇಓ

    ಕೆರೆಯಲ್ಲಿ ಮಣ್ಣು ಅಗೆಯಲು ನಿಂತ ಶಿವಮೊಗ್ಗ ಜಿ.ಪಂ ಸಿಇಓ

    – ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡಿದ ಅಧಿಕಾರಿಗಳು

    ಶಿವಮೊಗ್ಗ: ಸ್ವತಃ ತಾವೇ ಕೆರೆಯಲ್ಲಿ ಮಣ್ಣು ಅಗೆಯುವ ಮೂಲಕ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಓ ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡಿದ್ದಾರೆ.

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಸಿಇಓ ವೈಶಾಲಿಯವರು ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡಿದ್ದಾರೆ. ಶಿವಮೊಗ್ಗದ ಹಾಡೋನಹಳ್ಳಿಯ ಕೆರೆಯೊಂದರಲ್ಲಿ ರಾಷ್ಟ್ರೀಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎನ್‌ಆರ್‌ಇಜಿ ) ಅಡಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಸಿಇಓ ಅವರು ತಾನು ನಿಂತು ಬಾಣಲಿಗೆ ಮಣ್ಣು ತುಂಬಿದ್ದಾರೆ.

    ಮಂಗಳವಾರ ಬೆಳಗ್ಗೆ ಕಾಮಗಾರಿ ವೀಕ್ಷಣೆಗೆಂದು ಸ್ಥಳಕ್ಕೆ ವೈಶಾಲಿಯವರು ತೆರಳಿದ್ದರು. ಈ ವೇಳೆ ಅಧಿಕಾರಿ ಕೂಲಿ ಕಾರ್ಮಿಕರ ಜೊತೆಗೂಡಿ ತಾನು ಕೂಡ ಹೂಳೆತ್ತಲು ಅಣಿಯಾದರು. ಕೇವಲ ಸಿಇಓ ಮಾತ್ರವಲ್ಲದೆ ಶಿವಮೊಗ್ಗ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅತಿಕ್ ಪಾಷಾ ಕೂಡ ಮಣ್ಣು ತುಂಬಿದ ಬುಟ್ಟಿ ಹೊತ್ತು ನಡೆದರು. ಈ ಮೂಲಕ ಅಧಿಕಾರಿಗಳು ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡಿದ್ದಾರೆ.

    ಕಳೆದ ತಿಂಗಳು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಎನ್‌ಆರ್‌ಇಜಿ ಯೋಜನೆಯಡಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಎನ್‌ಆರ್‌ಇಜಿ ಕಾಮಗಾರಿ ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ. ಹೀಗಾಗಿ ಸರ್ಕಾರಿ ಅಧಿಕಾರಿಗಳು ನೂರಾರು ಜನ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿರುವ ಕಾಮಗಾರಿಗೆ ಉತ್ತೇಜಿಸಲು ಮುಂದಾಗಿದ್ದಾರೆ.

  • ಲಾಕ್‍ಡೌನ್ ಸಡಿಲಿಕೆ ಆದ್ರೂ ತಪ್ಪದ ರೈತರ ಗೋಳು

    ಲಾಕ್‍ಡೌನ್ ಸಡಿಲಿಕೆ ಆದ್ರೂ ತಪ್ಪದ ರೈತರ ಗೋಳು

    – ಹತ್ತಿ ಮಾರಾಟ ಮಾಡಲು ಪರದಾಟ

    ಯಾದಗಿರಿ: ಲಾಕ್‍ಡೌನ್ ಸಡಿಲಿಕೆ ಆದರೂ ರೈತರ ಗೋಳು ಮಾತ್ರ ತಪ್ಪಿಲ್ಲ. ಇದೀಗ ಹತ್ತಿ ಮಾರಾಟ ಮಾಡಲು ಯಾದಗಿರಿ ರೈತರು ಪರದಾಟ ನಡೆಸುತ್ತಿದ್ದಾರೆ.

    ರೈತರಿಂದ ಬೆಂಬಲ ಬೆಲೆಯೊಂದಿಗೆ ಹತ್ತಿ ಖರೀದಿ ಮಾಡಲು ಕೇಂದ್ರ ಸರ್ಕಾರ ಇಂಗಿತ ಹೊಂದಿದೆ. ಹೀಗಾಗಿ ಜಿಲ್ಲೆಯ ಶಹಾಪುರದ ಮದ್ರಿಕಿ ಹತ್ತಿರ ಖಾಸಗಿ ಕಾಟನ್ ಮೀಲ್‍ನಲ್ಲಿ ಭಾರತೀಯ ಹತ್ತಿ ನಿಗಮ ಖರೀದಿ ಕೇಂದ್ರ ಆರಂಭಿಸಿದೆ. ಹತ್ತಿ ಮಾರಾಟ ಮಾಡಲು ನೂರಾರು ರೈತರು ಮುಂದಾಗಿದ್ದಾರೆ. ಆದರೆ ಸಾಮಾಜಿಕ ಅಂತರ ಹೆಸರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಅಧಿಕಾರಿಗಳು ರೈತರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.

    ಸದ್ಯ ಜಿಲ್ಲೆಯಲ್ಲಿ 600ಕ್ಕೂ ಅಧಿಕ ರೈತರು ಭಾರತೀಯ ಹತ್ತಿ ನಿಗಮದಲ್ಲಿ ಹತ್ತಿ ಮಾರಾಟ ಮಾಡಲು ಸಿದ್ಧರಿದ್ದಾರೆ. ಹತ್ತಿ ನಿಗಮ ಸಹ ಮೇ ತಿಂಗಳು ಮುಗಿಯುವದರೊಳಗೆ ಹತ್ತಿ ಖರೀದಿ ಮಾಡಲು ರೆಡಿಯಿದೆ. ಆದರೆ APMC ಮಾತ್ರ ಇದಕ್ಕೆ ಅಡ್ಡಗಾಲು ಹಾಕುತ್ತಿದೆ. ದಿನಕ್ಕೆ ಹತ್ತು ಜನರಿಗೆ ಮಾತ್ರ ಮಾರಾಟ ಮಾಡಲು ಅವಕಾಶ ನೀಡಿದೆ. ಇದರಿಂದ ಬರೀ ಹತ್ತಿ ಮಾರಾಟ ಪ್ರಕ್ರಿಯೆಗೆ ಇನ್ನೂ ನಾಲ್ಕೈದು ತಿಂಗಳು ಬೇಕಾಗುತ್ತದೆ. ಇದರಿಂದ ರೈತರು ಅಸಮಾಧಾನಗೊಂಡಿದ್ದಾರೆ.

    ಮತ್ತೆ ಜೂನ್‍ನಲ್ಲಿ ಬಿತ್ತನೆ ಕಾರ್ಯ ಆರಂಭಗೊಳಲಿದೆ. ಹೀಗಾಗಿ ಬೀಜ ಖರೀದಿಗೆ, ಗೊಬ್ಬರಕ್ಕೆ ಹಣದ ಅವಶ್ಯಕತೆಯಿದೆ. ಆದರೂ ಅಧಿಕಾರಿಗಳು ರೈತರ ಬಗ್ಗೆ ಚಿಂತಿಸುತ್ತಿಲ್ಲ. ಹತ್ತಿ ನಿಗಮ ಹತ್ತಿ ಖರೀದಿ ಮಾಡಲು ಸಿದ್ಧವಿದ್ದರೂ APMC ಮಾತ್ರ ನಿರಾಶಕ್ತಿ ಹೊಂದಿದೆ.