Tag: officers

  • ವಿದ್ಯುತ್ ಇಲಾಖೆಯ ಸಿಬ್ಬಂದಿಯನ್ನ ಕಂಬಕ್ಕೆ ಕಟ್ಟಿದ ಗ್ರಾಮಸ್ಥರು

    ವಿದ್ಯುತ್ ಇಲಾಖೆಯ ಸಿಬ್ಬಂದಿಯನ್ನ ಕಂಬಕ್ಕೆ ಕಟ್ಟಿದ ಗ್ರಾಮಸ್ಥರು

    -ಪೊಲೀಸರು ಬಂದ್ಮೇಲೆ ತಿಳಿಯಾದ ವಾತಾವರಣ

    ಹೈದರಾಬಾದ್: ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಗ್ರಾಮಸ್ಥರು ಕಟ್ಟಿ ಹಾಕಿದ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

    ವಿದ್ಯುತ್ ಇಲಾಖೆಯ ಅಧಿಕಾರಿಗಳಿಬ್ಬರು ಗ್ರಾಮಕ್ಕೆ ಪರಿಶೀಲನೆಗೆ ಆಗಮಿಸಿದ್ದರು. ವಿದ್ಯುತ್ ಬಿಲ್ ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.

    ವಿದ್ಯುತ್ ಇಲಾಖೆಯ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಇತ್ತ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅಧಿಕಾರಿಗಳನ್ನು ಬಿಡುಗಡೆಗೊಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಕೋರ್ಟ್ ಆದೇಶಿಸಿದರೂ ಕೆರೆ ಒತ್ತುವರಿ ತೆರವುಗೊಳಿಸದ ಅಧಿಕಾರಿಗಳು

    ಕೋರ್ಟ್ ಆದೇಶಿಸಿದರೂ ಕೆರೆ ಒತ್ತುವರಿ ತೆರವುಗೊಳಿಸದ ಅಧಿಕಾರಿಗಳು

    ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದಾಸನಪುರ ಹೋಬಳಿಯ ಮಾದಾವರ ಗ್ರಾಮದ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಈಗಾಗಲೇ ಲೋಕಾಯಕ್ತ ಕೋರ್ಟ್ ಅಧಿಕಾರಿಗಳಿಗೆ ಆದೇಶ ನೀಡಿದೆ. ಆದರೆ ಅಧಿಕಾರಿಗಳು ತೆರವು ಕಾರ್ಯ ಮಾತ್ರ ಮಾಡದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ ಎಂದು ದೂರುದಾರ ರಾಮಕೃಷ್ಣಯ್ಯ ಆರೋಪಿಸಿದ್ದಾರೆ.

    ಮಾದಾವರ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಲೋಕಾಯುಕ್ತ ಕೋರ್ಟ್ ಆದೇಶ ನೀಡಿದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಒತ್ತುವರಿ ತೆರವುಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಮಾದಾವರ ಕೆರೆಯ ಚಿಕ್ಕಬಿದರಕಲ್ಲು ಸರ್ವೇ ನಂ 21ರಲ್ಲಿ ಇರುವ ಸುಮಾರು ಹತ್ತು ಎಕರೆ ಜಾಗವನ್ನು ಜಿಂದಾಲ್ ಸಂಸ್ಥೆಯು ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡವನ್ನು ನಿರ್ಮಿಸಿದೆ.

    ಈ ಬಗ್ಗೆ ಲೋಕಾಯುಕ್ತ ಕೋರ್ಟಿಗೆ 2009ರಲ್ಲಿ ದಾವೆ ಹೂಡಲಾಗಿತ್ತು. ಸುಮಾರು ಹತ್ತು ವರ್ಷಗಳ ಕಾಲ ವಾದ-ವಿವಾದಗಳನ್ನು ಆಲಿಸಿದ ಕೋರ್ಟ್, 2018ರಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ತೀರ್ಪು ನೀಡಿತ್ತು. ಆದರೆ ಈ ತೀರ್ಪು ಬಂದು ಎರಡು ವರ್ಷ ಕಳೆದರೂ ಕೆರೆ ಒತ್ತುವರಿ ಕಾರ್ಯ ತೆರವುಗೊಳಿಸಿಲ್ಲ ಎಂದು ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಲು ಹೋರಾಟ ಮಾಡಿದ ತಿಪ್ಪನಹಳ್ಳಿ ಟಿ.ಎನ್ ರಾಮಕೃಷ್ಣಯ್ಯ ಬೇಸರ ವ್ಯಕ್ತಪಡಿಸಿದರು.

    ಮಾದಾವರ ಕೆರೆಯ ವಿಸ್ತೀರ್ಣವು ಚಿಕ್ಕಬಿದರಕಲ್ಲು, ದೊಡ್ಡಬಿದರಕಲ್ಲು, ತಿರುಮಲಾಪುರ ಗ್ರಾಮಗಳ ಸರ್ವೇ ನಂಬರ್ ಗಳಲ್ಲಿ ಹರಡಿದೆ. ಹತ್ತು ಎಕರೆ ಭೂ ಪ್ರದೇಶವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರಿ ಒತ್ತುವರಿಯೂ ಒಂದು ಎಕರೆ 12 ಗುಂಟೆ ಇರುತ್ತದೆ. ಕೆರೆ ಜಾಗವು ಒತ್ತುವರಿ ಅಗಿರುವ ಬಗ್ಗೆ ಸರ್ಕಾರಿ ಅಧಿಕಾರಿಗಳೇ ಸಮಗ್ರ ವರದಿಯನ್ನು ಕೋರ್ಟಿಗೆ ನೀಡಿದ್ದಾರೆ. ಆದರೂ ತೆರವುಗೊಳಿಸುವುದು ವಿಳಂಬವಾಗುತ್ತಿದೆ ಎಂದು ಅವರು ಆರೋಪಿಸಿದರು.

    ಕೆರೆ ಒತ್ತುವರಿ ತೆರವುಗೊಳಿಸುವಂತೆ ಆದೇಶವಿದ್ದರೂ ಜಿಂದಾಲ್ ಸಂಸ್ಥೆಯವರು ಕೆರೆ ಜಾಗದಲ್ಲಿ ಮತ್ತೆ ಕೆಲಸವನ್ನು ಮಾಡಲು ಮುಂದಾಗಿದ್ದರು. ಗ್ರಾಮಸ್ಥರ ಸಹಾಯದಿಂದ ಕೆರೆ ಜಾಗದಲ್ಲಿ ಕೆಲಸ ಮಾಡುವುದನ್ನು ತಡೆಗಟ್ಟಿದ್ದೇವೆ. ಕೆರೆ ಜಾಗವನ್ನು ಉಳಿಸಿಕೊಳ್ಳುವಲ್ಲಿ ಅಧಿಕಾರಿಗಳು ಕಾಳಜಿ ತೋರಿಸುತ್ತಿಲ್ಲ. ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳು ಮಾದಾವರ ಕೆರೆ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ಬೃಹತ್ ಕಟ್ಟಡವನ್ನು ಕೂಡಲೇ ತೆರವು ಮಾಡಿ ಮೂರು ನಾಲ್ಕು ಗ್ರಾಮದ ರೈತರು ಜನರಿಗೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  • ಆಸ್ಪತ್ರೆಗೆ ಬರಲು ಒಪ್ಪದ ಸೋಂಕಿತೆ- ಮನೆಗೆ ಬಂದ ಅಧಿಕಾರಿಗಳ ವಿರುದ್ಧವೇ ಆಕ್ರೋಶ

    ಆಸ್ಪತ್ರೆಗೆ ಬರಲು ಒಪ್ಪದ ಸೋಂಕಿತೆ- ಮನೆಗೆ ಬಂದ ಅಧಿಕಾರಿಗಳ ವಿರುದ್ಧವೇ ಆಕ್ರೋಶ

    ಹಾಸನ: ಕೊರೊನಾ ಪಾಸಿಟಿವ್ ಬಂದಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ಬರಲು ನಿರಾಕರಿಸಿ ಅಧಿಕಾರಿಗಳ ವಿರುದ್ಧವೇ ಆಕ್ರೋಶ ಹೊರಹಾಕಿದ ಘಟನೆ ಹಾಸನ ಜಿಲ್ಲೆಯ, ಅರಸೀಕೆರೆ ತಾಲೂಕಿನ, ಹಳ್ಳಿಯೊಂದರಲ್ಲಿ ನಡೆದಿದೆ.

    ಮಹಿಳೆಯೊರ್ವಳಿಗೆ ಕೊರೊನಾ ಪಾಸಿಟಿವ್ ಇರುವುದು ಶುಕ್ರವಾರ ದೃಢಪಟ್ಟಿತ್ತು. ಹೀಗಾಗಿ ಮಹಿಳೆಯ ಮನೆ ಬಳಿ ತೆರಳಿದ ಅಧಿಕಾರಿಗಳು ಆಕೆಯನ್ನು ತಮ್ಮೊಂದಿಗೆ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಬರಲು ಮನವಿ ಮಾಡಿದರು. ಆದರೆ ಇದಕ್ಕೆ ಮಹಿಳೆ ಮತ್ತು ಆಕೆಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ ತಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದವರ ವಿರುದ್ಧವೇ ಹರಿಹಾಯ್ದಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ಕೂಡ ಮಹಿಳೆ ಬಳಿ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ಕೊನೆಗೆ ಅಂತಿಮವಾಗಿ ಮನೆಯಲ್ಲೇ ಇರಿ ಹೊರಗೆ ಬರಬೇಡಿ ಎಂದು ಹೇಳಿ ರಾತ್ರಿ ಅಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ. ನಂತರ ಇಂದು ಬೆಳಗ್ಗೆ ಮತ್ತೊಮ್ಮೆ ಮಹಿಳೆ ಮನೆಗೆ ತೆರಳಿದ ಅಧಿಕಾರಿಗಳು ಅಂತಿಮವಾಗಿ ಮಹಿಳೆಯ ಮನವೊಲಿಸಿ ಆಕೆಯನ್ನು ತಮ್ಮೊಂದಿಗೆ ಆಸ್ಪತ್ರೆಗೆ ಕರೆ ತಂದಿದ್ದಾರೆ.

  • ಕೊರೊನಾಗೆ ಹೆದರಿ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿನಿ, ಅಧಿಕಾರಿಗಳಿಂದ ಮನವೊಲಿಕೆ- ಸುರೇಶ್ ಕುಮಾರ್ ಮೆಚ್ಚುಗೆ

    ಕೊರೊನಾಗೆ ಹೆದರಿ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿನಿ, ಅಧಿಕಾರಿಗಳಿಂದ ಮನವೊಲಿಕೆ- ಸುರೇಶ್ ಕುಮಾರ್ ಮೆಚ್ಚುಗೆ

    ಧಾರವಾಡ: ಕೊರೊನಾಗೆ ಹೆದರಿ ಪರೀಕ್ಷೆಗೆ ಹಾಜರಾಗದೆ ಮನೆಯಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕರು ಹಾಗೂ ಅಧಿಕಾರಿಗಳು ಮನವೊಲಿಸಿ, ಪರೀಕ್ಷೆ ಬರೆಸಿದ್ದಾರೆ.

    ಧಾರವಾಡದ ಅಳ್ನಾವರ ತಾಲೂಕಿನ ವಿದ್ಯಾರ್ಥಿನಿ ನಿರೀಕ್ಷಾ(ಹೆಸರು ಬದಲಿಸಲಾಗಿದೆ) ಕೊರೊನಾ ಭಯದಿಂದ ದ್ವಿತೀಯ ಭಾಷೆ ಪರೀಕ್ಷೆಗೆ ಗೈರಾಗಿದ್ದಳು. ಪಾಲಕರು ಸಹ ಏನೂ ಮಾತನಾಡಿರಲಿಲ್ಲ. ಆದರೆ ಪರೀಕ್ಷೆಗೆ ಗೈರಾಗಿದ್ದನ್ನು ಗಮನಿಸಿದ ಶಿಕ್ಷಕರು ಹಾಗೂ ಅಧಿಕಾರಿಗಳು, ಇಂದು ಬಾಲಕಿ ಮನೆಗೆ ತೆರಳಿ ವಿದ್ಯಾರ್ಥಿನಿ ಹಾಗೂ ಪೋಷಕರನ್ನು ಮನವೊಲಿಸಿದ್ದಾರೆ. ಅಧಿಕಾರಿಗಳ ಮನವೊಲಿಕೆ ಬಳಿಕ ಅಳ್ನಾವರದ ಕಸ್ತೂರಬಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿ ಇಂದು ಗಣಿತ ಪರೀಕ್ಷೆ ಬರೆದಿದ್ದಾಳೆ.

    ಮೊದಲ ದಿನ ನಿರೀಕ್ಷಾ ಪರೀಕ್ಷೆಗೆ ಗೈರಾಗಿದ್ದನ್ನು ಮನಗಂಡ ಅಧಿಕಾರಿಗಳು, ಇಂದು ಖುದ್ದು ಅವರ ಮನೆಗೆ ತೆರಳಿ ಪೋಷಕರು ಹಾಗೂ ನಿರೀಕ್ಷಾ ಮನವೊಲಿಸಿದ್ದಾರೆ. ಹೀಗಾಗಿ ಇಂದು ಗಣಿತ ಪರೀಕ್ಷೆ ಬರೆದಿದ್ದಾರೆ. ಶಿಕ್ಷಕರು ಮತ್ತು ಅಧಿಕಾರಿಗಳ ಈ ಕಾರ್ಯಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಹೆಚ್‍ಐವಿ ಇತ್ತು, ಈಗ ಕೊರೊನಾ ಬಂತು – ಧಾರವಾಡದಲ್ಲಿ ಸೋಂಕಿಗೆ 4ನೇ ಬಲಿ

    ಹೆಚ್‍ಐವಿ ಇತ್ತು, ಈಗ ಕೊರೊನಾ ಬಂತು – ಧಾರವಾಡದಲ್ಲಿ ಸೋಂಕಿಗೆ 4ನೇ ಬಲಿ

    ಹುಬ್ಬಳ್ಳಿ: ಎಚ್‍ಐವಿ ಸೋಂಕು ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹೆಚ್‍ಐವಿ ಹಾಗೂ ಇತರ ಅನಾರೋಗ್ಯ ಲಕ್ಷಣಗಳಿಂದ ಬಳಲುತ್ತಿದ್ದ 42 ವರ್ಷದ ಪುರುಷ ಜೂನ್ 24ರ ರಾತ್ರಿ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.  ಕೆಮ್ಮು, ಆಹಾರ ನುಂಗಲು ತೊಂದರೆ, ನಿಶ್ಯಕ್ತಿ ಮತ್ತಿತರ ಲಕ್ಷಣಗಳಿಂದ ಬಳಲುತ್ತಿದ್ದ ಇವರು ರೋಗಿ ಸಂಖ್ಯೆ 6839 ಜೊತೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಜೂನ್ 21ರಂದು ಕೋವಿಡ್ ದೃಢಪಟ್ಟಿತ್ತು.

    ಶ್ವಾಸಕೋಶದ ಸಮಸ್ಯೆ ಮೊದಲಾದ ಕಾರಣಗಳಿಂದ ಸೋಂಕಿತ ಜೂನ್ 24ರಂದು ರಾತ್ರಿ 11.15ಕ್ಕೆ ಕೊನೆಯುಸಿರೆಳೆದ್ದಿದ್ದರು. ಆದರೆ ಇಂದು ಈ ಸಾವನ್ನು ಜಿಲ್ಲಾಡಳಿತ ಅಧಿಕೃತವಾಗಿ ಘೋಷಣೆ ಮಾಡಿದೆ.

    ಮೃತ ವ್ಯಕ್ತಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿಯಲ್ಲಿ ಇಂದು ಜರುಗಿದೆ.

  • ಸಂಬಳ ಆಗಿಲ್ಲವೆಂದು ಕಂಡವರ ಹೊಟ್ಟೆಗೆ ಕನ್ನ- ಫಲಾನುಭವಿಗಳ ಬಳಿ ಅಧಿಕಾರಿಗಳು ಕೀಳ್ತಾರೆ ಹಣ

    ಸಂಬಳ ಆಗಿಲ್ಲವೆಂದು ಕಂಡವರ ಹೊಟ್ಟೆಗೆ ಕನ್ನ- ಫಲಾನುಭವಿಗಳ ಬಳಿ ಅಧಿಕಾರಿಗಳು ಕೀಳ್ತಾರೆ ಹಣ

    ತುಮಕೂರು: ಕೊರೊನಾ ಅದೆಷ್ಟು ಜನರ ಉದ್ಯೋಗ ಕಿತ್ತುಕೊಂಡಿದೆ. ಆದರೆ ಕೆಲ ಅಧಿಕಾರಿಗಳು ಮಾತ್ರ ಕೊರೊನಾವನ್ನೇ ಅಸ್ತ್ರ ಮಾಡಿಕೊಂಡು ದುಡ್ಡು ಮಾಡ್ತಿದ್ದಾರೆ. ಲಾಕ್‍ಡೌನ್‍ನಿಂದಾಗಿ ಸ್ಯಾಲರಿ ಆಗಿಲ್ಲ ಅಂತ ಫಲಾನುಭವಿಗಳ ಬಳಿ ಅಧಿಕಾರಿಗಳು ವಸೂಲಿಗೆ ಇಳಿದಿದ್ದಾರೆ.

    ಹೌದು. ಕೊರಟಗೆರೆ ತಾಲೂಕಿನ ಶಿವಪುರದ ನಿವಾಸಿ ರಮೇಶ್, ಸ್ವಯಂ ಉದ್ಯೋಗಕ್ಕಾಗಿ 1 ಲಕ್ಷ ರೂ. ಮಂಜೂರಾತಿಗೆ ಅರ್ಜಿ ಹಾಕಿದ್ದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅರ್ಜಿ ಪುರಸ್ಕೃತಗೊಂಡಿತ್ತು. ಆದರೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಅಂತಾರಲ್ಲ ಅದೇ ರೀತಿ ಚೆಕ್ ಪಾಸ್ ಆಗಲು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಿಬ್ಬಂದಿ 10 ಸಾವಿರ ರೂ ಲಂಚ ಕೇಳಿದ್ದಾರೆ. ಕೇಸ್ ವರ್ಕರ್‍ಗಳಾದ ವೆಂಕಟೇಶ್ ಹಾಗೂ ಸೋಮಶೇಖರ್ ಅಧಿಕಾರಿಗಳ ಹೆಸರು ಹೇಳಿ ಡೀಲ್ ಕುದುರಿಸಿದ್ದಾರೆ.

    ಫಲಾನುಭವಿ: ದುಡ್ಡು ಏನೋ ಕೊಡೋಣ ಕನ್ಫರ್ಮ್ ಆಗಿ ಕೆಲಸ ಆಗುತ್ತೆ ಅಲ್ವಾ..?
    ಸಿಬ್ಬಂದಿ ವೆಂಕಟೇಶ್: ಆಗತ್ತೆ ಪಕ್ಕಾ ಆಗತ್ತೆ.. ಶೇ.100 ಇವತ್ತು ಆದರೆ ನಾಳೆ ಸಾಹೇಬ್ರ ಸಹಿ ಹಾಕಿಸಿ ಒಂದೆರಡು ದಿನದಲ್ಲಿ ಆಗತ್ತೆ. ಮ್ಯಾನೇಜರ್ ಅಕೌಂಟಿಂದ. ಫಲಾನುಭವಿ ಅಕೌಂಟಿಗೆ ಟ್ರಾನ್ಸಪರ್ ಆಗುತ್ತೆ. ಇವರು ಕನ್ಫರ್ಮ್ ಆಗಿ ನಾಳೆ ಸಹಿ ಹಾಕಿದರೆ ಸೋಮವಾರ ಅಷ್ಟೊತ್ತಿಗೆ ಇವರಿಗೆ ದುಡ್ಡು ಬರತ್ತೆ.
    ಫಲಾನುಭವಿ: ಎಷ್ಟು ಕೊಡಬೇಕು..?
    ಸಿಬ್ಬಂದಿ ವೆಂಕಟೇಶ್: ಅದೆಷ್ಟು ಮಾತಾಡಿದಾರೊ ಗೊತ್ತಿಲ್ಲ. ಆಗಲೇ ಫಿಕ್ಸ್ ಮಾಡಿದ್ದಾರೆ.

    ಫಲಾನುಭವಿ: ನಾವೆನೋ ಬೇರೆ ಕೆಲಸಕ್ಕೆ ಬಂದಿದ್ವಿ. ಈ ಯಪ್ಪಾ ಅರ್ಜೆಂಟ್ ಮಾಡ್ದ. ಬೆಳಗ್ಗೆ ಕೊಟ್ಟು ಕಳಿಸ್ತಿನಿ. ನೀವು ಆದರೆ ನೋಡಿ ಒಂದ್ ಎರಡು ಸಾವಿರ ಉಳಿಸಿ.
    ಸಿಬ್ಬಂದಿ ಸೋಮಶೇಖರ: ಅಣ್ಣಾ ದೇವರಾಣೆ. ನಮಗೂ ಕೊರೋನಾದಿಂದ 3-4 ತಿಂಗಳಿಂದ ಸ್ಯಾಲರಿ ಆಗಿಲ್ಲ. ಇನ್ನೇನ್ ಅಂದರೆ ಅದರಲ್ಲಿ ನನ್ನದೇನು ಪಾತ್ರ ಇಲ್ಲ.
    ಹೀಗೆ ಸಂಬಳ ಆಗಿಲ್ಲ ಅಂತ ಹಣ ವಸೂಲಿ ಕೆಲಸಕ್ಕೆ ಇಳಿದಿದ್ದಾರೆ. ಇದೆಷ್ಟು ಸರಿ ಅಂತ ಫಲನಾಭವಿ ರಮೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಅಲೆಮಾರಿ ಜನಾಂಗದ ಸ್ವಯಂ ಉದ್ಯೋಗಕ್ಕಾಗಿ ಸುಮಾರು 53 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೂ ಕೂಡ ತಲಾ 10 ಸಾವಿರ ಫಿಕ್ಸ್ ಮಾಡಿದ್ದೀವಿ ಎಂದು ಲಂಚಬಾಕ ನೌಕರರು ಆಫ್ ದಿ ರೆಕಾರ್ಡ್‍ನಲ್ಲಿ ಹೇಳುತ್ತಾರೆ. ಲಾಕ್‍ಡೌನ್‍ನಿಂದಾಗಿ ಜನರಿಗೆ ಕೆಲಸ ಇಲ್ಲದೇ ಕೈಯಲ್ಲಿ ಕಾಸಿಲ್ಲ. ಈ ನಡುವೆ ಸರ್ಕಾರಿ ನೌಕರರು ಕೊರೊನಾ ನೆಪ ಹೇಳಿ ಬಡ ಜನರ ರಕ್ತ ಹೀರುತ್ತಿರುವುದು ನಿಜಕ್ಕೂ ನಾಚಿಕೆಯ ಸಂಗತಿ.

  • ಡಿಸಿ ಕಚೇರಿಯಲ್ಲಿ ಅನಂತ್‍ಕುಮಾರ್ ಹೆಗ್ಡೆ ಧರಣಿ- ಅಧಿಕಾರಿಗಳು ಕಕ್ಕಾಬಿಕ್ಕಿ!

    ಡಿಸಿ ಕಚೇರಿಯಲ್ಲಿ ಅನಂತ್‍ಕುಮಾರ್ ಹೆಗ್ಡೆ ಧರಣಿ- ಅಧಿಕಾರಿಗಳು ಕಕ್ಕಾಬಿಕ್ಕಿ!

    – ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಸಂಸದರ ಖಡಕ್ ವಾರ್ನಿಂಗ್
    – ರಾತ್ರಿ 9 ಬಳಿಕ ಬಿಡುಗಡೆಯಾದ ಅಧಿಕಾರಿಗಳು

    ಕಾರವಾರ: ಕೆಲಸ ಆಗುವವರೆಗೂ ಧರಣಿ ಕೂರುತ್ತೇನೆ. ಇಂದು ಎಲ್ಲಿಗೂ ಹೋಗೊಲ್ಲ ಎಂದು ಸಂಸದ ಅನಂತ್‍ಕುಮಾರ್ ಹೆಗ್ಡೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ಕುಳಿತ ಪ್ರಸಂಗ ಇಂದು ನಡೆದಿದೆ. ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಸಂಸದರು ಕಚೇರಿಯಿಂದ ಹೊರ ನಡೆದು ಮಂಗಳವಾರದವರೆಗೆ ಅಧಿಕಾರಿಗಳಿಗೆ ಸಮಯ ನೀಡಿದ್ದಾರೆ.

    ಹೌದು. ಈ ಕೋಪಕ್ಕೆ ಕಾರಣವೂ ಇದೆ. ಗುರುವಾರ ಕಾರವಾರದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಂಸದರು ಮಧ್ಯಾಹ್ನದ ವೇಳೆ ಜಿಲ್ಲೆಯಲ್ಲಿನ 231 ಗ್ರಾಮ ಪಂಚಾಯ್ತಿಗಳಿಗೆ ಉಚಿತ ಬಿಎಸ್‍ಎನ್‍ಎಲ್ ವೈಫೈ ನೀಡಿರುವ ಕುರಿತು ಮಾಹಿತಿ ಪಡೆದರು. ಈ ವೇಳೆ ಜಿಲ್ಲೆಯಲ್ಲಿ ಎಲ್ಲಾ ಗ್ರಾಮಪಂಚಾಯ್ತಿಗಳಿಗೂ ವೈಪೈ ನೀಡಲಾಗಿದ್ದು, ಕಾರ್ಯನಿರ್ವಹಿಸುತ್ತಿದೆ ಎಂದು ಬಿಎಸ್‍ಎನ್‍ಎಲ್‍ನ ಜಿಎಂ ಆರ್.ವಿ.ಜನ್ನು ದಾಖಲೆಗಳನ್ನು ನೀಡಿದರು. ಆದರೆ ಜಿಲ್ಲೆಯಲ್ಲಿ ಉಚಿತ ವೈಫೈ ನೀಡಿರುವ ಪೈಕಿ ಕೇವಲ 148 ಗ್ರಾಮ ಪಂಚಾಯ್ತಿಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ 62 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

    ಇದಲ್ಲದೇ ಈ ಹಿಂದೆ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯದ ಕಾರ್ಯಕ್ರಮದಲ್ಲಿ ಬಿಎಸ್‍ಎನ್‍ಎಲ್‍ನ ನೆಟ್‍ವರ್ಕ್ ಸಮಸ್ಯೆ ಸರಿಪಡಿಸುವಂತೆ ಜನರು ಕೇಳಿಕೊಂಡಿದ್ದರು. ಹೀಗಾಗಿ ಈ ಕುರಿತು ಸಹ ಪಬ್ಲಿಕ್ ಟಿವಿ ಸಂಸದರಿಗೆ ಮಾಹಿತಿ ನೀಡಿತ್ತು. ಬಿಎಸ್‍ಎನ್‍ಎಲ್‍ನ ಸುಳ್ಳುಮಾಹಿತಿ ಬಗ್ಗೆ ಬೆಳಕು ಚಲ್ಲಿತ್ತು. ಜಿಲ್ಲೆಯಲ್ಲಿ ಗ್ರಾಮಪಂಚಾಯ್ತಿಗಳಿಗಲ್ಲದೇ ಹಲವು ಮೊಬೈಲ್ ಟವರ್ ಸಿದ್ಧವಾಗಿದ್ದರೂ ಯಾವುದೂ ಕೂಡ ಕಾರ್ಯನಿರ್ವಹಿಸದಿದ್ದರೂ ಬಿಎಸ್‍ಎನ್‍ಎಲ್ ಅಧಿಕಾರಿಗಳು ಎಲ್ಲವೂ ಸುಸ್ಥಿತಿಯಲ್ಲಿದೆ ಎಂದು ಸುಳ್ಳುದಾಖಲೆ ತೋರಿಸಿತ್ತು. ಹೀಗಾಗಿ ಈ ವಿಷಯ ಕುರಿತು ಗರಂ ಆದ ಸಂಸದ ಅನಂತ್‍ಕುಮಾರ್ ಹೆಗ್ಡೆ ಸಂಜೆ ಆರು ಘಂಟೆಗೆ ಮುಗಿಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದೇ ಎಲ್ಲಾ ಸರಿಯಾಗಬೇಕು ಎಂದು ಪಟ್ಟು ಹಿಡಿದರು.

    ಅಷ್ಟಕ್ಕೇ ಸುಮ್ಮನಾಗದ ಸಂಸದರು ಇಂದೇ ಸರಿಯಾಗಬೇಕು ಅಲ್ಲಿವರೆಗೂ ಕಚೇರಿ ಬಿಟ್ಟು ನಾನೂ ತೆರಳುವುದಿಲ್ಲ ನೀವೂ ತೆರಳುವಂತಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲೇ ಕುಳಿತರು. ಇದರಿಂದಾಗಿ ಬಿಎಸ್‍ಎನ್‍ಎಲ್ ಅಧಿಕಾರಿಗಳು ಕಕ್ಕಾ ಬಿಕ್ಕಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲೇ ಲಾಕ್ ಆಗಿದ್ದರು.

    ಈ ಮಧ್ಯೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಸದರು, “ಒಂದು ವರ್ಷಗಳಿಂದ ಬಿಎಸ್‍ಎನ್‍ಎಲ್, ಜಿಎಸ್‍ಎನ್‍ಎಲ್, ಸಿಎಸ್‍ಎ ತಮ್ಮ ಆಂತರಿಕ ಜಗಳದಿಂದ ಗ್ರಾಮ ಪಂಚಾಯ್ತಿಗಳಿಗೆ ವೈಫೈ ನೀಡದೆ ಇಡೀ ಗ್ರಾಮ ಪಂಚಾಯ್ತಿ ಕಾರ್ಯ, ಚಟುವಟಿಕೆ ನಿಂತುಹೋಗುವಂತಾಗಿದೆ. ಇಂದೇ ಎಲ್ಲಾ ಸಮಸ್ಯೆ ಬಗೆಹರಿಯಬೇಕು ಅಲ್ಲಿಯವರೆಗೂ ಕಚೇರಿ ಬಿಟ್ಟು ತೆರಳುವುದಿಲ್ಲ ಇಲ್ಲಿಯೇ ಧರಣಿ ಕೂರುತ್ತೇನೆ, ಅಧಿಕಾರಿಗಳನ್ನು ಸಹ ಬಿಡುವುದಿಲ್ಲ ಎಂದರು.

    ಅಧಿಕಾರಿಗಳು ಸಹ ಸಂಸದರ ಈ ದಿಢೀರ್ ನಿರ್ಧಾರದಿಂದ ತಲೆಕೆಡಿಸಿಕೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದರನ್ನು ಓಲೈಸುವ ಕೆಲಸ ಮಾಡಿದರು. ಬಳಿಕ ಸುಮಾರು ರಾತ್ರಿ 9 ಗಂಟೆ ಸುಮಾರಿಗೆ ಸಂಸದರು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರ ಬಂದರು.

  • ಎತ್ತಿನಹೊಳೆ ಯೋಜನೆ, ಬಾಕಿ ಪರಿಹಾರವನ್ನು ಶೀಘ್ರ ವಿತರಿಸಿ: ಗೋಪಾಲಯ್ಯ

    ಎತ್ತಿನಹೊಳೆ ಯೋಜನೆ, ಬಾಕಿ ಪರಿಹಾರವನ್ನು ಶೀಘ್ರ ವಿತರಿಸಿ: ಗೋಪಾಲಯ್ಯ

    ಹಾಸನ: ಆಹಾರ, ನಾಗರೀಕ ಸರಬರಾಜು ಮಾತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಇಂದು ಎತ್ತಿನ ಹೊಳೆ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಇದೊಂದು ಬಯಲು ಸೀಮೆಗೆ ನೀರು ಪೂರೈಸುವ ಮಹತ್ವದ ಯೋಜನೆ ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆ ಉದ್ದೇಶಕ್ಕೆ ಸ್ವಾದೀನ ಪಡಿಸಿಕೊಂಡ ಜಮೀನಿಗೆ ಬಾಕಿ ಇರುವ ಪರಿಹಾರವನ್ನು ಸಹ ಶೀಘ್ರವಾಗಿ ವಿತರಿಸಿ ಎಂದು ಸಚಿವರು ತಿಳಿಸಿದರು.

    ಜಿಲ್ಲಾಧಿಕಾರಿ ಅರ್.ಗಿರೀಶ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಉಪ ವಿಭಾಗಾಧಿಕಾರಿ ಗಿರಿಶ್ ನಂದನ್, ಎತ್ತಿನ ಹೊಳೆ ಯೋಜನೆ ಕಾರ್ಯಪಾಲಕ ಅಭಿಯಂತರರಾದ ಜಯಣ್ಣ, ತಹಶೀಲ್ದಾರ್ ಮಂಜುನಾಥ್, ಮಾಜಿ ಶಾಸಕರಾದ ಹೆಚ್.ಎಂ ವಿಶ್ವನಾಥ್ ಮತ್ತಿತರರು ಹಾಜರಿದ್ದರು.

  • ನಮಗೆ ಇಂಗ್ಲಿಷ್ ಬರಲ್ಲ, ನೀವೇ ಅಧಿಕಾರಿಗಳಿಗೆ ಕ್ಲಾಸ್ ತಗೋಳಿ- ಸಚಿವ ಸುಧಾಕರ್ ಗೆ ಪರಿಷತ್ ಸದಸ್ಯ ಮನವಿ

    ನಮಗೆ ಇಂಗ್ಲಿಷ್ ಬರಲ್ಲ, ನೀವೇ ಅಧಿಕಾರಿಗಳಿಗೆ ಕ್ಲಾಸ್ ತಗೋಳಿ- ಸಚಿವ ಸುಧಾಕರ್ ಗೆ ಪರಿಷತ್ ಸದಸ್ಯ ಮನವಿ

    ಕಲಬುರಗಿ: ಸರ್ ನಮಗೆ ಇಂಗ್ಲೀಷ್ ಬರಲ್ಲ ಈ ಅಧಿಕಾರಿಗಳಿಗೇ ನೀವೆ ಸ್ಚಲ್ಪ ಕ್ಲಾಸ್ ತೆಗೆದುಕೊಳ್ಳಿ ಎಂದು ಕಲಬುರಗಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ವೈದ್ಯಕೀಯ ಸಚಿವ ಡಾ.ಸುಧಾಕರಗೆ ವಿಧಾನ ಪರಿಷತ್ ಸದಸ್ಯ ತಿಪಣಪ್ಪ ಕಮಕನೂರ ನಗೆ ಚಟಾಕಿ ಹಾರಿಸಿದ್ದಾರೆ.

    ಕೊರೊನಾ ಬಗ್ಗೆ ಜಿಲ್ಲೆಯ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ, ಬರೀ ಇಂಗ್ಲಿಷ್‍ನಲ್ಲಿ ಏನೆನೋ ಹೇಳಿ ಬಿಡ್ತಾರೆ, ಒಂದೆಡೆ ಈ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ, ಕೆಲಸ ಮಾಡಿ ಎಂದು ಸೂಚಿಸಿದರೆ ಬರೀ ಇಂಗ್ಲಿಷ್ ನಲ್ಲಿ ಮಾತನಾಡಿ ನಮ್ಮ ಬಾಯಿ ಮುಚ್ಚಿಸುತ್ತಾರೆ. ಹೀಗಾಗಿ ನಮಗೆ ಏನೂ ತಿಳಿಯುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಚಿವರ ಬಳಿ ಅಳಲು ತೋಡಿಕೊಂಡಿದ್ದಾರೆ.

    ಸದ್ಯ ಇದೀಗ ನೀವು ಸಭೆ ಕರೆಯುತ್ತಿರುವುದರಿಂದ ಈಗಷ್ಟೇ ನಮ್ಮ ಜಿಲ್ಲೆಯ ಕೊರೊನಾ ಬಗ್ಗೆ ಮಾಹಿತಿ ಸಿಗುತ್ತಿದೆ. ಸದ್ಯ ನೀವು ವೈದ್ಯಕೀಯ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದು, ಅಧಿಕಾರಿಗಳಿಗೆ ಸ್ವಲ್ಪ ಬಿಸಿ ಮುಟ್ಟಿಸಿ ಎಂದು ಹೇಳಿದ್ದಾರೆ. ಇನ್ನು ತಿಪ್ಪಣಪ್ಪ ಅವರ ಮಾತು ಕೇಳುತ್ತಿದ್ದಂತೆ ಅಲ್ಲಿನ ಶಾಸಕರು ಹಾಗೂ ಅಧಿಕಾರಿಗಳು ನಕ್ಕಿದ್ದಾರೆ. ಹೀಗೆ ವಿಧಾನ ಪರಿಷತ್ ಸದಸ್ಯರು ತಮ್ಮ ಜಿಲ್ಲೆಯ ಅಧಿಕಾರಿಗಳ ಬಗ್ಗೆ ಹಾಸ್ಯವಾಗಿಯೇ ಸಚಿವರ ಬಳಿ ಹೇಳಿಕೊಂಡಿದ್ದಾರೆ.

  • ಬೆಂಗ್ಳೂರಿನಲ್ಲಿ ಭಿಕ್ಷುಕನಿಗೆ ಕೊರೊನಾ- ಶವ ಪರೀಕ್ಷೆಯಲ್ಲಿ ಸೋಂಕು ಪತ್ತೆ

    ಬೆಂಗ್ಳೂರಿನಲ್ಲಿ ಭಿಕ್ಷುಕನಿಗೆ ಕೊರೊನಾ- ಶವ ಪರೀಕ್ಷೆಯಲ್ಲಿ ಸೋಂಕು ಪತ್ತೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಮಾರಿ ತಾಂಡವಾಡುತ್ತಿದೆ. ಅಂತೆಯೇ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೂ ಕೊರೊನಾ ಸೋಂಕು ಹರಡಿದೆ.

    ಇಂದು ಬೆಂಗಳೂರಿನಲ್ಲಿ ಕೊರೊನಾಗೆ ನಾಲ್ವರು ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಮಂದಿ ಇಂದು ಮೃತಪಟ್ಟಿದ್ದಾರೆ. ಆದರೆ ಸೋಮವಾರ ಮೃತಪಟ್ಟಿದ್ದ ಅಪರಿಚಿತ ವ್ಯಕ್ತಿಯ ಕೋವಿಡ್ ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಆಂತಕಕ್ಕೆ ಎಡೆಮಾಡಿಕೊಟ್ಟಿದೆ.

    ಸೋಮವಾರ ನಾಗರಬಾವಿ ಬ್ರಿಡ್ಜ್ ನಿಂದ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವನ್ನಪ್ಪಿದ ವ್ಯಕ್ತಿಯನ್ನು ಬೀದಿ ಬದಿಯ ಭಿಕ್ಷುಕ ಎಂದು ಗುರುತಿಸಲಾಗಿತ್ತು. ಆದರೆ ಆತನ ಹೆಸರು ಮನೆ ವಿಳಾಸ ಹಿನ್ನೆಲೆ ಯಾವುದೂ ಪತ್ತೆಯಾಗಿರಲಿಲ್ಲ. ಆದ್ದರಿಂದ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಸೇರಿ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದರು. ಈಗ ಮೃತ ಭಿಕ್ಷುಕನ ಮರಣ ನಂತರ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಹೆಣ ಸಾಗಿಸಿದ ಅಧಿಕಾರಿಗಳಿಗೆ ಟೆನ್ಷನ್ ಶುರುವಾಗಿದೆ.