Tag: officer

  • ಕಲಾವಿದನಿಗೆ ಅಧಿಕಾರಿಗಳಿಂದ ಕಿರುಕುಳ- ಮನನೊಂದು ಮಗಳು ಆತ್ಮಹತ್ಯೆಗೆ ಶರಣು

    ಕಲಾವಿದನಿಗೆ ಅಧಿಕಾರಿಗಳಿಂದ ಕಿರುಕುಳ- ಮನನೊಂದು ಮಗಳು ಆತ್ಮಹತ್ಯೆಗೆ ಶರಣು

    ಯಾದಗಿರಿ: ತಂದೆಗೆ ಬಂದ ಜೀವ ಬೆದರಿಕೆ ಹಿನ್ನೆಲೆ ಮನನೊಂದು ಮಗಳು ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ನಗರದ ಸಮೀಪದಲ್ಲಿ ನಡೆದಿದೆ.

    ನಗರದ ಹಗಲು ವೇಷ ಕಲಾವಿದ ಶಂಕರಶಾಸ್ತ್ರಿ ಮಗಳು ಭವಾನಿ (20) ಆತ್ಮಹತ್ಯೆಗೆ ಶರಣಾದ ಯುವತಿ. ಇತ್ತೀಚೆಗೆ ಕಲಾವಿದ ಶಂಕರ ಶಾಸ್ತ್ರಿಗೆ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ದತ್ತಪ್ಪ ಸಾಗನೂರ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಸಹ ಪ್ರಸಾರವಾಗಿತ್ತು.

    ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಸಿಟಿ ರವಿ ಅವರು ಅಲ್ಲದೆ ಕಳೆದ ವಾರವಷ್ಟೇ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಶಂಕರ ಶಾಸ್ತ್ರಿ ಮತ್ತು ಭವಾನಿ ಕುಟುಂಬ ಸಮೇತ ಹಗಲು ವೇಶ ತೊಟ್ಟು ಸಚಿವರನ್ನು ಭೇಟಿಯಾಗಿ, ದತ್ತಪ್ಪ ಸಾಗನೂರ ಅವರು ಅವಾಚ್ಯ ಪದಗಳಿಂದ ಬೈಯುತ್ತಾರೆ. ಕಾಲು ಕಡಿಯುತ್ತೇನೆ, ನಿನ್ನ ಕೊಲೆ ಮಾಡಿಸುತ್ತೇನೆ ಅಂತ ಜೀವ ಬೆದರಿಕೆ ಹಾಕಿದ್ದಾರೆ. ಅಂತಹ ಅಧಿಕಾರಿಗಳು ನಮಗೆ ಬೇಕಾಗಿಲ್ಲ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶಂಕರಶಾಸ್ತ್ರಿ ದೂರು ನೀಡಿದ್ದರು.

    ಸಚಿವ ಸಿ.ಟಿ.ರವಿ ಅವರು ತಮ್ಮ ಇಲಾಖೆಯ ಅಧಿಕಾರಿ ದತ್ತಪ್ಪ ಸಾಗನೂರ ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಸಚಿವರು ಅಧಿಕಾರಿ ಮೇಲೆ ಯಾವುದೇ ಕ್ರಮ ಜರುಗಿಸಿದ ಹಿನ್ನೆಲೆ ಮತ್ತು ವೈವಾಹಿಕ ಜೀವನದಲ್ಲಿ ಸಹ ಕೆಲ ಸಮಸ್ಯೆಗಳಿಂದ ಭವಾನಿ ಕಳೆದ ಒಂದು ತಿಂಗಳಿಂದ ಮಾನಸಿಕವಾಗಿ ಖಿನ್ನರಾಗಿದ್ದರು ಎನ್ನಲಾಗಿದೆ.

    ಪೋಷಕರು, ಕುಟುಂಬಸ್ಥರು ಭವಾನಿಗೆ ಧೈರ್ಯ ಹೇಳುತ್ತಲ್ಲೇ ಬಂದಿದ್ದರು. ಇಂದು ಕೂಡ ಧೈರ್ಯ ಕಳೆದುಕೊಳ್ಳಂತೆ ತಿಳಿಸಿದ್ದರು. ಆದರೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ನಗರದಿಂದ ದೂರವಿರುವ ಭೀಮಾನದಿಗೆ ಬಂದು, ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಗಳ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಭವಾನಿ ತಾಯಿ ಸಹ ತೀವ್ರ ಅಸ್ವವ್ಯಸ್ತವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭವಾನಿ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮೃತ ದೇಹ ಪತ್ತೆಗೆ ತಾಂತ್ರಿಕ ತೊಡಕು ಉಂಟಾಗಿದೆ. ಹೀಗಾಗಿ ಭವಾನಿ ಮೃತದೇಹ ಪತ್ತೆಗಾಗಿ ಅಗ್ನಿಶಾಮಕ ದಳವು ಗುರುವಾರ ಬೆಳಗ್ಗೆಯಿಂದ ಕಾರ್ಯಚರಣೆ ಆರಂಭಿಸಲಿದೆ.

  • ಮಹಿಳಾ ಅಧಿಕಾರಿ ಮೇಲೆ ಕುರ್ಚಿಯಿಂದ ಹಲ್ಲೆಗೈದ ವಿದ್ಯಾರ್ಥಿಗಳು- ವಿಡಿಯೋ

    ಮಹಿಳಾ ಅಧಿಕಾರಿ ಮೇಲೆ ಕುರ್ಚಿಯಿಂದ ಹಲ್ಲೆಗೈದ ವಿದ್ಯಾರ್ಥಿಗಳು- ವಿಡಿಯೋ

    ಲಕ್ನೋ: ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡಿರುತ್ತೇವೆ. ಆದರೆ ವಿದ್ಯಾರ್ಥಿಗಳೇ ಅಧಿಕಾರಿಯ ಮೇಲೆ ಕುರ್ಚಿಯಿಂದ ಹಲ್ಲೆ ಮಾಡಿದ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿ ಜಿಲ್ಲೆಯ ಚಕ್ ಧೌರಹ್ರಾದ ಗಾಂಧಿ ಸೇವಾ ನಿಕೇತನ್ ಆಶ್ರಮದಲ್ಲಿ ನಡೆದಿದೆ.

    ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಯ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಆಶ್ರಮದ ಆಡಳಿತ ಮಂಡಳಿ ಆದೇಶದ ಮೇರೆಗೆ ವಿದ್ಯಾರ್ಥಿಗಳ ಗುಂಪೊಂದು ಅವರನ್ನು ನಿಂದಿಸಿ, ಥಳಿಸಿದೆ ಎಂದು ಆರೋಪಿಸಲಾಗಿದೆ.

    ನಾನು ಗಾಂಧಿ ಸೇವಾ ನಿಕೇತನ್ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಸ್ಥೆಯ ವ್ಯವಸ್ಥಾಪಕರು ನನಗೆ ಹೊಡೆಯುವಂತೆ ಹಾಗೂ ನಿಂದಿಸುವಂತೆ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ. ಮಕ್ಕಳು ನನಗೆ ಕುರ್ಚಿಗಳಿಂದ ಹೊಡೆದು, ಕಪಾಳಮೋಕ್ಷ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ದೂರು ನೀಡುತ್ತಿದ್ದೇನೆ ಎಂದು ಮಹಿಳಾ ಅಧಿಕಾರಿ ಮಮತಾ ದುಬೆ ಆರೋಪಿಸಿದ್ದಾರೆ.

    ಈ ಘಟನೆ ಆಶ್ರಮದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಶ್ರಮದ ಸಿಬ್ಬಂದಿ ಯಾಕೆ ಹೊಡೆಸುವ ಉದ್ದೇಶ ಹೊಂದಿದ್ದರು. ಆಶ್ರಮದ ವ್ಯವಸ್ಥಾಪಕರು ವಿದ್ಯಾರ್ಥಿಗಳನ್ನು ಏಕೆ ಕೆರಳಿಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಆಶ್ರಮದ ಆಡಳಿತ ಮಂಡಳಿ ಯಾಕೆ ಈ ರೀತಿ ಮಾಡುತ್ತಿದೆ ಎಂಬ ಚಿಂತೆ ನನ್ನನ್ನು ಕಾಡುತ್ತಿದೆ. ಎರಡು ದಿನಗಳ ಹಿಂದೆ ವಾಶ್ ರೂಂನ ಬಾಗಿಲು ಲಾಕ್ ಆಗಿತ್ತು. ಇದನ್ನೂ ಸಹ ವಿದ್ಯಾರ್ಥಿಗಳೇ ಮಾಡಿದ್ದರು ಎಂದು ದುಬೆ ಆತಂಕ ವ್ಯಕ್ತಪಡಿಸಿದ್ದಾರೆ.

    ವಾಶ್ ರೂಂನಲ್ಲಿ ಲಾಕ್ ಮಾಡಿದ್ದರ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಮಕ್ಕಳು ಏನು ಬೇಕಾದರೂ ಮಾಡಬಹುದು ಎಂದರು. ಇದಾದ ಎರಡು ದಿನಗಳ ನಂತರ ನನ್ನನ್ನು ವಿದ್ಯಾರ್ಥಿಗಳು ಹೊಡೆದಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೂ ದೂರು ನೀಡಿದ್ದೇನೆ ಎಂದು ದುಬೆ ತಿಳಿಸಿದರು.

    ಈ ಹಿಂದೆ ಅನೇಕ ಬಾರಿ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ದುಬೆ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಯಾವುದೇ ಹೇಳಿಕೆ ನೀಡಿಲ್ಲ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಸಿದ್ದರಾಮಯ್ಯ ಮಾತು ಕೇಳಿದ್ರೆ ಮನೆಗೆ ಕಳಿಸ್ಬೇಕಾಗುತ್ತೆ – ಅಧಿಕಾರಿಗಳಿಗೆ ಸೋಮಣ್ಣ ಸೂಚನೆ

    ಸಿದ್ದರಾಮಯ್ಯ ಮಾತು ಕೇಳಿದ್ರೆ ಮನೆಗೆ ಕಳಿಸ್ಬೇಕಾಗುತ್ತೆ – ಅಧಿಕಾರಿಗಳಿಗೆ ಸೋಮಣ್ಣ ಸೂಚನೆ

    ಬಾಗಲಕೋಟೆ: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದು ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದ್ದಾರೆ.

    ಬಾಗಲಕೋಟೆ ಪ್ರವಾಸದಲ್ಲಿ ಸಂದರ್ಭದಲ್ಲಿ ತೋಟಗಾರಿಕೆ ವಿವಿಯಲ್ಲಿ ಸಭೆಯಲ್ಲಿದ್ದಾಗ ಸಚಿವರಿಗೆ ಮೈಸೂರಿನಿಂದ ಅಧಿಕಾರಿಗಳ ಕರೆ ಬಂದಿದೆ. ಈ ವೇಳೆ ಫೋನಿನಲ್ಲೇ ಅಧಿಕಾರಿಗಳನ್ನು ಸಚಿವ ವಿ ಸೋಮಣ್ಣ ಗದರಿದ್ದಾರೆ.

    ಸರ್ಕಾರದ ಆದೇಶ ಹೇಗಿದೆಯೋ ಹಾಗೆ ಮಾಡಿ. ಮತ್ತೆ ನೀವು ಹಳೆ ಆದೇಶ ಎಂದು ಸಿದ್ದರಾಮಯ್ಯ ಮಾತು ಕೇಳಿದರೆ ಮನೆಗೆ ಹೋಗ್ತಾಯಿರಿ ರಜೆಹಾಕಿ ಹೋಗಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.

    ಸರ್ಕಾರದ ಆದೇಶ ಏನಿದೆಯೋ ಅದನ್ನು ಗಂಭೀರವಾಗಿ ಪಾಲನೆ ಮಾಡಿ. ನಾನು ಪೊಲೀಸರಿಗೆ ಈ ಬಗ್ಗೆ ಈಗಾಗಲೇ ಹೇಳಿದ್ದೇನೆ. ಇಬ್ಬರೂ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡಿ ಎಂದು ಫೋನಿನಲ್ಲಿ ಅಧಿಕಾರಿಗಳಿಗೆ ಸೋಮಣ್ಣ ಸೂಚಿಸಿದ್ದಾರೆ.

    ಇದೇ ವೇಳೆ ನೆರೆ ಪರಿಹಾರದ ಹಣವನ್ನು ದುರುಪಯೋಗ ಪಡಿಸಿಕೊಂಡ ಅಧಿಕಾರಿ ವಿರುದ್ಧ ಸಹ ಸಚಿವರು ಕೆಂಡಾಮಂಡಲರಾಗಿದ್ದಾರೆ. ಕೊಡಗು ಲೋಕೋಪಯೋಗಿ ಎಕ್ಸಿಕ್ಯುಟಿವ್ ಎಂಜಿನಿಯರ್‌ರಿಂದ ಸರ್ಕಾರಿ ಹಣ ದುರುಪಯೋಗ ವಿಚಾರಕ್ಕೆ ಶ್ರೀಕಂಠಯ್ಯ ಅನ್ನೋನು ಯಾವ ವಿಭಾಗದಲ್ಲಿದ್ದಾನೆ? ತಕ್ಷಣವೇ ಅವನಿಗೆ ಶೋಕಾಸ್ ನೋಟೀಸ್ ನೀಡಿ ಎಂದು ಆದೇಶಿಸಿದ್ದಾರೆ.

    ತಕ್ಷಣದಿಂದಲೇ ಆತನನ್ನು ರೀಲೀವ್ ಮಾಡಿ. ಅವನ ಮೇಲೆ ಕ್ರಮ ಕೈಗೊಳ್ಳಿ, ರಿಲೀವ್ ಮಾಡಿ ನನಗೆ ತಕ್ಷಣ ಅದರ ಪ್ರತಿ ಕಳುಹಿಸಿ ಎಂದು ಕೊಡಗು ಜಿಲ್ಲಾಧಿಕಾರಿಗೆ ಫೋನ್ ಮೂಲಕ ಸೂಚನೆ ನೀಡಿದ್ದಾರೆ.

    ಪ್ರಕೃತಿ ವಿಕೋಪದಡಿ ಸರ್ಕಾರದಿಂದ ನೀಡಿದ್ದ 21 ಕೋಟಿ ರೂ. ಹಣವನ್ನು ಅಧಿಕಾರಿ ಶ್ರೀಕಂಠಯ್ಯ ಖಾಸಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಖಾಸಗಿ ಬ್ಯಾಂಕ್ ನಲ್ಲಿ ದುಡ್ಡು ಜಮೆ ಮಾಡಿದ್ದು ತಪ್ಪು, ನಿಯಮಗಳನ್ನು ಮೀರಿದ್ದಾನೆ. ಹೀಗಾಗಿ ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ನಾನು ಬರುವುದಕ್ಕಿಂತ ಮೊದಲು ಆಗಿರುವ ಪ್ರಕರಣ ಇದು. ನಾನು ಬಂದು ಒಂದೂವರೆ ತಿಂಗಳಾಗಿದೆ. ಹಾಗಾಗಿ ಇದನ್ನು ತೀಕ್ಷ್ಣವಾಗಿ ತೆಗೆದುಕೊಳ್ಳುತ್ತೇವೆ. ಎಷ್ಟೇ ದೊಡ್ಡವರಾಗಲಿ, ಎಲ್ಲೂ ಈ ರೀತಿ ಆಗಬಾರದು. ಇಂತಹ ಪಾಪಿಗಳು ಇರುವುದರಿಂದಲೇ, ಪ್ರಕೃತಿ ತಾಯಿ ತೊಂದರೆ ಕೊಡುತ್ತಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಬಡ ಕಲಾವಿದರ ಪ್ರೋತ್ಸಾಹ ಧನಕ್ಕೆ ಕನ್ನ – ಹಣ ಬಿಡುಗಡೆ ಆಗಬೇಕಂದ್ರೆ ಕೊಡಬೇಕು ಲಂಚ

    ಬಡ ಕಲಾವಿದರ ಪ್ರೋತ್ಸಾಹ ಧನಕ್ಕೆ ಕನ್ನ – ಹಣ ಬಿಡುಗಡೆ ಆಗಬೇಕಂದ್ರೆ ಕೊಡಬೇಕು ಲಂಚ

    ಯಾದಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂದರೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಮೂಲಕ ಜನರಿಗೆ ನಾಗರಿಕತೆಯತ್ತ ಕೊಂಡೊಯ್ಯುವ ಇಲಾಖೆ ಎನ್ನುವ ಮಾತಿದೆ. ಆದರೆ ಯಾದಗಿರಿ ಈ ಇಲಾಖೆಯ ಮುಖ್ಯಾಧಿಕಾರಿ ನಾಗಕರಿಕತೆ ಇರಲಿ, ಕನಿಷ್ಠ ಮಾನವೀಯತೆ ಸಹ ಇಲ್ಲ.

    ದತ್ತಪ್ಪ ಸಾಗನೂರ ಯಾದಗಿರಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಾಧಿಕಾರಿ. ದತ್ತಪ್ಪಗೆ ಬಡ ಕಲಾವಿದರಂದರೆ ಕಿಂಚಿತ್ತೂ ಮರ್ಯಾದೆ ಇಲ್ಲ. ಇಲಾಖೆ ಜಿಲ್ಲೆಯ ಬಡ ಕಲಾವಿದರನ್ನು ಉತ್ತೇಜಿಸುವ ಮತ್ತು ಅವರ ಕಲೆಯನ್ನು ಗುರುತಿಸುವ ಸಲುವಾಗಿ, ಕಲಾವಿದರಿಗೆ ಅವರ ಕಲೆ ಸಂಬಂಧಿಸಿದ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಅವರಿಗೆ ಗೌರವ ಧನ ನೀಡುತ್ತದೆ.

    ಒಂದು ಕಾರ್ಯಕ್ರಮ ಕೊಟ್ಟರೆ ಒಬ್ಬ ಕಲಾವಿದನಿಗೆ 15 ಸಾವಿರ ರೂ. ಗೌರವಧನ ಸಿಗುತ್ತದೆ. ಜಿಲ್ಲೆಯ ಕಲಾವಿದರನ್ನು ಆಯ್ಕೆ ಮಾಡುವ ಜವಾಬ್ದಾರಿ ಇಲಾಖೆ ಮುಖ್ಯಾಧಿಕಾರಿ ದತ್ತಪ್ಪ ಸಾಗನೂರ ಮೇಲಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದತ್ತಪ್ಪ, ಪ್ರತಿ ಕಲಾವಿದನ ಬಳಿ 5 ಸಾವಿರ ಲಂಚ ಪಡೆಯುವುವದು ಈ ಅಧಿಕಾರಿಗೆ ಆಭ್ಯಾಸವಾಗಿದೆ. ಒಂದು ವೇಳೆ ಲಂಚಾವತಾರದ ಬಗ್ಗೆ ಯಾರಾದರೂ ಕಲಾವಿದ ಬಾಯಿ ಬಿಟ್ಟರೆ ಕೋಪಗೊಂಡು ಅವರನ್ನು ಅವಮಾನಿಸೋದು ಅಧಿಕಾರಿಯ ಕೆಲಸ.

    ಲಂಚಬಾಕ ಅಧಿಕಾರಿ ಜಿಲ್ಲೆಯ ಹಗಲುವೇಶ ಕಲಾವಿದ ಶಂಕರಪ್ಪ ಶಾಸ್ತ್ರಿ ಎಂಬವರ ಮೇಲೆ ಅವಾಜ್ ಹಾಕಿದ್ದಾರೆ. ಕಿತ್ತು ತಿನ್ನುವ ಬಡತನಕ್ಕೆ ಶಂಕರಪ್ಪ ಶಾಸ್ತ್ರಿಗೆ, ಹಗಲುವೇಷ ಕಲೆ ಜೀವನಾಧಾರ. ಇದಕ್ಕಾಗಿ ಶಂಕರಪ್ಪ ಶಾಸ್ತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ದತ್ತಪ್ಪ ಸಾಗನೂರ ಹತ್ತಿರ ಕಾರ್ಯಕ್ರಮ ನೀಡಲು ಅವಕಾಶ ಕೇಳಿದ್ದಾರೆ. ಇದಕ್ಕೆ ದತ್ತಪ್ಪ 5 ಸಾವಿರ ರೂ. ಲಂಚ ಕೇಳಿದ್ದಾನೆ. ಈ ವಿಷಯವನ್ನು ಶಂಕರಪ್ಪ ತಮ್ಮ ಕಲಾವಿದ ಸ್ನೇಹಿತರ ಮುಂದೆ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದು ಅಧಿಕಾರಿ ದತ್ತಪ್ಪ ಬಡ ಕಲಾವಿದನಿಗೆ ಕಾಲು ಕೈ ಕತ್ತರಿಸುತ್ತೀನಿ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

  • ಕಳ್ಳಾಟ ಆಡಿದ್ರೆ ಬಂಧೀಖಾನೆ ನೋಡೋಕೆ ಕಳಿಸ್ತೀನಿ- ಅಧಿಕಾರಿಗೆ ಸೋಮಣ್ಣ ಕ್ಲಾಸ್

    ಕಳ್ಳಾಟ ಆಡಿದ್ರೆ ಬಂಧೀಖಾನೆ ನೋಡೋಕೆ ಕಳಿಸ್ತೀನಿ- ಅಧಿಕಾರಿಗೆ ಸೋಮಣ್ಣ ಕ್ಲಾಸ್

    ಮೈಸೂರು: ಸರಿಯಾಗಿ ಕೆಲಸ ಮಾಡದಿದ್ದರೆ ಬಂಧೀಖಾನೆ ಹೇಗಿದೆ ಅಂತ ನೋಡೋಕೆ ಕಳುಹಿಸುತ್ತೇನೆ ಎಂದು ರೇಷ್ಮೆ ಸಚಿವ ವಿ. ಸೋಮಣ್ಣ ಅವರು ಕೆಎಸ್‌ಐಸಿ ಜನರಲ್ ಮ್ಯಾನೇಜರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮೈಸೂರಿನ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್‌ಗೆ(ಕೆಎಸ್‌ಐಸಿ) ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಅವರು ಭೇಟಿ ಕೊಟ್ಟಿದ್ದರು. ಈ ವೇಳೆ ಅಲ್ಲಿನ ಅವ್ಯವಸ್ಥೆ, ನೌಕಕರರ ಸಮಸ್ಯೆ ಕೇಳಿ ಸೋಮಣ್ಣ ಅವರು ಸಿಟ್ಟಾದರು. ನೌಕರರ ಮುಂದೆಯೇ ಜನರಲ್ ಮ್ಯಾನೇಜರ್ ಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

    ‘ನೀ ಬಾರೀ ಕಿಲಾಡಿ ಇದ್ದೀಯಾ. ಒಂದು ಹೇಳ್ತೀನಿ ಕೇಳು, ನಾನು ಏನ್ಮಾಡೋಕೂ ತಯಾರಿದ್ದೇನೆ. ನಿನ್ನಾಟ ನನ್ನ ಹತ್ತಿರ ನಡೆಯಲ್ಲ. ಕೇಳಿಲ್ಲಿ, ನಾನು ಫಸ್ಟ್ 1994-95 ಬಂಧೀಖಾನೆ ಮಂತ್ರಿಯಾಗಿದ್ದೆ. ಸರಿಯಾಗಿ ಕೆಲಸ ಮಾಡದೇ ಇದ್ದರೆ ಬಂಧೀಖಾನೆ ಹೇಗಿದೆ ಅಂತ ನೋಡಿಕೊಂಡು ಬರೋಕೆ ಕಳುಹಿಸುತ್ತೇನೆ’ ಎಂದು ಜನರಲ್ ಮ್ಯಾನೇಜರ್‌ಗೆ ಎಚ್ಚರಿಕೆ ಕೊಟ್ಟರು.

    ಇಲ್ಲಿನ ನೌಕರರ ಸಮಸ್ಯೆ ಬಗೆಹರಿಯಬೇಕು, ಉತ್ಪಾದನೆ ಜಾಸ್ತಿ ಆಗಬೇಕು ಅಷ್ಟೆ. ಯಾವ ಕಳ್ಳಾಟ ನಡೆಯೋಕೆ ಬಿಡಲ್ಲ ಎಂದು ಖಡಕ್ ಆಗಿ ಸಚಿವರು ಎಚ್ಚರಿಸಿದರು. ಬಳಿಕ ನೌಕರರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

  • ಉಗ್ರರ ಗುಂಡಿನ ದಾಳಿಗೆ ಸೇನೆಯ ಅಧಿಕಾರಿ ಹುತಾತ್ಮ

    ಉಗ್ರರ ಗುಂಡಿನ ದಾಳಿಗೆ ಸೇನೆಯ ಅಧಿಕಾರಿ ಹುತಾತ್ಮ

    ಶ್ರೀನಗರ: ಉಗ್ರರ ಗುಂಡಿನ ದಾಳಿಗೆ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸಟರ್(ಜೆಸಿಒ) ಹುತಾತ್ಮರಾಗಿದ್ದಾರೆ.

    ಗಡಿ ನಿಯಂತ್ರಣ ರೇಖೆಯ ಅರ್ಧ ಕಿ.ಮೀ. ದೂರದಲ್ಲಿರುವ ನೌಶೇರಾ ಸೆಕ್ಟರ್‍ನಲ್ಲಿರುವ ಪೋಸ್ಟ್‍ನಲ್ಲಿ ಉಗ್ರರು ಜೆಸಿಒ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿ ನಡೆದ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಎನ್‍ಐ ವರದಿ ಮಾಡಿದೆ.

    ನಿನ್ನೆಯಷ್ಟೆ ಕಾಶ್ಮೀರದ ಅವಂತಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

    ಭಾನುವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಫಿರಂಗಿ ದಾಳಿ ನಡೆಸಿ ನಾಲ್ಕು ಭಯೋತ್ಪಾದಕ ಶಿಬಿರಗಳನ್ನು ಹಾಗೂ ಪಾಕಿಸ್ತಾನ ಸೇನೆಯ ಸ್ಥಾನಗಳನ್ನು ಧ್ವಂಸಗೊಳಿಸಿತ್ತು. ಈ ಘಟನೆ ನಡೆದ ನಂತರ ಕಾಶ್ಮೀರದಲ್ಲಿ ನಡೆದ ಮೊದಲ ಗುಂಡಿನ ಚಕಮಕಿ ಇದಾಗಿದೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಫಿರಂಗಿ ದಾಳಿ ನಡೆಸಿತ್ತು.

    ಅಕ್ಟೋಬರ್ 20ರಂದು ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ನೀಲಂ ಕಣಿವೆಯಲ್ಲಿ ನಾಲ್ಕು ಭಯೋತ್ಪಾದಕರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಇದರಿಂದಾಗಿ ಸಾವು-ನೋವು ಹಾಗೂ ಅಪಾರ ಹಾನಿ ಸಂಭವಿಸಿತ್ತು.

    ಭಾರತೀಯ ಸೇನೆ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಫಿರಂಗಿ ಬಳಸಿ ದಾಳಿ ನಡೆಸಿತ್ತು. ಸೇನೆ ನಡೆಸಿದ ದಾಳಿಯಿಂದಾಗಿ ಪಿಒಕೆಯಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಸೇನೆಯು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿತ್ತು.

    ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧರ್ ಸೆಕ್ಟರ್ ನಲ್ಲಿ ಭಾನುವಾರ ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿತ್ತು. ಇದರಿಂದಾಗಿ ಇಬ್ಬರು ಭಾರತೀಯ ಸೈನಿಕರು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದರು. ಈ ಘಟನೆ ನಂತರ ಭಾರತೀಯ ಸೇನೆ ಉಗ್ರರ ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು.

  • ಅರಣ್ಯ ಭೂಮಿ ಒತ್ತುವರಿ – ಎಫ್‍ಡಿಎ ಅಧಿಕಾರಿ ಸತೀಶ್ ಅಮಾನತು

    ಅರಣ್ಯ ಭೂಮಿ ಒತ್ತುವರಿ – ಎಫ್‍ಡಿಎ ಅಧಿಕಾರಿ ಸತೀಶ್ ಅಮಾನತು

    ಮಡಿಕೇರಿ: ಭಾಗಮಂಡಲ ಬೆಟ್ಟ ನೆಲಸಮ ಮಾಡಿ ರೆಸಾರ್ಟ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಎಫ್‍ಡಿಎ ಅಧಿಕಾರಿ ಸತೀಶ್ ಅವರನ್ನು ಕೊಡಗು ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಸತೀಶ್ ಮಡಿಕೇರಿ ತಾಲೂಕಿನ ಕೋಳಿಕಾಡು ಹಾಗೂ ಚೇರಂಗಾಲ ಗ್ರಾಮಗಳ ವ್ಯಾಪ್ತಿಯ ಸುಮಾರು 1.5 ಎಕರೆ ಬೆಟ್ಟವನ್ನು ಒತ್ತುವರಿ ಮಾಡಿ ಅರಣ್ಯ ಪ್ರದೇಶವನ್ನು ನಾಶಪಡಿಸಿದ್ದರು. ಪರಿಣಾಮ ಬೆಟ್ಟದ ತಪ್ಪಲಿನಲ್ಲಿ ಆತಂಕ ಮನೆ ಮಾಡಿತ್ತು. ಮಾಧ್ಯಮಗಳ ವರದಿ ಆಧರಿಸಿ ಕೊಡಗು ಡಿಸಿ ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಂದ ಜಂಟಿ ತನಿಖೆಗೆ ಆದೇಶ ನೀಡಿದ್ದರು.

    ರೆಸಾರ್ಟ್‍ಗೆ ಗ್ರ್ಯಾಂಟ್ ಆಗಿದ್ದೇ ಬೇರೆ. ಸ್ವಾಧೀನಕ್ಕೆ ಪಡೆದಿದ್ದೇ ಬೇರೆ ಜಾಗ ಎಂಬುದು ಬೆಳಕಿಗೆ ಬಂದಿತ್ತು. ಸರ್ಕಾರಿ ಜಾಗದ ಬೆಟ್ಟವನ್ನು ಒತ್ತುವರಿ ಮಾಡಿ ಅಕ್ರಮ ಕಾಮಗಾರಿ ನಡೆದಿದೆ ಎಂದು ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅಧಿಕಾರಿ ಸತೀಶ್ ಅಮಾನತುಗೊಂಡಿದ್ದಾರೆ.

  • ಕೊಪ್ಪಳ ಪಂಚಾಯತ್ ರಾಜ್ ಕಚೇರಿಯ ಲಂಚಬಾಕ ಅಧಿಕಾರಿ, ಸಿಬ್ಬಂದಿ ಅಮಾನತು

    ಕೊಪ್ಪಳ ಪಂಚಾಯತ್ ರಾಜ್ ಕಚೇರಿಯ ಲಂಚಬಾಕ ಅಧಿಕಾರಿ, ಸಿಬ್ಬಂದಿ ಅಮಾನತು

    ಕೊಪ್ಪಳ: ಸಿಎಂ ಯಡಿಯೂರಪ್ಪ ಅವರಿಂದ ನಾಮಕರಣಗೊಂಡ ಕಲ್ಯಾಣ ಕರ್ನಾಟಕದಲ್ಲಿನ ಮೊದಲ ಲಂಚಾವತಾರ ಪ್ರಕರಣದ ಅಧಿಕಾರಿ ಮತ್ತು ಸಿಬ್ಬಂದಿಯನ್ನ ಅಮಾನತುಗೊಳಿಸಿ ಕೊಪ್ಪಳ ಸಿಇಓ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಮಾಧ್ಯಮಕ್ಕೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಕೊಪ್ಪಳ ಎಚ್.ಕೆ.ಆರ್.ಡಿ.ಬಿ ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಲೆಕ್ಕಾಧಿಕಾರಿ ನಾರಾಯಣ ಸ್ವಾಮಿ ಮತ್ತು ಕಂಪ್ಯೂಟರ್ ಆಪರೇಟರ್ ಆದೆಪ್ಪ ಲಂಚಕ್ಕೆ ಬೇಡಿಕೆ ಇಟ್ಟ ವೀಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಕುರಿತು  ಸೆ. 29ರಂದು ಪಬ್ಲಿಕ್ ಟಿವಿ ಸುದ್ದಿ ಪ್ರಸಾರ ಮಾಡಿತ್ತು. ವರದಿ ನೋಡಿ ಎಚ್ಚೆತ್ತ ಕೊಪ್ಪಳ ಜಿಲ್ಲಾಡಳಿತ ಇಬ್ಬರನ್ನೂ ಅಮಾನತುಗೊಳಿಸಿ ಆದೇಶಿಸಿದೆ.

    ಎಚ್.ಕೆ.ಆರ್.ಡಿ.ಬಿ ನಿಗಮದಲ್ಲಿ ಕಾಮಗಾರಿಗಳ ಕಡತ ವಿಲೇವಾರಿಗಾಗಿ ಮೇಲಾಧಿಕಾರಿಗಳಿಗೆ ಲಂಚವನ್ನು ಕೊಡಬೇಕು ಎಂದು ಕೇಳಿದ್ದ ಅಧಿಕಾರಿ ನಾರಾಯಣ ಸ್ವಾಮಿಯ ಬಂಡವಾಳ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹಾಗೆಯೇ ಕಂಪ್ಯೂಟರ್ ಆಪರೇಟರ್ ಸಹ ಕಡತ ವಿಲೇವಾರಿಗಾಗಿ ಹಣ ಕೇಳಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಪ್ರಕರಣವು ಕಲ್ಯಾಣ ಕರ್ನಾಟಕದ ಮೊದಲ ಲಂಚಾವತಾರದ ಪ್ರಕರಣವಾಗಿದೆ.

    ಕಾಮಗಾರಿಗೆ ಅನುಮತಿ ನೀಡಬೇಕು ಎಂದರೆ 30% ಲಂಚ ಕೊಡಲೇಬೇಕೆಂದು ಇಲ್ಲಿನ ಅಧಿಕಾರಿ ನಾರಾಯಣಸ್ವಾಮಿ ಮುಲಾಜಿಲ್ಲದೆ ಗುತ್ತಿಗೆದಾರರ ಬಳಿ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರರು ನಮಗೆ ಏನೂ ಉಳಿಯೋದಿಲ್ಲ ಸರ್ ಕೊಡಕ್ಕೆ, ತಲೆಕೆಟ್ಟುಹೋಗಿದೆ. ನಮಗೆ 31 ಪರ್ಸೆಂಟೇಜ್ ಬರುತ್ತೆ, ಅದರಲ್ಲಿ ನಿಮಗೆಲ್ಲಿಂದ ಕೊಡೋದು ಎಂದರೆ, ಅಧಿಕಾರಿ ನಾರಾಯಣಸ್ವಾಮಿ ನಾವು ಇಲ್ಲಿ ತುಂಬಾ ಜನಕ್ಕೆ ಕೊಡಬೇಕು ಹಣ ಕೊಟ್ಟು ಕಾಮಗಾರಿ ಮಾಡಿ ಎಂದು ನೇರವಾಗಿ ಹಣ ಕೇಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು.

    ಇಲ್ಲಿನ ಅಧಿಕಾರಿಗಳಿಗೆ ಲಂಚ ನೀಡಿದ್ದಲ್ಲದೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ ಗಳು ಕೂಡ ಲಂಚ ಹೇಳಿರುವ ಬಗ್ಗೆ ವರದಿಯಾಗಿತ್ತು. ಅತ್ತ ಅಧಿಕಾರಿ ಹಣ ಪೀಕಿದರೆ, ಇತ್ತ ಪಂಚಾಯತ್ ರಾಜ್ ಕಚೇರಿಯ ಕಂಪ್ಯೂಟರ್ ಆಪರೇಟರ್ ಆದೇಪ್ಪನಿಗೆ ಮಾಮೂಲಿ ಕೊಟ್ಟರೇನೆ ಆತ ಫೈಲ್ ಮುಂದಕ್ಕೆ ಕಳಿಹಿಸುತ್ತಾನೆ. ಇಲ್ಲದಿದ್ದರೆ ಯಾವ ಕೆಲಸನೂ ಆಗಲ್ಲ. ಯಾರು ಮೊದಲು ಕಮಿಷನ್ ಕೊಡುತ್ತಾರೋ ಅವರ ಕೆಲಸ ಬೇಗ ಆಗುತ್ತೆ. ಹಣ ಕೊಡು ನಿನ್ನ ಕೆಲಸ ನಾನು ಮಾಡಿಸಿ ಕೊಡುತ್ತೇನೆ ಎಂದು ಆದೇಪ್ಪ ಗುತ್ತಿಗೆದಾರರಿಗೆ ಹೇಳಿದ ದೃಶ್ಯಗಳು ಕೂಡ ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಲಂಚ ಪಡೆದ ಅಧಿಕಾರಿ ಹಾಗೂ ಸಿಬ್ಬಂದಿಯನ್ನ ಅಮಾನತುಗೊಳಿಸಿದೆ.

  • ತಲೆಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಮಹಿಳಾ ಪೊಲೀಸ್

    ತಲೆಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಮಹಿಳಾ ಪೊಲೀಸ್

    ತಿರುವನಂತಪುರಂ: ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಲೆಕೂದಲನ್ನು ದಾನ ಮಾಡಿ ಮಾದರಿಯಾಗಿದ್ದಾರೆ.

    44 ವರ್ಷದ ಪೊಲೀಸ್ ಅಧಿಕಾರಿ ಅಪರ್ಣಾ ಲವಕುಮಾರ್ ಅವರು ತಮ್ಮ ಉದ್ದನೆಯ ಕೂದಲನ್ನು ದಾನ ಮಾಡಿದ್ದು, ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.

    ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಅವರು ತಮ್ಮ ಉದ್ದನೆಯ ಕೂದಲಿಗೆ ಹೆಚ್ಚು ಖ್ಯಾತರಾಗಿದ್ದರು. ಆದರೆ ದಿಢೀರ್ ಎಂದು ಅವರು ಕೂದಲು ಕತ್ತರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಈ ಬಗ್ಗೆ ಮಾತನಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಹಾಗೂ ಪೊಲೀಸರ ನಡುವಿನ ಅಂತರ ಕಡಿಮೆಯಾಗುತ್ತಿದ್ದು, ಇದನ್ನು ಮತ್ತಷ್ಟು ಸುಧಾರಣೆ ಮಾಡುವ ಅಗತ್ಯವಿದೆ. ನನಗೆ ಸೌಂದರ್ಯ ಮುಖ್ಯವಲ್ಲ. ಈ ಹಿಂದೆ ಕ್ಯಾನ್ಸರ್ ರೋಗಿಗಳಿಗೆ ಅರ್ಧ ಕೂದಲನ್ನು ದಾನ ಮಾಡಿದ್ದೆ. ಆದರೆ ಈ ಬಾರಿ ಪೂರ್ತಿ ಕೂದಲನ್ನು ದಾನ ಮಾಡಿದ್ದೇನೆ ಎಂದರು.

    ಅಪರ್ಣಾ ಅವರ ಈ ಕಾರ್ಯಕ್ಕೆ ಇಲಾಖೆ ಕೂಡ ಸಾಥ್ ನೀಡಿದ್ದು, ಮೇಲಾಧಿಕಾರಿಗಳು ಇದಕ್ಕೆ ಅನುಮತಿಯನ್ನು ನೀಡಿದ್ದಾರೆ. ಕೇವಲ ಕೂದಲಷ್ಟೇ ಅಲ್ಲದೇ 2008 ರಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೋಗಿಯೊಬ್ಬರು ಆಸ್ಪತ್ರೆಯ ಬಿಲ್ ನೀಡಲು ವಿಫಲವಾದ ಸಂದರ್ಭದಲ್ಲಿ ಅಪರ್ಣಾ ಅವರು ತಮ್ಮ ಕೈಲಿದ್ದ ಬಂಗಾರದ ಬಳೆಯನ್ನು ನೀಡಿ ಆರ್ಥಿಕ ಸಹಾಯವನ್ನು ಮಾಡಿದ್ದರು. ಇತ್ತೀಚೆಗಷ್ಟೇ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ 5ನೇ ತರಗತಿಯ ಬಾಲಕಿ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದನ್ನು ಕಂಡು ಕೂಡಲು ದಾನ ಮಾಡುವ ನಿರ್ಧಾರ ಮಾಡಿದ್ದರು.

  • ಜಿಂಕೆಮರಿಗೆ ಸ್ತನ್ಯಪಾನ ಮಾಡಿಸಿದ ಮಹಿಳೆ: ಫೋಟೋ ವೈರಲ್

    ಜಿಂಕೆಮರಿಗೆ ಸ್ತನ್ಯಪಾನ ಮಾಡಿಸಿದ ಮಹಿಳೆ: ಫೋಟೋ ವೈರಲ್

    ಜೈಪುರ: ಬಿಷ್ಣೋಯಿ ಸಮುದಾಯದ ಮಹಿಳೆಯೊಬ್ಬರು ಜಿಂಕೆ ಮರಿಗೆ ಸ್ತನ್ಯಪಾನ ಮಾಡಿಸಿದ ಫೋಟೋವೊಂದು ವೈರಲ್ ಆಗುತ್ತಿದೆ.

    ಐಎಫ್‍ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಮಹಿಳೆ ಜಿಂಕೆಮರಿಗೆ ಸ್ತನ್ಯಪಾನ ಮಾಡಿಸುವ ಫೋಟೋ ಹಾಕಿದ್ದಾರೆ. “ಬಿಷ್ಣೋಯಿ ಸಮುದಾಯ ಈ ರೀತಿ ಪ್ರಾಣಿಗಳನ್ನು ನೋಡಿಕೊಳ್ಳುತ್ತೆ. ಈ ಪ್ರಾಣಿಗಳು ಅವರಿಗೆ ತಮ್ಮ ಮಕ್ಕಳಿಗಿಂತ ಕಡಿಮೆ ಇಲ್ಲ. ಮಹಿಳೆ ಜಿಂಕೆಗೆ ಹಾಲು ಉಣಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

    ಪ್ರವೀಣ್ ಕಾಸ್ವಾನ್ ಅವರು ಈ ಫೋಟೋವನ್ನು ಟ್ವೀಟ್ ಮಾಡುತ್ತಿದ್ದಂತೆ 1 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಅಲ್ಲದೆ 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಈ ಫೋಟೋಗೆ ಜನರು ಕಮೆಂಟ್ ಮಾಡುವ ಮೂಲಕ ಮಹಿಳೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಈ ಫೋಟೋ ನೋಡಿ ಕೆಲವರು, ಹಳ್ಳಿಯಲ್ಲಿ ಇರುವ ಜನರು ತಮ್ಮ ಸಾಕು ಪ್ರಾಣಿಗಳಾದ ಮೇಕೆ, ಹಸು, ಎಮ್ಮೆ, ಮೊಲ, ನಾಯಿ, ಬೆಕ್ಕು ಎಲ್ಲವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅಲ್ಲದೆ ಅವರಿಗೆ ಹೆಸರನ್ನು ಕೂಡ ಇಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.

    ಮತ್ತೆ ಕೆಲವರು, “ಇದು ನಿಜವಾಗಿಯೂ ಸುಂದರವಾಗಿದೆ. ಆ ಮಹಿಳೆಗೆ ನಾವು ಪ್ರಶಂಸೆ ನೀಡಬೇಕು. ಗ್ರೇಟ್ ಮದರ್” ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವು ಮಂದಿ ‘ತಾಯಿ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ” ಎಂದು ಕಮೆಂಟ್ ಮಾಡಿದ್ದಾರೆ.