Tag: officer

  • ಕದಂಬ ನೌಕಾನೆಲೆಯಿಂದ 15 ಲಕ್ಷ ರೂ. ಸಾಗಿಸುತ್ತಿದ್ದ ಅಧಿಕಾರಿ ವಶಕ್ಕೆ

    ಕದಂಬ ನೌಕಾನೆಲೆಯಿಂದ 15 ಲಕ್ಷ ರೂ. ಸಾಗಿಸುತ್ತಿದ್ದ ಅಧಿಕಾರಿ ವಶಕ್ಕೆ

    ಕಾರವಾರ: ಸೂಟ್‍ಕೇಸ್‍ನಲ್ಲಿ 15 ಲಕ್ಷ ರೂ.ಗೂ ಅಧಿಕ ಹಣ ಸಾಗಿಸುತ್ತಿದ್ದ ಕದಂಬ ನೌಕಾನೆಲೆಯ ಅಧಿಕಾರಿಯನ್ನು ನೌಕಾನೆಲೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ನೌಕಾನೆಲೆಯಲ್ಲಿರುವ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್‍ನ ಅಧಿಕಾರಿಯೋರ್ವ ನೇವಲ್ ಬೇಸ್‍ನಲ್ಲೇ 15 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ಸೂಟ್‍ಕೇಸ್‍ನಲ್ಲಿ ಬೇಸ್‍ನ ಹೊರಗಡೆ ಕೊಂಡೊಯ್ಯುತ್ತಿದ್ದ. ಈ ವೇಳೆ ಸೂಟ್‍ಕೇಸ್ ಜತೆ ಹೊರ ಬರುತ್ತಿದ್ದ ಎಂಇಎಸ್ ಅಧಿಕಾರಿಯನ್ನು ನೇವಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಎಂಇಎಸ್ ಅಧಿಕಾರಿಯನ್ನು ಹಿಡಿದು ನೇವಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಭಾರೀ ಮೊತ್ತದ ಹಣ ಎಲ್ಲಿಂದ ಬಂತು? ಎಲ್ಲಿಗೆ ಸಾಗಾಟವಾಗುತ್ತಿದೆ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ಹಿಂದೆ ಅಧಿಕಾರಿಯೋರ್ವರು ಲಂಚ ಪಡೆದ ಪ್ರಕರಣ, ಬಳಿಕ ಸಿಬ್ಬಂದಿ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪ್ರಸ್ತುತ ಎಂಇಎಸ್ ಅಧಿಕಾರಿಯಲ್ಲಿ ದೊರೆತಿರುವ ಹಣ ಹಲವು ಅನುಮಾನಗಳಿಗೆ ಎಡೆಮಾಡಿದ್ದು, ವಿಚಾರಣೆಯ ಬಳಿಕವೇ ಸತ್ಯಾಂಶ ತಿಳಿದುಬರಬೇಕಷ್ಟೇ ಎನ್ನಲಾಗಿದೆ.

  • ‘ಕೊರೊನಾ ಬಂದಿರೋ ಭಯ ಕಾಡ್ತಿದೆ’- ಗುಂಡಿಕ್ಕಿಕೊಂಡು ಸಿಆರ್‌ಪಿಎಫ್ ಅಧಿಕಾರಿ ಆತ್ಮಹತ್ಯೆ

    ‘ಕೊರೊನಾ ಬಂದಿರೋ ಭಯ ಕಾಡ್ತಿದೆ’- ಗುಂಡಿಕ್ಕಿಕೊಂಡು ಸಿಆರ್‌ಪಿಎಫ್ ಅಧಿಕಾರಿ ಆತ್ಮಹತ್ಯೆ

    – ಮತ್ತೊಬ್ಬ ಅಧಿಕಾರಿಯೂ ಸೂಸೈಡ್

    ಶ್ರೀನಗರ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಜಮ್ಮು-ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ನಡೆದಿದೆ.

    ರಾಜಸ್ಥಾನದ ಜೈಸಲ್ಮೇರ್ ನಿವಾಸಿ ಸಬ್‌-ಇನ್ಸ್‌ಪೆಕ್ಟರ್ ಫತಾಹ್ ಸಿಂಗ್ ಆತ್ಮಹತ್ಯೆಗೆ ಶರಣಾದ ಸಿಆರ್‌ಪಿಎಫ್ ಅಧಿಕಾರಿ. ಫತಾಹ್ ಸಿಂಗ್ ಅವರನ್ನು ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಮಟ್ಟನ್ ಪ್ರದೇಶದಲ್ಲಿ ಸಿಆರ್‌ಪಿಎಫ್‍ನ 49ನೇ ಬೆಟಾಲಿಯನ್‍ನೊಂದಿಗೆ ನೇಮಿಸಲಾಗಿತ್ತು. ಆದರೆ ತಾವು ಕೋವಿಡ್-19 ಸೋಂಕು ತಗುಲಬಹುದೆಂದು ಆತಂಕಕ್ಕೆ ಒಳಗಾಗಿದ್ದರು.

    ಫತಾಹ್ ಸಿಂಗ್ ಮಂಗಳವಾರ ತಮ್ಮ ಬಳಿ ಇದ್ದ ರೈಫಲ್‍ನಿಂದ ಗುಂಡು ಹಾರಿಸಿಕೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಫತಾಹ್ ಸಿಂಗ್ ಮೃತಪಟ್ಟಿದ್ದಾರೆ.

    “ಕೊರೊನಾ ವೈರಸ್ ತಗುಲಿರುವ ಭಯ ನನಗೆ ಕಾಡುತ್ತಿದೆ’ ಎಂದು ಫತಾಹ್ ಸಿಂಗ್ ಡೆತ್‍ನೋಟ್‍ನಲ್ಲಿ ತಿಳಿಸಿದ್ದಾರೆ. ಅವರಿಗೆ ಸೋಂಕು ತಗುಲಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಅವರ ಗಂಟಲು ದ್ರವವನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ಕೋವಿಡ್-19 ಶಿಷ್ಟಾಚಾರದಂತೆ ಫತಾಹ್ ಸಿಂಗ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಮತ್ತನ್ ಠಾಣೆಯ ಅಧಿಕಾರಿ ಜಝೀಬ್ ಅಹ್ಮದ್ ಹೇಳಿದ್ದಾರೆ.

    ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್‌ಪಿಎಫ್‍ನ ಮತ್ತೊಬ್ಬ ಅಧಿಕಾರಿ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಅವರ ಸಾವಿಗೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ.

  • ಕಾಟಾಚಾರಕ್ಕೆ ಕೊರೊನಾ ಸ್ಕ್ಯಾನಿಂಗ್ ಮಾಡ್ತಿದ್ದ ಅಧಿಕಾರಿ ಅಮಾನತು

    ಕಾಟಾಚಾರಕ್ಕೆ ಕೊರೊನಾ ಸ್ಕ್ಯಾನಿಂಗ್ ಮಾಡ್ತಿದ್ದ ಅಧಿಕಾರಿ ಅಮಾನತು

    ತುಮಕೂರು: ಕೊರೊನಾ ವೈರಸ್ ಪತ್ತೆಹಚ್ಚುವ ಥರ್ಮಲ್ ಸ್ಕ್ಯಾನಿಂಗ್‍ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅಸಡ್ಡೆ ತೋರಿರುವ ಘಟನೆ ತುಮಕೂರು ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

    ತುಮಕೂರು ಆರೋಗ್ಯ ಇಲಾಖೆಯ ಜ್ಯೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ ನಿರ್ಲಕ್ಷ್ಯ ತೋರಿದ ಅಧಿಕಾರಿ. ಈತ ತುಮಕೂರು ರೈಲ್ವೇ ನಿಲ್ದಾಣದಲ್ಲಿ ಸಾರ್ವಜನಿಕರ ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕಾದರೆ ಬೇಜವಾಬ್ದಾರಿ ವರ್ತನೆ ತೋರಿದ್ದಾನೆ.

    ಒಂದು ಕೈಯಲ್ಲಿ ಮೊಬೈಲ್ ಹಿಡಿದು ಇನ್ನೊಂದು ಕೈಯಲ್ಲಿ ಸ್ಕ್ರೀನಿಂಗ್ ಮೆಷಿನ್ ಹಿಡಿದು ಅಸಡ್ಡೆಯಾಗಿ ತಪಾಸಣೆ ನಡೆಸಿದ್ದಾನೆ. ಈತನ ನಿರ್ಲಕ್ಷ್ಯದ ಕೆಲಸವನ್ನು ಸಾರ್ವಜನಿಕರು ಮೊಬೈಲಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಛೀಮಾರಿ ಹಾಕಿದ್ದಾರೆ.

    ಕಳೆದ ಎರಡು ದಿನಗಳಿಂದ ತುಮಕೂರಿನ ಸಿದ್ದಗಂಗಾ ಮಠ ಹಾಗೂ ರೈಲ್ವೇ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ಇಡೀ ದೇಶವೇ ಕೊರೊನಾ ವೈರಸ್ ವಿರುದ್ಧ ಸಮರ ಸಾರಿದರೆ, ಈತ ಮಾತ್ರ ನಿರ್ಲಕ್ಷ್ಯ ತೋರಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

    ಇದೀಗ ಮೊಬೈಲಿನಲ್ಲಿ ಮಾತನಾಡುತ್ತಾ ಕಾಟಾಚಾರಕ್ಕೆ ತಪಾಸಣೆ ಮಾಡುತ್ತಿದ್ದ ನರಸಿಂಹಮೂರ್ತಿಯನ್ನು ಅಮಾನತು ಮಾಡಲಾಗಿದೆ. ನರಸಿಂಹಮೂರ್ತಿಯ ಬೇಜವಾಬ್ದಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ಆಧಾರದ ಮೇಲೆ ಡಿಎಚ್‍ಒ ಡಾ.ಚಂದ್ರಿಕಾ ಬೇಕಾಬಿಟ್ಟಿ ತಪಾಸಣೆ ಮಾಡುತ್ತಿದ್ದ ನರಸಿಂಹಮೂರ್ತಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

  • ಅನುಮತಿ ಕೇಳಿದ ಬಿಬಿಎಂಪಿ ಆಯುಕ್ತನಿಗೆ ಸರ್ಕಾರದಿಂದ ಮುಖಭಂಗ

    ಅನುಮತಿ ಕೇಳಿದ ಬಿಬಿಎಂಪಿ ಆಯುಕ್ತನಿಗೆ ಸರ್ಕಾರದಿಂದ ಮುಖಭಂಗ

    ಬೆಂಗಳೂರು: 10 ಕೋಟಿ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರವನ್ನ ಬಿಬಿಎಂಪಿ ಆಯುಕ್ತ ಸರ್ಕಾರದ ಬಳಿ ಕೇಳಿದ್ದಾರೆ. ಆದರೆ ಸರ್ಕಾರ ನಯವಾಗಿಯೇ ಈ ಬೇಡಿಕೆ ತಿರಸ್ಕರಿಸಿ ಮುಖಭಂಗ ಮಾಡಿದೆ.

    ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪ್ರಕಾರ ಒಂದು ಕೋಟಿವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರ ಕಮಿಷನರ್ ಗೆ ಇದೆ. 1 ಕೋಟಿಯಿಂದ 3 ಕೋಟಿವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರ ಸ್ಥಾಯಿ ಸಮಿತಿಗಳಿಗೆ ಇದೆ. 3 ಯಿಂದ 10 ಕೋಟಿವರೆಗಿನ ಕಾಮಗಾರಿಗಳಿಗೆ ಕೌನ್ಸಿಲ್ ಅನುಮೋದನೆ ನೀಡುತ್ತದೆ. ಆದರೆ ಬಿಬಿಎಂಪಿ ಕಮಿಷನರ್ ಇದೆಲ್ಲವನ್ನ ಬೀಟ್ ಮಾಡಲು ಸರ್ಕಾರಕ್ಕೆ ಪತ್ರ ಬರೆದಿದ್ದರು.

    10 ಕೋಟಿವರೆಗಿನ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರ ತಮಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸರ್ಕಾರದಿಂದ ಆಯುಕ್ತರಿಗೆ ಮುಖಭಂಗ ಮಾಡಿ ಕೌನ್ಸಿಲ್‍ನಿಂದ ಅನುಮೋದನೆ ಪಡೆದುಕೊಂಡು ಪತ್ರ ಬರೆಯುವಂತೆ ಸೂಚನೆ ಸಿಕ್ಕಿದೆ.

  • ಮನೆಗಪ್ಪಳಿಸಿದ ಬೃಹತ್ ರೈಲ್ವೇ ಪಿಲ್ಲರ್ – ಸಾವಿನ ದವಡೆಯಿಂದ ಗರ್ಭಿಣಿ, ಬಾಣಂತಿ, ಮಗು ಬಚಾವ್

    ಮನೆಗಪ್ಪಳಿಸಿದ ಬೃಹತ್ ರೈಲ್ವೇ ಪಿಲ್ಲರ್ – ಸಾವಿನ ದವಡೆಯಿಂದ ಗರ್ಭಿಣಿ, ಬಾಣಂತಿ, ಮಗು ಬಚಾವ್

    ಗದಗ: ಬೃಹತ್ ರೈಲ್ವೇ ಪಿಲ್ಲರ್ ಮನೆಗಪ್ಪಳಿಸಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತವೊಂದು ಅಚ್ಚರಿಯ ರೀತಿಯಲ್ಲಿ ತಪ್ಪಿರುವಂತಹ ಘಟನೆ ಜಿಲ್ಲೆಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

    ಅಂಬೇಡ್ಕರ್ ನಗರದ ಬಳಿ ಕಳೆದ ಒಂದೂವರೆ ವರ್ಷದಿಂದ ರೈಲ್ವೇ ಫ್ಲೈ ಓವರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಬೃಹತ್ ಪಿಲ್ಲರ್ ಅಳವಡಿಸುವಾಗ ಹೈಡ್ರೋ ಮಶಿನ್ ಪೈಪ್ ಕಟ್ ಆಗಿದೆ. ಆ ಪಿಲ್ಲರ್ ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಜಖಂ ಆಗಿದೆ. ಜಖಂ ಆದ ಕೋಣೆಯ ಜೋಳಿಗೆಯಲ್ಲಿ ಮಲಗಿದ್ದ 8 ತಿಂಗಳ ಮಗು ಮಹಮ್ಮದ್, ಬಾಣಂತಿ ರೇಶ್ಮಾ ಹಾಗೂ ಮತೋರ್ವ ಗರ್ಭಿಣಿ ಕೂದಲೆಳೆಯ ಅಂತರದಲ್ಲಿ ಬಚಾವ್ ಆಗಿದ್ದಾರೆ.

    ಆಂಧ್ರ ಪ್ರದೇಶ ಮೂಲದ ಎಂ.ವಿ ಕನ್‍ಸ್ಟ್ರಕ್ಷನ್ ಮಾಲಿಕತ್ವದ ಮುನಿ ವೆಂಕಟೇಶ್ ಈ ಕಾಮಗಾರಿ ಗುತ್ತಿಗೆದಾರರು. ಈ ಸೇತುವೆ ಕಾಮಗಾರಿಗೆ ಗದಗನ ಅಂಬೇಡ್ಕರ್, ಜನತಾ ಕಾಲೋನಿ ಜನರು ಬೇಸತ್ತು ಹೋಗಿದ್ದಾರೆ. ಈ ಕಾಮಗಾರಿಯಿಂದ ಈ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ಇಂಥ ಅಪಾಯಕಾರಿ ಕಾಮಗಾರಿ ನಡೆದರೂ ಯಾವುದೇ ಮುಂಜಾಗ್ರತಾ ಕೈಗೊಂಡಿಲ್ಲ. ಕಾಮಗಾರಿ ಪ್ರತಿಯಲ್ಲಿದೆ ಅಂತ ಸೂಚನಾ ಫಲಕ ಕೂಡ ಅಳವಡಿಸಿಲ್ಲ ಎಂದು ಮನೆಯಲ್ಲಿದ್ದ ಗರ್ಭಿಣಿ ಹೇಳಿದ್ದಾರೆ.

    ಪಿಲ್ಲರ್ ಬಿದ್ದ ಸದ್ದು ಕೇಳಿ ಹೌಹಾರಿ ಬಾಣಂತಿ ಮಗು ಎತ್ತಿಕೊಂಡು ಓಡಿ ಬಂದಿದ್ದಾರೆ. ಬೃಹತ್ ಪಿಲ್ಲರ್ ಅಳವಡಿಸುವ ಗುತ್ತಿಗೆದಾರರು ರಸ್ತೆ ಬಂದ ಮಾಡಿಲ್ಲ. ಇದೇ ವೇಳೆ ಟ್ರ್ಯಾಕ್ಟರ್ ನಲ್ಲಿ 15ಕ್ಕೂ ಹೆಚ್ಚು ಜನರು ಇದೇ ಕಾಮಗಾರಿ ನಡೆಯುವ ರಸ್ತೆಯಲ್ಲೇ ಜಮೀನು ಕೆಲಸಕ್ಕೆ ಹೊರಟಿದ್ದರು. ಅವರು ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂ.ವಿ ಕನ್‍ಸ್ಟ್ರಕ್ಷನ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ಘಟನೆ ನಡೆಯತ್ತಿದ್ದಂತೆ ಸ್ಥಳದಲ್ಲೇ ಬೃಹತ್ ಯಂತ್ರೋಪಕರಣಗಳು ಬಿಟ್ಟು ಕೆಲಸಗಾರರು ಪರಾರಿಯಾಗಿದ್ದಾರೆ. ಬೃಹತ್ ಪಿಲ್ಲರ್ ಬಿಳುತ್ತಿದ್ದಂತೆ ಕಾರ್ಮಿಕ ಮೇಲಿನಿಂದ ಬಿದ್ದು, ಕೈ, ಕಾಲು ಮುರಿತವಾಗಿದೆ. ಈ ಅವಘಡ ನಡೆದರೂ ರೈಲ್ವೇ ಇಲಾಖೆಯ ಯಾವೊಬ್ಬ ಅಧಿಕಾರಗಳು ಸ್ಥಳಕ್ಕೆ ಬಂದಿಲ್ಲ.

  • ಬಿಬಿಎಂಪಿ ಕಚೇರಿಯಲ್ಲಿ ಬೀದಿನಾಯಿಗಳ ಕಾಟ

    ಬಿಬಿಎಂಪಿ ಕಚೇರಿಯಲ್ಲಿ ಬೀದಿನಾಯಿಗಳ ಕಾಟ

    ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಬಿಬಿಎಂಪಿ ಕೋಟಿ ಲೆಕ್ಕದಲ್ಲಿ ದುಡ್ಡು ಖರ್ಚು ಮಾಡಿದ್ದೇ ಬಂತು. ಬೆಂಗಳೂರಿನ ಏರಿಯಾಗಳಲ್ಲದೇ ಈಗ ಬಿಬಿಎಂಪಿ ಕಚೇರಿಯ ಆವರಣದೊಳಗೆ ಈಗ ಬೀದಿನಾಯಿಗಳ ಕಾಟ ಶುರುವಾಗಿದೆ.

    ಬಿಬಿಎಂಪಿ ಕಚೇರಿಯಲ್ಲೇ ಬೀದಿನಾಯಿಗಳ ಹಾವಳಿ, ಇನ್ನು ಇವರು ನಗರದ ಬೀದಿನಾಯಿಗಳ ಕಾಟಕ್ಕೆ ಮುಕ್ತಿ ಹಾಡ್ತಾರಾ ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಿಬಿಎಂಪಿ ಆರೋಗ್ಯ ವಿಭಾಗದಿಂದ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದೆ. ಆದರೆ ನಾಯಿಗಳ ಸಂಖ್ಯೆ ಕಡಿಮೆಯಾಗಿಲ್ಲ.

    ಬೀದಿ ನಾಯಿಗಳ ಅಪರೇಷನ್ ಮಾಡಲಾಗಿದೆ ಎಂದು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಆದರು ಬೀದಿ ನಾಯಿಗಳ ಹಾವಳಿ ತಪ್ಪಿಲ್ಲ. ಬೀದಿ ನಾಯಿಗಳ ಹೆಸರಲ್ಲಿ ದುಡ್ಡು ಅದ್ಯಾರ ಜೇಬು ಸೇರಿದ್ಯೋ ಎಂದು ಜನರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ.

  • ನೊಂದ ಜೀವಗಳಿಗೆ ಸಾಂತ್ವನ-ಚಿಕ್ಕಿ ತಯಾರಿಕೆಯಲ್ಲಿ ಚಂದದ ಬದುಕು

    ನೊಂದ ಜೀವಗಳಿಗೆ ಸಾಂತ್ವನ-ಚಿಕ್ಕಿ ತಯಾರಿಕೆಯಲ್ಲಿ ಚಂದದ ಬದುಕು

    -ಶೋಷಿತರಿಗೆ ದಾರಿದೀಪವಾದ ಅಧಿಕಾರಿ

    ಕಾರವಾರ: ಒಬ್ಬ ಅಧಿಕಾರಿ ಸಮಾಜಮುಖಿಯಾಗಿದ್ದರೆ ಎಷ್ಟರ ಮಟ್ಟಿಗೆ ಜನ ಕಷ್ಟ ಕಾರ್ಪಣ್ಯಗಳನ್ನು ದೂರವಾಗಿಸಬಹುದು ಅನ್ನೋದಕ್ಕೆ ಕಾರವಾರದ ಇವತ್ತಿನ ಪಬ್ಲಿಕ್ ಹೀರೋ ರಾಜೇಂದ್ರ ಬೇಕಲ್ ಅವರು ನಿರ್ದಶನವಾಗಿದ್ದಾರೆ. ಸಂಕಷ್ಟ, ದೌರ್ಜನ್ಯಕ್ಕೊಳಗಾಗಿ ಕಣ್ಣೀರು ಹಾಕುತ್ತಿದ್ದ ಮಹಿಳೆಯರು ರಾಜೇಂದ್‍ರ ಬೇಕಲ್ ಅವರ ಸಹಾಯದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

    ಉತ್ತರ ಕನ್ನಡದ ಹಿಂದಿನ ಡಿಸಿ ನಕುಲ್ ಹಾಗೂ ಕಾರವಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಾಲಿ ನಿರ್ದೇಶಕ ರಾಜೇಂದ್ರ ಬೇಕಲ್ ನೊಂದ ಜೀವಗಳಿಗೆ ಸಾಂತ್ವನ ಹೇಳಿ ಚಂದದ ಬದುಕು ಕಟ್ಟಿಕೊಳ್ಳಲು ಮಾರ್ಗವನ್ನು ತೋರಿಸಿದ್ದಾರೆ. ತಮ್ಮ ಕಷ್ಟದ ಬಗ್ಗೆ ಮಹಿಳೆಯರು ಅಳಲು ತೋಡಿಕೊಂಡಾಗ ರಾಜೇಂದ್ರ ಬೇಕಲ್ ಅವರು ಚಿಕ್ಕಿ ತಯಾರಿಕೆಯ ದಾರಿ ತೋರಿಸಿದ್ದರು.

    ಕಾರವಾರ, ಅಂಕೋಲ, ಶಿರಸಿಯಲ್ಲಿ ನೊಂದ ತಲಾ ಐದು ಜನರ ಮಹಿಳಾ ಗುಂಪುಗಳನ್ನು ರಚಿಸಿ, ಮಹಿಳಾ ಅಭಿವೃದ್ಧಿ ನಿಗಮದಡಿ ತಲಾ 20 ಸಾವಿರದಂತೆ ನೆರವು ನೀಡಿದ್ದಾರೆ. ಅಷ್ಟೇ ಅಲ್ಲ, ಎನ್‍ಆರ್‍ಎಲ್‍ಎಂ ಯೋಜನೆಯಡಿ 2017ರಲ್ಲಿ 2.50 ಲಕ್ಷ ಸಾಲ ನೀಡಿ ಚಿಕ್ಕಿ ಬರ್ಫಿ ತಯಾರಿಕೆ ತರಬೇತಿ ನೀಡಿದ್ದಾರೆ. ಈ ಚಿಕ್ಕಿಗಳನ್ನು ಎಂಎಸ್‍ಪಿಟಿಸಿ ಮಹಿಳಾ ಸಂಘದ ಮೂಲಕ ಅಂಗನವಾಡಿಗಳಿಗೆ ಮಾರಾಟ ಮಾಡಲು ವ್ಯವಸ್ಥೆಯೂ ಮಾಡಿಸಿದ್ದಾರೆ.

    ನೊಂದ ಮಹಿಳೆಯರು ರಾಜೇಂದ್ರ ಅವರ ಸಹಾಯದಿಂದಾಗಿ ಶಿರವಾಡದಲ್ಲಿ ಶ್ರೀ ಸಾಯಿ ಶೇಂಗಾ ಚಿಕ್ಕಿ ಪ್ರಾಡಕ್ಟ್ ಅಂತ ಸ್ವಂತ ಉದ್ಯಮ ಪ್ರಾರಂಭಿಸಿದ್ದಾರೆ. ಅಲ್ಲದೆ ಉತ್ಕøಷ್ಟ ಗುಣಮಟ್ಟ-ಶುಚಿ-ರುಚಿಯ ಮೀರಾ ಶೇಂಗಾ ಚಿಕ್ಕಿ ಈಗ ಎಲ್ಲಾ ಕಡೆ ಪ್ರಸಿದ್ಧಿ ಪಡೆದಿದೆ. ಪ್ರತಿ ದಿನ 6 ಟನ್ ಚಿಕ್ಕಿಯನ್ನು ಕಾರವಾರ ತಾಲೂಕಿನ ಅಂಗನವಾಡಿಗೆ ನೀಡುತ್ತಿದ್ದಾರೆ. ಇವರ ಸಾಧನೆ-ಶ್ರದ್ಧೆಗೆ ರಾಷ್ಟ್ರೀಯ ಸ್ಕಾಚ್ ಅವಾರ್ಡ ಬಂದಿದ್ದು, 50 ಲಕ್ಷ ರೂಪಾಯಿಗಳ ಅನುದಾನ ಸಿಕ್ಕಿದೆ. ಇದನ್ನು ಬಳಸಿಕೊಂಡು ಕಾರವಾರ ಮತ್ತು ಶಿರಸಿ ಭಾಗದಲ್ಲಿ ಯಂತ್ರಗಳ ಮೂಲಕ ಚಿಕ್ಕಿ ತಯಾರಿಕೆ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ.

    ಬದುಕಿನ ಜಟಕಾಬಂಡಿ ಎಳೆಯಲು ದಾರಿಯೇ ಕಾಣದ ಅನ್ಯದಾರಿ ಹಿಡಿದು ಕಣ್ಣೀರು ಹಾಕ್ತಿದ್ದ ಈ ನೊಂದ ಜೀವಗಳಿಗೆ ರಾಜೇಂದ್ರ ಬೇಕಲ್ ಅವರು ದಾರಿದೀಪವಾಗಿದ್ದಾರೆ.

  • ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿದ್ದ ಮೂವರು ನೌಕಾ ಅಧಿಕಾರಿಗಳ ಬಂಧನ

    ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿದ್ದ ಮೂವರು ನೌಕಾ ಅಧಿಕಾರಿಗಳ ಬಂಧನ

    ಕಾರವಾರ: ಮೋಹಕ ಜಾಲದಲ್ಲಿ ಬಿದ್ದು ಪಾಕಿಸ್ತಾನಕ್ಕೆ ಭಾರತೀಯ ಯುದ್ಧ ನೌಕೆಗಳ ಚಲನ ವಲನ ಮಾಹಿತಿ ನೀಡುತ್ತಿದ್ದ ಪ್ರಕರಣದ ಸಂಬಂಧ ಮೂವರು ನೌಕಾ ಅಧಿಕಾರಿಗಳನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಪಾಕಿಸ್ತಾನದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಧಿಸಿದಂತೆ ಕೇಂದ್ರ ಗುಪ್ತಚರ ಸಂಸ್ಥೆಗಳೊಂದಿಗೆ ಆಂಧ್ರಪ್ರದೇಶದ ಪೊಲೀಸರು ತನಿಖೆ ನಡೆಸುತ್ತಿದೆ. ಹೀಗಾಗಿ ವಿಶಾಖಪಟ್ಟಣದಲ್ಲಿರುವ ಈಸ್ಟರ್ನ್ ಕಮಾಂಡ್‍ಗೆ ಸೇರಿದ ರಾಜೇಶ್, ಲೋಕಂಡ್ ಮತ್ತು ನಿರಂಜನ ಎಂಬವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ಹನಿಟ್ರ್ಯಾಪ್ ಪ್ರಕರಣದಲ್ಲಿ ಈ ಹಿಂದೆ ನೌಕಾ ನೆಲೆಯ ಎಂಟು ಮಂದಿ ಸೇಲರ್‌ಗಳು ಸಿಕ್ಕಿಬಿದ್ದಿದ್ದರು. ಈ ಪೈಕಿ ಇಬ್ಬರು ಕಾರವಾರದಲ್ಲಿರುವ ನೌಕಾನೆಲೆಗೆ ಸೇರಿದ್ದರು. ಈಗ ಮತ್ತೆ ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‍ಐ) ಸಾಮಾಜಿಕ ಜಾಲತಾಣದ ಮೂಲಕ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಮೋಹಕ ಜಾಲದಲ್ಲಿ ಸಿಲುಕಿಸಿತ್ತು. ಬಳಿಕ ಭಾರತದ ನೌಕಾನೆಲೆ ಹಾಗೂ ಯುದ್ಧ ನೌಕೆಗಳ ಮಾಹಿತಿಯನ್ನು ಪಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿರುವ ತನಿಖಾ ಸಂಸ್ಥೆ ಮೂವರನ್ನು ವಶಕ್ಕೆ ಪಡೆದಿದೆ.

    ನೌಕಾದಳದ ಮಾಹಿತಿ ಸೋರಿಕೆ ಹಿನ್ನೆಲೆ ಕಾರವಾರ ಕದಂಬ ನೌಕಾನೆಲೆಯಲ್ಲಿ ಆ್ಯಂಡ್ರಾಯ್ಡ್ ಫೋನ್‍ಗಳನ್ನು ನಿಷೇಧಿಸಲಾಗಿತ್ತು. ಅಷ್ಟೇ ಅಲ್ಲದೆ ಕಾರವಾರ ಕದಂಬ ನೌಕಾನೆಲೆಯಲ್ಲಿ ಗುಪ್ತ ಮಾಹಿತಿ ಹಂಚಿಕೆ ಸಂಬಂಧ ತನಿಖೆ ಸಹ ನಡೆಸಲಾಗುತ್ತಿದೆ.

  • 78 ಎಕ್ರೆ ಅರಣ್ಯ ಭೂಮಿಯನ್ನು ಖಾಸಗಿಯವರ ಖಾತೆಗೆ ಮಾಡಿಕೊಟ್ಟ ಅಧಿಕಾರಿಗಳು

    78 ಎಕ್ರೆ ಅರಣ್ಯ ಭೂಮಿಯನ್ನು ಖಾಸಗಿಯವರ ಖಾತೆಗೆ ಮಾಡಿಕೊಟ್ಟ ಅಧಿಕಾರಿಗಳು

    -16 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ

    ತುಮಕೂರು: ಕಂದಾಯ ಅಧಿಕಾರಿಗಳು, ಸರ್ವೆ ಅಧಿಕಾರಿಗಳು ಸೇರಿಕೊಂಡು ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟ ಪ್ರಕರಣ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

    ಬರೋಬ್ಬರಿ 78 ಎಕರೆ ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. 16 ವರ್ಷಗಳ ಬಳಿಕ ಅಧಿಕಾರಿ ಕಳ್ಳಾಟ ಬಯಲಾಗಿದ್ದು, ಕಬಳಿಸಿದ ಜಾಗದಲ್ಲಿ ಸದ್ಯ ಪ್ರತಿಷ್ಠಿತ ರಿಲಯನ್ಸ್ ಕಂಪನಿಯ ಗೋಡಾನ್ ನಿರ್ಮಾಣವಾಗಿದೆ.

    ತಾಲೂಕಿನ ನಂದಿಹಳ್ಳಿ ಗ್ರಾಮದ ಸರ್ವೆ ನಂಬರ್ 42 ರಲ್ಲಿನ ಸುಮಾರು 78 ಎಕರೆ ಅರಣ್ಯ ಭೂಮಿ ಖಾಸಗಿ ಕಂಪನಿಗೆ ಅಧಿಕಾರಿಗಳು ಖಾತೆ ಮಾಡಿಕೊಡಲಾಗಿದೆ. ನಂದಿಹಳ್ಳಿಯ 42ನೇ ಸರ್ವೆ ನಂಬರಲ್ಲಿನ 73 ಹೆಕ್ಟೆರ್ ಜಾಗ ಅಂದರೆ ಸರಿಸುಮಾರು 181 ಎಕರೆ ಸರ್ಕಾರಿ ಖರಾಬು ಜಮೀನನ್ನು 1994ರಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಅರಣ್ಯ ಇಲಾಖೆಗೆ ಸೇರಿದ್ದ ಭೂಮಿಯನ್ನು ಕಂದಾಯ ಅಧಿಕಾರಿಗಳು, ಸರ್ವೆ ಅಧಿಕಾರಿಗಳು ಸೇರಿಕೊಂಡು ಹಿಮಾದ್ರಿ ಎಂಟರ್ ಪ್ರೈಸಸ್ ಎಂಬ ಕಂಪನಿಗೆ 78 ಎಕರೆಯನ್ನು ಪರಭಾರೆ ಮಾಡಿದ್ದಾರೆ. ಈ 78 ಎಕರೆ ಜಾಗವನ್ನು ಮೊದಲು ಸುಮಾರು 13 ನಕಲಿ ರೈತರ ಹೆಸರಿಗೆ ಹರಿದು ಹಂಚಿ ಖಾತೆ ಮಾಡುತ್ತಾರೆ. ಬಳಿಕ ಆ ನಕಲಿ ರೈತರಿಂದ ಹಿಮಾದ್ರಿ ಕಂಪನಿಗೆ ಮಾರಿದಂತೆ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿಯನ್ನು ಪಡೆದಿದ್ದಾರೆ.

    ವಿಪರ್ಯಾಸ ಎಂದರೇ 2004ರಲ್ಲಿ ಅರಣ್ಯ ಇಲಾಖೆಯ 78 ಎಕರೆ ಜಾಗ ಹಿಮಾದ್ರಿ ಕಂಪನಿಗೆ ಪರಭಾರೆಯಾಗಿದ್ದು, ಆ ಬಳಿಕ ಈ ಪ್ರದೇಶವನ್ನು 2011ರಲ್ಲಿ ಹಿಮಾದ್ರಿ ಕಂಪನಿ, ರಿಲಯನ್ಸ್ ಕಂಪನಿಗೆ ಮಾರಾಟ ಮಾಡುತ್ತದೆ. ಹೀಗೆ ಕಬಳಿಸಿದ ಅರಣ್ಯ ಭೂಮಿಯಲ್ಲಿ ರಿಲಯನ್ಸ್ ಕಂಪನಿಯ ಗೋಡಾನ್ ನಿರ್ಮಾಣ ಮಾಡಿದೆ. ಸುಮಾರು 16 ವರ್ಷಗಳ ನಂತರ ಸಾಮಾಜಿಕ ಕಾರ್ಯಕರ್ತ ಜಿ.ಎಸ್.ಬಸವರಾಜ್ ಈ ಪ್ರಕರಣವನ್ನು ಬಯಲಿಗೆ ಎಳೆದಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಮಾರಾಟ ಮಾಡಿದ್ದ ಅಂದಿನ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

    ಸ್ವತಃ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಮ್ಮ ಭೂಮಿ ಕಬಳಿಕೆ ಆಗಿರುವ ವಿಚಾರ ಗೊತ್ತಿಲ್ಲ. ಹಾಗಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಈ ಪ್ರಕರಣ ಕೇವಲ ಒಂದು ಉದಾಹರಣೆ ಅಷ್ಟೇಯಾಗಿದ್ದು ಹೀಗೆ ಜಿಲ್ಲೆಯಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿ ಕಬಳಿಸಿದ ಪ್ರಕರಣ ಇದೆ. ಸರ್ಕಾರಿ ಭೂಮಿಯನ್ನು ಕಾಪಾಡಬೇಕಿದ್ದ ಅಧಿಕಾರಿಗಳು ಮಾತ್ರ ತಿಂಗಳ ಸಂಬಳ ಪಡೆದು ಮೌನವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬಾಂಗ್ಲಾದೇಶಿಯರೆಂದು ಭಾರತೀಯರ ಶೆಡ್‍ಗಳು ತೆರವು- ಬಿಬಿಎಂಪಿ ಅಧಿಕಾರಿ ಮಾತೃ ಇಲಾಖೆಗೆ ವಾಪಸ್

    ಬಾಂಗ್ಲಾದೇಶಿಯರೆಂದು ಭಾರತೀಯರ ಶೆಡ್‍ಗಳು ತೆರವು- ಬಿಬಿಎಂಪಿ ಅಧಿಕಾರಿ ಮಾತೃ ಇಲಾಖೆಗೆ ವಾಪಸ್

    ಬೆಂಗಳೂರು: ನಗರದ ಬೆಳ್ಳಂದೂರು ವಾರ್ಡಿನಲ್ಲಿ ವಾಸವಾಗಿರುವ ಬಾಂಗ್ಲಾ ಅಕ್ರಮ ವಲಸಿಗರ ಶೆಡ್ ತೆರವು ಮಾಡಬೇಕಿದೆ. ಇದಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ಮಾರತ್‍ಹಳ್ಳಿ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದ ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಟಿ.ಎಂ.ನಾರಾಯಣಸ್ವಾಮಿಯವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

    ತಕ್ಷಣವೇ ಜಾರಿಗೆ ಬರುವಂತೆ ಸೇವೆಯಿಂದ ಬಿಡುಗಡೆ ಮಾಡಿ ಆದೇಶ ನೀಡಲಾಗಿದೆ. ಮಾತೃ ಇಲಾಖೆಗೆ ಹಿಂದಿರುಗಿಸಲು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

    ಖಾಸಗಿ ಪ್ರದೇಶದಲ್ಲಿ ನಿರ್ಮಿಸಿದ್ದ ಶೆಡ್ ತೆರವು ಮಾಡಿಸಲು ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಯಾವುದೇ ಅಧಿಕಾರ ಇಲ್ಲ. ಅಲ್ಲದೆ ವಲಯದ ಜಂಟಿ ಆಯುಕ್ತರು ಅಥವಾ ವಲಯ ಆಯುಕ್ತರ ಅನುಮತಿಯನ್ನೂ ಪಡೆದಿಲ್ಲ. ಸ್ವಇಚ್ಛೆಯಿಂದ ಪೊಲೀಸ್ ಬಂದೋಬಸ್ತಿಗೆ ಪತ್ರ ಬರೆದು, ತೆರವು ಕಾರ್ಯಾಚರಣೆ ಮಾಡಿ ಗಂಭೀರ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ ಕರ್ತವ್ಯದಿಂದ ಬಿಬಿಎಂಪಿಯಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಹಿಂದುರಿಗಿಸಲು ಸರ್ಕಾರದ ನಗರಾಭಿವೃದ್ಧಿ ಇಲಾಖೆ ವಶಕ್ಕೆ ನೀಡಲಾಗಿದೆ.

    ಒತ್ತುವರಿ ತೆರವಿನ ಮಾಹಿತಿ ಆಯುಕ್ತರಿಗೆ ಇರಲಿಲ್ಲ, ಕಚೇರಿಯಲ್ಲಿ ವಿಚಾರಣೆ ನಡೆಸಿದಾಗ ಮೇಲ್ನೋಟಕ್ಕೆ ಅಧಿಕಾರ ಲೋಪ ಕಂಡು ಬಂದಿದೆ. ಹೀಗಾಗಿ ಮಾತೃ ಇಲಾಖೆಗೆ ಮರಳಿ ವರ್ಗಾಯಿಸಲಾಗಿದೆ.