Tag: officer

  • ಪತ್ನಿ ಮೇಲೆ ಅನುಮಾನ- ಬೆಡ್ ರೂಂನಲ್ಲಿ ಸಿಸಿ ಟಿವಿ ಕ್ಯಾಮೆರಾ ಹಾಕಿಸಿದ ಪತಿ

    ಪತ್ನಿ ಮೇಲೆ ಅನುಮಾನ- ಬೆಡ್ ರೂಂನಲ್ಲಿ ಸಿಸಿ ಟಿವಿ ಕ್ಯಾಮೆರಾ ಹಾಕಿಸಿದ ಪತಿ

    – ಕ್ಯಾಮೆರಾ ತೆಗೆಸುವಂತೆ ಕೋರ್ಟ್ ಮೊರೆ ಹೋದ ಮಹಿಳೆ

    ಗಾಂಧಿನಗರ: ಪತ್ನಿ ಮೇಲೆ ಅನುಮಾನಗೊಂಡ ವಾಯು ಪಡೆಯ ನಿವೃತ್ತ ಅಧಿಕಾರಿಯೊಬ್ಬರು ತನ್ನ ಪತ್ನಿ ಮೇಲೆ ಕಣ್ಣಿಡಲು ಬೆಡ್ ರೂಂನಲ್ಲಿಯೇ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದು, ಇದನ್ನರಿತ ಪತ್ನಿ ಸಿಸಿ ಕ್ಯಾಮೆರಾ ತೆಗೆಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.

    ಪ್ರಕರಣದ ಕುರಿತು ಕೋರ್ಟ್ ವಿಚಾರಣೆ ನಡೆಸಿದ್ದು, ನಿರ್ವಹಣಾ ವೆಚ್ಚವಾಗಿ ಪತ್ನಿಗೆ ಪ್ರತಿ ತಿಂಗಳು 40 ಸಾವಿರ ರೂ. ನೀಡುವಂತೆ ಹಾಗೂ ಬೆಡ್ ರೂಂನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ತೆಗೆಸುವಂತೆ ಸೂಚಿಸಿದೆ. ಕಳೆದ ವಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಹೆಚ್ಚುವರಿ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಪಿ.ಎ.ಪಟೇಲ್ ಈ ತೀರ್ಪು ನೀಡಿದ್ದಾರೆ.

    ಕ್ಯಾಮೆರಾ ತೆಗೆಯಲು ನ್ಯಾಯಾಲಯ ಮಹಿಳೆಗೆ ಅನುಮತಿ ನೀಡಿದೆ. ಮಕ್ಕಳಿಗೆ ಸ್ಪೋಟ್ರ್ಸ್ ತರಬೇತಿ ಕೊಡಿಸುವ ಸಂಬಂಧ ಮಹಿಳೆ ಮುಂಬೈಗೆ ತೆರಳಿದ್ದರು. ಕೊರೊನಾ ವೈರಸ್ ಹಿನ್ನೆಲೆ ಮಾರ್ಚ್ ಅಂತ್ಯದಲ್ಲಿ ಮಹಿಳೆ ಮುಂಬೈನಿಂದ ಪತಿಯ ಮನೆಗೆ ಆಗಮಿಸಿದ್ದರು. ಪತ್ನಿ ಮನೆಗೆ ಬರುತ್ತಿದ್ದಂತೆ ವ್ಯಕ್ತಿ ಬೆಡ್‍ರೂಂನಲ್ಲಿ ಸಿಸಿ ಟಿವಿ ಕ್ಯಾಮೆರಾ ಹಾಕಿಸಿದ್ದ.

    ಮೇ 20ರಂದು ವಾಯು ಪಡೆಯ ನಿವೃತ್ತ ಅಧಿಕಾರಿ ತಮ್ಮ ಮನೆಯ ಬೆಡ್‍ರೂಂ ಸೇರಿ ಮನೆಯ ವಿವಿಧ ಭಾಗಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದ. ಇದರಿಂದಾಗಿ ಪತ್ನಿ ಹಾಗೂ ಮಗಳಿಗೆ ಇರುಸುಮುರುಸು ಉಂಟಾಗಿದೆ. ಈ ವ್ಯರ್ಥ ಕ್ಯಾಮೆರಾಗಳನ್ನು ತೆಗೆಯಿರಿ ಎಂದು ಬೇಡಿಕೆ ಇಟ್ಟಿದ್ದರೂ ತೆಗೆದಿಲಿಲ್ಲ.

    ಪತ್ನಿ ಮುಂಬೈನಿಂದ ಹಿಂದಿರುಗುತ್ತಿದ್ದಂತೆ ಪತಿ ಅವರನ್ನು ನಿಂದಿಸಿ, ಮೊಬೈಲ್ ಮುರಿದು ಹಾಕಿದ್ದಾನೆ. ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಆರೋಪಿ ಪತ್ನಿಯ ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಹಾಗೂ ಇತರೆ ದಾಖಲೆಗಳನ್ನು ಬಚ್ಚಿಟ್ಟಿದ್ದಾನೆ. ಮಹಿಳೆ ಮತ್ತೊಮ್ಮೆ ಪೊಲೀಸರ ಬಳಿ ಹೋಗಿದ್ದು, ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

    ಏಪ್ರಿಲ್, ಜೂನ್ ವೇಳೆ ಮಹಿಳೆ ಮೇಲೆ ಪತಿ ಹಲ್ಲೆ ಮಾಡಿದ್ದು, ಯಾವುದೇ ಪುರಾವೆ, ಸಾಕ್ಷ್ಯ ಸಿಗಬಾರದು ಎಂಬ ಉದ್ದೇಶದಿಂದ ಹಲ್ಲೆ ಮಾಡುವ ವೇಳೆ ಸಿಸಿ ಟಿವಿ ಕ್ಯಾಮೆರಾಗಳನ್ನು ಬಂದ್ ಮಾಡುತ್ತಿದ್ದ. ಮದ್ಯ ಸೇವಿಸಿ ಬೇಕಾಬಿಟ್ಟಿ ಹಲ್ಲೆ ಮಾಡುತ್ತಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

    ಹಲ್ಲೆಯನ್ನು ಸಹಿಸಿಕೊಳ್ಳದ ಮಹಿಳೆ, ವಕೀಲರಾದ ಜೈದೀಪ್ ವರ್ಮಾ ಹಾಗೂ ಚಂದ್ರಕಾಂತ್ ದವಾನಿ ಅವರನ್ನು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ನ್ಯಾಯಾಲಯದ ಮೊರೆ ಹೋಗಿದ್ದು, ಪತ್ನಿ ಹಾಗೂ ಮಕ್ಕಳಿಗೆ ತೊಂದರೆ ಕೊಡದಂತೆ ಕೋರ್ಟ್ ಹೇಳಿದೆ. ಅಲ್ಲದೆ ಮಹಿಳೆ ಹಾಗೂ ಮಕ್ಕಳ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 40 ಸಾವಿರ ರೂ.ಗಳನ್ನು ನೀಡುವಂತೆ ನಿರ್ದೇಶಿಸಿದೆ.

  • ಅಕ್ರಮ ಎಸಗಿದ ಅಧಿಕಾರಿ ಅಮಾನತುಗೊಳಿಸಿ-  ಸೋಮಣ್ಣ ಆದೇಶ

    ಅಕ್ರಮ ಎಸಗಿದ ಅಧಿಕಾರಿ ಅಮಾನತುಗೊಳಿಸಿ- ಸೋಮಣ್ಣ ಆದೇಶ

    ಮಡಿಕೇರಿ: ಪ್ರವಾಹ, ನೆರೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂರಿಲ್ಲದೆ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಲಂಚಕ್ಕೆ ಕೈಚಾಚಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಹೀಗೆ ಹಣ ಪಡೆದು ಅಕ್ರಮವಾಗಿ ಮನೆ ಹಂಚಿಕೆ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ವಿ.ಸೋಮಣ್ಣ ಆದೇಶಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಪಡೆದು ಅಕ್ರಮವಾಗಿ ಮನೆ ಹಂಚಿಕೆ ಮಾಡುವ ಮೂಲಕ ಎಸಿ ಕಚೇರಿಯಲ್ಲಿ ಡೆಪ್ಟೇಷನ್ ನಲ್ಲಿ ಇದ್ದ ಹೇಮಂತ್ ಸಂತ್ರಸ್ತರಿಗೆ ಮೋಸ ಮಾಡಿದ್ದ. ಸುಮಾರು 60 ಜನರಿಗೆ ಅಕ್ರಮವಾಗಿ ಮನೆಗಳ ಹಂಚಿಕೆ ಮಾಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲಾಧಿಕಾರಿ, ಶಾಸಕರ ಗಮನಕ್ಕೂ ಬಾರದೆ ಬೇಕಾಬಿಟ್ಟಿಯಾಗಿ ಮನೆ ಹಂಚಿಕೆ ಮಾಡಿದ್ದು, ಇದರಿಂದಾಗಿ ಅಗತ್ಯವಿದ್ದವರಿಗೆ ಹಣ ತಲುಪಿಲ್ಲ. ಹೀಗಾಗಿ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.

    ಬಿಜೆಪಿಯ ಹಿರಿಯ ನಾಯಕರು ಡ್ರಗ್ಸ್ ಇಲ್ಲದೆ ಹೊರಗೆ ಬರುತ್ತಿರಲಿಲ್ಲ ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಹರಿಪ್ರಸಾದ್ ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿ ಹಿರಿಯರು. ಅವರು ಏನು ಹೇಳಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಅಂತಹವರ ಬಾಯಿಯಲ್ಲಿ ಇಂತಹ ಮಾತುಗಳು ಬರಬಾರದು. ಯಾವುದನ್ನೂ ಮುಚ್ಚಿಕೊಳ್ಳುವ ಪ್ರಶ್ನೆ ಇಲ್ಲ. ಡ್ರಗ್ಸ್, ಗಾಂಜಾ ಸಮಾಜಕ್ಕೆ ಕಂಟಕವಾಗಿದೆ. ಯಡಿಯೂರಪ್ಪನವರ ಸರ್ಕಾರ ಇದನ್ನು ಮಟ್ಟಹಾಕಲಿದೆ ಎಂದು ತಿಳಿಸಿದರು.

  • ರಸ್ತೆ ರಿಪೇರಿ ಮಾಡಿಸದ ಅಧಿಕಾರಿಯ ಜೀಪಿನ ಟೈಯರ್ ಪಂಕ್ಚರ್ ಮಾಡಿದ ಗ್ರಾಮಸ್ಥರು

    ರಸ್ತೆ ರಿಪೇರಿ ಮಾಡಿಸದ ಅಧಿಕಾರಿಯ ಜೀಪಿನ ಟೈಯರ್ ಪಂಕ್ಚರ್ ಮಾಡಿದ ಗ್ರಾಮಸ್ಥರು

    ಧಾರವಾಡ: ರಸ್ತೆ ಕೆಟ್ಟಿರುವುದನ್ನು ಖಂಡಿಸಿ ರೈತರು ಗ್ರಾಮಕ್ಕೆ ಬಂದ ಅಧಿಕಾರಿಯ ವಾಹನ ಟೈಯರ್ ಅನ್ನು ಪಂಕ್ಚರ್ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ನಡೆದಿದೆ.

    ಕಳೆದ ಮೂರು ವರ್ಷಗಳಿಂದ ಮಲಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಕಾರ್ಯ ನಡೆದಿದೆ. ಈ ಹಿನ್ನೆಲೆ ಕಾಲುವೆ ಪಕ್ಕದಲ್ಲಿ ನೀರಾವರಿ ಇಲಾಖೆಯ ವಾಹನ ಓಡಾಡಿದ್ದರಿಂದ ಹೊಲಕ್ಕೆ ಹೋಗುವ ರಸ್ತೆ ಎಲ್ಲ ಹಾಳಾಗಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇದನ್ನು ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದರು.

    ಇವತ್ತು ಈ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಶ್ರೀಧರ್ ಬಂದಿರುವುದನ್ನು ನೋಡಿದ ಶಿರೂರ ಗ್ರಾಮಸ್ಥರು, ಅಧಿಕಾರಿಯ ವಾಹನದ ಟೈಯರ್‍ನ ಗಾಳಿಯನ್ನು ತೆಗೆದು ನಿಲ್ಲಿಸಿದ್ದಾರೆ. ಅಲ್ಲದೇ ಶಿರೂರ ಹಾಗೂ ಹಿರೇಕುಂಬಿ ಗ್ರಾಮದ ರಸ್ತೆ ದುರಸ್ತಿ ಮಾಡದೇ ಇದ್ದಲ್ಲಿ ವಾಹನಕ್ಕೆ ಬೆಂಕಿ ಹಚ್ಚುವ ಎಚ್ಚರಿಕೆ ಕೂಡ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ರೈತರಿಗೆ ಹೊಲಕ್ಕೆ ಹೋಗಲು ಹಾಗೂ ಬೆಳೆದ ಬೆಳೆಯನ್ನು ತರಲು ಇದೇ ರಸ್ತೆ ಉಪಯೋಗ ಮಾಡುತ್ತಿದ್ದರು. ಆದರೆ ರಸ್ತೆ ಹಾಳಾಗಿದ್ದರಿಂದ ರೈತರಿಗೆ ತೊಂದರೆಯಾಗಿತ್ತು.

  • ಜೋಯಿಡಾ ತಹಶೀಲ್ದಾರ್ ಕಚೇರಿಗೆ ಎಸಿಬಿ ದಾಳಿ – ಲಂಚ ಪಡೆಯುತ್ತಿದ್ದ ಅಧಿಕಾರಿ ಬಲೆಗೆ

    ಜೋಯಿಡಾ ತಹಶೀಲ್ದಾರ್ ಕಚೇರಿಗೆ ಎಸಿಬಿ ದಾಳಿ – ಲಂಚ ಪಡೆಯುತ್ತಿದ್ದ ಅಧಿಕಾರಿ ಬಲೆಗೆ

    ಕಾರವಾರ: ಲಂಚ ಸ್ವೀಕರಿಸುತಿದ್ದ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೇಲೆ ಎಸಿಬಿ ದಾಳಿ ನೆಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

    ಎಸಿಬಿ ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಜೋಯಿಡಾ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಹುಚ್ಚಣ್ಣನವರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಆತನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ.

    ಗೋಪಿಕಾ ಶಾಂತ ಸಾವಂತ್ ಇವರ ಹೆಸರು ಬದಲಾವಣೆಗೆ ಇವರ ಸಂಬಂಧಿ ಮೋಹನ್ ದೇಸಾಯಿ ಬಳಿ 11 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮುಂಜುನಾಥ್ ಹುಚ್ಚಣ್ಣನವರ್ ಇಂದು ಮೋಹನ್ ದೇಸಾಯಿಯಿಂದ ಜೋಯಿಡಾ ತಹಶೀಲ್ದಾರ್ ಕಚೇರಿಯಲ್ಲಿ ಮುಂಗಡ ಹಣವಾಗಿ ಎರಡು ಸಾವಿರ ಲಂಚ ಸ್ವೀಕರಿಸುವಾಗ ಹಣದ ಸಮೇತ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ದೂರು ನೀಡಿದ ದೂರುದಾರರ ಜೊತೆ ಮೋಹನ ದೇಸಾಯಿ, ಅಧ್ಯಕ್ಷರು ಕಾಳಿ ಬ್ರಿಗೇಡ್ ಅವುರ್ಲಿ ಫಟಕ. ರವಿ ರೇಡಕರ ಮುಖ್ಯ ಸಂಚಾಲಕರು ಕಾಳಿ ಬ್ರಿಗೇಡ್, ಸತೀಶ ನಾಯ್ಕ, ಪ್ರಭಾಕರ ನಾಯ್ಕ, ವಿಷ್ಣು ದೇಸಾಯಿ, ಕಿರಣ ನಾಯ್ಕ, ಅಜೀತ ಟೆಂಗ್ಸೆ, ರಾಜೇಶ ದೇಸಾಯಿ ಈ ಸಂದರ್ಭದಲ್ಲಿ ಇದ್ದರು.

  • ಅಕ್ರಮ ಆಸ್ತಿ ಗಳಿಕೆ- ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕನಿಗೆ ಜೈಲು ಶಿಕ್ಷೆ

    ಅಕ್ರಮ ಆಸ್ತಿ ಗಳಿಕೆ- ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕನಿಗೆ ಜೈಲು ಶಿಕ್ಷೆ

    ಮಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಗಕ್ಕೆ ಸಂಬಂಧಿಸಿದಂತೆ ಪೊಲೀಸ್ ವೃತ್ತ ನಿರೀಕ್ಷಕ ಗಂಗಿ ರೆಡ್ಡಿಗೆ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

    ಆಗಸ್ಟ್ 27, 2009ರಂದು ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಗಂಗಿ ರೆಡ್ಡಿ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ಆದೇಶ ಹೊರಡಿಸಿದ್ದು, 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಅಪರಾಧಿಗೆ 4 ವರ್ಷ ಸಾದಾ ಸಜೆ ಮತ್ತು ಐದು ಲಕ್ಷ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ ವಿಧಿಸಿದೆ. ಅಪರಾಧಿ ಗಂಗಿ ರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.

    ನ್ಯಾಯಾಧೀಶರು 111 ಪುಟಗಳ ಸುದೀರ್ಘ ಆದೇಶ ಹೊರಡಿಸಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಕಲಂ 13(1)(ಇ) ಅಡಿ ಆರೋಪಿ ಗಂಗಿ ರೆಡ್ಡಿ ಅಪರಾಧ ಎಸಗಿದ್ದಾರೆಂದು ಸಾಬೀತಾಗಿದೆ. ಈ ಹಿನ್ನೆಲೆ ಶಿಕ್ಷೆ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

    2009ರ ಆಗಸ್ಟ್ 27 ರಂದು ಬೆಳ್ತಂಗಡಿಯಲ್ಲಿ ಪೋಲಿಸ್ ವೃತ್ತ ನಿರೀಕ್ಷಕರಾಗಿದ್ದ ಗಂಗೀರೆಡ್ಡಿ ಅಕ್ರಮ ಆಸ್ತಿಗಳಿಕೆಯ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನವಾಗಿದ್ದು, ಅದೇ ದಿನವಾದ ಇಂದು ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿಗೆ 4 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

    ಆರೋಪಿ ಗಂಗೀರೆಡ್ಡಿ ತಮ್ಮ ಸೇವಾ ಅವಧಿಯಲ್ಲಿ ಆದಾಯ ಮೀರಿ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಡಿ.ವೈ.ಎಸ್.ಪಿ.ಸದಾನಂದ ವರ್ಣೇಕರ್ ಮತ್ತು ಅವರ ತಂಡ ಪ್ರಕರಣ ದಾಖಲಿಸಿ, ದಾಳಿ ನಡೆಸಿ ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು. ಸುಮಾರು 19 ಲಕ್ಷ ರೂ.ಗಳಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ತನಿಖೆಯನ್ನು ಪೂರ್ಣಗೊಳಿಸಿ ಡಿವೈಎಸ್‍ಪಿ ಆಗಿದ್ದ ಎಮ್.ವಿಠ್ಠಲ್ ದಾಸ್ ಪೈ ಆರೋಪಿ ಗಂಗಿ ರೆಡ್ಡಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

    ಅಭಿಯೋಜನೆಯ ಪರವಾಗಿ 22 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರ್ಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ.

  • ಯುಪಿಎಸ್‍ಸಿ ಟಾಪರ್ ಈಗ ಬಳ್ಳಾರಿ ಜಿ.ಪಂ.ನ ಸಿಇಒ ಆಗಿ ನೇಮಕ

    ಯುಪಿಎಸ್‍ಸಿ ಟಾಪರ್ ಈಗ ಬಳ್ಳಾರಿ ಜಿ.ಪಂ.ನ ಸಿಇಒ ಆಗಿ ನೇಮಕ

    ಬಳ್ಳಾರಿ: ಯುಪಿಎಸ್‍ಸಿ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವ ನಂದಿನಿ ಕೆ.ಆರ್. ಅವರು ಇಂದು ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಮೂಲತಃ ಕೋಲಾರ ಜಿಲ್ಲೆಯ ಕೆಂಬೋಡಿ ಗ್ರಾಮದವರಾದ ನಂದಿನಿ ಅವರು, 2016ರ ಬ್ಯಾಚ್‍ನ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಉತ್ತೀಣರಾಗಿದ್ದರು. ಈ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಕಡುಬಡತನದ ಹಿನ್ನೆಲೆಯಲ್ಲಿ ಬಂದ ನಂದಿನಿ ಅವರು ಇದೀಗ ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರೋದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ.

    ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿ ಆಯ್ಕೆಯಾಗಿರುವ ನಂದಿನಿ ಅವರಿಗೆ ಮುಂಚೂಣಿಯಾಗಿ ಸಿಇಒ ಹುದ್ದೆಯನ್ನ ಅಲಂಕರಿಸಲು ಬಳ್ಳಾರಿ ಜಿಲ್ಲಾ ಪಂಚಾಯಿತಿ ಒಂದು ರೀತಿಯ ಸ್ಫೂರ್ತಿದಾಯಕವಾಗಿದೆ. ಈ ಹಿಂದೆ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕೆ.ನಿತೀಶ್ ಅವರು ಆಯ್ಕೆಯಾಗಿದ್ದರು. ನಿತೀಶ್ ಅವರ ಹಿಂದೆ ಸಿಇಓ ಆಗಿ ಆಯ್ಕೆಯಾಗಿದ್ದ ಡಾ.ಕೆ.ವಿ.ರಾಜೇಂದ್ರ ಅವರ ಕಾರ್ಯವೈಖರಿ ಜನಮನ್ನಣೆ ಗಳಿಸಿತ್ತು. ಇದೀಗ ನಂದಿನಿ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

  • ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ- ಜಿ.ಪಂ. ಸಿಇಒ ವಿರುದ್ಧ ಎಫ್‍ಐಆರ್ ದಾಖಲು

    ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ- ಜಿ.ಪಂ. ಸಿಇಒ ವಿರುದ್ಧ ಎಫ್‍ಐಆರ್ ದಾಖಲು

    – ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ

    ಮೈಸೂರು: ತೀವ್ರ ಸಂಚಲನ ಸೃಷ್ಟಿಸಿರುವ ನಂಜನಗೂಡು ಟಿಎಚ್‍ಓ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ದಂಬಂಧಿಸಿದಂತೆ ಜಿ.ಪಂ. ಸಿಇಒ ಪ್ರಶಾಂತ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿಇಒ ಪ್ರಶಾಂತ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ದಾಖಲಾದ ಹಿನ್ನೆಲೆ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಡಾ.ನಾಗೇಂದ್ರ ತಂದೆ ರಾಮಕೃಷ್ಣ ಅವರು ಮಗನ ಆತ್ಮಹತ್ಯೆ ಕುರಿತು ದೂರು ದಾಖಲಿಸಿದ್ದರು.

    ದೂರಿನಲ್ಲಿ ತಮ್ಮ ಮಗನ ಮೇಲೆ ಒತ್ತಡ ಇರುವುದರ ಬಗ್ಗೆ ತಂದೆ ಆರೋಪಿಸಿದ್ದಾರೆ. ಡಾ.ನಾಗೇಂದ್ರ ಅವರಿಗೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಕೈಗೋಳ್ಳುತ್ತೇವೆ ಎಂದು ಅಧಿಕಾರಿ ಹೆದರಿಸುತ್ತಿದ್ದರು ಎಂದು ತಂದೆ ಆರೋಪಿಸಿದ್ದಾರೆ. ನಾಗೇಂದ್ರ ತಂದೆ ರಾಮಕೃಷ್ಣ ಅವರ ದೂರಿನ ಅನ್ವಯ ಸಿಇಓ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡಿರುವ ಡಾ.ನಾಗೇಂದ್ರ ಕುಟುಂಬಕ್ಕೆ ಸರ್ಕಾರ 30 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದು, ನಾಗೇಂದ್ರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿ ಹುದ್ದೆ ನೀಡಲಾಗುವುದು. ತನಿಖೆ ನಡೆಸಿ ಅಧಿಕಾರಿ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ. ಎಲ್ಲರಿಗೂ ಕೆಲಸದ ಒತ್ತಡವಿರುತ್ತದೆ. ಕೆಲಸದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿದ್ದಾರೆ.

  • ಮಗನನ್ನು ಆಫೀಸರ್ ಮಾಡೋ ಆಸೆ – 105 ಕಿಮೀ ಸೈಕಲ್ ತುಳಿದ ತಂದೆ

    ಮಗನನ್ನು ಆಫೀಸರ್ ಮಾಡೋ ಆಸೆ – 105 ಕಿಮೀ ಸೈಕಲ್ ತುಳಿದ ತಂದೆ

    ಭೋಪಾಲ್: ಆಫೀಸರ್ ಮಾಡುವ ಆಸೆಯಿಂದ ತಂದೆಯೋರ್ವ 105 ಕಿಮೀ ಸೈಕಲ್ ತುಳಿದು ತನ್ನ ಮಗನನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬುಡಕಟ್ಟು ಕಾರ್ಮಿಕರಾದ ಶೋಭರಂ, ಮಗನನ್ನು ಕೂರಿಸಿಕೊಂಡು 105 ಕಿಮೀ ಸೈಕಲ್ ತುಳಿದಿದ್ದಾರೆ. ರಾಜ್ಯ ರಾಜಧಾನಿ ಭೋಪಾಲ್‍ನಿಂದ 251 ಕಿ.ಮೀ ದೂರದಲ್ಲಿರುವ ಮನವಾರ್ ತಹಸಿಲ್‍ನ ಬಯಾಡಿಪುರದ ತಮ್ಮ ಹಳ್ಳಿಯಿಂದ 105 ಕಿ.ಮೀ ದೂರದಿಲ್ಲಿರುವ ಭೋಜ್ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಶೋಭರಂ, ನಮ್ಮ ಊರಿನಲ್ಲಿ ಬಸ್ಸುಗಳು ಕಾರ್ಯನಿರ್ವಹಿಸುತ್ತಿಲ್ಲ. ನಮ್ಮ ಹಳ್ಳಿಯಲ್ಲಿ ನನಗೆ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಆದ್ದರಿಂದ ನಾನು ನನ್ನ ಸೈಕಲ್‍ನಲ್ಲಿ ಇಲ್ಲಿಗೆ ಬರಲು ನಿರ್ಧರಿಸಿದೆ. ಭಾನುವಾರ ಧಾರ್‍ನಿಂದ ಹೊರಟು ಮನವಾರ್ ಪಟ್ಟಣದಲ್ಲಿ ರಾತ್ರಿ ತಂಗಿದ್ದೆವು. ಮಂಗಳವಾರ ಮುಂಜಾನೆ 4 ಗಂಟೆಗೆ ಮಾಂಡುಗೆ ಬಂದು ಪರೀಕ್ಷೆಗೆ 15 ಸೆಕೆಂಡ್ ಇರುವಾಗ ಪರೀಕ್ಷಾ ಕೇಂದ್ರವನ್ನು ತಲುಪಿದೆ ಎಂದು ಹೇಳಿದ್ದಾರೆ.

    ಆಗಸ್ಟ್ 24ರಂದು ಮಗನ ಪರೀಕ್ಷೆಗಳು ಮುಗಿಯುವವರೆಗೂ ಶೋಭರಂ ಇದೇ ಜಿಲ್ಲೆಯಲ್ಲಿ ಇರಲು ನಿರ್ಧರಿಸಿದ್ದಾರೆ. ಆಹಾರವನ್ನು ತಯಾರಿಸಲು ಶೋಭರಂ, ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಗೋಣಿ ಚೀಲದಲ್ಲಿ ತಂದಿದ್ದಾರೆ. ಶಿಕ್ಷಕರ ಅನುಪಸ್ಥಿತಿ ನನ್ನ ಮಗ ಸರಿಯಾಗಿ ಓದದೆ ಮೂರು ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಇಲ್ಲಿ ಬಂದು ಮತ್ತೆ ಪರೀಕ್ಷೆ ಬರೆಯುತ್ತಿದ್ದೇವೆ ಎಂದು ಶೋಭರಂ ತಿಳಿಸಿದ್ದಾರೆ.

    ಕಾರ್ಮಿಕನ ಮಗ ಮಧ್ಯಪ್ರದೇಶ ಸರ್ಕಾರದ ರುಕ್ ಜನ ನಹಿ ಯೋಜನೆ ಅಡಿಯಲ್ಲಿ ಪರೀಕ್ಷೆಗಳನ್ನು ಬರೆಯುತ್ತಿದ್ದಾನೆ. ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮತ್ತೊಂದು ಅವಕಾಶವನ್ನು ಸರ್ಕಾರ ಇಲ್ಲಿ ನೀಡಿದೆ.

  • ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ- ಅಧಿಕಾರಿಗಳ ಬೆವರಿಳಿಸಿದ ಜೋಶಿ

    ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ- ಅಧಿಕಾರಿಗಳ ಬೆವರಿಳಿಸಿದ ಜೋಶಿ

    ಧಾರವಾಡ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ವಿಚಾರವಾಗಿ ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ನಡೆದ ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆನ್‍ಲೈನ್‍ಲ್ಲೇ ಅಧಿಕಾರಿಗಳ ಬೆವರಿಳಿಸಿದ್ದಾರೆ.

    ನವದೆಹಲಿಯಿಂದ ಆನ್‍ಲೈನ್ ನಲ್ಲೇ ವಿಡಿಯೋ ಸಂವಾದ ಮೂಲಕ ಸಭೆ ತೆಗೆದುಕೊಂಡ ಜೋಶಿ, ಬೇರೆಯವರ ಹೆಸರಿನಲ್ಲಿ ಹಣ ಜಮಾ ಮಾಡಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ವಿಷಯದ ಚರ್ಚೆ ಬಂದಾಗ, ಜಿಲ್ಲಾ ಪಂಚಾಯ್ತಿ ಸಿಇಒ ಸತೀಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

    ಈ ವೇಳೆ ಸಮಾಜಾಯಿಸಿ ನೀಡಲು ಹೋಗಿ ಪ್ರಗತಿ ವರದಿಯಲ್ಲಿ ಪದ ಬಳಕೆ ತಪ್ಪಾಗಿದೆ ಎಂದು ಸಿಇಒ ಹೇಳಿದ್ದಕ್ಕೆ ಮತ್ತೆ ಆಕ್ರೋಶಿತರಾದ ಸಚಿವ ಜೋಶಿ, ನನ್ನ ಬಳಿ ಉದ್ಯೋಗ ಖಾತ್ರಿ ಹಣ ದುರುಪಯೋಗ ದಾಖಲೆಗಳಿವೆ ಎಂದು ತೋರಿಸಿದರು. ತಪ್ಪಿತಸ್ಥರ ವಿರುದ್ಧ ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಸಿಇಒಗೆ ಜೋಶಿ ಖಡಕ್ ವಾರ್ನಿಂಗ್ ಕೂಡ ಮಾಡಿದರು.

  • 2 ಜಿಲ್ಲೆಯಲ್ಲಿ 11 ಸೈಟ್ ಹೊಂದಿದ್ದ ಎಇಇ ಎಸಿಬಿ ಬಲೆಗೆ

    2 ಜಿಲ್ಲೆಯಲ್ಲಿ 11 ಸೈಟ್ ಹೊಂದಿದ್ದ ಎಇಇ ಎಸಿಬಿ ಬಲೆಗೆ

    ಗದಗ: ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿರುವ ಘಟನೆ ಗದಗನಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ನೀರು ಸರಬರಾಜು ಮಂಡಳಿಯ ಎಇಇ ಹನುಮಂತ ಪ್ರಭಣ್ಣವರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ರಾಜೀವ್ ಗಾಂಧಿ ನಗರದಲ್ಲಿ ಇರುವ ಮನೆ ಮೇಲೆ ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಭ್ರಷ್ಟಾಚಾರ ದೂರಿನ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

    ಎಇಇ ಹನುಮಂತ ಮನೆ ಮೇಲಿನ ದಾಳಿ ವೇಳೆ ಸುಮಾರು ಲಕ್ಷಾಂತರ ರೂಪಾಯಿ ಹಣ ಮತ್ತು ಚಿನ್ನ, ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ಗದಗ ಮತ್ತು ಧಾರವಾಡ ಜಿಲ್ಲೆಯಲ್ಲಿ ಇವರ ಹೆಸರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 11 ಸೈಟ್‍ಗಳು ಇರುವುದು ಅಧಿಕಾರಿಗಳ ದಾಳಿ ವೇಳೆ ಗೊತ್ತಾಗಿದೆ. ಕಡತಗಳ ಪರಿಶೀಲನೆ ಮುಂದುವರಿದಿದ್ದು, ಎಇಇ ಹನಮಪ್ಪ ಮತ್ತು ಮನೆಯವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.