Tag: Odisha Chief Minister

  • ಮಹಾಘಟಬಂಧನ್‍ಗೆ ಬೆಂಬಲ ನೀಡಲ್ಲ- ಒಡಿಶಾ ಸಿಎಂ ನವೀನ್ ಪಟ್ನಾಯಕ್

    ಮಹಾಘಟಬಂಧನ್‍ಗೆ ಬೆಂಬಲ ನೀಡಲ್ಲ- ಒಡಿಶಾ ಸಿಎಂ ನವೀನ್ ಪಟ್ನಾಯಕ್

    ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಿದ್ಧವಾಗುತ್ತಿರುವ ಮಹಾಘಟಬಂಧನ್‍ದಲ್ಲಿ ಬಿಜು ಜನತಾದಳ (ಬಿಜೆಡಿ) ಸೇರುವುದಿಲ್ಲ ಎಂದು ಪಕ್ಷದ ನಾಯಕ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆಗೆ ಇಂದು ಮಾತನಾಡಿದ ಅವರು, ನಾವು (ಬಿಜೆಡಿ) ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳಲು ಬಯಸುತ್ತೇವೆ. ಹೀಗಾಗಿ ನಮ್ಮ ಪಕ್ಷದ ಸಿದ್ಧಾಂತಗಳನ್ನು ಬಿಟ್ಟು ಮಹಾಘಟಬಂಧನ್‍ಗೆ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.

    ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ನವೀನ್ ಪಟ್ನಾಯಕ್ ಅವರು, ಮಹಾಘಟಬಂಧನ್ ಸೇರುವ ಸಂಬಂಧ ಸ್ಪಲ್ಪ ಸಮಯ ತೆಗೆದುಕೊಂಡು ವಿಚಾರ ಮಾಡುತ್ತೇವೆ. ಬಳಿಕ ನಮ್ಮ ನಿರ್ಧಾರವನ್ನು ತಿಳಿಸುತ್ತೇವೆ ಎಂದಿದ್ದರು. ಆದರೆ ಇಂದು ದಿಢೀರ್ ಪ್ರತಿಕ್ರಿಯೆ ನೀಡಿ, ನಾವು ಮಹಾಘಟಬಂಧ್‍ಗೆ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಮಹಾಘಟಬಂಧನ್ ಒಂದು ಪ್ರಾದೇಶಿಕ ಪಕ್ಷದ ಬೆಂಬಲವನ್ನು ಕಳೆದುಕೊಂಡಿದೆ.

    ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಬಿಜೆಪಿ ವಿರುದ್ಧ 2019ರ ಲೋಕಸಭಾ ಚುನಾವಣೆ ಎದುರಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್‍ಪಿ ನಾಯಕಿ ಮಾಯಾವತಿ ಹಾಗೂ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ.

    ಮಹಾಘಟಬಂಧನ್ ವಿಚಾರವಾಗಿ ಮೈತ್ರಿಗೆ ಮುಂದಾದ ಎಲ್ಲ ಪಕ್ಷಗಳ ಸಭೆ ಇದೇ ತಿಂಗಳು ನಡೆಯಲಿದೆ. ಈ ನಿಟ್ಟಿನಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಕೂಡ ಚಂದ್ರಬಾಬು ನಾಯ್ಡು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಈಗ ನವೀನ್ ಪಟ್ನಾಯಕ್ ಅವರು ತಮ್ಮ ಬೆಂಬಲವನ್ನು ನೀಡದೇ ಹಿಂದೆ ಸರಿದಿದ್ದಾರೆ.

    2014ರ ಲೋಕಸಭಾ ಚುನಾವಣೆಯ ಒಟ್ಟು 21 ಸ್ಥಾನಗಳ ಪೈಕಿ ಬಿಜೆಡಿ 20 ರಲ್ಲಿ ಜಯಗಳಿಸಿದರೆ ಬಿಜೆಪಿ 1 ಕ್ಷೇತ್ರದಲ್ಲಿ ಜಯಗಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv