Tag: odisah

  • ಕೊಟ್ಟ ಭರವಸೆ ನೆನಪಿಸಲು ಮೋದಿ ಭೇಟಿಗಾಗಿ 1,350 ಕಿ.ಮೀ ನಡೆದ ಯುವಕ!

    ಕೊಟ್ಟ ಭರವಸೆ ನೆನಪಿಸಲು ಮೋದಿ ಭೇಟಿಗಾಗಿ 1,350 ಕಿ.ಮೀ ನಡೆದ ಯುವಕ!

    ಲಕ್ನೋ: ಮೋದಿ ಕೊಟ್ಟ ಮಾತನ್ನು ನೆನಪಿಸುವುದಕ್ಕೆ ಒಡಿಶಾ ಮೂಲದ ಯುವಕ ಸುಮಾರು 1,350 ಕಿ.ಮೀ ಪಾದಯಾತ್ರೆ ಕ್ರಮಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಆಗ್ರಾದಲ್ಲಿ ನಡೆದಿದೆ.

    ಒಡಿಶಾ ರಾಜ್ಯದ ರೂರ್ಕೆಲಾ ಜಿಲ್ಲೆಯ ಗ್ರಾಮದ 30 ವರ್ಷದ ಮುಕ್ತಿಕಾಂತ್ ಬಿಸ್ವಾಲ್ ಅಸ್ವಸ್ಥಗೊಂಡ ಯುವಕ. 2015ರಲ್ಲಿ ಪ್ರಧಾನಿ ಮೋದಿಯವರು ರೂರ್ಕೆಲಾ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲೆಯ ಇಸ್ಫಾತ್ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವ ಹಾಗೂ ಬ್ರಹ್ಮಣಿ ಸೇತುವೆಯನ್ನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈ ಭರವಸೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕೊಟ್ಟ ಮಾತನ್ನು ನೆನಪಿಸಲು ಪ್ರಧಾನಿಯವರನ್ನು ಭೇಟಿ ಮಾಡುವ ನಿರ್ಧಾರ ತೆಗೆದುಕೊಂಡು ಪಾದಯಾತ್ರೆ ಆರಂಭಿಸಿದ್ದಾರೆ.

    ಪಾದಯಾತ್ರೆ ವೇಳೆ ಸುಮಾರು 1,350 ಕಿ.ಮೀಗಳನ್ನು ಕ್ರಮಿಸಿ, ಆಗ್ರಾ ಮಾರ್ಗವಾಗಿ ಹೋಗುವಾಗ ಬಿಸಿಲಿನ ಝಳಕ್ಕೆ ತೀವ್ರ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಈತನನ್ನು ಆಗ್ರಾದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಕ್ತಿಕಾಂತ್ ಬಿಸ್ವಾಲ್, ಮೋದಿಯವರು ಒಡಿಶಾಗೆ ಭೇಟಿ ನೀಡಿದ್ದಾಗ ರೂರ್ಕೆಲಾ ಆಸ್ಪತ್ರೆ ಅಭಿವೃದ್ಧಿ ಹಾಗೂ ಬ್ರಹ್ಮಣಿ ಸೇತುವೆ ಪೂರ್ಣಗೊಳಿಸುವ ಮಾತನ್ನು ನೀಡಿದ್ದರು. ಇಲ್ಲಿಯವರೆಗೂ ಮೋದಿಯವರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಹೀಗಾಗಿ ಅವರು ಕೊಟ್ಟ ಮಾತನ್ನು ನೆನಪಿಸುವುದಕ್ಕಾಗಿ ನಾನು ಪಾದಯಾತ್ರೆ ಕೈಗೊಂಡಿದ್ದೇನೆ ಎಂದು ತಿಳಿಸಿದರು.

    ನಮ್ಮ ಗ್ರಾಮದಲ್ಲಿ ಜನರು ವೈದ್ಯಕೀಯ ಸೇವೆಗಳಿಂದ ವಂಚಿತರಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಅನೇಕ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಜನ ನರಳುತ್ತಿರುವ ವಿಚಾರ ನನಗೆ ಸಾವಿರಾರು ಕಿ.ಮೀ. ಕ್ರಮಿಸಲು ಪ್ರೇರೆಪಿಸಿದೆ. ನಮ್ಮ ರಾಷ್ಟ್ರ ಧ್ವಜವು ನನಗೆ ಸ್ಫೂರ್ತಿ ನೀಡಿದ್ದು, ನನ್ನ ಪಾದಯಾತ್ರೆಯಲ್ಲಿ ಧ್ವಜವನ್ನು ಹಿಡಿದೇ ಕ್ರಮಿಸಿದ್ದೇನೆ ಎಂದು ಈ ವೇಳೆ ತಿಳಿಸಿದ್ದಾರೆ.

    ಶೀಘ್ರವೇ ಗುಣಮುಖನಾಗಿ ದೆಹಲಿಗೆ ಪ್ರಯಾಣ ಬೆಳೆಸುತ್ತೇನೆ. ಮೋದಿಯವರನ್ನು ಭೇಟಿ ಮಾಡಿ ಆಸ್ಪತ್ರೆಯ ಅಭಿವೃದ್ಧಿ ಹಾಗೂ ಬ್ರಹ್ಮಣಿ ಸೇತುವೆಯನ್ನು ಪೂರ್ಣಗೊಳಿಸುವಂತೆ ಮನವಿ ಸಲ್ಲಿಸುತ್ತೇನೆ ಎಂದು ಮುಕ್ತಿಕಾಂತ್ ಬಿಸ್ವಾಲ್ ಹೇಳಿದ್ದಾರೆ.