Tag: ODI Series

  • ತಾಲಿಬಾನ್ ಆಡಳಿತದ ವಿರುದ್ಧ ಮುನಿಸು – ಅಫ್ಘಾನಿಸ್ತಾನ ವಿರುದ್ಧ ನಾವು ಆಡಲ್ಲ ಎಂದ ಆಸ್ಟ್ರೇಲಿಯಾ

    ತಾಲಿಬಾನ್ ಆಡಳಿತದ ವಿರುದ್ಧ ಮುನಿಸು – ಅಫ್ಘಾನಿಸ್ತಾನ ವಿರುದ್ಧ ನಾವು ಆಡಲ್ಲ ಎಂದ ಆಸ್ಟ್ರೇಲಿಯಾ

    ಸಿಡ್ನಿ: ಅಫ್ಘಾನಿಸ್ತಾನ (Afghanistan) ವಿರುದ್ಧ ಏಕದಿನ ಸರಣಿ (ODI) ಆಡಬೇಕಾಗಿದ್ದ ಆಸ್ಟ್ರೇಲಿಯಾ (Australia) ತಂಡ ಇದೀಗ ಈ ಸರಣಿಯಿಂದ ಹಿಂದೆ ಸರಿದಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban)  ಆಡಳಿತ ಕಂಡು ಮುನಿಸಿಕೊಂಡಿರುವ ಆಸ್ಟ್ರೇಲಿಯಾ ಈ ನಿರ್ಧಾರ ತೆಗೆದುಕೊಂಡಿದೆ.

    ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಬೇಸತ್ತು, ಈ ನಿರ್ಧಾರಕ್ಕೆ ಮುಂದಾಗಿದೆ. ತಾಲಿಬಾನ್ ಸರ್ಕಾರ ಅಲ್ಲಿನ ಮಹಿಳೆಯರ ಹಕ್ಕನ್ನು ಕಸಿದುಕೊಳ್ಳುತ್ತಿದ್ದು, ಮಹಿಳೆಯ ಶಿಕ್ಷಣ ಸೇರಿದಂತೆ ಉದ್ಯೋಗಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ಆಕ್ಷೇಪಗಳು ಕೇಳಿಬರುತ್ತಿದೆ. ಹಾಗಾಗಿ ಮಹಿಳೆಯ ಹಕ್ಕನ್ನು ಹತ್ತಿಕ್ಕುತ್ತಿರುವ ತಾಲಿಬಾನ್ ಕ್ರಮವನ್ನು ಖಂಡಿಸಿ ಈ ನಿರ್ಧಾರ ತೆಗದುಕೊಂಡಿದೆ. ಇದನ್ನೂ ಓದಿ: 6ನೇ ತರಗತಿಯೊಳಗಿನ ಹೆಣ್ಣು ಮಕ್ಕಳಿಗೆ ಮಾತ್ರ ಶಿಕ್ಷಣ – ಮಹಿಳಾ ಶಿಕ್ಷಣಕ್ಕೆ ತಾಲಿಬಾನ್ ಅಸ್ತು

    ಆಸ್ಟ್ರೇಲಿಯಾ ಮಹಿಳೆಯರ ಹಕ್ಕು ಮತ್ತು ಮಹಿಳೆಯರು ಕೂಡ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಸಂಪೂರ್ಣ ಬೆಂಬಲ ನೀಡುತ್ತದೆ. ಆದರೆ ತಾಲಿಬಾನ್ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣ ಸಹಿತ ಉದ್ಯೋಗಕ್ಕೆ ನಿಷೇಧ ಹೇರಿತ್ತು. ಪಾರ್ಕ್ ಮತ್ತು ಜಿಮ್‍ಗೆ ತೆರಳಬಾರದೆಂದು ಸೂಚಿಸಿತ್ತು. ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ಮಹಿಳೆಯರ ಪರ ಬೆಂಬಲ ವ್ಯಕ್ತಪಡಿಸಿ ಅಘ್ಫಾನಿಸ್ತಾನ ವಿರುದ್ಧ ಕ್ರಿಕೆಟ್ ಸರಣಿ ಆಡದಿರಲು ನಿರ್ಧರಿಸಿದೆ.

    ಮಾರ್ಚ್‍ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ ದುಬೈನಲ್ಲಿ ಏಕದಿನ ಸರಣಿ ಆಡಬೇಕಾಗಿತ್ತು. ಈ ಸರಣಿ ರದ್ದುಗೊಳ್ಳುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಈಡನ್ ಗಾರ್ಡನ್ಸ್‌ನಲ್ಲಿ 2ನೇ ಏಕದಿನ ಪಂದ್ಯ – ಸರಣಿ ಗೆಲ್ಲುವ ತವಕದಲ್ಲಿ ಭಾರತ, ಪುಟಿದೇಳುವ ವಿಶ್ವಾಸದಲ್ಲಿ ಲಂಕಾ

    ಇತ್ತ ತಾಲಿಬಾನ್‌ ನಡೆ ಕಂಡು ಅಲ್ಲಿನ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಬೆನ್ನಲ್ಲೇ ಪದವಿ ಕಾಲೇಜಿನ ಪುರುಷ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದರು. ಮಹಿಳಾ ವಿದ್ಯಾರ್ಥಿಗಳು ಹಾಜರಾಗುವವರೆಗೂ ನಾವೂ ಹಾಜರಾಗುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರು. ಮಹಿಳೆಯರಿಗೆ ಬುರ್ಕಾ ನಿಷೇಧ ಹೇರಿದ್ದ ಬೆನ್ನಲ್ಲೇ ಮಹಿಳಾ ಶಿಕ್ಷಣ (Women Education) ನಿಷೇಧಿಸಿದ್ದ ತಾಲಿಬಾನ್ (Taliban) ಇದೀಗ ಮತ್ತೆ ಮಹಿಳಾ ಶಿಕ್ಷಣ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. 1 ರಿಂದ 6ನೇ ತರಗತಿ ವರೆಗಿನ ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ (Schools) ತಮ್ಮ ಅಧ್ಯಯನ ಮುಂದುವರಿಸಲು ಅವಕಾಶ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬುಮ್ರಾಗೆ ಮ್ಯಾಕ್ಸ್ ವೆಲ್ ಬೌಲ್ಡ್ – ಭಾರತಕ್ಕೆ 13 ರನ್‍ಗಳ ರೋಚಕ ಜಯ

    ಬುಮ್ರಾಗೆ ಮ್ಯಾಕ್ಸ್ ವೆಲ್ ಬೌಲ್ಡ್ – ಭಾರತಕ್ಕೆ 13 ರನ್‍ಗಳ ರೋಚಕ ಜಯ

    – ಮೊದಲ ಪಂದ್ಯದಲ್ಲೇ ಮಿಂಚಿದ ನಟರಾಜನ್

    ಕ್ಯಾನ್ಬೆರಾ: ಇಂದು ನಡೆದ ಆಸ್ಟ್ರೇಲಿಯಾ ಮತ್ತು ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಡಿಯಾ 13 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ. ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗುವುದರಿಂದ ತಪ್ಪಿಸಿಕೊಂಡಿದೆ.

    ಇಂದು ಕ್ಯಾನ್ಬೆರಾ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿಯವರ ಅರ್ಧಶಕ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಸ್ಫೋಟಕ ಆಟದಿಂದ ನಿಗಧಿತ 50 ಓವರಿನಲ್ಲಿ 302 ರನ್ ಗಳಿತ್ತು. ಈ ಗುರಿಯನ್ನು ಬೆನ್ನಟ್ಟಿ ಆಸೀಸ್ ತಂಡ ಜಸ್ಪ್ರೀತ್ ಬುಮ್ರಾ, ಟಿ ನಟರಾಜನ್ ಮತ್ತು ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಗೆ ನಲುಗಿ 13 ರನ್‍ಗಳ ಅಂತರದಿಂದ ಸೋತಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯವನ್ನು ಗೆದ್ದು ಕೊನೆಯ ಪಂದ್ಯವನ್ನು ಸೋಲುವ ಮೂಲಕ ಆಸ್ಟ್ರೇಲಿಯಾ ಸರಣಿಯನ್ನು ಗೆದ್ದುಕೊಂಡಿತು.

    ಟಿ ನಟರಾಜನ್ ಮಿಂಚು
    ಇಂದಿನ ಪಂದ್ಯದಲ್ಲಿ ಭಾರತದ ಪರ ಪಾದಾರ್ಪಣೆ ಪಂದ್ಯವಾಡಿದ ಟಿ ನಟರಾಜನ್, ತಮ್ಮ ಕೋಟಾದ 10 ಓವರ್ ಬೌಲ್ ಮಾಡಿ 70 ರನ್ ನೀಡಿ ಎರಡು ವಿಕೆಟ್ ಕಿತ್ತು ಮಿಂಚಿದರು. ಜೊತೆಗೆ ಶಾರ್ದೂಲ್ ಠಾಕೂರ್ 10 ಓವರ್ ಉತ್ತಮವಾಗಿ ಬೌಲ್ ಮಾಡಿ 51 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಬುಮ್ರಾ ಪ್ರಮುಖ ಹಂತದಲ್ಲಿ ಮ್ಯಾಕ್ಸ್ ವೆಲ್ ಔಟ್ ಮಾಡಿ ಎರಡು ವಿಕೆಟ್ ಕಿತ್ತು ಪಂದ್ಯಕ್ಕೆ ತಿರುವು ನೀಡಿದರು.

    ಇಂಡಿಯಾ ನೀಡಿದ್ದ 303 ರನ್ ಗುರಿಯನ್ನು ಬೆನ್ನಟ್ಟಲು ಬಂದ ಆಸೀಸ್‍ಗೆ ಟಿ ನಟರಾಜನ್ ಶಾಕ್ ನೀಡಿದರು. 7 ರನ್ ಗಳಿಸಿ ಆಡುತ್ತಿದ್ದ ಮಾರ್ನಸ್ ಲ್ಯಾಬುಸ್ಚಾಗ್ನೆ ನಟರಾಜನ್ ಬೌಲಿಂಗ್ ಬೌಲ್ಡ್ ಆದರು. ನಂತರ ಬಂದ ಸ್ಟೀವನ್ ಸ್ಮಿತ್‍ಅನ್ನು ಶಾರ್ದೂಲ್ ಠಾಕೂರ್ ಬೌಲ್ಡ್ ಮಾಡಿದರು. ನಾಯಕ ಆರೋನ್ ಫಿಂಚ್ ಬಿಟ್ಟರೆ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಯಾವ ಆಟಗಾರನೂ ಸರಿಯಾಗಿ ಬ್ಯಾಟ್ ಬೀಸಲಿಲ್ಲ. ಫಿಂಚ್ ಅವರು 82 ಬಾಲಿಗೆ 75 ರನ್ ಸಿಡಿಸಿ ಜಡೇಜಾ ಅವರಿಗೆ ಔಟ್ ಆದರು.

    ಇದಾದ ನಂತರ ಬಂದ ಮೊಯಿಸಸ್ ಹೆನ್ರಿಕ್ಸ್ 22 ರನ್ ಮತ್ತು ಕ್ಯಾಮರೂನ್ ಗ್ರೀನ್ 21 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್ ವೆಲ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಜೊತೆ ಸೇರಿಕೊಂಡು ಸ್ಫೋಟಕ ಆಟಕ್ಕೆ ಮುಂದಾದರು. ಆದರೆ 38 ಬಾಲಿಗೆ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಸಮೇತ 59 ರನ್ ಸಿಡಿಸಿದ್ದ ಮ್ಯಾಕ್ಸ್ ವೆಲ್ ಅನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು. ನಂತರ ಬಂದ ಯಾವುದೇ ಬ್ಯಾಟ್ಸ್ ಮ್ಯಾನ್ ಮ್ಯಾಜಿಕ್ ಮಾಡದ ಕಾರಣ ಆಸೀಸ್ ಸೋತಿತು.

    ಇದಕ್ಕೂ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲೇ ಶಿಖರ್ ಧವನ್ ಅವರನ್ನು ಕಳೆದುಕೊಂಡಿತ್ತು. ಆದರೆ ನಂತರ ಬಂದ ನಾಯಕ ಕೊಹ್ಲಿ 78 ಬಾಲಿಗೆ ಐದು ಬೌಂಡರಿ ಸಮೇತ 63 ರನ್ ಸಿಡಿಸಿದರು. ಕೊಹ್ಲಿ ಔಟ್ ಆದ ನಂತರ ಐಯ್ಯರ್ ಮತ್ತು ರಾಹುಲ್ ಕೂಡ ಔಟ್ ಆದರು. ಆದರೆ ನಂತರ ಒಂದಾದ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಆಟಕ್ಕೆ ಮುಂದಾದರು. ಹಾರ್ದಿಕ್ 76 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡಿರಿ ಸಮೇತ ಭರ್ಜರಿ 92 ರನ್ ಸಿಡಿಸಿದರು. ಪಾಂಡ್ಯಗೆ ಉತ್ತಮ ಸಾಥ್ ನೀಡಿದ ಜಡೇಜಾ 50 ಬಾಲ್‍ನಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ ಸಮೇತ 66 ರನ್ ಸಿಡಿಸಿದರು.

  • ಬೌಂಡರಿ ದಾಟಿದ ಬಾಲ್ ಕೊಡುವವರೇ ಇಲ್ಲ- ಆಟಗಾರರು ಸುಸ್ತೋ ಸುಸ್ತು

    ಬೌಂಡರಿ ದಾಟಿದ ಬಾಲ್ ಕೊಡುವವರೇ ಇಲ್ಲ- ಆಟಗಾರರು ಸುಸ್ತೋ ಸುಸ್ತು

    – ಕೊನೆಗೆ ಕಿವೀಸ್, ಆಸೀಸ್ ಸರಣಿ ರದ್ದು
    – ಕೊರೊನಾ ಎಫೆಕ್ಟ್: ಖಾಲಿ ಮೈದಾನದಲ್ಲಿ ನಡೆದ ಪಂದ್ಯ
    – ಆಸೀಸ್‍ಗೆ 71 ರನ್‍ಗಳಿಂದ ಜಯ

    ಸಿಡ್ನಿ: ಮಹಾಮಾರಿ ಕೊರೊನಾವೈರಸ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ 3 ಏಕದಿನ ಸರಣಿಯನ್ನು ರದ್ದುಗೊಳಿಸಲಾಗಿದೆ.

    ಸಿಡ್ನಿಯ ಖಾಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 71 ರನ್‍ಗಳಿಂದ ಜಯ ಸಾಧಿಸಿತು. ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಇಂದು ಖಾಲಿ ಮೈದಾನದಲ್ಲಿ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಿತು. ಆದರೆ ಬೌಂಡರಿ ಹಾಗೂ ಸಿಕ್ಸ್ ದಾಟಿದ ಬಾಲ್ ಕೊಡುವವರೆ ಇರಲಿಲ್ಲ. ಇದರಿಂದಾಗಿ ಆಟಗಾರರು ಭಾರೀ ಫಜೀತಿಗೆ ಸಿಲುಕಿದರು. ಪರಿಣಾಮ ಕೊನೆಗೆ ಸರಣಿಯನ್ನೇ ರದ್ದುಗೊಳಿಸಲಾಯಿತು.

    https://twitter.com/kickstarkiran/status/1238342029744025602

    ಸರಣಿ ರದ್ದಾದ ನಂತರ ಕಿವಿ ತಂಡವು ತಮ್ಮ ದೇಶಕ್ಕೆ ಮರಳಿತು. ಸಿಡ್ನಿ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವು ಸತತ ಆರನೇ ಏಕದಿನ ಪಂದ್ಯವನ್ನು ಕಳೆದುಕೊಂಡಿತು. ಮತ್ತೊಂದೆಡೆ, ಸತತ 5 ಏಕದಿನ ಪಂದ್ಯಗಳನ್ನು ಸೋತ ನಂತರ ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದುಕೊಂಡಿತು.

    ಸಿಡ್ನಿ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್‍ಗೆ 258 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು 187 ರನ್‍ಗೆ ಸರ್ವಪತನ ಕಂಡಿತು. ಆಸೀಸ್ ವೇಗದ ಬೌಲರ್ ಮಿಚೆಲ್ ಮಾರ್ಷ್ 7 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠಕ್ಕೆ ಭಾಜನರಾದರು.

    ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 67 ರನ್ (88 ಎಸೆತ, 9 ಬೌಂಡರಿ) ಮತ್ತು ಆರನ್ ಫಿಂಚ್ 60 ರನ್ (75 ಎಸೆತ, 3 ಬೌಂಡರಿ, 2 ಸಿಕ್ಸರ್) ಚಚ್ಚಿದರು. ಆದರೆ ಇವರ ಬಳಿಕ ಬಂದ ಇಬ್ಬರು ಬ್ಯಾಟ್ಸ್‍ಮನ್‍ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ನಾಲ್ಕನೇ ವಿಕೆಟ್‍ಗಳಿಗೆ ಆಸೀಸ್ 165 ರನ್ ಗಳಿಸಿತು. ಬಳಿಕ ಮಾರ್ನಸ್ ಲ್ಯಾಬುಸ್ಚಾಗ್ನೆ 56 ರನ್ ಮತ್ತು ಮಿಚೆಲ್ ಮಾರ್ಷ್ 27 ರನ್ ಗಳಿಸಿ ತಂಡದ ರನ್ ಮೊತ್ತವನ್ನು ಹೆಚ್ಚಿಸಿದರು.

    ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಬಹಳ ನಿಧಾನವಾಗಿ ಆಟ ಆರಂಭಿಸಿತು. ತಂಡವು ಮೊದಲ 10 ಓವರ್ ಗಳಲ್ಲಿ ಕೇವಲ 28 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ಮಾರ್ಟಿನ್ ಗುಪ್ಟಿಲ್ 40 ರನ್ (73 ಎಸೆತ, 1 ಸಿಕ್ಸ್, 1 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. 96 ರನ್‍ಗಳಿಗೆ ಐದು ವಿಕೆಟ್‍ಗಳನ್ನು ಕಳೆದುಕೊಂಡಿದ್ದ ಕಿವೀಸ್ ಪಡೆಗೆ ಲಾಥಮ್ ಮತ್ತು ಗ್ರ್ಯಾಂಡ್‍ಹೋಮ್ ಆಸರೆಯಾದರು. ಈ ಜೋಡಿಯು ವಿಕೆಟ್‍ಗೆ 51 ರನ್ ಪೇರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿತು.

    ಲಾಥಮ್ 38 ರನ್ ಹಾಗೂ ಗ್ರ್ಯಾಂಡ್‍ಹೋಮ್ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ಪರಿಣಾಮ ನ್ಯೂಜಿಲೆಂಡ್ 41 ಓವರ್ ಗಳಲ್ಲಿ 187 ರನ್‍ಗಳಿಗೆ ಸರ್ವಪತನ ಕಂಡಿತು.

  • ಸಚಿನ್ ವಿಶ್ವ ದಾಖಲೆ ಮುರಿಯೋ ಸನಿಹದಲ್ಲಿ ಕಿಂಗ್ ಕೊಹ್ಲಿ

    ಸಚಿನ್ ವಿಶ್ವ ದಾಖಲೆ ಮುರಿಯೋ ಸನಿಹದಲ್ಲಿ ಕಿಂಗ್ ಕೊಹ್ಲಿ

    – ಗಂಗೂಲಿ, ದ್ರಾವಿಡ್‍ರನ್ನ ಹಿಂದಿಕ್ಕಲಿದ್ದಾರೆ ವಿರಾಟ್

    ಧರ್ಮಶಾಲ: ರನ್ ಮೆಷಿನ್ ಖ್ಯಾತಿಯ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಈಗ ಸಚಿನ್ ಹೆಸರಿನಲ್ಲಿರುವ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಳ್ಳುವ ಸನಿಹದಲ್ಲಿ ವಿರಾಟ್ ಇದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಗುರುವಾರದಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ 133 ರನ್ ಗಳಿಸಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಇದನ್ನೂ ಓದಿ: ಪರಿವರ್ತನೆಯೊಂದೇ ಶಾಶ್ವತವಾದದ್ದು ಎಂದ ವಿರಾಟ್

    ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಈವರೆಗೂ 239 ಇನ್ನಿಂಗ್ಸ್ ಆಡಿದ್ದು, 43 ಶತಕ, 58 ಅರ್ಧಶತಕ ಸೇರಿ 11,867 ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 12,000 ರನ್‍ಗಳ ಮೈಲುಗಲ್ಲು ತಲುಪಲು ವಿರಾಟ್‍ಗೆ 133 ರನ್‍ಗಳ ಅಗತ್ಯವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ 133 ರನ್ ಗಳಿಸಿದರೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 12,000 ರನ್ ದಾಖಲಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್‌ ಹಾಗೂ ವಿಶ್ವದ ಆರನೇ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

    ಜೊತೆಗೆ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ದಾಖಲೆಗೂ ವಿರಾಟ್ ಭಾಜನವಾಗಲಿದ್ದಾರೆ. ಕೊಹ್ಲಿ ಇದುವರೆಗೆ ಆಡಿರುವ 239 ಇನ್ನಿಂಗ್ಸ್ ಗಳಲ್ಲಿ 11,867 ರನ್ ಪೇರಿಸಿದ್ದಾರೆ. ಪ್ರಸ್ತುತ ಏಕದಿನ ಕ್ರಿಕೆಟ್‍ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ದಾಖಲೆ ಭಾರತದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಸಚಿನ್ ತೆಂಡೂಲ್ಕರ್ 300ನೇ ಇನ್ನಿಂಗ್ಸ್ ನಲ್ಲಿ 12,000 ರನ್‍ಗಳ ದಾಖಲೆ ಬರೆದಿದ್ದರು.

    ಅತಿ ವೇಗದಲ್ಲಿ 12,000 ರನ್ ಸಾಧನೆ:
    ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ 300 ಇನ್ನಿಂಗ್ಸ್ ಗಳಲ್ಲಿ ವೇಗವಾಗಿ 12,000 ರನ್ ದಾಖಲಿಸಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ರಿಕಿ ಪಾಂಟಿಂಗ್ 314 ಇನ್ನಿಂಗ್ಸ್, ಶ್ರೀಲಂಕಾದ ಮಾಜಿ ಆಟಗಾರರಾದ ಕುಮಾರ ಸಂಗಕ್ಕರ 336 ಇನ್ನಿಂಗ್ಸ್, ಸನತ್ ಜಯಸೂರ್ಯ 379 ಇನ್ನಿಂಗ್ಸ್ ಹಾಗೂ ಮಹೇಲಾ ಜಯವರ್ಧನೆ 399 ಇನ್ನಿಂಗ್ಸ್ ಗಳಲ್ಲಿ 12,000 ರನ್‍ಗಳ ಸಾಧನೆ ಮಾಡಿದ್ದಾರೆ.

    ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅವರು 452 ಇನ್ನಿಂಗ್ಸ್ ಗಳಲ್ಲಿ 18,426 ರನ್ ದಾಖಲಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾದ ಕುಮಾರ ಸಂಗಕ್ಕರ 14,234 ರನ್ ಹಾಗೂ ಮೂರನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 13,704 ರನ್ ಗಳಿಸಿದ್ದಾರೆ. ಉಳಿದಂತೆ ಸನತ್ ಜಯಸೂರ್ಯ 13,430 ರನ್ ಹಾಗೂ ಮಹೇಲಾ ಜಯವರ್ಧನೆ 12,650 ರನ್ ಗಳಿಸಿ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ನಂತರ ಅಂದ್ರೆ ಆರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 11,867 ರನ್ ಗಳಿಸಿದ್ದಾರೆ.

    ಗಂಗೂಲಿ, ದ್ರಾವಿಡ್ ಸಾಧನೆ:
    ದಕ್ಷಿಣ ಆಫ್ರಿಕಾ ವಿರುದ್ಧ ಈವರೆಗೂ 27 ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್ 64.35 ಸರಾಸರಿಯಲ್ಲಿ 1,287 ರನ್ ಚಚ್ಚಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗರರಾದ ಸೌರವ್ ಗಂಗೂಲಿ ಹರಿಣರ ವಿರುದ್ಧ 29 ಪಂದ್ಯ ಆಡಿ 1,313 ರನ್ ಹಾಗೂ ರಾಹುಲ್ ದ್ರಾವಿಡ್ 36 ಪಂದ್ಯಗಳನ್ನಾಡಿ 1,309 ರನ್ ಗಳಿಸಿದ್ದಾರೆ. ಈ ಇಬ್ಬರು ಆಟಗಾರರನ್ನು ಹಿಂದಿಕ್ಕಲು ವಿರಾಟ್‍ಗೆ 27 ರನ್‍ಗಳ ಅಗತ್ಯವಿದೆ. ಆದರೆ ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ 57 ಏಕದಿನ ಪಂದ್ಯವಾಡಿ 2001 ರನ್ ಗಳಿಸಿದ್ದಾರೆ.

  • ಕೊನೆಯಲ್ಲಿ ಶಾರ್ದೂಲ್ ಸ್ಫೋಟಕ ಆಟ: ಭಾರತಕ್ಕೆ ಸರಣಿ, 22 ವರ್ಷದ ದಾಖಲೆ ಮುರಿದ ರೋಹಿತ್

    ಕೊನೆಯಲ್ಲಿ ಶಾರ್ದೂಲ್ ಸ್ಫೋಟಕ ಆಟ: ಭಾರತಕ್ಕೆ ಸರಣಿ, 22 ವರ್ಷದ ದಾಖಲೆ ಮುರಿದ ರೋಹಿತ್

    – ವಿಂಡೀಸ್ ವಿರುದ್ಧ ಸತತ 10ನೇ ಸರಣಿ‌ ಗೆದ್ದ ಭಾರತ
    – ಕೊಹ್ಲಿ ಪಂದ್ಯ ಶ್ರೇಷ್ಠ, ರೋಹಿತ್ ಸರಣಿ ಶ್ರೇಷ್ಠ

    ಕಟಕ್ : ವಿಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು 4 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಭಾರತ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಭಾರತ ವಿಂಡೀಸ್ ವಿರುದ್ಧ ಸತತ 10 ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ.

    ಬಾರಾಬತಿ ಸ್ಟೇಡಿಯಂನಲ್ಲಿ ನಾಯಕ ವಿರಾಟ್ ಕೊಹ್ಲಿ ಔಟಾದಾಗ ಭಾರತ ಗೆಲ್ಲುತ್ತಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಕೊನೆಯ ಸ್ಲಾಗ್ ಓವರ್ ಗಳಲ್ಲಿ ಶಾರ್ದೂಲ್ ಠಾಕೂರ್  ಎರಡು ಬೌಂಡರಿ, ಒಂದು ಸಿಕ್ಸರ್ ಚಚ್ಚಿ ಪಂದ್ಯಕ್ಕೆ ತಿರುವುಕೊಟ್ಟರು. ಕೊನೆಯಲ್ಲಿ ಜಡೇಜಾ ಉತ್ತಮವಾಗಿ ಆಡಿದ್ದರಿಂದ ಭಾರತ ವಿಂಡೀಸ್ ನೀಡಿದ್ದ 316 ರನ್ ಗಳ ಗುರಿಯನ್ನು ಇನ್ನೂ 8 ಎಸೆತ ಇರುವಂತೆಯೇ ಜಯಗಳಿಸಿತು.

    46.1 ಓವರಿನಲ್ಲಿ ವಿರಾಟ್ ಕೊಹ್ಲಿ 85 ರನ್ (81ಎಸೆತ, 9 ಬೌಂಡರಿ,)ಗಳಿಸಿ ಆರನೇಯವರಾಗಿ ಔಟಾದಾಗ ಭಾರತದ ಸ್ಕೋರ್ 286 ಆಗಿತ್ತು. ಈ ವೇಳೆ ಕ್ರೀಸಿಗೆ ಆಗಮಿಸಿದ ಶಾರ್ದೂಲ್ ಠಾಕೂರ್ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿ ನಂತರ 17 ರನ್( 6 ಎಸೆತ, 2 ಬೌಂಡರಿ, 1 ಸಿಕ್ಸರ್)ಹೊಡೆದರು. ಜಡೇಜಾ ಮತ್ತು ಶಾರ್ದೂಲ್ 7ನೇ ವಿಕೆಟಿಗೆ 15 ಎಸೆತಗಳಲ್ಲಿ 30 ರನ್ ಹೊಡೆಯುವ ಮೂಲಕ ಜಯವನ್ನು ತಂದಿಟ್ಟರು. ಜಡೇಜಾ ಔಟಾಗದೇ 39ರನ್(31 ಎಸೆತ, 4 ಬೌಂಡರಿ) ಹೊಡೆದರು.

    ಭಾರತ ತಂಡಕ್ಕೆ ಆರಂಭಿಕರಾದ ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‍ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ 122 ರನ್‍ಗಳ ಕಾಣಿಕೆ ನೀಡಿತು. ತಲಾ ಅರ್ಧಶತಕ ಸಿಡಿಸಿ ಮಿಂಚಿದ ಈ ಜೋಡಿ 63 ರನ್ (63 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿದ್ದ ರೋಹಿತ್ ಶರ್ಮಾ ಹೋಲ್ಡರ್ ಅವರಿಗೆ ವಿಕೆಟ್ ಒಪ್ಪಿಸಿದಾಗ ಬೇರ್ಪಟಿತು. ಉತ್ತಮವಾಗಿ ಬ್ಯಾಟ್ ಬೀಸಿದ ರಾಹುಲ್ 77 ರನ್ (89 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಅಲ್ಜಾರಿ ಜೋಸೆಫ್ ಅವರಿಗೆ ವಿಕೆಟ್ ಒಪ್ಪಿಸಿದರು.

    ಎಡವಿದ ಪಂತ್, ಕೊಹ್ಲಿ ಭರ್ಜರಿ ಬ್ಯಾಟಿಂಗ್:
    ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡ ಭಾರತಕ್ಕೆ ಅಸರೆಯಾದ ನಾಯಕ ವಿರಾಟ್ ಕೊಹ್ಲಿ 85 ರನ್ (81 ಎಸೆತ, 9 ಬೌಂಡರಿ) ಸಿಡಿಸಿ ಮಿಂಚಿದರು. ಆದರೆ ಇವರಿಗೆ ತಕ್ಕ ಸಾಥ್ ನೀಡುವಲ್ಲಿ ವಿಫಲರಾದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಕೇದರ್ ಜಾಧವ್ ಅವರು, ಒಂದಕ್ಕಿಗೆ ಔಟ್ ಅಗುವ ಮೂಲಕ ಪೆವಿಲಿಯನ್ ಪರೆಡ್ ನಡೆಸಿದರು. ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದು ಮಿಂಚಿದ್ದ ರಿಷಭ್ ಪಂತ್ ಕೇವಲ 7 ರನ್ ಸಿಡಿಸಿ ಕೀಮೋ ಪೌಲ್ ಅವರಿಗೆ ಬೌಲ್ಡ್ ಅದರು.

    ನಾಯಕ ಕೊಹ್ಲಿ ಅವರ ನಿರ್ಗಮನದ ನಂತರ ಜೊತೆಯಾದ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಭರ್ಜರಿಯಾಗಿ ಬ್ಯಾಟ್ ಬೀಸಿ ಭಾರತವನ್ನು ಗೆಲುವಿನ ದಡ ಸೇರಿಸಿತು. ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ರೋಹಿತ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

    ಟಾಸ್ ಗೆದ್ದ ಭಾರತ ಮೊದಲಿಗೆ ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಂಟಿಂಗ್ ಆಹ್ವಾನಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಗೆ ಎವಿನ್ ಲೆವಿಸ್ ಮತ್ತು ಶಾಯ್ ಹೋಪ್ ಅವರು ಉತ್ತಮ ಆರಂಭ ನೀಡಿದರು. ಮೊದಲ ಹತ್ತು ಓವರ್ ಯಾವುದೇ ವಿಕೆಟ್ ಕಳೆದುಕೊಳ್ಳದೇ ಆಟವಾಡಿದ ಆರಂಭಿಕ ಜೋಡಿ ಮೊದಲ ವಿಕೆಟ್‍ಗೆ 57 ರನ್‍ಗಳ ಜೊತೆಯಾಟವಾಡಿತು. ಇದರಲ್ಲಿ ಎವಿನ್ ಲೆವಿಸ್ ಅವರು 21 ರನ್ ಸಿಡಿಸಿ (50 ಎಸೆತ, 3 ಬೌಂಡರಿ) ಜಡೇಜಾ ವಿಕೆಟ್ ಒಪ್ಪಿಸಿದರೆ, 50 ಎಸೆತಗಳಲ್ಲಿ 42 ರನ್ (5, ಬೌಂಡರಿ) ಸಿಡಿಸಿ ಆಡುತ್ತಿದ್ದ ಶಾಯ್ ಹೋಪ್ ಅವರನ್ನು ಮೊಹಮ್ಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿದರು.

    ಇದಾದ ನಂತರ ಜೊತೆಯಾದ ರೋಸ್ಟರ್ ಚೇಸ್ ಮತ್ತು ಶಿಮ್ರನ್ ಹೆಟ್ಮೇಯರ್ ಅವರು 62 ರನ್ ಗಳ ತಾಳ್ಮೆಯ ಜೊತೆಯಾಟವಾಡಿದರು. ಆದರೆ ಈ ಇಬ್ಬರು ಆಟಗಾರರನ್ನು ಕಟ್ಟಿ ಹಾಕಿದ ಭಾರತದ ಬೌಲರ್ ನವ್‍ದೀಪ್ ಸೈನಿ ಇಬ್ಬರಿಗೂ ಪೆವಿಲಿಯನ್ ದಾರಿ ತೋರಿಸಿದರು. ಈ ಜೋಡಿಯ ನಿರ್ಗಮನದ ಬಳಿಕ ಜೊತೆಯಾದ ನಾಯಕ ಕೀರನ್ ಪೊಲ್ಲಾರ್ಡ್ ಮತ್ತು ನಿಕೋಲಸ್ ಪೂರನ್ ಅವರು ಅಬ್ಬರದ ಬ್ಯಾಟಿಂಗ್ ಮಾಡಿ ವೆಸ್ಟ್ ಇಂಡೀಸ್ ತಂಡವನ್ನು 300 ರ ಗಡಿದಾಟಿಸಿದರು.

    ಇನ್ನಿಂಗ್ಸ್ ನ 40ನೇ ಓವರ್ ಮುಕ್ತಾಯಕ್ಕೆ ವೆಸ್ಟ್ ಇಂಡೀಸ್ 197 ರನ್ ಗಳಿಸಿತ್ತು. ಬಳಿಕ ಪೋಲಾರ್ಡ್ ಹಾಗೂ ನಿಕೊಲಸ್ ಪೂರನ್ ಭರ್ಜರಿ ಬ್ಯಾಟಿಂಗ್‍ನಿಂದ ತಂಡದ ಮೊತ್ತ ಏರಿಕೆ ಕಂಡಿತು. ಈ ಜೋಡಿಯು 5ನೇ ವಿಕೆಟ್‍ಗೆ 135 ಗಳಿಸಿತು. 89 ರನ್ (64 ಎಸೆತ, 10 ಬೌಂಡರಿ, 3 ಸಿಕ್ಸರ್) ಗಳಿಸಿದ್ದ ಪೂರನ್ ಇನ್ನಿಂಗ್ಸ್ ನ 47ನೇ ಓವರ್ ನಲ್ಲಿ ಶಾರ್ದೂಲ್ ಠಾಕೂರ್ ಅವರಿಗೆ ವಿಕೆಟ್ ಒಪ್ಪಿಸಿದರು. ಆದರೆ ಕ್ರಿಸ್ ನಲ್ಲಿದ್ದ ಪೋಲಾರ್ಡ್ ತಮ್ಮ ಅಬ್ಬರದ ಬ್ಯಾಟಿಂಗ್ ಮಾಡಿದರು. ವೆಸ್ಟ್ ಇಂಡೀಸ್ ತಂಡ ಇನ್ನಿಂಗ್ಸ್ ನ ಕೊನೆಯ ಐದು ಓವರ್ ಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಿಡಿಸಿತು. ಈ ಮೂಲಕ 5 ವಿಕೆಟ್ ನಷ್ಟಕ್ಕೆ 315 ರನ್ ಸಿಡಿಸಿತ್ತು.

    22 ವರ್ಷದ ದಾಖಲೆ ಉಡೀಸ್
    ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು, ಮೊದಲ 9 ರನ್ ಸಿಡಿಸಿ 22 ವರ್ಷದ ಹಳೆಯ ದಾಖಲೆಯನ್ನು ಉಡೀಸ್ ಮಾಡಿದರು. ಒಂದು ವರ್ಷದಲ್ಲಿ ಆರಂಭಿಕನಾಗಿ ಅತೀ ಹೆಚ್ಚು ರನ್ ಸಿಡಿಸಿದ್ದ ಶ್ರೀಲಂಕಾದ ಲೆಜೆಂಡ್ ಸನತ್ ಜಯಸೂರ್ಯ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ. 1997 ರಲ್ಲಿ ಉತ್ತಮವಾಗಿ ಆಟವಾಡಿದ್ದ ಜಯಸೂರ್ಯ ಅವರು 2387 ರನ್ ಸಿಡಿಸಿದ್ದರು. ಅವರ ಈ ದಾಖಲೆಯನ್ನು ಮುರಿದಿರುವ ರೋಹಿತ್ ಶರ್ಮಾ ಅವರು 2019 ರಲ್ಲಿ ಆರಂಭಿಕನಾಗಿ 2434 ಸಿಡಿಸಿದ್ದಾರೆ. ಇವರನ್ನು ಬಿಟ್ಟರೆ ಮೂರನೇ ಸ್ಥಾನದಲ್ಲಿ 2008 ರಲ್ಲಿ 2355 ಸಿಡಿಸಿದ್ದ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಇದ್ದಾರೆ.

  • 100 ಪ್ಲಸ್ ಸ್ಟ್ರೈಕ್ ರೇಟ್, 13 ಶತಕ – ಗಿಲ್, ಶಾ ಹಿಂದಿಕ್ಕಿ ಮಾಯಾಂಕ್ ವಿಂಡೀಸ್ ಸರಣಿಗೆ ಆಯ್ಕೆ

    100 ಪ್ಲಸ್ ಸ್ಟ್ರೈಕ್ ರೇಟ್, 13 ಶತಕ – ಗಿಲ್, ಶಾ ಹಿಂದಿಕ್ಕಿ ಮಾಯಾಂಕ್ ವಿಂಡೀಸ್ ಸರಣಿಗೆ ಆಯ್ಕೆ

    ಮುಂಬೈ: ಡಿಸೆಂಬರ್ 15 ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯದ ಏಕದಿನ ಸರಣಿಗೆ ಭಾರತ ತಂಡಕ್ಕೆ ಕನ್ನಡಿಗ ಮಾಯಾಂಕ್ ಅಗರ್ವಾಲ್ ಅವರು ಆಯ್ಕೆಯಾಗಿದ್ದಾರೆ.

    ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ, ಅವರ ಬದಲಿಗೆ ಬಿಸಿಸಿಐ ಮಾಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದೆ. ಈ ಹಿಂದೆ ವಿಡೀಸ್ ವಿರುದ್ಧದ ಟಿ-20 ಸರಣಿಗೂ ಶಿಖರ್ ಧವನ್ ಅವರ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿತ್ತು.

    ಕರ್ನಾಟಕ ರಾಜ್ಯ ತಂಡದಲ್ಲಿ ಉತ್ತಮ ಓಪನರ್ ಆಗಿರುವ ಮಾಯಾಂಕ್ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದ ಭಾರತದ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಧವನ್ ಅವರ ಬದಲಿಗೆ ಏಕದಿನ ಸರಣಿಗೆ ಆಯ್ಕೆಯಲ್ಲಿ ಪೃಥ್ವಿ ಶಾ, ಶುಭಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್ ನಡುವೆ ಪೈಪೋಟಿ ಇತ್ತು. ಈ ಮೂವರಲ್ಲಿ ಬಿಸಿಸಿಐ ಕೊನೆಯದಾಗಿ ಮಾಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದೆ.

    ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮಾಯಾಂಕ್ ಅಗರ್ವಾಲ್ ಏಕದಿನ ಮಾದರಿಯಲ್ಲಿ ಒಳ್ಳೆಯ ಲಯದಲ್ಲಿ ಇದ್ದಾರೆ. ಲಿಸ್ಟ್ ಎ ಪಂದ್ಯಗಳಲ್ಲಿ 101.57 ಸ್ಟ್ರೈಕ್ ರೇಟ್, 50 ಸರಾಸರಿಯಲ್ಲಿ 13 ಶತಕಗಳನ್ನು ಸಿಡಿಸಿದ್ದಾರೆ. ಈ ಕಾರಣದಿಂದ ಮಾಯಾಂಕ್ ಅಗರ್ವಾಲ್ ಅವರನ್ನು ಬಿಸಿಸಿಐ ಧವನ್ ಅವರ ಬದಲಿಗೆ ಆಯ್ಕೆ ಮಾಡಿದೆ.

    ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಟಿ-20 ಸರಣಿಯನ್ನು ಆಡುತ್ತಿರವ ಇಂಡಿಯಾ ಮೂರು ಪಂದ್ಯದ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಇಂದು ಮುಂಬೈನ ವಾಖೆಂಡೆ ಮೈದಾನದಲ್ಲಿ ಮೂರನೇ ಪಂದ್ಯ ನಡೆಯಲಿದೆ. ಇದಾದ ನಂತರ ಡಿಸೆಂಬರ್ 15 ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಚೆನ್ನೈ (ಡಿಸೆಂಬರ್ 15), ವಿಶಾಖಪಟ್ಟಣಂ (ಡಿಸೆಂಬರ್ 18) ಮತ್ತು ಕಟಕ್ (ಡಿಸೆಂಬರ್ 22) ನಲ್ಲಿ ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ.

    ಭಾರತದ ಏಕದಿನ ತಂಡ
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಶ್ರೇಯಸ್ ಐಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್, ಶಿವಮ್ ದುಬೆ, ಕೇದರ್ ಜಾಧವ್, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಕಲದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

  • ಪಾಂಡ್ಯ, ಕೆಎಲ್ ರಾಹುಲ್ ಹೇಳಿಕೆಗೆ ಮೌನ ಮುರಿದ ಕೊಹ್ಲಿ

    ಪಾಂಡ್ಯ, ಕೆಎಲ್ ರಾಹುಲ್ ಹೇಳಿಕೆಗೆ ಮೌನ ಮುರಿದ ಕೊಹ್ಲಿ

    ಸಿಡ್ನಿ: ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಆಕ್ಷೇಪರ್ಹವಾಗಿ ಮಾತನಾಡಿ ಪೇಚಿಗೆ ಸಿಲುಕಿರುವ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಹೇಳಿಕೆ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ ಒಳಗೆ ಪ್ರಭಾವ ಬೀರುವುದಿಲ್ಲ ಎಂದರು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

    ಆಸೀಸ್ ವಿರುದ್ಧದ ಏಕದಿನ ಸರಣಿಗೆ ಸಿದ್ಧತೆಯಲ್ಲಿ ತೊಡಗಿರುವ ನಾಯಕ ವಿರಾಟ್ ಕೊಹ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಕಾರ್ಯಕ್ರಮದಲ್ಲಿ ಮಾತನಾಡಿರುವುದಕ್ಕೂ ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೇಳಿಕೆ ವೈಯಕ್ತಿಕವಾಗಿದ್ದು, ಇದರಿಂದ ನಮ್ಮ ಕ್ರಿಕೆಟ್ ತಂಡದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.

    ಇದೇ ವೇಳೆ ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಬ್ಬರು ಆಟಗಾರರು ಭಾಗವಹಿಸುತ್ತರಾ ಎಂಬುವುದು ಬಿಸಿಸಿಐ ತೀರ್ಮಾನದ ಮೇಲೆ ನಿರ್ಧಾರವಾಗುತ್ತದೆ. ಒಂದೊಮ್ಮೆ ಆಟಗಾರರು ಲಭ್ಯವಾಗದೇ ಹೋದರೆ ತಂಡದಲ್ಲಿ ಬೇರೆ ಬೇರೆ ಪ್ಲಾನ್ ಇದೆ. ಯಾವುದೇ ಸಮಯದಲ್ಲಿ ಗಾಯದ ಸಮಸ್ಯೆ ಸೇರಿದಂತೆ ಇತರೇ ಕಾರಣಗಳಿಂದ ಆಟಗಾರರು ಅಲಭ್ಯವಾದರೆ ತಂಡ ಪರ್ಯಾಯವಾಗಿ ಪ್ಲಾನ್ ಹೊಂದಿರುತ್ತದೆ. ಆದರೆ ತಂಡದ ದೃಷ್ಟಿಯಿಂದ ನೋಡುವುದಾದರೆ ಆಟಗಾರರ ಅಭಿಪ್ರಾಯಗಳು ಡ್ರೆಸ್ಸಿಂಗ್ ರೂಮ್ ಗೆ ಸಂಬಂಧಿಸಿಲ್ಲ. ಅಲ್ಲದೇ ಟೀಂ ಇಂಡಿಯಾ ಆಟಗಾರರಾಗಿ ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದರು.

    ಕರಣ್ ಜೋಹರ್ ನಡೆಸಿಕೊಂಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮನಬಂದಂತೆ ಪ್ರಶ್ನೆಗಳಿಗೆ ಉತ್ತರಿಸಿ ಸೆಕ್ಸ್ ಹಾಗೂ ಮಹಿಳೆಯರ ಅಕ್ಷೇಪರ್ಹವಾಗಿ ಉತ್ತರಿಸಿದ್ದರು. ಸದ್ಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಇಬ್ಬರು ಆಟಗಾರರನ್ನು 2 ಏಕದಿನ ಪಂದ್ಯಗಳಿಗೆ ನಿಷೇಧ ವಿಧಿಸುವ ಬಗ್ಗೆ ಚಿಂತನೆ ನಡೆಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಗ್ಲೆಂಡ್ ವಿರುದ್ಧದ ಏಕದಿನ ಟೂರ್ನಿಯಿಂದಲೂ ಬುಮ್ರಾ ಔಟ್

    ಇಂಗ್ಲೆಂಡ್ ವಿರುದ್ಧದ ಏಕದಿನ ಟೂರ್ನಿಯಿಂದಲೂ ಬುಮ್ರಾ ಔಟ್

    ಲಂಡನ್: ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಟೂರ್ನಿಗೆ ಅಲಭ್ಯರಾಗಿದ್ದ ವೇಗಿ ಜಸ್‍ಪ್ರೀತ್ ಬುಮ್ರಾ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದಾರೆ. ಸದ್ಯ ಬುಮ್ರಾ ಸ್ಥಾನಕ್ಕೆ ವೇಗಿ ಶಾರ್ದೂಲ್ ಠಾಕೂರ್ ಆಯ್ಕೆ ಮಾಡಿದ್ದಾಗಿ ಬಿಸಿಸಿಐ ತಿಳಿಸಿದೆ.

    ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಫೀಲ್ಡಿಂಗ್ ವೇಳೆ ಬುಮ್ರಾ ಬಲಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಇದರಿಂದ ಅವರು ಇಂಗ್ಲೆಂಡ್ ಟೂರ್ನಿಯ ಮೂರು ಪಂದ್ಯಗಳ ಟಿ20 ಪಂದ್ಯಗಳಿಂದ ಹೊರಗುಳಿದಿದ್ದರು. ಈ ವೇಳೆ ಅವರು ಏಕದಿನ ಟೂರ್ನಿಯ ವೇಳೆ ಚೇತರಿಕೊಳ್ಳವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಸಂಪೂರ್ಣವಾಗಿ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗದ ಕಾರಣ ಏಕದಿನ ಟೂರ್ನಿಗೂ ಅಲಭ್ಯರಾಗಿದ್ದಾರೆ.

    24 ವರ್ಷದ ಬುಮ್ರಾ ಬುಧವಾರ ಗಾಯದ ಸಮಸ್ಯೆಗೆ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ಯಶಸ್ವಿಯಾಗಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯ ಇರುವುದಾಗಿ ವೈದ್ಯರು ಸಲಹೆ ನೀಡಿದ್ದಾರೆ.

    ಇದೇ ವೇಳೆ ವಾಷಿಂಗ್ಟನ್ ಸುಂದರ್ ಬಲ ಮೊಣಕಾಲಿಗೆ ಗಾಯವಾಗಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಅಲಭ್ಯರಾಗಿದ್ದರು. ಇನ್ನು ಟೀಂ ಇಂಡಿಯಾ 70 ದಿನಗಳ ಪ್ರವಾಸವನ್ನು ಕೈಗೊಂಡಿದ್ದು, ಈ ಅವಧಿಯಲ್ಲಿ ಟಿ20, ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಜುಲೈ 12 ರಂದು ಏಕದಿನ ಪಂದ್ಯ ಆರಂಭವಾಗಲಿದೆ. ಉಳಿದಂತೆ ಟಿ20, ಏಕದಿನ ಟೂರ್ನಿ ಬಳಿಕ ಆಗಸ್ಟ್ 1 ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.

    ಜೂನ್ 24 ರಂದು ಐಸಿಸಿ ಬಿಡುಗಡೆ ಮಾಡಿದ್ದ ಏಕದಿನ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ಬುಮ್ರಾ ಮೊದಲ ಸ್ಥಾನ ಪಡೆದಿದ್ದು, ಯಜುವೇಂದ್ರ ಚಹಲ್ 8ನೇ ಸ್ಥಾನ ಪಡೆದಿದ್ದಾರೆ.

  • ಚಹಲ್, ಕುಲ್‍ದೀಪ್ ಸ್ಪಿನ್ ಮೋಡಿ- ಟೀಂ ಇಂಡಿಯಾ ಗೆ ಸರಣಿ ಮುನ್ನಡೆ

    ಚಹಲ್, ಕುಲ್‍ದೀಪ್ ಸ್ಪಿನ್ ಮೋಡಿ- ಟೀಂ ಇಂಡಿಯಾ ಗೆ ಸರಣಿ ಮುನ್ನಡೆ

    ಸೆಂಚುರಿಯನ್: ಇಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 6 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನು ಸಾಧಿಸಿದೆ.

    ಟೀಂ ಇಂಡಿಯಾ ಸ್ಪಿನ್ ದಾಳಿಗೆ ದಂಗುಬಡಿದ ದಕ್ಷಿಣ ಆಫ್ರಿಕಾ ಆಟಗಾರರು ಕೇವಲ 118 ರನ್ ಗಳಿಗೆ ಅಲೌಟ್ ಆಗಿ ಪೆವೆಲಿಯನ್ ಪರೇಡ್ ನಡೆಸಿದರು. ಭಾರತದ ಪರ ಸ್ಪಿನ್ ಮಾಂತ್ರಿಕದ್ವಯರಾದ ಯಜುವೇಂದ್ರ ಚಹಲ್ (22/5) ಹಾಗೂ ಕುಲ್‍ದೀಪ್ ಯಾದವ್ (20/3) ವಿಕೆಟ್ ಪಡೆದು ಭಾರತ ಗೆಲುವಿಗೆ ಕಾರಣರಾದರು. ಇನ್ನುಳಿದಂತೆ ಭುವನೇಶ್ವರ್ ಕುಮಾರ್ ಹಾಗೂ ಬುಮ್ರಾ ತಲಾ ಒಂದು ವಿಕೆಟ್ ಪಡೆದರು.

    ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ನಡೆಸಲು ನಿರ್ಧರಿಸಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ನಿರ್ಧಾರವನ್ನು ಬೌಲರ್ ಗಳು ಸಮರ್ಥಿಸುವ ಹಾಗೇ ಪ್ರದರ್ಶನ ನೀಡಿದರು. ನಂತರ ಸುಲಭದ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಬಹುಬೇಗ ಆರಂಭಿಕ ಆಟಗಾರರ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಮತ್ತೊಂದೆಡೆ ಬಿರುಸಿನ ಆಟ ಪ್ರದರ್ಶಿಸಿದ ಶಿಖರ್ ಧವನ್ ಆಕರ್ಷಕ 9 ಬೌಂಡರಿಗಳ ನೆರವಿನಿಂದ ಅರ್ಧ ಶತಕ (51) ದಾಖಲಿಸಿದರು. ನಂತರ ಬ್ಯಾಟಿಂಗ್ ಬಂದ ಕೊಹ್ಲಿ (46) ಧವನ್ ಜೊತೆ ಗೂಡಿ 20.3 ಓವರ್ ಗಳಲ್ಲಿ ತಂಡವನ್ನು ಗೆಲುವಿನ ಗುರಿ ತಲುಪಿದರು.

    ಇದಕ್ಕೂ ಮುನ್ನ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಆಟಗಾರರು ಉತ್ತಮ ಆರಂಭವನ್ನು ಪಡೆದರು. ಆರಂಭಿಕ ಜೋಡಿಯಾದ ಹಾಶೀಮ್ ಆಮ್ಲಾ (23) ಹಾಗೂ ಕ್ವಿಂಟನ್ ಡಿ ಕಾಕ್ (20) 39 ರನ್ ಜೊತೆ ಆಟವಾಡಿ ಉತ್ತಮ ಆರಂಭ ನೀಡಿದರು.

    ಸ್ಪಿನ್ ಮೋಡಿ: ಈ ವೇಳೆ ಬೌಲಿಂಗ್ ದಾಳಿ ನಡೆಸಿದ ವೇಗಿ ಭುವನೇಶ್ವರ್ ಕುಮಾರ್ ಆಮ್ಲಾರನ್ನು ಬಲಿ ಪಡೆದರು. ಬಳಿಕ ಭಾರತ ಸ್ಪಿನ್ ದಾಳಿಗೆ ಸಿಲುಕಿ ಆಫ್ರಿಕಾ ಆಟಗಾರರು 51 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡರು. ಬಳಿಕ ಕ್ರಿಸ್ ಗೆ ಆಗಮಿಸಿದ ಜೆಪಿ ಡ್ಯುಮಿನಿ (25) ಹಾಗೂ ಜೊಂಡೊ (25) ತಂಡದ ಮೊತ್ತವನ್ನು ಮೂರಂಕಿ ದಾಟಿಸಲು ನೆರವಾದರು. ಆದರೆ ಇಬ್ಬರನ್ನು ಬಲಿ ಪಡೆದ ಚಹಲ್ ಕೆರಿಬಿಯನ್ ಪಡೆಗೆ ಆಘಾತ ನೀಡಿದರು. ಬಳಿಕ ಬಂದ ಮೊರ್ನೆ ಮಾರ್ಕೆಲ್ (1), ಇಮ್ರಾನ್ ತಾಹಿರ್ (0) ಕ್ರಿಸ್ ಮೊರಿಸ್ (14) ಬಂದಷ್ಟೇ ವೇಗದಲ್ಲಿ ಪೆವಲಿಯನ್ ಸೇರಿದರು.

    ಟೀಂ ಇಂಡಿಯಾ ಪರ 22 ರನ್ ಗೆ 5 ವಿಕೆಟ್ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದ ಚಹಲ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು.

    ಗಾಯದ ಬರೆ: ಕಳೆದ 9 ವರ್ಷದ ಬಳಿಕ ದಕ್ಷಿಣ ಆಫ್ರಿಕಾ ತಂಡ ಎಬಿ ಡೆವಿಲಿಯರ್ಸ್ ಹಾಗೂ ಡೂಪ್ಲೆಸಿಸ್ ಆಟಗಾರರಿಲ್ಲದೇ ಏಕದಿನ ಪಂದ್ಯವನ್ನು ಆಡಿದೆ. 2009 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಇಬ್ಬರು ಆಟಗಾರರು ಇಲ್ಲದೇ ಆಫ್ರಿಕಾ ತಂಡ ಕಣಕ್ಕೆ ಇಳಿದಿತ್ತು. ಈ ಪಂದ್ಯದಲ್ಲಿ 119 ರನ್ ಅತ್ಯಲ್ಪ ಮೊತ್ತ ಗಳಿಸಿ ಸೋಲು ಪಡೆದಿತ್ತು.

  • ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ

    ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ

    ಮುಂಬೈ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

    ಬಿಸಿಸಿಐನ ಆಯ್ಕೆ ಸಮಿತಿಯ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಫೆಬ್ರವರಿ 1 ರಿಂದ ಡರ್ಬನ್ ನಲ್ಲಿರುವ ಆರಂಭವಾಗಲಿರುವ ಆಫ್ರಿಕಾ ವಿರುದ್ಧದ 6 ಪಂದ್ಯಗಳ ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ.

    ಏಕದಿನ ಸರಣಿಗೆ ಭಾರತೀಯ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ಮನಿಷ್ ಪಾಂಡೆ, ಕೇದರ್ ಜಾಧವ್, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ, ಅಕ್ಷರ್ ಪಟೇಲ್, ಕುಲ್‍ದೀಪ್ ಯಾದವ್, ಜಸ್‍ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಶಾರ್ದೂಲ್ ಠಾಕೂರ್. ಇದನ್ನೂ ಓದಿ: ವೈರಲ್ ವಿಡಿಯೋ: ಕೋಚ್ ರವಿಶಾಸ್ತ್ರಿ ಅವರಿಗೆ ರೋಹಿತ್ ಶರ್ಮಾ ಮಾಡಿದ ಸಿಗ್ನಲ್ ಏನು?