Tag: OD

  • ಧವನ್, ರಾಹುಲ್, ಬೌಲರ್‌ಗಳ ಆಟ- ಸಾಧಾರಣ ಮೊತ್ತ ಪೇರಿಸಿದ ಭಾರತ

    ಧವನ್, ರಾಹುಲ್, ಬೌಲರ್‌ಗಳ ಆಟ- ಸಾಧಾರಣ ಮೊತ್ತ ಪೇರಿಸಿದ ಭಾರತ

    ಮುಂಬೈ: ಶಿಖರ್ ಧವನ್ ಅರ್ಧ ಶತಕ ಹಾಗೂ ಕೆ.ಎಲ್.ರಾಹುಲ್ ತಾಳ್ಮೆಯ ಆಟ, ಕೊನೆಗೆ ಬೌಲರ್‌ಗಳ ಸಹಾಯದಿಂದ ಭಾರತ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ 256 ರನ್‍ಗಳ ಗುರಿಯನ್ನು ನೀಡಿದೆ.

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ 49.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 255 ರನ್ ಪೇರಿಸಿತು. ಶಿಖರ್ ಧವನ್ 74 ರನ್ (91 ಎಸೆತ, 9 ಬೌಂಡರಿ, ಸಿಕ್ಸ್), ಕೆ.ಎಲ್.ರಾಹುಲ್ 47 ರನ್ (61 ಎಸೆತ, 4 ಬೌಂಡರಿ) ಹೊಡೆದರು.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾದ ಬೌಲರ್‌ಗಳು ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಇನ್ನಿಂಗ್ಸ್ ನ 5ನೇ ಓವರ್ ನಲ್ಲಿ ರೋಹಿತ್ ಶರ್ಮಾ (10 ರನ್, 15 ಎಸೆತ) ವಿಕೆಟ್ ಕಳೆದುಕೊಂಡ ಭಾರತ ಆಘಾತಕ್ಕೆ ಒಳಗಾಯಿತು. ಅಷ್ಟೇ ಅಲ್ಲದೆ 5ನೇ ಓವರ್ ಮುಕ್ತಾಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ ಕೇವಲ 19 ರನ್ ಗಳಿಸಿತ್ತು. ಬಳಿಕ ಮೈದಾನಕ್ಕಿಳಿದ ಕೆ.ಎಲ್.ರಾಹುಲ್ ವಿಕೆಟ್ ಕಾಯ್ದುಕೊಂಡು ಶಿಖರ್ ಧವನ್‍ಗೆ ಸಾಥ್ ನೀಡಿದರು.

    ಧವನ್ ಹಾಗೂ ರಾಹುಲ್ ಜೋಡಿಯು 2ನೇ ವಿಕೆಟ್‍ಗೆ 121 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು. ಇನ್ನಿಂಗ್ಸ್ ನ 28ನೇ ಓವರ್ ನಲ್ಲಿ ರಾಹುಲ್ ವಿಕೆಟ್ ಒಪ್ಪಿಸಿದರು. ಕೆ.ಎಲ್.ರಾಹುಲ್ 47 ರನ್ (61 ಎಸೆತ, 4 ಬೌಂಡರಿ) ಗಳಿಸಿ ಪೆವಿಲಿಯನ್‍ಗೆ ತೆರಳಿದರು. ಈ ಬೆನ್ನಲ್ಲೇ ಶಿಖರ್ ಧವನ್ 74 ರನ್ (91 ಎಸೆತ, 9 ಬೌಂಡರಿ, 1 ಸಿಕ್ಸ್) ಹೊಡೆದು ವಿಕೆಟ್ ಒಪ್ಪಿಸಿದರು. ಹೀಗಾಗಿ ಇನ್ನಿಂಗ್ಸ್ ನ 29ನೇ ಓವರ್ ಮುಕ್ತಾಯಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 141 ರನ್ ಪೇರಿಸಲು ಶಕ್ತವಾಯಿತು.

    ತಂಡದ ಮೊತ್ತವನ್ನು ಏರಿಸುವ ಅಗತ್ಯವಿದ್ದ ಕಾರಣ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಆದರೆ ಇನ್ನಿಂಗ್ಸ್ ನ 32ನೇ ಓವರ್ ನಲ್ಲಿ ಬೌಲರ್ ಆ್ಯಡಂ ಜಂಪಾ ಅವರಿಗೆ ನೇರ ಕ್ಯಾಚ್ ನೀಡಿದರು. ಹೀಗಾಗಿ ವಿರಾಟ್ 16 ರನ್ (14 ಎಸೆತ, ಸಿಕ್ಸ್) ಗಳಿಸಲು ಶಕ್ತರಾದರು. ಈ ಬೆನ್ನಲ್ಲೇ ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಒಂದು ಹಂತದಲ್ಲಿ 134 ರನ್‍ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಭಾರತ 164 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಮೈದಾನಕ್ಕಿಳಿದ ಸ್ಪಿನ್ನರ್ ರವೀಂದ್ರ ಜಡೇಜಾ ಯುವ ಆಟಗಾರ ರಿಷಭ್ ಪಂತ್‍ಗೆ ಸಾಥ್ ನೀಡಿದರು. ಆದರೆ ವಿಕೆಟ್ ಕಾಯ್ದುಕೊಳ್ಳು ಕಡೆಗೆ ಗಮನ ಹರಿಸಿದ ಜೋಡಿಯು ರನ್ ಗಳಿಸಲು ಪರದಾಡಿತು.

    ಇನ್ನಿಂಗ್ಸ್ ನ 36ನೇ ಓವರ್ ನ 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ರವೀಂದ್ರ ಜಡೇಜಾ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಆದರೆ ಆಸ್ಟ್ರೇಲಿಯಾದ ಬೌಲಿಂಗ್ ಎದುರು ಭಾತರದ ತಂಡದ ರನ್ ಏರಿಕೆ ನಿಧಾನಗತಿಯಲ್ಲಿ ಸಾಗಿತು. ಇನ್ನಿಂಗ್ಸ್ ನ 43ನೇ ಓವರ್ ಮೊದಲ ಎಸೆತದಲ್ಲೇ ಜಡೇಜಾ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ರಿಷಭ್ ಪಂತ್ 28 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ 8 ಎಸೆತಗಳಲ್ಲಿ 22 ರನ್ ಸಿಡಿಸಿ ಮಿಂಚಿದ್ದ ಟೀಂ ಇಂಡಿಯಾ ಆಲ್‍ರೌಂಡರ್ ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. 10 ಎಸೆತಗಳನ್ನು ಎದುರಿಸಿದ ಶಾರ್ದೂಲ್ 13 ರನ್ ಗಳಿಸಿ ಬಹುಬೇಗ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಕುಲದೀಪ್ ಯಾದವ್ 17 ರನ್ ಹಾಗೂ ಮೊಹಮ್ಮದ್ ಶಮಿ 10 ರನ್ ಹೊಡೆದು ಔಟಾದರು. ಮೈಕಲ್ ಸ್ಟ್ರಾಕ್ 3 ವಿಕೆಟ್ ಕಿತ್ತರೆ ಪ್ಯಾಟ್ ಕಮ್ಮಿನ್ಸ್ ಮತ್ತು ರಿಚರ್ಡ್‍ಸನ್ ತಲಾ ಎರಡು ವಿಕೆಟ್ ಪಡೆದರು.